ಈ ಸಿನಿಮಾ ಒಂದೊಳ್ಳೆ ಪ್ರಯತ್ನ ಮಾತ್ರವಲ್ಲ ದೊಡ್ಡ ಕೊಡುಗೆಯೂ ಹೌದು!

– ಪ್ರಶಾಂತ್ ಇಗ್ನೇಶಿಯಸ್.

National-Award-Movie-Thithi-Story

’ತಿತಿ’ ಸಿನಿಮಾ ಚಿತ್ರೋತ್ಸವಗಳಲ್ಲಿ ಮಾಡುತ್ತಿದ್ದ ಸದ್ದುಗಳನ್ನು ಗಮನಿಸಿದ್ದು ನಿಜ. ಅಲ್ಲಿ-ಇಲ್ಲಿ ಚಿತ್ರದ ಬಗ್ಗೆ ಓದಿದ್ದೂ ನಿಜ. ಆದರೆ ಚಿತ್ರದ ಬಗ್ಗೆ ಅಶ್ಟೇನು ಆಸಕ್ತಿ ಇರಲಿಲ್ಲ. ಚಿತ್ರದ ಟ್ರೈಲರ್ ಬಂದಾಗಲೂ, ಪುನೀತ್ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದನ್ನು ಗಮನಿಸಿದರೂ, ಯಾವಾಗಲಾದರೂ ನೋಡಿದರಾಯಿತು ಎಂದು ಅನಿಸಿತ್ತು ಅಶ್ಟೇ. ಚಿತ್ರ ಬಿಡುಗಡೆ ಆಗುವವರೆಗೂ ಚಿತ್ರದ ಟ್ರೈಲರ್ ಅನ್ನು ನೋಡಲೂ ಆಗಿರಲಿಲ್ಲ. ಅದೊಂದು ದಿನ ಟ್ರೈಲರ್ ನೋಡುವ ಅವಕಾಶ ಬಂತು. ಎರಡುವರೆ ನಿಮಿಶದ ಆ ತುಣುಕು ನೋಡಿದ ತಕ್ಶಣ ಆದ ಸಂತೋಶವನ್ನು ಬರೆಯಲು ಸಾದ್ಯವಿಲ್ಲ. ಅ ತುಣುಕು ಅದೆಶ್ಟು ಇಶ್ಟವಾಯಿತು ಎಂದರೆ ಮಾರನೆಯ ದಿನವೇ ಚಿತ್ರ ನೋಡಿದೆ. ಮೊದಲ ದ್ರುಶ್ಯದಿಂದಲೇ ಮನಸ್ಸು ಕುಣಿದಾಡತೊಡಗಿತು.

ಇಲ್ಲಿ ಒಂದು ಮಾತನ್ನು ಹೇಳಬೇಕು. ನಾನು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದರೂ ನಮ್ಮ ತಂದೆ, ತಾತನ ಊರು ಕನಕಪುರದ ಹತ್ತಿರದ ಹಾರೋಬೆಲೆ ಎಂಬ ಒಂದು ಹಳ್ಳಿ. ರಜ, ಹಬ್ಬಕ್ಕೆ ಚಿಕ್ಕಂದಿನಿಂದ ಹೋಗುತ್ತಿದ್ದರಿಂದ ಹಳ್ಳಿಯ ಜೀವನ ಪರಿಚಯ ಇದ್ದದ್ದೇ. ಅದರಲ್ಲೂ ಬಾಲ್ಯಕ್ಕಿಂತ ಕಾಲೇಜು ದಿನಗಳ ರಜೆ ಸಮಯದಲ್ಲಿ ಕಳೆಯುತ್ತಿದ್ದ ಎಂಟತ್ತು ದಿನಗಳ ಅನುಬವವಂತು ಮರೆಯಲು ಸಾದ್ಯವೇ ಇಲ್ಲ. ಆಗ ಕಂಡ ಎಶ್ಟೋ ಗಟನೆಗಳು ಮನಸ್ಸಿನಲ್ಲಿ ಆಚ್ಚಳಿಯದೆ ಉಳಿದಿರುವಾಗ ಅಂತದೇ ದ್ರುಶ್ಯಗಳನ್ನು ತೆರೆಯ ಮೇಲೆ ನೋಡಿದಾಗ, ನಮ್ಮದೇ ಅನುಬವಗಳು ನಿರ‍್ದೇಶಕ, ಚಿತ್ರಕತೆ ಬರೆದವರದ್ದೂ ಆಗಿದೆಯಲ್ಲ ಎನ್ನುವ ಸಹಜ ಸಂತೋಶ ನನ್ನದಾಯಿತು.

ಇದೆಲ್ಲಾ ಯಾಕೆ ಹೇಳಬೇಕಾಯಿತು ಎಂದರೆ ತಿತಿ ನೋಡಿದಾಗ ನನಗಾದ ಸಂತೋಶ, ಕುಶಿ ಅನುಬವ ಎಲ್ಲರದೂ ಆಗಬೇಕೆಂದೇನಿಲ್ಲ. ಹಳ್ಳಿಯಲ್ಲೇ ಬೆಳೆದು, ಇನ್ನೂ ಒಡನಾಟ ಇಟ್ಟುಕೊಂಡಿರುವ ಗೆಳೆಯರೊಬ್ಬರು ತಿತಿ ಒಂಚೂರು ಇಶ್ಟವಾಗಲಿಲ್ಲ ಎಂದು ಬರೆದುಕೊಂಡಿದ್ದನ್ನು ನೋಡಿ ಆಶ್ಚರ‍್ಯವಾಯಿತಾದರೂ ನಿರಾಸೆ ಆಗಲಿಲ್ಲ. ಏಕೆಂದರೆ ಇಶ್ಟವಾಗದಿರಲು ಅವರ ಕೊಟ್ಟ ಕಾರಣಗಳೇ ಬೇರೆಯಾಗಿದ್ದವು. ತಿತಿ ಪಿಚ್ಚರ್ ಇಶ್ಟವಾಗಲು ನನಗೊಂದು ಹಿನ್ನಲೆ, ಅನುಬವ ಇದೆಯಾದರೂ, ಅದ್ಯಾವುದೇ ಇಲ್ಲದಿದ್ದರೂ ತಿತಿ ಇಶ್ಟವಾಗಲು ತುಂಬಾ ಕಾರಣಗಳಿವೆ. ಸಾಮಾನ್ಯವಾಗಿ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಿತ್ರಗಳು ಗಂಬೀರವಾಗಿರುತ್ತವೆ, ನಮಂತವರಿಗೆ ಅರ‍್ತವಾಗದ ಸಂದೇಶಗಳಿರುತ್ತವೆ ಎಂಬುದು ಸಾಮಾನ್ಯ ಅನಿಸಿಕೆ. ಆದರೆ ತಿತಿ ತನ್ನ ಮೊದಲ ದ್ರುಶ್ಯದಿಂದಲೇ ಇದನ್ನು ಸುಳ್ಳು ಮಾಡುತ್ತಾ ಹೋಗುತ್ತದೆ. ಚಿತ್ರದಲ್ಲಿ ಬರುವ ಅನೇಕ ದ್ರುಶ್ಯಗಳು ನಮ್ಮ ಹಳ್ಳಿಗಳಲ್ಲಿನ ಜೀವನಕ್ಕೆ ಅದೆಶ್ಟು ಹತ್ತಿರವಾಗಿದೆ ಎಂದರೆ ಅದನ್ನು ಚಿತ್ರ ನೋಡಿಯೇ ಸವಿಯಬೇಕು.

ಮುಂದೆ, ರಿಲೇ ಓಟದಲ್ಲಿ ಒಬ್ಬ ಓಟಗಾರ ಮತ್ತೊಬ್ಬನಿಗೆ ತನ್ನ ಕೋಲನ್ನು ರವಾನಿಸುತ್ತಾ ಸ್ಪರ‍್ದೆಯಲ್ಲಿ ಬಾಗವಹಿಸುವಂತೆ ಚಿತ್ರದಲ್ಲಿ ಬರುವ ಒಂದೊಂದು ಪಾತ್ರವೂ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ, ರಂಜಿಸಿ, ಯೋಚಿಸುವಂತೆ ಮಾಡಿ, ಇನ್ನೂ ಬೇಕು ಎನ್ನುತ್ತಿರುವಂತೆ ಮತ್ತೊಬ್ಬನನ್ನು ಮುಂದೆ ಬಿಟ್ಟು ತಾನು ಸರಿದು ಸಾಗಿ ಮತ್ತೆ ಎಲ್ಲೋ ಬಂದು ಸೇರಿಕೊಳ್ಳುವಂತೆ ಕಾಣಿಸುತ್ತದೆ ಇಲ್ಲಿನ ಪಾತ್ರಗಳ ಪೈಪೋಟಿ. ಟ್ರೈಲರ‍್ನಲ್ಲಿ ’ಗಾಡ್ ಪಾದರ‍್’ ಚಿತ್ರದ ನಿರ‍್ದೇಶಕ ಪ್ರಾನ್ಸಿಸ್ ಕಪ್ಪೋಲ ಅವರು ’ಚಿತ್ರದ ಪಾತ್ರಗಳು ಅವಿಸ್ಮರಣೀಯ’ ಎಂದು ಹೇಳಿರುವ ಮಾತು ನಿಜಕ್ಕೂ ಸತ್ಯ.

ಅದರಲ್ಲೂ ಚಿತ್ರದಲ್ಲಿ ಬರುವ ನಟರು ಯಾರೂ ಪಳಗಿದ ನಟರಲ್ಲ. ಆದ್ದರಿಂದಲೇ ಅವರ‍್ಯಾರೂ ಇಲ್ಲಿ ನಟಿಸಲು ಹೋಗಿಲ್ಲ. ಯಾವುದೋ ಮನೆಯ ಮದುವೆಯ ವಿಡಿಯೋ ಎಂಬಂತೆ ಸುಮ್ಮನೆ ಪಾತ್ರವಾಗಿ ಬಂದು ಹೋಗಿದ್ದಾರಶ್ಟೆ. ನಮ್ಮ ದೊಡ್ಡ ದೊಡ್ಡ ನಿರ‍್ದೇಶಕರ ಚಿತ್ರಗಳಲ್ಲೇ ಒಮ್ಮೊಮ್ಮೆ ಸಣ್ಣ ಸಣ್ಣ ಪಾತ್ರಗಳು ಕೆಟ್ಟದ್ದಾಗಿ ನಟಿಸಿರುವುದನ್ನು ಕಾಣುತ್ತೇವೆ. ಆದರೆ ತಿತಿ ಚಿತ್ರದ ವಿಶೇಶತೆ ಇರುವುದೇ ಈ ಪಾತ್ರವರ‍್ಗದಲ್ಲಿ. ಇಲ್ಲಿ ಚಿತ್ರದ ನಿರ‍್ದೇಶಕರ, ಚಿತ್ರಕತೆ ಬರೆದವರ ಶ್ರಮ, ಜಾಣ್ಮೆ ನಿಜಕ್ಕೂ ಮೆಚ್ಚಬೇಕು. ಚಿತ್ರಕತೆ ಸಂಬಾಶಣೆ ನಿಜ ಜೀವನಕ್ಕೆ ಅದೆಶ್ಟು ಹತ್ತಿರವಾಗಿದೆ ಎಂದರೆ ನಟರು ಬಂದು ತಾವೇ ಪಾತ್ರಗಳಾಗಿ ಹೋಗಿದ್ದಾರೆ ಎನಿಸುತ್ತದೆ. ಆದರೆ ಪ್ರತಿ ಪಾತ್ರವನ್ನು ಯೋಚಿಸಿ, ಅದಕ್ಕೆ ತಕ್ಕ ಪಾತ್ರದಾರಿಯನ್ನು ಹುಡುಕಿರುವ ನಿರ‍್ದೇಶಕರ ಶ್ರಮವನ್ನು ನೆನೆಯಲೇ ಬೇಕು. ತಿತಿ ಕಾರ‍್ಡನ್ನು ಮನೆ ಮನೆಗೆ ಕೊಡಲು ಹೋದಾಗ ಬರುವ ಮನೆಯ ಪಾತ್ರದಾರಿಗಳೂ ಕೂಡ ಅದೆಶ್ಟು ಚೆನ್ನಾಗಿ ಪಾತ್ರವಾಗಿದ್ದಾರೆ ಎಂಬುದು ನಿಜಕ್ಕೂ ಆಶ್ಚರ‍್ಯ. ತಡವಾಗಿ ಓಡಿ ಬರುವ ಬ್ಯಾಂಡ್ ನವನು, ರೇಗುತ್ತಲೇ ಒಲಿವ ನಾಯಕಿ, ಉತ್ತರ ಕರ‍್ನಾಟಕದ ಪಾತ್ರಗಳು, ಕನ್ನಡವನ್ನು ಚೆನ್ನಾಗಿ ಮಾತಾಡುವ ಸೇಟು, ಮಾಂಸದೂಟಕ್ಕೆ ಅಲಿಯುವ ಹಳ್ಳಿಯವ, ಹೆಂಡತಿಗೆ ಹೆದರುವ ಮತ್ತೊಬ್ಬ, ಸಾಲ ಕೊಡುವ ಕಮಲಕ್ಕ, ಗಡ್ಡಪ್ಪನನ್ನು ಕಂಡು ಹಿಡಿಯುವ ಹುಡುಗ, ರಾಗಿ ಮಿಶಿನ್ ಮಾಲೀಕ, ಸಾವಿನ ಮುಂದೆ ಕುಣಿದಾಡುವ ಮುದುಕ… ಹೀಗೆ ಪ್ರತಿ ಪಾತ್ರವೂ ಪ್ರಾನ್ಸಿಸ್ ಕಪ್ಪೋಲರವರು ಹೇಳಿದಂತೆ ನೆನಪಿನಲ್ಲಿ ಉಳಿದುಬಿಡುತ್ತದೆ.

ಇನ್ನೂ, ಸೆಂಚುರಿ ಗೌಡ ತನ್ನದೇ ತಿತಿಯ ನಡುವೆಯೂ ಚಿತ್ರದುದ್ದಕ್ಕೂ ಜೀವಂತವಾಗಿರುತ್ತಾರೆ. ತೀರ ತಮಾಶೆಯ ಮುದುಕನಾಗಿ ಕಾಣುವ ಗೌಡ, ಗಡ್ಡಪ್ಪ ಹೇಳುವ ಒಂದು ಗಟನೆಯಲ್ಲಿ ಬೇರೆಯದೇ ವ್ಯಕ್ತಿತ್ವ ಪಡೆದುಬಿಡುತ್ತಾನೆ. ಇನ್ನು ’ಗಡ್ಡಪ್ಪ’, ಇಲ್ಲಿ ಗಡ್ಡಪ್ಪ ಮಾತ್ರ ಒಂದು ಪಾತ್ರವಾಗದೇ ಆತನ ನೋವು, ನಿರಾಬಾವವನ್ನು ಮುಚ್ಚಿಡುವ ಆತನ ಗಡ್ಡ, ಆತನ ಗೊತ್ತು ಗುರಿಯಿಲ್ಲದ ನಡಿಗೆ, ಆ ನಡಿಗೆಗೆ ಬೇಕಾದ ’ಟೈಗರ‍್’ ಎಲ್ಲವೂ ಇಲ್ಲಿ ಒಂದು ಪಾತ್ರವಾಗಿದೆ. ಗಡ್ಡಪ್ಪನಿಗೆ ವಿರುದ್ದವಾಗಿ ಚೆನ್ನೆಗೌಡ, ಆತನ ಮಗ ಅಬಿಯ ಆಸೆ, ವಾಂಚೆಗಳು ಚಿತ್ರದ ಪ್ರಮುಕ ತಿರುಳಾಗಿ ಕಾಡುತ್ತದೆ.

ಕತೆ ತೀರ ಸಾಮಾನ್ಯ ಆದರೆ ಬಿನ್ನ. ಸೆಂಚುರಿ ಗೌಡರ ಸಾವಿಗೆ, ಅವರ ನಂತರದ ಮೂರು ಪೀಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಬಿಡಿ ಬಿಡಿ ಗಟನೆಗಳ ಮೂಲಕ ಹೇಳುವ ಪ್ರಯತ್ನ ಮಜವಾಗಿದೆ ಹಾಗೂ ಯೋಚಿಸುವಂತೆ ಮಾಡುತ್ತದೆ. ಇಲ್ಲೇ ನಿರ‍್ದೇಶಕ ರಾಮ್ ರೆಡ್ಡಿ ಮತ್ತು ಚಿತ್ರಕತೆ ಬರೆದಿರುವ ಈರೇಗೌಡರವರು ಗೆದ್ದಿರುವುದು. ಡೊರೋನ್ ಟೆಂಪರ‍್ಟ್ ರವರ ಚಾಯಾಗ್ರಹಣ ನಮ್ಮ ಕಣ್ಣಿನ ನೋಟದಶ್ಟೆ ಸಹಜವಾಗಿ ಹಳ್ಳಿಯನ್ನು, ಪಾತ್ರಗಳನ್ನು ಸೆರೆ ಹಿಡಿದಿದ್ದೂ, ಇಲ್ಲದ ಹಳ್ಳಿಯ ಸೊಬಗನ್ನು ತೋರಿಸಲು ಹೋಗಿಲ್ಲ. ಜಾನ್ ಜಿಮ್ಮರ್ ಹಾಗೂ ಸ್ವತಹ ರಾಮ್ ರೆಡ್ಡಿಯವರ ಸಂಕಲನ ಅನವಶ್ಯವಾದದ್ದು ಇಲ್ಲದಿರುವಂತೆ ನೋಡಿಕೊಂಡಿದೆ. ಇದ್ದಿರಬಹುದಾದ ದೀರ‍್ಗ ದ್ರುಶ್ಯಗಳನ್ನು ಮೊಟಕುಗೊಳಿಸಿ, ಚೊಕ್ಕಗೊಳಿಸಿದೆ.

ಅಶ್ಟಕ್ಕೂ ಇದೇನು ಕನ್ನಡದ ಅತ್ತ್ಯುತ್ತಮ ಚಿತ್ರ, ಬಿನ್ನವಾದ ಚಿತ್ರವೇನಲ್ಲ. ಹಾಗಂತ ಚಿತ್ರತಂಡವು ಎಲ್ಲೂ ಹೇಳಿಕೊಂಡಿಲ್ಲ. ಇತರರು ಹೇಳಿದ್ದನ್ನು ತಮ್ಮ ಪ್ರಚಾರದಲ್ಲಿ ಬಳಸಿಕೊಂಡಿದ್ದಾರೆ ಅಶ್ಟೇ. ಆದರೆ ಚಿತ್ರ ತಂಡ ಮಾಡಿರುವ ಕೆಲಸವೇ ಎಲ್ಲವನ್ನೂ ಹೇಳುತ್ತಿದೆಯಶ್ಟೇ. ಕನ್ನಡದ ಮಟ್ಟಿಗಂತೂ ಒಂದು ಉತ್ತಮ ಪ್ರಯತ್ನ ಮಾತ್ರವಲ್ಲ ಕೊಡುಗೆಯೇ. ನಮಗೆ ಈಗ ಬೇಕಾಗಿರುವುದು ಇಂತದೇ ಕಡಿಮೆ ವೆಚ್ಚದ, ಮಣ್ಣಿನ ಗುಣದ, ಮನೋರಂಜನೆಯ, ಹೊಸ ಚಿಂತನೆಯ, ಮನಸ್ಸಿಗೆ ಹತ್ತಿರವಾಗುವ ಚಿತ್ರಗಳು.

ಪುನೀತ್ ಈ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ, ಮನಸಾರೆ ಹೊಗಳಿದ್ದಾರೆ. ಅವರು ಇನ್ನೂ ಮುಂದುವರಿದು ಇಂತಹ ಚಿತ್ರಗಳಲ್ಲಿ ಅಬಿನಯಿಸುವ ಮನಸ್ಸು ಮಾಡಬೇಕು. ಇತರ ದೊಡ್ಡ ನಟರೂ ಕೂಡ, ಆಗ ಕನ್ನಡ ಚಿತ್ರಗಳು ಮಿಂಚಲು ಇನ್ನಶ್ಟು ಸಾದ್ಯವಾಗುತ್ತದೆ.

’ತಿತಿ’ ಮಾಡಿ, ನಮ್ಮನೆಲ್ಲಾ ಕರೆದ ಚಿತ್ರದ ಎಲ್ಲರಿಗೂ ಮನದಾಳದ ಅಬಿನಂದನೆಗಳು.

(ಚಿತ್ರ ಸೆಲೆ: moviearts.in)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks