ಇದು ಬೆನ್ನ ಮೇಲಿನ ಬರಹ!

– ವೆಂಕಟೇಶ ಚಾಗಿ.

ಬೆನ್ನ ಮೇಲಿನ ಬರಹ

ಅರೆ, ಇದೇನಿದು? ನಾವೆಲ್ಲಾ ‘ಹಣೆಯ ಮೇಲಿನ ಬರಹ’ ಎಂಬ ಮಾತನ್ನ ಕೇಳಿದ್ದೀವಿ ಆದರೆ ಇದೇನಿದು ಬೆನ್ನ ಮೇಲಿನ ಬರಹ? ವಿಚಿತ್ರವಾಗಿದೆಯಲ್ವಾ! ಹೌದು, ಇದು ವಿಚಿತ್ರವಾದರೂ ಸತ್ಯ. ಇದು ನಂಬಲೇಬೇಕಾದ ವಿಶಯವೇ. ನಂಬಿ, ಅರಿತು ಅಳವಡಿಸಿಕೊಳ್ಳಬೇಕಾದ ವಿಶಯವೂ ಕೂಡ. ಹಣೆಬರಹ ಎಂದು ನಾವೇನು ಹೇಳುತ್ತೇವೆಯೋ ಅದು ನಮ್ಮ ಹುಟ್ಟಿನಿಂದ ಸಾಯುವವರೆಗಿನ ಕತೆ-ವ್ಯತೆ. ಅದನ್ನು ಬದಲಾಯಿಸಲು ಸಾದ್ಯವಿಲ್ಲ. ಒಳಿತು ಕೆಡುಕುಗಳೆಲ್ಲದಕೂ ನಮ್ಮ ಹಣೆಬರಹವನ್ನೇ ಕಾರಣವನ್ನಾಗಿಸುತ್ತೇವೆ. ಹಾಗಾದರೆ ಇದೇನಿದು ಬೆನ್ನ ಮೇಲಿನ ಬರಹ?

ಹೌದು, ಇದು ಕೂಡ ನಮಗೇ ಸಂಬಂದಿಸಿದ್ದು. ಈ ಬರಹವನ್ನು ಸುಲಬವಾಗಿ ಓದುವವರು ನಾವಲ್ಲ. ನಮ್ಮನ್ನು ಗಮನಿಸುವವರು. ನಮ್ಮ ವ್ಯಕ್ತಿತ್ವವನ್ನು ಅಳೆಯುವವರು. ನಾವೂ ಕೂಡಾ ಓದಬಹುದು, ಆದರೆ ತಾಳ್ಮೆ, ಸಮಯ ಇರಬೇಕಶ್ಟೇ. ಮನಸ್ಸು ಮಾಡಬೇಕಶ್ಟೇ.

ಗೆಳೆಯ ಸಂಪತ್ ತಂಬಾ ಒಳ್ಳೆಯವ. ಆದರೆ ಸ್ವಲ್ಪ ಮುಂಗೋಪಿ. ದುಡುಕಿನ ಸ್ವಬಾವ. ಅವನಿಗೆ ಬೇರೆಯವರ ತಪ್ಪುಗಳು ಅದೆಶ್ಟು ಸಲೀಸಾಗಿ ಕಾಣುತ್ತಿದ್ದವೆಂದರೆ, ನೇರವಾಗಿ ಅವರನ್ನು ಬೈದುಬಿಡುತ್ತಿದ್ದ. ಹಾಲಿನವನು ಸಮಯಕ್ಕೆ ಸರಿಯಾಗಿ ಬಾರದೇ ಇದ್ದರೆ, ಮನೆಯಲ್ಲಿ ಹೆಂಡತಿ ಅಡುಗೆ ಬಡಿಸುವುದು ತಡವಾದರೆ, ಮಕ್ಕಳು ಕಿಡಿಗೇಡಿತನ ಮಾಡಿದಾಗ, ಯಾರಾದರೂ ಮಾಡಬೇಕಾದ ಕೆಲಸವನ್ನು ಮಾಡದೇ ಇದ್ದರೆ ಬಯ್ಯುತ್ತಿದ್ದನು. ರಾಜಕೀಯ, ಸಾಮಾಜಿಕ, ದಾರ‍್ಮಿಕ ಹೀಗೆ ಯಾವುದೇ ಕ್ಶೇತ್ರಗಳಲ್ಲಿ ತಪ್ಪು ಮಾಡಿದವರು ಇವನ ಬೈಗುಳಕ್ಕೆ ಸುಲಬ ತುತ್ತಾಗುತ್ತಿದ್ದರು. ಆದರೆ ಒಮ್ಮೆಯೂ ಒಬ್ಬರ ಒಳ್ಳೆ ಕೆಲಸವನ್ನು ಅಶ್ಟು ಸುಲಬವಾಗಿ ಹೊಗಳಿದವನಲ್ಲ.

ಎಲ್ಲರ ತಪ್ಪುಗಳ ಬಗ್ಗೆ ಮಾತನಾಡುವ ಸಂಪತ್ ತಾನು ತಪ್ಪೇ ಮಾಡಿಲ್ಲವೆಂಬಂತೆ ವರ‍್ತಿಸುತ್ತಿದ್ದ. ಹಾಗೆಯೇ ತನ್ನ ತಪ್ಪುಗಳನ್ನೆಂದೂ ತನ್ನ ಅರಿವಿಗೆ ತಂದುಕೊಳ್ಳುತ್ತಿರಲಿಲ್ಲ. ಇದರಿಂದಾಗಿ ಅವನೆಂದರೆ ಸ್ನೇಹಿತರಿಗೆ, ಇತರರಿಗೆ ಅಶ್ಟಕಶ್ಟೇ. ಅವನನ್ನು ಬಲ್ಲವರು ಹಿಂದಿನಿಂದ ಅವನ ಬಗ್ಗೆ ಮಾತನಾಡುತ್ತಿದ್ದರು. ಆದರೆ, ಅವನ ಎದುರು ಏನೂ ಹೇಳುತ್ತಿರಲಿಲ್ಲ.

ಸಂಪತ್ ನಂತ ಮನಸ್ಸಿನವರು ತುಂಬಾ ಜನ ಇದ್ದಾರೆ. ಅವರಲ್ಲಿ ನಾವೂ ಇರಬಹುದು. ನಮ್ಮ ಮಾತು ಕ್ರುತಿ, ಸರಿ, ತಪ್ಪುಗಳ ಬಗ್ಗೆ ಗಮನ ಕೊಡದೇ ಇನ್ನೊಬ್ಬರ ನಡವಳಿಕೆ, ವ್ಯಕ್ತಿತ್ವದ ಬಗ್ಗೆ ಹಗುರವಾಗಿ ಮಾತನಾಡಿಬಿಡುತ್ತೇವೆ. ಆದರೆ ನಾವು ನಡೆದುಕೊಳ್ಳುವ ರೀತಿಯಲ್ಲಿನ ಸರಿ ತಪ್ಪುಗಳ ಬಗ್ಗೆ ನಾವೆಂದೂ ಗಮನ ಕೊಡುವುದಿಲ್ಲ. ನಾವು ಮಾಡುವುದೆಲ್ಲಾ ಸರಿ ಎಂದುಕೊಂಡಿರುತ್ತೇವೆ. ಆದರೆ ನಾವೂ ಕೂಡ ತಪ್ಪೂ ಮಾಡುತ್ತಿರಬಹುದು. ಹಾಗಾಗಿ ನಾವು ಮಾಡುವ ಕೆಲಸ, ನಡೆದುಕೊಳ್ಳುತ್ತಿರುವ ರೀತಿಗಳ ಬಗ್ಗೆ ಅವಲೋಕನ ಅತೀ ಮುಕ್ಯ. ಇದೊಂದು ರೀತಿಯಲ್ಲಿ ನಮ್ಮ ಬೆನ್ನ ಮೇಲಿನ ಬರಹ ಎಂದರೆ ತಪ್ಪಾಗಲಾರದು. ಈ ಬರಹ ನಮ್ಮ ಮಾತು, ರೀತಿ-ರಿವಾಜುಗಳಿಂದ ಬರೆಯಲ್ಪಡುತ್ತದೆ.

ನಮ್ಮ ಬಗೆಗಿನ ಚಿತ್ರಣ ನಮ್ಮ ಬೆನ್ನ ಮೇಲೆ ಮೂಡಿಸಲ್ಪಡುತ್ತದೆ ಅಂತ ಅಂದುಕೊಂಡರೆ, ಅದನ್ನು ಸುಲಬವಾಗಿ ಓದುವವರು ಇತರರು. ನಾವಲ್ಲ. ಯಾಕೆಂದರೆ ಅದು ನಮಗೆ ಕಾಣುವುದಿಲ್ಲ. ಆದ್ದರಿಂದ, ನಮ್ಮ ಬಗ್ಗೆ ನಾವೇ ಮಾಡಿಕೊಳ್ಳುವ ಅವಲೋಕನದಿಂದ ನಮ್ಮ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದುಕೊಳ್ಳಬಹುದು.

ಹಣೆಬರಹವನ್ನು ಬದಲಾಯಿಸಲು ಸಾದ್ಯವಿಲ್ಲದಿದ್ದರೂ ಈ ನಮ್ಮ ಬೆನ್ನ ಮೇಲಿನ ಬರಹವನ್ನು ಸುಲಬವಾಗಿ ಬದಲಾಯಿಸು ಪ್ರಯತ್ನ ಮಾಡಬಹುದು. ಏನಂತೀರಿ!?

( ಚಿತ್ರ ಸೆಲೆ: wikihow )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: