ಮೊಬೈಲ್ ತೊಳೆಯಲೊಂದು ಸೋಪು!
– ರತೀಶ ರತ್ನಾಕರ.
ಒಂದು ಬಚ್ಚಲುಮನೆಯ ಕಮೋಡ್ನಲ್ಲಿರುವ ಬ್ಯಾಕ್ಟೀರಿಯಾಗಳಿಗಿಂತ 20 ಪಟ್ಟು ಹೆಚ್ಚು ಬ್ಯಾಕ್ಟೀರಿಯಾಗಳು ನಿಮ್ಮ ಚೂಟಿಯುಲಿಯ (smartphone) ತೆರೆ ಮೇಲೆ ಇವೆ!
ನಂಬುವುದಕ್ಕೆ ಆಗುವುದಿಲ್ಲ ಆದರೂ ಇದು ದಿಟ. ದಿನಬಳಕೆಯ ಚೂಟಿಯುಲಿಯನ್ನು ಮೆದುವಾದ ಬಟ್ಟೆಯಿಂದ ಒರೆಸಿ ಚೊಕ್ಕಗೊಳಿಸುವ ಗೋಜಿಗೆ ಹೆಚ್ಚಿನವರು ಹೋಗುವುದಿಲ್ಲ. ಮೆಲ್ನೋಟಕ್ಕೆ ತೆರೆಯು ಚೊಕ್ಕವಾಗಿದ್ದಂತೆ ಕಂಡರೂ, ದೂಳು, ಅಂಗೈ ಬೆವರು ಹಾಗೂ ಕೊಳಕು ತಾಗಿ, ನುಣುಪಾದ ತೆರೆಯ ಮೇಲ್ಮಯ್ ಹಾಗೂ ಅದರ ಅಂಚುಗಳು ಬ್ಯಾಕ್ಟೀರಿಯಾದ ನೆಚ್ಚಿನ ತಾಣವಾಗಿ ಬಿಡುತ್ತವೆ. ಸುಮಾರು 10 ಕ್ಕೂ ಹೆಚ್ಚಿನ ಬಗೆಯ ಬ್ಯಾಕ್ಟೀರಿಯಾಗಳು ತೆರೆಯಲ್ಲಿರುತ್ತವೆ ಎಂದು ಅರಕೆಗಳು(researches) ತಿಳಿಸುತ್ತವೆ. ಅವುಗಳಲ್ಲಿ ಸ್ಟಪೈಲೊಕಾಕಸ್ ಆರಿಯಸ್ (Staphylococcus aureus) ಎಂಬ ಬ್ಯಾಕ್ಟೀರಿಯಾವು ಸುಮಾರು 600 ಯೂನಿಟ್ ಹಾಗೂ ಎಂಟರೊಬ್ಯಾಕ್ಟೀರಿಯಾ ಎಂಬುದು ಸುಮಾರು 1000 ಯೂನಿಟ್ಗಳಶ್ಟು ಚೂಟಿಯುಲಿಯ ತೆರೆಯಲ್ಲಿ ಇರುತ್ತವೆ ಎಂದು ಅರಕೆಗಳ ಮೂಲಕ ತಿಳಿದುಬಂದಿದೆ. ಇವೇ ಬ್ಯಾಕ್ಟೀರಿಯಾಗಳು ಬಚ್ಚಲು ಮನೆಯಲ್ಲಿರುವ ಕಮೋಡ್ನಲ್ಲಿ ಚೂಟಿಯುಲಿಯ ತೆರೆಯಲ್ಲಿರುವುದಕ್ಕಿಂತ 20 ಪಟ್ಟು ಕಡಿಮೆ ಇರುತ್ತವಂತೆ!
ಅಂದರೆ ನಮ್ಮ ಚೂಟಿಯುಲಿಯ ತೆರೆಗಳು ಕಮೋಡಿಗಿಂತ ಹೆಚ್ಚಿನ ಬ್ಯಾಕ್ಟಿರಿಯಾಗಳಿಗೆ ತಾಣವಾಗಿ, ಅವುಗಳಿಂದ ಬರಬಹುದಾದ ವಾಂತಿ, ಬೇದಿ, ಜ್ವರ ಮುಂತಾದ ಕಾಯಿಲೆಗಳಿಗೆ ಕಾರಣವಾಗಬಹುದು. ಇದರಿಂದ ಆಗುವ ತೊಂದರೆಗಳನ್ನು ತಡೆಯಲು ಹಾಗೂ ಕಾಯಿಲೆಗಳು ಹರಡದಂತೆ ನೋಡಿಕೊಳ್ಳಲು ಬೇರೆ ಬೇರೆ ಕಂಪನಿಗಳು ದಾರಿಯನ್ನು ಹುಡುಕುತ್ತಿವೆ. ಈಗಾಗಲೇ ಹಲವಾರು ಚಳಕಗಳು ಬೆಳಕಿಗೆ ಬಂದಿವೆ.
ಚೂಟಿಯುಲಿಯ ತೆರೆಗಳನ್ನು ಹೆಚ್ಚಾಗಿ ಗೊರಿಲ್ಲಾ ಗಾಜಿನಿಂದ(Gorilla Glass) ಮಾಡಿರುತ್ತಾರೆ. ಈ ಗಾಜಿನಲ್ಲಿ ಬೆಳ್ಳಿಯ ಮಿನ್ತುಣುಕುಗಳನ್ನು (Silver ions) ಇರಿಸಿ ಅದರಿಂದ ತೆರೆಯಮೇಲೆ ಕೂರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಚಳಕ ಬಳಕೆಗೆ ಬಂದಿದೆ. ಹಾಗೆಯೇ ತೆರೆಯ ಮೇಲಕ್ಕೆ ಕಡುನೇರಳೆ ಬೆಳಕನ್ನು ಹರಿಸಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಚಳಕವನ್ನು ಮೈಕ್ರೋಸಾಪ್ಟ್ ಕಂಪನಿಯು ಹೊರತಂದಿದೆ. ಇಂತಹ ಹಲವಾರು ಪ್ರಯತ್ನಗಳು ಚೂಟಿಯುಲಿಯ ತೆರೆ ಹಾಗು ಅದರ ಬಳಕೆದಾರರನ್ನು ಬ್ಯಾಕ್ಟೀರಿಯಾದಿಂದ ಕಾಪಾಡಲು ನಡೆಯುತ್ತಿವೆ. ಅಂತಹ ಮತ್ತೊಂದು ಪ್ರಯತ್ನ ಹ್ಯಾಂಡ್ಪಿಕ್ ತ್ರೀಡಿ ಸೊಲ್ಯುಶನ್ಸ್ ಪ್ರೈವೇಟ್ ಲಿಮಿಟೆಡ್ ಅವರು ಹೊರತಂದಿರುವ ಪೋನ್ಸೋಪ್(PhoneSoap 2.0)!
ಏನಿದು ಪೋನ್ಸೋಪ್?
ಇದೊಂದು ಪುಟ್ಟ ಪೆಟ್ಟಿಗೆ. ನಿಮ್ಮ ಚೂಟಿಯುಲಿಯನ್ನು ಈ ಪೆಟ್ಟಿಗೆಯೊಳಗಿಟ್ಟರೆ ಚೂಟಿಯುಲಿಯ ಮಿಂಕಟ್ಟನ್ನು (battery) ತುಂಬಿಸಬಹುದು. ಅಶ್ಟೇ ಅಲ್ಲ, ತೆರೆಯ ಮೇಲಿರುವ ಬ್ಯಾಕ್ಟೀರಿಯಾ ಹಾಗೂ ಕೆಲಬಗೆಯ ವೈರಸ್ಗಳನ್ನು ಕೇವಲ 10 ನಿಮಿಶಗಳಲ್ಲಿ ಸಾಯಿಸಿ ತೆರೆಯ ಸೋಂಕನ್ನು ತೆಗೆಯುತ್ತದೆ. ಮಿಂಕಟ್ಟು ತುಂಬುವುದರೊಳಗೆ ಯಾವುದೇ ಸೋಂಕಿಲ್ಲದ ಚೂಟಿಯುಲಿಯನ್ನು ಪೆಟ್ಟಿಗೆಯಿಂದ ಹೊರತೆಗೆದು ಬಳಸಬಹುದು!
ಪೋನ್ಸೋಪು ಹೇಗೆ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ?
ಪೋನ್ಸೋಪಿನ ಒಳಗೆ ಕಡುನೇರಳೆ ಬೆಳಕನ್ನು(UV) ಹೊರಸೂಸುವ ಪುಟ್ಟ ಮಿಂಚುಸೊಡರುಗಳಿವೆ(bulb). ಚೂಟಿಯುಲಿಯನ್ನು ಈ ಪೋನ್ಸೋಪಿನ ಒಳಗಿಟ್ಟು ಮಿಂಚನ್ನು(electricity) ಹರಿಸಿದಾಗ ಮಿಂಕಟ್ಟು ತುಂಬತೊಡಗುತ್ತದೆ. ಜೊತೆಗೆ, ಆ ಪುಟ್ಟ ಮಿಂಚುಸೊಡರುಗಳು ನಿಗದಿತ ಅಲೆಯುದ್ದದ ಕಡುನೇರಳೆ ಬೆಳಕನ್ನು ಹರಿಸುತ್ತವೆ. ಈ ಬೆಳಕು ಬ್ಯಾಕ್ಟೀರಿಯಾದ ಸೂಲುಗೂಡಿನ(cell) ಒಳಹೊಕ್ಕು ಅವುಗಳ ಡಿಎನ್ಎ ಅನ್ನು ಕೆಡಿಸುತ್ತವೆ. ಡಿಎನ್ಎ ಮಾರ್ಪಾಟಾದ ಇಲ್ಲವೇ ಕೆಟ್ಟುಹೋದ ಬ್ಯಾಕ್ಟೀರಿಯಾಗಳು ಸಾಯುವುವು ಇಲ್ಲವೇ ಕುಂದಿಹೋಗುವುವು. ಒಟ್ಟಿನಲ್ಲಿ, ಯಾವುದೇ ಸೋಂಕಿಲ್ಲದ ಚೂಟಿಯುಲಿ ಈ ಸೋಪಿನ ಪೆಟ್ಟಿಗೆಯಿಂದ ಹೊರಬರುತ್ತದೆ.
ಪೋನ್ಸೋಪಿನ ಪೆಟ್ಟಿಗೆಯನ್ನು ಮುಚ್ಚಿಯೇ ಬಳಸುವುದರಿಂದ ಕಡುನೇರಳೆ ಬೆಳಕು ಪೆಟ್ಟಿಗೆಯಿಂದ ಹೊರಬಂದು ನಮಗೆ ಯಾವುದೇ ತೊಂದರೆ ಕೊಡುವುದಿಲ್ಲ. ಪೆಟ್ಟಿಗೆಯ ಒಳಗಡೆಯ ಗೋಡೆಗಳಿಗೆ ಬಡಿದು ಕಡುನೇರಳೆ ಬೆಳಕು ಹಿಂಪುಟಿದು, ಮತ್ತೊಮ್ಮೆ ಚೂಟಿಯುಲಿಯ ತೆರೆಯ ಮೂಲಕ ಹಾದು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಈ ಬಗೆಯಲ್ಲಿ ಸೋಂಕನ್ನು ತೆಗೆಯುವ ಕೆಲಸ ತುಂಬಾ ಪರಿಣಾಮಕಾರಿಯಾಗಿದೆ ಎಂದು ಇದನ್ನು ಅಣಿಗೊಳಿಸಿರುವ ಕಂಪನಿ ಹೇಳಿಕೊಂಡಿದೆ.
ಪೋನ್ಸೋಪಿನ ಹೆಚ್ಚಿನ ವಿವರ
- ಪೋನ್ಸೋಪು ಸೋಂಕನ್ನು ತೆಗೆಯುವಾಗ ಕರೆ ಬಂದರೆ ಅದು ನಿಮಗೆ ಕೇಳಿಸುವಂತಿರುತ್ತದೆ. ಪೋನ್ಸೋಪನ್ನು ನಿಲ್ಲಿಸಿ, ಅದರಿಂದ ಚೂಟಿಯಲಿಯನ್ನು ತೆಗೆದು ನಿಮ್ಮ ಕರೆಗೆ ಉತ್ತರಿಸಬಹುದು.
- ಮಿಂಕಟ್ಟನ್ನು ತುಂಬಿಸದೇ ಬರಿ ಸೋಂಕನ್ನು ತೆಗೆಯಲೂ ಇದನ್ನು ಬಳಸಬಹುದು.
- ಯಾವುದೇ ಚೂಟಿಯುಲಿಯ ಮಿಂಕಟ್ಟನ್ನು ತುಂಬಿಸಲು ಬೇಕಾದ ಪಿನ್(universal charger pin) ಇದರಲ್ಲಿದೆ. ಯುಎಸ್ಬಿ ಇಂದ ಮಿಂಕಟ್ಟನ್ನು ತುಂಬಿಸಲು ಆಗುವಂತಹ ಯಾವುದೇ ಚೂಟಿಯುಲಿಯನ್ನು ಇದರಲ್ಲಿ ಬಳಸಬಹುದು.
- ಪೋನ್ಸೋಪಿನಲ್ಲಿ ಬಳಕೆಯಾಗುವ ಕಡುನೇರಳೆ ಬೆಳಕು – 2X254nm UV-C Lamps.
- ಒಂದು ಸಲ ಸೋಂಕನ್ನು ತೆಗೆಯಲು 4 ನಿಮಿಶಗಳು ಬೇಕು. ಇನ್ನೂ ಚೆನ್ನಾಗಿ ಕೆಲಸ ಆಗಬೇಕೆಂದರೆ 10 ನಿಮಿಶ ಇಡಬೇಕು.
- ಪೋನ್ಸೋಪ್ ಪೆಟ್ಟಿಗೆಯ ಅಳತೆ 8.5 ಇಂಚು ಉದ್ದ, 5 ಇಂಚು ಅಗಲ ಹಾಗೂ 1.76 ಇಂಚು ಎತ್ತರವಿರುತ್ತದೆ.
- ಮಿಂಚಿಗೆ ಜೋಡಿಸಲು 5V ಯುಎಸ್ಬಿ ಪೋರ್ಟ್ ಇದೆ. ಇದಕ್ಕೆ ಬೇಕಾದ ಕೇಬಲ್ ಕೂಡ ಇದರ ಜೊತೆಗೆ ಕೊಂಡುಕೊಂಡಾಗ ಬರುತ್ತದೆ.
- ಬೆಲೆ ಸುಮಾರು 8500 ರಿಂದ 9000 ರೂ. ಗಳಶ್ಟಿದೆ.
(ಮಾಹಿತಿ ಸೆಲೆ: desiredesire.com, phonearena.com )
(ಚಿತ್ರ ಸೆಲೆ: desiredesire.com, phonearena.com )
Indina dinakke sooktha mAhiti idu. abba toilette bahala shuddha annisutte. lekhakarige dhanyavadgLu