ಹುಬ್ಬಳ್ಳಿಯ ಗಿರಮಿಟ್ – ಸಂಜೆ ಹೊತ್ತು ತಿನ್ನಲು ಹೇಳಿಮಾಡಿಸಿದ ತಿಂಡಿ

ವಿಜಯಮಹಾಂತೇಶ ಮುಜಗೊಂಡ.

girmit-2

ಕರ‍್ನಾಟಕದ ಯಾವುದೇ ನಗರಗಳ ಹೆಸರು ಎತ್ತಿದರೆ ಅದಕ್ಕೆ ಅಂಟಿಕೊಂಡ ತಿಂಡಿಯೊಂದು ಬಾಯಲ್ಲಿ ನೀರು ಬರಿಸುತ್ತದೆ. ಬೆಳಗಾವಿ ಅಂದರೆ ಎಲ್ಲರ ತಲೆಗೆ ಹೊಳೆಯುವುದು ಕುಂದಾ. ದಾರವಾಡ ಅಂದ್ರೆ ಅಲ್ಲಿನ ಪೇಡಾ. ದಾವಣಗೆರೆಯಲ್ಲಿ ಬೆಣ್ಣೆ ದೋಸೆಯಾದರೆ, ಮದ್ದೂರಿನ ವಿಶೇಶ ವಡೆ. ಹಾಗೆಯೆ ಹುಬ್ಬಳ್ಳಿಯ ವಿಶೇಶ ತಿನಿಸು ಗಿರಮಿಟ್. ಹುಬ್ಬಳ್ಳಿ ಕಡೆ ಸಂಜೆ ಹೊತ್ತಿನ ತಿಂಡಿಗೆ ಗಿರಮಿಟ್-ಚಾ ಅಂದ್ರೆ ಅದು ಹೇಳಿ ಮಾಡಿಸಿದ ಜೋಡಿ ಎನ್ನಬಹುದು. ಗಿರಮಿಟ್ ಎನ್ನುವುದು ಕಡಲೆಪುರಿಯಿಂದ ಮಾಡಲಾಗುವ ಒಂದು ಬಗೆಯ ತಿಂಡಿ.

ಗಿರಮಿಟ್ ಮಾಡಲು ಬೇಕಾಗುವ ಸಾಮಾನುಗಳು:

ಬೆಳ್ಳುಳ್ಳಿ, ಕರಿಬೇವು, ನಿಂಬೆಹಣ್ಣು, ಸಕ್ಕರೆ, ಅರಿಶಿಣ ಪುಡಿ, ಉಪ್ಪು, ಸಾಸಿವೆ, ಇಂಗು, ಒಳ್ಳೆಣ್ಣೆ, ಕಡಲೆ ಹಿಟ್ಟು, ಸಣ್ಣಗೆ ಕತ್ತರಿಸಿದ ಟೊಮೆಟೊ ಮತ್ತು ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಕಡಲೆಪುರಿ (ಕೆಲವು ಕಡೆ ಚುರುಮುರಿ ಎಂದೂ ಕರೆಯುತ್ತಾರೆ), ಹುಣಸೆ ಹಣ್ಣಿನ ರಸ ಮತ್ತು ಸೇವು.

ಗಿರಮಿಟ್ ಮಾಡುವ ಬಗೆ:

ಗಿರಮಿಟ್‍ಗೆ ಜೊತೆ ನೆಂಚಿಕೊಳ್ಳಲು ಒಳ್ಳೆಯ ಜೋಡಿ ಅಂದರೆ ಹುರಿದ ಮೆಣಸಿನಕಾಯಿ. ಒಂದು ಚಮಚ ಎಣ್ಣೆಯಲ್ಲಿ ಐದಾರು ಹಸಿಮೆಣಸಿನ ಕಾಯಿಗಳನ್ನು ಹುರಿಯಬೇಕು. ಅದಕ್ಕೆ ಮೇಲೆ ಸ್ವಲ್ಪ ಉಪ್ಪು ಉದುರಿಸಿ ಪಕ್ಕಕ್ಕೆ ಇಟ್ಟುಕೊಳ್ಳಿ.

ಗಿರಮಿಟ್‍ ಮಾಡುವಲ್ಲಿ ಮುಕ್ಯವಾಗಿ ಮಾಡಬೇಕಾದದ್ದು ಗಿರಮಿಟ್ ಮಸಾಲೆ. ಬಾಣಲೆಯೊಂದರಲ್ಲಿ ಒಂದು ಬಟ್ಟಲು ಎಣ್ಣೆಯನ್ನು ಕಾಯಿಸಬೇಕು. ಎಸರು ಬರುತ್ತಿರುವ ಎಣ್ಣೆಗೆ ಎಂದು ಚಮಚ ಸಾಸಿವೆ, ಎರಡು-ಮೂರು ಕತ್ತರಿಸಿದ ಮೆಣಸಿನಕಾಯಿ, ಜಜ್ಜಿದ ಬೆಳ್ಳುಳ್ಳಿ, ಐದಾರು ಕರಿಬೇವು ಎಲೆಗಳನ್ನು ಹಾಕಿ. ಸ್ವಲ್ಪ ಹೊತ್ತಿನ ಬಳಿಕ ಅರ‍್ದ ಚಮಚ ಇಂಗು, ಒಂದು ಚಮಚ ಅರಿಶಿಣ ಪುಡಿಯನ್ನು ಸೇರಿಸಿ ಸಾಮಾನ್ಯ ಉರಿಯಲ್ಲಿ ಒಂದೆರೆಡು ನಿಮಿಶ ಕಲಸಬೇಕು. ಅದಕ್ಕೆ ಕತ್ತರಿಸಿದ ಈರುಳ್ಳಿ, ರುಚಿಗೆ ತಕ್ಕಶ್ಟು ಉಪ್ಪು, ಒಂದು ಚಮಚ ಸಕ್ಕರೆ ಸೇರಿಸಿ ಎರಡು ಮೂರು ನಿಮಿಶ ಕಲಸಿ. ಸಕ್ಕರೆ ಕಡಿಮೆ ಇರಲಿ, ಹೆಚ್ಚಾದರೆ ರುಚಿ ಕೆಟ್ಟುಹೋಗುತ್ತದೆ. ಈರುಳ್ಳಿಯ ಬಣ್ಣ ತೆಳುವಾಗುತ್ತಿದ್ದಂತೆ ಅದಕ್ಕೆ 5-6 ಚಮಚ ಹುಣಸೆ ಹಣ್ಣಿನ ರಸ ಸೇರಿಸಬೇಕು. ಬಳಿಕ ಇದನ್ನು ಸುಮಾರು ಹತ್ತು ನಿಮಿಶಗಳ ತನಕ ಕುದಿಸಬೇಕು. ಈಗ ಗಿರಮಿಟ್ ಮಸಾರೆ ತಯಾರು.

ಕಡಲೆಪುರಿಗೆ ಸ್ವಲ್ಪ ಗಿರಮಿಟ್ ಮಸಾಲೆ, ಚೂರುಮಾಡಿದ ಈರುಳ್ಳಿ, ಟೊಮೆಟೊ, ಕಡಲೆಹಿಟ್ಟು ಸೇರಿಸಿ ಕಲಸಬೇಕು. ಅದಕ್ಕೆ ಸ್ವಲ್ಪ ನಿಂಬೆರಸವನ್ನು ಸೇರಿಸಿ. ಅಲಂಕಾರಕ್ಕೆ ಅದರ ಮೇಲೆ ಸ್ವಲ್ಪ ಈರುಳ್ಳಿ, ಟೊಮೆಟೊ ಚೂರು, ಕೊತ್ತಂಬರಿ ಸೊಪ್ಪು, ಸೇವು ಉದುರಿಸಿದರೆ ಈಗ ಗಿರಮಿಟ್‍ ತಯಾರು. ಜೊತೆಗೆ ನೆಂಚಿಕೊಳ್ಳಲು ಹುರಿದ ಮೆಣಸಿನಕಾಯಿ ಮಾತ್ರ ಮರೀಬೇಡಿ.

(ಮಾಹಿತಿ ಸೆಲೆ: youtube.com)

(ಚಿತ್ರಸೆಲೆ: indianexpress.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Namma Hubballi Durgadbail Girmit andra ahhhaaaa…bahala ruchi..

ಅನಿಸಿಕೆ ಬರೆಯಿರಿ: