ಬೆಲ್ ಬಾಟಂ ಹೇಗಿದೆ?
ಎಂಬತ್ತರ ದಶಕದ ಬೆಲ್ ಬಾಟಂ ಪ್ಯಾಂಟುಗಳು ಎಶ್ಟು ಜನರಿಗೆ ನೆನಪಿದೆಯೋ ಇಲ್ಲವೋ, ನರಸಿಂಹಯ್ಯನವರ ಪತ್ತೇದಾರಿ ಕತೆಗಳು ಎಲ್ಲರಿಂದ ಮರೆಯಾದವೇನೋ ಅನ್ನುವಶ್ಟರಲ್ಲಿ ‘ಬೆಲ್ ಬಾಟಂ’ ಅನ್ನುವ ಕನ್ನಡ ಚಿತ್ರ ಅವೆರಡನ್ನೂ ಮತ್ತೆ ನೆನಪಿಸುವಂತೆ ಮಾಡಿದೆ. ಮೂರು ಪೋಲಿಸ್ ಟಾಣೆಗಳಲ್ಲಿ ನಡೆಯುವ ಒಂದೇ ರೀತಿಯ ದರೋಡೆಯನ್ನು, ಡಿಟೆಕ್ಟಿವ್ ಅಂತ ತನ್ನನ್ನು ತಾನೇ ಕರೆದುಕೊಳ್ಳುವ ನಾಯಕ ದಿವಾಕರ ಹೇಗೆ ಕಂಡುಹಿಡಿಯುತ್ತಾನೆ, ಇದರಲ್ಲಿ ಆತನ ಪ್ರೇಯಸಿ, ಅಪ್ಪ ಮುಂತಾದವರುಗಳ ಪಾತ್ರವೇನು ಎಂಬುದು ‘ಬೆಲ್ ಬಾಟಂ’ ಚಿತ್ರದ ಕತೆ.
ಪತ್ತೇದಾರಿ ಚಿತ್ರಗಳು ಚೆನ್ನಾಗಿರಬೇಕಾದರೆ ಮೊದಲಿಂದ ಕೊನೆವರೆಗೂ ಮುಂದೇನಾಗುತ್ತೆ ಎಂಬ ಕುತೂಹಲವಿರಬೇಕು, ಅವರನ್ನು ಬಿಟ್ಟು, ಇವರನ್ನು ಬಿಟ್ಟು ಅವರು ಯಾರು ಅನ್ನೋ ಹಾಗೆ ಪಾತ್ರಗಳನ್ನು ನಿಲ್ಲಿಸಬೇಕು, ಇದರಲ್ಲಿ ಈ ಚಿತ್ರದ ಕತೆಗಾರ ಟಿ.ಕೆ.ದಯಾನಂದ ಅವರು ಗೆದ್ದಿದ್ದಾರೆ. ಅದನ್ನು ಅಚ್ಚುಕಟ್ಟಾಗಿ ಕಣ್ಣಮುಂದೆ ನಿಲ್ಲಿಸಿದ ನಿರ್ದೇಶಕ ಜಯತೀರ್ತರಿಗೂ ಪೂರ್ಣ ಅಂಕಗಳು ಸಲ್ಲುತ್ತವೆ. ಮೊದಲಿನಿಂದ ಕೊನೆಯವರೆಗೂ ಒಂದೇ ಒಂದು ದ್ರುಶ್ಯವೂ ಬೇಜಾರಾಗದ ಹಾಗೆ ಚಿತ್ರ ನಿರ್ದೇಶಿಸಿರುವಲ್ಲಿ ಅವರ ಜಾಣ್ಮೆ ಕಾಣುತ್ತದೆ.
ಈ ಚಿತ್ರದಲ್ಲಿ ಮಲೆನಾಡಿನ ಪರಿಸರವೂ ಒಂದು ಪಾತ್ರದಂತೆ ಕಾಣಿಸುವಲ್ಲಿ ಚಾಯಾಗ್ರಾಹಕ ಅರವಿಂದ್ ಕಶ್ಯಪ್ ಪಾತ್ರವಿದೆ. ಸಹಜ ಬೆಳಕಿನ ದ್ರುಶ್ಯಗಳಾಗಲಿ, ಮುಂಜಾನೆಯ ದ್ರುಶ್ಯಗಳಲ್ಲಿಯೂ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅಜನೀಶ್ ಲೋಕನಾತ್ ಅವರ ಹಿನ್ನಲೆ ಸಂಗೀತ ಈ ಚಿತ್ರಕ್ಕೊಂದು ಮೆರುಗನ್ನು ತಂದುಕೊಟ್ಟಿದೆ, ಈ ಚಿತ್ರದ ಒಂದೇ ಒಂದು ಹಾಡು ‘ಏತಕೆ’ ಕೇಳಲು ಮಜವಾಗಿದೆ. ಎಂಬತ್ತರ ದಶಕದ ಚಿತ್ರದಲ್ಲಿ ಎಲ್ಲವೂ ಆ ರೀತಿಯೇ ಕಾಣಿಸುವಲ್ಲಿ ಕಲಾ ನಿರ್ದೇಶಕರು ಹಾಗು ಚಿತ್ರತಂಡದ ಶ್ರಮ ಕಾಣುತ್ತದೆ. ರಗು ನಿಡುವಳ್ಳಿಯವರ ಮಾತುಗಳು ಚಿತ್ರದ ಇನ್ನೊಂದು ಶಕ್ತಿ.
ರಿಶಬ್ ಶೆಟ್ಟಿಯಲ್ಲದೇ ಬೇರೆ ಯಾರಾದರೂ ಡಿಟೆಕ್ಟಿವ್ ದಿವಾಕರನ ಪಾತ್ರ ಮಾಡುವುದು ಕಶ್ಟವಿತ್ತೇನೋ, ಒಂದು ಚೌಕಟ್ಟಿಲ್ಲದ ನಗಿಸಿಕೊಂಡು ಹೋಗುವ ಪಾತ್ರದಲ್ಲಿ ರಿಶಬ್ ಗಮನ ಸೆಳೆಯುತ್ತಾರೆ, ಹರಿಪ್ರಿಯ, ಅಚ್ಯುತ್ ಮುಂತಾದವರು ತಮ್ಮ ಪಾತ್ರದಲ್ಲಿ ಅಚ್ಚುಕಟ್ಟಾದ ಅಬಿನಯ ನೀಡಿದ್ದಾರೆ. ಪ್ರಮೋದ್ ಶೆಟ್ಟಿ, ಸಗಣಿ ಪಿಂಟೋ(ಸುಜಯ್), ಪೋಟೋಗ್ರಾಪರ್, ಮರಕುಟಕ ಪಾತ್ರದಲ್ಲಿ ಯೋಗರಾಜ್ ಬಟ್, ಶಿವಮಣಿ ಮುಂತಾದ ಪಾತ್ರಗಳು ಮನಸಿನಲ್ಲಿ ನಿಲ್ಲುತ್ತವೆ.
ಈ ಚಿತ್ರದಲ್ಲಿ ಒಂದು ನಿರ್ದಿಶ್ಟವಾದ ನುಡಿ ಪ್ರಕಾರ ಇಲ್ಲದಿರುವುದು ಅಲ್ಲಲ್ಲಿ ಕಂಡುಬರುತ್ತದೆ, ಎಲ್ಲಾ ಪ್ರದೇಶಗಳಿಗೂ ಸಲ್ಲಬೇಕೆಂಬ ಪ್ರಯತ್ನವೇನೋ ಎಂಬಂತೆಯೂ ಕಂಡುಬರುತ್ತದೆ. ಈ ಚಿತ್ರ ನಿಮಗೆ ತೇಜಸ್ವಿಯವರ ಬರಹಗಳನ್ನು ಓದಿದಾಗ ಆಗುವ ಅನುಬವ ನೀಡುತ್ತದೆ ಎಂದರೆ ತಪ್ಪಲ್ಲ.
(ಚಿತ್ರಸೆಲೆ: RishabShetty_Twitter)
ಇತ್ತೀಚಿನ ಅನಿಸಿಕೆಗಳು