ಮೋಳಿಗೆ ಮಾರಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ಮೋಳಿಗೆ ಮಾರಯ್ಯ, Molige Marayya

——————————————————

ಹೆಸರು: ಮೋಳಿಗೆ ಮಾರಯ್ಯ

ಕಾಲ: ಕ್ರಿ.ಶ.1100-1200

ಊರು: ಹುಟ್ಟಿದ್ದು ಕಾಶ್ಮೀರ. ಅನಂತರ ಬಸವಣ್ಣನವರು ಇದ್ದ ಕಲ್ಯಾಣ ನಗರಕ್ಕೆ ಬಂದು ನೆಲೆಸಿದರು.

ಕಸುಬು: ಕಟ್ಟಿಗೆ/ಸವುದೆಯ ಹೊರೆಯನ್ನು ಹೊತ್ತು ಮಾರುವುದು. (ಮೋಳಿಗೆ=ಸವುದೆಯ ಕಟ್ಟು/ಒಣಗಿದ ಮರದ ಕೊಂಬೆ ರೆಂಬೆಗಳನ್ನು ಸೀಳಿದಾಗ ದೊರೆಯುವ ತುಂಡುಗಳ ಹೊರೆ.)

ದೊರೆತಿರುವ ವಚನಗಳು: 816

ವಚನಗಳ ಅಂಕಿತನಾಮ: ನಿಃಕಳಂಕ ಮಲ್ಲಿಕಾರ್ಜುನ

——————————————————

ಕದ್ದ ಕಳವ ಮರೆಸಿಕೊಂಡು
ನಾ ಸಜ್ಜನನೆಂಬಂತೆ
ಇದ್ದ ಗುಣವ ನೋಡಿ
ಹೊದ್ದಿ ಸೋದಿಸಲಾಗಿ
ಕದ್ದ ಕಳವು ಕೈಯಲ್ಲಿದ್ದ
ಮತ್ತೆ ಸಜ್ಜನತನವುಂಟೆ
ಇಂತೀ ಸಜ್ಜನಗಳ್ಳರ ಕಂಡು
ಹೊದ್ದದೆ ಹೋದ
ನಿಃಕಳಂಕ ಮಲ್ಲಿಕಾರ್ಜುನ.

ಸಮಾಜದ/ಜನಸಮುದಾಯದ ಸಂಪತ್ತನ್ನು ಲೂಟಿಮಾಡಿ ಸಿರಿವಂತರಾಗಿದ್ದರೂ, ತಮ್ಮನ್ನು ತಾವೇ “ ಒಳ್ಳೆಯವರು/ಗುಣವಂತರು/ಸತ್ಯವಂತರು “ ಎಂದು ಹೇಳಿಕೊಂಡು ಮೆರೆಯುತ್ತಿರುವ ವ್ಯಕ್ತಿಗಳ ಲಜ್ಜೆಗೇಡಿತನದ/ನಾಚಿಕೆಯಿಲ್ಲದ ನಡೆನುಡಿಯನ್ನು ಈ ವಚನದಲ್ಲಿ ಹೇಳಲಾಗಿದೆ.

( ಕಳ್+ದ್+ಅ=ಕಳ್ದ > ಕದ್ದ; ಕಳ್=ಅಪಹರಿಸು/ಲಪಟಾಯಿಸು/ದೋಚು/ಎಗರಿಸು; ಕದ್ದ=ಅಪಹರಿಸಿದ/ದೋಚಿದ/ಲಪಟಾಯಿಸಿದ; ಕಳವ=ಕಳ್ಳತನ ಮಾಡಿದ ಒಡವೆ ವಸ್ತು/ಸಂಪತ್ತನ್ನು; ಮರೆಸು=ಇತರರ ಕಣ್ಣಿಗೆ ಕಾಣದಂತೆ/ತಿಳಿಯದಂತೆ ಬಚ್ಚಿಡು/ಅಡಗಿಸಿಡು/ಮುಚ್ಚಿಡು; ಮರೆಸಿಕೊಂಡು=ಅಡಗಿಸಿಟ್ಟುಕೊಂಡು/ಬಚ್ಚಿಟ್ಟುಕೊಂಡು/ಮುಚ್ಚಿಟ್ಟುಕೊಂಡು;

ನಾ=ನಾನು; ಸಜ್ಜನನ್+ಎಂಬ+ಅಂತೆ; ಸಜ್ಜನ=ಒಳ್ಳೆಯ ನಡೆನುಡಿಗಳುಳ್ಳ ವ್ಯಕ್ತಿ; ಸಜ್ಜನನ್=ಒಳ್ಳೆಯವನು/ಗುಣವಂತ; ಎಂಬ=ಎನ್ನುವ/ಎಂದು ಹೇಳುವ; ಅಂತೆ=ಹಾಗೆ/ಆ ರೀತಿ/ ಆ ಬಗೆ;

ಕದ್ದ ಕಳವ ಮರೆಸಿಕೊಂಡು ನಾ ಸಜ್ಜನನೆಂಬಂತೆ=ಕದ್ದಿರುವ ಒಡವೆ ವಸ್ತುಗಳನ್ನು ಅಡಗಿಸಿಟ್ಟುಕೊಂಡು, ತಾನೊಬ್ಬ ಒಳ್ಳೆಯ ನಡೆನುಡಿಯುಳ್ಳವನು ಎಂದು ಇತರರ ಮುಂದೆ ಹೇಳಿಕೊಳ್ಳುವ ವ್ಯಕ್ತಿಯು ಜನಸಮುದಾಯದ/ಸಮಾಜದ ಕಣ್ಣಿಗೆ ಮಣ್ಣೆರಚುವ ಪ್ರಯತ್ನದಲ್ಲಿ ತೊಡಗಿರುತ್ತಾನೆ;

ಇರ‍್+ದ್+ಅ=ಇರ‍್ದ > ಇದ್ದ; ಇದ್ದ=ಇರುವ; ಗುಣ=ವ್ಯಕ್ತಿಯ ನಡೆನುಡಿಯಲ್ಲಿನ ರೀತಿನೀತಿ; ನೋಡಿ=ಕಂಡು/ತಿಳಿದು; ಹೊದ್ದು=ಹತ್ತಿರಕ್ಕೆ ಹೋಗುವುದು/ಸಮೀಪಿಸುವುದು; ಹೊದ್ದಿ=ಹತ್ತಿರಕ್ಕೆ ಹೋಗಿ; ಸೋದಿಸಲ್+ಆಗಿ; ಶೋಧ > ಸೋದ; ಶೋಧ=ಹುಡುಕುವುದು/ಕಂಡು ಹಿಡಿಯುವುದು/ತಡಕಾಡುವುದು;

ಇದ್ದ ಗುಣವ ನೋಡಿ ಹೊದ್ದಿ ಸೋದಿಸಲಾಗಿ=ತನ್ನನ್ನು ತಾನೇ ಸಜ್ಜನನೆಂದು ಹೇಳಿಕೊಳ್ಳುವ ವ್ಯಕ್ತಿಯ ಮಾತಿನ ದಿಟವನ್ನು ತಿಳಿಯಲೆಂದು, ಅವನ ಹತ್ತಿರಕ್ಕೆ ಹೋಗಿ, ಅವನು ತೊಟ್ಟಿದ್ದ ಬಟ್ಟೆಬರೆಗಳ ಒಳಗು ಹೊರಗನ್ನು ತಡಕಾಡಿ ನೋಡಿದಾಗ; ಕದ್ದ ಕಳವು=ಕಳ್ಳತನ ಮಾಡಿದ್ದ ಒಡವೆ ವಸ್ತು; ಕೈ+ಅಲ್ಲಿ+ಇದ್ದ; ಕೈಯಲ್ಲಿದ್ದ=ಅವನಲ್ಲಿಯೇ ಇತ್ತು/ಅವನ ಬಳಿಯಲ್ಲೇ ಇತ್ತು;

ಮತ್ತೆ=ಮಾಡಿದ್ದ ಕಳ್ಳತನದ ಮಾಲು/ಸರಕು/ವಸ್ತುವಿನ ಸಮೇತ ಸಿಕ್ಕಿಬಿದ್ದ ಮೇಲೆ; ಸಜ್ಜನತನ+ಉಂಟೆ; ಸಜ್ಜನತನ=ಒಳ್ಳೆಯತನ/ಒಳ್ಳೆಯ ವ್ಯಕ್ತಿತ್ತ; ಉಂಟೆ=ಇರುವುದೇ;

ಕದ್ದ ಕಳವು ಕೈಯಲ್ಲಿದ್ದ ಮೇಲೆ ಸಜ್ಜನತನವುಂಟೆ=ಕದ್ದ ಮಾಲು ಅವನ ಬಳಿಯಲ್ಲೇ ಸಿಕ್ಕಿದ ನಂತರವೂ ಅವನಲ್ಲಿ ಒಳ್ಳೆಯತನವನ್ನು ಕಾಣಲು ಆಗುತ್ತದೆಯೇ/ಅವನನ್ನು ಗುಣವಂತನೆಂದು ತಿಳಿಯಬಹುದೇ. ಅಂದರೆ ಆತ ಕಳ್ಳನೆಂಬುದು ದಿಟ;

ಇಂತು+ಈ; ಇಂತು=ಈ ರೀತಿಯಲ್ಲಿ/ಈ ಬಗೆಯಲ್ಲಿ; ಸಜ್ಜನ+ಕಳ್ಳರು; ಸಜ್ಜನಗಳ್ಳರು=ಜನರ ಮುಂದೆ ತಮ್ಮನ್ನು ತಾವೇ ಒಳ್ಳೆಯವರೆಂದು ಹೇಳಿಕೊಳ್ಳುತ್ತ, ನಿಜಜೀವನದಲ್ಲಿ ಸಮಾಜದ/ಜನಸಮುದಾಯದ ಸಂಪತ್ತನ್ನು ದೋಚುತ್ತಿರುವ ನೀಚರು/ವಂಚಕರು/ಕೇಡಿಗಳು/ಕ್ರೂರಿಗಳು;

ಕಂಡು=ನೋಡಿ; ಹೊದ್ದದೆ=ಹತ್ತಿರಕ್ಕೆ ಬಾರದೆ; ಹೋದ=ಹೋದನು; ಕಳಂಕ=ಕುಂದು/ಕೊರತೆ/ತಪ್ಪು; ನಿಃಕಳಂಕ=ಯಾವುದೇ ಬಗೆಯ ತಪ್ಪು/ಕೊರತೆ/ಕುಂದುಗಳು ಇಲ್ಲದವನು; ಮಲ್ಲಿಕಾರ್ಜುನಲಿಂಗ=ಶಿವ/ಈಶ್ವರ; ನಿಃಕಳಂಕ ಮಲ್ಲಿಕಾರ್ಜುನಲಿಂಗ=ಮೋಳಿಗೆ ಮಾರಯ್ಯನ ವಚನಗಳ ಅಂಕಿತನಾಮ;

ಇಂತೀ ಸಜ್ಜನಗಳ್ಳರ ಕಂಡು ಹೊದ್ದದೆ ಹೋದ ನಿಃಕಳಂಕ ಮಲ್ಲಿಕಾರ್ಜುನಲಿಂಗ=ಜನಸಮುದಾಯದ/ಸಮಾಜದ ಸಂಪತ್ತನ್ನು ದೋಚಿ, ಜನರಿಗೆ ಕೇಡನ್ನು ಬಗೆಯುವ ವ್ಯಕ್ತಿಗಳಿಂದ ದೇವರು ದೂರವಿರುತ್ತಾನೆ. ಏಕೆಂದರೆ ಸಮಾಜಕ್ಕೆ/ಜನಸಮುದಾಯಕ್ಕೆ ಒಳಿತನ್ನು ಮಾಡುವ ನಡೆನುಡಿಯುಳ್ಳವರಿಗೆ ಮಾತ್ರ ದೇವರು ಒಲಿಯುತ್ತಾನೆ ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು)

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Shivu says:

    ಇಂತಹ ವಚನಗಳು ಓದುತ್ತಾ ಹೋದರೆ ನಮ್ಮ ಜೀವನ ವನ್ನು ರೂಪಿಸಿ ಕೊಳ್ಳಬಹುದು
    . ಶರಣು ಶರಣಾರ್ಥಿ 🙏

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *