ಬಸವಣ್ಣನ ವಚನಗಳ ಓದು – 10ನೆಯ ಕಂತು
– ಸಿ.ಪಿ.ನಾಗರಾಜ.
ಮರ್ತ್ಯಲೋಕವೆಂಬುದು
ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವರು
ಅಲ್ಲಿಯೂ ಸಲ್ಲುವರಯ್ಯಾ
ಇಲ್ಲಿ ಸಲ್ಲದವರು
ಅಲ್ಲಿಯೂ ಸಲ್ಲರು
ಕೂಡಲಸಂಗಮದೇವಾ.
ಜನರು ನೆಲೆಸಿರುವ ವಾಸ್ತವ ಲೋಕ ಮತ್ತು ಜನಮನದಲ್ಲಿರುವ ಕಲ್ಪನೆಯ ಲೋಕಗಳಲ್ಲಿ, ಯಾವ ಲೋಕದಲ್ಲಿ ಜನರು ಒಳ್ಳೆಯ ಜೀವನವನ್ನು ಮೊದಲು ನಡೆಸಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.
ಒಳ್ಳೆಯ ಜೀವನ ಎಂದರೆ ವ್ಯಕ್ತಿಯು ತನ್ನನ್ನು ಒಳಗೊಂಡಂತೆ ಸಹಮಾನವರ ಮತ್ತು ಸಮಾಜದ ಹಿತಕ್ಕಾಗಿ ಒಳ್ಳೆಯ ನಡೆನುಡಿಗಳಿಂದ ಬಾಳುವುದು.
( ಮರ್ತ್ಯ+ಲೋಕ+ಎಂಬುದು; ಮರ್ತ್ಯ=ಮಾನವ/ಮನುಜ/ನರ; ಲೋಕ=ಜಗತ್ತು/ಪ್ರಪಂಚ ; ಮರ್ತ್ಯಲೋಕ=ಮಾನವರು ನೆಲೆಸಿರುವ ಲೋಕ/ಮಾನವರು ಹುಟ್ಟಿ ಬೆಳೆದು ಬಾಳಿ ಸಾಯುತ್ತಿರುವ ಲೋಕ; ಎಂಬುದು=ಎನ್ನುವುದು; ಕರ್ತಾರ=ಬ್ರಹ್ಮ/ಜಗತ್ತನ್ನು ನಿರ‍್ಮಿಸಿದ ದೇವ; ಕಮ್ಮಟ+ಅಯ್ಯಾ; ಕಮ್ಮಟ=ಟಂಕಸಾಲೆ/ನಾಣ್ಯಗಳನ್ನು ಮುದ್ರಿಸುವ ಮನೆ; ನಾಡನ್ನು ಆಳುವ ರಾಜನು ಚಿನ್ನ/ಬೆಳ್ಳಿ/ಇನ್ನಿತರ ಲೋಹದಿಂದ ಮಾಡಿದ ನಾಣ್ಯಗಳ ಮೇಲೆ ತನ್ನ ಆಡಳಿತದ ಮುದ್ರೆಯನ್ನು ಒತ್ತಿ ಜನಸಮುದಾಯದ ವ್ಯಾಪಾರ ವ್ಯವಹಾರಗಳಿಗಾಗಿ ನಾಣ್ಯಗಳನ್ನು ಮುದ್ರಿಸಿ ಚಲಾವಣೆಗೆ ಬಿಡುತ್ತಿದ್ದನು. ರಾಜಮುದ್ರೆಯುಳ್ಳ ಲೋಹದ ನಾಣ್ಯಕ್ಕೆ ಮಾತ್ರ ಸಮಾಜದಲ್ಲಿ ಬೆಲೆಯಿರುತ್ತಿತ್ತು; ಕರ್ತಾರನ ಕಮ್ಮಟ=ಬ್ರಹ್ಮನ ಟಂಕಸಾಲೆ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;
ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ= ‘ಕರ‍್ತಾರನ ಕಮ್ಮಟ’ ಎಂಬ ನುಡಿಗಟ್ಟನ್ನು ಒಂದು ರೂಪಕವಾಗಿ ವಚನಕಾರನು ಬಳಸಿದ್ದಾನೆ.
ಮಾನವರು ನೆಲೆಸಿರುವ ಈ ಜಗತ್ತು ಎನ್ನುವುದು ಬ್ರಹ್ಮನು ನಿರ‍್ಮಿಸಿರುವ ಒಂದು ಟಂಕಸಾಲೆಯಾಗಿದೆ. ದೇವಲೋಕದಲ್ಲಿರುವ ಬ್ರಹ್ಮನೆಂಬ ದೇವತೆಯು ಮಾನವಜೀವಿಗಳ ಹುಟ್ಟಿಗೆ ಕಾರಣನಾಗಿದ್ದಾನೆ. ಬ್ರಹ್ಮನ ಕುಶಲ ಕಯ್ ಚಳಕದಿಂದಾಗಿ ಮಾನವರೆಲ್ಲರೂ ಈ ಜಗತ್ತಿನಲ್ಲಿ ರೂಪುಗೊಂಡಿದ್ದಾರೆ. ಇಲ್ಲಿ ಹುಟ್ಟಿ ಬೆಳೆದು ಬಾಳಿ ಸಾವನ್ನಪ್ಪಿದ ಮಾನವರಲ್ಲಿ ಒಳ್ಳೆಯ ನಡೆನುಡಿಗಳಿಂದ ಬಾಳಿದವರು ನೇರವಾಗಿ ದೇವಲೋಕದಲ್ಲಿರುವ ಸ್ವರ‍್ಗಕ್ಕೆ ಹೋಗುತ್ತಾರೆ; ಕೆಟ್ಟ ನಡೆನುಡಿಗಳಿಂದ ಬಾಳಿದವರನ್ನು ನರಕಕ್ಕೆ ತಳ್ಳಲಾಗುತ್ತದೆ/ದೂಡಲಾಗುತ್ತದೆ ಎಂಬ ಕಲ್ಪನೆಯು ತಲೆತಲಾಂತರದಿಂದಲೂ ಜನಮನದಲ್ಲಿ ಹಾಸುಹೊಕ್ಕಾಗಿ ಬಂದಿದೆ.
ಇಲ್ಲಿ=ಈ ಜಾಗ/ಈ ಜಗತ್ತಿನಲ್ಲಿ/ಈ ಇಳೆಯಲ್ಲಿ; ಸಲ್=ತಕ್ಕುದಾಗಿರು/ಯೋಗ್ಯವಾಗಿರು/ಸರಿಯಾಗಿರು; ಸಲ್ಲುವರು=ಯೋಗ್ಯರಾಗಿ ಬಾಳಿ/ಒಳ್ಳೆಯ ರೀತಿಯಲ್ಲಿ ನಡೆದುಕೊಂಡು ಮನ್ನಣೆಯನ್ನು ಪಡೆಯುವವರು; ಅಲ್ಲಿ=ಆ ಜಾಗ/ದೇವಲೋಕದಲ್ಲಿ/ಸ್ವರ‍್ಗದಲ್ಲಿ; ಸಲ್ಲುವರ್+ಅಯ್ಯಾ;
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ= ಟಂಕಸಾಲೆಯಲ್ಲಿ ರಾಜನ ಆಡಳಿತ ಮುದ್ರೆಯೊಡನೆ ರೂಪುಗೊಂಡ/ತಯಾರಾದ ನಾಣ್ಯವು ಹೇಗೆ ನಾಡಿನಲ್ಲಿ ನಡೆಯುವ ವ್ಯವಹಾರಗಳಲ್ಲಿ ಸಲ್ಲುತ್ತದೆಯೋ ಅಂತೆಯೇ ಯಾರು ಈ ಜಗತ್ತಿನಲ್ಲಿ ಒಳ್ಳೆಯ ನಡೆನುಡಿಗಳಿಂದ ಬಾಳನ್ನು ನಡೆಸಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡಿ ತಮ್ಮ ಬದುಕಿಗೆ ಒಂದು ಬೆಲೆಯನ್ನು/ಮನ್ನಣೆಯನ್ನು ಪಡೆಯುತ್ತಾರೆಯೋ ಅಂತಹವರು ಸಾವನ್ನಪ್ಪಿದ ನಂತರ ದೇವಲೋಕ/ಸ್ವರ‍್ಗವನ್ನು ಸೇರಿ ಒಲವು ನಲಿವನ್ನು ಹೊಂದಲು ತಕ್ಕವರಾಗುತ್ತಾರೆ; ಸಲ್ಲದವರು=ಒಳ್ಳೆಯ ನಡೆನುಡಿಗಳಿಂದ ಬಾಳದವರು/ಮಾನವ ಸಮುದಾಯಕ್ಕೆ ಕೇಡನ್ನು ಬಗೆದು ಹಾನಿಯನ್ನುಂಟು ಮಾಡಿದವರು; ಸಲ್ಲರು=ಯೋಗ್ಯರಾಗುವುದಿಲ್ಲ/ಇರಲು ತಕ್ಕವರಲ್ಲ; ಕೂಡಲಸಂಗಮದೇವಾ=ಈಶ್ವರ/ಶಿವ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ;
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು ಕೂಡಲಸಂಗಮದೇವಾ = ಈ ಜಗತ್ತಿನಲ್ಲಿ ತಮ್ಮ ಬದುಕನ್ನು ಯಾರು ಒಳ್ಳೆಯ ರೀತಿಯಲ್ಲಿ ನಡೆಸುವುದಿಲ್ಲವೋ ಅಂತಹ ವ್ಯಕ್ತಿಗಳು ದೇವಲೋಕದಲ್ಲಿಯೂ/ಸ್ವರ‍್ಗದಲ್ಲಿಯೂ ನೆಲಸಲು ಯೋಗ್ಯರಲ್ಲ/ತಕ್ಕವರಲ್ಲ;
ಈ ಮಾತಿನಲ್ಲಿ ಜನಮನದಲ್ಲಿರುವ ಮರ‍್ತ್ಯಲೋಕ/ದೇವಲೋಕಗಳ ಕಲ್ಪನೆಯನ್ನು ಅಲ್ಲಗಳೆಯದೆ/ಕಡೆಗಣಿಸದೆ, ಅದರ ಮೂಲಕವೇ ಮಾನವ ಬದುಕಿನಲ್ಲಿ ಒಳ್ಳೆಯ ನಡೆನುಡಿಯು ಎಲ್ಲಕ್ಕಿಂತ ದೊಡ್ಡದೆಂಬುದನ್ನು ಹೇಳಲಾಗಿದೆ.
ವ್ಯಕ್ತಿಯ ತನ್ನ ಜೀವಮಾನದ ಉದ್ದಕ್ಕೂ ಕೆಟ್ಟ ನಡೆನುಡಿಯುಳ್ಳವನಾಗಿದ್ದರೂ, ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆದು ಸಂಪಾದಿಸಿದ ಹಣದಿಂದ ದೇವರ ಸೇವೆಯನ್ನು ಮಾಡಿದರೆ/ಸಾಯುವ ಕೊನೆಗಳಿಗೆಯಲ್ಲಿ ದೇವರ ಹೆಸರನ್ನು ಉಚ್ಚರಿಸಿದರೆ/ಸಾಯುವಾಗ ಗಂಗಾ ಜಲವನ್ನು ಕುಡಿದರೆ ಮಾಡಿದ ಪಾಪವೆಲ್ಲವೂ ಹೊರಟುಹೋಗಿ, ಪುಣ್ಯವು ದೊರಕಿ ನೇರವಾಗಿ ದೇವಲೋಕಕ್ಕೆ/ಸ್ವರ‍್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆಯು ಜನಮನದಲ್ಲಿದೆ.
ಆದರೆ ಇಂತಹ ಯಾವುದೇ ಬಗೆಯ ಆಚರಣೆಗಳಿಂದ ವ್ಯಕ್ತಿಯು ದೇವಲೋಕಕ್ಕೆ/ಸ್ವರ‍್ಗಕ್ಕೆ ಹೋಗಲಾರನು ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು. ಏಕೆಂದರೆ ಇಹಲೋಕದಲ್ಲಿ ಒಳ್ಳೆಯ ಬದುಕನ್ನು ನಡೆಸಿದ ವ್ಯಕ್ತಿಗೆ ಮಾತ್ರ ಪರಲೋಕದಲ್ಲಿ ಒಳ್ಳೆಯದು ದೊರೆಯುತ್ತದೆ. ರಾಜಮುದ್ರೆಯಿಲ್ಲದ ನಾಣ್ಯಕ್ಕೆ ಸಮಾಜದಲ್ಲಿ ಬೆಲೆಯಿಲ್ಲದಂತೆ ಒಳ್ಳೆಯ ನಡೆನುಡಿಯಿಲ್ಲದ ವ್ಯಕ್ತಿಯ ಬದುಕಿಗೆ ಯಾವ ಲೋಕದಲ್ಲಿಯೂ ಬೆಲೆಯಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ‘ಕರ‍್ತಾರನ ಕಮ್ಮಟ’ ರೂಪಕದ ಮೂಲಕ ಹೇಳಲಾಗಿದೆ.)
ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ
ಅವರಾರಾಧನೆ ದಂಡ
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನು ಒಲ್ಲ
ಕೂಡಲಸಂಗಮದೇವ
ಭೂಮಿಭಾರಕರ.
ನಿತ್ಯ ಜೀವನದ ವ್ಯವಹಾರಗಳಲ್ಲಿ ಒಳ್ಳೆಯ ನಡೆ ನುಡಿಯಿಲ್ಲದ ವ್ಯಕ್ತಿಗಳು ಮಾಡುವ ಪೂಜೆಯನ್ನು ದೇವರು ಒಪ್ಪಿಕೊಳ್ಳುವುದಿಲ್ಲ/ಸ್ವೀಕರಿಸುವುದಿಲ್ಲ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ. ಒಳ್ಳೆಯ ನಡೆನುಡಿ ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ಕೆಲಸವು ತನಗೆ ಒಳಿತನ್ನು ತರುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನುಂಟುಮಾಡುವಂತಿರುವುದು.
( ಸದಾಚಾರ=ಒಳ್ಳೆಯ ನಡತೆ/ಒಳ್ಳೆಯ ವರ‍್ತನೆ; ಸದ್ಭಕ್ತಿ+ಇಲ್ಲದ+ಅವರನ್+ಒಲ್ಲನ್+ಅಯ್ಯಾ; ಸದ್ಭಕ್ತಿ=ದೇವರನ್ನು ಪೂಜಿಸಲು/ಒಲಿಸಿಕೊಳ್ಳಲು ವ್ಯಕ್ತಿಯು ಹೊಂದಿರಬೇಕಾದ ಒಳ್ಳೆಯ ನಡೆನುಡಿ; ಅವರನ್=ಅವರನ್ನು/ಅಂತಹ ವ್ಯಕ್ತಿಗಳನ್ನು; ಒಲ್=ಒಪ್ಪು/ಸಮ್ಮತಿಸು/ಪ್ರೀತಿಸು/ಮೆಚ್ಚು; ಒಲ್ಲನ್=ಒಪ್ಪುವುದಿಲ್ಲ/ಮೆಚ್ಚುವುದಿಲ್ಲ/ನಿರಾಕರಿಸುತ್ತಾನೆ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ ;
ಸದಾಚಾರ ಸದ್ಭಕ್ತಿಯಿಲ್ಲದವರನೊಲ್ಲನಯ್ಯಾ=ಕುಟುಂಬದ ನೆಲೆ/ದುಡಿಮೆಯ ನೆಲೆ/ಸಾರ‍್ವಜನಿಕ ನೆಲೆಗಳಲ್ಲಿ ಸಹಮಾನವರೊಡನೆ ಒಳ್ಳೆಯ ನಡೆನುಡಿಗಳಿಂದ ವರ‍್ತಿಸದ/ನಡೆದುಕೊಳ್ಳದ ವ್ಯಕ್ತಿಗಳನ್ನು ದೇವರು ಮೆಚ್ಚುವುದಿಲ್ಲ/ತನ್ನವರೆಂದು ಒಲಿಯುವುದಿಲ್ಲ.
ಏಕೆಂದರೆ ಶಿವಶರಣಶರಣೆಯರ ಪಾಲಿನ ದೇವರು ಕಲ್ಲು/ಮಣ್ಣು/ಲೋಹ/ಮರದಿಂದ ಮಾಡಿದ ವಿಗ್ರಹವಾಗಿರಲಿಲ್ಲ. ವ್ಯಕ್ತಿಯ ಮಯ್ ಮನದಲ್ಲಿ ಅರಿವು ಮತ್ತು ಸಾಮಾಜಿಕ ಎಚ್ಚರವನ್ನು ನೀಡುವ ಒಳದನಿಯನ್ನು ದೇವರೆಂದು ಅವರು ತಿಳಿದಿದ್ದರು. ವ್ಯಕ್ತಿಯು ಜೀವನದಲ್ಲಿ ತನಗೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ಒಳ್ಳೆಯ ನಡೆನುಡಿಗಳಲ್ಲಿ ದೇವರನ್ನು ಕಾಣುತ್ತಿದ್ದರು;
ಅವರ್+ಆರಾಧನೆ; ಅವರ=ಅಂತಹ ವ್ಯಕ್ತಿಗಳ; ಆರಾಧನೆ=ಪೂಜೆ/ಸೇವೆ/ಅರ‍್ಚನೆ; ದಂಡ=ಉಪಯೋಗವಿಲ್ಲದುದು/ಪ್ರಯೋಜನವಿಲ್ಲದುದು;
ಅವರಾರಾಧನೆ ದಂಡ=ಒಳ್ಳೆಯ ನಡೆನುಡಿಯಿಲ್ಲದ ವ್ಯಕ್ತಿಗಳು ಮಾಡುವ ದೇವರ ಪೂಜೆಯಿಂದ ಯಾರಿಗೂ ಯಾವೊಂದು ಬಗೆಯ ಪ್ರಯೋಜನವೂ ಇಲ್ಲ/ಏನೊಂದು ದೊರಕುವುದಿಲ್ಲ/ಯಾವುದೇ ಪರಿಣಾಮವಿಲ್ಲ;
ನಿಚ್ಚ=ಪ್ರತಿದಿನ/ಪ್ರತಿನಿತ್ಯ; ನಿಚ್ಚ ನಿಚ್ಚ=ಸದಾಕಾಲ/ನಿರಂತರವಾಗಿ/ಯಾವಾಗಲೂ; ಪ್ರಾಯಶ್ಚಿತ್ತ=ವ್ಯಕ್ತಿಯು ತಾನು ಮಾಡಿದ ತಪ್ಪನ್ನು ತಾನೇ ಅರಿತುಕೊಂಡು, ತನ್ನನ್ನು ತಾನೆ ದಂಡಿಸಿಕೊಂಡು/ತನ್ನ ಮಯ್ ಮನವನ್ನು ಬಹುಬಗೆಯಲ್ಲಿ ಹಿಂಸಿಸಿಕೊಂಡು, ಮತ್ತೆ ಅಂತಹ ತಪ್ಪನ್ನು ಮಾಡುವುದಿಲ್ಲವೆಂದು ತೀರ‍್ಮಾನಿಸುವುದು; ಪ್ರಾಯಶ್ಚಿತ್ತರನು=ತಮ್ಮನ್ನು ತಾವೇ ದಂಡಿಸಿಕೊಳ್ಳುವವರನ್ನು; ನಿಚ್ಚ ನಿಚ್ಚ ಪ್ರಾಯಶ್ಚಿತ್ತರನು=ಪದೇ ಪದೇ ಪ್ರಾಯಶ್ಚಿತ್ತ ಮಾಡಿಕೊಳ್ಳುವವರನ್ನು; ಒಲ್ಲ=ನಿರಾಕರಿಸುತ್ತಾನೆ/ದೂರವಿಡುತ್ತಾನೆ/ಒಪ್ಪಿಕೊಳ್ಳುವುದಿಲ್ಲ;
ಕೂಡಲಸಂಗಮದೇವ=ಈಶ್ವರ/ಶಿವ/ಬಸವಣ್ಣನ ಮೆಚ್ಚಿನ ದೇವರು/ಬಸವಣ್ಣನ ವಚನಗಳ ಅಂಕಿತನಾಮ; ಭೂಮಿ=ಇಳೆ/ಲೋಕ/ಜಗತ್ತು/ಪ್ರಪಂಚ; ಭಾರ=ಹೊರೆ/ತೂಕ/ಹೆಚ್ಚಿನ ತೂಕವುಳ್ಳದ್ದು; ಭಾರಕರು=ಹೊರೆಯಾದವರು;
ಭೂಮಿಭಾರಕ= ಬೂಮಿಗೆ ಬಾರವಾದವನು ಅಂದರೆ ಇಳೆಯಲ್ಲಿ/ಲೋಕದಲ್ಲಿ ಬಾಳಲು ಯೋಗ್ಯನಲ್ಲದವನು. ಇದೊಂದು ಬಯ್ಗುಳದ ನುಡಿಗಟ್ಟು. ಬಳಕೆಯಾದ ಸನ್ನಿವೇಶಕ್ಕೆ ತಕ್ಕಂತೆ ಈ ಬಯ್ಗುಳ ಪದ ಹಲವು ತಿರುಳುಗಳನ್ನು ಹೊಂದುತ್ತದೆ.
1) ಏನೊಂದು ಕೆಲಸವನ್ನು/ದುಡಿಮೆಯನ್ನು ಮಾಡದೆ, ತಾನು ತಿನ್ನುವ ಅನ್ನ/ತೊಡುವ ಬಟ್ಟೆ/ವಾಸಿಸುವ ಮನೆ ಮೊದಲುಗೊಂಡು ಜೀವನಕ್ಕೆ ಅಗತ್ಯವಾದುದೆಲ್ಲಕ್ಕೂ ಇತರರನ್ನು ಆಶ್ರಯಿಸಿರುವ/ಅವಲಂಬಿಸಿರುವ ವ್ಯಕ್ತಿ/ಇತರರಿಗೆ ಹೊರೆಯಾದವನು.
2) ಸಹಮಾನವರಿಗೆ ಮತ್ತು ಸಮಾಜಕ್ಕೆ ಯಾವಾಗಲೂ ಕೇಡನ್ನು ಬಗೆಯುತ್ತಿರುವ ವ್ಯಕ್ತಿ.
3) ತನ್ನ ವ್ಯಕ್ತಿತ್ವದ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲದೆ/ಎಚ್ಚರವಿಲ್ಲದೆ ಬೇಜವಾಬ್ದಾರಿಯಿಂದ ಬಾಳುತ್ತಿರುವ ವ್ಯಕ್ತಿ.
ನಿಚ್ಚ ನಿಚ್ಚ ಪ್ರಾಯಶ್ಚಿತ್ತರನು ಒಲ್ಲ ಕೂಡಲಸಂಗಮದೇವ ಭೂಮಿಭಾರಕರ=ಮತ್ತೆ ಮತ್ತೆ ಮಾಡಿದ ತಪ್ಪನ್ನೇ ಮಾಡುತ್ತ, ಅದರ ಜತೆಗೆ ಇನ್ನೂ ಹೊಸಬಗೆಯ ತಪ್ಪುಗಳನ್ನು ಮಾಡುತ್ತ, ಪದೇ ಪದೇ ಪಶ್ಚಾತ್ತಾಪಗೊಂಡವನಂತೆ ನಟಿಸುವ ವ್ಯಕ್ತಿಯು ಎಂದಿಗೂ ಒಳ್ಳೆಯವನಾಗಿ/ಗುಣವಂತನಾಗಿ ಬಾಳಲಾರ. ಇಂತಹ ಕೆಟ್ಟ ವ್ಯಕ್ತಿಗಳನ್ನು ದೇವರು ಒಪ್ಪುವುದಿಲ್ಲ.
ತಪ್ಪನ್ನು ಮಾಡಿದ ವ್ಯಕ್ತಿಯು ಅದಕ್ಕೆ ದೇಹದಂಡನೆ ಇಲ್ಲವೇ ಇನ್ನಿತರ ಬಗೆಯ ಆಚರಣೆಗಳಿಂದ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವುದರಿಂದ ಮಾಡಿದ ತಪ್ಪು ನಿವಾರಣೆಯಾಗುವುದಿಲ್ಲ. ಜೀವನದಲ್ಲಿ ಒಂದಲ್ಲ ಒಂದು ಬಗೆಯ ತಪ್ಪನ್ನು ಮಾಡದ ವ್ಯಕ್ತಿಯೇ ಇಲ್ಲ. ಆದ್ದರಿಂದ ತಪ್ಪನ್ನು ಮಾಡಿದ ವ್ಯಕ್ತಿಯು ತನ್ನ ದೇಹ ದಂಡನೆಗೆ ಬದಲಾಗಿ ಮತ್ತೆ ಅಂತಹ ತಪ್ಪನ್ನು ಮಾಡದಿರುವ ತೀರ‍್ಮಾನವನ್ನು ಕಯ್ಗೊಂಡು, ತನ್ನ ನಡೆನುಡಿಗಳ ಬಗ್ಗೆ ಎಚ್ಚರವನ್ನು ಹೊಂದಿ, ಮತ್ತೊಮ್ಮೆ ಯಾವುದೇ ಬಗೆಯ ತಪ್ಪುಗಳು ತನ್ನಿಂದ ಆಗದಂತೆ ಒಳ್ಳೆಯ ನಡೆನುಡಿಗಳಿಂದ ಬಾಳುವ ರೀತಿಯು ನಿಜವಾದ ಪ್ರಾಯಶ್ಚಿತ್ತವಾಗುತ್ತದೆ ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು.)
( ಚಿತ್ರಸೆಲೆ: lingayatreligion.com )
ಇತ್ತೀಚಿನ ಅನಿಸಿಕೆಗಳು