ಬಾವಿಯ ಹತ್ತಿರ ಒಬ್ಬನೇ ಮನುಶ್ಯನಿದ್ದಾನೆ…

– ಪ್ರಕಾಶ ಪರ‍್ವತೀಕರ

Aesop

ಈಸೋಪನ ಒಡೆಯನಾದ ಜಾಂತಸನಿಗೆ ಸ್ನಾನ ಮಾಡಬೇಕಾಗಿತ್ತು. ಆತ ಈಸೋಪನನ್ನು  ಕರೆದು ಸಾರ‍್ವಜನಿಕ ಬಾವಿಯ ಹತ್ತಿರ ಮನುಶ್ಯರ ದಟ್ಟಣೆ ಎಶ್ಟಿದೆ ಎಂದು ನೋಡಿ ಬರಲು ಹೇಳಿದ. ಈಸೋಪ ಜಾಂತಸನ ಗುಲಾಮ. ನೋಡಲು ಅತ್ಯಂತ ಕುರೂಪಿ ಅಶ್ಟಾವಕ್ರ. ಆದರೆ  ಕುಶಾಗ್ರಮತಿ, ಅಪಾರ ಬುದ್ದಿಶಾಲಿಯಾಗಿದ್ದ. ಆತ ಬಾವಿಯ ಕಡೆಗೆ ನಡೆದ. ದೂರದಿಂದಲೇ ಆತನಿಗೆ ಬಾವಿಯ ಹತ್ತಿರ ಜನರ ನೂಕು ನುಗ್ಗಾಟ ಕಾಣಿಸುತ್ತಿತ್ತು.

ಬಾವಿಯ ಹತ್ತಿರ ಆತ ಬಂದಾಗ ಬಾವಿಯ ಕಟ್ಟೆಯ ಹತ್ತಿರ ಒಂದು ಸಣ್ಣ ಬಂಡೆ ಬಿದ್ದಿದ್ದು ಕಾಣಿಸಿತು. ಬಾವಿಯ ಮೆಟ್ಟಲು ಹತ್ತಿರ ಬಿದ್ದ ಈ ಬಂಡೆಯಿಂದ ಬಾವಿಯ ಮೆಟ್ಟಲು ಹತ್ತಲು ಜನರಿಗೆ ಅಡೆತಡೆ ಉಂಟಾಗುತ್ತಿತ್ತು. ಜನರು ಅದನ್ನು ಎಡವುವುದು, ಮುಗ್ಗರಿಸಿ ಬೀಳುವದು ನಡದೇ ಇತ್ತು. ಅಶ್ಟರಲ್ಲಿ ಓರ‍್ವ ಮನುಶ್ಯ ಕೈಯಲ್ಲಿ ಬಾದಲಿ(ಬಕೀಟು) ಹಾಗು ಅರಿವೆ ಹಿಡಿದುಕೊಂಡು ಸ್ನಾನಕ್ಕಾಗಿ ಬಂದ. ಇವನ ಎದುರಿಗೆ ಓರ‍್ವ ವ್ಯಕ್ತಿ ಆ ಬಂಡೆಗಲ್ಲಿಗೆ ಕಾಲು ಬಡಿದು ಮುಗ್ಗರಿಸಿ ಕೆಳಗೆ ಬಿದ್ದ. ಇದನ್ನು ನೋಡಿದ ಅ ಮನುಶ್ಯ ಕೂಡಲೆ ಓಡಿ ಹೋಗಿ ಆತನಿಗೆ ಕೈ ಕೊಟ್ಟು ಮೇಲೆ ಎಬ್ಬಿಸಿದ.

ನಂತರ ದಾರಿಯಲ್ಲಿ ಅಡಚಣೆಯಾಗಿದ್ದ ಆ ಬಂಡೆಗಲ್ಲನ್ನು ಸರಿಸಿ ಒಂದು ಮೂಲೆಗೆ ತಂದು ಇಟ್ಟು ಸ್ನಾನ ಮಡಲು ಹೋದ. ಈಸೋಪ ದೂರದಿಂದ ಇದನ್ನೆಲ್ಲ ನೋಡುತ್ತ ನಿಂತಿದ್ದ. ಆಗ ಆತನಿಗೆ ತಿರುಕನೋರ‍್ವ ಕಂಡು ಬಂದ. ಆತನಿಗೆ ನೀರಡಿಕೆ ಆಗಿತ್ತು. ನೀರಿಗಾಗಿ ಜನರಲ್ಲಿ ಪ್ರಾರ‍್ತನೆ ಮಾಡುತ್ತಿದ್ದರೂ, ಅಲ್ಲಿ ನೆರೆದಿದ್ದ ಜನ ಇವನ ಕಡೆಗೆ ಗಮನ ಕೊಡಲಿಲ್ಲ. ಆದರೆ ಆ ಮನುಶ್ಯನಿಗೆ ಈ ತಿರುಕನ ಕಡೆಗೆ ಗಮನ ಹೋಯಿತು. ಆತ ಕೂಡಲೇ ಬಾವಿಯಿಂದ ನೀರು ಸೇದಿ ತಂದು  ಕೊಟ್ಟ. ನೀರು ಕುಡಿದು ಸಂತ್ರುಪ್ತನಾದ ತಿರುಕ ಇವನನ್ನು ಹಾಡಿ ಹರಸುತ್ತ ಹೊರಟು ಹೋದ.

ಈಸೋಪ ಮನೆಗೆ ಬಂದಾಗ ಒಡೆಯ ಇವನ ದಾರಿಯನ್ನೆ ಕಾಯುತ್ತ ಕುಳಿತಿದ್ದ. ಬಾವಿಯ ಹತ್ತಿರ ಒಬ್ಬನೇ ಮನುಶ್ಯನಿದ್ದಾನೆ, ಎಂದು ಈಸೋಪ ಹೇಳಿದಾಗ ಆತನಿಗೆ ಆನಂದವಾಯಿತು. ಈಸೋಪನನ್ನು ಕರೆದುಕೊಂಡು ಬಾವಿಗೆ ಬಂದಾಗ ಆತ ಕಂಡದ್ದೇನು? ಅಪಾರ ಜನ ಸಮುದಾಯ. ಅದನ್ನು ಕಂಡು ಜಾಂತಸನ ಕೋಪ ನೆತ್ತಿಗೇರಿತು. ಈಸೋಪನಿಗೆ ಚೆನ್ನಾಗಿ ಬಾರಿಸಿದ. “ಮೂರ‍್ಕನೇ, ಇಶ್ಟು ಜನ ಇಲ್ಲಿ ಸೇರಿರುವಾಗ ನೀನು ಕೇವಲ ಒಬ್ಬ ಮನುಶ್ಯನಿದ್ದಾನೆಂದು ಏಕೆ ಸುಳ್ಳು ಹೇಳಿದೆ?” ಎಂದು ಕೇಳಿದಾಗ ಈಸೋಪ, “ಹೌದು, ದಣಿ, ನಿಮ್ಮ ಆಜ್ನೆ ಪ್ರಕಾರ ನಾನು ಇಲ್ಲಿ ಬಂದಾಗ ಜನರೇನೊ ಬಹಳಶ್ಟು ಕಾಣಿಸಿದರು. ಆದರೆ ಮನುಶ್ಯ ಮಾತ್ರ ಒಬ್ಬನೇ ಕಂಡ”

ಪರರ ದುಕ್ಕಗಳಿಗೆ ಸ್ಪಂದಿಸುವದು ಅವರ ನೋವಿನಲಿ ಬಾಗವಹಿಸಿ ಅದನ್ನು ಕಡಿಮೆ ಮಾಡುವುದೇ ಮಾನವತೆ. ಮನುಶ್ಯ ತನಗಾಗಿ ಹಾಗು ತನ್ನ ಕುಟುಂಬದವರಿಗಾಗಿ ಮಾಡುವದರಲ್ಲಿ ಹೆಚ್ಚುಗಾರಿಕೆಯೇನೂ ಇಲ್ಲ. ನಿಶ್ಕಾಮದಿಂದ ಸಮಾಜದ ಸೇವೆ ಮಾಡುವದು ಹಾಗು ಅದಕ್ಕಾಗಿ ದೇಹ ಮುಡುಪಿಡುವದು ಮಾನವತೆ. ಅದೇ ಮಾನವ ದರ‍್ಮ.

( ಬರಹಗಾರರ ಮಾತು : ಯಾರದೋ ಬಾಶಣದಲ್ಲಿ ಕೇಳಿದ ಕತೆ ) 

( ಚಿತ್ರಸೆಲೆ: wikipedia ) 

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Shashi S says:

    ಸಾವಿರಾರ್ ಜನರ ಮದ್ದ್ಯೇ ಒಬ್ಬ ಮನುಷ್ಯನಾಗುವುದಕ್ಕಿಂತ ಮಾನವೀಯತೆ ಗುಣಗಳ ಮಧ್ಯೆ ಒಬ್ಬ ಗುಣವಂತ ನಾಗೋಣ ಅನ್ನೋಪಾಠ ಕಲಿಸುತ್ತೆ ಈ ಕಥೆ.
    SUPER.

ಅನಿಸಿಕೆ ಬರೆಯಿರಿ:

%d bloggers like this: