“ಗೋವಾ”- ಒಂದು ಹಳ್ಳಿ ಜನರ ಪ್ರವಾಸ

– ಸುರೇಶ್ ಗೌಡ ಎಂ.ಬಿ.

goa-bus

 

ಸುಮಾರು ದಿನದಿಂದ ಎಲ್ಲರೂ ಕಾಯುತ್ತಿದ್ದ ದಿನ ಬಂದೇ ಬಿಡ್ತು. ನಮ್ಮೂರಿಂದ, ಸುಮಾರು 50 ಜನ ಟೂರಿಗೆ ಹೊರಟರು. ಇದು ಸಾಮಾನ್ಯ ಟೂರ್ ಅಲ್ಲ. ಯಾಕಂದ್ರೆ, 2 ವರ‍್ಶದಿಂದ ಚೀಟಿ ಹಾಕಿಕೊಂಡು, ದುಡ್ಡನ್ನ ಬೆಳೆಸಿ, ಕೂಡಿಟ್ಟ ಹಣ. ನಮ್ಮೂರ ಜನಕ್ಕೆ ಗೋವಾ ನೋಡಬೇಕೆಂಬುದು ಬಹುದಿನಗಳ ಬಯಕೆ. 10 ವರ‍್ಶದ ಹುಡುಗನಿಂದ, 70 ವರ‍್ಶದ ಮುದುಕನವರೆಗೆ ಎಲ್ಲಾ ಹೋಗೋಕೆ ರೆಡಿ ಆಗವ್ರೆ. ಇದೇ ಈ ಪ್ರವಾಸದ ಹೈಲೈಟು. ಸಂಜೆ 6 ಕ್ಕೆ ಹೊರಡೋದು. ಸಂಜೆ ಹೊರಟು, ಬೆಳಿಗ್ಗೆ ಅನ್ನೋಶ್ಟ್ರಲ್ಲಿ ಗೋವಾ ಸೇರೋದು ಅಂತ ಆಯ್ತು.

ಹೊರಡೋ ದಿನ ಬಸ್ ಸಾಯಂಕಾಲ 6 ಗಂಟೆಗೆ ಬಂತು. ಬಸ್ಸು ನಿಲ್ಲೋಕು ಬಿಡ್ದೆ ದಬ ದಬ ಅಂತ ಜನ ಹತ್ತೋಕೆ ಪ್ರಾರಂಬ ಮಾಡುದ್ರು. ಕಿಟಕಿ ಸೀಟಿಗಾಗಿ ಹೋರಾಟ ಶುರು. ಕೊನೆಗೂ ಕಿಟಕಿ ಸೀಟು ಹಿಡಿದವರು ಪುಣ್ಯವಂತರು, ಸಿಗದವರು ಪಾಪಿಗಳು. ಆದರೆ ಇನ್ನು ಕೆಲವ್ರು ಹೊರ‍್ಟೇ ಇರ‍್ಲಿಲ್ಲ. ಕೆಲವ್ರು ದನ ಕಟ್ಟಿಲ್ಲ, ಈಗ ಹಾಲು ಕರಿತಿದ್ದಿವಿ, ಈ ಡ್ರೈವರ್ ಮನೆಹಾಳ ಯಾಕ್ ಇಶ್ಟ್ ಬೇಗ ಬಂದ ಅಂತಿದ್ರೆ, ಇನ್ನೂ ಕೆಲವ್ರು, ನಾವು ಇನ್ನು ನೀರೆ ಉಯ್ಕಂಡಿಲ್ಲ(ಸ್ನಾನ ಮಾಡಿಲ್ಲ) ಅನ್ನೋರು.

ಪಟೇಲಪ್ಪ ಟ್ರಿಪ್ ಇನ್ಚಾರ‍್ಜು. ಅವನ ಹೆಂಡ್ರೆ ಕಜಾಂಚಿ. ಗೊಣ್ಣೆ ಸೀನ ಮತ್ತು ಅವರ ಟೀಮ್ – ಸ್ವಯಂ ಸೇವಕರು (ಯುವಕರೆಲ್ಲ ಊರು ಬಿಟ್ಟು ಪಟ್ಣ ಸೇರಿದ್ರು. ಊರಲ್ಲಿ ಇದ್ದಿದ್ದೆ ಮೂರು ಮತ್ತೊಂದು ಹುಡುಗರು, ಅವರಿಗೆ ಹೆಡ್ಡು ಈ ಗೊಣ್ಣೆ ಸೀನ). ಈ ಮದ್ಯೆ ಸಿದ್ದಪ್ಪ, ನಿಂಗಮ್ಮ ಕುಟುಂಬಾನೂ ಹೊರಟಿತ್ತು ಟ್ರಿಪ್ಗೆ. ಇವರೋ ವಯಸ್ಸಾದ ಗಂಡ ಹೆಂಡತಿ. ಮನೆಯಲ್ಲಿ ಇಬ್ಬರೇ ಇರೋದು. ಇದ್ದ ಮಕ್ಕಳಲ್ಲಿ, 4 ಹೆಣ್ಣು ಮಕ್ಕಳನ್ನ ದೂರದ ಊರಿಗೆ ಮದುವೆ ಮಾಡಿ ಕೊಟ್ಟಾಗಿದೆ. ಉಳಿದ ಒಬ್ಬನೇ ಮಗ ಬೆಂಗಳೂರಲ್ಲಿ ಏನೋ ಕಡಿದು ಕಟ್ಟೆ ಹಾಕ್ತಾ ಇದ್ದಾನೆ. ಏನು ಅಂತ ಇವ್ರಿಗೂ ಗೊತ್ತಿಲ್ಲ, ಅವ್ನಿಗೂ ಗೊತ್ತಿಲ್ಲ ಬಿಡಿ.

ಸಿದ್ದಪ್ಪನೋ ಗಾಟಿ ಮನುಶ್ಯ. ಯಾವಾಗಲೂ ಅವರಿವರ ಕಾಲೆಳೆಯೋದೆ ಅವನ ಬುದ್ದಿ. ಎಂಜಲು ಕೈಯಲ್ಲಿ ಕಾಗೆ ಓಡಿಸದ ಜಿಪುಣ. ಮಹಾ ಮಾತುಗಾರ.ಮಾತಲ್ಲೇ ಹೊಟ್ಟೆ ತುಂಬ್ಸೋ ಕಿಲಾಡಿ. ಜನ ಇವನನ್ನ, ನೀನು ಬೆಂಗಳೂರಿನಲ್ಲೇನಾದ್ರು ಇದ್ದಿದ್ರೆ ಕರ‍್ನಾಟಕದ ಮುಕ್ಯ ಮಂತ್ರಿ ಆಗ್ತಿದ್ದೆ ಅಂತ ರೇಗ್ಸೋರು. ಇನ್ನು ಇವರ ದರ‍್ಮಪತ್ನಿ ನಿಂಗಮ್ಮನೋ ಮಹಾ ಸಾದ್ವಿ. ಗಂಡನಿಗೆ ತದ್ವಿರುದ್ದ. ಮನೆಗೆ ಬಂದವರಿಗೆ ಬಾಯಿ ತುಂಬಾ ಮಾತಾಡಿಸಿ ಅನ್ನ ಹಾಕದೇ ಕಳಿಸಲ್ಲ ಈ ಮಹಾ ತಾಯಿ. 3 ದಿನಕ್ಕೆ ಆಗೋ ತರಹ, ದನ ಕರುಗಳಿಗೆ, ಹುಲ್ಲು, ನೀರು ಸ್ಟಾಕ್ ಮಾಡಿದ್ದಾಯ್ತು, ಅವುಗಳನ್ನ ನೋಡ್ಕೊಳ್ಳೋಕೆ, ಬೇರೆಯವರಿಗೆ ಹೇಳಿದ್ದು ಆಯ್ತು. ಅಂತು ಇಂತು ಬಸ್ಸು ರಾತ್ರಿ 10 ಗಂಟೆಗೆ ಅಮೋಗ 4 ಗಂಟೆ ತಡವಾಗಿ ಹೊರಡ್ತು. ಈಗ ಎಲ್ಲರ ಚಿತ್ತ ಗೋವಾದತ್ತ.

ಊರು ದಾಟಿ ಅರ‍್ದ ಗಂಟೆ ಆಗಿರಲಿಲ್ಲ. ಆಗ್ಲೆ ಪಿಟ್ಲು ವ್ಯಾ ಅಂದ. ಟ್ರಿಪ್ ಗೆ ಹೋಗೊ ಕುಶಿಲಿ, ತಿಂಗಳು ಮುಂಚೆ ಮಾಡಿದ್ದ ಕರ‍್ಕ್ಲು ಮುರ‍್ಕ್ಲು ತಿಂಡಿ ತಿಂದು ಕಿಸ್ಕಂಡಿದ್ದ. ಪಟೇಲಪ್ಪಂಗೆ ಸರಿಯಾಗಿ ಕೋಪ ಬಂದು, ಯತ್ತಕ್ರಲಾ ಇವ್ನ ಆಚ್ಕೆ, ಹೊರಟ್ತಿದಂಗೆ ವಾಂತಿ ಮಾಡವ್ನೆ ಬಡ್ಡಿಮಗ ಅಂತ ಬೈಯ್ಕೊಂಡು ಹೊರ‍್ಟ್ರು. ಹುಡುಗ್ರು ರಾತ್ರಿಯಲ್ಲ ಕುಣ್ದು ಕುಪ್ಪುಳಿಸಿದ್ವು. ಅಂತು ಇಂತು ಬೆಳಿಗ್ಗೆ 8 ಗಂಟೆಗೆ ಗೋವಾ ಹತ್ತತ್ರ ತಿಂಡಿಗೆ ಅಂತ ಬಸ್ ನಿಲ್ಸುದ್ರು. ಹೊಟ್ಟೆ ಹಸಿತದೇ ಅಂತ ಕೆಲವ್ರು ಇಳ್ದು ಹೋಟ್ಲು ಕಡೆ ಓಡೋದ್ರೆ, ಇನ್ನು ಕೆಲವ್ರು ಕೆರೆ ಕಡೆ ಹೋಗ್ಬರ‍್ತಿವಿ ತಡಿರ‍್ಲಾ ಅಂತ ಬೈಲ್ ಕಡೆ ಓಡೋಗವು. ತಿಂಡಿ ತಿಂದು ಮುಗ್ಸೋಶ್ಟರಲ್ಲಿ 10 ಗಂಟೆ ಆಯ್ತು. ಗೋವಾ ಬಂತು ಅನ್ನೊ ಕುಶಿಗೆ ಬಡ್ಡೆತ್ತವು ಕೇಕೇ ಹಾಕಿದ್ವು.

ಮೊದಲನೇ ದಿನಾನೆ ಕೋಲ್ವ ಬೀಚ್. ರಾತ್ರಿಯಿಡೀ ಜರ‍್ನಿ, ಸುಸ್ತು. ಎಲ್ರೂ ಬೀಚಲ್ಲಿ ಒದ್ದಾಡುದ್ರು. ಪಟೇಲಪ್ಪ “ಹುಶಾರು ಕಂಡ್ರಲ, ಬೀಚಲ್ಲೇ ನಿಗ್ರುಕಂಡ್ರೆ, ನಾನ್ ಮಾತ್ರ ಹೆಣ ಊರಿಗೆ ತಗೊಂಡೋಗಲ್ಲ, ಇಲ್ಲೇ ಮರಳಲ್ಲಿ ಮುಚ್ಚುತಿನಿ” ಅನ್ನೋನು. ಸಂಜೆಗಂಟ ಬೀಚಲ್ಲೇ ಒದ್ದಾಡ್ದೋ. ವಾಪಸ್ ಬರಾಕೆ ಯಾರು ತಯಾರಿಲ್ಲ. ಎಲ್ಲ ಇಲ್ಲೆ ಬಿದ್ದು ಸಾಯ್ರಿ ಅಂತ ಪಟೇಲಪ್ಪ ಹೆಂಡ್ರು ಜತೆ ಹೊರ‍್ಟ. ಸಂಜೆಗೆ ಹೊತ್ತು ಮುಳುಗ್ತಿದೆ ಇವಾಗದ್ರು ಬನ್ರೋ ಅಂತ ಎಲ್ಲಾರ‍್ನೂ ಹೊರ‍್ಡ್ಸಿ, ದೊಡ್ ದೊಂದು ಚತ್ರದಲ್ಲಿ ಎಲ್ಲಾರ‍್ಗೂ ಮಲ್ಗಾಕೆ ವ್ಯವಸ್ತೆ ಮಾಡ್ದ. ರಾತ್ರಿ ಉಂಡು ಮಲಗ್ದೋ. ನೆನ್ನೆ ರಾತ್ರಿ ನಿದ್ದೆ ಇಲ್ಲ. ಬೆಳಿಗ್ಗೆಯಿಂದ ಬೇರೆ ಚೆನ್ನಾಗಿ ಕುಣ್ದವೇ. ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಕಿಸ್ಕಂಡೋ. ಅಂತು ಇಂತು ಒಂದಿನ ಮುಗಿತು. ಇನ್ನು 2 ದಿನ ಉಳ್ದವೇ.

ಎರಡನೇ ದಿನ ಅಂತು ಇಂತು ಎಲ್ಲಾ ಎದ್ದು, ತಿಂಡಿ ತಿಂದು ಹೊರಡುವಶ್ಟರಲ್ಲಿ 10 ಗಂಟೆ. ಪಟೇಲಪ್ಪ ಬೈತಾ ಇದ್ದ. ಊರು ನೋಡೋಕೆ ಬಂದು ಇಶ್ಟೊತ್ತು ಮಾಡುದ್ರೆ ಹೆಂಗ್ರಲಾ ಅಂತಿದ್ದ. ಅಂತು ಇಂತು ಅಲ್ಲಿಂದ ಹೊರಟ ನಮ್ಮೂರ ಮಂದಿ ಸಿರಿದಾವೊ, ವಾಗತೋರ್ ನೋಡ್ಕೊಂಡು ಅವತ್ತಿನ ದಿನ ಮುಗಿಸಿ ಮರುದಿನ ಸೆಂಟ್ ಪಿಲೋಮಿನ ಚರ‍್ಚ್ ಗೆ ಬಂದ್ರು. ಅವರ ಅದ್ರುಶ್ಟಕ್ಕೆ ಅವತ್ತು ಪಾದ್ರಿಯ ಕಳೇಬರಾನ ನೋಡುಗರಿಗೆ ಮುಕ್ತವಾಗಿ ಇಟ್ಟಿದ್ರು. ನಮ್ಮೂರ್ ಪಟೇಲಪ್ಪ ಬುದ್ದಿವಂತ ಎಲ್ಲರಿಗೂ ಹೇಳ್ದ – “ಲೋ ನೋಡ್ರುಲಾ ಇದು ಸುಮಾರು ವರ‍್ಶದಿಂದ ಈ ಹೆಣನಾ ಹಿಂಗೆ ಇಟ್ಟವ್ರೆ, ಒಂಚೂರು ಕೆಟ್ಟಿಲ್ಲ.ಏನು ಆಗಿಲ್ಲ”.

ಅದಕ್ಕೆ ನಮ್ ಸ್ವಯಂಸೇವಕ ಸೀನ “ಉಗಿರಿ ಮಕ್ಕೆ ಇವಕ್ಕೆ, ಹೆಣ ಮನೆಲಿ ಮಡಿಕತರಾ? ಆವಯ್ಯನ ಆಸೆ ಏನಿತ್ತೊ ಏನೋ, ತೀರ‍್ಸಿ, ಮುಕ್ತಿ ಕಾಣ್ಸದ್ ಬಿಟ್ಟು ಹೆಣನ ತೆಗ್ಯದು ಒಳಕ್ಕೆ ಮಡಿಕಳದು, ತೆಗ್ಯದು ಒಳಕ್ಕೆ ಮಡಿಕಳದು ಮಾಡ್ತಾ ಅವ್ರೆ” ಅಂತ ಅಂದ. ಅದಕ್ಕೆ ನಿಂಗಮ್ಮ “ಯಾರೋ ಅವರ ಕಡೆಯವರು ಬರ‍್ಬೇಕೇನೋ, ಬಂದು ಮುಕ ನೋಡ್ಬುಡ್ಲಿ, ಆಮೇಲೆ ನಾವು ಇದ್ದು ಮಣ್ ಮುಗುಸ್ಕಂಡ್ ಹೋಗಾವ” ಅಂತ ಅಂತು. ಪಟೇಲಪ್ಪ ತಲೆ ತಲೆ ಚಚ್ಕಂಡು “ಅಯ್ಯೋ ಮಂಕ್ ಮುಂಡೇವಾ. ಅದು ಪಾದ್ರಿದು, ದೇವರ ತರಹ ಇಟ್ಕಂಡವ್ರೆ, ಮುಚ್ಕಂಡು ನಡಿರಿ” ಅಂತ ಹೊರಡುಸ್ತಾ. ಯಾರ‍್ಗೂ ಅರ‍್ತ ಆಗ್ಲಿಲ್ಲ. ಆದ್ರು ಪಟೇಲಪ್ಪನ ಬಾಯಿಗೆ ಹೆದರಿ ಎಲ್ರೂ ಅಲ್ಲಿಂದ ಹೊರಟ್ರು.

ಅಲ್ಲೇ ಪಕ್ಕದಲ್ಲಿ “ಮ್ಯೂಸಿಯಂ” ಇತ್ತು. ಮ್ಯೂಸಿಯಂ ಹುಡ್ಗ ಬಲವಂತವಾಗಿ ಎಲ್ಲಾರ‍್ನೂ ಮ್ಯೂಸಿಯಂ ನೋಡೋಕೆ ಕರೀತಿದ್ದ. ನಿಂಗವ್ವ ನೋಡ್ಬೇಕು ನಾನು ಇದ್ನ ಅಂತ ತುಂಬಾ ಆಸೆ ಪಟ್ತು. ಪಟೇಲಪ್ಪ ಆಯ್ತು ಅಂತ ಕರ‍್ಕಂಡ ಹೋದ. ಒಬ್ರಿಗೆ 100 ರೂಪಾಯಿ ಟಿಕೇಟು.. ಟಿಕೆಟ್ ತಗೊಂಡು ಒಳಗೆ ಹೋದ್ರು. ಬರೀ ಪಾರಿನರ‍್ಸ್ ಅವ್ರೆ… ವ್ಹಾವ್. Beautiful..amazing art.. marvelous… ಅಂತ ಇಂಗ್ಲಿಶ್ ನವರು ಹೇಳ್ತಾವ್ರೆ. ಇವ್ರು ನೋಡುದ್ರು. ಒಂದು ಕ್ಶಣ ಶಾಕ್ ಆಗೋದ್ರು. ಏನ್ ಹೇಳ್ಬೇಕು ಅಂತ ಗೊತ್ತಾಗ್ದೆ ತಡಬಡಿಸುತ್ತಿದ್ದಾರೆ.

ಎಲ್ಲಾ ಮುಗುಸ್ಕೊಂಡು ಆಚೆ ಬಂದು ಬಸ್ ಹತ್ತಿ ಊರಿನ ಕಡೆ ಹೊರಟ್ರು. ಎಲ್ರೂ ಇವರನ್ನ ಕೇಳ್ತಾ ಅವ್ರೆ, ಹೇಗಿತ್ತು ಮ್ಯೂಸಿಯಂ? ಏನೇನ್ ನೋಡುದ್ರಿ? ಅಂತ. ಆದ್ರೆ ಪಟೇಲಪ್ಪ, ಅವನ ಹೆಂಡ್ರು ಮಾತ್ರ ಬಾಯಿ ಬಿಡ್ತಿಲ್ಲ. ಊರಿಗೆ ಮದ್ಯ ರಾತ್ರಿ ತಲುಪುದ್ರು. ನಮ್ಮೂರ್ ಜನ ಯಾಕೋ ಬಿಡಂಗೆ ಕಾಣ್ತಿಲ್ಲ ಅಂತ ನಿಂಗವ್ವ ಬಾಯಿ ಬಿಟ್ರು.

“ಅಯ್ಯೊ ಮುಂಡೆ ಮಕ್ಕಳು 100 ರೂಪಾಯಿ ಒಬ್ಬಬ್ರಿಗೆ ತಗಂಡು ನಮಗೆ ಹೊಲ ಉಳೋ ರೈತನ ಚಿತ್ರ, ಹಾಲು ಕರೆಯೋದು, ಬಿತ್ತನೆ ಮಾಡೋದು, ಕಣ ಮಾಡೋದು, ದನ ಕುರಿ ಕಾಯೋದು, ಟ್ರಾಕ್ಟರ್ ಹೊಡೆಯೋದು, ಮೀನು ಹಿಡಿಯೋದು, ಚಪ್ಪಲಿ ಹೊಲೆಯೋದು, ಒಟ್ನಲ್ಲಿ ಹಳ್ಳಿ ಚಿತ್ರ ಇರೋ ಗೊಂಬೆಗಳನ್ನ ತೋರ‍್ಸ್ರು ಕಣವ್ವ. ಅದನ್ನ ನೋಡೋಕೆ ನಾವು ಇಲ್ಲಿಂದ ಅಲ್ಲಿಗಂಟ ಹೋಗ್ಬೇಕಾಗಿತ್ತಾ? ಅಯ್ಯೋ ನಮ್ ಬುದ್ದಿಗಿಶ್ಟು. ನಮ್ಮ ಹಳ್ಳಿನ ನಮಗೆ ತೋರ‍್ಸುದ್ರಲ್ಲಪ್ಪೋ. ಗೋವ ಅಂದ್ರೆ ಎನೇನೋ ಅಂದ್ಕಂಡಿದ್ದೆ. ಬೇರೆ ದೇಶ ಅಂತ ಅಂದ್ಕಂಡಿದ್ದೆ. ಅಲ್ಲೂ ನಮ್ಮಂಗೆ ವ್ಯವಸಾಯ ಮಾಡೋದೆ ತಗ. ಅವ್ರ ಬಾಯಿಗೆ ಮಣ್ಣಾಕ” ಅಂತ ನಿಂಗವ್ವ ಅಂದ್ಲು.

ಎಲ್ರೂ ಗೊಳ್ ಅಂತ ನಗೋಕೆ ಶುರು ಮಾಡುದ್ರು. ಇನ್ನು ಮುಂದಿನ ಟ್ರಿಪ್ ಹೋಗೋವರೆಗೂ ಇದೇ ಮಾತು. ಇದೇ ಕತೆ. ನಿಂಗವ್ವ ಈಗ ಮ್ಯೂಸಿಯಂ ನಿಂಗವ್ವ ಅಂತ ಪೇಮಸ್ ಆಗೋದ್ಲು.

( ಚಿತ್ರ ಸೆಲೆ: printablecolouringpages.co.uk )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: