ಬಿಸಿಲ ಬೇಗೆ: ಬಂಡಿ ಕಾಪಾಡಿ ಹೀಗೆ

ಜಯತೀರ‍್ತ ನಾಡಗವ್ಡ.

Car against sunset

ಎಲ್ಲೆಡೆ ಈಗ ಬಿಸಿಲು. ಬೇಸಿಗೆ ಬಂತೆಂದರೆ ಸಾಕು ಮಂದಿಗಶ್ಟೇ ಅಲ್ಲ ನಮ್ಮ ವಸ್ತುಗಳಿಗೆ ಕೆಡುಕಾಗುವುದು ನೋಡಿದ್ದೇವೆ. ಬಿಸಿಲಲ್ಲಿ ಹಾಲನ್ನು ಕಾಯಿಸಿದೇ ಹೆಚ್ಚು ಹೊತ್ತು ಇಡುವಂತಿಲ್ಲ ಏಕೆಂದರೆ ಹಾಲು ಒಡೆದು ಹೋಗುತ್ತದೆ. ಅದರಂತೆ ನಾವು ಸಾಕಶ್ಟು ವಸ್ತುಗಳನ್ನು ಬಿಸಿಲ ಬೇಗೆಯಿಂದ ಕಾಪಾಡಬೇಕಾಗಿದೆ. ನಮ್ಮ ಬಂಡಿಯೂ ಬಿಸಿಲಿನ ದಗೆಯಿಂದ ಕಾಪಾಡಬೇಕಾಗಿರುವ ವಸ್ತುಗಳಲ್ಲೊಂದು. ಈ ಬಿರು ಬಿಸಿಲಿನಿಂದ ಬಂಡಿಯನ್ನು ಹೇಗೆ ಕಾಪಾಡಿ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು ಎಂಬುದರ ಬಗ್ಗೆ ಕೆಲವು ತಿಳಿಹೇಳುಗಳು ನಿಮ್ಮ ಮುಂದಿಡುತ್ತಿದ್ದೇನೆ.

1. ಬಂಡಿಯ ಗಾಲಿ (Tyre):

ಬಂಡಿಯ ಗಾಲಿ ಅಂದರೆ ರಬ್ಬರ್‌ನ ಟಾಯರುಗಳು ಬಿಸಿಲಿಗೆ ಬೇಗನೆ ತಮ್ಮ ಗುಣ ಕಳೆದುಕೊಳ್ಳುವ ಸಾದ್ಯತೆ ಹೆಚ್ಚು. ಬಿಸಿಲಿಗೆ ಹಿಗ್ಗುವುದು ಮತ್ತು ತಂಪಿನಲ್ಲಿ ಕುಗ್ಗಿಕೊಳ್ಳುವುದು ರಬ್ಬರ್‌ನ ಸಹಜ ಗುಣ. ಹೀಗಾಗಿ ಟಾಯರ್‌ಗಳನ್ನು ಚೆನ್ನಾಗಿ ಇರುವಂತೆ ನೋಡಿಕೊಳ್ಳಬೇಕು. ಬಂಡಿಯನ್ನು ಸರಿಯಾಗಿ ಹೊತ್ತೊಯ್ಯಲು ಟಾಯರುಗಳಲ್ಲಿ ತಕ್ಕಮಟ್ಟದ ಗಾಳಿ ತುಂಬಿಸಿ ಒತ್ತಡ ಕಾದುಕೊಳ್ಳಬೇಕು. ಕಡಿಮೆ ಒತ್ತಡವಿದ್ದರೆ ಗಾಲಿಗಳ ಬದಿಯ ರಬ್ಬರ್ ಹೆಚ್ಚು ಬಿಸಿಯಾಗುತ್ತ ಹಿಗ್ಗ ತೊಡಗುತ್ತವೆ ಹಿಗ್ಗುತ್ತಾ ಒಡೆದು ಹೋಗಬಹುದು. ತಗ್ಗು ದಿನ್ನೆಯ ದಾರಿಯಲ್ಲಿ ಸಾಗುವಾಗ ರಬ್ಬರ್ ಬಿಸುಪಿಗೆ ಒಳಗಾಗುವುದು ಇನ್ನೂ ಹೆಚ್ಚುತ್ತದೆ. ಬಂಡಿ ಅಂದವಾಗಿರಿಸಲು ನಮ್ಮಲ್ಲಿ ಹಲವರು ಸಾಕಶ್ಟು ಹಣ ಸುರಿಯುತ್ತಾರೆ ಆದರೆ ಮುಂಬದಿಯ ಮತ್ತು ಹಿಂಬದಿಯ ಗಾಲಿಗಳಲ್ಲಿ ಎಶ್ಟು ಗಾಳಿ ತುಂಬಿಸಬೇಕು ಎಂಬುದರ ಅರಿವು ಕೂಡ ಇರುವುದಿಲ್ಲ. ಇದನ್ನು ತಿಳಿದುಕೊಂಡಿರುವುದು ಒಳ್ಳೆಯದು. ಆಗಾಗ ಗಾಲಿಗಳಲ್ಲಿ ಗಾಳಿಯ ಒತ್ತಡದ ಮಟ್ಟ ಒರೆದು ನೋಡಿ (check) ಸರಿಯಾಗಿ ತುಂಬಿಸಿಕೊಳ್ಳಬೇಕು.

ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಇನ್ನೊಂದು ಸಂಗತಿಯೆಂದರೆ ಹೊರಗಿನ ಬಿಸುಪಿಗೆ ತಕ್ಕಂತೆ ಗಾಲಿಗಳ ಒಳಗೆ ತುಂಬಿರುವ ಗಾಳಿಯ ಒತ್ತಡದ ಮಟ್ಟ ಕುಸಿಯುತ್ತದೆ. ಪ್ರತಿ 10 ಡಿಗ್ರಿ ಬಿಸುಪು ಹೆಚ್ಚಿದಂತೆ ಗಾಳಿಯ ಒತ್ತಡ 1 ಪಿಎಸ್ಆಯ್ ಕಡಿಮೆಯಾಗುತ್ತದಂತೆ. ಹಾಗಾಗಿ ಬೆಳಗಿನ ಹೊತ್ತಿನಲ್ಲಿ ಗಾಲಿಗಳ ಗಾಳಿಯೊತ್ತಡ ಮಟ್ಟ ಒರೆದು ನೋಡುವುದು ಒಳ್ಳೆಯದು.

ಬಂಡಿ ಸಾಗುವಾಗ ಅದರ ತುಂಬ ಮಂದಿಯಿದ್ದು ಹಾಗು ಸರಕುಚಾಚು (Boot space) ಕೂಡ ಸರಕು ಚೀಲಗಳಿಂದ ತುಂಬಿದ್ದರೆ ಹೆಚ್ಚು ಗಾಳಿಯ ಒತ್ತಡ ಬೇಕಾಗಬಹುದು. ಬೀದಿಗಳ ಅವಸ್ತೆ ಮತ್ತು ಬಂಡಿಯ ಮೇಲೆ ಬೀಳುವ ಹೊರೆಗೆ ತಕ್ಕಂತೆ ಗಾಳಿಯ ಒತ್ತಡದ ಮಟ್ಟವನ್ನು ಕಾದುಕೊಂಡು ಸಾಗುವುದರಿಂದ ನಿಮ್ಮ ಬಂಡಿಯ ಗಾಲಿಗಳಿಗೆ ಯಾವುದೇ ತೊಂದರೆ ಇರುವುದಿಲ್ಲ.

2. ಗಾಳಿ ಪಾಡುಕದ ಏರ‍್ಪಾಟು (Air Conditioning System):

ಬಿಸಿಲಿನಲ್ಲಿ ಸಾಗುವಾಗ ಗಾಳಿ ಪಾಡುಕದ ಏರ‍್ಪಾಟನ್ನು ಹೆಚ್ಚಾಗಿ ಬಳಸುತ್ತೇವೆ. ಇದರಿಂದ ಕುಳಿರುಪೆಟ್ಟಿಗೆ ಏರ‍್ಪಾಟಿನ (air conditioning system) ಮೇಲೆ ಹೆಚ್ಚಿನ ಹೊರೆಯಾಗುತ್ತದೆ. ಇದನ್ನು ಸರಿಯಾಗಿರುವಂತೆ ನೋಡಿಕೊಳ್ಳಲೇಬೇಕು. ಗಾಳಿ ಪಾಡುಕದ ಏರ‍್ಪಾಟಿನಲ್ಲಿ ಒಂದು ಒತ್ತುಕವಿರುತ್ತದೆ (compressor), ಒತ್ತುಕದ ಕೀಲೆಣ್ಣೆ ಮತ್ತು ಇದರಲ್ಲಿ ಹರಿದಾಡುವ ತಂಪಿ (Coolant) ಇವುಗಳು ಸರಿಯಾದ ಮಟ್ಟದಲ್ಲಿವೆಯೇ? ಇದರಲ್ಲಿ ಕಸ ಕಡ್ದಿ ತುಂಬಿಕೊಂಡಿದೆಯೇ? ಎಂಬುದನ್ನು ಹತ್ತಿರದ ನೆರವುದಾಣಗಳಲ್ಲೋ (Service Centre) ಇಲ್ಲವೇ ಕಾರು ಮಳಿಗೆಗಳಲ್ಲೋ ಹೋಗಿ ಸರಿ ನೋಡಿಸಿಕೊಳ್ಳಿ.

ಬೇಸಿಗೆಯಲ್ಲಿ ಹಲವರು ಗಾಳಿ ಪಾಡುಕದ ಏರ‍್ಪಾಟು ಬೇಗನೆ ತಮ್ಮ ಬಂಡಿಯನ್ನು ತಂಪುಗೊಳಿಸುವುದಿಲ್ಲ , ಗಾಳಿಪಾಡುಕ ಸರಿಯಾಗಿ ಕೆಲಸಮಾಡುತಿಲ್ಲ ಎಂಬುದಾಗಿ ದೂರುವುದನ್ನು ಕೇಳಿರಬಹುದು. ನಿಮ್ಮ ಬಂಡಿಯಲ್ಲಿ ಎಶ್ಟೇ ಕಸುವಿನ ಗಾಳಿ ಪಾಡುಕದೇರ‍್ಪಾಟು ನೀಡಿದ್ದರೂ ಅದು ಬೇಗನೆ ತಂಪುಗೊಳಿಸದು. ಇದಕ್ಕೆ ಕಾರಣವೆಂದರೆ ಬಿಸಿಲಿಗೆ ನಮ್ಮ ಬಂಡಿಗಳು ಬಲು ಬೇಗನೆ ಬಿಸಿಯಾಗಿ ಕಾರೊಳಗಿನ ಬಾಗವನ್ನೂ ಬಿಸಿ ಮಾಡುತ್ತವೆ. ಇನ್ನೂ ಬಿಸಿಲಿನಲ್ಲಿ  ನೇಸರನ ಕಿರಣಗಳಿಗೆ ಮಯ್ಯೊಡ್ಡಿ ಬಂಡಿಯನ್ನು ನಿಲ್ಲಿಸಿದ್ದರಂತೂ ಇದರ ಪರಿಣಾಮ ಏರಿಕೆಗೊಳ್ಳುತ್ತದೆ.  ಇದರಿಂದ ಹೊರಬರಲು ಸುಲಬದ ದಾರಿಯೆಂದರೆ ಬಂಡಿಯೇರಿದ ತಕ್ಶಣ ಕಿಟಕಿಯ ಗಾಜುಗಳನ್ನು ಕೆಳಗಿಳಿಸಿ ಆಗ ಬಂಡಿಯಲ್ಲಿ ತುಂಬಿರುವ ಬಿಸಿಲಿನ ಜಳ ಹೊರಗೆ ಹೋಗಿ ಗಾಳಿಯಾಡುತ್ತದೆ. ಬಿಸಿಲ ಜಳ ತಕ್ಕ ಮಟ್ಟಿಗೆ ಕಡಿಮೆಯಾಗಿ ಹೊರಗಿನ ಬಿಸುಪು ಮತ್ತು ಬಂಡಿಯೊಳಗಿನ ಬಿಸುಪು ಸರಿಸಮವೆನ್ನಿಸತೊಡಗಿದಾಗ ಗಾಜುಗಳನ್ನು ಮೇಲೆರಿಸಿ ಗಾಳಿ ಪಾಡುಕದ ಏರ‍್ಪಾಟಿನ ಗುಂಡಿ ತಿರುಗಿಸಿಕೊಂಡರೆ ಬಂಡಿಯ ಒಳಬಾಗ ಅಂದರೆ ಕೆಬಿನ್ ಕಡಿಮೆ ಹೊತ್ತಿನಲ್ಲಿ ತಂಪಾಗಿ ನಿಮ್ಮ ಪಯಣವನ್ನು ಹಿತಗೊಳಿಸುತ್ತದೆ. ಬಂಡಿಯನ್ನು ಬಹಳ ಹೊತ್ತು ಬಿಸಿಲಿನಲ್ಲೇ ನಿಲ್ಲಿಸಬೇಕಾಗಿ ಬಂದಾಗ ಕಿಟಕಿಯ ಗಾಜನ್ನು ಅರ‍್ದ ಇಂಚಿನಶ್ಟು ಕೆಳಗಿಳಿಸಿ ನಿಲ್ಲಿಸಿದರೆ ಒಳಬಾಗ ಹೆಚ್ಚು ಬಿಸಿಯಾಗುವುದನ್ನು ತಡೆಯಬಹುದು.

3. ಹೊರಸೂಸುಕ ಮತ್ತು ಅದರ ಹರಿಕ (Radiator and its fluid):

ಬೇಸಿಗೆಯಲ್ಲಿ ಹೆಚ್ಚಿನ ಕಾರುಗಳಲ್ಲಿ ಬಿಣಿಗೆ ಬಹಳ ಬಿಸಿಯಾಗಿ ಮುರಿಬೀಳುತ್ತವೆ (Break down). ಬಿಣಿಗೆಯಲ್ಲಿ ಬಳಸಲ್ಪಡುವ ತಂಪಿಯು ಸರಿಯಾದ ಅಳತೆಯಲ್ಲಿ ಇದಲ್ಲೇ ಹೋದಾಗ ಈ ರೀತಿಯಾಗುವುದು ಸಹಜ. ಆಗಾಗ ಬಿಣಿಗೆಯ ತಂಪಿಯು ಸರಿಯಾಗಿ ಸರಿಯಾದ ಅಳತೆಯಲ್ಲಿದೆಯೇ ಎಂದು ಸರಿನೋಡಿಸುವ ಅಗತ್ಯವೂ ಇರುತ್ತದೆ. ನಿಮ್ಮ ಬಂಡಿ 3-4 ವರುಶ ಹಳೆಯದಾಗಿದ್ದರಂತೂ ಹೊರಸೂಸುಕದ ಅಳವುತನ ಕಡಿಮೆಯಾಗಿ ತಂಪಿಯು ಸರಿಯಾಗಿ ಬಿಣಿಗೆಯ ಎಲ್ಲ ಬಾಗಗಳಿಗೆ ತಲುಪದೇ ಇಂತ ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಹೊರಸೂಸುಕ ಚೆನ್ನಾಗಿ ಕೆಲಸ ಮಾಡುತ್ತಿದೆಯೇ? ಎಂಬುದನ್ನು ನೆರವುತಾಣದಲ್ಲಿ ಒರೆದು ನೋಡಿಸಿಕೊಳ್ಳಿ. ಕೆಲವೊಮ್ಮೆ ಅಗ್ಗದ ಬೆಲೆಯ ತಂಪಿಗಳನ್ನು ಬಳಸುವುದರಿಂದಲೂ ಹೀಗಾಗುತ್ತದೆ. ನೆರವು ತಾಣಗಳಿಗೆ ಬಂಡಿಗಳನ್ನು ತೆಗೆದುಕೊಂಡು ಹೋದಾಗ ಸರಿಯಾದ ತಂಪಿಗಳನ್ನು ಬಳಸುವಂತೆ ನೆರವುಗಾರರಿಗೆ ಎಚ್ಚರಿಕೆ ನೀಡಬೇಕು.

4.ಕೀಲೆಣ್ಣೆ:

ಬಿಸಿಲಿನಲ್ಲಿ ಬಂಡಿ ಓಡಿಸುವಾಗ ಕೀಲೆಣ್ಣೆಯು ಬಲು ಬೇಗನೆ ಬಿಸಿಯಾಗಿ ಬಿಣಿಗೆ ಮುರಿಬೀಳುವುದು (Break Down) ಕಂಡಿತ. ಆದ್ದರಿಂದ ಬೇಸಿಗೆಕಾಲ ಶುರುವಾಗುತ್ತಿದ್ದಂತೆ ಒಂದೊಮ್ಮೆ ಬಂಡಿಯ ಬಿಣಿಗೆ (Engine), ಸಾಗಣಿ (Transmission) ಮತ್ತು ತಡೆತದ ಏರ‍್ಪಾಟಿನ (Brake System) ಎಲ್ಲ ಕೀಲೆಣ್ಣೆಗಳನ್ನು ಬದಲಾಯಿಸಿಕೊಂಡರೆ ಒಳ್ಳೆಯದು. ಇದು ಬಂಡಿಯ ಎಲ್ಲ ಬಿಡಿಬಾಗಗಳ ಸವೆತ ತಪ್ಪಿಸಿ ಬಿರು ಬಿಸಿಲಿನಲ್ಲೂ ಬಿಡಿಬಾಗಗಳ ತಾಳಿಕೆ-ಬಾಳಿಕೆಯನ್ನು ಹೆಚ್ಚಿಸುವುದು.

5.ಕೊಳವೆಗಳು ಮತ್ತು ಬಿಣಿಗೆಯ ಪಟ್ಟಿಗಳು (Hoses and Engine belts):

ಬಿಣಿಗೆಯ ಬಿಸುಪಿನಿಂದ ಬಂಡಿಯಲ್ಲಿ ತಂಪಿ (Coolant) ಮತ್ತು ಕೀಲೆಣ್ಣೆ (engine oil) ಸಾಗಿಸಲು ಬಳಸುವ ಕೊಳವೆಗಳು ಕೂಡ ಹಿಗ್ಗಿಕೊಳ್ಳುವುದುಂಟು. ಇದು ಮುಂದೆ ಸೋರಿಕೆಗೆ ಕಾರಣವಾಗಬಹುದು. ಬಂಡಿಯಲ್ಲಿ ಬಳಸುವ ಹೆಚ್ಚಿನ ಕೊಳವೆಗಳು ರಬ್ಬರ್‌ನಿಂದ ಮಾಡಲ್ಪಟ್ಟಿರುತ್ತವೆ ಹೀಗಾಗಿ ಇವುಗಳು ಸುಲಬವಾಗಿ ಹಿಗ್ಗಿ ಸೋರಿಕೆಯಾಗುವಂತಿರುತ್ತವೆ.

ಇದೇ ತೆರನಾಗಿ ರಬ್ಬರ್‌ನಿಂದಾದ ಬಿಣಿಗೆಯ ನೆರವಿ ಪಟ್ಟಿ (Accessory belt) ಮತ್ತು ಹೊತ್ತು/ತೆರೆ ಪಟ್ಟಿ (Timing Belt) ಕೂಡ ಬಿಸುಪಿನಿಂದ ಕೆಡುಕುಂಟು ಮಾಡುತ್ತವೆ. ಈ ಎರಡು ಪಟ್ಟಿಗಳಿಗೆ ಪಟ್ಟಿ ಬಿಗಿಯುಕಗಳನ್ನು (Tensioner) ನೀಡಲಾಗಿರುತ್ತದೆ. ಬಿಗಿಯುಕ ಮತ್ತು ಪಟ್ಟಿಗಳು ಯಾವಾಗಲೂ ಒಂದಕ್ಕೊಂದು ತಿಕ್ಕಾಟದಿಂದ ಕೂಡಿರುತ್ತವೆ. ಈ ತಿಕ್ಕಾಟದಿಂದ ಬಿಸುಪು ಹೆಚ್ಚುವುದು ಸಾಮಾನ್ಯ. ಇನ್ನೂ ಬೇಸಿಗೆಕಾಲದಲ್ಲಿ ಬಿಣಿಗೆಯ ಪಟ್ಟಿ ಮತ್ತು ಬಿಗಿಯುಕಗಳು ಕಾಯುವುದಲ್ಲದೇ ತಿಕ್ಕಾಟದ ಬಿಸುಪು ಇದನ್ನು ಇಮ್ಮಡಿಗೊಳಿಸಿ ಈ ಎರಡು ಬಾಗಗಳ ಸವೆತಕ್ಕೆ ಕಾರಣವಾಗುವ ಸಾದ್ಯತೆ ಇರುತ್ತದೆ. ಇವುಗಳನ್ನು ಒಂದೊಮ್ಮೆ ಸರಿಯಾಗಿರುವಂತೆ ನೋಡಿಕೊಳ್ಳಬೇಕು.

6.ಮಿಂಗೂಡು (Battery):

ಅತಿಯಾದ ಬಿಸಿಲು ಮಿಂಗೂಡಿಗೂ ತಕ್ಕುದಲ್ಲ. ಮಿಂಗೂಡಿನ ಒಳಗಿರುವ ಹರಿಕ(fluid) ಬಲು ಬೇಗ ಆವಿಗೊಂಡು ಇದರ ಬಾಳಿಕೆಯನ್ನು ತಗ್ಗಿಸುತ್ತವೆ. ಇನ್ನೊಂದೆಡೆ ಹೆಚ್ಚಿನ ಬಿಸುಪಿನಿಂದ ಮಿಂಗೂಡಿನ ಒಳಗಡೆ ಎಸಕಗಳು ಚುರುಕುಗೊಂಡು ಮಿಂಗೂಡು ಅತಿಯಾಗಿ ತುಂಬಿಕೆಯಾಗುವಂತೆ (over charging) ಮಾಡುತ್ತವೆ. ಬಂಡಿಯ ಮಿಂಗೂಡು ಸರಿಯಾಗಿ ತುಂಬಿಕೆಯಾಗುತ್ತಿದೆಯೇ, ಬ್ಯಾಟರಿಯ ತುದಿಗಳು ತುಕ್ಕು ಹಿಡಿದಿವೆಯೇ, ಎಲ್ಲಾದರೂ ಕಸ ಕಡ್ಡಿ ಸಿಕ್ಕಿಕೊಂಡಿದೆಯೇ ಎಂಬುದರ ಮೇಲೆ ಕಣ್ಣಿಟ್ಟಿರಬೇಕು. ಕೆಲವು ಮಿಂಗೂಡುಗಳಲ್ಲಿ ಉಳುಪಿಳಿಕೆಯ (Distilled) ನೀರನ್ನು ಬಳಸುತ್ತಾರೆ ಈ ನೀರಿನ ಮಟ್ಟವನ್ನು ಆಗಾಗ ಗಮನಿಸಿ ಹೆಚ್ಚು ಕಡಿಮೆ ಆಗದಂತೆ ಎಚ್ಚರವಹಿಸಬೇಕು.

7.ಬಣ್ಣ ಮತ್ತು ಹಾಸು (Paint and Coat):

ಬಂಡಿಯ ಬಣ್ಣ ಮತ್ತು ಹಾಸುಗಳ ಮೇಲೂ ಕೂಡ ಬಿಸಿಲಿನ ಪ್ರಬಾವ ಬೀರುತ್ತದೆ. ಹೆಚ್ಚಿನ ಬಿಸಿಲಿನಿಂದ ಬಂಡಿಯ ಹಾಸು ಮತ್ತು ಬಣ್ಣಗಳೆರಡೂ ಮಂದವಾಗಿ ಬಿಡುತ್ತವೆ. ನಿಮ್ಮ ಬಂಡಿಯ ಅಂದ ಹಾಗೂ ಹೊಳಪನ್ನು ಎಂದಿನಂತೆ ಕಾಪಾಡಿಕೊಂಡು ಹೋಗಲು ಒಂದು ಹಾಸನ್ನು ಬಳಿದರೆ ಚೆಂದ. ಇದು ನೇಸರನ ಬಿಸಿ ಕಿರಣಗಳಿಗೆ ಮಯ್ಯೊಡ್ಡಿದ ಪದರವಾಗಿ ಬಣ್ಣ ಮತ್ತು ಹೊಳಪನ್ನು ಉಳಿಸುವಲ್ಲಿ ನೆರವಾಗುವುದು.

(ಮಾಹಿತಿ ಮತ್ತು ತಿಟ್ಟ ಸೆಲೆ: autocarindia.com , wanaka-auto.co.nz )

 Categories: ಅರಿಮೆ

ಟ್ಯಾಗ್ ಗಳು:, , , , , , , , , , , , , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s