ಬೆಕ್ಕು ಮತ್ತು ನೆಗಡಿ – ಮಕ್ಕಳ ಕವಿತೆ
ಕಾಮಿ ಬೆಕ್ಕಿಗೆ ನೆಗಡಿ ಬಂದು
ಪಜೀತಿಗಿಟ್ಟಿತ್ತು
ಬಿಟ್ಟು ಬಿಡದೆ ಸಿಂಬಳ ಸೋರಿ
ಕಿರಿಕಿರಿಯಾಗಿತ್ತು
ಗಳಿಗೆಗಳಿಗೆಗೆ ಆಕ್ಶಿ ಆಕ್ಶಿ
ಸೀನು ಸಿಡಿತಿತ್ತು
ತಿಕ್ಕಿ ತಿಕ್ಕಿ ಮೂಗಿನ ತುದಿಯು
ಕೆಂಪಗಾಗಿತ್ತು
ಪುಟ್ಟಿ ಜೊತೆಯಲಿ ತಂಪು ತಂಪು
ಐಸ್ಕ್ರೀಂ ತಿಂದಿತ್ತು
ಬೇಡವೆಂದರು ಕೇಳದೆ ನೀರಲಿ
ಆಟವಾಡಿತ್ತು
ಅಮ್ಮ ಕೊಟ್ಟ ಬಿಸಿಬಿಸಿ ಶುಂಟಿ
ಕಶಾಯ ಕುಡಿದಿತ್ತು
ಸಿಪ್ಪೆ ಸುಲಿದ ಬಳ್ಳೊಳ್ಳಿ ಸರವ
ಕೊರಳಲಿ ಹಾಕಿತ್ತು
ಡಾಕ್ಟರ ಕೊಟ್ಟ ಗುಳಿಗೆ ಮಾತ್ರೆ
ಒಲ್ಲೊಲ್ಲೆ ಎನುತಿತ್ತು
ಸೂಜಿ ಮದ್ದು ಬೇಡವೆನ್ನುತ
ಹಟವ ಹಿಡಿದಿತ್ತು
ವಾರಪೂರ‍್ತಿ ಬೆಚ್ಚನೆಯ ಕಂಬಳಿ
ಹೊದ್ದು ಮಲಗಿತ್ತು
ಎಂಟನೆ ದಿನಕೆ ಇಲಿಯ ಕಂಡು
ಚಂಗನೆ ನೆಗೆದಿತ್ತು
(ಚಿತ್ರ ಸೆಲೆ: smartlivingnetwork.com )
ಚನ್ನಾಗಿದೆ