ಅಂತೂ ಇಂತೂ ವಾಶಿಂಗ್ ಮಶೀನ್ ಬಂತು

– ಮಾರಿಸನ್ ಮನೋಹರ್.

washing machine, ಬಟ್ಟೆ ತೊಳೆಯುವ ಯಂತ್ರ, ವಾಶಿಂಗ್ ಮಶೀನ್

ಮನೆ ಕೆಲಸ ಮಾಡುವವಳು ಬಾರದೇ ಒಂದು ವಾರವಾಗಿತ್ತು. ಒಗೆಯಬೇಕಾದ ಬಟ್ಟೆಗಳು, ಬೆಳಗಬೇಕಾದ ಪಾತ್ರೆಗಳು ಒಂದರ ಮೇಲೆ ಒಂದು ಕುಪ್ಪೆ ಬಿದ್ದವು ಹಾಗೂ ಒರೆಸಬೇಕಾದ ಮನೆ ಹೊಲಸಾಗಿ ಹೋಯ್ತು. ಮನೆ ಕೆಲಸದವಳು ಹೇಳಿಯೂ ಹೋಗಿರಲಿಲ್ಲ. ಅವಳು ಹೇಳಿ ಹೋಗುತ್ತಲೂ ಇರಲಿಲ್ಲ. ಮನೆಯಲ್ಲಿ ಒಬ್ಬರ ಮೇಲೆ ಮತ್ತೊಬ್ಬರ ಗದ್ದಲ ಹೆಚ್ಚಾಗಿ ಕಿರಿಕಿರಿಯಾಯ್ತು. ಮನೆಯ ಎಲ್ಲ ಸದಸ್ಯರು ಉಟ್ಟ ಹಳೇ ಬಟ್ಟೆಗಳಲ್ಲೇ ಸಬೆ ಸೇರಿದೆವು. “ಮನೆ ಕೆಲಸದವಳಿಗೆ ಚೆನ್ನಾಗಿ ಬುದ್ದಿ ಕಲಿಸಬೇಕು” ಅಂದರು ಕೆಲವರು. ಮೂರು ತಿಂಗಳಲ್ಲಿ ಇದು ನಾಲ್ಕನೇ ಬಾರಿ ಆಗಿದೆ. ಕೆಲಸದವಳು ಹೇಳದೆ ಕೇಳದೆ ಎಲ್ಲಿಗೋ ಮೂರು ನಾಲ್ಕು ದಿನ ಹೋಗಿ ಬಿಡುವುದು ಆಮೇಲೆ ಬಂದು “ಮಣ್ಣಿಗೆ ಹೋಗಿದ್ದೆ, ಮದುವೆಗೆ ಹೋಗಿದ್ದೆ” ಅಂದರೆ ಎಲ್ಲಾ ಮುಗಿದುಹೋಗುತ್ತಿತ್ತು!

ಮನೆಕೆಲಸದವರ ಅಂಜಿಕೆ ಎಶ್ಟೆಂದರೆ ಅವರಿಗೆ ಡೈರೆಕ್ಟ್ ಬೈಯುವ ಹಾಗೆ ಇಲ್ಲ. ಯಾವುದೋ ನೆವ ಮಾಡಿಕೊಂಡು ನಾವೇ ಹಳಹಳಿಸಬೇಕು ಅದನ್ನು ಅವರು ಗಮನಿಸಿ ನಮ್ಮ ಮೇಲೆ ದಯೆತೋರಿ “ಆಯ್ತು ಮುಂದಿನ ಸಲ ನನಗೆ ನೀವೇ ಎಲ್ಲಿ ಯಾದರೂ ಅಮೆರಿಕ, ಪ್ರಾನ್ಸ್, ಯುರೋಪ್ ಸುತ್ತಾಡಿ ಬಾ ಅಂತ ಹೇಳಿ” ಅನ್ನುವ ಲುಕ್ ಕೊಡುತ್ತಾರೆ! ಮೂರು ದಿನ ತಪ್ಪಿಸಿ ಬಂದ ಶಾಂತಮ್ಮ “ಎಲ್ಲಾ ಬಟ್ಟೆ ಹಾಗೇ ಇಟ್ಟಿದ್ದೀರಿ! ನೀವೇ ಒಗೆದುಕೊಳ್ಳಬೇಕು ನಾನು ಬರದಿದ್ದರೆ” ಅಂತ ಬಾಣ ಬಿಟ್ಟಳು. ಅದಕ್ಕಾಗಿ ಸಿದ್ದವಾಗಿ ನಿಂತಿದ್ದ ಮನೆಯವರು “ಮತ್ತೆ ನಿನ್ನನ್ನು ಕೆಲಸಕ್ಕೆ ಯಾಕೆ ಇಟ್ಟುಕೊಂಡಿರುವುದು? ನಮಗೆ ಆಗದ್ದಕ್ಕೆ ತಾನೆ? ನೀನು ಮುಂದಿನ ಸಲ ಹೋಗುವ ಹಾಗಿದ್ದರೆ ಹೇಳಿ ಹೋಗು ಇಲ್ಲದಿದ್ದರೆ ಬರಬೇಡ” ಅಂತ ಅವಳ ಮೇಲೆ ಬಾಂಬ್ ಹಾಕಿದರು. ಇಂತಹ ಬಾಂಬ್ ಗಳನ್ನು ಮನೆ ಮನೆಗಳಲ್ಲಿ ಎದುರಿಸಿ ಬಂದಿದ್ದ ಟ್ಯಾಂಕ್ ಅವಳು. “ಹೇಳಿ ಕೇಳಿ ಹೋಗೊದಕ್ಕೆ ಸಾಯುವವರು ನನಗೆ ಹೇಳಿ ಸಾಯುತ್ತಾರಾ? ಅತವಾ ನನಗೆ ಕನಸು ಬೀಳುತ್ತಾ ಹಾಗಾಗುತ್ತೆ ಅಂತ? ಮೊದಲೇ ಹೇಳಿ ಹೋಗೋದಕ್ಕೆ ನನ್ನಿಂದಾಗದು. ಕೆಲಸಕ್ಕೆ ಬೇರೆ ಯಾರನ್ನಾದರೂ ಇಟ್ಟುಕೊಳ್ಳಿ” ಅಂದಳು ಶಾಂತಮ್ಮ. ಇದನ್ನು ಎದುರು ನೋಡಿರದ ಅಮ್ಮ ತಂಗಿ ಸ್ವಲ್ಪ ಹೊತ್ತು ಗೊಂದಲಕ್ಕೆ ಒಳಗಾದರು ಆಮೇಲೆ “ಹಾಗಾದರೆ ನಾಳೆಯಿಂದ ಬರಬೇಡ ನೀನು” ಅಂತ ಮನೆಯ ಹಿಂದುಗಡೆಯಿಂದ ಒಳಗೆ ಬಂದರು ಕಾದಾಟ ಗೆದ್ದು ಬಂದವರ ಹಾಗೆ. 

ಶಾಂತಮ್ಮ ಬಟ್ಟೆಗಳನ್ನು ಎತ್ತಿ ಎತ್ತಿ ಜೋರಾಗಿ ಒಗೇಕಲ್ಲಿನ ಮೇಲೆ ಬಡಿದಳು. ನನ್ನ ಪ್ರೀತಿಯ ಕಪ್ಪು ಶರ‍್ಟ್ ಜೀವ ಬಿಟ್ಟಿರಬಹುದು. ಎಲ್ಲ ಬಟ್ಟೆಗಳನ್ನು ಒಗೆದು ಹಿಂಡಿ ತಂತಿಯ ಮೇಲೆ ಒಣಹಾಕಿ ಬಿರಬಿರನೆ ಹೆಜ್ಜೆ ಹಾಕಿ, ಹಿಂದಕ್ಕೆ ತಿರುಗಿಯೂ ನೋಡದ ಹಾಗೆ ಹೊರಟೇ ಹೋದಳು. ಅರ‍್ದ ಗಂಟೆ ಆದ ಮೇಲೆ ಮತ್ತೆ ಬಂದಳು. ಎಲ್ಲರೂ ಯಾಕೆ ಅಂತ ಕಣ್ಣು ಅರಳಿಸಿ ನೋಡುತ್ತಿದ್ದರು. ಅವಳು ಬಂದು ಮನೆಯ ಹಿಂದಕ್ಕೆ ಹೋಗಿ ಅಲ್ಲಿ ಕಂಪೌಂಡ್ ಮೇಲೆ ಇಟ್ಟಿದ್ದ ಅವಳ ಸಂಚಿ ಚೀಲ ತೆಗೆದುಕೊಂಡಳು. ಸಿಟ್ಟಿನಲ್ಲಿ ಮರೆತು ಹೋಗಿರಬೇಕು. ಅವಳು ಯಾವ ಆಟೋ ಡ್ರೈವರ್‌ಗೂ ನಾಚಿಕೆಯಾಗುವಂತೆ ಗುಟ್ಕಾ ತಿನ್ನುತ್ತಿದ್ದಳು. ಒಂದು ಸಲ ಮನೆ ಒರೆಸುತ್ತಿದ್ದಾಗ ಅಯ್ಯೋ ಅನ್ನುತ್ತಾ ಹಾಲ್ ನಲ್ಲಿಯೇ ಮಲಗಿಬಿಟ್ಟಳು ಅಮ್ಮ ತಂಗಿ ಬಂದು ಏನಾಯ್ತೇ ಏನಾಯ್ತೇ ಅಂದ ಹೆದರಿ ಕೇಳುತ್ತಿದ್ದರೆ, ಅವಳು ತನ್ನ ಕುಪ್ಪಸದ ಕೈಯಿಂದ ಹತ್ತು ರೂಪಾಯಿ ನೋಟು ನಮಗೆ ಕೊಟ್ಟು “ಅರ‍್ಜಂಟ್ ನನಗೆ ಒಂದು ಗುಟ್ಕಾ ಪ್ಯಾಕೆಟ್ ತಂದುಕೊಡಿ, ಮುಂಜಾನೆಯಿಂದ ಹಾಕ್ಕೊಂಡಿಲ್ಲ. ಅದಕ್ಕೆ ತಲೆಸುತ್ತು ಬಂದಿದೆ” ಅಂತ ಹೇಳಿದಳು. ಅವಳಿಗೆ ಗುಟ್ಕಾ ಹಾಕಿ ಎಬ್ಬಿಸಿದೆವು, ಮತ್ತೆ ಮನೆಕೆಲಸ ಮಾಡಿ ಹೋಗಿದ್ದಳು ಅವತ್ತು!

“ಅಮ್ಮಾ ನಾಳೆಯಿಂದ ಶಾಂತಮ್ಮ ಕೆಲಸಕ್ಕೆ ಬರೋದಿಲ್ಲ, ಈಗ ಏನಮ್ಮಾ ಮಾಡುವುದು?” ಅಂತ ತಂಗಿ ನವಿರಾಗಿ ಕೇಳಿದಳು. ಅವಳ ಚಿಂತೆಗೆ ಸ್ಪಶ್ಟವಾದ ಕಾರಣವಿತ್ತು. ಅಮ್ಮನಿಗೂ ಶಾಂತಮ್ಮ ಕೆಲಸ ಮಾಡುವಾಗ “ಹೀಗೆ ಮಾಡು, ಚೆನ್ನಾಗಿ ಒಗೆ, ಹೆಚ್ಚು ನೀರು ಹಾಕು, ಬೆಡ್ ಕೆಳಗಿನಿಂದ ಕಸ ಹೊರಗೆ ತೆಗೆದು ಚೆನ್ನಾಗಿ ಒರೆಸು, ನೀಲಿ ಹೆಚ್ಚು ಹಾಕಬೇಡ” ಅಂತ ಅವಳಿಗೆ ಡಾಸ್ ಸಿಸ್ಟಮ್ ತರಹ ಕಮಾಂಡ್ ಕೊಟ್ಟು ಕೊಟ್ಟು ಕೆಲಸ ಮಾಡಿಸಿ ಸಾಕಾಗಿ ಹೋಗಿತ್ತು. “ನಿಮ್ಮಪ್ಪ ಬರಲಿ” ಅಂತ ಅಶ್ಟೇ ಹೇಳಿ ಮಾತು ಮುಗಿಸಿದಳು. ನಾನು ಕಾಲೇಜಿನಿಂದ ಬಂದ ಮೇಲೆ ಸೀದಾ ಬಟ್ಟೆ ಒಣಹಾಕಿದ್ದ ತಂತಿಯ ಕಡೆಗೆ ಹೋಗಿ ನನ್ನ ಪ್ರೀತಿಯ ಕಪ್ಪು ಶರ‍್ಟ್ ಬಳಿ ಬಂದು “ತುಂಬಾ ಹೆಚ್ಚಿಗೆ ನೋವಾಯ್ತೇನೋ?” ಅನ್ನೋ ಹಾಗೆ ಅದರ ಮೈಸವರಿದೆ. ಪೋಲಿಸ್ ಸ್ಟೇಶನ್ ಗೆ ಹೋಗಿ ಏರೋಪ್ಲೇನ್ ಹತ್ತಿ ಬಂದವರ ಹಾಗೆ, ಪಾಪ ಸೊರಗಿ ಮೈ ಮುದುಡಿಕೊಂಡು ತಂತಿಯ ಮೇಲೆ ಕರೆಂಟ್ ಹೊಡೆಸಿಕೊಂಡವರ ಹಾಗೆ ಜೋತು ಬಿದ್ದಿತ್ತು. “ಹಳೆಯದೆಲ್ಲಾ ಕೆಟ್ಟ ಕನಸು ಅಂತ ಮರೆತು ಬಿಡು, ಶಾಂತಮ್ಮ ನಾಳೆಯಿಂದ ಕೆಲಸಕ್ಕೆ ಬರುವುದಿಲ್ಲ, ನಿನಗೆ ಡ್ರೈ ಕ್ಲೀನಿಂಗ್ ಮಾಡಿಸುತ್ತೇನೆ ಆಯ್ತಾ” ಅಂತ ಸಾಂತ್ವನ ಹೇಳಿ ಒಳಬಂದೆ.

ಅಪ್ಪ ಮನೆಗೆ ಬಂದರು, ಮೊದಲು ಅವರ ಕಿವಿಗೆ ಬಿದ್ದಿದ್ದು ಇದೇ ಸುದ್ದಿ. ಕೇಳಿ ಪೆಚ್ಚಾದರು. ಕೆಲಸದವರನ್ನು ಅವರೇ ತಮ್ಮ ಪರಿಚಯದವರ ಬಳಿಯಿಂದ ಹುಡುಕಿಕೊಂಡು ಕರೆದುಕೊಂಡು ಬರುತ್ತಿದ್ದರು. ಬ್ಲೂ ಕಾಲರ್ ಲೇಬರ್ ಮಾರ‍್ಕೆಟ್ನಲ್ಲಿ ಇರುವ ವೈಟ್ ಕಾಲರ್ ಲೇಬರ್ ಗಳೆಂದರೆ ಮನೆಕೆಲಸ ಮಾಡುವವರೇ. ಅಪ್ಪ “ಮತ್ತೆ ಯಾರನ್ನು ಕರೆತರಬೇಕು? ಅವರು ಬೇಗ ಬರುವವರೂ ಅಲ್ಲ. ಅವರ ಬಳಿಗೆ ನಾವೇ ಹೋದರೆ ಅವರ ಎಲ್ಲ ಕಂಡೀಶನ್ ಒಪ್ಪಬೇಕಾಗುತ್ತೆ” ಅಂದರು. ಇದೇ ಹೊತ್ತಿಗೆ ಹೊರಗೆ ಯಾರೋ ಬಂದ ಹಾಗೆ ಆಯ್ತು. ಬಾಗಿಲ ಬಳಿ ಅಮ್ಮನ ತಂದೆ ತಾಯಿಗಳು ಅಂದರೆ ನನ್ನ ತಾತಾ-ಅಜ್ಜಿ ಬಂದಿದ್ದರು! ಅಮ್ಮನಿಗೆ ತವರು ಮನೆ ಕಡೆಯಿಂದ ಯಾರೇ ಬರಲಿ ಕುಶಿ ತುಂಬಿ ತುಳುಕುತ್ತದೆ. ಅಪ್ಪ ತಮ್ಮ ಹಣೆಯನ್ನು ಗಂಟು ಹಾಕುವುದು ಮರೆಯಲಿಲ್ಲ. ಮನೆ ಕೆಲಸದವಳು ಇಲ್ಲದಾಗ ಹೀಗೆ ನೆಂಟರು ಬರುವುದು ಚಪ್ಪರ ಬಿದ್ದಾಗಲೇ ಮಳೆ ಬಂದ ಹಾಗೆ ಸರಿಯಾಯ್ತು. ತಾತಾ ಅಜ್ಜಿಗೂ ಸುದ್ದಿ ಗೊತ್ತಾಯಿತು. ಅವರು ಶಾಂತಮ್ಮಳನ್ನು ಗುರುತು ಹಿಡಿಯುತ್ತಿದ್ದರು. ತಾತಾ “ಬೇರೆ ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳಿ” ಅಂತ ಸಿಂಪಲ್ಲಾಗಿ ಹೇಳಿದರು‌. ಅಮ್ಮ, “ಏನೂ ಬೇಡ, ಇವತ್ತೇ ಹೋಗಿ ವಾಶಿಂಗ್ ಮಶಿನ್ ತರೋಣ” ಅಂತ ಅಪ್ಪನಿಗೆ ಶಾಕ್ ಕೊಟ್ಟಳು!

ಮನೆ ಗ್ರಾಮ ಪಂಚಾಯಿತಿ ಮೀಟಿಂಗ್ ತರಹ ಆಯ್ತು. ಎಲ್ಲ ಕಡೆಗಳಿಂದ ಸಲಹೆ ತೂರಿಕೊಂಡು ಬಂದವು, ಜೋರು ಜೋರಿನ ದನಿಯಲ್ಲಿ. ಅಪ್ಪ ಶೇರು ಮಾರ‍್ಕೆಟ್ ನಲ್ಲಿ ದಲ್ಲಾಳಿಗಳು ಕಂಪ್ಯೂಟರ್ ಮುಂದೆ ಚಿಂತೆಯಿಂದ ಕೂತಿರುವವರ ಹಾಗೆ ಕೂತುಕೊಂಡರು. ಅಮ್ಮ ಎಲ್ಲ ದಿಕ್ಕಿನಿಂದ ಬಂದ ಸಲಹೆ ಕೇಳಿಸಿಕೊಳ್ಳುತ್ತಾ ಕುಳಿತಿದ್ದಳು. ತಾತಾ Thompson ಬ್ರಾಂಡ್ ನ ವಾಶಿಂಗ್ ಮಶಿನ್ ತಗೊಳ್ಳಿ ಅಂತ ಹೇಳಿದ, ಎಲ್ಲರೂ ಗೊಳ್ಳೆಂದು ನಕ್ಕರು. ತಾತಾ ಅಜ್ಜಿ ಮನೆಯಲ್ಲಿ ಎಂದೋ ಕರೀದಿ ಮಾಡಿದ್ದ 60ರ ಹತ್ತೇಡಿನ ಬ್ರಾಂಡ್ ನ ಟಿವಿ ಅದು. ವಾಶಿಂಗ್ ಮಶಿನ್ ಕೂಡ ಅದೇ ಕಂಪನಿ ಮಾಡುತ್ತೆ ಅಂತ ತಿಳಿಕೊಂಡು ಹಾಗೆ ಹೇಳಿದ್ದರು! ಈಗ ಬಹುಶಹ ಆ ಕಂಪನಿಯೇ ಬಂದ್ ಆಗಿರಬಹುದು ಈಗ. ಎಲ್ಲರೂ ನಕ್ಕಿದ್ದರಿಂದ ತಾತನಿಗೆ ಅವಮಾನವಾಯ್ತು, ಮಲಗಿಕೊಳ್ಳಲು ಹೋದರು.

ರೈಲ್ವೇ ಸ್ಟೇಶನ್ ಬಳಿ ಇರುವ ಎರಡು ಎಲೆಕ್ಟ್ರಾನಿಕ್ಸ್ ಸಾಮನುಗಳ ಮಳಿಗೆಗೆ ನಾನು, ಅಪ್ಪ-ಅಮ್ಮ, ಅಣ್ಣ ಹೋದೆವು. ನಾನು, ಅಣ್ಣ ಬೈಕ್ ಮೇಲೆ ಅಪ್ಪ ಅಮ್ಮ ಆಟೋದಲ್ಲಿ ಬಂದರು. ಮಳಿಗೆಗೆ ಬಂದೆವು.ಎಲ್ಲ ವಾಶಿಂಗ್ ಮಶಿನ್ ಗಳು ಚೆನ್ನಾಗಿಯೇ ಕಾಣಿಸಿದವು. ಸೈಡ್ ಲೋಡ್, ಅಪ್ಪರ್ ಲೋಡ್ ಅಂತೆಲ್ಲ ಇದ್ದವು. ನಮ್ಮ ಮೊದಲನೇ ವಾಶಿಂಗ್ ಮಶಿನ್ ಶಾಪಿಂಗ್ ಇದು ಅದಕ್ಕೆ ಚಿನ್ನದ ಅಂಗಡಿಯಲ್ಲಿ ಬಂಗಾರ ಪರೀಕ್ಶೆ ಮಾಡಿದ ಹಾಗೆ ಒಂದೊಂದು ವಾಶಿಂಗ್ ಮಶಿನ್ ನ ಪೀಚರ್ ಗಳನ್ನು ಸ್ಟಡೀ ಮಾಡುತ್ತಾ ಹೋದೆವು. ಒಂದು ಸೈಡ್ ಲೋಡ್ ವಾಶಿಂಗ್ ಮಶಿನ್ ಸೆಲೆಕ್ಟ್ ಆಯ್ತು. ಆಗ ಮಳಿಗೆಯ ಮಾಲೀಕ ಬಳಿಗೆ ಬಂದು ಈ ಪ್ರಿಡ್ಜ್ ನೋಡಿ ಅಂದ. ಎರಡನ್ನೂ ತಗೊಂಡರೆ ಹದಿನೈದು ಪರ‍್ಸೆಂಟ್ ಡಿಸ್ಕೌಂಟ್ ಕೊಡುತ್ತೇನೆ ಅಂದ. ನಾವು ಎಲ್ಲಿ ಮತ್ತೆ ಮತ್ತೆ ಬರುತ್ತೇವೆ ಅಂತ ಅದನ್ನೂ ತಗೊಂಡೆವು. ಟ್ರಾಲಿಯಲ್ಲಿ ಹಾಕಿದರು ವಾಶಿಂಗ್ ಮಶಿನ್ ಮತ್ತು ಪ್ರಿಡ್ಜ್. ಅವುಗಳನ್ನು ಪಿಟ್ ಮಾಡಿ ಕೊಡಲು ಕಂಪನಿಯಿಂದ ಒಬ್ಬ ಅವುಗಳ ಜೊತೆಗೇ ಮನೆಗೆ ಬಂದು ಪಿಟ್ ಮಾಡಿ ಕೊಟ್ಟು ಹೋದ‌. ಮೊದಲು ನಾನು ಮಾಡಿದ ಕೆಲಸ ಅಂದರೆ ಪ್ರಿಡ್ಜನ ಪ್ರೀಜರ್ ಬಾಕ್ಸನ ಐಸ ಟ್ರೇಗಳಲ್ಲಿ ನೀರು ತುಂಬಿದ್ದು! ನಾವು ಮನೆಗೆ ಬಂದ ವಾಶಿಂಗ್ ಮಶಿನಿನಲ್ಲಿ ಅವನು ಹೇಳಿಕೊಟ್ಟ ತೋರಿಸಿಕೊಟ್ಟ ಹಾಗೆ ಬಟ್ಟೆಗಳನ್ನು ಹಾಕಿದೆವು. ಅದು ತಿರುಗಲು ಶುರುವಾಯ್ತು. ಸೈಡ್ ಲೋಡ್ ಇದ್ದುದರಿಂದ ಒಳಗೆ ಅದು ಹೇಗೆ ಬಟ್ಟೆ ಒಗೆಯುತ್ತದೆ ಅಂತ ತಾತಾ ಅಜ್ಜಿ ಎಲ್ಲರೂ ಗಮನಕೊಟ್ಟು ನಾಳೆ ಎಕ್ಸಾಮ್ ನಲ್ಲಿ ಬರೆಯುವವರ ಹಾಗೆ ನೋಡಿ ಸಂತಸಪಟ್ಟೆವು. ಪಪ್ಪ, ಮಾವ Thompson ಕಂಪನಿಯೇ ಇದನ್ನು ಮಾಡಿದ್ದಂತೆ ಆದರೆ ಹೆಸರು ಬೇರೆ ಕೊಟ್ಟಿದ್ದಾರೆ ಅಶ್ಟೇ” ಅಂತ ತಮಾಶೆ ಮಾಡಿದರು!

(ಚಿತ್ರ ಸೆಲೆ: clipartmag)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *