“ಅಜ್ಜಿ ಮನೆಗೆ ನಾನು ಹೋಗಲೇಬೇಕು”

– ಮಾರಿಸನ್ ಮನೋಹರ್.

ಮಕ್ಕಳು, ಬೇಸಿಗೆ ರಜೆ, kids, vacation

ನಾನು ಹೆಚ್ಚಾಗಿ ಬೇಸಿಗೆ ಬಿಡುವಿನ ದಿನಗಳನ್ನು ಕಳೆದದ್ದು ತಾತ-ಅಜ್ಜಿಯರ ಮನೆಗಳಲ್ಲಿ. ಬೇಸಿಗೆ ಬಿಡುವಿನಲ್ಲಿ ನಾನು ನಮ್ಮ ಮನೆಯಲ್ಲಿ ಇದ್ದದ್ದು ತುಂಬಾ ಕಡಿಮೆ. ಕಲಿಕೆಮನೆಯ ಕೊನೆಯ ದಿನದಂದು ಟೀಚರುಗಳು ಬೇಸಿಗೆ ರಜೆಯ ಮನೆಗೆಲಸ, ಶುದ್ದ ಬರಹ, ಹ್ಯಾಂಡ್‌ರೈಟಿಂಗ್ ಎಂದು ಎಶ್ಟು ಕೊಟ್ಟರೂ, ನಾವೂ ಹರಳೆಣ್ಣೆ ಕುಡಿದವರ ಹಾಗೆಯೇ ತೆಗೆದುಕೊಂಡೆವು. ಎಲ್ಲ ಹೊತ್ತಗೆಗಳಿದ್ದ ಆ ಬ್ಯಾಗನ್ನು ತಂದು ಮೂಲೆಗೆ ಬಿಸಾಡಿದ ಮೇಲೆಯೇ ನನ್ನ ಹೊಟ್ಟೆ ತಂಪಾಯಿತು. ನಾನು ಆ ‘ಬೇಸಿಗೆ ಮನೆಕೆಲಸ’ ಕೊಟ್ಟಿದ್ದ ಹೊತ್ತಗೆಯನ್ನು ಸೀದಾ ಒಯ್ದು ಮನೆಯ ಹಳೇ ಸಾಮನುಗಳನ್ನು ಇಡುತ್ತಿದ್ದ ಗೋದಾಮಿನಲ್ಲಿ ಬಚ್ಚಿಟ್ಟು ಬಂದೆ. ಬೇಸಿಗೆ ಬಿಡುವು ಬಂತು ಎಂದು ಮನಸ್ಸು ಕಟ್ಟುಬಿಚ್ಚಿದ ಎಮ್ಮೆ ಕರುವಿನ ಹಾಗೆ ಎಲ್ಲೆಂದರಲ್ಲಿ ಕುಣಿಯಲು ಮುಂದು ಮಾಡಿತು.

ನಾನು ಮನೆಗೆ ಬಂದಿದ್ದವನೇ ಹೊತ್ತಗೆಗಳಿದ್ದ ಚೀಲ ಬಿಸಾಡಿ ಹೊರಗೆ ಆಡಲು ಹೋಗಿದ್ದೆ. ನನಗೆ ಆಗ ಇನ್ಯಾವ ಬಯ?! ಆದರೂ ಹೊತ್ತು ಮುಳುಗುವ ಹೊತ್ತಿಗೆ ಮನೆಗೆ ಬರುವಾಗ, ಪಪ್ಪನ ಅಂಜಿಕೆ ಸಣ್ಣದಾಗಿ ಮನದಲ್ಲಿ ಸುಳಿಯುತ್ತಿತ್ತು. ಆಡಿ ಮನೆಗೆ ಬಂದ ನಾನು ತಿಳಿನೀರ ತಕ್ಕೊಂಡು ಬಂಗಾರ ಮೋರೆಯನ್ನ ಮತ್ತು ಅಂಗಾಲುಗಳನ್ನು ನಾನೇ ತೊಳೆದುಕೊಂಡೆ. ರಾತ್ರಿ ಊಟ ಮುಗಿಯಿತು, ಬೆಕ್ಕಿನ ಮರಿಯು ತನ್ನ ತಾಯಿಯ ಸುತ್ತ ಮೈ ತಿಕ್ಕುತ್ತಾ ಪೀಡಿಸುವ ಹಾಗೆ ನಾನು ನನ್ನ ತಾಯಿಯ ಸುತ್ತ ಸುಳಿಯತೊಡಗಿದೆ. “ಮಮ್ಮಿ, ನಾನು ಅಜ್ಜಿ ಮನೆಗೆ ಹೋಗುತ್ತೇನೆ, ನಾಳೆ” ಅಂತ ನೂರು ಸಾರಿ ಹೇಳಿದೆ, ಬೇರೆ ಬೇರೆ ಬಂಗಿಗಳನ್ನು ಮುದ್ದು ಮುಕಬಾವಗಳನ್ನು ಎಕ್ಸಪೆರಿಮೆಂಟ್ ಮಾಡುತ್ತಾ! ಎಕ್ಸಪೆರಿಮೆಂಟ್ ಸಕ್ಸಸ್ ಆಯಿತು. ಅಮ್ಮ ಪಪ್ಪನ ಬಳಿ, “ಇವನನ್ನು ನಾಳೆ ಅವರ ಅಜ್ಜಿ ಬಳಿ ಬಿಟ್ಟು ಬನ್ನಿ” ಎಂದಳು. ಕಟ್ಟುಬಿಚ್ಚಿದಂತಿದ್ದ ಎಮ್ಮೆ ಕರುವಂತೂ ಆಗ ಆಗಸದಲ್ಲಿ ಹಾರಾಡುತ್ತಾ ಇರುಳು ನಿದ್ದೆ ಮಾಡುವುದನ್ನೇ ಮರೆಯಿತು.

ಮುಂಜಾನೆ ಎದ್ದವನೇ ರಾಕೆಟ್ ಸ್ಪೀಡಿನಲ್ಲಿ ಹಲ್ಲುಜ್ಜುವುದು, ಮಿಂದುಕೊಳ್ಳುವುದು, ತಿಂಡಿ ತಿನ್ನುವುದು, ಡ್ರೆಸ್ ಗಳನ್ನು ಪ್ಯಾಕ್ ಮಾಡಿಕೊಳ್ಳುವುದನ್ನು ಮುಗಿಸಿ ತಯಾರಾಗಿ ಒಂಟಿ ಕಾಲಿನ ಮೇಲೆ ನಿಂತೆ. ಕಲಿಕೆಮನೆಗೆ ಹೋಗುವಾಗ ಎಂದೂ ಕಾಣಿಸದ ಆರ‍್ಬಟ ಇವತ್ತು ಕಂಡ ಅಪ್ಪ-ಅಮ್ಮ ನನ್ನ ಹುಚ್ಚಾಟಕ್ಕೆ ನಕ್ಕರು. ನನಗೆ ಅದರ ಪರಿವೆಯೇ ಇರಲಿಲ್ಲ. ಪಪ್ಪನನ್ನು ಬೆಡ್ ಮೇಲಿಂದ ಎಳೆದು “ಬೇಗ ತಯಾರಾಗು” ಅಂದೆ. ಅಜ್ಜಿ ಮನೆಗೆ ಹೋಗಲು ಮನೆಯಿಂದ ಹೊರಬೀಳುವಾಗ ಜೈಲಿನಿಂದ ಬಿಡುಗಡೆ ಆಗುವ ಕೈದಿಯಂತೆ ನನ್ನ ಸಂತಸ ಮುಗಿಲು ಮುಟ್ಟಿತ್ತು. ಡ್ರೆಸ್ ಗಳಿದ್ದ ತೂಕದ ಬ್ಯಾಗನ್ನು ನಾನು ಹಿಡಿದುಕೊಂಡಾಗ ನನ್ನ ಕಯ್ಗಳು ಎಶ್ಟೂ ನೋಯಲಿಲ್ಲ! ಬೇಗ ಬೇಗ ನಾನು ಮುಂದೆ ಮುಂದೆ ಹೋಗುತ್ತಾ “ಪಪ್ಪ ಬಾ ಬೇಗ, ಎಶ್ಟು ಹಳ್ಳಗೆ (ಮೆಲ್ಲಗೆ) ನಡೀತಾ ಇದ್ದಿಯಾ?” ಅಂತ ಕೂಗ್ತಾ ಇದ್ದೆ. ಮೊದಲು ಎಶ್ಟೋ ಸಲ ಅಜ್ಜಿ ಮನೆಗೆ ಹೋಗುವ ಯೋಜನೆಗಳು ದೊಡ್ಡವರ ಕೆಲಸಗಳು ಅಡ್ಡ ಬಂದು ಪೇಲ್ ಆಗಿದ್ದವು. ಅದಕ್ಕೆ ನಾನು ರಿಸ್ಕ್ ಯಾಕೆ ಅಂತ ಪಪ್ಪನಿಗೆ ಲಗುಬಗೆಸುತ್ತಿದ್ದೆ.

‘ಕೋರಿಕೆಯ ನಿಲುಗಡೆ’ ಬೋರ‍್ಡಿನ ಬಳಿ ಬಂದು ನಿಂತೆವು. ನನ್ನ ಆತುರಕ್ಕೆ ಪುಟಿ ಹಚ್ಚಲು ಅಜ್ಜಿ ಊರಿಗೆ ಬಸ್ಸುಗಳು ತುಂಬಾ ಕಡಿಮೆ ಇದ್ದವು. ಬರುತ್ತಿದ್ದವೆಲ್ಲಾ ಆ ಊರಿಗೆ ಹೋಗುವುದಿಲ್ಲ ಅನ್ನುವ ಬಸ್ಸು, ಟಾಮ್ ಟಾಮ್ ಗಳೇ. ನಾನು ಪಪ್ಪ ಅಲ್ಲಿ ಬಸ್ಸಿಗಾಗಿ ನಿಂತು ನಿಂತು ಅರ‍್ದ ಗಂಟೆಗೂ ಮೇಲಾಗಿತ್ತು. ಬೇಸಿಗೆಯ ಬಿಸಿಲೇರುತ್ತಿತ್ತು, ಮಿಗಿಲಾಗಿ ಪಪ್ಪನ ತಾಳ್ಮೆ ಕೊನೆಯಾಗುವ ಎಲ್ಲ ಲಕ್ಶಣಗಳು ಗೋಚರವಾಯ್ತು. ನನಗೆ ಅಜ್ಜಿ ಮನೆಗೆ ಹೋಗುವ ಯೋಜನೆ ಪೇಲಾಗುವ ಅಂಜಿಕೆ ಬೆಳೆಯತೊಡಗಿತು. ಪಪ್ಪ “ಅರ‍್ದ ಗಂಟೆ ಬಿಟ್ಟು ಮತ್ತೆ ಬರೋಣ, ಈಗ ಮನೆಗೆ ಹೋಗುವ ಬಾ” ಅಂದರು. ಇದನ್ನು ಕೇಳಿ ನನ್ನ ದುಕ್ಕದ ಕಟ್ಟೆ ಒಡೆದು ಅಳುಮೋರೆ ಮಾಡಿಕೊಂಡು ಪಪ್ಪನಿಂದ ದೂರಕ್ಕೆ ಸರಿದು ಹೋಗಿ ನಿಂತೆ. ಯಾಕೆಂದರೆ ನನಗೆ ಗೊತ್ತಿತ್ತು, ನಾನು ಆಗ ಮನೆಗೆ ಹೋದರೆ ಅಜ್ಜಿ ಮನೆಗೆ ಈ ಬೇಸಿಗೆ ಬಿಡುವಿನಲ್ಲಿ ಹೋಗುವುದಕ್ಕೆ ಆಗುವುದೇ ಇಲ್ಲ ಅಂತ. ನನ್ನ ಅಳುಮೋರೆ ನೋಡಿ ಪಪ್ಪ ಇನ್ನೂ ಸ್ವಲ್ಪ ಕಾಯಲು ಮುಂದಾದರು.

ಬಸ್ಸುಗಳು ಬರಲೇ ಇಲ್ಲ. ನಾನನ್ತೂ ಹಿಂದಕ್ಕೆ ಮನೆಗೆ ಹೋಗುವುದಿಲ್ಲ ಅಂತ ‘ಅಜ್ಜಿ ಶಪತ’ ಮಾಡಿದ್ದೆ! ಪಪ್ಪನಿಂದ ಎರಡು ಪೆಟ್ಟು ತಿಂದಾದರೂ ಪರವಾಗಿಲ್ಲ, ನಾನು ಇವತ್ತು ಅಜ್ಜಿ ಮನೆಗೆ ಹೋಗೇ ತೀರುತ್ತೇನೆ ಅಂತ ಮನಸಿನಲ್ಲಿ ದಿಟ ಮಾಡಿಕೊಂಡಿದ್ದೆ. ದೂರದಿಂದ ಒಂದು ಬಾರೀ ಬಂಡಿ ಬಂತು, ಅದು ಲಾರಿ! ಪಪ್ಪ ಕೈ ಮಾಡಿ ನಿಲ್ಲಿಸಿದರು. ಅದು ಅಜ್ಜಿಯಿದ್ದ ಊರಿನ ಮೇಲಿಂದ ಹಾದು ಹೋಗುತ್ತಿತ್ತು. ಲಾರಿ ಡ್ರೈವರ್ “ಬರ‍್ರಿ, ಜಲ್ದಿ ಬರ‍್ರಿ… ನಾ ಆ ಕಡಿಗೆ ಹೊಗ್ಲತಿದೆ” ಅಂದ. ಬಂಡಿ ಯಾವುದಾದರೇನು? ಅಜ್ಜಿಯ ಊರಿಗೆ ಮುಟ್ಟುವುದು ನನಗೆ ಬೇಕಾಗಿತ್ತು. ಪಪ್ಪ, ನಾನೂ ಲಾರಿಯನ್ನು ಕಶ್ಟಪಟ್ಟು ಹತ್ತಿದೆವು. ಅದೊಂದು ಕಲ್ಲುಪಡಿ (ಜಲ್ಲಿ ಕಲ್ಲು) ಲಾರಿ, ಆದರೆ ಕ್ಯಾಬಿನ್ ಚೆನ್ನಾಗಿತ್ತು. ಬೇಸಿಗೆ ಬಿಡುವು ಮತ್ತು ಲಾರಿಯಲ್ಲಿ ಮೊದಲ ಬಾರಿಗೆ ಪ್ರಯಾಣ ಮಾಡುತ್ತಿದ್ದ ನನ್ನ ಕುಶಿ ಎರಡು ಪಟ್ಟಾಗಿತ್ತು. ಲಾರಿಯಾಗಿದ್ದರಿಂದ ಎಲ್ಲಿಯೂ ನಿಲ್ಲದೇ ಬೇಗನೇ ಅಜ್ಜಿಯ ಊರನ್ನು ಮುಟ್ಟಿತು. ಲಾರಿಯವನಿಗೆ ಹಣ ಕೊಟ್ಟು ಕೆಳಗೆ ಇಳಿದೆವು. ನಾನು ಬ್ಯಾಗನ್ನು ಹಿಡಿದುಕೊಂಡು ಅಜ್ಜಿಯ ಮನೆ ಕಡೆಗೆ ಲಗುಬಗೆಯಿಂದ ಓಡಿದೆ. ಪಪ್ಪ ಹಿಂದಿನಿಂದ “ಹಳ್ಳಗೆ ಓಡೋ, ಬಿದ್ದು ಬಿಡ್ತಿಯಾ ನೋಡು” ಅಂತ ಕೂಗುತ್ತಿದ್ದರು. ಅಜ್ಜಿಯನ್ನು ನೋಡುತ್ತಲೇ “ಅಜ್ಜಿ…” ಅಂತ ಚಿರುತ್ತಾ ಅವಳ ಬಳಿ ಹೋದೆ. ಅಜ್ಜಿ ನಗುತ್ತಾ ಅಪ್ಪಿಕೊಂಡು ಮುತ್ತಿನ ಮಳೆ ಸುರಿಸಿದಳು.

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: