ಇಂಡೋನೇಶಿಯಾದ ಜಾನಪದ ಕತೆ – ಲಂಡಕ್ ನದಿಯ ಹುಟ್ಟು

– ಪ್ರಕಾಶ ಪರ‍್ವತೀಕರ.

Legenda-Sungai-Landak

ಒಂದಾನೊಂದು ಕಾಲದಲ್ಲಿ ಒಬ್ಬ ರೈತ ಹಾಗು ಅವನ ಹೆಂಡತಿ ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಈ ಹಳ್ಳಿಯ ಪಕ್ಕಕ್ಕೆ ಕಾಡು ಇತ್ತು.ಈ ದಂಪತಿಗಳು ಸಜ್ಜನರು.ಅವರದು ಸರಳ ಹಾಗು ಆಡಂಬರ ರಹಿತ ಸಾಮಾನ್ಯ ಜೀವನ ಪದ್ದತಿ. ಪರೋಪಕಾರಿಗಳಾದ ಅವರು ಪರರ ನೋವು ನಲಿವಿಗೆ ಸ್ಪಂದಿಸುವವರು. ಸಂಕಶ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚುವುದರಲ್ಲಿ ಸಂತೋಶವನ್ನು ಕಂಡುಕೊಳ್ಳುತ್ತಿದ್ದರು. ಒಂದು ರಾತ್ರಿ ಈ ಜೋಡಿ ಮನೆಯಲ್ಲಿ ವಿಶ್ರಮಿಸುತ್ತಿದ್ದರು. ರೈತ ಎಚ್ಚರವಾಗಿಯೇ ಇದ್ದ. ಒಮ್ಮೆಲೆ ನೋಡುನೋಡುತ್ತಿದ್ದಂತೆ ಒಂದು ಬಿಳಿಬಣ್ಣದ ಜರಿ ಆತನ ಹೆಂಡತಿಯ ತಲೆಯಿಂದ ಹೊರಗೆ ಬಂದು ಕೆಳಗೆ ಇಳಿದು ಮನೆಯಿಂದ ಹೊರಗೆ ಹೊರಟಿತು. ಇದನ್ನು ನೋಡುತ್ತಿದ್ದ ರೈತ ದಿಗ್ಬ್ರಮೆಗೊಂಡು, ಆ ಜರಿಯನ್ನು ಹಿಂಬಾಲಿಸಿ ಹೋದ. ಆ ಜರಿ ಮನೆಯ ಹತ್ತಿರವಿದ್ದ ಸರೋವರದಲ್ಲಿ ಮುಳುಗಿ ಮಾಯವಾಯಿತು.

ಅಚ್ಚರಿಗೊಂಡ ರೈತ ಮನೆಗೆ ಮರಳಿದಾಗ ಹೆಂಡತಿ ಇನ್ನೂ ಗಾಡ ನಿದ್ದೆಯಲ್ಲಿದ್ದಳು. ಮರುದಿನ ಈ ವಿಶಯವನ್ನು ಆಕೆಗೆ ಹೇಳಿದಾಗ, ಅಚ್ಚರಿಗೊಂಡ ಅವನ ಹೆಂಡತಿ ರಾತ್ರಿ ತಾನು ಕೂಡ ಕಂಡ ಕನಸಿನ ಬಗ್ಗೆ ಹೇಳಿದಳು. “ನಾನು ಹೊಲದ ದಂಡೆಯಗುಂಟ ನಡೆಯುತ್ತಲಿದ್ದೆ. ಆಗ ಸರೋವರದಲ್ಲಿ ಬಿಳೀ ಬಣ್ಣದ ಮುಳ್ಳುಹಂದಿ ಕಂಡೆ. ಅದು ನನ್ನ ಕಡೆಗೆ ಕ್ರೂರ ನೋಟ ಬೀರುತ್ತಿತ್ತು. ನಾನು ಗಾಬರಿಗೊಂಡು ಮನೆಯ ಕಡೆಗೆ ಓಡಿ ಬಂದೆ”. ತನ್ನ ಹೆಂಡತಿಯ ಕನಸು ಕೇಳಿ ಅಚ್ಚರಿಗೊಂಡ ರೈತ ಆ ಸರೋವರದ ಕಡೆಗೆ ಬಂದ.

ಸರೋವರದಲ್ಲಿ ಆತನಿಗೆ ಹೊಳೆಯುವ ಮೂರ‍್ತಿಯೊಂದು ಕಾಣಿಸಿತು.ಅದನ್ನು ಎತ್ತಿಕೊಂಡ. ಅದು ಬಂಗಾರದ ಮುಳ್ಳುಹಂದಿ ಆಗಿತ್ತು. ಬಹು ಸುಂದರವಾದ ಆ ಮೂರ‍್ತಿ  ವಜ್ರಗಳಿಂದ ಅಲಂಕರಿಸಲ್ಪಟ್ಟಿತ್ತು. ಆ ಮೂರ‍್ತಿಯನ್ನು ಮನೆಗೆ ತೆಗೆದುಕೊಂಡು ಬಂದ. ಅಂದು ಮದ್ಯರಾತ್ರಿ ಆತನಿಗೆ ಒಂದು ಕನಸು ಬಿತ್ತು. ಆ ಕನಸಿನಲ್ಲಿ ಬಂಗಾರದ ಮುಳ್ಳು ಹಂದಿ ಅವನಿಗೆ ಬೇಡುತ್ತಿತ್ತು. “ ದಯವಿಟ್ಟು ನೀನು ನನ್ನನ್ನು ನಿಮ್ಮ ಮನೆಯಲ್ಲಿ ಇಟ್ಟಿಕೊ. ನಿನಗೆ ಒಳ್ಳೆಯದಾಗುತ್ತದೆ. ನಿನ್ನ ಬೇಡಿಕೆಗಳನ್ನು ಪೂರೈಸುವ ಶಕ್ತಿ ನನ್ನಲ್ಲಿದೆ. ಅದಕ್ಕಾಗಿ ನೀನು ಮಾಡಬೇಕಾದುದು ಇಶ್ಟೆ. ನಿನಗೆ ನಾನು 2 ಬೇಡಿಕೆ ಸಾಲುಗಳನ್ನು ಹೇಳಿಕೊಡುತ್ತೇನೆ. ಮೊದಲನೆಯ ಬೇಡಿಕೆ ಸಾಲನ್ನು ನಿನ್ನ ಕೋರಿಕೆಗೆ ಮೊದಲು ಹೇಳಬೇಕು. ಎರಡನೇ ಬೇಡಿಕೆ ಸಾಲನ್ನು ಕೋರಿಕೆ ಈಡೇರಿದ ಮೇಲೆ ಹೇಳಬೇಕು. ನಾನು ಈಗ ಹೇಳುವ ಈ ಸಾಲುಗಳನ್ನು ನೆನಪಿನಲ್ಲಿ ಇಟ್ಟಿಕೊ” ಎಂದು ಆ 2 ಬೇಡಿಕೆ ಸಾಲುಗಳನ್ನು ರೈತನಿಗೆ ಉಪದೇಶ ಮಾಡಿತು.

ಮರುದಿನ ಮುಂಜಾನೆ ರೈತ ತಾನು ಕಂಡ ಕನಸನ್ನು ಹೆಂಡತಿಗೆ ಹೇಳಿದ. ಅದನ್ನು ಒರೆ ಹಚ್ಚಲು ರೈತ ಮೊದಲನೆ ಬೇಡಿಕೆ ಸಾಲನ್ನು ಜಪಿಸಿ ಬತ್ತದ ಬೇಡಿಕೆ ಇಟ್ಟ. ಕ್ಶಣಾರ‍್ದದಲ್ಲಿ ಬತ್ತ ರಾಶಿ ರಾಶಿಯಾಗಿ ಬಂದು ಕಣಜವೇ ನಿರ‍್ಮಾಣವಾಯಿತು. ಈಗ ರೈತ ಎರಡನೇ ಬೇಡಿಕೆ ಸಾಲನ್ನು ಹೇಳಿದಾಗ ಬತ್ತ ಬರುವುದು ನಿಂತಿತು. ಕೆಲ ನಿಮಿಶದ ನಂತರ ರೈತ ಚಿನ್ನ ಬೇಡಿದ, ಬೆಳ್ಳಿ ಬೇಡಿದ. ಕಣ್ಣು ಕೋರೈಸುವ ಚಿನ್ನ ಹಾಗು ಬೆಳ್ಳಿಯ ಆಬರಣಗಳು ಅವನ ಮುಂದೆ ಸಾಲು ಸಾಲಾಗಿ ಬಂದು ಕುಳಿತವು. ಅವನ ಮನಸ್ಸಿನಂತೆ ಎಲ್ಲವೂ ಆತನಿಗೆ ದೊರಕಿತು. ಈಗ ಆತ ಸಿರಿವಂತನಾಗಿದ್ದ. ದೀನ ದಲಿತರಿಗೆ ಸಹಾಯ ಮಾಡುವದನ್ನು ಮಾತ್ರ ಆತ ಮರೆತಿರಲಿಲ್ಲ. ಆದರೆ ಇವನ ಹಣಕಾಸಿನ ಪರಿಸ್ತಿತಿಯಲ್ಲಿ ಆದ ಬದಲಾವಣೆಯು ಒಬ್ಬ ಕಳ್ಳನ ಗಮನಕ್ಕೆ ಬಂದಿತು. ಆತ ಚಿನ್ನದ ಮೂರ‍್ತಿಯನ್ನು ಕಳುವು ಮಾಡುವ ಯೋಚಿಸಿ ಅದಕ್ಕೊಂದು ಉಪಾಯ ಮಾಡಿದ.

ಬಡವನಂತೆ ನಟಿಸಿ ರೈತನ ಮನೆಗೆ ಬಂದು ಅವನ ಕಣ್ಣು ತಪ್ಪಿಸಿ ಮೂರ‍್ತಿಯನ್ನು ಕದಿಯುವದರಲ್ಲಿ ಯಶಸ್ವಿಯಾದ. ಆ ಪರಿಸರದಲ್ಲಿ ಮಳೆ ಇಲ್ಲದೇ ನೀರಿಗಾಗಿ ಜನ ಕಂಗಾಲಾಗಿದ್ದರು. ಬರಗಾಲ ತಾಂಡವಾಡುತ್ತಿತ್ತು. ಸಾಮಾನ್ಯ ಜನರ ಅನುಕಂಪ ಪಡೆಯಲು ಇದು ಒಳ್ಳೆಯ ಸಮಯವೆಂದು ಆತ ಮೊದಲನೆ ಬೇಡಿಕೆ ಸಾಲನ್ನು ಹೇಳಿ ಆ ಮೂರ‍್ತಿಗೆ ನೀರಿಗಾಗಿ ಪ್ರಾರ‍್ತನೆ ಮಾಡಿದ. ಮೂರ‍್ತಿಯ ಮುಕದಿಂದ ನೀರು ಹೊರಹೊಮ್ಮಲಾರಂಬಿಸಿತು. ಮಹಾಪೂರದ ಹಾಗೆ ಬರುತ್ತಿರುವ ನೀರನ್ನು ಕಂಡು ಜನರಿಗೆ ಹಿಡಿಸಲಾರದಶ್ಟು ಆನಂದವಾಯಿತು. ಆದರೆ ಪ್ರಚಂಡ ವೇಗದಿಂದ ಹರಿದು ಬರುತ್ತಿರುವ ನೀರು ಸಂಚಯವಾಗುತ್ತ ನದಿಯಾಗಿ ಮಾರ‍್ಪಟ್ಟಿತು. ನಿಯಂತ್ರಣ ಮೀರಿ ಹರಿಯುತ್ತಿರುವ ನೀರಿನ ರೌದ್ರತೆ ಕಂಡು ಜನ ಬಯಪಟ್ಟು ಜೀವ ಕಾಪಾಡಿಕೊಳ್ಳಲು ಓಡಿ ಹೋದರು. ಕಳ್ಳನಿಗೆ ಮೂರ‍್ತಿಯ ಮುಕದಿಂದ ಬರುತ್ತಿದ್ದ ನೀರನ್ನು ಹೇಗೆ ತಡೆದು ನಿಲ್ಲಿಸಬೇಕೆಂಬದು ಗೊತ್ತಿರಲಿಲ್ಲ. ಆತನಿಗೆ ಎರಡನೆ ಬೇಡಿಕೆ ಸಾಲಿನ ಬಗ್ಗೆ ಅರಿವೇ ಇರಲಿಲ್ಲ. ಆ ಮುಳ್ಳಹಂದಿ ಮೂರ‍್ತಿ ಕಳ್ಳನ ಕಾಲುಗಳನ್ನು ಬಲವಾಗಿ ಹಿಡಿದುಕೊಂಡಿತ್ತು. ಹೀಗಾಗಿ ಅವನಿಗೆ ಅಲ್ಲಿಂದ ಓದಿ ತನ್ನ ಪ್ರಾಣ ಉಳಿಸಿಕೊಳ್ಳಲು ಸಾದ್ಯವಾಗಲಿಲ್ಲ. ಆತ ನೀರಲ್ಲಿ ಮುಳುಗಿ ಸತ್ತ. ಇಂಡನೇಶಿಯಾದ ಜನ ಈ ನದಿಗೆ ಲಂಡಕ್ (ಮುಳ್ಳುಹಂದಿ) ನದಿ ಎಂದು ನಾಮಕರಣ ಮಾಡಿದರು. ಇದು ಆ ದೇಶದಲ್ಲಿಯ ಬಹು ದೊಡ್ಡ ನದಿ.

( ಮಾಹಿತಿ ಸೆಲೆ: pesonakalimantanbarat.16mb.com )

( ಚಿತ್ರಸೆಲೆ: ceritarakyatnusantara.com

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: