ಕಾರ‍್ಪೆಂಟರ್ ಸಹವಾಸ – ‘ಹೀಗೊಂದು ಸಾಹಸ’!

– ಮಾರಿಸನ್ ಮನೋಹರ್.

 

carpenter, ಬಡಗಿ

ನಮ್ಮದು ಪುರುಶ ಪ್ರದಾನ ದೇಶವೆಂದು ಓದಿದಾಗ, ನಾನು ನನ್ನ ಮಮ್ಮಿಗೆ “ಹೌದೇನಮ್ಮ?” ಅಂತ ಹಲವು ಸಲ ಕೇಳಿದ್ದೆ. ಅದಕ್ಕೆ ಅವಳು ಪಪ್ಪನ ಕಡೆಗೆ ತಿರುಗಿ, “ಹೌದು ಅಂತ ಹೇಳಿ” ಅಂದಳು, ಪಪ್ಪ ಹೌದೆಂದು ತಲೆ ಅಲ್ಲಾಡಿಸಿದರು. ಅವರು ಮಾತಾಡಬಾರದೆಂದು ಹಲವು ವರ‍್ಶಗಳಿಂದ ವಿಪ್ ಜಾರಿಮಾಡಲಾಗಿದೆ, ಕಣ್ಣು ಮಿಟುಕಿಸಬಹುದು, ಸನ್ನೆ ಮಾಡಬಹುದು ಅಶ್ಟೇ.

ಟಿವಿಯಲ್ಲಿ ಇಟಾಲಿಯನ್ ಡಿಸೈನಿನ ಕಿಚನ್ ಮಾಡಲ್ ನೋಡಿದ ಮನೆಯ ಮಹಿಳಾ ಸದಸ್ಯರು ಅಂತಹುದ್ದೇ ನಮ್ಮ ಮನೆಯಲ್ಲೂ ಮಾಡಿಸಬೇಕೆಂದು ಸದನದ ಬಾವಿಗೆ ದುಮುಕಿದರು. ಹಾಲು ಯಾವ ಬ್ರ್ಯಾಂಡಿನದ್ದು ಇರಬೇಕೆಂಬುದರಿಂದ ಹಿಡಿದು ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬ ಎಲ್ಲಾ ನಿರ‍್ದಾರಗಳನ್ನು ಹೆಂಗಸರೇ ತೆಗೆದುಕೊಳ್ಳುತ್ತಾರೆ. ನಮ್ಮ ಮನೆಯಲ್ಲೂ ಅದೇ ಆಯಿತು. ನಾವು ಹೌದೆಂಬಂತೆ ತಲೆ ಅಲ್ಲಾಡಿಸಿದೆವು. ಅಡುಗೆ ಮನೆ, ಬೆಡ್ರೂಮಿನ ಮೇಲಿನ ಶೆಲ್ಪು, ಸಜ್ಜಾಗಳಿಗೆ (ನೆಂಟಲುಗಳಿಗೆ) ಪ್ಲೈವುಡ್ಡಿನ ಬಾಗಿಲುಗಳನ್ನೂ ಮಾಡಿಸುವುದೆಂದು ತೀರ‍್ಮಾನ ಮಾಡಲಾಯಿತು.

ಅಲ್ಲಿಗೆ, ಜಗತ್ತಿನ ದೊಡ್ಡ ಸಮಸ್ಯೆ ಎದುರಾಯಿತು. ಯಾರಿಗೆ ಕೆಲಸದ ಗುತ್ತಿಗೆ ಕೊಡುವುದು? ದಿನಗೂಲಿ ಮೇಲೆ ಕೆಲಸ ಮಾಡಿಸುವುದು ಅತೀ ಬಯಂಕರ ಅಂತ ಅನುಬವದಿಂದ ಗೊತ್ತಾಗಿದೆ. ಕೆಲಸ ಸರಕಾರೀ ಕೆಲಸದ ಸ್ಪೀಡಿನಲ್ಲಿ ಮುಗಿಯುತ್ತದೆ. ದಿನಗೂಲಿ ಮಾಡುವವರ ಮಕ್ಕಳು ನಮ್ಮ ಮನೆಯಲ್ಲಿಯೇ ಬೆಳೆದು ದೊಡ್ಡವರಾಗುತ್ತಾರೆ, ಅದು ನಮಗೆ ಬೇಡ. ಊರೆಲ್ಲಾ ಸುತ್ತಿ ಹುಡುಕಿ, ಸಿಕ್ಕ  ಒಬ್ಬ ಕಾರ‍್ಪೆಂಟರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಬಂದೆವು. ಅವನು ಮನೆಯ ಒಳಗಡೆ ಬಂದು ಅಡಿಗೆಮನೆ, ಹಾಲು, ಬೆಡ್‌ರೂಮ್ ನೋಡುತ್ತ, ತನ್ನ ಅಳತೆ ಟೇಪಿನಿಂದ ನಮ್ಮ ಯೋಗ್ಯತೆಯನ್ನೂ ಸೇರಿ ಅಳೆಯತೊಡಗಿದ.

ಅಳತೆ ತೆಗೆದುಕೊಂಡು ನಮ್ಮನ್ನು ನೋಡಿ “ಎರಡು ಲಕ್ಶ ರೂಪಾಯಿ ಆಗುತ್ತೆ” ಅಂತ ಸಿಡಿಲು ಬಡಿಸಿದ. ನಾವು ದೆವ್ವ ಕಂಡವರಂತೆ ಕಿರಿಚಿಕೊಂಡು ದಿಕ್ಕಿಗೊಬ್ಬರು ಓಡುವುದಕ್ಕೆ ಹವಣಿಸಿದೆವು. ಅವನು ನಮ್ಮ ಹೌಹಾರಿದ ಸ್ತಿತಿಯನ್ನು ನೋಡಿಯೂ ತನ್ನ ಮುಕಬಾವವನ್ನು ಎಳ್ಳಶ್ಟೂ ಬದಲಾಯಿಸದೆ, “ನನ್ನ ಲೇಬರ್ ಚಾರ‍್ಜ್ ಬೇರೆ, ಎರಡು ಲಕ್ಶ ಕೇವಲ ಸಾಮಾನುಗಳಿಗೇ ಆಗುತ್ತೆ” ಅಂದ. “ತಮ್ಮ ಕಪ್ಪ ಎಶ್ಟು ಅಂತ ಹೇಳಿದರೆ ನಾವು ನಮ್ಮನ್ನು ಮಾರಿಕೊಂಡು, ನಿಮಗೆ ಸಲ್ಲಿಸುವುದಕ್ಕೆ ಆಗುವುದು” ಅಂದೆವು,  ಒಬ್ಬರ ಹಿಂದೆ ಒಬ್ಬರು ನಿಂತುಕೊಂಡು. ಅವನು “ಮೂವತ್ತು ಸಾವಿರ ರೂಪಾಯಿ” ಅಂತ ಸಿಂಪಲ್ಲಾಗಿ ಹೇಳಿದ. ಮಹಾರಾಜರನ್ನು ದೈನ್ಯತೆಯಿಂದ ಎತ್ತಿಕೊಂಡು ಅವರನ್ನು ತಂದಂತಹ ಪಲ್ಲಕ್ಕಿಯಲ್ಲಿಯೇ ಕೂರಿಸಿಕೊಂಡು ತಂದಿದಂತಹ ಜಾಗಕ್ಕೆ ಒಯ್ದು ಬಿಟ್ಟುಬಂದೆವು. ಕೆಲ ದಿನಗಳಲ್ಲಿ ನಾವು ಸಾವರಿಸಿಕೊಂಡು, ಸುದಾರಿಸಿಕೊಂಡು ಮತ್ತೆ ಮನುಶ್ಯರೊಳಗೆ ಬಂದೆವು, ಅಲ್ಲಿಯವರೆಗೆ ಯಾರೂ ಪರಸ್ಪರ ಮಾತಾಡಲಿಲ್ಲ.

ಮೊದಲೊಂದು ಸಲ ನಮ್ಮ ಮನೆಯ ಕಟ್ಟಿಗೆ ಕೆಲಸಗಳನ್ನು ಮಾಡಿದ್ದ ಪರಿಚಯದ ಒಬ್ಬ ಮೇಸ್ತ್ರಿಯ ನೆನಪು ಬಂತು, ನನ್ನ ತಾಯಿಯ ಊರಿನವನೇ. ‘ತವರೂರಿನ ಮಂಗ ಮನೆಗೆ ಬಂದರೆ, ಹೆಣ್ಣುಮಕ್ಕಳು ಅದಕ್ಕೂ ಬಿಸಿರೊಟ್ಟಿ ಮಾಡಿ ಹಾಕುತ್ತಾರೆ’ ಅಂತ ಗಾದೆಯಿದೆ. ಪೋನ್ ಮಾಡಿದ ಅರ‍್ದ ಗಂಟೆಯಲ್ಲಿ ಮೇಸ್ತ್ರಿ ಬೈಕ್ ಹತ್ತಿ ಬಂದೇಬಿಟ್ಟ. ಮನೆಯನ್ನೆಲ್ಲ ನೋಡಿ “ಸಾಮಾನಿನ ಕರ‍್ಚೆಲ್ಲ ನೀವೇ ಮುಂದೆ ನಿಂತು ನೋಡಿಕೊಳ್ಳಿ, ನನಗೆ ಇಪ್ಪತ್ತು ಸಾವಿರ ಲೇಬರ್ ಕೊಡಿ” ಅಂದ. ನಮಗೆ ಹಿಂದೆ ಹೋಗಿದ್ದ ಜೀವ ಬಂದಂತಾಯ್ತು. ಕೆಲಸ ಯಾವಾಗ ಶುರುಮಾಡುತ್ತೀಯ ಅಂತ ನಾವು ಕೇಳಿದಾಗ “ಇವತ್ತು ಬೇಡ ಆದರೆ ಅಡ್ವಾನ್ಸ್‌ ಆಗಿ ಒಂದು ಸಾವಿರ ಕೊಡಿ, ಕೆಲಸ ನಾಳೆಯಿಂದ ಶುರು ಮಾಡುತ್ತೇನೆ” ಅಂದ.

ಇದೇ ಕಾಲಕ್ಕೆ ಚಳಿ ಹೆಚ್ಚಾಗಿ ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ವೈರಲ್ ಪೀವರ್ ಬಂತು. ಒಬ್ಬರ ಸೇವೆ ಮತ್ತೊಬ್ಬರು ಮಾಡುವುದರಲ್ಲಿಯೇ ದಿನಬೆಳಗು ಆದವು. ರವೆ ಗಂಜಿ ಮಾಡುವುದು, ಪ್ಯಾರಾಸಿಟಮಲ್ ತಿನ್ನುವುದು, ಪ್ಯಾರಾಸಿಟಮಲ್ ಕುಟ್ಟಿ ಹಣೆಗೆ ಬಳಿದುಕೊಳ್ಳುವುದು(!) ಹಾಲು ಕಾಯಿಸುವುದು, ಹಣ್ಣು ತಿನ್ನಿಸುವುದು ಹೀಗೆ ಆರೈಕೆಗಳು ಮುಂದುವರೆದವು. ಆಪಲ್ಲುಗಳನ್ನು ತಿಂದಶ್ಟೂ ಡಾಕ್ಟರ್ ಬಳಿ ಹೋಗುವಂತಾಯಿತು. ಒಬ್ಬೊಬ್ಬರು ಒಂದೊಂದು ಡಾಕ್ಟರ್ ಬಳಿ ಹೋದೆವು. ಯಾರ ಬಳಿಯಾದರೂ ಬೇಗ ಗುಣವಾಗಲಿ ಅಂತ! ನನ್ನ ಗುಳಿಗೆ ಚೆನ್ನಾಗಿವೆ ನೀನು ತಿನ್ನು, ನಿನ್ನ ಗುಳಿಗೆ ಚೆನ್ನಾಗಿವೆ ನನಗೆ ಕೊಡು ಅಂತ ಪರಸ್ಪರ ಸಾಂತ್ವನ ಹೇಳಿಕೊಂಡೆವು.

ಅವನ ‘ನಾಳೆ’ ಮೂರು ದಿನಗಳಾದ ಮೇಲೆ ಬಂತು! ಮೂರು ದಿನಗಳಾದ ಬಂದ ಮೇಸ್ತ್ರಿ ನಮ್ಮನ್ನು ಕರೆದುಕೊಂಡು ಗುಜರಾತಿ ಪ್ಲೈವುಡ್ ಶಾಪಿಗೆ ಕರೆದುಕೊಂಡು ಹೋದ. ಪ್ಲೈವುಡ್ಡಿನ ಎಂಟು ಶೀಟುಗಳು, ಪೆವಿಕಾಲ್, ಹಿಂಜಸ್ ಅಂತೆಲ್ಲಾ ಐವತ್ತು ಸಾವಿರದ ಮೇಲೆ ಕರ‍್ಚಾಯಿತು. ಟ್ರಾಲಿಯಲ್ಲಿ ಹಾಕಿಕೊಂಡು ಮನೆಗೆ ಬಂದೆವು. ಸಾಮಾನು ಇಳಿಸುವಾಗ ಒಂದು ಪ್ಲೈವುಡ್ ಸೀಳಿದ್ದು ಬಂದಿರುವುದು ಕಂಡು, ಅದನ್ನು ಹಿಂದಿರುಗಿಸಲಾಯಿತು. ಮೇಸ್ತ್ರಿ ನಮ್ಮನ್ನು ನೋಡಿ, ಇದು ಕೇವಲ ಮೊದಲ‌ ಕಂತಿನ ಕರ‍್ಚು. ನೀವೇನೂ ಹೆದರಬೇಡಿ ಅಂದ. ಅವನ ಮಾತನ್ನು ನಾವೇಕೆ ಕೇಳಬೇಕು? ನಾವು ಹೆದರುವುದನ್ನು ಮುಂದುವರೆಸಿದೆವು. ಅಡುಗೆ ಮನೆ ಸಾಮಾನುಗಳನ್ನು ಮನೆಯ ಹಿಂದೆ ಒಯ್ದು ಇಟ್ಟೆವು, ನೆಂಟಲ್ಲುಗಳ ಮೇಲೆ ಇದ್ದ ಸಾಮಾನುಗಳಿಗೂ ಅದೇ ಗತಿಯಾಯ್ತು. ನಾಳೆಯಿಂದ ಕೆಲಸ ಶುರು ಅಂದ, ನಾವು ನಾಳೆ ಯಾಕೆ ಇವತ್ತಿನಿಂದಲೇ ಶುರು ಮಾಡು ಅಂದೆವು. ಅವನು ಇವತ್ತು ಬೇಡ ನನಗೆ ಅಸಿಸ್ಟೆಂಟ್‌ಗಳಿಲ್ಲ ಅವರು ಬಂದ ಮೇಲೆ ಕೆಲಸ ಮಾಡುವುದಕ್ಕೆ ಆಗುತ್ತೆ ಅಂದ. ಆವಾಗ ಗೊತ್ತಾಯಿತು, ನಾವು ಅವನ ಮಾತು ಕೇಳಬೇಕಾಗಿರುವುದು ಅಂತ! ಅವನು ಈರಬದ್ರನಾದ, ನಾವು ಅಸಹಾಯಕತೆಯಿಂದ ಹಲ್ಲು ಕಿರಿದೆವು. ಬೈಕ್ ಮೇಲೇರಿ ಅವನು ಹೊರಟೇ ಹೋದ.

ಮತ್ತೊಂದು ಸಮಸ್ಯೆ ಎದುರಾಯಿತು. ಹೊರಗೆ ಇಟ್ಟ ಸಾಮಾನುಗಳು! ರಾತ್ರಿ ಕಳ್ಳರು ಅವುಗಳನ್ನು ಒಯ್ದು ಬಿಟ್ಟರೆ? ರಾತ್ರಿ ಏನೇ ಸಪ್ಪಳವಾದರೂ ಅದು ಕಳ್ಳರದೇ ಅಂತ ತಲೆಯಲ್ಲಿ ಕೊರೆಯುತ್ತಲೇ ಇತ್ತು. ಅದೇ ರಾತ್ರಿ ಸುಮಾರು ಒಂದು ಗಂಟೆ ಹೊತ್ತಿಗೆ ಯಾರೋ ಕಾಂಪೌಂಡ್ ಹಾರಿ ಒಳಬಂದ ಸಪ್ಪಳವಾಯ್ತು. ಎದ್ದು ಹೊರಹೋಗಿ ನೋಡಿದೆ, ಕಳ್ಳ ಬಾಯಲ್ಲಿ ಒಂದು ಪಾಲಿತೀನ್ ಬ್ಯಾಗನ್ನು ಕಚ್ಚಿ ಹಿಡಿದಿದ್ದ. ಅವನಿಗೆ ಕೈಗಳಿರಲಿಲ್ಲ, ಉದ್ದವಾದ‌ ಮುಕ, ಉದ್ದವಾದ ಮೂಗು, ಕಿವಿ ನಿಮಿರಿತ್ತು. ನನ್ನ ನೋಡುತ್ತಲೇ ಕಸದ ಡಬ್ಬಿ ಕೆಡವಿ ತನ್ನ ನಾಲ್ಕೂ ಕಾಲುಗಳಿಂದ ಮತ್ತೆ ಕಂಪೌಂಡ್ ಹಾರಿ ಓಡಿಹೋದ! ಗಲ್ಲಿಯಲ್ಲಿ ನಾಯಿಗಳು ತುಂಬಾ ಜಾಸ್ತಿಯಾಗಿವೆ. ನಮ್ಮ ಗಲ್ಲಿಯಲ್ಲಿಯೇ ಇರುವ ರಾಜಕೀಯ ನಾಯಕರೊಬ್ಬರು ಗಲ್ಲಿಯ ಎಲ್ಲರ ಹಣ ಒಟ್ಟು ‘ಗುಡಿಸಿ’ CCTV ಹಾಕಿಸಿದ್ದಾರೆ. ಅವರ ಹೆಸರನ್ನು ಎಲ್ಲಿಯೂ ಹಾಕಬಾರದು ಅಂತ ಎಲ್ಲಕಡೆಯೂ ‘ಸಾರಿಸಾರಿ’ ಹೇಳಿದ್ದಾರೆ!

ಕೆಲಸ ನಾವಂದುಕೊಂಡದ್ದಕ್ಕಿಂತ ನಿದಾನವಾಗಿ ಸಾಗಲಾರಂಬಿಸಿತು. ಒಂದು ಕೆಲಸಕ್ಕೆ ಒಂದು ದಿನ ಅನ್ನೋ ಹಾಗೆ ಮೇಸ್ತ್ರಿ ಹಾಗೂ ಅವನ ಇಬ್ಬರು ಸಹಾಯಕರು ಕೆಲಸ ಮಾಡತೊಡಗಿದರು. ಪ್ಲೈವುಡ್ ಕತ್ತರಿಸುವುದಕ್ಕೆ ಎರಡು ದಿನ, ಅವುಗಳನ್ನು ಪಕ್ಕಕ್ಕೆ ಇಡುವುದಕ್ಕೆ ಒಂದು ದಿನ. ಅಳತೆ ತೆಗೆದುಕೊಳ್ಳುವಾಗ ಮೇಸ್ತ್ರಿ ತಪ್ಪು ಮಾಡಿದ, ಇನ್ನೊಂದು ಪ್ಲೈವುಡ್ ಶೀಟ್ ಬಲಿಯಾಯಿತು. ಇತ್ತ ಮನೆಯ ಸದಸ್ಯರ ಜ್ವರ ಕಡಿಮೆಯಾಗಲಿಲ್ಲ. ಯಾರನ್ನು ನೋಡಬೇಕು? ಯಾರು ನೋಡಬೇಕು? ಕೆಲಸಗಾರರು ದಿನವೆಲ್ಲಾ ಕೂತು ಹೂಬಿಡಿಸಿದಂತೆ ಕೆಲಸಮಾಡತೊಡಗಿದರು. ಏನಾದರೂ ಅಂದರೆ ಮುನಿಸಿಕೊಳ್ಳತೊಡಗಿದರು. ಮೇಸ್ತ್ರಿ ನಮ್ಮ ಬಳಿ ಬಂದು, “ನನಗೆ ಬೇಕಾದರೆ ಬೈದುಕೊಳ್ಳಿ, ಆದರೆ ಇವರಿಗೆ ಮಾತ್ರ ಏನೂ ಅನ್ನಬೇಡಿ. ನಾಳೆಯಿಂದ ಇವರು ಬರೋದೇ ಇಲ್ಲ” ಅಂತ ತಾಯಿ ತನ್ನ ಮಗನ ಪರವಹಿಸಿ ಮಾತಾಡುವಂತೆ ವಕಾಲತ್ತು ವಹಿಸಿದ.

ಅವನು ಹೇಳಿದಂತೆಯೇ ಆಯಿತು. ಮಾರನೇ ದಿನವೇ ಒಬ್ಬ ಕೆಲಸಗಾರ ಯಾರದೋ ಮದುವೆಗೆಂದು ಹೋದ. ಮೇಸ್ತ್ರಿ ಕೆಲಸಕ್ಕೆ ಬರುತ್ತಿರಬೇಕಾದರೆ ಟ್ರಿಪಲ್ ರೈಡಿಂಗ್ ಮಾಡಿ ಟ್ರಾಪಿಕ್ ಪೋಲಿಸಿನವರ ಕೈಗೆ ಸಿಕ್ಕಿಬಿದ್ದ. ಅವನ ಗಾಡಿಯನ್ನು ಪೋಲಿಸರು ಎಳೆದುಕೊಂಡು ಒಯ್ದು ಸ್ಟೇಶನ್ನಿಗೆ ಹಾಕಿದರು. ಅವನು ಸರಿಯಾಗಿ ವಿವರಣೆ ಕೊಡದ ಕಾರಣಕ್ಕೆ ದಂಡಹಾಕಲಾಯಿತು. ಅದಕ್ಕಾಗಿ ನಮ್ಮ ಬಳಿ ಓಡೋಡಿ ಬಂದ. ಅವನ ಗಾಡಿ ಸಿಕ್ಕಿಬಿದ್ದರೆ ನಾವೇಕೆ ಹಣಕೊಡಬೇಕು? “ನಾನು ನಾಳೆಯಿಂದ ಕೆಲಸಕ್ಕೆ ಹೇಗೆ ಬರಲಿ? ನಿಮ್ಮ ಕೆಲಸಕ್ಕಾದರೂ ಕೊಡಿ, ನನ್ನ ಗುತ್ತಿಗೆ ಹಣದಲ್ಲಿ ಮುರಿದುಕೊಳ್ಳಿ” ಅಂದ. ಗಾಡಿ ಬಿಡಿಸಿಕೊಂಡು ಇನ್ನೊಂದು ದಿನ ತಡಮಾಡಿ ಬಂದ. “ಮನೆಕಟ್ಟಿ ನೋಡು ಮದುವೆ ಮಾಡಿ ನೋಡು” ಅಂತ ಮಂದಿ ಸುಮ್ಮನೆ ಅನ್ನುವುದಿಲ್ಲ!

ನಮ್ಮ ಮನೆಯ ಕೆಲಸ ಮಾಡಿಸಿದೆವೆಂದು ಕುಶಿಪಡುವವರಿದ್ದೆವು. ಅದು ಬರಬರುತ್ತಾ ಇವನು ಕೆಲಸ ಮಾಡಿ ಮುಗಿಸಿದರೆ ಸಾಕಪ್ಪಾ ಅನ್ನೋ ಹಂತಕ್ಕೆ ತಲುಪಿದೆವು. ಇದರ ಮದ್ಯೆ ಅವನ ಒಬ್ಬ ಸಹಾಯಕ ಕುಡಿದು ಬಂದು, ನಶೆಯಲ್ಲಿ ನಮ್ಮ ಐದು ಲೀಟರಿನ ಪೆವಿಕಾಲ್ ಡಬ್ಬಿ ಕದ್ದು ಪರಾರಿಯಾದ. ನಾವು ಗುಲ್ಲು ಎಬ್ಬಿಸಿದಂತೆ ಮೇಸ್ತ್ರಿ ಓಡೋಡಿ ಬಂದು ಅದಕ್ಕೂ ತನಗೂ ಏನೂ ಸಂಬಂದ ಇಲ್ಲವೆಂಬಂತೆ ನಿಂತ. ನಾವಾಡಿದ ಮಾತುಗಳನ್ನು ತೆಪ್ಪಗೆ ಕೇಳಿಸಿಕೊಂಡು ಬೈಕ್ ಮೇಲೇರಿ ಎಲ್ಲಿಗೋ ಹೋದ, ಬರುವಾಗ ಆ ಪೆವಿಕಾಲ್ ಡಬ್ಬಿ ತನ್ನೊಡನೆ ತಂದ. ಮೇಸ್ತ್ರಿ ತನ್ನ ಕೆಲಸಗಾರರಿಗೆ ಸರಿಯಾಗಿ ಹಣ ಕೊಡದಿದ್ದಾಗ ಇಂತಹ ಸಾಹಸಗಳನ್ನು ಅವನ ಸಹಾಯಕರು ತೋರಿಸಬೇಕಾಗುತ್ತದೆ ಹಾಗೇ ಅವರು ತೋರಿಸುತ್ತಾರೆ. ಮೇಸ್ತ್ರಿಗೆ ಈಗಾಗಲೇ ಹದಿನೈದು ಸಾವಿರ ಕೊಟ್ಟಾಗಿತ್ತು ಆದರೆ ಕೆಲಸ ಮೂವತ್ತು ಪರ‍್ಸೆಂಟ್ ಕೂಡ ಮುಗಿದಿರಲಿಲ್ಲ.

ಮನೆ ತುಂಬ ಕಟ್ಟಿಗೆಯ ರಂದದ (ಗರಗಸ) ದೂಳು, ಚಕ್ಕೆ ಬೀಳುತ್ತಾ ಬಂದು ಎಲ್ಲ ಸಾಮಾನುಗಳು ಅಸ್ತವ್ಯಸ್ತವಾದವು. ಮನೆಯ ಹಿಂದೆಗಡೆ ಇಟ್ಟಿದ್ದ ಸಾಮಾನುಗಳ ಮೇಲೆ ಮನೆ ಮೇಲಿನ ಟ್ಯಾಂಕ್ ತುಂಬಿ ಹರಿದು ನೀರು ಸುರಿದಿತ್ತು. ಮನೆಗೆಲಸದವಳು ಇನ್ನೆಶ್ಟು ದಿನ ಈ ದೂಳನ್ನು ಹೆಕ್ಕಿ ಹೆಕ್ಕಿ ತೆಗೆಯಬೇಕು ಅನ್ನುತ್ತಿದ್ದಳು. ಅವಳ ಮಾತು ನಿಜ, ಕೆಲಸ ಶುರುವಾಗಿ ಹದಿನೈದು ದಿನಗಳಾಗಿದ್ದವು. ಅವಳ ಬೈಗುಳ ಕೇಳಿ ನಮ್ಮ ಹೊಟ್ಟೆ ತಂಪಾಯಿತು. ಒಂದು ದಿನ ಪೋನ್ ಬಂತು. ನಮ್ಮ ಮೇಸ್ತ್ರಿ, “ನನ್ನ ಗಾಡಿ ಮತ್ತೆ ಹಿಡಿದಿದ್ದಾರೆ, ಹೆಲ್ಮೆಟ್ ಹಾಕಿರಲಿಲ್ಲ. ಇಲ್ಲಿಗೆ ಬಂದು ನನ್ನ ಪೈನ್ ಕಟ್ಟಿ ಗಾಡಿ ಬಿಡಿಸಿ, ನನ್ನ ಬಳಿ ಒಂದು ಪೈಸೆ ಕೂಡ ಇಲ್ಲ, ಮುಂಜಾನೆಯಿಂದ ಊಟ ಕೂಡ ಮಾಡಿಲ್ಲ. ಹಣ ನನ್ನ ಗುತ್ತಿಗೆಯಲ್ಲಿ ಮುರಿದುಕೊಳ್ಳಿ” ಅಂತ ಒದರಾಡಿದ. ಮೊನ್ನೆ ತಾನೇ ಸ್ಟೇಶನ್‌ವರೆಗೂ ಹೋಗಿ ಬಂದಿದ್ದ, ಆಗಲಾದರೂ ಬುದ್ದಿ ಬರಬಾರದಾಗಿತ್ತಾ? ಅವನ ಬಡತನಕ್ಕೆ ಮರುಕಪಡಬೇಕೋ ಅವನನ್ನ ಬೈಯಬೇಕೋ?

ಕೆಲಸ ‘ಮುಗಿಯುವ’ ಹಂತಕ್ಕೆ ಬರುವಾಗ ಬರೊಬ್ಬರಿ ಒಂದು ತಿಂಗಳಾಗಿತ್ತು. ಕರ‍್ಚು ಒಂದು ಲಕ್ಶಮೀರಿತ್ತು, ಅವನ ಗುತ್ತಿಗೆ ಹಣ ಬಿಟ್ಟು! ದಸರೆ ರಜೆಯಲ್ಲಿ ಕೇವಲ ಏಳು ದಿನಗಳಲ್ಲಿ ನಿಮ್ಮ ಕೆಲಸ ಮುಗಿಸಿಕೊಡುತ್ತೇನೆ ಅಂದಿದ್ದ. ನಾವಂತೂ ಅವನು ಮುಂದಿನ ವರುಶವೇ ಕೆಲಸ ಮುಗಿಸುತ್ತಾನೆ ಅಂದುಕೊಂಡಿದ್ದೆವು. ಕತ್ತೆತ್ತಿ ಅವನು ಮಾಡಿದ ಕೆಲಸ ನೋಡಿದಶ್ಟೂ ನಮ್ಮ ಕತ್ತು ಕೆಳಗಿಳಿಯಿತು, ಅಶ್ಟು ತಪ್ಪುಗಳು! ಒಂದೇ ಒಂದು ಶೆಲ್ಪಿನ ಬಾಗಿಲು ಸಹ ಸರಿಯಾಗಿ ಮುಚ್ಚಲಿಲ್ಲ, ತೆರೆಯಲಿಲ್ಲ. ಮಾಡಿದ ತಪ್ಪುಗಳನ್ನು ಸರಿಪಡಿಸಲು ಮತ್ತೊಬ್ಬನನ್ನು ಕರೆತಂದ. ಇಬ್ಬರಿಗೂ ಪ್ರತಿದಿನ ಕೂಲಿ ನೀರಿನಂತೆ ಕೊಡುತ್ತಿದ್ದೆವು. ನಾವು ಟಿವಿ ಜಾಹೀರಾತಿನಲ್ಲಿ ನೋಡಿದಂತೆ ಅಡುಗೆಮನೆಯಲ್ಲಿ ಒಂದೂ ಕಾಣಸಿಗಲಿಲ್ಲ. ಆದರೂ ಅವನ ಉಡಾಪೆಯ ಮಾತುಗಳಿಗೇನೂ ಕೊರತೆಯಿರಲಿಲ್ಲ.

ಇಟಾಲಿಯನ್‌ ಕಿಚನ್ ಕನಸುಗಳನ್ನು ಕಾಣುತ್ತಿದ್ದ ನಮಗೆ ‘ಕಾನೂರು ಹೆಗ್ಗಡತಿ’ ಸಿನಿಮಾದಲ್ಲಿನ ಹಳೆಯ ಅಡುಗೆ ಮನೆಯ ಚಿತ್ರಣ ಕಣ್ಣ ಮುಂದೆ ಬಂತು. ಕಣ್ಣೊರೆಸಿಕೊಂಡೆವು. “ನನ್ನನ್ನು ನೀವು ಯಾವಾಗಲೂ ನೆನಪಿಸಿಕೊಳ್ಳಬೇಕು ಆ ರೀತಿ ಕೆಲಸಮಾಡಿದ್ದೇನೆ, ಇಂತಹ ಸೂಕ್ಶ್ಮ ಕುಸುರಿ ಕೆತ್ತನೆ ಕೆಲಸ ಇಲ್ಲಿ ನನ್ನ ತರಹ ಯಾರೂ ಮಾಡೋರಿಲ್ಲ” ಅಂದ! ನಾವು ಬೊಬ್ಬೆ ಹೊಡೆಯುವುದಕ್ಕೆ ಎತ್ತಿದ ಕೈಯಿಂದ ತಲೆ ಕೆರೆದುಕೊಂಡೆವು. ಅವನ ಬಾಕಿ ಹಣ ತೆತ್ತು ನಮ್ಮನ್ನೂ ಅಡುಗೆ ಮನೆಯನ್ನೂ ಅವನಿಂದ ಬಿಡಿಸಿಕೊಂಡೆವು. ನಮಗೆ ದುಕ್ಕ ಕೊಟ್ಟು “ಮೇಲೆ ಸ್ವಲ್ಪ ಕುಶಿ ಕೊಡಿ” ಅಂದ. ಅದಕ್ಕೂ ಒಂದು ಸಾವಿರ ಹೆಚ್ಚಿಗೆ ಕೊಟ್ಟು ಉಳಿದ ಪ್ಲೈವುಡ್ಡಿನಿಂದ ಒಂದು ಟಿವಿ ಟೇಬಲ್ ಮಾಡಿಕೊಟ್ಟ. ಚಪ್ಪಲ್ಲುಗಳನ್ನು ಇಡುವುದಕ್ಕೆಂದು ಬೂಟ್ ಸ್ಟ್ಯಾಂಡ್ ಮಾಡಿಕೊಟ್ಟ. ಅದಕ್ಕೂ ಒಂದು ದಿನ ಹಿಡಿಯಿತು ಅಂತ ಬೇರೆ ಹೇಳಬೇಕಿಲ್ಲ!

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: