ಬಾಶೆ ಹಾಗೂ ಹಸಿವಿಗೂ ನಂಟುಂಟೇ?

– ಸುನಿಲ್ ಮಲ್ಲೇನಹಳ್ಳಿ.

hotel

ಮೊನ್ನೆ ಮಾರತಹಳ್ಳಿ ಸೇತುವೆಗೆ ಮೂರ‍್ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಾಡುಬೀಸನಹಳ್ಳಿ ಕಡೆ ಹೋಗಿ, ಅಲ್ಲಿಗೆ ಹೋಗಿದ್ದ ಕೆಲಸ ಮುಗಿಸಿಕೊಂಡು, ವಾಪಸ್ಸು ಮನೆ ಕಡೆ ಹೊರಡಬೇಕೇನ್ನುವಶ್ಟರಲ್ಲಿ, ಹಸಿವಾಗಿ ಅಲ್ಲೇ ಪಕ್ಕದಲ್ಲಿದ್ದ ಹೋಟೆಲಿಗೆ ಊಟಕ್ಕೆಂದು ಹೋದೆವು. ಅಲ್ಲಿ ಆಶ್ಚರ‍್ಯವೆಂಬಂತೆ ಕನ್ನಡ ಚಲನಚಿತ್ರ ಹಾಡುಗಳನ್ನು ಹಾಕಿದ್ದರು, ಸಹಜವಾಗಿಯೇ ಈ ಸಂಗತಿ ಸಂತಸ ತಂದಿತು ನನ್ನಲ್ಲಿ. ಕೊನೆಗೆ ಇದು ಕನ್ನಡಿಗರ ಹೋಟೆಲೆಂದು ಕಾತರಿಯಾಗಿ, ಅಲ್ಲಿದ್ದ ಹೋಟೇಲಿನ ಮ್ಯಾನೇಜರ್, ಊಟಕ್ಕೆ ಬಡಿಸುವರು ಅವರನ್ನೆಲ್ಲ ಕುಶಿಯಿಂದ ಪರಿಚಯ ಮಾಡಿಕೊಂಡೆ.

ಈ ಗಟನೆಯಾದ ನಂತರ ಮತ್ತೆ ನಾಲ್ಕೈದು ಸಲ ಕಾಡುಬೀಸನಹಳ್ಳಿಗೆ ಬೇಟಿ ಕೊಟ್ಟಾಗಲೂ, ಹಸಿವನ್ನು ನೀಗಿಸಲು ಅದೇ ಹೋಟೆಲಿಗೆ ಹೋಗಿದ್ದೇನೆ. ಈಗೀಗ ಆ ಹೋಟೆಲಿನಲ್ಲಿ ಕೆಲಸ ಮಾಡುವ ಬಹುತೇಕರು ನನ್ನನ್ನು ಹಾಗೂ ನನ್ನ ಕುಟುಂಬದವರನ್ನು ಗುರುತಿಸಿ ಮಾತನಾಡಿಸುತ್ತಾರೆ! ಆದರೆ, ಈ ಹೋಟೆಲಿನವರಿಗೂ ಹಾಗೂ ನನಗೂ ಯಾವ ನೆಂಟಸ್ತಿಕೆನೂ ಇಲ್ಲ. ಆದರೆ ಅಲ್ಲಿಗೆ ನನನ್ನು ಕರೆದೊಯ್ಯುತ್ತಿರುವುದು, ಒಂದೇ ವಿಚಾರ, ಅದು ಅವರು ನನ್ನ ಬಾಶಿಕರೆಂಬ ಅಬಿಮಾನ.

ಇದು ಒಂದು ಉದಾಹರಣೆ ಅಶ್ಟೇ. ಇದೇ ತರಹ ನೂರಾರು ಸನ್ನಿವೇಶಗಳು ನಮ್ಮ ಮುಂದೆ ಬರುತ್ತವೆ, ಆ ಪ್ರತಿ ಸನ್ನಿವೇಶದಲ್ಲೂ ನಮ್ಮ ಬಾಶೆಯನ್ನು ಪರಿಗಣಿಸಿದರೆ, ಅದುವೇ ನಮ್ಮ ನಾಡಿಗೆ ಮತ್ತು ನುಡಿಗೆ ನಾವು ಕೊಡಬಹುದಾಂತ ಒಂದು ಬಗೆಯ ಬಳುವಳಿ. ನಮ್ಮ ಅಂತರಾಳದಲ್ಲಿ ನುಡಿ ಅಬಿಮಾನ ಇದ್ದರೆ, ಆ ನಮ್ಮ ನುಡಿಯನ್ನು ಸಮಗ್ರವಾಗಿ ಪೋಶಣೆ ಮಾಡಿದಂತೆ.

ನಮ್ಮ ಕೆಲಸವನ್ನು ಯಾರಿಗೆ ಕೊಡುತ್ತೇವೆ ಅತವಾ ಯಾರಿಂದ ಮಾಡಿಸಿಕೊಳ್ಳುತ್ತೇವೆ ಎನ್ನುವ ಚಿಕ್ಕ-ಚಿಕ್ಕ ವಿಚಾರಗಳು ಬಹುದೊಡ್ಡ ಬದಲಾವಣೆ ಉಂಟುಮಾಡುತ್ತವೆ. ಅದು ನಮ್ಮ ಬಟ್ಟೆಗಳನ್ನು ಇಸ್ತ್ರೀ ಮಾಡುವರಿಂದ ಹಿಡಿದು, ನಮ್ಮ ಮನೆಗೆ ಹಾಲು, ಪೇಪರ್ ಹಾಕುವವರೇ ಆಗಲಿ, ನಾವು ಹೋಗುವ ಕಿರಾಣಿ ಅಂಗಡಿಯೇ ಆಗಲಿ, ಅಲ್ಲಿ ಕೊಳ್ಳುವ ದಿನಸಿ ಸಾಮಾನುಗಳೇ ಆಗಲಿ, ಗುಣಮಟ್ಟದ ಜೊತಗೆ ಅವು ನಮ್ಮ ನಾಡಿನಲ್ಲಿ ತಯಾರಾದವ? ನಮ್ಮ ಬಾಶೆಯಲ್ಲಿ ಲೇಬಲ್ ಮಾಡಿದ್ದಾರಾ? ಹೀಗೆ ಒಮ್ಮೆ ಕಣ್ಣಾಡಿಸೋಣ.

ಅತವಾ ಅದು ಬೇರೆ ಯಾವುದೇ ಸಂದರ‍್ಬವಿರಲಿ, ಅಲ್ಲಿ ಮೊದಲು ನಮ್ಮ ನುಡಿಯನ್ನು ಪರಿಗಣಿಸೋಣ, ನಮ್ಮ ನುಡಿಗರಿಗೆ ಜವಾಬ್ದಾರಿ ಕೊಡೋಣ. ಆ ಮೂಲಕ ಮಾತ್ರುಬಾಶೆಯ ಬೆಳವಣಿಗೆಯಲ್ಲಿ ಒಂದು ಹೊಸ ಅಡಿಗಲ್ಲು ಆಗೋಣ! ಇನ್ನೊಂದು ವಿಶಯವನ್ನು ಹೇಳಲು ಬಯಸುತ್ತೇನೆ, ಮೊನ್ನೆ ನಮ್ಮ ಕಂಪನಿಯ ಬಸ್ಸಿನಲ್ಲಿ ಡ್ರೈವರ್ ಬರೀ ಹಿಂದಿ ಗೀತೆಗಳನ್ನು ಬಿತ್ತರಿಸುತ್ತಿದ್ದ, ಬಸ್ಸಿನಿಂದ ಇಳಿಯುವಾಗ ಕನ್ನಡ ಹಾಡುಗಳಿಲ್ಲವೇ ನಿಮ್ಮ ಹತ್ತಿರ ಎಂದು ಕೇಳಿದೆ. ಅದಕ್ಕವನು ಎಲ್ರೂ ಹಿಂದಿ ಹಾಡು ಇಶ್ಟಪಡುತ್ತಾರೆಂದು ಅವನ್ನೇ ಹಾಕಿದೆ ಎಂದ. ಬಸ್ಸಿನಲ್ಲಿ ಇರೊರೆಲ್ಲ ಕನ್ನಡಿಗರು. ಎಲ್ಲೋ ಒಬ್ರೋ, ಇಬ್ರೋ ಬೇರೆ ಬಾಶೆಯವರು ಇರ‍್ಬೊದು, ನಾಳೆಯಿಂದ ಕನ್ನಡ ಸಾಂಗ್ಸ್ ಹೆಚ್ಚಾಗಿ ಹಾಕಿ ಎಂದೇ. ಅದಕ್ಕವ ಹಾಗೆಯೇ ಆಗಲಿ ಸಾರ್ ಎಂದ. ಆಗ ನನಗನಿಸಿದ್ದು ನಾವು ವಿಚಾರ ಮಾಡದೇ ಹೋದರೆ, ಜನ ನಮ್ಮನ್ನು ತಪ್ಪಾಗಿ ಅರ‍್ತೈಸುತ್ತಾರೆ ಎಂದು.

ಕೊನೆಯ ಪದಗಳಲ್ಲಿ… ದೊಡ್ಡ-ದೊಡ್ಡ ಅಂಗಡಿ-ಮಳಿಗೆಗಳಲ್ಲಿ ಚಿಕ್ಕಪುಟ್ಟ ಕೆಲಸವನ್ನು ಮಾಡುತ್ತಾ, ಬದುಕು ಸಾಗಿಸುತ್ತಿರುವ ಹುಡುಗರು ಹಾಗೂ ಯುವಕರನ್ನು ಸಿಕ್ಕಲ್ಲಿ, ಮನಸ್ಸು ಕೊಟ್ಟು ಮಾತನಾಡಿಸಿ, ಅವರನ್ನು ಪ್ರೋತ್ಸಾಹಿಸಿ, ಜೀವನದಲ್ಲಿ ಮುಂದೆ ಬರುವ ಸಲಹೆ ಕೊಡೋಣ. ಏಕೆಂದರೆ, ಅವರಿಂದಲೇ ನಮ್ಮ ನಾಡು-ನುಡಿ ಬೆಳಗಬೇಕಾಗಿರುವುದು.

( ಚಿತ್ರಸೆಲೆ: lianamete.wordpress.com ) 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: