ಬದುಕೆಲ್ಲ ಸಲಹುತ್ತ ನಡೆಯೇ

ಅಮರ್.ಬಿ.ಕಾರಂತ್.

nature
ಇಳೆಯ ಒಡಲಾಳದಾರಯ್ವವನುಂಡು
ತಾ ಚಿಗುರೊಡೆದು ಬೆಳೆದಂತೆ ಮೊಳಕೆ
ನುಡಿಯ ಕಡಲಾಳದಾರುಮೆಯನುಂಡು
ನಾ ಬೆಳೆದಿರುವೆ ಸವಿದಂತೆ ಕುಡಿಕೆ

ಹೆತ್ತ ಮರಿಗಳ ಅಬ್ಬೆ ಮಯ್ಚಾಚಿ ಒರಗಲು
ಎದೆಹಾಲು ತೊಟ್ಟಿಕ್ಕುವಂತೆ
ನಾಡ ಮಕ್ಕಳ ಅಬ್ಬೆ ನುಡಿಯಿತ್ತು ಪೊರೆಯಲು
ಸಿಹಿಹೊನಲು ನೆರೆಯುಕ್ಕುದಂತೆ

ಎನಿತು ಆಟಗಳೊಳಗೆ ಎನಿತು ಹೂಟಗಳೊಳಗೆ
ಹುರಿಯಿತ್ತು ಕಯ್ಬಿಡದೆ ಕಾಯಿ
ಬಾಳ ಹಾದಿಯೊಳಿಳಿದು ಆಳ ಕೂರ‍್ಮೆಯೊಳಳೆದು
ನುಡಿತುತ್ತು ಉಣಬಡಿಸು ತಾಯಿ

ಅರಿವು ಮೂಡಿದಲಿಂದ ಇರುವು ಮುಳುಗುವ ತನಕ
ಬಗೆಗೆಲ್ಲ ಕಸುವಿತ್ತ ನುಡಿಯೇ
ಇಳಿದು ನಿನ್ನೊಡಲೊಳಗೆ ತಿರುಳ ಹೀರುವ ತವಕ
ಬದುಕೆಲ್ಲ ಸಲಹುತ್ತ ನಡೆಯೇ

(ಚಿತ್ರ ಸೆಲೆ: stuartwilde.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks