ನನ್ನ ನೆನಪಿನ ಜೀಕಾ..

ಅಜಿತ್ ಕುಲಕರ‍್ಣಿ.

oil on canvas painted by artistelayarajamo:+919841170866

ಗೆಳತಿ, ನನ್ನ ಎದೀಗೆ ಜೀಕ ಕೊಟ್ಟು
ಹಾಡೊಂದು ಹುಟ್ಟೇತಿ
ಅಡಗಿಸಿಟ್ಟಿದ್ದ ಬಾವನೆಗಳೆಲ್ಲ
ಅಕ್ಶರಾಗಿ ಹೋಗೇತಿ

ಅಂದ… ನೀ ಒಬ್ಬಾಕ್ಯ.. ಮಾಳಿಗಿಮ್ಯಾಲ
ಸುಮ್ಮನ ಕುಂತಿದ್ದಿ
ನಾ ಹಿಂದಿಂದ ಬಂದು ಮೆಲ್ಲಕ ತಟ್ಟಿದಾಗ
ತಕ್ಶಣ ಬೆಚ್ಚಿ ಬಿದ್ದಿ

ನೀ ಆವತ್ತ ನೋಡಿದ್ದಿರಬಹುದು
ನನ್ನ ಕಣ್ಣೊಳಗ ಹುಣಮಿ ಚಂದ್ರನ ಹೊಳಪು
ಎದಿವೊಳಗ ಆಸೆಗಳ ಹೂಬುಟ್ಟಿ ಹಿಡಕೊಂಡು
ನಿಂತಿದ್ದು ಇನ್ನೂ ಹಚ್ಚನ ನೆನಪು

ನನ್ನ ಸಣ್ಣ ಸಣ್ಣ ಚಾಶ್ಟೀಗೇ ನೀ ಅವತ್ತ
ಎಶ್ಟು ನಕ್ಕಿದ್ದಿ!
ಆಯಾ ತಪ್ಪಿ ಬಿದ್ದೇನಂತ
ನನ್ನ ಕೈ ಗಟ್ಯಾಗಿ ಹಿಡಿದಿದ್ದಿ

ನಿನ ಎಡಗೈ ಕಿರುಬೆರಳು ನನ ಬಲಗೈ ಕಿರುಬೆರಳು
ಯಾವಾಗಲೋ ತಾಳೆ ಹಾಕಿ ಬಿಟ್ಟಿದ್ವು
ಬೆರಳಿಗೆ ಬೆರಳು ಬೆರಳಿಗೆ ಬೆರಳು ಸೇರಿ
ಹಸ್ತಾನ.. ನುಂಗಿ ಬಿಟ್ಟಿದ್ವು!

ಅಕಸ್ಮಾತ್ತಾಗಿ ನಾನು ನಿನ ತೋಳ
ಬೇಕಂತ ಸವರಿದ್ದೆ….
ನನಗ ಗೊತ್ತಾಗದ ನನ್ನ ಎದಿಯೊಳಗ
ನಾ ಸಣ್ಣಗಿ ಬೆವರಿದ್ದೆ!

ನೀ ನಕ್ಕಾಗೊಮ್ಮೆ ನಗೀ ಮ್ಯಾಲ ಚಿಮ್ಮಿ
ಆಕಾಶದಾಗ ಚಿಕ್ಕಿ ಮೂಡತಿದ್ವು
ನನ್ನ ಎದಿಯೊಳಗಿನ ತಳಮಳ
ಆವಿಯಾಗಿ ಮಾಡ ಆಗಿ ಚಂದ್ರನ ಕಣ್ಣ ಮುಚ್ಚತಿದ್ವು

ನಿನ್ನ ನೋಡ ನೋಡತ ಕಣ್ಣ ತೆರದ
ನಾ ಕನಸ ಕಾಣತಿದ್ದೆ
ಆ ಕನಸಿನೊಳಗೂ ನೀನ ಕಂಡ ಕೂಡಲೇ
ನಾ ಮತ್ತ ಕನಸ ಕಾಣತಿದ್ದೆ

ನನ್ನ ಕಿವಿಗೆ ನೀ ಬಾಯಿಟ್ಟು ಹೇಳಿದ ಪಿಸುಮಾತಿನ ಕಡೆ
ನಂಗ ಲಕ್ಶ್ಯಾನ ಇರಲಿಲ್ಲಾ
ನಿನ್ನ ಕೊರಳು ನನ್ನ ಬುಜಕ್ಕ ತಾಗಿದರೂ
ಚೆ! ನಿನ್ನ ಮುಂಗುರುಳನ್ನ ನಾ ಮುಟ್ಟಲೆ ಇಲ್ಲ

ನಾ ಹೇಳಬೇಕಂದ ಮಾತ ನೀನ ಹೇಳಿ
ಎದ್ಯಾಗ ಹಾಲ ಸುರದಂಗ ಮಾಡಿದ್ದಿ
ನನ್ನ ಕಣ್ಣ ಮುಂದನ ಬಣ್ಣಬಣ್ಣದ
ಕನಸುಗಳ ಮೆರವಣಿಗಿ ತಂದಿದ್ದಿ

ಗೆಳತಿ, ನಿನ್ನ ನೆನಪಾದಾಗ ಒಮ್ಮೆ
ಮತ್ತ ಜೀಕಾ ತಗೋತೀನಿ
ಮಾಳಿಗಿ ಮ್ಯಾಲ ಕುಂತಿದ್ದ ನಿನ್ನ
ಮೆಲ್ಲಕ ಎಬ್ಬೀಸತೇನಿ….

(ಒಬ್ಬಾಕ್ಯ= ಒಬ್ಬಳೇ, ಜೀಕ = ಜೋರಾಗಿ ತೂಗುವುದು )

(ಚಿತ್ರ ಸೆಲೆ: propelsteps.files.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: