ಮರಳಿ ಬಂದಿದೆ ಸ್ಯಾಂಟ್ರೋ

– ಜಯತೀರ‍್ತ ನಾಡಗವ್ಡ.

hyundai santro, review, ಹ್ಯುಂಡಾಯ್ ಸ್ಯಾಂಟ್ರೋ

ಸ್ಯಾಂಟ್ರೋ ಕಾರು, ಹ್ಯುಂಡಾಯ್‌ನವರು ಬಾರತಕ್ಕೆ ಪರಿಚಯಿಸಿದ ಮೊದಲ ಕಾರು. ಸುಮಾರು 20 ವರುಶಗಳ ಹಿಂದೆ ಹ್ಯುಂಡಾಯ್ ಬಾರತದ ಕಾರು ಮಾರುಕಟ್ಟೆಗೆ ಕಾಲಿಟ್ಟಿದ್ದು ಇದೇ ಸ್ಯಾಂಟ್ರೋ(Santro) ಮೂಲಕವೇ. ಅಂದಿನ ಆ ಪುಟಾಣಿ ಸ್ಯಾಂಟ್ರೋ ಮೂಲಕ ಶುರುವಾದ ಹ್ಯುಂಡಾಯ್‌ರವರ ಪಯಣ, ಎಂದು ಈ ಕೊರಿಯನ್ ಕಂಪನಿ ಹಿಂದಿರುಗಿ ನೋಡದಂತೆ ಮಾಡಿತ್ತು.ಇದರಿಂದಲೇ, ಹ್ಯುಂಡಾಯ್, ಬಾರತದ 2ನೇ ಅತಿದೊಡ್ಡ ಕಾರು ತಯಾರಕ ಕೂಟವಾಗಿ ಬೆಳೆದು ನಿಂತಿದೆ. ಸ್ಯಾಂಟ್ರೋ ಮೂಲಕ ಮನೆ ಮಾತಾಗಿದ್ದ ಹ್ಯುಂಡಾಯ್ ಕೂಟದವರು, ಕೆಲವು ವರುಶಗಳ ಹಿಂದೆ ಈ ಕಾರಿನ ತಯಾರಿಕೆಯನ್ನು ಪೂರ‍್ತಿಯಾಗಿ ನಿಲ್ಲಿಸಿದ್ದರು. ಇದೀಗ ತನ್ನ ಹೆಗ್ಗುರುತಾಗಿರುವ ಸ್ಯಾಂಟ್ರೋವನ್ನು ಹೊಸಮೊಗದಲ್ಲಿ ಬೀದಿಗಿಳಿಸಿದ್ದಾರೆ. ಹೊಸ ಸ್ಯಾಂಟ್ರೋ, ಹೇಗೆಲ್ಲ ಹೊಸತಾಗಿದೆ ನೋಡೋಣ ಬನ್ನಿ.

ಬಂಡಿ ಮತ್ತು ಸಾಗಣಿ(Engine and Transmission)

ಸ್ಯಾಂಟ್ರೋ ಬಂಡಿ ಹೊಸತಾಗಿದ್ದರೂ, ಬಿಣಿಗೆ ಹಳತೇ. ಹಳೆಯ ಸ್ಯಾಂಟ್ರೋದಲ್ಲಿದ್ದ ಎಪ್ಸಿಲಾನ್(Epsilon) ಪೆಟ್ರೋಲ್ ಬಿಣಿಗೆಯನ್ನು, ಹೊಸ ಸ್ಯಾಂಟ್ರೋದಲ್ಲೂ ಮುಂದುವರೆಸಲಾಗಿದೆ. ಹಳೆಯ ಬಿಣಿಗೆಯಲ್ಲಿ ಕೆಲವೊಂದು ಸಣ್ಣ ಪುಟ್ಟ ಬದಲಾವಣೆ ಮಾಡಿದ್ದು ಬಿಟ್ಟರೆ ಹೊಸದೇನು ಕಂಡು ಬರುವುದಿಲ್ಲ. 4 ಉರುಳೆಯ ಎಪ್ಸಿಲಾನ್ ಬಿಣಿಗೆ, 1.1 ಲೀಟರ್ ಅಳತೆಯದ್ದು. 69 ಕುದುರೆಬಲದ ಕಸುವು ಮತ್ತು 99 ನ್ಯೂಟನ್ ಮೀಟರ್ ತಿರುಗುಬಲದ ಎಪ್ಸಿಲಾನ್‌ನ ಮೈಲಿಯೋಟ ಲೀಟರ್ ಪೆಟ್ರೋಲ್‌ಗೆ 20.3 ಕಿ.ಮೀ. ಇದಕ್ಕೆ ಓಡಿಸುಗನ ಹಿಡಿತದ(Manual) ಮತ್ತು ಮೊದಲ ಬಾರಿ ಅರೆ-ತನ್ನಿಡಿತದ ಸಾಗಣಿಗಳ(Automated Manual Transmission) ಆಯ್ಕೆ ನೀಡಲಾಗಿದೆ.

Engine specs

ಮೈಮಾಟ

ಮೈಮಾಟದಲ್ಲಿ ಹೊಸ ಸ್ಯಾಂಟ್ರ‍ೋ, ಹಳೆಯ ಸ್ಯಾಂಟ್ರೋಗಿಂತ ಸಾಕಶ್ಟು ಬದಲಾಗಿದೆಯಾದರೂ, ಹ್ಯುಂಡಾಯ್‌ನವರದೇ ಆದ ಐ10 ಬಂಡಿಯನ್ನು ಹೋಲುತ್ತದೆ. ಹಳೆಯ ಸ್ಯಾಂಟ್ರೋಗೆ ಹೋಲಿಸಿದಲ್ಲಿ ಹೊಸ ಸ್ಯಾಂಟ್ರೋ 45 ಮಿಲಿಮೀಟರ್ ಅಗಲ, 120 ಮಿಲಿಮೀಟರ್ ಉದ್ದ ಮತ್ತು ಗಾಲಿಗಳ ನಡುವಿನ ದೂರ(Wheel base) 20 ಮಿಲಿಮೀಟರ್ ಗಳಶ್ಟು ದೊಡ್ಡದಿದೆ. ಬಂಡಿಯ ಮುನ್ಕಂಬಿ ತೆರೆ(Front Grill) ಅಗಲವಾಗಿದ್ದು, ಮುನ್ಕಂಬಿ ತೆರೆಯ ಬದಿಯಲ್ಲೇ ಇಬ್ಬನಿ ದೀಪಗಳನ್ನು(Fog lamps) ಜೋಡಿಸಲಾಗಿದೆ. ಅಗಲವಾದ ಮುಂದೀಪಗಳು(Headlights), ಮುನ್ಕಂಬಿ ತೆರೆ ಎಲ್ಲವೂ ಐ10 ಬಂಡಿಯನ್ನೇ ನೆನಪಿಸುತ್ತವೆ.

ಬಂಡಿಯ ಒಳಮೈ, ಬೀಜ್(Beige) ಮತ್ತು ಕಪ್ಪು ಬಣ್ಣದಿಂದ ಕೂಡಿದ್ದು ಬಲು ಅಂದವಾಗಿ ತೋರುತ್ತದೆ. 7 ಇಂಚಿನ ಸೋಕುತೆರೆಯ(Touchscreen) ತಿಳಿನಲಿ ಏರ‍್ಪಾಟು(Infotainment System) ಹೊಸ ಸ್ಯಾಂಟ್ರೋದ ಗಮನಸೆಳೆಯುವ ಅಂಶಗಳಲ್ಲೊಂದು. ಈ ಏರ‍್ಪಾಟನ್ನು ಅಂಡ್ರಾಯ್ಡ್ ಆಟೋ(Android Auto) ಮತ್ತು ಆಪಲ್ ಕಾರ್‌ ಪ್ಲೇಗಳೊಂದಿಗೆ(Apple CarPlay) ಜೋಡಿಸಿಕೊಳ್ಳಬಹುದಾಗಿದೆ. ಇದೇ ಸೋಕುತೆರೆಯು, ನಿಲುಗಡೆಗೆ ನೆರವಾಗುವ ಹಿಂಬದಿಯ ತಿಟ್ಟಕದ(Reverse Parking Camera) ತೆರೆಯಾಗಿಯೂ ಕೆಲಸ ಮಾಡುತ್ತದೆ. ತಿಗುರಿ(Steering), ಅದರ ಮೇಲೆ ಜೋಡಿಸಲ್ಪಟ್ಟ ಕೆಲವು ಗುಂಡಿಗಳು(Buttons) ಆಯ್-10 ಬಂಡಿಯಿಂದ ಎರವಲು ಪಡೆದಿದ್ದರಿಂದ ಒಳ್ಳೆಯ ಗುಣಮಟ್ಟದ್ದಾಗಿವೆ. ಓಟದಳಕ(Odometer) ಮತ್ತು ವೇಗದಳಕಗಳು(Speedometer), ತೋರುಮಣೆಗೆ(Dashboard) ತಕ್ಕುದಾಗಿ ಮಾಡಲಾಗಿದ್ದು, ಓಡಿಸುಗ ಯಾವುದೇ ಅಡೆತಡೆಯಿಲ್ಲದೇ ಈ ಅಳಕಗಳ ಮಾಹಿತಿ ಓದಬಹುದು. ಕುಳಿರ‍್ಗಾಳಿ ಏರ‍್ಪಾಟಿನ ಗುಂಡಿ(Air Conditioner Knob) ತುಸು ಗಟ್ಟಿ ಅನಿಸಿದರೂ, ಸರಿಯಾಗಿಯೇ ಕೆಲಸ ಮಾಡುತ್ತದೆ. ತಿಗುರಿ, ಹಲ್ಲುಗಾಲಿಯ ಗುಣಿ(Gearshift Lever), ಗಾಳಿಪಾಡುಕದ ಕಿಂಡಿ(AC vents) ಮತ್ತು ಬಾಗಿಲ ಹಿಡಿಕೆಗಳ(Door Handle) ಸುತ್ತಲೂ ಇರುವ ಬಂಗಾರ ಬಣ್ಣದ ಹೊದಿಕೆ(surrounding) ಸ್ಯಾಂಟ್ರೋ ಬಂಡಿಯ ಒಳನೋಟಕ್ಕೆ ಹಿರಿಮೆ ತಂದಿದೆ.

ಹೊಸ ಸ್ಯಾಂಟ್ರೋ ಬಂಡಿ ಅಗ್ಗದ ಕಾರು, ಎಂದೆನಿಸುವ ಹಲವು ಅಂಶಗಳು ಬಂಡಿಯಲ್ಲಿವೆ. ಮೊದಲಿಗೆ ತಿಗುರಿಯ ಮೇಲೆ ಕಂಡು ಬರುವ ಹ್ಯುಂಡಾಯ್ ತಂಗುರುತು(Logo), ಇದು ಕ್ರೋಮ್‌ನದ್ದಾಗಿರದೇ, ಅಗ್ಗದ ಪ್ಲ್ಯಾಸ್ಟಿಕ್ ನಿಂದ ಮಾಡಲಾಗಿದೆ. ಬಂಡಿಯ ಬಾಗಿಲ ಸಂದಿನ ಬಳಿ ಕಾಣುವ ಮೊಳೆಗಳು, ನಿಲುಗಡೆಗೆ ನೆರವಾಗಲೆಂದು ಹಿಂಬದಿಯಲ್ಲಿ ಬರೀ ಎರಡೇ(2) ಅರಿವಿಕಗಳನ್ನು(Sensor) ಜೋಡಿಸಿರುವುದು ಕಾರಿನ ಬೆಲೆಯನ್ನು ಕಡಿಮೆಯಾಗಿಸಿದೆ. ಕೂರುಮಣೆಯಾಗಲಿ(Seat) ಇಲ್ಲವೇ ಕೂರುಮಣೆ ಪಟ್ಟಿಯಾಗಲಿ(Seat Belt), ಇವುಗಳನ್ನು ಓಡಿಸುಗನೆತ್ತರಕ್ಕೆ ತಕ್ಕಂತೆ ಜೋಡಿಸುವ ಏರ‍್ಪಾಟು ಇಲ್ಲವಾಗಿದೆ. ಬಂಡಿಯ ಸರಕುಚಾಚನ್ನು(Boot Space) ನೀವು ಬಂಡಿಯ ಬೀಗದ ಕೈಯಿಂದ ಇಲ್ಲವೇ ಓಡಿಸುಗನ ಕೂರುಮಣೆಯ ಕೆಳಗಿರುವ ಗುಣಿಯ(Lever) ಮೂಲಕವೇ ತೆರೆಯಬಹುದಾಗಿದೆ, ಕೈ ಸೋಕಿದರೆ ತಂತಾನೇ ತೆರೆಯಬಲ್ಲ ಏರ‍್ಪಾಟು ಕಂಡುಬರುವುದಿಲ್ಲ. ಓಡಿಸುಗನ ಸಾಲು ಹಾಗೂ ಹಿಂಬದಿಯ ಸಾಲಿನಲ್ಲಿ ತಲೆಯೂರುಕಗಳು(Headrests) ಇಲ್ಲ. ಕೈತಡೆತದ(Hand Brake) ಬಳಿ, ಕಾಪಿ/ಟೀ ಮಗ್ ಸೇರಿಸಿಡಲು ಜಾಗ ನೀಡಬಹುದಿತ್ತು, ಜಾಗವನ್ನು ಸರಿಯಾಗಿ ಬಳಸಿಕೊಂಡಂತಿಲ್ಲ. ಮಿನ್ಕಿಂಡಿಗಳು(Power Windows) ಸರಿಯಾದ ಜಾಗದಲ್ಲಿ ಜೋಡಿಸಲ್ಪಟ್ಟಿಲ್ಲವಾದ್ದರಿಂದ, ಓಡಿಸುಗನಿಗೆ ಕಿರಿಕಿರಿ ಎನ್ನಿಸಬಹುದು.

ಅಗ್ಗದ ಕಾರು ಎನ್ನಿಸಿದರೂ, ಬಂಡಿಯ ಒಳಗಿನ ಜಾಗದಲ್ಲಿ ಕೊರತೆ ಕಂಡುಬರುವುದಿಲ್ಲ. ದಪ್ಪ ಹಾಗೂ ಎತ್ತರದ ಓಡಿಸುಗರಿಗೆ ಮುಂಬದಿಯ ಜಾಗ ಸ್ವಲ್ಪ ಕಮ್ಮಿ ಎನ್ನಿಸಿದರೂ, ಸಾಮಾನ್ಯರಿಗೆ ಯಾವುದೇ ಕೊರತೆಯಿಲ್ಲ. ಹಿಂಬದಿಯಲ್ಲಿ ಮೂವರು ಸಾಮಾನ್ಯರು ಕುಳಿತುಕೊಳ್ಳುವಶ್ಟು ಜಾಗವಿದೆ. ಅದರಲ್ಲೂ, ಹಿಂಬದಿಯ ಸವಾರರಿಗೆ ತೊಡೆಗಳು ನೋವಾಗದಂತೆ, ತೈ ಸಪೋರ‍್ಟ್ ನೀಡಿದ್ದು ಮತ್ತಶ್ಟು ಹಿತವೆನಿಸುತ್ತದೆ. ಹಿಂಬದಿಯ ಪಯಣಿಗರಿಗೂ,  ಕುಳಿರ‍್ಗಾಳಿ ಏರ‍್ಪಾಟಿನ ಕಿಂಡಿಗಳನ್ನು ನೀಡಿದ್ದು, ಇಂತಹ ಅಗ್ಗದ ಕಾರುಗಳಲ್ಲೇ ಮೊದಲು ಎನ್ನಬಹುದು. ಬಂಡಿಯ ಮುಂಬದಿಯಲ್ಲಿ ಒಂದೇ ಕಪ್ ಸೇರುವೆ ಇದ್ದರೂ(Cup Holder), ಎಲ್ಲ ಬಾಗಿಲಿಗೆ ಬಾಟಲ್ ಸೇರುವೆಗಳು(Bottle Holder) ನೀಡಲಾಗಿದೆ. ಮುಂಬದಿಯಲ್ಲಿ ಅಲೆಯುಲಿ(Mobile phone), ಇತರೆ ಚಿಕ್ಕಪುಟ್ಟ ಸಾಮಾನುಗಳನ್ನು ಇಟ್ಟುಕೊಳ್ಳಲು ಪುಟಾಣಿ ಸರಕುಗೂಡು(Glovebox) ಇದೆ.

ಕಾಪಿನ ವಿಶೇಶತೆಗಳಲ್ಲಿ ಪ್ರಮುಕವಾಗಿ, ಕದಲ್ಗಾಪಿನ ಏರ‍್ಪಾಟು(Immobilizer), ಸಿಲುಕದ ತಡೆತದ ಏರ‍್ಪಾಟು(Anti-Locking Brake System) ಮತ್ತು ಎಲ್ಲ ಮಾದರಿಗಳಲ್ಲಿ ಓಡಿಸುಗನ ಗಾಳಿಚೀಲ(Driver Air Bag), ಮೇಲ್ಮಟ್ಟದ ಮಾದರಿಯಲ್ಲಿ 2 ಗಾಳಿಚೀಲಗಳನ್ನು ನೀಡಲಾಗಿದೆ.

ಪಯ್ಪೋಟಿ

ಹ್ಯುಂಡಾಯ್ ಸ್ಯಾಂಟ್ರೋಗೆ ಸುಜುಕಿ ಸೆಲೆರಿಯೋ(Celerio) ಮತ್ತು ಟಾಟಾ ಟಿಯಾಗೋ(Tiago) ಎದುರಾಳಿಗಳೆಂದು ಹೇಳಲಾಗುತ್ತಿದೆ. ಆಯಗಳ ಹೋಲಿಕೆ ನೋಡಿದಾಗ, ಅಗಲ ಮತ್ತು ಎತ್ತರದಲ್ಲಿ ಸ್ಯಾಂಟ್ರೋ ಎದುರಾಳಿ ಕಾರುಗಳೊಂದಿಗೆ ಸರಿಸಮನಾಗಿ ನಿಲ್ಲುತ್ತದೆ. ಇತರೆ ಆಯಗಳಲ್ಲಿ ಟಿಯಾಗೋ ಮತ್ತು ಸೆಲೆರಿಯೋ ಮುಂದಿವೆ.

new santro comparison with celerio and tiago

ಬಿಣಿಗೆಗಳ ಹೋಲಿಕೆಯಲ್ಲಿಯೂ 3 ಉರುಳೆಗಳ 1.2 ಲೀಟರ್ ಅಳತೆಯ ಟಿಯಾಗೋ ಬಿಣಿಗೆ, 1.1 ಲೀಟರ್‌ನ ಸ್ಯಾಂಟ್ರೋ ಮತ್ತು 1 ಲೀಟರ್‌ನ ಸೆಲೆರಿಯೋ ಬಿಣಿಗೆಗಳನ್ನು ಕಸುವು ಮತ್ತು ತಿರುಗುಬಲಗಳಲ್ಲಿ ಹಿಂದಿಕ್ಕಿದೆ.

engine comparison

7-ಇಂಚಿನ ಸೋಕುತೆರೆಯ ಆಪಲ್ ಮತ್ತು ಅಂಡ್ರಾಯ್ಡ್ ಜೊತೆ ಜೋಡಿಸಿಕೊಳ್ಳಬಲ್ಲ ತಿಳಿನಲಿ ಏರ‍್ಪಾಟು, ಸ್ಯಾಂಟ್ರೋ ಬಿಟ್ಟರೆ ಉಳಿದೆರಡು ಬಂಡಿಗಳಲ್ಲಿ ಕಂಡುಬರುವುದಿಲ್ಲ. ಹಿಂಬದಿಯ ತಿಟ್ಟಕ ಮತ್ತು ಹಿಂಬದಿಯ ಸಾಲಿನ ಕುಳಿರ‍್ಗಾಳಿ ಕಿಂಡಿಗಳು ಮಾತ್ರ ಸ್ಯಾಂಟ್ರೋದಲ್ಲಿ ಮಾತ್ರ ಅಳವಡಿಸಲಾಗಿದೆ.

features comparison - santro

ಬೆಲೆ

3.9 ಲಕ್ಶದ ಆರಂಬದ ಬೆಲೆಗಳಿಂದ 5.47 ಲಕ್ಶಗಳವರೆಗೆ ವಿವಿದ ಬೆಲೆಗಳಲ್ಲಿ ಸ್ಯಾಂಟ್ರೋ ದೊರೆಯಲಿದೆ. ಬೇರೆ ಬೇರೆ ಮಾದರಿಗಳ ಬೆಲೆಯನ್ನು ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.

hyundai santro price

(ಮಾಹಿತಿ ಮತ್ತು ಚಿತ್ರ ಸೆಲೆ: hyundai.com, auto.ndtv.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: