ನೋಡಬನ್ನಿ ಕಲಬುರಗಿ ಶ್ರೀ ಶರಣಬಸವೇಶ್ವರ ಜಾತ್ರೆಯ ಸೊಬಗ!

– ನಾಗರಾಜ್ ಬದ್ರಾ.

 

ಶರಣಬಸವೇಶ್ವರ ರತೋತ್ಸವ

ನಾಡಿನ ದೊಡ್ಡ ಜಾತ್ರೆಗಳಲ್ಲಿ ಕಲಬುರಗಿಯ ಶ್ರೀ ಶರಣಬಸವೇಶ್ವರ ಜಾತ್ರೆಯು ಒಂದು. ನಾಡು-ಹೊರನಾಡುಗಳಿಂದ ಸಾವಿರಾರು ಮಂದಿಯನ್ನು ಸೆಳೆಯುವ ಈ ಜಾತ್ರೆಯ ವಿಶೇಶತೆ ಅಂದರೆ ಶರಣಬಸವೇಶ್ವರರ ರತೋತ್ಸವ. ದೀಪಾಲಂಕಾರದಿಂದ ಕೂಡಿರುವ ತೇರು, ಅದನ್ನು ಎಳೆಯಲು ಹಾತೊರೆಯುವ ಸಾವಿರಾರು ಕೈಗಳು, ಸಹಸ್ರಾರು ಬಕ್ತರ ಬಕ್ತಿ-ಬಾವದ ಅಲೆಗಳಲ್ಲಿ ಮೊಳಗುವ ಜಯಗೋಶಗಳು, ಈ ಅದ್ದೂರಿ ಜಾತ್ರೆಯನ್ನು ನೋಡಲು ಎರಡು ಕಣ್ಣುಗಳು ಸಾಲದು.

ರತೋತ್ಸವದ ಹಿನ್ನೆಲೆ:

ಕಲಬುರಗಿಯ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ಬಗ್ಗೆ ಈಗಾಗಲೇ ಹಿಂದಿನ ಬರಹ ಒಂದರಲ್ಲಿ ತಿಳಿಸಲಾಗಿದೆ. ಶರಣಬಸವೇಶ್ವರರು ದಿನಾಂಕ 11-03-1822, ಸೋಮವಾರದಂದು ಅನಾರೋಗ್ಯದಿಂದ ಲಿಂಗೈಕ್ಯರಾದರು. ಬಳಿಕ ಅವರ ಸಮಾದಿಯ ಮೇಲೆ ಗೋಪುರವನ್ನು ಕಟ್ಟಲಾಯಿತು. ಅದುವೇ ಇಂದಿನ ಕಲಬುರಗಿಯಲ್ಲಿನ ಪವಿತ್ರವಾದ ಶ್ರೀ ಶರಣಬಸವೇಶ್ವರ ದೇವಸ್ತಾನ. ಅವರ ದಾಸೋಹ ಪರಂಪರೆಯನ್ನು ಜನತೆಯ ಮನದಲ್ಲಿ ಹಸಿರಾಗಿ ಉಳಿಸಲು, ಅವರು ಲಿಂಗೈಕ್ಯರಾದ ದಿನದಂದು ಪ್ರತಿವರ‍್ಶವು ರತೋತ್ಸವವನ್ನು ನಡೆಸಲಾಗುತ್ತದೆ.

ಜಾತ್ರೆಯ ವಿಶೇಶತೆ:

ಸುಮಾರು 15 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಮೊದಲ ದಿನದಂದು ಅಡ್ಡಪಲ್ಲಕಿ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಶ್ರೀ ಶರಣಬಸವೇಶ್ವರರ ದಿವ್ಯಬಿಂಬಗಳಿರುವ ಅವಳಿ ವಿಗ್ರಹವನ್ನು ಅಡ್ಡಪಲ್ಲಕಿಯಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆಯಲ್ಲಿ ನಂದಿಕೋಲುಗಳ ಕುಣಿತ, ಡೊಳ್ಳು ಕುಣಿತ, ಜಾನಪದ ಕಲಾ ತಂಡಗಳ ಪ್ರದರ‍್ಶನ ಹಾಗೂ ಬಜನೆಯ ತಂಡದವರಿಂದ ಬಜನೆ ನಡೆಯುತ್ತದೆ. ಅಡ್ಡಪಲ್ಲಕಿಯಲ್ಲಿ ದೇವಸ್ತಾನದ ಸುತ್ತ 5 ಸುತ್ತುಗಳನ್ನು ಹಾಕಲಾಗುತ್ತದೆ. ಈ ಉತ್ಸವದಲ್ಲಿ ಸಾವಿರಾರು ಬಕ್ತರು ಶ್ರದ್ದೆಯಿಂದ ಪಾಲ್ಗೊಳ್ಳುತ್ತಾರೆ.

ಎರಡನೇ ದಿನ ಶ್ರೀ ಶರಣಬಸವೇಶ್ವರರ ರತೋತ್ಸವ ಕಾರ‍್ಯಕ್ರಮ ನಡೆಯುತ್ತದೆ. ಈ ದಿನದಂದು ಬೆಳಿಗ್ಗೆ ಶ್ರೀ ಶರಣಬಸವೇಶ್ವರರಿಗೆ ವಿಶೇಶವಾದ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ವೇಳೆ ರತೋತ್ಸವ ಕಾರ‍್ಯಕ್ರಮ ನಡೆಯುತ್ತದೆ. ಶರಣಬಸವೇಶ್ವರ ಸಂಸ್ತಾನದ ಪೀಟಾದಿಪತಿಗಳು ಪೂಜೆ ಸಲ್ಲಿಸುವ ಮೂಲಕ ರತೋತ್ಸವ ಕಾರ‍್ಯಕ್ರಮಕ್ಕೆ ಚಾಲನೆ ನೀಡುತ್ತಾರೆ. ಸಾವಿರಾರು ಬಕ್ತರು ಜೈಗೋಶವನ್ನು ಹಾಕುತ್ತಾ ಬಕ್ತಿಯಿಂದ ತೇರು ಎಳೆಯುತ್ತಾರೆ. ತೇರು ಸಾಗುವ ಹಾದಿಯಲ್ಲಿ ಹೂವು-ಹಣ್ಣುಗಳನ್ನು ಮೇಲೆ ಹಾರಿಸುತ್ತ, ಜೈಗೋಶವನ್ನು ಮೊಳಗಿಸುತ್ತಾ ಬಕ್ತಿ ಬಾವದ ಅಲೆಯಲ್ಲಿ ಮೀಯುತ್ತಾರೆ. ಇದೇ ಸಂದರ‍್ಬದಲ್ಲಿ ವಿಶೇಶವಾಗಿ ಹಾರಿಸುವ ಪಟಾಕಿಗಳು ಆಕಾಶದಲ್ಲಿ ಮೂಡಿಸುವ ಬಣ್ಣದ ಚಿತ್ತಾರವು ನೋಡುಗರನ್ನು ಸೆಳೆಯುತ್ತದೆ. ಹೀಗೆ ಸಾಗುವ ತೇರು ಶರಣಬಸವೇಶ್ವರರ ದೇವಸ್ತಾನದ ಸಂಕೀರ‍್ಣದಲ್ಲಿ ಸುಮಾರು 100 ಮೀಟರ್ ದೂರದಲ್ಲಿರುವ ಬಸವಣ್ಣನ ಗುಡಿಯವರಿಗೂ ತಲುಪಿ ಮತ್ತೆ ದೇವಸ್ತಾನದ ಕಡೆಗೆ ಹಿಂತಿರುಗುತ್ತದೆ.

ಶರಣಬಸವೇಶ್ವರರ ಅವಳಿ ಬಿಂಬ

ಉಳಿದ ಹದಿಮೂರು ದಿನಗಳ ಕಾಲ ಜಾತ್ರೆಯ ಮೆರೆಗು ಹಾಗೆಯೇ ಇರುತ್ತದೆ. ಈ ಜಾತ್ರೆಗೆ ಕಲಬುರಗಿ ಜಿಲ್ಲೆಯಿಂದಲ್ಲದೇ ನೆರೆಯ ಜಿಲ್ಲೆಗಳಿಂದ ಹಾಗೂ ಹೊರ ನಾಡಿನಿಂದ ಹಲವಾರು ಬಕ್ತರು ಬಜನೆ ಮಾಡುತ್ತಾ ಕಾಲ್ನಡಿಗೆಯಲ್ಲಿ ಬರುತ್ತಾರೆ. ಅವರು ಬರುವ ದಾರಿಯಲ್ಲಿ ಸಿಗುವ ಊರುಗಳಲ್ಲಿ ಮಂದಿಯನ್ನು ಬೇಟಿಮಾಡಿ, ಶರಣಬಸವೇಶ್ವರರ ತತ್ವ ಸಿದ್ದಾಂತಗಳ ಬಗ್ಗೆ ಅರಿವು ಮೂಡಿಸುತ್ತಾ ಬರುತ್ತಾರೆ. ಜಾತ್ರೆಗೆ ಬರುವ ಬಕ್ತರಿಗೆ ಅನ್ನ ದಾಸೋಹದ ಏರ‍್ಪಾಡನ್ನು ದೇವಸ್ತಾನದ ಕಡೆಯಿಂದ ಮಾಡಲಾಗಿರುತ್ತದೆ. ಇದ್ದಕ್ಕಾಗಿಯೇ ಬಕ್ತರು ತಾವು ಬೆಳೆದ ಬೆಳೆಗಳಲ್ಲಿ ಒಂದಿಶ್ಟು ಬಾಗವನ್ನು ಶರಣಬಸವೇಶ್ವರರ ದಾಸೋಹಕ್ಕೆ ನೀಡಿ, ಅವರ ದಾಸೋಹ ಕಾಯಕಕ್ಕೆ ಕೈಜೋಡಿಸಿ ಪುನೀತರಾಗುತ್ತಾರೆ.

ಜಾತ್ರೆಯ ಪ್ರತಿದಿನವೂ ದೇವಸ್ತಾನದ ಸಂಕೀರ‍್ಣದಲ್ಲಿರುವ ಅನುಬವ ಮಂಟಪದಲ್ಲಿ ವಿಶೇಶ ಉಪನ್ಯಾಸಕರಿಂದ ಶರಣಬಸವೇಶ್ವರರ ತತ್ವ ಸಿದ್ದಾಂತಗಳ ಕುರಿತು ಚರ‍್ಚೆ, ಮಾತುಗಳು ಹಾಗು ಇನ್ನಿತರ ಉಪನ್ಯಾಸ ಕಾರ‍್ಯಕ್ರಮಗಳು ನಡೆಯುತ್ತವೆ. ಇನ್ನೊಂದು ಕಡೆ ಹಲವಾರು ಊರುಗಳಿಂದ ಬಂದಿರುವ ಬಜನೆ ತಂಡಗಳಿಂದ ರಾತ್ರಿಯಿಡೀ ಶರಣಬಸವೇಶ್ವರರ ಬಜನೆ ಹಾಗೂ ಕೀರ‍್ತನೆಗಳು ನಡೆಯುತ್ತವೆ. ಜಾತ್ರೆಯಲ್ಲಿ ಸಿಹಿತಿಂಡಿ, ಬಳೆ, ಮಕ್ಕಳ ಆಟಿಕೆ ಹಾಗೂ ಇನ್ನೂ ಹಲವಾರು ಬಗೆಯ ಮಳಿಗೆಗಳನ್ನು ಹಾಕುತ್ತಾರೆ. ಇದರ ಜೊತೆಯಲ್ಲಿಯೇ ವಿವಿದ ಬಗೆಯ ಜೋಕಾಲಿಗಳು ಬರುತ್ತವೆ. ಎಲ್ಲವೂ ಸೇರಿ ಹದಿನೈದು ದಿನದ ಜಾತ್ರೆಯನ್ನು ಕಳೆಗಟ್ಟಿಸುತ್ತವೆ. ಇನ್ನು ಶರಣಬಸವೇಶ್ವರರ ಹುಟ್ಟಿದ ಊರು ಅರಳಗುಂಡಗಿಯಲ್ಲಿಯೂ ಇದೇ ಮಾದರಿಯಲ್ಲಿ 5 ದಿನಗಳ ಕಾಲ ಜಾತ್ರೆ ನಡೆಯುತ್ತದೆ.

(ಚಿತ್ರಸೆಲೆ: thehindu.com, youtube.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: