ಮಕ್ಕಳ ಕೈಯಲ್ಲಿ ಮೊಬೈಲ್‌ ಅದೆಶ್ಟು ಸರಿ?

ಪ್ರಕಾಶ್‌ ಮಲೆಬೆಟ್ಟು.

ಮೊಬೈಲ್‌ - ಮಕ್ಕಳು

ಬಾನ ದಾರಿಯಲ್ಲಿ ಸೂರ‍್ಯ ಜಾರಿ ಹೋದ, ಚಂದ್ರ ಮೇಲೆ ಬಂದ, ಮಿನುಗು ತಾರೆ ಅಂದ
ನೋಡು ಎಂತಾ ಚಂದ, ರಾತ್ರಿ ಆಯಿತು ಮಲಗು ನನ್ನ ಪುಟ್ಟ ಕಂದ

ಎಶ್ಟು ಮುದ್ದಾದ ಹಾಡು. ಅಮ್ಮನ ಮಡಿಲಲ್ಲಿ ಕುಳಿತುಕೊಂಡು, ಅವರ ಮದುರವಾದ ದನಿಯಲ್ಲಿ ಈ ಹಾಡನ್ನು ಕೇಳುತ್ತಾ, ಮೇಲೆ ಆಕಾಶವನ್ನು ದಿಟ್ಟಿಸಿನೋಡಿ, ಚಂದಮಾಮನನ್ನು ಬಾ ಎಂದು ಕೈ ಬೀಸಿ ಕರೆದು, ಅವನ ಕಪ್ಪಾದ ಕಲೆ ಕಂಡು, ಅದನ್ನು ಮೊಲ ಎಂದುಕೊಂಡು, ಆ ಮೊಲ ಚಂದ್ರನಲ್ಲಿ ಹೋಗಿ ಏನು ಮಾಡ್ತಾ ಇದೆ ಎಂದು ಅಮ್ಮನಲ್ಲಿ ಕೇಳಿ, ನಕ್ಶತ್ರಗಳನ್ನು ನೋಡಿ ಬೆರಗಾಗುತ್ತಾ, ಸುತ್ತಲೂ ಹಾರಾಡುತ್ತಿರುವ ಮಿಂಚು ಹುಳುಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತಾ, ಅಮ್ಮನ ಕೈ ತುತ್ತು ತಿನ್ನುತ್ತಿದ್ದ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ನಮ್ಮ ಮಕ್ಕಳಿಗೆ ಆ ಬಾಗ್ಯ ಇದೆಯಾ? ಯಾರಿಗೂ ಸಮಯವಿಲ್ಲ, ಅಲ್ವಾ!

ಹೌದು, ಯಾರಿಗೂ ಸಮಯವಿಲ್ಲ ಈಗ. ಅಮ್ಮ, ಅಪ್ಪ, ಗೆಳೆಯರು, ಅಣ್ಣ, ತಮ್ಮ, ಅಕ್ಕ ಮತ್ತು ತಂಗಿ ಇವರೆಲ್ಲರ ಜಾಗವನ್ನು ಇಂದು ಮೊಬೈಲ್ ಪೋನ್ ಅವರಿಸಿಕೊಂಡುಬಿಟ್ಟಿದೆ. ಎಶ್ಟೊಂದು ಬಯಾನಕ ಅಲ್ವಾ? ಕಳ್ಳ – ಪೊಲೀಸ್, ಕುಂಟೆ ಬಿಲ್ಲೆ, ಲಗೋರಿ, ಚುಕ್ಕಿ ಆಟ, ಇಲ್ಲ ಇಲ್ಲ ನಮ್ಮ ಮಕ್ಕಳಿಗೆ ಈ ಆಟಗಳು ಏನಂತಾನೆ ಗೊತ್ತಿಲ್ಲ. ಅದೇ ಕ್ಯಾಂಡಿ ಕ್ರಶ್, ಒಪ್ಪ ಡಾಲ್, ಕೇಳಿದ್ದೀರಾ! ನಿಮ್ಮ ಮಕ್ಕಳನ್ನು ಕೇಳಿನೋಡಿ ಪಟ ಪಟ ಅಂತ ಹೇಳಿ ಬಿಡುತ್ತಾರೆ. ನಾವು ಯಾವ ದಿಕ್ಕಿನತ್ತ ಸಾಗುತಿದ್ದೇವೆ? ಆದುನಿಕತೆಗೆ ಒಗ್ಗಿಕೊಳ್ಳುವ ಯತ್ನದಲ್ಲಿ, ನಾವೇ ನಮ್ಮ ಮಕ್ಕಳನ್ನು ಅಪಾಯದಲ್ಲಿ ಸಿಲುಕಿಸುತ್ತಿದ್ದೇವೆ!

ಮೊಬೈಲ್ ಉಚಿತ – ಅಪಾಯ ಕಚಿತ

ಮೊಬೈಲ್ ವಿಕಿರಣಗಳು ಎಶ್ಟೊಂದು ಅಪಾಯಕಾರಿ ಎಂದು ಅನೇಕ ಬಾರಿ ಸಾಬೀತಾಗಿದೆ. ಚಿಕ್ಕ ಮಕ್ಕಳಿಗೆ ಅದು ತುಸು ಜಾಸ್ತಿನೇ ಅಪಾಯಕಾರಿ. ಮಕ್ಕಳಿಗೆ ತಂದೆ ತಾಯಿಗಳು ಜಾಸ್ತಿ ಮೊಬೈಲ್ ಕೊಡೋದು ಯಾವಾಗ ಗೊತ್ತಾ? ಅವರು ಊಟ ಬೇಡ ಎಂದು ಹಟ ಮಾಡುವಾಗ. ಮೊದಲೇ ಸಮಯವಿಲ್ಲದ ಅಪ್ಪ ಅಮ್ಮ, ಅಯ್ಯೋ ನಮ್ಮ ಮಗು ಸರಿಯಾಗಿ ತಿನ್ನದಿದ್ರೆ ಅದರ ಬೆಳವಣಿಗೆ ಆಗೋದಾದ್ರೂ ಹೇಗೆ ಎಂಬ ಚಿಂತೆಯಲ್ಲಿ ಪಾಪುವಿನ ಕೈಗೆ ಮೊಬೈಲ್ ಕೊಟ್ಟುಬಿಡುತ್ತಾರೆ. ಮೊಬೈಲ್‌ನಲ್ಲಿ ಬರುವ ಮಕ್ಕಳ ಪದ್ಯಗಳನ್ನು (ರೈಮ್ಸ್ ) ನೋಡುತ್ತಾ, ನಗು ನಗುತಾ ಮಗು ಊಟ ಏನೋ ಮಾಡುತ್ತೆ. ಆದರೆ ಮೊಬೈಲ್ ವಿಕಿರಣಗಳು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಚಂದಮಾಮನ ಹಾಡು ಹೇಳಿ ಚಂದಮಾಮ ತೋರಿಸಿ ಊಟ ಮಾಡಿಸುವ ಅಂದರೆ ನಾವು ಈಗಾಗಲೇ ವಿಶಾಲವಾದ ಮನೆ ತೊರೆದು ಬೆಂಕಿಪೊಟ್ಟಣದಂತಹ ಗೂಡಿನೊಳಗೆ ಸೇರಿಕೊಂಡು ಬಿಟ್ಟಿದ್ದೇವೆ. ಅಲ್ಲಿ ಚಂದ್ರ ಎಲ್ಲಿಂದ ಕಾಣಬೇಕು. ಇನ್ನು”ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು” ಎಂಬಂತ ನೀತಿ ಹಾಡುಗಳನ್ನು ಮಕ್ಕಳಿಗೆ ಹೇಳಿಕೊಟ್ಟು ಉಣಿಸುವುದು ಹೇಗೆ ಸಾದ್ಯ!

ಆದರೆ ಗೊತ್ತಿದ್ದು, ತಿಳುವಳಿಕೆ ಇದ್ರು ಅಶ್ಟೊಂದು ತಾಳ್ಮೆ ಇಲ್ಲದ ನಾವು ಮಕ್ಕಳ ಕೈಗೆ ಮೊಬೈಲ್ ಕೊಟ್ಟುಬಿಡುತ್ತೇವೆ. ಅಶ್ಟೇ ಅಲ್ಲ, ನಾವು ಎಶ್ಟೋ ಮಕ್ಕಳನ್ನು ನೋಡುತ್ತೇವೆ, ಅವರಿಗೆ ಚಿಕ್ಕ ಪ್ರಾಯದಲ್ಲೇ ಕನ್ನಡಕ ಬಂದಿರುತ್ತದೆ. ಇದಕ್ಕೆ ಹೆಚ್ಚಿನ ಬಾರಿ ಪೋಶಕರ ಹೊಣೆಗೇಡಿತನವೇ ಕಾರಣವಾಗಿರುತ್ತದೆ! ಮೊಬೈಲ್ ಮಕ್ಕಳ ಕಣ್ಣಿಗೆ ತುಂಬಾ ಅಪಾಯಕಾರಿ. ಅಶ್ಟೇ ಅಲ್ಲ ಮೊಬೈಲ್ ವಿಕಿರಣಗಳ ಪ್ರಬಾವ ಮಕ್ಕಳ ಮೇಲೆ ಜಾಸ್ತಿಯಾಗುವುದರಿಂದ ಕ್ಯಾನ್ಸರ್ ಗೆಡ್ಡೆಗಳಾಗುವ ಹಾಗು ಮೆದುಳಿಗೆ ಹಾನಿಯಾಗುವ ಸಂಬವವಿದೆ ಎಂದು ಸಂಶೋದನೆಗಳು ಹೇಳುತ್ತಿವೆ.

ಮಕ್ಕಳಿಗೆ ಮೊಬೈಲ್ ಉಡುಗೊರೆ!

ಹೌದು ನಾವು ಮಕ್ಕಳಿಗೆ ಸಂತೋಶದಿಂದ ಅವರು ಕೇಳಿದ್ರು ಅಂತ ಮೊಬೈಲ್ ತೆಗೆದುಕೊಟ್ಟುಬಿಡುತ್ತೇವೆ. ಆದರೆ ಇದರಿಂದ ಉಪಯೋಗ ಆಗುವುದಕ್ಕಿಂತ ಅಪಾಯವೇ ಹೆಚ್ಚು. ಸ್ನೇಹಿತರೊಂದಿಗೆ ಚಾಟಿಂಗ್, ಮೊಬೈಲ್ ಗೇಮ್ಸ್, ಅವರ ವಯಸ್ಸಿಗೆ ಸೂಕ್ತವಲ್ಲದ ಸಂದೇಶ, ಪೋಟೋ, ಮಾದ್ಯಮಗಳನ್ನು ಅವರು ನೋಡುವ, ಪರಸ್ಪರ ಕೆಟ್ಟ ಸಂದೇಶ ಕಳುಹಿಸುವ ಸಂಬವ ತುಂಬಾ ಜಾಸ್ತಿ. ಮೊಬೈಲ್ ಗೇಮ್ಸ್, ಚಾಟಿಂಗ್ ಅಂತ ಇಡೀ ದಿನ ಅದರಲ್ಲೇ ಮುಳುಗಿ ತಮ್ಮ ವಿದ್ಯಾಬ್ಯಾಸವನ್ನು ಮರೆತು ಬಿಡುತ್ತಾರೆ. ವಯಸ್ಸಿಗೆ ತಕ್ಕುದಲ್ಲದ ವಿಶಯಗಳನ್ನು ನೋಡುವ ಚಟಕ್ಕೆ ಕೂಡ ಬೀಳಬಹುದು. ಇದು ನೇರವಾಗಿ ಅವರ ವಿದ್ಯಾಬ್ಯಾಸದ ಮೇಲೆ ಪರಿಣಾಮ ಬೀರುತ್ತೆ. ಮೊಬೈಲ್ ಚಟಕ್ಕೆ ಬಿದ್ದ ವಿದ್ಯಾರ‍್ತಿಗಳು ಪರೀಕ್ಶೆಯಲ್ಲಿ ಉತ್ತಮ ಅಂಕ ಪಡೆಯಲು ಕಂಡಿತ ಸಾದ್ಯವಿಲ್ಲ.

ಸರಿಯಾದ ಮಾರ‍್ಗದರ‍್ಶನ ದೊರಕದಿದ್ದಲ್ಲಿ, ಪೋಶಕರು ಮಕ್ಕಳು ಮೊಬೈಲ್‌ನಲ್ಲಿ ಏನನ್ನು ನೋಡುತ್ತಾರೆ ಎಂದು ಸರಿಯಾಗಿ ಗಮನಿಸದಿದ್ದಲ್ಲಿ ಕಂಡಿತವಾಗಲೂ ಅಪಾಯ ಕಟ್ಟಿಟ್ಟ ಬುತ್ತಿ. ಆದುನಿಕ ತಂತ್ರಗ್ನಾನದಿಂದಾಗಿ ಪರಿಚಯವೇ ಇರದ ವ್ಯಕ್ತಿಗಳು ನೇರವಾಗಿ ನಿಮ್ಮ ಮಕ್ಕಳ ಮನಸಿನ ಮೇಲೆ ಪರಿಣಾಮ ಬೀರುವ ಸಾದ್ಯತೆ ತುಂಬಾ ಹೆಚ್ಚು. ಅವರು ನಿಮ್ಮ ಮಕ್ಕಳ ಮನಸ್ಸನ್ನು ನಿಯಂತ್ರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅನೇಕ ಬಯಾನಕ ಆನ್ಲೈನ್ ಆಟಕ್ಕೆ ಮಕ್ಕಳು ಬಲಿಯಾಗುತ್ತಿರುವುದನ್ನು ನಾವು ದಿನಪತ್ರಿಕೆಗಳಲ್ಲಿ ಓದುತ್ತಿದ್ದೇವೆ. ಪಾಲಕರು ತಮ್ಮ ಮಕ್ಕಳು ಮೊಬೈಲ್ನಲ್ಲಿ ಏನು ನೋಡುತಿದ್ದಾರೆ ಎಂದು ಆಗಾಗ ಗಮನಿಸಲೇಬೇಕು. ಹಾಗೆ ಮೊಬೈಲ್‌ನಿಂದ ಅನಪೇಕ್ಶಿತ ವ್ಯಕ್ತಿಗಳ ಸಂಪರ‍್ಕಕ್ಕೆ ಮಕ್ಕಳು ಸಿಲುಕಬಹುದು. ಹದಿಹರೆಯದವರಾದರೆ ಕಪಟ ಪ್ರೇಮ ಜಾಲಕ್ಕೆ ಸಿಲುಕಿ ತಮ್ಮ ಬವಿಶ್ಯವನ್ನೇ ಹಾಳುಮಾಡಿಕೊಳ್ಳಬಹುದು.

ಹಾಗಾದ್ರೆ ಮೊಬೈಲ್ ಅಶ್ಟು ಕೆಟ್ಟದೇ ಎಂಬ ಪ್ರಶ್ನೆ ಬಂದ್ರೆ, ಅದಕ್ಕೆ ನನ್ನ ಉತ್ತರ, ಮಕ್ಕಳಿಗೆ ಕಂಡಿತವಾಗಲೂ ಮೊಬೈಲ್ ಒಳ್ಳೇದಲ್ಲ. ಹಾಗೊಂದು ವೇಳೆ ಮೊಬೈಲ್ ಕೊಡುವ ಸಂದರ‍್ಬ ಬಂದರೆ, ಕೇವಲ ಕರೆ ಮಾಡಲು ಉಪಯೋಗಿಸುವ ಸೌಲಬ್ಯ ಮಾತ್ರ ಇರುವ ಇರುವ ಮೊಬೈಲನ್ನು ಅವರಿಗೆ ಕೊಡಬೇಕು. ಈಗ ಸ್ಮಾರ‍್ಟ್ ಟಿವಿ, ಲ್ಯಾಪ್‌ಟಾಪ್‌ಗಳಿರುವುದರಿಂದ ಮಕ್ಕಳ ಕಲಿಕೆಯ ಗ್ನಾನ ಹೆಚ್ಚಿಸಲು ಮೊಬೈಲ್‌ಗಿಂತ ಇವುಗಳನ್ನು ಬಳಸಿದರೆ ತುಂಬಾ ಒಳ್ಳೆಯದು. ಹಾಗಂತ ಟಿವಿ/ಲ್ಯಾಪ್ ಟಾಪ್‌ಗಳನ್ನು ಕೂಡ ಹಿತಮಿತವಾಗಿ ಬಳಸಿದರೆ ಮಾತ್ರ ಒಳ್ಳೆಯದು. ಆದರೆ ಮೊಬೈಲ್‌ನ ಬಳಕೆ ಒಳ್ಳೇದಲ್ಲ. ಮಕ್ಕಳನ್ನು ಮೊಬೈಲಿನಿಂದ ದೂರ ಇಟ್ಟರೇನೆ ಪಾಲಕರಿಗೆ ನೆಮ್ಮದಿ.

(ಚಿತ್ರ ಸೆಲೆ: pixabay.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.