ಪತ್ತೇದಾರಿ ಕತೆ: ಕನಸಿನಲ್ಲಿ ಕೊಲೆ (ಕೊನೆ ಕಂತು)

– ಬಸವರಾಜ್ ಕಂಟಿ.

killer

( ಕತೆಯಲ್ಲಿನ ಪಾತ್ರಗಳು ನೇರವಾಗಿ ನೋಡುಗರ/ಓದುಗರ ಜೊತೆ ಮಾತನಾಡುವದು “ಕತೆಯಾಚೆ (Metafiction)”ಎಂಬುದರ ಬಗ್ಗೆ  ‘4ನೇ ಗೋಡೆಯನ್ನು ಒಡೆಯುವುದು’ ಎಂದರೇನು? ಎಂಬ ಬರಹದಲ್ಲಿ ತಿಳಿಸಲಾಗಿತ್ತು. ಈ ಬಗೆಯನ್ನೇ ಬಳಸಿ ‘ಕನಸಿನಲ್ಲಿ ಕೊಲೆ” ಎಂಬ ಪತ್ತೇದಾರಿ ಕತೆಯನ್ನು ನಿಮ್ಮ ಮುಂದೆ ಇಡುತ್ತಿದ್ದೀನಿ. ಒಂದನೇ ಕಂತು ನಿನ್ನೆ ಮೂಡಿಬಂದಿತ್ತು. ಇಂದಿನದು ಕೊನೆಯ ಕಂತು. ಓದಿ ನಿಮ್ಮ ಅನಿಸಿಕೆ ತಿಳಿಸಿ )

*****************************************

ಮಂತ್ರಿಗಳು ಸತ್ತ ದಿನದ ಸಬೆಯಲ್ಲಿದ್ದ ಎಲ್ಲರೂ ಕೂಡಿದ್ದರು. ಅಂದು ಸಬೆ ಸೇರಿದ್ದ ಕೋಣೆಯಲ್ಲೇ ಪುಲಕೇಶಿ, ನಾಯಕ, ಮತ್ತು ಇತರರು ಕೂತಿದ್ದರು. ಅಂದು ಕುಳಿತಿದ್ದ ಜಾಗದಲ್ಲಿಯೇ ಎಲ್ಲರೂ ಕುಳಿತುಕೊಳ್ಳಬೇಕೆಂದು ಪುಲಕೇಶಿ ತಿಳಿಸಿದನು. ಗುಂಡಾಕಾರದಲ್ಲಿ ಇರಿಸಲಾಗಿದ್ದ 5 ಕುರ‍್ಚಿಗಳಲ್ಲಿ, ಮಂತ್ರಿಗಳ ಕುರ‍್ಚಿಯನ್ನು ಕಾಲಿ ಬಿಟ್ಟು ಇತರರು ತಾವು ಕುಳಿತಿದ್ದ ಜಾಗಗಳಲ್ಲಿ ಕುಂತರು. ಒಂದು ಕುರ‍್ಚಿಗೂ, ಇನ್ನೊಂದು ಕುರ‍್ಚಿಗೂ ಎರಡು ಅಡಿಯಶ್ಟು ದೂರವಿತ್ತು. ಮಂತ್ರಿಯ ಪಕ್ಕದಲ್ಲಿ ಹಿರಿಯ ನಾಡಗೌಡ ಬೀರೇಗೌಡರು, ಅವರ ಪಕ್ಕದಲ್ಲಿ ಸೇನೆ ನಾಯಕ ಮಹಾವೀರ, ಅವರ ಪಕ್ಕದಲ್ಲಿ ಇನ್ನೊಬ್ಬ ನಾಡಗೌಡ ಸಿದ್ದಲಿಂಗ ಮತ್ತು ಕೊನೆಯದಾಗಿ ಇನ್ನೊಬ್ಬ ಸೇನೆನಾಯಕ ಪರಶುರಾಮ ಕೂತಿದ್ದರು. ಇವರೆಲ್ಲ ಕುಳಿತಿದ್ದ ಕೋಣೆಯ ಬಾಗಿಲು ಮುಚ್ಚಿ, ಹೊರಗೆ ಕಾವಲಿಗೆ ಬಲರಾಮ ನಿಂತಿದ್ದ. ನಡೆದಿದ್ದನ್ನು ವಿವರವಾಗಿ ಹೇಳಲು ಬೀರೇಗೌಡರನ್ನು ಕೇಳಿಕೊಂಡ ಪುಲಕೇಶಿ.

ಬಾದಾಮಿಯಿಂದ ಸಹಾಯ ಬರುವವರೆಗೂ ಸೇನೆಯನ್ನು ಹೇಗೆ ನಿಯೋಜಿಸಬೇಕೆಂದು ಚರ‍್ಚಿಸುವುದಕ್ಕಾಗಿ ಸಬೆ ಸೇರಿ ಸುಮಾರು ಮೂವತ್ತು ನಿಮಿಶಗಳಾದ ಮೇಲೆ ಮಂತ್ರಿಗಳು ಕುಸಿದು ಬಿದ್ದರು. ಅವರು ಪಾನಕ ಕುಡಿದಮೇಲೆಯೇ ಹೀಗೆ ಆಗಿದ್ದು. ಪಾನಕವನ್ನು ಆಳೊಬ್ಬ ಕೋಣೆಗೆ ತಂದರೂ, ಮಹಾವೀರನೇ ಅದನ್ನು ಎಲ್ಲರಿಗೆ ತನ್ನ ಕಯ್ಯಿಂದ ಕೊಟ್ಟದ್ದು. ಹೀಗಾಗಿ ಎಲ್ಲರಿಗೂ ಅವನ ಮೇಲೆಯೇ ಸಂಶಯ. ಕೋಣೆಯನ್ನು ವಿವರವಾಗಿ ನೋಡಿದ ಪುಲಕೇಶಿ. ಅದರ ಬಾಗಿಲು ಮತ್ತೆ ಮತ್ತೆ ಮುಚ್ಚಿ ತೆಗೆದು ನೋಡಿದ. ಮುಚ್ಚಿದಾಗ ಬಾಗಿಲುಗಳ ನಡುವೆ ಸಂದಿ ಮೂಡುವುದನ್ನು ಗಮನಿಸಿದ. ನಡೆದುದನ್ನು ಮನವರಿಕೆ ಮಾಡಿಕೊಂಡ ಪುಲಕೇಶಿ, ಸಬೆಯಲ್ಲಿ ಪಾನಕ ಕುಡಿದಿದ್ದರಿಂದಲೇ ಅವರ ಸಾವು ಆಗಿದೆಯೆಂದು ಅಂದಾಜಿಸಿದ. ಆ ದಿನ, ಒಬ್ಬೊಬ್ಬರನ್ನಾಗಿ ವಿಚಾರಿಸಲು ಮುಂದಾದ ಪುಲಕೇಶಿ. ರಾಣಿ ಗಾಯತ್ರಿಯನ್ನು ಮೊದಲು ವಿಚಾರಣೆ ಮಾಡಿದ. ಅಲ್ಲಿ ನಾಯಕನೂ ಇದ್ದ.

“ನೀವು ಯಾಕೆ ನಿಮ್ಮ ಗಂಡ ಹೇಳಿದ ಹಾಗೆ ಮಹಾವೀರನನ್ನು ಕೊಲ್ಲಲಿಲ್ಲ?” ಕೇಳಿದ ಪುಲಕೇಶಿ.

“ನಾನೊಬ್ಬ ಸಾಮಾನ್ಯ ಹೆಣ್ಣು. ನನಗೆ ಒಬ್ಬರನ್ನು ಸಾಯಿಸುವಶ್ಟು ದರ‍್ಯ ಎಲ್ಲಿಂದ ಬರಬೇಕು ಪ್ರಬು?” ದೀನಳಾಗಿ ಹೇಳಿದಳು ಗಾಯತ್ರಿ.

“ಹಾಗಾದರೆ ಮಂತ್ರಿಯವರ ಸಾವಿನಲ್ಲಿ ನೀವು ಬಾಗಿಯಾಗಿಲ್ಲವೇ?”

“ಕಂಡಿತಾ ಇಲ್ಲ. ನಾಯಕರು ನನ್ನ ಕಯ್ಗೆ ಕೊಟ್ಟ ವಿಶ ನನ್ನ ಬಳಿಯಲ್ಲೇ ಇದೆ”

“ಮತ್ತೆ ನಿಮ್ಮಲ್ಲಿದ್ದ ವಿಶ ಅವರನ್ನು ಹೇಗೆ ಕೊಂದಿತು?”

“ಅದೇ ನನಗೂ ತಿಳಿಯುತ್ತಿಲ್ಲ ಪ್ರಬು”

“ನಿಮ್ಮ ದಾಸಿಯರಾರಾದರೂ?”

“ಅದು ಸಾದ್ಯವೇ ಇಲ್ಲ. ನನ್ನ ದಾಸಿಯರು ನನ್ನ ದೇಹದ ಬಾಗಗಳಿದ್ದ ಹಾಗೆ. ದೇಹಕ್ಕೆ ಅಪಾಯವುಂಟು ಮಾಡುವ ಯಾವ ಕೆಲಸವನ್ನೂ ಅವರು ಮಾಡಲಾರರು”

“ಅವಳ ಮಾತನ್ನು ನಂಬಬೇಡಿ. ದಾರಿ ತಪ್ಪಿ ಹಾದರಕ್ಕೆ ಇಳಿದಿರುವ ಹೆಣ್ಣು ಇವಳು”, ಸಿಟ್ಟಿನಿಂದ ನುಡಿದ ನಾಯಕ.

“ಹಾಗೆಲ್ಲ ಪುರಾವೆ ಇಲ್ಲದೆ ತೀರ‍್ಮಾನಿಸಬಾರದು” ಸಮಾದಾನ ಪಡಿಸಿದ ಪುಲಕೇಶಿ.

“ನೀವು ಸುಮ್ಮನೆ ಸಮಯ ವ್ಯರ‍್ತ ಮಾಡುತ್ತಿದ್ದೀರಿ. ಇವಳನ್ನು ಮತ್ತು ಆ ಚಾಂಡಾಲನನ್ನು ಗಲ್ಲಿಗೇರಿಸಿ ಬಿಡಿ”

“ಹಾಗೆ ಮಾಡಿದರೆ ಕಾನೂನು ಸುಮ್ಮನೆ ಬಿಡುತ್ತದೆಯೇ?”

“ಕಾನೂನು? ಯಾವ ಕಾನೂನು?” ಮತ್ತೆ ಗಲಿಬಿಲಿಗೊಂಡ ನಾಯಕ.

“ಇರಲಿ” ಎನ್ನುತ್ತಾ, “ನೀವು ಇನ್ನು ಹೋಗಬಹುದು”, ಎಂದು ಗಾಯತ್ರಿಗೆ ಹೇಳಿದ ಪುಲಕೇಶಿ.

ಸಂಜೆಯಾಗಿದ್ದರಿಂದ ಎಲ್ಲರೂ ಮಲಗಿದರು. ಮರುದಿನ ಮುಂಜಾನೆ ಎಲ್ಲರಿಗೂ ಆಶ್ಚರ‍್ಯ ಕಾದಿತ್ತು. ರಾತ್ರಿ ತನ್ನಲ್ಲಿದ್ದ ವಿಶ ಸೇವಿಸಿ ಗಾಯತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅವಳ ಹೆಣದ ಪಕ್ಕದಲ್ಲಿ ತಾಳೆಗರಿಯೊಂದು ಸಿಕ್ಕು, ಅದರಲ್ಲಿ ಹೀಗೆ ಬರೆದಿತ್ತು.

“ನಾನು ಮಂತ್ರಿಗಳನ್ನು ಕೊಂದಿಲ್ಲ. ನನ್ನ ಶೀಲದಲ್ಲಿ ಯಾವ ದೋಶವೂ ಇಲ್ಲ. ನಾನು ಯಾವ ಅಪರಾದವನ್ನೂ ಮಾಡಿಲ್ಲ”

ಅದನ್ನು ಓದಿದ ತಕ್ಶಣ ತನ್ನ ಆಪ್ತ ಸಯ್ನಿಕನನ್ನು ಕರೆದು ಗುಪ್ತವಾಗಿ ಏನೋ ಹೇಳಿದ ಪುಲಕೇಶಿ. ಅಂದು ಬೆಳಗ್ಗೆ ಏಕಾಂತದಲ್ಲಿ ಮಹಾವೀರನನ್ನು ಕಂಡ. ಗಾಯತ್ರಿ ಸತ್ತ ದುಕ್ಕ ಅವನ ಮುಕದಲ್ಲಿ ನಿಚ್ಚಳವಾಗಿ ಕಾಣುತ್ತಿತ್ತು.

“ನಾನು ಇಲ್ಲಿ ಬಂದ ಮೇಲೆ ನೋಡಿದ ಹಾಗೆ, ಅರಮನೆಯಲ್ಲಿ ನಾಯಕರಿಗಿಂತ ನಿನಗೇ ಹೆಚ್ಚು ಮರ‍್ಯಾದೆ ಇದೆ. ನೀನು ಈ ರಾಜ್ಯವನ್ನು ಮತ್ತು ಗಾಯತ್ರಿಯನ್ನು ಪಡೆಯಲು ಅಡ್ಡವಾಗಿದ್ದದ್ದು ಮಂತ್ರಿ ಮತ್ತು ನಾಯಕ ಇಬ್ಬರೇ. ನಾಯಕನನ್ನೇನೋ ಕ್ಶಣಮಾತ್ರದಲ್ಲಿ ಮುಗಿಸಿಬಿಡಬಹುದು. ಹಾಗಾಗಿ ಮಂತ್ರಿಯನ್ನು ನೀನೇ ಕೊಂದಿರುವುದರಲ್ಲಿ ಸಂಶಯವೇ ಇಲ್ಲ”

“ನನಗೆ ಈ ರಾಜ್ಯವನ್ನು ಪಡೆಯಬೇಕು ಎನ್ನುವ ಮಾತಿನಲ್ಲಿ ನಿಜವಿಲ್ಲ. ಅರಮನೆಯಲ್ಲಿ ಎಲ್ಲರೂ ನನ್ನ ಮಾತು ಕೇಳಿದರೆ ಅದಕ್ಕೆ ನಾಯಕರೇ ಹೊಣೆ. ರಾಜ್ಯದ ವಿಶಯಗಳಲ್ಲಿ ಅವರಿಗೆ ಹೆಚ್ಚು ಆಸಕ್ತಿಯೇ ಇರಲಿಲ್ಲ. ಹಾಗಾಗಿ ಮಂತ್ರಿಗಳು ರಾಜ್ಯದ ಹೊಣೆ ಹೊತ್ತಿದರು. ಅವರಿಗೆ ನಾನು ಸಾಕಶ್ಟು ಸಹಾಯ ಮಾಡುತ್ತಿದ್ದೆ. ಇದೆಲ್ಲ ಅರಮನೆಯಲ್ಲಿರುವ ಪ್ರತಿಯೊಬ್ಬ ಆಳಿಗೂ ಗೊತ್ತು, ಹಾಗಾಗಿಯೇ ಅವರು ನನಗೆ ಹೆಚ್ಚು ಮರ‍್ಯಾದೆ ಕೊಡುವುದು”

“ಹಾಗಾದರೆ ಮಂತ್ರಿಗಳನ್ನು ಕೊಂದವರಾರು? ಗಾಯತ್ರಿ ಬಳಿಯಿದ್ದ ವಿಶವು ಅವರ ಕಯ್ ಹೇಗೆ ತಲುಪಿತು?”

“ನನಗೆ ಕಂಡಿತಾ ಗೊತ್ತಿಲ್ಲ”

*****************************************

ಬಲರಾಮನನ್ನು ತನ್ನ ಕೋಣೆಗೆ ಕರಿಸಿದ ಪುಲಕೇಶಿ. ನಶ್ಯೆಪುಡಿ ಏರಿಸಿಕೊಳ್ಳುತ್ತಾ ಬಂದ ಅವನನ್ನು ಕುರ‍್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದ. ಆದರೆ ಅವನು ನಿರಾಕರಿಸಿ, ಪುಲಕೇಶಿಯ ಎದುರು ಕಯ್ ಕಟ್ಟಿ ನಿಂತುಕೊಂಡ.

“ಅಂದು ಸಬೆಯಲ್ಲಿ ಮಾತುಕತೆ ಬಿಟ್ಟು, ಮಂತ್ರಿಗಳು ಸಾಯುವ ಮುನ್ನ ಏನಾದರೂ ವಿಶೇಶ ನಡೆಯಿತಾ?” ಕೇಳಿದ ಪುಲಕೇಶಿ.

“ವಿಶೇಶ ಅಂದ್ರೆ?”

“ಸಾಮಾನ್ಯವಾಗಿ ನಡೆಯದಿರುವುದು. ಹೊಸತೇನಾದರೂ…”

ತುಸು ಹೊತ್ತು ಯೋಚಿಸಿದ ಬಲರಾಮ, “ಪಾನಕ ಕೊಡುವಾಗ ಸೇನೆ ನಾಯಕರ ಕಯ್ ಯಾಕೋ ನಡುಗುತ್ತಿತ್ತು” ಎಂದ.

“ಹಾಗಾದರೆ ನಿನಗೆ ಮಹಾವೀರನ ಮೇಲೆ ಸಂಶಯವೇ?”

“ಹೌದು ಮತ್ತೆ. ಅವ್ನು ಮತ್ತೆ ಅವ್ಳು ಸೇರ‍್ಕೊಂಡೆ ಈ ಕೆಲಸ ಮಾಡಿರೋದು. ಇಲ್ಲಾಂದ್ರೆ ಆ ವಿಶ ಅವ್ಳ ಕಯ್ ಬಿಟ್ಟು ಬೇರೆಯವರ ಕಯ್ಗೆ ಹೇಗೆ ಸಿಗುತ್ತೆ ಹೇಳಿ?”

“ಆದರೆ ಗಾಯತ್ರಿ ತಪ್ಪು ಮಾಡಿಲ್ಲ ಅಂತ ಬರೆದು ಸತ್ತು ಹೋಗಿದ್ದಾರಲ್ಲಾ?”

“ಸಾಯವ್ರು ಸುಳ್ಳು ಹೇಳಲ್ಲಾ ಅಂತಾ ಏನಾದ್ರು ಇದ್ಯಾ?”

ಬಲರಾಮನ ಮಾತುಗಳನ್ನೇ ಮೆಲುಕು ಹಾಕುತ್ತಾ ಮೌನವಾದನು ಪುಲಕೇಶಿ.

ನಂತರ, ಹಿರಿಯ ಬೀರೇಗೌಡರನ್ನು ಕರೆಸಿಕೊಂಡ ಪುಲಕೇಶಿ, ಮಹಾವೀರ ಹೇಳಿದ ಮಾತುಗಳ ಬಗ್ಗೆ ವಿಚಾರಿಸಿದ. ಅವರೂ ಅವನ ಮಾತುಗಳನ್ನು ಒಪ್ಪಿದರು. ನಂತರ ಅಂದು ಸಬೆಯಲ್ಲಿ ನಡೆದ ಪ್ರಸಂಗಗಳ ಬಗ್ಗೆ ಕೇಳಿದ.

“ಸಬೆಯಲ್ಲಿ ಸಾಮಾನ್ಯವಾಗಿ ನಡೆಯದಿರೋದು ಬಿಟ್ಟು, ಹೊಸತೇನಾದ್ರೂ ನಡೀತಾ?”

ಸ್ವಲ್ಪ ಹೊತ್ತು ಯೋಚಿಸಿ, “ನನಗೆ ನೆನಪಿದ್ದಂಗೆ ಏನೂ ನಡೆದಿಲ್ಲಾ” ಅಂದರು ಬೀರೇಗೌಡರು.

“ಚೆನ್ನಾಗಿ ನೆನಪು ಮಾಡ್ಕೊಂಡು ಹೇಳಿ.. ಮಂತ್ರಿಗಳು ಪಾನಕ ಬಿಟ್ಟು ಬೇರೆನಾದರೂ ತಿಂದ್ರಾ ಅತವಾ ಕುಡಿದ್ರಾ?”

“ಇಲ್ಲ. ಅವತ್ತು ನಾವು ಕುಡಿದಿದ್ದು ಪಾನಕ ಅಶ್ಟೇ”

“ನೀವಲ್ಲ. ಕೇವಲ ಮಂತ್ರಿಗಳು. ಪಾನಕ ಬಿಟ್ಟು ಅವರರಿಗಾಗಿಯೇ ಅಂತ ಏನಾದರೂ ತರಿಸಿ ಕೊಡಲಾಗಿತ್ತೆ?”

“ಹಾಗೇನೂ ಇಲ್ಲ”

“ನೀರು? ನೀರನ್ನೂ ಕುಡಿಯಲಿಲ್ಲವೇ?”

“ಆಂ…” ಎಂದು ನೆನೆಸಿಕೊಳ್ಳುತ್ತಾ, “ಸಬೆಯ ನಡುವೆ ಅವರಿಗೆ ಒಂದೆರಡು ಸೀನು ಬಂದು, ನೀರು ಕುಡಿದರು. ಅಶ್ಟೇ”

“ಹ್ಹ… ಹ್ಹ…” ಎಂದು ನಕ್ಕನು ಪುಲಕೇಶಿ. “ಒಂದೊಂದು ಬಾರಿ ಸಾಮಾನ್ಯ ವಿಶಯಗಳಲ್ಲೇ ವಿಶೇಶ ಅಡಗಿರುತ್ತೆ ನೋಡಿ” ಎಂದನು.

********************************************

ಎರಡು ದಿನಗಳ ಬಳಿಕ, ಎಲ್ಲರನ್ನೂ ಒಂದು ಕೋಣೆಯಲ್ಲಿ ಸೇರಿಸಿ ಪುಲಕೇಶಿ ಮಾತಾಡಿದ. “ಮಂತ್ರಿಗಳ ಕೊಲೆ ಯಾರು ಮಾಡಿದ್ದಾರೆ ಎಂದು ಗೊತ್ತಾದ ಮೇಲೂ ಎರಡು ದಿನ ನಿಮಗೆಲ್ಲಾ ಕಾಯಿಸಬೇಕಾಯಿತು. ನನಗೆ ಬೇಕಿದ್ದ ಪುರಾವೆಗಾಗಿ ಕಾಯುತ್ತಿದ್ದೆ”

ಎಲ್ಲರೂ ತದೇಕಚಿತ್ತರಾಗಿ ಪುಲಕೇಶಿಯ ಮಾತುಗಳನ್ನೇ ಕೇಳುತ್ತಿದ್ದರು.

“ನಾನೂ ಮೊದಮೊದಲು ಗಾಯತ್ರಿಯವರು ಇದರಲ್ಲಿ ಬಾಗಿಯಾಗಿದ್ದಾರೆ ಎಂದುಕೊಂಡಿದ್ದೆ. ಆದರೆ ಅವರು ಆತ್ಮಹತ್ಯೆ ಮಾಡಿಕೊಂಡ ಮೇಲೆ ಅದು ಸುಳ್ಳು ಎಂದು ಗೊತ್ತಾಯಿತು. ಮನಸ್ಸು ಸ್ತಿಮಿತವಾಗಿರುವ ಯಾರಾದರೂ ಸಾಯುವ ಸಮಯದಲ್ಲಿ ಸುಳ್ಳು ಹೇಳುವುದಿಲ್ಲ ಎಂದು ನಾನು ಬಲ್ಲೆ. ಈಗ ನಾನು ಕಂಡುಕೊಂಡ ಸತ್ಯಗಳನ್ನು ಬಿಚ್ಚಿಡುವೆ. ನೀವೆಲ್ಲಾ ತಿಳಿದುಕೊಂಡ ಹಾಗೆ ಮಂತ್ರಿಗಳು ಸತ್ತಿದ್ದು ಪಾನಕ ಕುಡಿದಿದ್ದರಿಂದಲ್ಲ. ನೀರು ಕುಡಿದಿದ್ದರಿಂದ”

ಎಲ್ಲರ ಹುಬ್ಬುಗಳೇರಿದವು. ಪುಲಕೇಶಿ ಮುಂದುವರೆಸಿದ,

“ಅಂದು ಬಾಗಿಲ ಬಳಿ ಕಾವಲಿಗೆ ನಿಂತಿದ್ದ ಬಲರಾಮ, ಸಮಯ ನೋಡಿ, ಬಾಗಿಲ ಸಂದಿಗಳಿಂದ ತನ್ನ ನಶ್ಯ ಪುಡಿಯನ್ನು ಊದಿದ್ದಾನೆ. ಬಾಗಿಲ ಬಳಿಯಲ್ಲೇ ಕುಳಿತಿದ್ದ ಮಂತ್ರಿಗಳಿಗೆ ಸೀನು ಬಂದು ತಮ್ಮ ಮುಂದಿದ್ದ ಲೋಟ ಎತ್ತಿ ನೀರು ಕುಡಿದಿದ್ದಾರೆ. ಆ ನೀರಿನಲಿ ಅದಾಗಲೇ ವಿಶ ಬೇರೆಸಿ ಇಟ್ಟಿದ್ದ ಬಲರಾಮ”

ನಡುವೆ ಬಾಯಿ ಹಾಕಿ ಕೇಳಿದ ನಾಯಕ, “ಅವನಿಗೆ ಹೇಗೆ ಗೊತ್ತು ಮಂತ್ರಿಗಳು ಅಲ್ಲೇ ಕುಳಿತುಕೊಳ್ಳುತ್ತಾರೆಂದು?”

“ಅವನಿಗೆ ಗೊತ್ತಿರಲಿಲ್ಲ. ಗೊತ್ತಾಗಬೇಕಾಗಿಯೂ ಇರಲಿಲ್ಲ. ಅಶ್ಟು ಜನರಲ್ಲಿ ಯಾರು ಸತ್ತರೂ, ಆ ಸಾವಿನ ಲಾಬ ತೆಗೆದುಕೊಳ್ಳಬಹುದೆಂದು ನಿಮ್ಮ ಸಂಚಾಗಿತ್ತು, ಅಲ್ಲವೆ?”

“ಏನು ಹಾಗೆಂದರೆ?” ಸಿಟ್ಟಿನಲ್ಲಿ ಎದ್ದು ನಿಂತ ನಾಯಕ. ಮಿಕ್ಕವರೂ ಎದ್ದು ನಿಂತರು. ಎಲ್ಲರನ್ನೂ ಕುಳಿತುಕೊಳ್ಳಲು ಹೇಳಿ, ಪುಲಕೇಶಿ ಉತ್ತರಿಸಿದ.

“ನೀವು ನಮ್ಮ ಊರಿಗೆ ಬರುವ ಮುಂಚೆ, ನಿಮ್ಮ ಹೆಂಡತಿಗೆ ಮಹಾವೀರನನ್ನು ಕೊಲ್ಲಲು ವಿಶ ಕೊಟ್ಟದ್ದು ನಮಗೆ ಗೊತ್ತೇ ಇದೆ. ಆದರೆ, ಒಂದು ದಿನ ಕಳೆದರೂ ಅವನು ಸಾಯದಿದ್ದಾಗ, ನಿಮ್ಮ ಮಾತಿನಂತೆ ಬಲರಾಮ ವಿಶ ಹಾಕಿ ಇನ್ಯಾರನ್ನೋ ಸಾಯಿಸಿದ. ನೀವು ಮರಳಿ ಬಂದು, ನಡೆದದ್ದನ್ನು ಮಿಕ್ಕವರಿಗೆ ಹೇಳಿ, ನಿಮ್ಮ ಹೆಂಡತಿ ಮತ್ತು ಮಹಾವೀರನ ಮೇಲೆ ಅಪವಾದ ಹೊರಿಸಿ, ಅವರನ್ನು ರಾಜದ್ರೋಹದ ಕಾರಣ ಸಾಯಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದಿರಿ”

“ಆದರೆ, ಗಾಯತ್ರಿ ಬಳಿಯಿದ್ದ ವಿಶ ಬಲರಾಮನಿಗೆ ಹೇಗೆ ಸಿಕ್ಕಿತು?” ಕೇಳಿದ ನಾಯಕ.

“ಅದಕ್ಕೇ ಎರಡು ದಿನ ನಾನು ಕಾಯಬೇಕಾದದ್ದು. ಮದುರಯ್ ಗೆ ನನ್ನ ದೂತನನ್ನು ಕಳುಹಿಸಿ, ರಾಮಚಂದ್ರ ಪಂಡಿತರ ಹತ್ತಿರ ನಿಮಗೆ ಕೊಟ್ಟ ವಿಶದ ಬಗ್ಗೆ ಕೇಳಿದ್ದೆ. ಅವರು ಕೊಟ್ಟ ಉತ್ತರ ನನ್ನ ಬಳಿ ಇದೆ”, ಎಂದು ಓಲೆಯೊಂದನ್ನು ತೆಗೆದು ಬೀರೇಗೌಡರಿಗೆ ಕೊಟ್ಟನು.

“ಅವರು ನಿಮಗೆ ಒಂದಲ್ಲಾ, ಎರಡು ತಾಮ್ರದ ಬರಣಿಗಳನ್ನು ಕೊಟ್ಟಿದ್ದರು, ಅಲ್ಲವೇ? ಅದರಲ್ಲಿ ಒಂದನ್ನು ನಿಮ್ಮ ಹೆಂಡತಿಗೆ ಕೊಟ್ಟು, ಇನ್ನೊಂದನ್ನು ಬಲರಾಮನಿಗೆ ಕೊಟ್ಟಿರಿ”

“ಹೌದು. ರಾಮಚಂದ್ರರ ಓಲೆಯಲ್ಲಿ ಇರುವುದು ಅದೇ” ಎಂದರು ಬೀರೇಗೌಡರು.

ನಾಯಕನಿಗೆ ಸಿಟ್ಟು ಏರಿ, ಬಲರಾಮನತ್ತ ತಿರುಗಿ, “ಬಲರಾಮ, ಹಿಡಿ ಇವನನ್ನು” ಎಂದನು.

ಬಲರಾಮ ಓಡಿ ಬಂದು ಪುಲಕೇಶಿಯ ಕಯ್ಗಳನ್ನು ಹಿಂದಕ್ಕೆ ಎಳೆದು, ಅಲುಗಾಡದಂತೆ ಹಿಡಿದನು. ಎಲ್ಲರೂ ಅಚ್ಚರಿಯಿಂದ ನೋಡುತ್ತಲೇ, ನಾಯಕ ತನ್ನ ಕತ್ತಿಯನ್ನು ಹೊರಗೆಳೆದು ಪುಲಕೇಶಿಯ ಎದೆಗೆ ಚುಚ್ಚಿದನು.

ನಿದ್ದೆಯಿಂದ ಎಚ್ಚರವಾದ ಪುಲಕೇಶಿ, “ಇಲ್ಲ… ಇಲ್ಲ…”, ಎನ್ನುತ್ತ ಸುತ್ತಮುತ್ತ ನೋಡಿದನು.

ತಾನಿದ್ದ ಸ್ತಿತಿ ಅರಿತು, “ಉಪ್”, ಎಂದು ನಿಟ್ಟುಸಿರು ಬಿಟ್ಟು ಮತ್ತೆ ಹಾಸಿಗೆ ಮೇಲೆ ಉರುಳಿದನು.

(ಮುಗಿಯಿತು)

( ಚಿತ್ರ ಸೆಲೆ: youtube.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ತುಂಬಾ ಚೆನ್ನಾಗಿದೆ, ಬಹಳ ಹಿಡಿಸಿತು ಕತೆ ಬರೆದ ಪರಿ.

ಜಗದೀಶ್ ಗೌಡ ಗೆ ಅನಿಸಿಕೆ ನೀಡಿ Cancel reply

Enable Notifications OK No thanks