ಅಳಿಲುಗಳ ಬಗ್ಗೆ ಗೊತ್ತಿರಬೇಕಾದ ಕೆಲವು ಸಂಗತಿಗಳು

– ನಾಗರಾಜ್ ಬದ್ರಾ.

ಅಳಿಲುಗಳು ಮನೆ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ಸಾಮಾನ್ಯ ಹಾಲೂಡಿ (mammal), ಹಾಗಾಗಿ ಇವುಗಳನ್ನು ನೋಡಿಲ್ಲ ಎನ್ನುವವರಿಲ್ಲ. ಹಾಲೂಡಿ ವರ‍್ಗದ ಪ್ರಾಣಿಗಳಲ್ಲೇ ಅತ್ಯಂತ ಚೂಟಿಯಾದ ಪ್ರಾಣಿಗಳಿವು. ಸಾಮಾನ್ಯವಾಗಿ ಇವು ಗಿಡಮರಗಳಲ್ಲಿ ನೆಲೆಸುತ್ತವೆ. ಹುಲ್ಲು ಹಾಗೂ ತುಂಬಾ ಚಿಕ್ಕ ಕಟ್ಟಿಗೆಗಳನ್ನು ಬಳಸಿ ಗಿಡಮರಗಳ ಎತ್ತರದ ತುದಿಗಳಲ್ಲಿ ತಮ್ಮ ಗೂಡನ್ನು ಕಟ್ಟಿ ಬದುಕು ನಡೆಸುತ್ತವೆ. ಒಣಬೀಜ ಹಾಗೂ ಹಣ್ಣುಗಳನ್ನಲ್ಲದೇ ನಾವು ತಿನ್ನುವ ಊಟ, ಚಿಕ್ಕಚಿಕ್ಕ ಹಕ್ಕಿಗಳು, ಮರಿಹುಳ ಹಾಗೂ ಕೀಟ ಮುಂತಾದವುಗಳನ್ನು ಕೂಡ ಅಳಿಲುಗಳು ತಿನ್ನುತ್ತವೆ. ಇವುಗಳ ಬಗ್ಗೆ ಹೆಚ್ಚು ತಿಳಿಯುತ್ತಾ ಹೋದಂತೆ ಹಲವಾರು ಕುತೂಹಲಕಾರಿ ಸಂಗತಿಗಳು ನಮಗೆದುರಾಗುತ್ತವೆ.

ಸುಮಾರು 200 ಕ್ಕಿಂತ ಹೆಚ್ಚಿನ ಜಾತಿಯ ಅಳಿಲುಗಳಿವೆ!

ಇವು ಸ್ಕಿಯುರಿಡೆ (Sciuridae) ಎಂಬ ಕುಟುಂಬಕ್ಕೆ ಸೇರಿದ್ದು, ವಿಶ್ವದಾದ್ಯಂತ ಸುಮಾರು 200 ಕ್ಕಿಂತ ಹೆಚ್ಚಿನ ಜಾತಿಗಳನ್ನು ಹೊಂದಿವೆ. ಅಂಟಾರ‍್ಟಿಕಾ ಹಾಗೂ ಆಸ್ಟ್ರೇಲಿಯಾ (Antarctica and Australia) ಪೆರ‍್ನೆಲಗಳನ್ನು (continent) ಹೊರತುಪಡಿಸಿ ವಿಶ್ವದಾದ್ಯಂತ ಎಲ್ಲಾ ಕಡೆಯಲ್ಲಿಯೂ ಇವು ಕಂಡುಬರುತ್ತವೆ.

ಕೆಲವು ಅಳಿಲುಗಳು ಹಕ್ಕಿಯ ಹಾಗೆ ಹಾರಬಲ್ಲವು!

ಹಕ್ಕಿಗಳು ಹಾರಾಡುವ ಬಗ್ಗೆ ನಮಗೆ ತಿಳಿದಿತ್ತು. ಆದರೆ ಅಳಿಲುಗಳು ಕೂಡ ಹಾರಾಡಬಲ್ಲವು ಎಂಬುದು ಹೆಚ್ಚಿನ ಮಂದಿಗೆ ತಿಳಿದಿರುವುದಿಲ್ಲ. ಹೌದು, ಕೆಲವೊಂದು ಬಗೆಯ ಅಳಿಲುಗಳು ಹಾರಾಡಬಲ್ಲವು. ಆದರೆ ಇವುಗಳು ಹಕ್ಕಿಗಳ ಹಾಗೆ ತುಂಬಾ ಎತ್ತರಕ್ಕೆ ಹಾರಾಡುವುದಿಲ್ಲ, ಬದಲಿಗೆ ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರುತ್ತವೆ. ಇವು ಸುಮಾರು 90 ಮೀಟರ್ ಗಳಶ್ಟು ದೂರದವರೆಗೆ ಹಾರಬಲ್ಲವು. ವಿಶ್ವದಾದ್ಯಂತ 44 ಬಗೆಯ ಹಾರಾಡುವ ಅಳಿಲುಗಳಿದ್ದು, ಇವುಗಳು ಬಡಗಣ ಯುರೇಶಿಯಾದಲ್ಲಿ, ಬಡಗಣ ಅಮೆರಿಕಾದ ಮೆಕ್ಸಿಕೋ ನಗರದಲ್ಲಿ, ನಡುವಣ ಅಮೆರಿಕಾದಲ್ಲಿ, ಇಂಡಿಯಾ ಹಾಗೂ ತೆಂಕುವೂಡಣ (southeast) ಏಶ್ಯಾದ ಮಳೆಕಾಡುಗಳಲ್ಲಿ ಕಂಡುಬರುತ್ತವೆ.

ಅಳಿಲುಗಳನ್ನು ಹಲವು ಗುಂಪುಗಳಾಗಿ ವಿಂಗಡಿಸಲಾಗಿದೆ;

 • ಮರದಳಿಲುಗಳು (tree Squirrels)
 • ನೆಲದಳಿಲುಗಳು (Ground Squirrels)
 • ಚಿಪ್‍ಮಂಕ್ಸ್(chipmunks)
 • ಮಾರ‍್ಮೊಟ್ಸ್(marmots)
 • ಹಾರುವ ಅಳಿಲುಗಳು (flying squirrels)
 • ಹರಹಿನ ಹುಲ್ಲುಗಾವಲಿನ ನಾಯಿಗಳು (prairie dogs)

ಇಂಡಿಯಾದ ನಗರ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಅಳಿಲುಗಳು ಚಿಪ್‍ಮಂಕ್ಸ್(chipmunks) ಎಂಬುವ ಗುಂಪಿಗೆ ಸೇರಿದ್ದು ಇವುಗಳನ್ನು ಇಂಡಿಯನ್ ಪಾಮ್ ಅಳಿಲು (Indian palm squirrel) ಎಂದೂ ಕರೆಯುತ್ತಾರೆ.

ಅಳಿಲುಗಳು ವಿಶಿಶ್ಟ ಮೈ ರಚನೆಯನ್ನು ಹೊಂದಿವೆ!

ಸಾಮಾನ್ಯವಾಗಿ ಎರಡು ಕಣ್ಣುಗಳು, ಎರಡು ಕಿವಿಗಳು, ಮೂರು ಜೋಡಿ ಹಲ್ಲುಗಳು, ನಾಲ್ಕು ಕಾಲುಗಳು ಹಾಗೂ ಒಂದು ಕುರುಚಲು (bushy tail) ಬಾಲವನ್ನು ಇವು ಹೊಂದಿವೆ. ಮುಂಬದಿಯ ಎರಡು ಕಾಲುಗಳು ತುಂಬಾ ಚೂಪಾಗಿರುವ ನಾಲ್ಕು ಕಾಲ್ಬೆರಳುಗಳನ್ನು ಹೊಂದಿದ್ದು, ಅವುಗಳು ಮರವನ್ನು ಹತ್ತಲು ಸಹಾಯ ಮಾಡುತ್ತವೆ. ಹಿಂಬದಿಯ ಎರಡು ಕಾಲುಗಳು ಐದು ಕಾಲ್ಬೆರಳುಗಳನ್ನು ಹೊಂದಿದ್ದು ಅವುಗಳು ಕಾಲ್ನಡಿಗೆಯಲ್ಲಿ ನೆರವಾಗುತ್ತವೆ. ಹಾರಾಡುವ ಅಳಿಲುಗಳ ಮೈಯ ರಚನೆಯಲ್ಲಿ ಸ್ವಲ್ಪ ಬದಲಾವಣೆಗಳಿವೆ. ಇವುಗಳ ಎರಡು ಬದಿಯ ಕಾಲುಗಳು ತೊಗಲಿನಿಂದ ಅಂಟಿಕೊಂಡಿರುತ್ತವೆ.

ಇವು ಸುಮಾರು 30 ಅಡಿ ಎತ್ತರದಿಂದ ಬಿದ್ದರು ಬದುಕುಳಿಯುತ್ತವೆ!

ಸಾಮಾನ್ಯವಾಗಿ ಅಳಿಲುಗಳಿಗೆ ಸುಮಾರು 30 ಅಡಿ ಎತ್ತರದಿಂದ ಬಿದ್ದರು ಏನಾಗುವುದಿಲ್ಲ. ಇವುಗಳ ಬಾಲವು ಎತ್ತರದಿಂದ ಬೀಳುವಾಗ ಅದರ ಮೈಯನ್ನು ಸರಿದೂಗಿಸುವುದಲ್ಲದೇ ಗಾಳಿಕೊಡೆ(parachute)ಯ ಹಾಗೆ ಕೆಲಸ ಮಾಡುತ್ತದೆ. ಇದರಿಂದಾಗಿ ಎತ್ತರದಿಂದ ಬಿದ್ದಾಗ ಆಗುವ ಕೆಡುಕಿನಿಂದ ಪಾರಾಗುತ್ತವೆ.

ಇರುವೆಯ ಹಾಗೆ ಅಳಿಲುಗಳು ಕೂಡ ತಿಂಡಿತಿನಿಸುಗಳನ್ನು ಕೂಡಿಡುತ್ತವೆ

ತಿಂಡಿತಿನಿಸುಗಳನ್ನು ಕೂಡಿಡುವುದು ಕೆಲವೊಂದು ಬಗೆಯ ಅಳಿಲುಗಳ ಒಂದು ಮುಕ್ಯ ನಡವಳಿಕೆ ಆಗಿದೆ. ಇವುಗಳು ಚಳಿಗಾಲದಲ್ಲಿ ಚಟುವಟಿಕೆಯಿಂದ ಇರುವುದಿಲ್ಲ, ಅದರ ಬದಲಿಗೆ ತುಂಬಾ ಸಮಯದವರೆಗೆ ನಿದ್ದೆ ಮಾಡುತ್ತವೆ. ಆದ್ದರಿಂದ ಇವುಗಳು ಚಳಿಗಾಲದಲ್ಲಿ ಊಟಕ್ಕೆ ಬೇಕಾಗುವ ತಿಂಡಿತಿನಿಸುಗಳನ್ನು ಮೊದಲೇ ಕೂಡಿಡುತ್ತವೆ. ಇಂಡಿಯಾದಲ್ಲಿ ಕಂಡುಬರುವ ಅಳಿಲುಗಳು ಚಳಿಗಾಲದಲ್ಲಿಯು ಕೂಡ ಚಟುವಟಿಕೆಯಲ್ಲಿರುತ್ತವೆ.

ಇನ್ನಶ್ಟು ಅಳಿಲಿನ ಸಂಗತಿಗಳು…

 • ಇವು ಸಾಮಾನ್ಯವಾಗಿ 7 ರಿಂದ 8 ಇಂಚುಗಳಶ್ಟು ಉದ್ದ ಹಾಗೂ 10 ಕೆ.ಜಿ. ಗಳಶ್ಟು ತೂಕವನ್ನು ಹೊಂದಿರುತ್ತವೆ.
 • ಹೆಣ್ಣಳಿಲು ಇರುವ ಜಾಗವನ್ನು ಸುಮಾರು 1 ಮೈಲಿ ದೂರದಿಂದಲೇ ಗಂಡಳಿಲು ಕಂಡುಹಿಡಿಯಬಲ್ಲದು. ಹೆಣ್ಣಳಿಲಿನ ಮೈ ವಾಸನೆಯನ್ನು 1 ಮೈಲಿ ದೂರದಿಂದಲೇ ಗುರುತಿಸಿ ಅದರ ಜಾಗವನ್ನು ಗಂಡಳಿಲು ಪತ್ತೆ ಮಾಡುತ್ತದೆ.
 • ಹೆಣ್ಣಳಿಲು ಒಂದು ಸಲಕ್ಕೆ 1 ರಿಂದ 5 ಮರಿಗಳಿಗೆ ಹುಟ್ಟನ್ನು ನೀಡಬಲ್ಲದು. ಸುಮಾರು 34 ರಿಂದ 45 ದಿನಗಳವರೆಗೆ ತಾಯಿಯ ಬಸುರಿನಲ್ಲಿ ಮರಿಗಳಿರುತ್ತವೆ.
 • ಊರುಗಳಲ್ಲಿ ಕಂಡುಬರುವ ಅಳಿಲುಗಳು ಸುಮಾರು 6 ವರುಶಗಳ ಕಾಲ ಬದುಕುತ್ತವೆ. ಆದರೆ ಕಾಡುಗಳಲ್ಲಿ ಕಂಡುಬರುವವು 2 ರಿಂದ 4 ವರುಶಗಳ ಕಾಲ ಮಾತ್ರ ಬದುಕುತ್ತವೆ.
 • ಇವು ಓಟದಲ್ಲಿ ಉಸೇನ್ ಬೋಲ್ಟ್ ಗಿಂತ ಕೊಂಚ ನಿದಾನ. ಉಸೇನ್ ಬೋಲ್ಟ್ ಪ್ರತಿ ಗಂಟೆಗೆ 28 ಮೈಲಿಗಳಶ್ಟು ವೇಗವಾಗಿ ಓಡಬಲ್ಲ. ಆದರೆ ಅಳಿಲುಗಳು ಪ್ರತಿ ಗಂಟೆಗೆ ಸುಮಾರು 20 ಮೈಲಿಗಳಶ್ಟು ವೇಗವಾಗಿ ಓಡುತ್ತವೆ.
 • ತಮಗೆ ಹಾನಿ ಉಂಟು ಮಾಡಬಹುದಾದ ಯಾವುದಾದರೂ ಪ್ರಾಣಿ ಅತವಾ ಹಕ್ಕಿಯನ್ನು ಕಂಡ ಕೂಡಲೇ “ಚಿಪ್ ಚಿಪ್ ಚಿಪ್” ಎಂಬ ವಿಶಿಶ್ಟ ಸಪ್ಪಳವನ್ನು ಮಾಡಿ ತನ್ನ ಬಳಗಕ್ಕೆ ಎಚ್ಚರವನ್ನು ನೀಡುವುದರಲ್ಲಿ ಅಳಿಲುಗಳು ಎತ್ತಿದ ಕೈ.

(ಮಾಹಿತಿ ಸೆಲೆ: www.thefactsite.comen.wikipedia.orgbritannica.comsoftschools.comwhatdosquirrelseat.orga-z-animals.comnationalgeographic.com)

(ಚಿತ್ರ ಸೆಲೆ: wiki, pixabay, flickr.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: