‘ಶಾಲೆಗೆ ಬನ್ನಿ ಶನಿವಾರ, ಕಲಿಸಲು ನೀಡಿ ಸಹಕಾರ’

– ತೇಜಸ್ವಿ.

ಸರಕಾರಿ ಸ್ಕೂಲು, Govt School

( ಬರಹಗಾರರ ಮಾತು: ಮನೆಯ ಹತ್ತಿರ ಒಂದು ಸರಕಾರಿ ಶಾಲೆ ಇದ್ದು, ಕಳೆದು ಕೆಲ ವರುಶಗಳಿಂದ ಅಲ್ಲಿ ಪ್ರತಿ ಶನಿವಾರ ಹೋಗುತ್ತಿರುವೆ. ಅಲ್ಲಿ ನಾನು ಗಮನಿಸಿದ್ದನ್ನು ಬರಹವಾಗಿಸುವ ಒಂದು ಪುಟ್ಟ ಪ್ರಯತ್ನ )

ಈ ಶೈಕ್ಶಣಿಕ ವರ‍್ಶವೂ ಕಳೆದ ಹಲವು ವರ‍್ಶಗಳಂತೆಯೇ ಸಾಗಿದೆ. ಸರ‍್ಕಾರಿ ಶಾಲೆಯಲ್ಲಿ ಕಾಣಬರುವಂತಹ ಹತ್ತು ಹಲವು ಸವಾಲುಗಳು, ನೋವುಗಳು, ದಿನ ನಿತ್ಯದ ಗೋಳುಗಳು ಅಲ್ಲಿಗೆ ಬರುವಂತಹ ಶಿಕ್ಶಕರ, ವ್ಯವಸ್ತಾಪಕರ, ವಿದ್ಯಾರ‍್ತಿಗಳ ಮತ್ತು ಸ್ವಯಂಸೇವಕರ (Volunteers) ಎದುರಿರುವ ಸ್ಪೂರ‍್ತಿ ಚಿಲುಮೆಗಳು ಎಂದೆಣಿಸಿದ್ದೇನೆ.

ಸಾಮಾನ್ಯ ವ್ಯಕ್ತಿಗಳು ಎಂದೆನಿಸುವ ಶಿಕ್ಶಕರು ಮತ್ತು ವಿದ್ಯಾರ‍್ತಿಗಳು ತಾವು ಮಾಡುತ್ತಿರುವ ಕೆಲಸಗಳು ಅಸಾದಾರಣವೆಂಬುದನ್ನು ಅರಿಯದೆಯೇ, ಅವುಗಳು ಸಾದಾರಣ ಎಂಬಂತೆ ನಡೆದುಕೊಳ್ಳುವುದು ಸೋಜಿಗವೇ! ಹೊರಪ್ರಪಂಚಕ್ಕೆ ಸರಳ ರೇಕೆಯಂಬಂತೆ ತೋರುವ ಶಾಲಾ ಚಟುವಟಿಕೆಗಳು, ಒಂದು ಗಳಿಗೆ ಕುಳಿತು ಯೋಚಿಸಲು ಸಿದ್ದರಿರುವವರಿಗೆ, ಅದೊಂದು ಅನೇಕ ಆಯಾಮಗಳ ಬ್ರುಹದಾಕಾರದ ಗನಾಕ್ರುತಿ ಎಂದು ಹೊಳೆಯುವುದರಲ್ಲಿ ಐಬೇ ಇಲ್ಲ.

15-16 ವರ‍್ಶಗಳ ಹುಡುಗನೊಬ್ಬ ಬೆಳಕು ಹರಿಯುವ ಮುನ್ನವೇ ಎದ್ದು, ಬೆಳಗ್ಗೆ 4 ರಿಂದ 8 ರ ವರೆಗೂ ಬೀದಿ ಬದಿಯ ಟೀ ಅಂಗಡಿಯೊಂದರಲ್ಲಿ ದಿನಕ್ಕೆ 30 ರೂಪಾಯಿಯಂತೆ ಕೆಲಸಮಾಡಿ, ಸಮಯ ಸಿಕ್ಕರೆ ಮನೆಗೆ ಹೋಗಿ ಸಮವಸ್ತ್ರವನ್ನುಟ್ಟು ಶಾಲೆಗೆ ಬರುವುದು. ಬಂದ ಬಳಿಕ ವಿಗ್ನಾನ, ಗಣಿತ, ಸಮಾಜಶಾಸ್ತ್ರ, ಬಾಶೆಗಳು – ಹೀಗೆ ಮೂರೂ ಮತ್ತೊಂದು ವಿಶಯಗಳನ್ನು ಕೊಟ್ಟಿಗೆಯಂತಿರುವ ಕೋಣೆಗಳಲ್ಲಿ ಕುಳಿತು ಕಲಿಯಲು ಪ್ರಯತ್ನಿಸುವುದು. ಬಳಿಕ, ರಾತ್ರಿ 11-12 ಗಂಟೆವರೆಗೂ ದುಡಿದು 4-5 ಗಂಟೆಗಳ ನಿದ್ದೆಯ ಶಾಸ್ತ್ರ ಮುಗಿಸಿ ಮತ್ತೆ ದುಡಿದು, ಕಲಿಯಲು ಬಂದು ಶಾಲೆಯಲ್ಲಿ ಕುಳಿತು ಆಗಾಗ ತೂಕಡಿಸುವುದು. ಇಡೀ ದಿನದಲ್ಲಿ, ಒಮ್ಮೆ ಹೊಟ್ಟೆ ತುಂಬಿಸುವ ಶಾಲೆಯ ಮದ್ಯಾಹ್ನದ ಬಿಸಿ ಊಟ ಮಾಡುವುದು. 10 ನೇ ಕ್ಲಾಸಿನಲ್ಲಿದ್ದರೆ, ಅದೂ ಪೆಬ್ರವರಿ ತಿಂಗಳಾದರೆ, ಪುಸ್ತಕದ ಹೊರೆ ಮತ್ತು  ಪರೀಕ್ಶೆಯ ಹೊರೆ ಹೊರುವುದು.  5:30 ವರೆಗೂ ಪೂರ‍್ವ ಸಿದ್ದತಾ ಪರೀಕ್ಶೆಯನ್ನು ಬರೆದು, ಸಾಯಂಕಾಲ 6:30 ಇಂದ 9:00 ರ ವರೆಗೂ ನಡೆಯುವ ತರಬೇತಿ ಕ್ಲಾಸುಗಳಿಗೆ ಬರಬೇಕೆನ್ನುವ ಕಾಳಜಿಯಿಂದ ತಳಮಳಿಸುವುದು. ಕೆಲಸಕ್ಕೆ ಹೋದರೆ ಕ್ಲಾಸು ಹೋಯಿತಲ್ಲಾ ಎಂಬ ಚಿಂತೆ, ಕೆಲಸ ತಪ್ಪಿಸಿ ಕ್ಲಾಸಿಗೆ ಹೋದರೆ ಮನೆಯಲ್ಲಿ ನಡೆಯಬಹುದಾದ ರಾದ್ದಾಂತದ ಚಿಂತೆ – ಈ ಎರಡು ವಿರುದ್ದಗಳ ನಡುವೆ ಸಿಕ್ಕಿಕೊಳ್ಳುವುದು. ಕಡೆಗೂ ದೈರ‍್ಯ ಮಾಡಿ ಕೆಲಸಕ್ಕೆ ಹೋಗದೆ ಕ್ಲಾಸಿಗೆ ಬಂದಾಗ ಅವನು ಕಲಿಯುವ ಲೆಕ್ಕಗಳಾಗಲಿ ಅತವಾ ತಿಳಿವಿನ ವಿಶಯಗಳಾಗಲಿ ತನ್ನ ಜೀವನಕ್ಕೆ ಹೇಗೆ ಉಪಕಾರಿ ಎಂದು ತಿಳಿಯುವ ಪಕ್ವ ಮನಸ್ಸಾಗಲಿ, ಪ್ರೌಡಿಮೆಯಾಗಲಿ ಇಲ್ಲದಿರುವುದು (ರಾತ್ರಿ ಮನೆಗೆ ಹೋದರೆ ಒದೆ ಬೀಳುವುದು ಕಾತ್ರಿಯಾಗಿರುವುದರಿಂದ ಆ ರಾತ್ರಿ ಮನೆಗೆ ಹೋಗುವುದಿಲ್ಲವೆಂಬ ನಿರ‍್ದಾರ ಅವನನ್ನು ಎದೆಗುಂದಿಸುವುದಿಲ್ಲ) – ಇವೆಲ್ಲಾ ಸರಕಾರಿ ಶಾಲೆಗಳಲ್ಲಿ ಕಲಿಯುವ ಹಲವರ ನಿತ್ಯದ ಬದುಕು-ಬವಣೆ.

ವಿಪರ‍್ಯಾಸವೆಂದರೆ, ಬಾಲ್ಯವನ್ನೇ ಅರಿಯದ ಈ ಬಾಲಕನನ್ನು ಸಮಾಜ ಕಾಣುವ ರೀತಿ – ‘ಇವನು ಒಬ್ಬ ಟೀ ಅಂಗಡಿಯಲ್ಲಿ ಕೆಲಸ ಮಾಡುವವ’ ಎಂದು. ಒಬ್ಬ ಹಸಿಮನಸ್ಸಿನ ಗ್ನಾನ ಪಿಪಾಸುವೆಂದಲ್ಲ.  10-12 ವರ‍್ಶಗಳ ಎಳವೆಯಲ್ಲಿ ಅನುಬವಿಸಬೇಕಾಗಿದ್ದ ಯಾವುದನ್ನೂ ಅನುಬವಿಸದೆ, ದುಡಿಮೆ-ಹೆದರಿಕೆ ಇವೆರಡರ ನಡುವೆ ಕಲಿಕೆ, ಇವುಗಳನ್ನು ಮೈಗೂಡಿಸಿಕೊಂಡಿರುವ ಅವಕಾಶ-ಸೌಕರ‍್ಯ ವಂಚಿತ ಹುಡುಗನನ್ನು ನಾವು ಕಾಣುವುದು ಒಬ್ಬ ‘ಸಾಮಾನ್ಯ’ನಂತೆ. ಇಲ್ಲಿ ಕಾಣಿಸಿರುವ ಹುಡುಗನ ಕತೆಯಲ್ಲಿ ಪುಲ್ಲಿಂಗವನ್ನು ಸ್ತ್ರೀಲಿಂಗವಾಗಿ ಓದಿದರೆ ನಮ್ಮ ನಾಡಿನಲ್ಲಿ ನಮ್ಮೆದುರೇ ಹೆಚ್ಚಿನ ಸಂಕೆಯಲ್ಲಿರುವ ‘ಸಾಮಾನ್ಯ’ ಹೆಣ್ಣು ಮಕ್ಕಳು ಕಂಡು ಬರುತ್ತಾರೆ. ಟೀ ಅಂಗಡಿಯಲ್ಲಿ ಕೆಲಸಮಾಡುವುದರ ಬದಲು ಉಳ್ಳವರ ಮನೆಗಳಲ್ಲಿ ಮನೆ ಕೆಲಸ ಮಾಡುತ್ತಿರುತ್ತಾಳೆ, ಅಶ್ಟೇ.

ಈ ಕತನವನ್ನು ಇಲ್ಲಿಗೆ ನಿಲ್ಲಿಸಿದರೆ ಮಹಾಪಾಪವೇ ಸೈ!

ಬೇರೆ ಬೇರೆ ಸಾಮಾಜಿಕ, ಆರ‍್ತಿಕ ಹಿನ್ನೆಲೆಗಳಿಂದ ಬಂದು ಒಂದೆಡೆ ನೆರೆದಿರುವ,  ಬೆಂಚುಗಳು ಒಡೆದು ಹೋಗಿದ್ದರೂ, ಒಂದಿಂಚೂ ಜಾಗವಿರದಂತೆ ಅದರ ಮೇಲೆ ಅಡ್ಜಸ್ಟ್ ಮಾಡಿಕೊಂಡು ಕುಳಿತಿರುವ, ಇಲ್ಲವೇ ಮೇಲೆ ಕುಳಿತುಕೊಳ್ಳಲಾಗದೆ ನೆಲದಲ್ಲಿ ಕುಳಿತಿರುವ, ಮನೆಯಿಂದ ಹೊರಡಬೇಕಾದರೆ ಅಲ್ಲಿನ ತೊಂದರೆಗಳನ್ನೂ, ಕಶ್ಟ ಕಾರ‍್ಪಣ್ಯಗಳನ್ನೂ ತಲೆಯಲ್ಲಿ ತುಂಬಿಕೊಂಡಿದ್ದರೂ ಮುಗುಳ್ನಗೆಯನ್ನು ಬೀರುತ್ತಾ ಮುಗ್ದ ಮನಸ್ಕರಾಗಿ ಬಂದಿರುವ ವಿದ್ಯಾರ‍್ತಿಗಳಿಗೆ ಕಲಿಸುವುದಕ್ಕೆ ಶಾಲೆಗೆ ಹಾಜರಾಗುವ ಶಿಕ್ಶಕರೂ ‘ಸಾಮಾನ್ಯ’ ರೇ. ಇಂತಹ ‘ಸಾಮಾನ್ಯ’ ಶಿಕ್ಶಕರ ಕತೆಯನ್ನು, ಯಶೋಗಾತೆಯನ್ನು ಇನ್ನೊಮ್ಮೆ ಬರೆಯುತ್ತೇನೆ.

ವಿಶಯಗಳನ್ನು ತಿಳಿಯಲು ಇಂತ ಮಕ್ಕಳು ಹೊಂದಿರುವ ತೀವ್ರ ಹಸಿವನ್ನು ನೀಗಿಸಲು ಕಂಕಣಬದ್ದರಾಗಿರುವ ಶಿಕ್ಶಕರಿಗೆ ನಾವೆಲ್ಲರೂ ತಲೆ ಬಾಗಲೇಬೇಕು, ಕೈ ಮುಗಿಯಲೇಬೇಕು ಮತ್ತು ಅವರೊಡನೆ ಕೈ ಜೋಡಿಸಲೇಬೇಕು.

( ಚಿತ್ರ ಸೆಲೆ:  klp )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks