ನಾಟಕ: ಅಂಬೆ ( ಕೊನೆಯ ಕಂತು )

 ಸಿ.ಪಿ.ನಾಗರಾಜ.

Bhishma-and-Parshurama

ಅಂಕ-1 ಅಂಕ-2 ಅಂಕ-3

ನೋಟ – 1

[ಗಾಂಗೇಯರ ಅರಮನೆಯ ಮೆಟ್ಟಿಲುಗಳ ಬಳಿಗೆ ಸಾರತಿ ವೀರಸೇನ ಬರುತ್ತಾನೆ. ಗಾಂಗೇಯರ ಪರಿಚಾರಕಲ್ಲಿ ಬೊಮ್ಮ ಎಂಬುವನು ಅರಮನೆಯ ಒಳಗಡೆಯಿಂದ ಹೊರಕ್ಕೆ ಬರುತ್ತಾನೆ.]

ಬೊಮ್ಮ—ಏನಣ್ಣ, ಇಶ್ಟು ಬೇಗ ರತವನ್ನು ಸಿದ್ದಪಡಿಸಿದೆಯಾ?

ವೀರಸೇನ—ಹೊತ್ತು ಹುಟ್ಟುವ ವೇಳೆಗೆ ರತವು ಸಿದ್ದವಾಗಿರಲೆಂದು ನೆನ್ನೆ ಒಡೆಯರು ಅಪ್ಪಣೆ ಮಾಡಿದ್ದರು.

ಬೊಮ್ಮ—ಹಾಗೇನು! ಒಡೆಯರು ಇನ್ನೂ ಪೂಜಾಮಂದಿರದಿಂದ ಹೊರಬಂದಿಲ್ಲ. ಹೊರಡಲು ಇನ್ನೂ ತಡವಾಗಬಹುದು. ಬಾರಣ್ಣ ಒಂದು ಗಳಿಗೆ ಇಲ್ಲೇ ಕುಂತ್ಕೋಳೋಣ.

(ವೀರಸೇನ ಮತ್ತು ಬೊಮ್ಮ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುತ್ತಾರೆ.)

ಬೊಮ್ಮ—(ರಹಸ್ಯವಾದ ಸಂಗತಿಯೊಂದನ್ನು ಹೇಳುವ ಉದ್ದೇಶದಿಂದ) ಪರಶುರಾಮರು ಇಶ್ಟೊಂದು ತುರ‍್ತಾಗಿ ಕರೆಸಿಕೊಳ್ಳುತ್ತಿರುವುದನ್ನು ನೋಡಿದರೆ, ಆ ಹೆಣ್ಣುಗಳದೇ ಕಯ್‍ವಾಡವಿರಬೇಕು ಎನ್ನಿಸುತ್ತದೆ.

ವೀರಸೇನ—ಅದರಲ್ಲಿ ಅನುಮಾನವೇನು ಬಂತು. ಹಸ್ತಿನಾಪುರದಲ್ಲೆಲ್ಲಾ ಹಬ್ಬಿರುವ ಸುದ್ದಿಯನ್ನು ಕಿವಿಯಲ್ಲಿ ಗುಟ್ಟಾಗಿ ಹೇಳುತ್ತಿದ್ದೀಯಲ್ಲ.

ಬೊಮ್ಮ—ನಮ್ಮ ಒಡೆಯರಿಗೆ ಒಳ್ಳೇ ದರ‍್ಮಸಂಕಟವೇ ಬಂದಂತಾಯಿತಲ್ಲವೆ?

ವೀರಸೇನ—ಒಡೆಯರಿಗೆ ಗುರುವಿನ ಬಗ್ಗೆ ಬಹು ಪೂಜ್ಯ ಬಾವನೆಯಿದೆ, ಏನಾಗುವುದೋ ನೋಡಬೇಕು.

ಬೊಮ್ಮ—ಗುರುಗಳ ಮಾತಿಗೆ ಕಟ್ಟುಬಿದ್ದು ಒಂದು ವೇಳೆ ಮದುವೆಯಾಗಿ ಬಿಟ್ಟರೆ!

ವೀರಸೇನ—ನಮ್ಮ ಒಡೆಯರು ಬಡಪಟ್ಟಿಗೆ ಒಪ್ಪುವಂತವರಲ್ಲ!

ಬೊಮ್ಮ—ಪರಶುರಾಮರು ಅದೆಶ್ಟೋ ಬಾರಿ ರಾಜರ ಕುಲವನ್ನೇ ದ್ವಂಸ ಮಾಡಿದ್ದಾರಂತೆ! ನಿಜವೇನಣ್ಣ.

ವೀರಸೇನ—ನಿಜ ಕಣಪ್ಪ. ಇಪ್ಪತ್ತೊಂದು ಬಾರಿ ರಾಜರ ಕುಲವನ್ನೇ ನಡುಗಿಸಿದ್ದಾರೆ.

ಬೊಮ್ಮ—ಅಂದ ಮೇಲೆ ಅಂತವರ ಮುಂದೆ ನಮ್ಮೊಡೆಯರ ಗತಿ ಏನಾಗುವುದೋ?

ವೀರಸೇನ—ನಮ್ಮೊಡೆಯರನ್ನು ಏನೆಂದು ತಿಳಿದಿರುವೆ?

ಬೊಮ್ಮ—ಹಾಗಲ್ಲ. ನಮ್ಮ ಒಡೆಯರು ಅವರ ಮಾತಿಗೆ ಒಪ್ಪದಿದ್ದು, ಆಗ ಅವರು “ಇವನೂ ಕ್ಶತ್ರಿಯನಲ್ಲವೇ” ಎಂದು ಮೊದಲಿನಂತೆ ಕೋಪಿಶ್ಟರಾಗಿ ಒಡೆಯರ ಮೇಲೆ ಎರಗಿದರೆ!

ವೀರಸೇನ—(ಮುಗುಳ್ನಗುತ್ತಾ) ನಿನ್ನಂತೆ ಹೇಡಿಗಳೆಂದು ತಿಳಿದಿದ್ದೀಯಾ ನಮ್ಮ ಒಡೆಯರನ್ನು? ನ್ಯಾಯಕ್ಕೆ ತಲೆಬಾಗುವರೆ ಹೊರತು, ಪರಾಕ್ರಮಕ್ಕೆ ಜಗ್ಗುವರಲ್ಲ.

ಬೊಮ್ಮ—ಗುರುವೇ ತಿರುಗಿಬಿದ್ದಾಗ!

ವೀರಸೇನ—ಅವರನ್ನೂ ಎದುರಿಸುತ್ತಾರೆ.

ಬೊಮ್ಮ—ಅದು ಆಗುತ್ತದೆಯೇನಣ್ಣ?

(ಅಶ್ಟರಲ್ಲಿ ಒಳಗಡೆಯಿಂದ ಸೇವಕನೊಬ್ಬನು ಬೊಮ್ಮನನ್ನು ಅರಸುತ್ತಾ ಬಂದು)

ಸೇವಕ—ಬೊಮ್ಮ…ಬೊಮ್ಮ…ಕಾಡು ಹರಟೆ ಹೊಡೆಯುತ್ತಾ ಕುಳಿತಿದ್ದೀಯಾ? ಬೇಗ ಬಾ , ಒಡೆಯರು ಕರೆಯುತ್ತಿದ್ದಾರೆ.

ಬೊಮ್ಮ—(ಬಹಳ ಗಾಬರಿಯಿಂದ) ಬಂದೆ…ಬಂದೆ…ಇದೋ ಬಂದೆ.

(ಎಂದು ಬಡಬಡಿಸುತ್ತಾ ಆತುರಾತುರವಾಗಿ ಒಳಕ್ಕೆ ಓಡುತ್ತಾನೆ. ಅವನು ಓಡುವ ರೀತಿಯನ್ನು ಕಂಡು ವೀರಸೇನನು ನಗುತ್ತ, ರತದ ಬಳಿಗೆ ತೆರಳುತ್ತಾನೆ.)

ನೋಟ – 2

[ ನದಿತೀರದಲ್ಲಿನ ಆಶ್ರಮ. ಪಕ್ಕದಲ್ಲಿನ ಪರ‍್ವತಶ್ರೇಣಿಯು ಆಶ್ರಮದ ಪ್ರಶಾಂತ ವಾತಾವರಣಕ್ಕೆ ಮನಮೋಹಕವಾದ ಹಿನ್ನೆಲೆಯನ್ನು ಕಲ್ಪಿಸಿದೆ. ನಾನಾ ಬಗೆಯ ಬಣ್ಣಬಣ್ಣದ ಹೂವುಗಳ ಕಂಪು ಎಲ್ಲೆಡೆಯಲ್ಲೂ ಹಬ್ಬಿದೆ. ಜಿಂಕೆ, ಮೊಲ ಮುಂತಾದ ಪ್ರಾಣಿಗಳು ಅತ್ತಿತ್ತ ನೆಗೆದಾಡುತ್ತಿವೆ. ಅರಳಿಕಟ್ಟೆಯ ಗದ್ದುಗೆಯೊಂದರ ಮೇಲೆ ಪರಶುರಾಮರು ಕುಳಿತಿದ್ದಾರೆ. ಅವರ ಎಡಗಡೆಯ ಕಟ್ಟೆಯ ಕೆಳಗೆ ಅಂಬೆ ಮತ್ತು ಮಾಲಿನಿಯರು ತಲೆಬಾಗಿಸಿ ಕುಳಿತಿದ್ದಾರೆ. ಅಶ್ಟರಲ್ಲಿ ಒಬ್ಬ ಶಿಶ್ಯನು ಗುರುಗಳಿಗೆ ಬಳಿಗೆ ಬಂದು ನಮಿಸಿ]

ಶಿಶ್ಯ—ಇದೀಗ ತಾನೆ ಹಸ್ತಿನಾಪುರದಿಂದ ಬಂದಿರುವ ಗಾಂಗೇಯರು ತಮ್ಮ ಅಪ್ಪಣೆಗಾಗಿ ಕಾಯುತ್ತಿದ್ದಾರೆ, ಗುರುವರ‍್ಯ.

ಪರಶುರಾಮ—ಅವರನ್ನು ಆಶ್ರಮದ ಮರ‍್ಯಾದೆಗನುಗುಣವಾಗಿ ಬರಮಾಡಿಕೊಂಡು ಕರೆ ತನ್ನಿ.

ಶಿಶ್ಯ—ಆಗಲಿ ಪೂಜ್ಯರೆ.

[ನಮಿಸಿ ತೆರಳುತ್ತಾನೆ. ಗಾಂಗೇಯರ ಬರುವಿಕೆಯನ್ನು ತಿಳಿದ ಪರಶುರಾಮರು ಅಂಬೆ ಮತ್ತು ಮಾಲಿನಿಯರಿಗೆ ಎಲೆವನೆಯೊಳಕ್ಕೆ ಹೋಗಲು ಸೂಚಿಸುತ್ತಾರೆ. ಅವರಿಬ್ಬರು ಪಕ್ಕದಲ್ಲಿದ್ದ ಎಲೆವನೆಯೊಳಕ್ಕೆ ಹೋಗುತ್ತಾರೆ. ಪರಶುರಾಮರು ತಮ್ಮ ಪಾಡಿಗೆ ತಾವು ಮತ್ತೆ ಆಲೋಚನಾಮಗ್ನರಾಗುತ್ತಾರೆ. ಗಾಂಗೇಯರು ಬರುತ್ತಾರೆ.]

ಗಾಂಗೇಯ—ಪೂಜ್ಯರಿಗೆ ನಮಸ್ಕಾರ.

[ಅಡ್ಡಬಿದ್ದು ಮೇಲೇಳುತ್ತಾನೆ.]

ಪರಶುರಾಮ—ಇತ್ತ ಬಾ ಗಾಂಗೇಯ. ಚೆನ್ನಾಗಿರುವೆಯಾ?

ಗಾಂಗೇಯ—ತಮ್ಮ ಆಶೀರ‍್ವಾದಬಲದಿಂದ ಚೆನ್ನಾಗಿದ್ದೇನೆ.

ಪರಶುರಾಮ—ರಾಜಕಾರಣದಲ್ಲಿ ಎಲ್ಲವೂ ಸುಗಮವಾಗಿರುವುದೇ?

ಗಾಂಗೇಯ—ತಮಗೆ ತಿಳಿಯದೆ ಇರುವುದು ಯಾವುದು ಗುರುದೇವ? ರಾಜಕಾರಣದಲ್ಲಿ ಸುಗಮವನ್ನು ಅರಸುವುದು ಬಿಸಿಲ್ಗುದುರೆಯನ್ನು ಏರಿ ಸವಾರಿ ಮಾಡಿದಂತೆ!.

ಪರಶುರಾಮ—ಶಂತನು ಅಳಿದ ಮೇಲೆ ರಾಜ್ಯದ ಹೊಣೆಯೆಲ್ಲ ನಿನ್ನ ಮೇಲೆ ಬಿದ್ದಿದೆಯೆಂದು ಕೇಳಿ ತಿಳಿದಿದ್ದೇನೆ.

ಗಾಂಗೇಯ—ನನಗಿಂತಲೂ ಹೆಚ್ಚಾಗಿ ರಾಜಮಾತೆಯವರೇ ಹೊತ್ತಿದ್ದಾರೆ.

ಪರಶುರಾಮ—ಸತ್ಯವತಿಯ ಮಗನೊಬ್ಬ ಸಾವಿಗೀಡಾದನಲ್ಲವೇ?

ಗಾಂಗೇಯ– ಅಹುದು ಗುರುದೇವ, ಚಿತ್ರಾಂಗದನೆಂಬ ಹಿರಿಯ ಮಗನು ಅಕಾಲ ಮರಣಕ್ಕೀಡಾದನು.

ಪರಶುರಾಮ—ಮರಣಕ್ಕೆ ಕಾರಣವೇನು?

ಗಾಂಗೇಯ—ಬೇಟೆಗೆಂದು ಕಾಡಿಗೆ ಹೋಗಿದ್ದಾಗ, ಹುಲಿಯ ದಾಳಿಗೆ ಸಿಲುಕಿ ಸಾವನ್ನಪ್ಪಿದ. ಆದರೆ ರಾಜಕುಮಾರನ ಸಾವಿಗೆ ಮತ್ತೊಂದು ಕಾರಣವೊಂದನ್ನು ಕಟ್ಟಿ ಬಣ್ಣಿಸಿತು, ಈ ಜಗತ್ತು.

ಪರಶುರಾಮ—ಏನೆಂದು?

ಗಾಂಗೇಯ—ಕಾಡಿನಲ್ಲಿ ವಿಹರಿಸುತ್ತಿದ್ದ ಗಂದರ‍್ವರನ್ನು ವಿನಾಕಾರಣವಾಗಿ ಚಿತ್ರಾಂಗದ ಕೆಣಕಿದನೆಂದೂ, ಅದರಿಂದ ಕೆರಳಿದ ಗಂದರ‍್ವರು ಹುಲಿಯ ರೂಪದಲ್ಲಿ ಮುತ್ತಿ ಕೊಂದರೆಂದು!

ಪರಶುರಾಮ—ಲೋಕದ ಬಾಯನ್ನು ಕಟ್ಟಲು ಯಾರಿಗೆ ತಾನೆ ಆಗುತ್ತದೆ?

ಗಾಂಗೇಯ—[ಮುಗುಳ್ನಕ್ಕು ಸುಮ್ಮನಾಗುತ್ತಾನೆ]

ಪರಶುರಾಮ—ವಿಚಿತ್ರವೀರ‍್ಯನ ಲಗ್ನವಾಯಿತೆಂದು ಕೇಳಿದೆನು.

ಗಾಂಗೇಯ—ಅಹುದು ಗುರುವರ‍್ಯ, ಕಾಶೀರಾಜ ಪುತ್ರಿಯರೊಡನೆ ನೆರವೇರಿತು.

ಪರಶುರಾಮ—ಲಗ್ನಕ್ಕೆ ನಿನ್ನ ಪರಾಕ್ರಮವೇ ನಿಮಿತ್ತವಾಯಿತಂತೆ.

ಗಾಂಗೇಯ—ಹಸ್ತಿನಾಪುರದ ಅರಸರನ್ನು ಕಾಶೀರಾಜನು ಕಡೆಗಣಿಸಿದ್ದು ಸ್ವಲ್ಪ ಮಟ್ಟಿನ ಹೊಡೆದಾಟಕ್ಕೆ ಕಾರಣವಾಯಿತು.

ಪರಶುರಾಮ—ಗಾಂಗೇಯ, ನಮ್ಮಲ್ಲಿರುವ ಶಕ್ತಿಯನ್ನು ಲೋಕದ ಒಳಿತಿಗಾಗಿ ವಿನಿಯೋಗಿಸಬೇಕಲ್ಲವೇ?

ಗಾಂಗೇಯ—ಅಹುದು ಗುರುದೇವ.

ಪರಶುರಾಮ—ಕೆಡುಕಿನ ಕೆಲಸಗಳಿಗೆ ನಮ್ಮ ಶಕ್ತಿಯನ್ನು ಬಳಸುವುದು ಪಾಪಕರವಲ್ಲವೇ?

ಗಾಂಗೇಯ—ಲೋಕ ಜೀವನದ ಆಗುಹೋಗುಗಳ ಅಗತ್ಯಕ್ಕಾಗಿ ಕೆಲವೊಮ್ಮೆ ನಾವು ಪಾಪ ಪುಣ್ಯಗಳ ಗೆರೆಯನ್ನು ದಾಟಬೇಕಾಗುತ್ತದೆ, ಗುರುದೇವ.

ಪರಶುರಾಮ—ಅಂದರೆ ನಮ್ಮ ಇಚ್ಚೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಏನನ್ನು ಬೇಕಾದರೂ ಮಾಡಬಹುದೆಂಬುದು ನಿನ್ನ ಅನಿಸಿಕೆಯೇನು?

ಗಾಂಗೇಯ—ಹಾಗಲ್ಲ ಗುರುವರ‍್ಯ. ಕಾಶೀರಾಜನಿಂದ ನಮ್ಮ ಅರಸನಿಗೆ ಆಗಿದ್ದ ಅಪಮಾನಕ್ಕೆ ತಕ್ಕ ಪ್ರತೀಕಾರವನ್ನು ಮಾಡಲೇಬೇಕಿತ್ತು.

ಪರಶುರಾಮ—ಹಾಗಿದ್ದರೆ ಕಾಶೀರಾಜ ಮಾಡಿದ ತಪ್ಪಿಗೆ ಅವನೊಡನೆ ನೀನು ಹೋರಾಡಬೇಕಿತ್ತೇ ಹೊರತು, ಅವನ ಮಕ್ಕಳನ್ನೇಕೆ ಅಪಹರಿಸಿದೆ? ಅಬಲೆಯರ ಮೇಲೆ ಕಯ್ ಮಾಡಬಾರದೆಂಬ ವಿವೇಕವು ನಿನ್ನಿಂದ ದೂರವಾಗಿತ್ತೆ?

ಗಾಂಗೇಯ—ನಮ್ಮ ರಾಜವಂಶದ ಕುಡಿಯನ್ನು ಬೆಳಗಿಸಬೇಕೆಂಬ ಉದ್ದೇಶದಿಂದ ಅವರನ್ನು ಕೊಂಡೊಯ್ದು ಬಂದನೇ ಹೊರತು, ಮತ್ತಾವ ದುರುದ್ದೇಶದಿಂದಲ್ಲ.

ಪರಶುರಾಮ—ನಿನ್ನ ಉದ್ದೇಶ ನೆರವೇರಿತೆ?

ಗಾಂಗೇಯ—ಬಹುಮಟ್ಟಿಗೆ ಈಡೇರಿದಂತಾಗಿದೆ.

ಪರಶುರಾಮ—ಮದುವೆಯಾಗದೆ ಉಳಿದಿರುವ ಅಂಬೆಯ ಗತಿಯೇನು?

ಬೀಶ್ಮ—(ಏನನ್ನೂ ಹೇಳದೆ ಸುಮ್ಮನಾಗುತ್ತಾನೆ)

ಪರಶುರಾಮ—ಇದ್ದಕ್ಕಿದ್ದಂತೆ ನಡೆದ ನಿನ್ನ ಆಕ್ರಮಣದಿಂದ ಅವಳ ಬಾಳೇ ಮುರಿದು ಬೀಳುವ ನೆಲೆಗೆ ಬಂದಿದೆಯಲ್ಲವೇ? ಅದನ್ನು ಈಗ ಹೇಗೆ ಸರಿಪಡಿಸುತ್ತೀಯೆ?

ಗಾಂಗೇಯ—ನನ್ನ ಸಲಹೆಗೆ ಆಕೆ ಒಪ್ಪಿದರೆ, ಈಗಲೂ ಕಾಲ ಮಿಂಚಿಲ್ಲ ಗುರುದೇವ.

ಪರಶುರಾಮ—ನಿನ್ನನ್ನಲ್ಲದೇ, ವಿಚಿತ್ರವೀರ‍್ಯನನ್ನಾಗಲಿ, ಸಾಲ್ವಲನನ್ನಾಗಲಿ ಇಲ್ಲವೇ ಮತ್ತಾವ ವ್ಯಕ್ತಿಯನ್ನಾಗಲಿ ವರಿಸುವುದಿಲ್ಲವೆಂದು ಆಕೆ ನಿರ‍್ದರಿಸಿದ್ದಾಳಲ್ಲ.

ಗಾಂಗೇಯ—ಜಗತ್ತಿನ ಹೆಣ್ಣುಗಳನ್ನೆಲ್ಲಾ ತಾಯಂದಿರೆಂದು ನಾನು ನಿರ‍್ದರಿಸಿದ್ದೇನಲ್ಲ.

ಪರಶುರಾಮ—ಆದರೆ ನಿನ್ನ ನಿರ‍್ದಾರವು ಲೋಕದ ಸಂಪ್ರದಾಯಕ್ಕೆ ವಿರುದ್ದವಲ್ಲವೇ ಗಾಂಗೇಯ?

ಗಾಂಗೇಯ—ಹೇಗೆ ಗುರುವರ‍್ಯ?

ಪರಶುರಾಮ—ಬಾಳು ಅರ‍್ತಪೂರ‍್ಣವಾಗಬೇಕಾದರೆ ಹೆಂಡತಿ ಮಕ್ಕಳೊಡನೆ ಕೂಡಿದ ಸಂಸಾರದ ಹೊಣೆಗಾರಿಕೆಯನ್ನು ಹೊರಬೇಕಲ್ಲವೇ?

ಗಾಂಗೇಯ—(ಸ್ವಲ್ಪ ಹಿಂಜರಿಯುತ್ತಾ) ತಮಗೆ ಅಂತಹ ಹೊಣೆಗಾರಿಕೆ ಇದೆಯೇ ಗುರುವರ‍್ಯ?

ಪರಶುರಾಮ—ನಾನಾದರೋ ಲೋಕದ ಸಮಸ್ತ ಬಯಕೆಗಳಿಂದ ದೂರನಾಗಿ, ಕಾಡಿನಲ್ಲಿ ಗೆಡ್ಡೆ ಗೆಣಸುಗಳನ್ನು ಆಶ್ರಯಿಸಿ, ಬಾಳುತ್ತಿರುವ ವ್ಯಕ್ತಿ. ನೀನು ಲೋಕಜೀವನದ ಏಳುಬೀಳುಗಳ ನಡುವೆ ಬಾಳುತ್ತಿರುವ ರಾಜಕುವರ. ಲೋಕದ ಚೆಲುವು ಒಲವಿನ ಎಲ್ಲಾ ವಸ್ತುಗಳನ್ನು ಪಡೆಯುತ್ತಿದ್ದು, ಹೆಣ್ಣನ್ನು ಮಾತ್ರ ಬೇಡವೆಂದು ದೂರಮಾಡುವುದು ಸರಿಯೇ?

ಗಾಂಗೇಯ—(ಸುಮ್ಮನೆ ಕೇಳುತ್ತಿರುತ್ತಾನೆ.)

ಪರಶುರಾಮ—ರಾಜ್ಯವೊಂದರ ಆಡಳಿತಸೂತ್ರವನ್ನು ಹಿಡಿದಿರುವೆ. ನೀನು ಹುಟ್ಟಿರುವ ರಾಜವಂಶವನ್ನು ಉದ್ದಾರಮಾಡಬೇಕೆಂಬ ದೊಡ್ಡದಾದ ಆಸೆಯನ್ನು ಅಂತರಂಗದಲ್ಲಿ ಹೊತ್ತಿರುವೆ. ಲೋಕಜೀವನದ ಇಂತಹ ಬಯಕೆಗಳಿಂದ ಕೂಡಿರುವ ನೀನು ಹೆಣ್ಣಿಗೂ ನಿನ್ನ ಬಾಳಿನಲ್ಲಿ ಎಡೆಯನ್ನೇಕೆ ಕೊಡಬಾರದು? ಗಾಂಗೇಯ, ಯೋಚಿಸಿನೋಡು.

ಗಾಂಗೇಯ—ಗುರುವರ‍್ಯ, ತಾವು ಹೇಳಿದಂತೆ ನಾನು ಲೋಕದ ಜೀವನದ ಏಳುಬೀಳುಗಳ ನಡುವೆ ಇರುವುದು ದಿಟ. ಆದರೆ ಅದು ನನಗಾಗಿಯಲ್ಲ. ನನ್ನ ವಂಶಜರ ಹಿತಕ್ಕಾಗಿ.

ಪರಶುರಾಮ—ನಿನ್ನ ವಂಶಜರ ಹಿತಕ್ಕಾಗಿಯೇ ನೀನೇಕೆ ಸಂಸಾರಿಯಾಗಬಾರದು?

ಗಾಂಗೇಯ—ಅದು ಈ ಜನ್ಮದಲ್ಲಿ ಸಾದ್ಯವೇ ಗುರುದೇವ? ನನ್ನ ತಂದೆಯ ಮದುವೆಯನ್ನು ನಾನೇ ನಿಂತು ಮಾಡಿಸಿದಾಗ, ನನ್ನ ಚಿಕ್ಕಮ್ಮ ಸತ್ಯವತಿದೇವಿಯವರ ತಂದೆಗೆ ನಾನು ಕೊಟ್ಟಿರುವ ಮಾತಿಗೆ ತಪ್ಪಿ ನಡೆಯಲೇ?

ಪರಶುರಾಮ—ಸಮಸ್ಯೆಗಳು ಹುಟ್ಟಿಕೊಂಡಾಗ ಆವೇಶದಿಂದ ನಡೆದುಕೊಳ್ಳುವ ನಾವು, ಎಲ್ಲಾ ಸಮಯದಲ್ಲೂ ಅದೇ ರೀತಿ ಇರಬೇಕೆನ್ನುವೆಯಾ?

ಗಾಂಗೇಯ—(ಸುಮ್ಮನಿರುತ್ತಾನೆ)

ಪರಶುರಾಮ—ನನ್ನ ಬಾಳನ್ನೇ ನೋಡು ಗಾಂಗೇಯ. ಯಾವುದೋ ಒಂದು ಆವೇಶಕ್ಕೆ ಸಿಲುಕಿ ಆಕ್ರೋಶಗೊಂಡು ಕ್ಶತ್ರಿಯರ ಮೇಲೆ ವಿಶವನ್ನು ಕಾರುತ್ತಿದ್ದೆ. ಕಾಲ ಉರುಳಿದಂತೆಲ್ಲಾ ನನ್ನೊಳಗಿದ್ದ ಆ ಆಕ್ರೋಶದ ಕಾವು ಆರಿ, ಈಗ ನಾನು ಕ್ಶತ್ರಿಯರ ಮೇಲಣ ಹಗೆತನವನ್ನೇ ಸಂಪೂರ‍್ಣವಾಗಿ ಮರೆತಿಲ್ಲವೇ? ಯಾವುದೇ ಒಂದನ್ನು ಪಟ್ಟುಹಿಡಿದು ಕೊನೆಯವರೆಗೂ ಹೆಣಗಬಾರದು. ಸಮಯ ಸಂದರ‍್ಬಗಳಿಗೆ ಹೊಂದಿಕೊಂಡು ಜಗತ್ತಿನಲ್ಲಿ ಬಾಳಬೇಕು. ವಿಶಾಲದ್ರುಶ್ಟಿಯಿಂದ ಚಿಂತನೆಮಾಡಿ ನೋಡು. ಅಂಬೆಯ ಕಯ್ ಹಿಡಿಯುವುದರಿಂದ ನಿನ್ನ ಬಾಳಿಗೆ ಯಾವ ಬಗೆಯಲ್ಲಿಯೂ ಹಾನಿಯುಂಟಾಗದು. ನೊಂದ ಜೀವಿಯೊಂದನ್ನು ಕಾಪಾಡಿದ ಪುಣ್ಯ ನಿನ್ನದಾಗುತ್ತದೆ.

ಗಾಂಗೇಯ—ನನ್ನ ಹಿರಿಯರಿಗೆ ದ್ರೋಹ ಮಾಡಲೇನು?

ಪರಶುರಾಮ—ಗಾಂಗೇಯ, ಅಂದು ನೀನು ಯಾವ ಉದ್ದೇಶಕ್ಕಾಗಿ ಮಾತನ್ನು ಕೊಟ್ಟಿದ್ದೆಯೋ, ಅದು ಈಗಾಗಲೇ ಪಲ ನೀಡಿದೆ. ಶಂತನು-ಸತ್ಯವತಿ ಕೂಡಿ ಬಾಳಿದ್ದಾರೆ. ಅವರ ಬಾಳಿನ ಕುಡಿಯಾಗಿ ವಿಚಿತ್ರವೀರ‍್ಯ ಬೆಳೆಯುತ್ತಿದ್ದಾನೆ. ಆತನಿಗೆ ಪಟ್ಟವನ್ನೂ ಕಟ್ಟಿದ್ದೀಯೆ. ತನ್ನ ಕಾಲ ಮೇಲೆ ನಿಂತು ಆತ ರಾಜ್ಯವನ್ನು ಆಳಲಿ. ನೀನು ಅಂಬೆಯನ್ನು ಮದುವೆಯಾಗಿ, ನಿನ್ನ ತೋಳ್ಬಲದಿಂದ ಹೊಸರಾಜ್ಯವೊಂದನ್ನು ಕಟ್ಟಿ ಆಳುವವನಾಗು. ಜಗತ್ತು ದೊಡ್ಡದಾಗಿದೆ…ಗಾಂಗೇಯ…ಎಲ್ಲಾದರೂ ಹೋಗಿ ಲೋಕದ ಸಮಸ್ತ ಆನಂದವನ್ನು ಪಡೆದು ಒಳ್ಳೆಯ ಜೀವನವನ್ನು ರೂಪಿಸಿಕೊ.

ಗಾಂಗೇಯ—ಲೋಕದ ಹೆಣ್ಣುಗಳೊಡನೆ, ರಾಜ್ಯಲಕ್ಮ್ಶಿಯನ್ನೂ ನಾನು ನಿರಾಕರಿಸಿದ್ದೇನೆ, ಗುರುವರ‍್ಯ.

ಪರಶುರಾಮ—(ತುಸು ಬೇಸರದ ದನಿಯಿಂದ) ಹೆಣ್ಣಿನ ಆಸೆಯಿಲ್ಲ ; ಮಣ್ಣಿನ ಬಯಕೆಯಿಲ್ಲ. ಹಾಗಾದರೆ ನೀನೇಕೆ ಅರಮನೆಯಲ್ಲಿರುವೆ? ಇನ್ನುಳಿದ ಅಲ್ಪ ಸ್ವಲ್ಪ ಬಂದನವನ್ನು ಕಿತ್ತೊಗೆದು ಕಾಡಿಗೇಕೆ ಬರಬಾರದು?

ಗಾಂಗೇಯ—ಅದು ಪಲಾಯನವಾಗುವುದಿಲ್ಲವೇ ಗುರುದೇವ?

ಪರಶುರಾಮ—ಹೇಗೆ?

ಗಾಂಗೇಯ—ನನ್ನ ಪಾಲಿಗೆ ಅವುಗಳ ಸಂಗಸುಕ ದೊರೆಯದಂತಾಗಿದೆ ಎಂಬ ಒಂದೇ ಕಾರಣಕ್ಕಾಗಿ ಕಾಡನ್ನು ಹೊಕ್ಕರೆ, ನನ್ನ ಮನಸ್ಸಿಗೆ ನಾನೇ ವಂಚನೆ ಮಾಡಿಕೊಂಡಂತಾಗುವುದಿಲ್ಲವೇ? ಮಾಡಬೇಕಾದ ಅನೇಕ ಕಾರ‍್ಯಗಳನ್ನು ಕಯ್ ಬಿಟ್ಟು ಬಂದರೆ, ಕರ‍್ತವ್ಯ ತೊರೆದವನಿಗೆ ತಟ್ಟುವ ಕೆಟ್ಟಹೆಸರು ನನಗೆ ಬರುವುದಿಲ್ಲವೇ?

ಪರಶುರಾಮ—ಹಾಗಾದರೆ ನಿನ್ನ ಬಾಳಿನ ಗುರಿಯೇನು?

ಗಾಂಗೇಯ—(ತುಸು ಕಾಲ ಸುಮ್ಮನಿದ್ದು) ಗುರುಕುಲದಲ್ಲಿದ್ದಾಗ ತಮ್ಮಿಂದ ಗುರುವಾಣಿಯೊಂದನ್ನು ನಾನು ಕೇಳಿದ್ದೆನು.

ಪರಶುರಾಮ—ಏನೆಂದು?

ಗಾಂಗೇಯ—ಜೀವನದ ಸಾರ‍್ತಕತೆಗೆ ಎರಡು ಮಾರ‍್ಗಗಳಿವೆ. ಪರಿಶುದ್ದಚಿತ್ತದಿಂದ ಪಡೆಯುವ ಜ್ನಾನ ಸಾದನೆಯೊಂದಾದರೆ, ನಿಶ್ಕಾಮಬಾವದಿಂದ ಮಾಡುವ ಕರ‍್ತವ್ಯ ಸಾದನೆಯು ಮತ್ತೊಂದು.

ಪರಶುರಾಮ—(ಗಾಂಗೇಯನನ್ನೇ ನೋಡುತ್ತಿರುತ್ತಾರೆ)

ಗಾಂಗೇಯ—ನೀವು ಮಹಾ ತಪಸ್ವಿಗಳಾಗಿ ಜ್ನಾನ ಸಾದನೆಯ ಮಾರ‍್ಗದಲ್ಲಿ ಸಾಗುತ್ತಿದ್ದೀರಿ. ನಾನು ಕರ‍್ಮಯೋಗದಿಂದ ಬಾಳನ್ನು ಸಾರ‍್ತಕಪಡಿಸಿಕೊಳ್ಳಬೇಕೆಂದು ತೀರ‍್ಮಾನಿಸಿದ್ದೇನೆ. ಅಂದು ನೀವು ತೋರಿದ ಬೆಳಕಿನ ದಾರಿಯಲ್ಲೇ ನಡೆಯಲು ಪ್ರಯತ್ನಿಸುತ್ತಿದ್ದೇನೆ.

ಪರಶುರಾಮ—(ಮನ ತುಂಬಿಬಂದು) ಗಾಂಗೇಯ!

ಗಾಂಗೇಯ—ನನ್ನ ನಿರ‍್ದಾರದಲ್ಲಿ ಎಡವದಂತಹ ಮನೋಬಲವನ್ನು ನನಗೆ ಕರುಣಿಸಿ, ಗುರುವರ‍್ಯ.

ಪರಶುರಾಮ—ನಿನ್ನ ಬಾಳಿನ ಉದ್ದೇಶಕ್ಕೆ ಅಡ್ಡಲಾಗಿ ಬರುವ ಇಚ್ಚೆ ನನಗಿಲ್ಲ. ಆದರೆ ಅಂಬೆಯ ಬಾಳು ಹೀಗಾಯಿತಲ್ಲ ಎಂಬ ಕಳವಳದಿಂದ ನಿನ್ನೊಡನೆ ಇಶ್ಟೊಂದು ಮಾತನಾಡಬೇಕಾಯಿತು.
(ದೊಡ್ಡದಾಗಿ ನಿಟ್ಟುಸಿರನ್ನು ಬಿಡುತ್ತಾರೆ. ಅನಂತರ ಅಲ್ಲಿದ್ದ ಶಿಶ್ಯನೊಬ್ಬನಿಗೆ ಅಂಬೆಯನ್ನು ಕರೆಯುವಂತೆ ಸೂಚಿಸುತ್ತಾರೆ. ಆ ಶಿಶ್ಯನ ಸೂಚನೆಯ ಮೇರೆಗೆ ಅಂಬೆಯು ಮಾಲಿನಿಯ ಜೊತೆಗೂಡಿ ಬಂದು ನಿಲ್ಲುತ್ತಾಳೆ.)

ಪರಶುರಾಮ—ಅಂಬೆ, ನಿನ್ನ ಉದ್ದೇಶ ಕಯ್ಗೂಡುವಂತೆ ಕಂಡುಬರುತ್ತಿಲ್ಲ. ಗಾಂಗೇಯ ತನ್ನ ಹಟವನ್ನೇ ಮುಂದೊಡ್ಡುತ್ತಿದ್ದಾನೆ.

ಗಾಂಗೇಯ—ಇದು ಹಟವಲ್ಲ ಗುರುವರ‍್ಯ. ನನ್ನ ಜೀವನದ ನಿರ‍್ದಾರ.

ಅಂಬೆ—ಹೆಣ್ಣುಮಕ್ಕಳ ಬಾಳನ್ನು ಹಾಳುಮಾಡುವುದು ನಿಮ್ಮ ಜೀವನದ ನಿರ‍್ದಾರವೇನು?

ಗಾಂಗೇಯ—ಅಂಬೆ, ಮತ್ತೆ ಮತ್ತೆ ಆಡಿದ ಮಾತುಗಳನ್ನೇ ಆಡಬೇಡ.

ಅಂಬೆ—ಮತ್ತಾವ ಮಾತುಗಳನ್ನಾಡಲಿ. ಅಬಲೆಯರ ಮೇಲೆ ಆಕ್ರಮಣ ಮಾಡುವ ನಿಮ್ಮ ಪರಾಕ್ರಮವನ್ನು ಕೊಂಡಾಡಲೇನು? ಬಲಹೀನ ರಾಜಕುಮಾರನ ಕೀರ‍್ತಿಪತಾಕೆಯನ್ನೇರಿಸಲು ನೀವು ಮಾಡುತ್ತಿರುವ ಸಾಹಸಗಳನ್ನು ಕುರಿತು ಸ್ತುತಿಸಿ ಕೊಂಡಾಡಲೇನು? ಅನ್ಯರ ಬಾಳನ್ನು ಹುಲ್ಲುಕಡ್ಡಿಗಿಂತ ಕಡೆಯಾಗಿ ಕಾಣುತ್ತಿರುವ ನಿಮ್ಮ ಹರೆಯದ ಮದವನ್ನು ಬಣ್ಣಿಸಲೇನು?

ಗಾಂಗೇಯ—ಅಂಬೆ, ರಾಜಕುಮಾರಿಯಾದ ನೀನು, ನಿನ್ನ ಅಂತಸ್ತಿಗೆ ತಕ್ಕುದಲ್ಲದ ನುಡಿಗಳನ್ನಾಡುತ್ತಿರುವೆ.

ಅಂಬೆ—ನಾನಿಂದು ರಾಜಕುಮಾರಿಯಲ್ಲ, ಗಾಂಗೇಯ. ನಿನ್ನ ಪ್ರತಾಪದ ಕಿಚ್ಚಿಗೆ ಬಲಿಯಾಗಿ ಬೇಯುತ್ತಿರುವ ಹೆಣ್ಣು. ಗಂಡಿನ ಬಾಹುಬಲದ ಮುಂದೆ ಜರ‍್ಜರಿತಳಾಗಿರುವ ಹೆಣ್ಣು. ನಿನ್ನಂತೆ ನನ್ನಲ್ಲಿ ತೋಳ್ಬಲವಿದ್ದಿದ್ದರೆ ಅದರ ಪಾಡೇ ಬೇರೆಯಾಗುತ್ತಿತ್ತು. ಹೆಣ್ಣಾದ ನಾನು, ನನ್ನ ದೇಹದ ನಿರ‍್ಬಲತೆಗಾಗಿ ದುಕ್ಕಿಸುತ್ತಿದ್ದೇನೆ. ನಿನ್ನಂತಹ ಸೊಕ್ಕಿನ ಗಂಡಸನ್ನು ಸದೆಬಡಿದು, ನನ್ನ ಬಾಳನ್ನು ರೂಪಿಸಿಕೊಳ್ಳುವಂತಹ ಶಕ್ತಿ ನನ್ನಲ್ಲಿಲ್ಲವಲ್ಲ ಎಂಬ ನಿಸ್ಸಹಾಯಕತೆಯಿಂದ ನನಗೆ ನನ್ನ ಬಗ್ಗೆಯೇ ಆಕ್ರೋಶ ಉರಿದೇಳುತ್ತಿದೆ. ನನಗೆ ನೀನಲ್ಲ ಅನ್ಯಾಯ ಮಾಡಿದ್ದು ; ನಿಸರ‍್ಗವೇ ಅನ್ಯಾಯ ಮಾಡಿದೆ. ಗಂಡು ಸಬಲ ; ಹೆಣ್ಣು ಅಬಲೆ ಎಂಬ ಈ ಸೊಲ್ಲು ಅಡಗುವ ತನಕ, ನಿನ್ನಂತಹ ಗಂಡುಗಳ ದಬ್ಬಾಳಿಕೆ ಮತ್ತು ನನ್ನಂತಹ ಹೆಣ್ಣುಗಳ ಸಂಕಟ ಈ ಜಗತ್ತಿನಲ್ಲಿ ಇದ್ದೇ ಇರುತ್ತದೆ.(ಮಾತನಾಡುತ್ತಿರುವಂತೆಯೇ ತೀವ್ರ ಉದ್ರೇಕಕ್ಕೆ ಒಳಗಾಗುತ್ತಾಳೆ.)

ಪರಶುರಾಮ—ಅಂಬೆ, ಶಾಂತಳಾಗು, ಶಾಂತಳಾಗು.

ಅಂಬೆ—ಗುರುದೇವ, ಹೆಣ್ಣಿನ ಬದುಕಿಗೆ ಬೆಲೆಯೇ ಇಲ್ಲವೇ? ಆಕೆ ಗಂಡಿನ ತೊತ್ತಾಗಿಯೇ ಬಾಳಬೇಕೆ? ಗಂಡಿನ ಇಶ್ಟಾನಿಶ್ಟಗಳಿಗೆ ತಲೆಯೊಡ್ಡಿ ತೊಳಲಾಡುವ ಅಲ್ಪಜೀವಿಯಾಗಿ ಬಾಳಿ ಅಳಿಯಬೇಕೆ?…ಹೇಳಿ, ಗುರುವರ‍್ಯ, ಕ್ರೂರಪ್ರಾಣಿಯಂತೆ ನಡೆದುಕೊಳ್ಳುವ ಗಂಡಸಿನ ಅಟ್ಟಹಾಸದಿಂದ ಹೆಣ್ಣು ಪಾರಾಗಿ ಬದುಕಲು ಸಾದ್ಯವಿಲ್ಲವೇ?

ಪರಶುರಾಮ—ನಿನ್ನ ಪ್ರಶ್ನೆಗೆ ನಿಸರ‍್ಗವೇ ಉತ್ತರ ನೀಡಬೇಕು, ಅಂಬೆ.(ಕೆಲ ಗಳಿಗೆ ಸುಮ್ಮನಿದ್ದು ಮತ್ತೆ ಮಾತನ್ನು ಮುಂದುವರಿಸುತ್ತಾರೆ) ನಿಸರ‍್ಗದಲ್ಲಿ ಎಲ್ಲವೂ ಸಮನಾಗಿಲ್ಲ. ಏರುಪೇರುಗಳಿಂದ ಕೂಡಿರುವುದೇ ನಿಸರ‍್ಗದ ಇರುವಿಕೆಯಾಗಿದೆ. ಹುಲಿಯು ಬದುಕಬೇಕಾದ ಈ ಜಗತ್ತಿನಲ್ಲೇ ಹುಲ್ಲೆಯು ಬದುಕಬೇಕಾಗಿದೆ. ನಿಸರ‍್ಗದ ಉದ್ದೇಶವನ್ನು ನಾನಾಗಲಿ ನೀನಾಗಲಿ ಅರಿಯಲಾರೆವು. ಅದೊಂದು ಬಿಡಿಸಲಾಗದ ಕಗ್ಗಂಟು.

ಅಂಬೆ—ಹಾಗಾದರೆ, ಈ ಜಗತ್ತಿನಲ್ಲಿ ಹೆಣ್ಣಿಗೆ ರಕ್ಶಣೆಯೇ ಇಲ್ಲವೇ?

ಪರಶುರಾಮ—ಇದೆ ತಾಯಿ, ಇದೆ. ದೇಹದ ಬಲದಲ್ಲಿ ಹೆಣ್ಣು ದುರ‍್ಬಲಳಂತೆ ಕಂಡುಬಂದರೂ, ಆಕೆ ತನ್ನ ಮಾನಸಿಕ ಬಲದಿಂದ ಗಂಡಿನೊಡನೆ ಸೆಣಸಬಲ್ಲಳು ; ಅವನಿಗಿಂತ ಮಿಗಿಲಾಗಬಲ್ಲಳು.

ಅಂಬೆ—(ಉದ್ರೇಕದಿಂದ ಚಡಪಡಿಸುತ್ತಾ) ಗುರುವರ‍್ಯ, ನನಗೆ ಆ ಶಕ್ತಿಯನ್ನು ಅನುಗ್ರಹಿಸಿ. ನನ್ನ ಬಾಳಿನ ದಿಕ್ಕನ್ನು ಬದಲಿಸಿದ ಈ ಗಾಂಗೇಯನನ್ನು ನಾನು ಎದುರಿಸಲೇಬೇಕು.

ಪರಶುರಾಮ—ಅಂಬೆ, ಶಾಂತಳಾಗು.

ಅಂಬೆ—ಶಾಂತಿಯೆಂಬುದು ಸಾವು ಬಂದಾಗ ಮಾತ್ರ ಸಾದ್ಯ, ಗುರುದೇವ.

(ಅಂಬೆಯ ಅಂತರಂಗದ ವೇದನೆಯೆಲ್ಲವೂ ಆಕ್ರೋಶದ ರೂಪವನ್ನು ತಾಳಿ ಬಹಿರಂಗದಲ್ಲಿ ಅವಳ ಕಣ್ಣುಗಳ ಮೂಲಕ ಹೊರಹೊಮ್ಮುತ್ತಿರುವಂತೆ ಕಂಡುಬರುತ್ತಿದೆ. ನೇರನೋಟದಿಂದ ಗಾಂಗೇಯನನ್ನೇ ನೋಡತೊಡಗುತ್ತಾಳೆ. ಗಾಂಗೇಯ ಅವಳ ನೋಟವನ್ನು ಎದುರಿಸಲಾರದೆ, ಗುರುಗಳ ಕಡೆ ತಿರುಗುತ್ತಾರೆ.)

( ಮುಗಿಯಿತು )

( ಚಿತ್ರ ಸೆಲೆ: ritsin.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: