ಈತ ಕ್ರಿಕೆಟನ್ನೇ ಉಸಿರಾಗಿಸಿಕೊಂಡಿರುವ ಕನ್ನಡದ ಹುಡುಗ!

 ನಾಗರಾಜ್ ಬದ್ರಾ.

Raghu6

ಬೌಲಿಂಗ್ ಯಂತ್ರಕ್ಕಿಂತಲೂ ವೇಗವಾಗಿ ಎಸೆತಗಳನ್ನು ಎಸೆಯುವ ಇವರು ಇಂಡಿಯಾ ಕ್ರಿಕೆಟ್‍ನ ಬೌಲಿಂಗ್ ಯಂತ್ರ ಎಂದೇ ಕರೆಯಲ್ಪಡುತ್ತಾರೆ. ಇವರು ಕ್ರಿಕೆಟ್ ಜಗತ್ತಿನ ದೇವರು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಎಂ.ಎಸ್.ದೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ‍್ಮ, ರಾಬಿನ್ ಉತ್ತಪ್ಪ ಹೀಗೆ ಇಂದಿನ ಬಾರತ ಕ್ರಿಕೆಟ್ ತಂಡದ ಎಲ್ಲಾ ಆಟಗಾರರಿಗೆ ತರಬೇತಿ ಶಿಬಿರಗಳಲ್ಲಿ ಎಸೆತಗಳನ್ನು ಎಸೆದಿದ್ದಾರೆ. 2011 ರಲ್ಲಿ ಬಾರತ ಕ್ರಿಕೆಟ್ ತಂಡವು 50 ಓವರ್ ಗಳ ವಿಶ್ವಕಪ್ಪನ್ನು ಗೆದ್ದಾಗ ಪರದೆ ಹಿಂದಿನ ಇವರ ಶ್ರಮವನ್ನು ಎಂದಿಗೂ ಮರೆಯುವಂತಿಲ್ಲ. ಇವರು ಕ್ರಿಕೆಟ್ ಆಟಗಾರ ಆಗಬೇಕೆಂದು ಬಂದವರು ಬಳಿಕ ಆಗಿದ್ದು ತರಬೇತುದಾರ. ನಾನು ಇಶ್ಟೊತ್ತು ಹೇಳಿದ್ದು ಯಾರ ಬಗ್ಗೆ ಎಂದು ಕುತೂಹಲವಾಗುತ್ತಿದೆಯಾ? ಅವರೇ ನಮ್ಮ ಕರುನಾಡಿನ ಹೆಮ್ಮೆಯ ರಾಗವೇಂದ್ರ ಡಿ.ವಿ.ಜಿ.ಆಯ್.

ಇವರು ಕರ‍್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಒಂದು ಮದ್ಯಮ ವರ‍್ಗದ ಕುಟುಂಬದಲ್ಲಿ ಹುಟ್ಟಿದವರು. ಚಿಕ್ಕವನಿದ್ದಾಗಲೇ ಕ್ರಿಕೆಟಿನಲ್ಲಿ ತುಂಬಾ ಆಸಕ್ತಿಯಿತ್ತು. ಕ್ರಿಕೆಟ್ ಎಂದರೆ ಸಾಕು ಅವರಲ್ಲಿ ಒಂದು ತರಹದ ಹುಚ್ಚು ಆವರಿಸಿಕೊಳ್ಳುತ್ತಿತ್ತು. ಅವರು ಅಂದಿನಿಂದಲೇ ಒಬ್ಬ ದೊಡ್ಡ ಕ್ರಿಕೆಟ್ ಆಟಗಾರನಾಗಬೇಕೆಂದು ಕನಸು ಕಾಣುತ್ತಿದ್ದರು. ಆದರೆ ಮನೆಯಲ್ಲಿ ಮಾತ್ರ ಯಾರಿಗೂ ಇದು ಇಶ್ಟವಿರಲಿಲ್ಲ. ಕಡೆಗೆ ತಮ್ಮ 15ನೇ ವಯಸ್ಸಿನಲ್ಲಿ ಮನೆಯವರ ಮಾತನ್ನು ಲೆಕ್ಕಿಸದೆ, ವಿದ್ಯಾಬ್ಯಾಸವನ್ನು ಅಲ್ಲಿಗೇ ನಿಲ್ಲಿಸಿ ಮನೆಬಿಟ್ಟು ಮಾಯಾನಗರಿ ಮುಂಬಯಿಗೆ ಹೊರಟರು. ಅಲ್ಲಿ ಅವರು ಪ್ರಸಿದ್ದ ತರಬೇತುದಾರ ರಮಾಕಾಂತ ಅಚ್ರೆಕರ್ ಅವರಿಂದ ಕ್ರಿಕೆಟ್ ತರಬೇತಿಯನ್ನು ಪಡೆಯಲು ಆರಂಬಿರಿಸಿದರು. ಹೀಗೆ ಮೂರು ವರ‍್ಶಗಳು ಕಳೆದವು ಆದರೆ ಅವರು ಏನು ಸಾದಿಸಬೇಕೆಂದು ಮುಂಬಯಿಗೆ ಬಂದಿದ್ದರೋ ಅದು ಇನ್ನೂ ಈಡೇರಿರಲಿಲ್ಲ. ಹಲವಾರು ಕನಸುಗಳನ್ನು ಹೊತ್ತುಕೊಂಡು ಬಂದವರ ಮನದಲ್ಲಿ ನಿರಾಸೆ ಮನೆಮಾಡಿತ್ತು. ಅವರಿಗೆ ಏನು ಮಾಡಬೇಕೆಂದು ತೋಚದಂತಾಗಿ ಅಲ್ಲಿಂದ ನೇರವಾಗಿ ಹುಬ್ಬಳ್ಳಿಗೆ ಹೊರಟರು. ಹುಬ್ಬಳ್ಳಿಯಲ್ಲಿ ಕೆಲವು ಕ್ಲಬ್ ಗಳ ಪರವಾಗಿ ಸುಮಾರು ಎರಡು ವರ‍್ಶಗಳ ಕಾಲ ಆಡಿದರು. ಆದರೆ ದೊಡ್ಡ ಅಂತರರಾಶ್ಟ್ರೀಯ ಕ್ರಿಕೆಟ್ ಆಟಗಾರನಾಗಬೇಕು ಎನ್ನುವ ಕನಸು ನನಸಾಗುವ ಯಾವ ಲಕ್ಶಣಗಳು ಅವರಿಗೆ ಇಲ್ಲಿಯೂ ಕಾಣಲಿಲ್ಲ. ಕ್ರಿಕೆಟನ್ನೇ ತಮ್ಮ ಜೀವನವಾಗಿಸಿಕೊಂಡು, ಅದರಲ್ಲಿಯೇ ಏನಾದರೂ ಸಾದಿಸಬೇಕೆಂದು ಪಣತೊಟ್ಟಿದ್ದ ಇವರು ಅದನ್ನು ಸಾದಿಸಲು ಬೆಂಗಳೂರಿನ ದಾರಿ ಹಿಡಿದರು.

ಪ್ರತಿದಿನವೂ ನೂರಾರು ಕನಸುಗಳನ್ನು ಹೊತ್ತು ನಾಡಿನ ಹಳ್ಳಿಗಳಿಂದ ಹಾಗೂ ಹೊರನಾಡಿನಿಂದ ಸಾವಿರಾರು ಜನರು ಬೆಂಗಳೂರಿಗೆ ಬರುತ್ತಾರೆ. ಇಂತಹ ದೊಡ್ಡ ನಗರದಲ್ಲಿ ಅವರು ಅಂದುಕೊಂಡಿದ್ದು ಸಾದಿಸುವುದು ಅಶ್ಟು ಸುಲಬವಾಗಿರಲಿಲ್ಲ. ಅವರ ಚಲ, ಕಟಿಣ ಪರಿಶ್ರಮ ಹಾಗೂ ಕ್ರಿಕೆಟ್ ಮೇಲಿನ ಆಸಕ್ತಿಯಿಂದ ಎಲ್ಲವೂ ಬದಲಾಯಿತು. ಅವರಿಗೆ ಕರ‍್ನಾಟಕ ಇನ್ಸ್ಟಿಟ್ಯೂಟ್ ಆಪ್ ಕ್ರಿಕೆಟ್ ಅಲ್ಲಿ (KIOC) ಕೆಲಸ ಸಿಕ್ಕಿತು. ಇದರ ಹಿಂದೆಯೂ ಒಂದು ದೊಡ್ಡ ಕತೆಯಿದೆ. ಅದೇನೆಂದರೆ, ರಾಗವೇಂದ್ರ ಅವರು ಹುಬ್ಬಳ್ಳಿಯಲ್ಲಿ ಕ್ಲಬ್ ಗಳ ಪರ ಆಡುತ್ತಿರುವಾಗ ಇವರ ಕ್ರಿಕೆಟ್ ಚಳಕವನ್ನು ತುಂಬಾ ಹತ್ತಿರದಿಂದ ಗಮನಿಸಿದ ಒಬ್ಬರು. ಅಲ್ಲಿಯೇ ಇದ್ದ ತಮ್ಮ ಸ್ನೇಹಿತರಾದ ಇರ‍್ಪಾನ್ ಸೈತ್ ಅವರಿಗೆ ಪರಿಚಯ ಮಾಡಿಸಿ, ಇವರ ಚಳಕವನ್ನು ಉಪಯೋಗಿಸಿಕೊಳ್ಳಲು ತಿಳಿಸಿದರು. ಅಂದು ಇರ‍್ಪಾನ್ ಸೈತ್ ಅವರು ಕರ‍್ನಾಟಕ ಇನ್ಸ್ಟಿಟ್ಯೂಟ್ ಆಪ್ ಕ್ರಿಕೆಟ್ ನ ಮುಕ್ಯ ತರಬೇತುದಾರರಾಗಿದ್ದರು. ಮುಂದೆ ಬೆಂಗಳೂರಿಗೆ ಹೋಗಿ ಇವರನ್ನು ಬೇಟಿಯಾದ ರಾಗವೇಂದ್ರರಿಗೆ ಇರ‍್ಪಾನ್ ಸೈತ್ ನಿರಾಸೆ ಮಾಡಲಿಲ್ಲ, KIOC ಅಲ್ಲಿ ಕೆಲಸಕ್ಕೆ ಸೇರಿಸಿಕೊಂಡರು. ಹೀಗೆ ಸಿಕ್ಕ ಮೊದಲ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡ ಅವರು ಕೆಲವೇ ದಿನಗಳಲ್ಲಿ ತಮ್ಮ ಚಳಕದಿಂದ ಎಲ್ಲರ ಗಮನಸೆಳೆದರು. KIOC ಅಲ್ಲಿ ಸ್ವಸ್ತಿಕ್ ಕ್ರಿಕೆಟ್ ಕ್ಲಬ್ ಪರ ಆಡುವುದರ ಜೊತೆಯಲ್ಲಿಯೇ ತರಬೇತಿ ಶಿಬಿರಗಳಲ್ಲಿ ಬ್ಯಾಟಮನ್ಸ್ ಗಳಿಗೆ ಎಸೆತಗಳನ್ನು ಎಸೆಯುತ್ತಿದ್ದರು.

ಮುಂದಿನ ದಿನಗಳಲ್ಲಿ ಕೆ.ಎಸ್.ಸಿ.ಎ (KSCA) ಗೆ ನೆಟ್ಸ್ ಗಳಲ್ಲಿ ಬಾರತ ಕ್ರಿಕೆಟ್ ತಂಡದ ಅತವಾ ಕರ‍್ನಾಟಕ ರಣಜಿ ತಂಡದ ಬ್ಯಾಟಮನ್ಸ್ ಗಳಿಗೆ ಬೌಲಿಂಗ್ ಮಾಡಲು ಯಾರನ್ನಾದರೂ ಕಳುಹಿಸಿ ಎಂದು ಕರೆ ಬಂದಾಗ KIOC ಅವರು ರಾಗವೇಂದ್ರ ಅವರನ್ನು ಕಳುಹಿಸಲಾರಂಬಿಸಿದರು. ಇದರಿಂದ ರಾಗವೇಂದ್ರ ಅವರಿಗೆ ಇಂಡಿಯಾದ ಮಹಾನ್ ಕ್ರಿಕೆಟ್ ಆಟಗಾರ ಒಡನಾಟ ಬೆಳೆಯಿತು. ಕಡೆಗೆ 2008 ರಲ್ಲಿ ಇವರ ಕನಸು ನನಸಾಗುವ ಕಾಲ ಬಂತು, ಇವರ ಚಳಕದಿಂದ ಪ್ರಬಾವಿತವಾದ ನ್ಯಾಶನಲ್ ಕ್ರಿಕೆಟ್ ಅಕಾಡಮಿಯು ಕೆಲಸಕ್ಕೆ ಸೇರಿಸಿಕೊಂಡಿತು. ಇಂಡಿಯಾ ಕ್ರಿಕೆಟ್ ತಂಡವು ಯಾವುದೇ ಸರಣಿಯಲ್ಲಿ ಪಾಲ್ಗೊಳ್ಳುವ ಮುನ್ನ ಎನ್.ಸಿ.ಎ ಅಲ್ಲಿ ಕೆಲವು ದಿನಗಳ ತರಬೇತಿ ಶಿಬಿರವನ್ನು ಬಿ.ಸಿ.ಸಿ.ಆಯ್ (BCCI) ಹಮ್ಮಿಕೊಳ್ಳುತ್ತದೆ. ಈ ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ರಾಗವೇಂದ್ರ ಅವರು ಸುಮಾರು ಗಂಟೆಗಳ ಕಾಲ ದಣಿವಿಲ್ಲದೇ ಎಸೆತಗಳನ್ನು ಎಸೆಯುತ್ತಿದ್ದರು. ಇದರಿಂದಲೇ ಅವರು ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್, ಎಂ.ಎಸ್.ದೋನಿ ಅವರಿಗೆ ಅಚ್ಚುಮೆಚ್ಚಾದರು. ಇವರ ಚಳಕವನ್ನು ಕಂಡು ಬೆರಗಾದ ಬಾರತ ಕ್ರಿಕೆಟ್ ಮಂಡಳಿ, 2011 ರಲ್ಲಿ ಇವರನ್ನು ಬಾರತ ಕ್ರಿಕೆಟ್ ತಂಡದ ಸಹಾಯಕ (ಅಸಿಸ್ಟೆಂಟ್) ಬೌಲಿಂಗ್ ತರಬೇತುದಾರರಾಗಿ ನೇಮಕಮಾಡಿ ಆಸ್ಟ್ರೇಲಿಯ ಪ್ರವಾಸಕ್ಕೆ ಕಳುಹಿಸಿತು. ಆಸ್ಟ್ರೇಲಿಯಾದ ಮಾದ್ಯಮಗಳು ಕೂಡ ಇವರ ಸಾದನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ವರದಿ ಮಾಡಿದವು. ಬಾರತ ತಂಡದ ಜೊತೆಗಿನ ಇವರ ಪಯಣ ಇಲ್ಲಿಂದ ಆರಂಬಗೊಂಡಿತು.

ಇಂದು ಕೂಡ ರಾಗವೇಂದ್ರ ಅವರು ಬಾರತ ಕ್ರಿಕೆಟ್ ತಂಡದ ಸಹಾಯಕ (ಅಸಿಸ್ಟೆಂಟ್) ಬೌಲಿಂಗ್ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಈ ದಿನಕ್ಕಾಗಿ ಅವರು ಪಟ್ಟ ಶ್ರಮ ಅಶ್ಟಿಶ್ಟಲ್ಲ. ಮನೆಯವರ ವಿರೋದದ ನಡುವೆ ಕ್ರಿಕೆಟನ್ನೇ ತಮ್ಮ ಕೆಲಸವಾಗಿಸಿ, ಅದರಲ್ಲಿಯೇ ಇನ್ನೂ ಏನಾದರೂ ಸಾದಿಸಿ ತೋರಿಸಬೇಕು ಎಂದು ಪಣತೊಟ್ಟಿದ್ದಾರೆ. ಕ್ರಿಕೆಟನ್ನು ಅತಿಯಾಗಿ ಪ್ರೀತಿಸುವ ಬಾರತದಂತಹ ದೇಶದಲ್ಲಿ, ಆ ವಲಯದಲ್ಲಿ ಏನಾದರೂ ಸಾದಿಸುವುದು ತುಂಬಾ ಕಶ್ಟದ ವಿಶಯ. ಇಲ್ಲಿ ಪ್ರತಿದಿನವೂ ಲಕ್ಶಾಂತರ ಹುಡುಗರು ಕ್ರಿಕೆಟ್ ಆಟಗಾರನಾಗಬೇಕೆಂದು ಕನಸು ಕಟ್ಟಿಕೊಂಡು ಹಳ್ಳಿಗಳಿಂದ ನಗರಗಳ ಕಡೆಗೆ ಬರುತ್ತಾರೆ. ಇಂತಹ ಸ್ತಿತಿಯಲ್ಲಿ ಎಲ್ಲರೂ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ವೀರೇಂದ್ರ ಸೆಹ್ವಾಗ್, ಎಂ.ಎಸ್.ದೋನಿ ಹಾಗೆ ಮಿಂಚಲು ಸಾದ್ಯವಿಲ್ಲ, ಆದರೆ ತಮ್ಮಲ್ಲಿರುವ ಚಳಕ ಹಾಗೂ ಚಲವನ್ನು ಉಪಯೋಗಿಸಿ ತಾವು ಕೂಡ ಏನಾದರೂ ಸಾದಿಸಬಹುದು ಎನ್ನುವುದಕ್ಕೆ ರಾಗವೇಂದ್ರ ಅವರು ಒಂದು ಒಳ್ಳೆಯ ಉದಾಹರಣೆ. ಇವರು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸೋಣ. ನಮ್ಮ ಕರುನಾಡಿನ ಹೆಸರನ್ನು ದೇಶ, ವಿದೇಶದಲ್ಲಿ ಮಿಂಚಿಸಲಿ ಹಾಗೂ ಇವರ ಈ ಸಾದನೆ ಕರುನಾಡಿನ ಯುವಕರಿಗೆ ಒಂದು ಮಾದರಿಯಾಗಲಿ ಎಂದು ಆಶೀಸೋಣ.

(ಮಾಹಿತಿ ಸೆಲೆ: dnaindia)
(ಚಿತ್ರ ಸೆಲೆ: jagran.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: