ತುಂತುರು ಕತೆಗಳು

ಪ್ರಿಯದರ‍್ಶಿನಿ ಶೆಟ್ಟರ್.

ಓದುಗ

ಆತ ಕತೆಯೊಂದನ್ನು ಓದುತ್ತಿದ್ದ. ಕತೆ ಬರೆದ ಲೇಕಕರನ್ನು ಹೊಗಳುತ್ತಲೇ ಓದನ್ನು ಮುಂದುವರೆಸಿದ. ಆ ಕತೆ ‘ತನ್ನ ಜೀವನಕ್ಕೆ ಬಹಳ ಹತ್ತಿರ’ ಎಂದುಕೊಂಡ. ಕಾರಣ, ಕತೆಯೊಳಗಿನ ಪಾತ್ರ ಇವನನ್ನೇ ಹೋಲುತ್ತಿತ್ತು. ಕತೆಯ ದ್ರುಶ್ಯಗಳು ಈತನ ಬದುಕಿನ ಸಂದರ‍್ಬಗಳಾಗಿದ್ದವು. ಕತೆ ಮುಗಿಯುತ್ತ ಬಂತು. ಕೊನೆಯ ಪುಟ ಓದಿ ಮುಗಿಸಿದ. ಸಿಟ್ಟಿಗೆದ್ದು ಆ ನೆಚ್ಚಿನ ಪುಸ್ತಕವನ್ನು ಎತ್ತಲೋ ಎಸೆದ. ಏಕೆಂದರೆ ಕತೆ ಸುಕಾಂತ್ಯ ಕಂಡಿತ್ತು; ಈತನ ಜೀವನದ ಗಟನೆಗಳೆಶ್ಟೋ ದುಕ್ಕಾಂತ್ಯ ಕಂಡಿದ್ದವು

ರುಚಿ

ಮನೆಯಲ್ಲಿ ನಾಗರಪಂಚಮಿ ಹಬ್ಬದ ಸಂಬ್ರಮ; ಬೆಲ್ಲ-ಸಕ್ಕರೆಯ ಗಮ. ಮಾಮೂಲಿಯಂತೆ ಜಗಳಾಡುತ್ತ, ಎದುರುವಾದಿಸುತ್ತ, ಬೈಸಿಕೊಳ್ಳುತ್ತ, ನಾಲ್ಕೈದು ತರಹದ ಉಂಡಿಗಳು ಸಿದ್ದವಾದವು. ಸಂಜೆಯಾಗುವುದನ್ನೇ ಕಾಯುತ್ತ, ನಾಗಪ್ಪಗೆ ಹಾಲು ಹಾಕುವುದನ್ನೇ ಎದುರುನೋಡುತ್ತಿವೆ ಕಣ್ಣುಗಳು. ಕಾರಣ ಎಲ್ಲ ತರಹದ ಉಂಡಿಗಳ ರುಚಿನೋಡಿದ ನಾಲಿಗೆಗೆ ತಂಬಿಟ್ಟನ್ನು ತಿಂದು ಬಳಿಕ ಕೈನೆಕ್ಕುವ ಅವಸರ. ಆದರೆ, ತಂಬಿಟ್ಟನ್ನು ಬಾಯ್ಗಿಟ್ಟ ಕೂಡಲೇ ಹುಬ್ಬುಗಳು ಗಂಟಿಕ್ಕಿ ಸಿಹಿಯಿಲ್ಲದ, ಕೊಬ್ಬರಿಯನ್ನೇ ಕಾಣದ ತಂಬಿಟ್ಟಿನ ರುಚಿಯನ್ನು ತಿಳಿಸಿದ್ದವು !

ಬಯ- ಬಕ್ತಿ

ಬಕ್ತಿಯಿಂದ ದೇವರ ಪೋಟೋ ಮುಂದೆ ಕೈಮುಗಿದು ನಿಂತಿದ್ದೆ. ನಾಳೆ ಪರೀಕ್ಶೆ, ಅದರ ಬಯ. ಪೋಟೋ ಮುಟ್ಟಿ ನಮಸ್ಕರಿಸಿದೆ. ಅದರ ಹಿಂದಿದ್ದ ಹಲ್ಲಿ ಹೊರ ಓಡಿ ಬಂದಾಗ, ಹಲ್ಲಿಯಂತೆ ಕಾಲುಗಳು ಓಡಿದವು ! ದೇವರ ಮುಂದಿನ ದೂಪದ ಹೊಗೆಯಂತೆ ಬಯ- ಬಕ್ತಿಗಳು ಗಾಳಿಯಲ್ಲಿ ಸೇರಿದ್ದವು !!

ಆಬರಣ

ಮನೆ ಮುಂದಿನ ದಾಸವಾಳದ ಗಿಡದಲ್ಲಿ ಜೇಡರಬಲೆ ಕಟ್ಟಿದೆ. ಮಳೆ ಆಗಿ ಹೋದ ಕಾರಣ ನೀರಿನ ಹನಿಗಳು ಮುತ್ತಿನಂತೆ ಬಲೆಯ ದಾರಗಳಲ್ಲಿ ಪೋಣಿಸಿದ ಹಾರದಂತಾಗಿದೆ. ಮನೆಯ ಒಳಗೆ, ಮೂಲೆಗಳಲ್ಲಿದ್ದು ಬೇಸರ ತರಿಸುವ ಬಲೆ, ಮನೆಯ ಹೊರಗೆ ನಿಸರ‍್ಗದೇವಿಗೆ ಆಬರಣವಾಗಿದೆ.

ಗೊಂದಲ

ಒಂದು ಚಿತ್ರಕಲಾ ಸ್ಪರ‍್ದೆ ನಡೆಯಿತು. ಮೊದಲ 3 ಬಹುಮಾನಗಳನ್ನು ವಿತರಿಸಬೇಕಿತ್ತು. ಉತ್ತಮ, ಅತ್ಯುತ್ತಮ ಹಾಗೂ ಮೊದಲನೆಯ ಸ್ತಾನದ ಚಿತ್ರ ಎಂದು ಗೋಶಿಸಬೇಕಿತ್ತು. ಸ್ಪರ‍್ದಾಳುಗಳ ಚಿತ್ರಗಳನ್ನು ನೋಡಿದ ತೀರ‍್ಪುಗಾರರಿಗೆ ಸಂಗಟಕರು ಹೇಳಿದಂತಹ ಚಿತ್ರಗಳನ್ನು ಆಯ್ಕೆ ಮಾಡಬೇಕೋ ಅತವಾ ಕೆಟ್ಟ ಚಿತ್ರ, ಅತಿ ಕೆಟ್ಟ ಚಿತ್ರ, ಅತ್ಯಂತ ಕೆಟ್ಟ ಚಿತ್ರ ಎಂದು ಸಾರಬೇಕೋ? ಅಂತ ಗೊಂದಲವಾಯಿತು !!

ಮೊದಲಹನಿ

ಯುವಕವಿಯೊಬ್ಬ ಮೊದಲ ಮಳೆಯ ಮೊದಲ ಹನಿಗಳು ಬುವಿಯನ್ನು ಸ್ಪರ‍್ಶಿಸಿದಾಗ ಹುಟ್ಟುವ ಮಣ್ಣಿನ ಕಂಪನ್ನು ಕುರಿತು ಪದ್ಯ ಬರೆದು ಅದನ್ನು ಮಿತ್ರನ ಮುಂದೆ ಓದತೊಡಗಿದ. ನಡುವೆಯೇ ತಡೆದ ಆ ಮಿತ್ರ “ಮಣ್ಣಿನ ಮೇಲೆ ನೀರುಬಿದ್ದಾಗ ‘ಆಕ್ಟಿನೋಮೈಸಿಟಿಸ್’ ಎಂಬ ಬ್ಯಾಕ್ಟೀರಿಯ ಇಂತಹ ವಾಸನೆಗೆ ಕಾರಣವಾಗುತ್ತದೆ. ಇದರ ಬಗ್ಗೆ ಬರೆಯುವುದಕ್ಕೇನಿದೆ?” ಎಂದು ಕೇಳಿ ಕವಿಯ ಆಸಕ್ತಿಗೆ ತಣ್ಣೀರೆರೆಚಿದ !!

ಮೌಲ್ಯ

ಹತ್ತು ವರ‍್ಶಗಳ ಹಿಂದೆ ಸಾವಿರ ರೂಪಾಯಿಗೆ ಇದ್ದ ಬೆಲೆ ಈಗ ಇಲ್ಲ. ‘ಲಕ್ಶಾದಿಪತಿ’ ಎಂಬ ಪದವೇ ವಿರಳವಾಗಿ ಬಳಕೆಯಗುತ್ತಿದೆ. ಆಶ್ಚರ‍್ಯವೆಂದರೆ, ಮನೆಯ ಒಂದು ಬಾಗದ ಅತವಾ ಕಂಪೌಂಡಿನ ಇಟ್ಟಿಗೆಗಳನ್ನು, ಕಲ್ಲುಗಳನ್ನು ಅಶ್ಟೇ ಅಲ್ಲದೇ ಕಟ್ಟಿಗೆ, ಉಸುಕು, ಮಣ್ಣು- ಇಂತಹವುಗಳನ್ನು ಮನೆಯ ಹತ್ತಿರ ಒಟ್ಟಿರುತ್ತೇವೆ. ಆಕಸ್ಮಿಕವಾಗಿ, ಬೆಳಿಗ್ಗೆ ಎದ್ದ ತಕ್ಶಣ ಗುಡ್ಡೆಹಾಕಿದ್ದ ಇವುಗಳಲ್ಲಿ ನಾಲ್ಕೈದು ಬುಟ್ಟಿಯಶ್ಟನ್ನು ಯಾರಾದರೂ ಕದ್ದುಬಿಟ್ಟರೆ, ಇಡೀದಿನ ಶಪಿಸುತ್ತೇವೆ. ಆದರೆ ಕಳೆದ ದಶಕದಲ್ಲಿ ಇದೇ ವಸ್ತುಗಳಿಗೆ ನಾವೆಶ್ಟು ಬೆಲೆ ಕೊಟ್ಟಿದ್ದೆವು? ಅವುಗಳನ್ನು ಯಾವಾಗ ಗಮನಿಸಿದ್ದೆವು? ಇತ್ತೀಚಿನ ದಿನಗಳಲ್ಲಿ ವಸ್ತುಗಳನ್ನು ಉಪಯೋಗಿಸುವುದರ ಬದಲು ಪ್ರೀತಿಸುತ್ತಿದ್ದೇವೆ; ಹಾಗೂ ಮಾನವ ಸಂಬಂದಗಳನ್ನು ಪ್ರೀತಿಸುವ, ಆದರಿಸುವ ಬದಲು ಉಪಯೋಗಿಸುತ್ತಿದ್ದೇವೆ. ಅಲ್ಲವೇ ?

ಆಟ

ಸಾಹಿತಿಯೊಬ್ಬ ಅಕ್ಶರಗಳೊಂದಿಗೆ ಆಡುವ ಆಟ, ಕಲಾವಿದನೊಬ್ಬ ಪಾತ್ರ ಅತವಾ ಬಣ್ಣಗಳೊಂದಿಗೆ ಆಡುವ ಆಟ- ಅವು ಪ್ರಾರಂಬದಲ್ಲಿ ಎಡವಿರಬಹುದು. ಕೆಲವರ ಮನಸಲ್ಲಿ ಸೋತಿರಬಹುದು ಅತವಾ ಹಲವರ ಮನವನ್ನು ಗೆದ್ದಿರಬಹುದು. ಗೆಲ್ಲದಿದ್ದರೆ, ಅದೇ ದಣಿವು ಹೊಸ ಶಕ್ತಿ ತುಂಬುತ್ತದೆ.

( ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: