ಮುಲ್ತಾನ್ ಟೆಸ್ಟ್ ಡಿಕ್ಲರೇಶನ್ ವಿವಾದ : ನಿಜಕ್ಕೂ ನಡೆದಿದ್ದೇನು?

ಆದರ‍್ಶ್ ಯು. ಎಂ.

ಸಚಿನ್ ತೆಂಡುಲ್ಕರ್, Sachin Tendulkar

ಅದು 2004. ಮುಲ್ತಾನ್ ನಲ್ಲಿ ಬಾರತ ಮತ್ತು ಪಾಕಿಸ್ತಾನದ ನಡುವೆ ಟೆಸ್ಟ್ ಸರಣಿಯ ಮೊದಲ ಪಂದ್ಯ ನಡೆಯುತ್ತಿತ್ತು. ಸೆಹ್ವಾಗ್ ಆಗಲೇ ತ್ರಿಶತಕ ಬಾರಿಸಿಯಾಗಿತ್ತು. ಟೀ ವಿರಾಮದ ನಂತರ ಬಾರತ ತಂಡ ಬ್ಯಾಟ್ ಮಾಡುತ್ತಿತ್ತು. ಸಚಿನ್ ತೆಂಡುಲ್ಕರ್ 194 ರನ್ ಮಾಡಿ ಬ್ಯಾಟ್ ಮಾಡುತ್ತಿದ್ದರು. ಯುವರಾಜ್ ಔಟ್ ಆದೊಡನೆ ಅಚ್ಚರಿಯೆಂಬಂತೆ ತಂಡದ ನಾಯಕ ಡಿಕ್ಲೇರ್ ಗೆ ಕರೆ ಕೊಟ್ಟರು,ಎಲ್ಲರಿಗೂ ಅಚ್ಚರಿ ನೀಡಿದಂತಹ ನಿರ‍್ದಾರವದು.

ಈ ನಿರ‍್ದಾರದ ಬಗ್ಗೆ ಒಮ್ಮೆಲೆ ಸಾಕಶ್ಟು ಚರ‍್ಚೆಗಳು ಹುಟ್ಟಿದವು. ನಿಜಕ್ಕೂ ನಡೆದಿದ್ದೇನು ಅಂತ ತಿಳಿಯದೇ ಸಂಜಯ್ ಮಂಜ್ರೇಕರ್ ತರಹದ ವಿಶ್ಲೇಶಕರು ‘ಇದೊಂದು ದೈರ‍್ಯವಾದ ನಿರ‍್ದಾರ, ಹೊಸ ಬಾರತ ತಂಡದ ಆಲೋಚನೆಯನ್ನು ಸೂಚಿಸುತ್ತದೆ’ ಅಂತೆಲ್ಲಾ ಹೇಳಿದರು. ಆದರೆ ನಿಜಕ್ಕೂ ಅಂದು ನಡೆದದ್ದೇನು? ಅಲ್ಲಿ ತಂಡದ ಸೂಚನೆ ಏನಿತ್ತು? ನಿಜಕ್ಕೂ ಸಚಿನ್ ನಿದಾನಕ್ಕೆ ಆಡುತ್ತಿದ್ದರಾ? ಈ ಎಲ್ಲದಕ್ಕೂ ಉತ್ತರ ಹುಡುಕಿದಾಗ ಸಾಕಶ್ಟು ವಿಶಯಗಳು ಹೊರಬರುತ್ತವೆ.

ದ್ರಾವಿಡ್ ಒಮ್ಮೆ ಸಂದರ‍್ಶನದಲ್ಲಿ ಮಾತನಾಡುತ್ತಾ’ಅಂದು ಡಿಕ್ಲೇರ್ ಏಕೆ ತೆಗೆದುಕೊಂಡಿರಿ ಅಂತ ಎಶ್ಟು ಸಲ ಕೇಳಿದ್ದಾರೆ ಅಂದರೆ ಒಂದು ಪ್ರಶ್ನೆಗೆ ಒಂದು ರೂಪಾಯಿ ಅಂತ ಅಂದುಕೊಂಡರೂ ಶ್ರೀಮಂತನಾಗಿರುತ್ತಿದ್ದೆ’ ಅಂತ ತಮಾಶೆಯಾಗಿ ಹೇಳಿದ್ದರು. ಆದರೆ ಡಿಕ್ಲೇರ್ ಮಾಡುವಾಗ ತೋರಿದ ದಿಟ್ಟತನ ಆ ಪ್ರಶ್ನೆಗೆ ಉತ್ತರಿಸೋದರಲ್ಲಿ ತೋರಿಸದಿರೋದು ಆಶ್ಚರ‍್ಯವಾಗಿ ಕಾಣುತ್ತದೆ. ಹಾಗಿದ್ದರೆ ಆ ದಿನ ನಿಜವಾಗಿ ನಡೆದಿದ್ದೇನು? ಇದಕ್ಕೆ ಉತ್ತರ ಸಿಗಬೇಕು ಅಂದರೆ ನೀವು ಸಚಿನ್ ಆತ್ಮಕತೆ ‘playing it my way’ ಪುಸ್ತಕ ಓದಬೇಕು.

ಸಚಿನ್ ತಮ್ಮ ಆತ್ಮಕತೆಯಲ್ಲಿ ಆ ದಿನದ ವಿವರಗಳನ್ನು ಸ್ಪಶ್ಟವಾಗಿ ಬರೆದಿದ್ದಾರೆ. ಅಂದು ಮೊದಲ ಟೆಸ್ಟ್ ನ ಎರಡನೇ ದಿನ. ಸೆಹ್ವಾಗ್ ತ್ರಿಶತಕ ಹೊಡೆದ ನಂತರ ತಂಡ ದೊಡ್ಡ ಮೊತ್ತವನ್ನೇ ಕಲೆ ಹಾಕಿತ್ತು. ಸಚಿನ್ ಕೂಡಾ ಶತಕ ಗಳಿಸಿದ್ದರು. ತಂಡ ಐನೂರರ ಗಡಿ ದಾಟಿ ಆರು ನೂರು ರನ್ ಗಳಿಸಿತ್ತು. ತಂಡ ಟೀ ವಿರಾಮಕ್ಕೆ ಹೋದಾಗ ತಂಡದ ಡ್ರೆಸ್ಸಿಂಗ್ ರೂಮ್ ನಲ್ಲಿ ತಂಡದ ಹಂಗಾಮಿ ನಾಯಕ ದ್ರಾವಿಡ್ (ಗಂಗೂಲಿ ಗಾಯಗೊಂಡಿದ್ದರಿಂದ ದ್ರಾವಿಡ್ ನಾಯಕರಾಗಿದ್ದರು) ಹಾಗೂ ಕೋಚ್ ಜಾನ್ ರೈಟ್ ರೊಂದಿಗೆ ಏನು ಯೋಜನೆ ಅಂತ ಚರ‍್ಚಿಸಿದಾಗ, ಅವರಿಬ್ಬರೂ ಪಾಕ್ ತಂಡಕ್ಕೆ ಆ ದಿನವೇ ಒಂದು ಗಂಟೆಯಾದರೂ ಆಡಲು ಬಿಡಬೇಕು ಅಂದರೆ ಹದಿನೈದು ಓವರ್ ಗಳಶ್ಟು ಆಡಲು ಬಿಡಬೇಕು. ಹಾಗಾಗಿ ತ್ವರಿತವಾಗಿ ರನ್ ಗಳಿಸಿ ಅಂತ ಸೂಚಿಸುತ್ತಾರೆ.. ಅದರಂತೆ ಸಚಿನ್ ಹಾಗೂ ಯುವರಾಜ್ ಟೆಸ್ಟ್ ಮ್ಯಾಚ್ ನಲ್ಲಿ ತ್ವರಿತವಾಗಿಯೇ ರನ್ ಗಳಿಸಲು ಆರಂಬಿಸಿದರು.

ಟೀ ವಿರಾಮವಾಗಿ ಅರ‍್ದ ಗಂಟೆಯ ಬಳಿಕ ತಂಡದ ಬದಲಿ ಆಟಗಾರ ರಮೇಶ್ ಪೊವಾರ್ ಪಾನೀಯ ನೀಡಲು ಬಂದಾಗ ತಂಡದ ಸಂದೇಶವನ್ನು ಸಚಿನ್ ಗೆ ನೀಡಿದರು. ಅದು ‘ತ್ವರಿತವಾಗಿ ರನ್ ಗಳಿಸಿ, ಸಚಿನ್ ಇನ್ನೂರನ್ನು ಗಳಿಸಲಿ’ ಅಂತಾಗಿತ್ತು. ಅದಕ್ಕೆ ಸಚಿನ್ ಕೂಡಾ ನಗುತ್ತಾ ರಕ್ಶಣಾತ್ಮಕ ಕ್ಶೇತ್ರ ರಕ್ಶಣೆ ಇರುವಾಗ ಇದಕ್ಕಿಂತ ವೇಗವಾಗಿ ಗಳಿಸಲು ಸಾದ್ಯವೇ ಅಂತಲೇ ಅಂದಿದ್ದರು.

ನಂತರ ಬಾರತ ತಂಡದ 160 ಓವರ್ ಗಳ ಅಂತ್ಯದಲ್ಲಿ ಅಂದರೆ ದಿನದಲ್ಲಿ ಇನ್ನೂ 17 ಓವರ್ ಗಳು ಬಾಕಿ ಇದ್ದಾಗ ಮತ್ತೆ ಬಂದ ರಮೇಶ್ ಪೊವಾರ್  ‘ಈ ಓವರ್ ನಲ್ಲೇ ಸಚಿನ್ ದ್ವಿಶತಕ ಗಳಿಸಬೇಕೆಂದು’ ಸಂದೇಶ ತಲುಪಿಸುತ್ತಾರೆ. ಆದರೆ ಆ ಓವರ್ ನಲ್ಲಿ ಯುವರಾಜ್ ಇಮ್ರಾನ್ ಪರ‍್ಹತ್ ನ ಎದುರಿಸುತ್ತಾರೆ. ಮೊದಲೆರಡು ಎಸೆತಗಳಲ್ಲಿ ಯಾವುದೇ ರನ್ ಗಳಿಸದೇ, ಮೂರನೇ ಎಸೆತದಲ್ಲಿ 2 ರನ್ ಗಳಿಸಿ, ನಾಲ್ಕನೇ ಎಸೆತದಲ್ಲಿ ರನ್ ಗಳಿಸದೇ ಐದನೇ ಎಸೆತದಲ್ಲಿ ಔಟ್ ಆಗುತ್ತಾರೆ. ಇನ್ನೇನು ಮುಂದಿನ ಆಟಗಾರ ಪಾರ‍್ತಿವ್ ಪಟೇಲ್ ಕ್ರೀಸ್ ಗೆ ಬರಬೇಕು ಅನ್ನುವಶ್ಟರಲ್ಲಿ ದ್ರಾವಿಡ್ ಡಿಕ್ಲೇರ್ ಮಾಡಿಕೊಳ್ಳುತ್ತಾರೆ. ಸಚಿನ್ ಅಜೇಯ 194 ರನ್ ಗಳಿಸಿದರೂ ಆಗಾತದಿಂದ ಪೆವಿಲಿಯನ್ ಕಡೆ ತೆರಳುತ್ತಾರೆ. ಆಗ ದಿನದಾಟದಲ್ಲಿ 16.1 ಓವರ್ ಗಳು ಬಾಕಿಯಿರುತ್ತದೆ ( ಟೀ ವಿರಾಮದಲ್ಲಿ ನಡೆದ ಮಾತುಕತೆಯಲ್ಲಿ 15 ಓವರ್ ಗಳು ಬಾಕಿ ಇರುವಂತೆ ನೋಡಿಕೊಳ್ಳಿ ಎಂಬ ದ್ರಾವಿಡ್ ಸೂಚನೆ ಎಲ್ಲರಿಗೂ ನೆನಪಿಸುವ ಅಗತ್ಯ ಇಲ್ಲಿ ಬೇಡ ಅಂದುಕೊಳ್ಳುತ್ತೇನೆ! ಜೊತೆಗೆ ‘ಆ ಓವರ್ ನಲ್ಲೇ ದ್ವಿಶತಕ ಗಳಿಸಿ’ ಎಂಬ ಸಂದೇಶ ಬಂದ ನಂತರ ಸಚಿನ್ ಒಂದು ಎಸೆತವೂ ಎದುರಿಸಿಲ್ಲ ಎಂಬುದನ್ನು ಅರ‍್ತ ಮಾಡಿಕೊಳ್ಳಬಹುದು ಎಂದು ನಂಬಿದ್ಜೇನೆ..! )

ಅಂದು ಸಚಿನ್ ತನ್ನ ಬ್ಯಾಟ್, ಪ್ಯಾಡ್, ಹೆಲ್ಮೆಟ್ ನ ಸಿಟ್ಟಿನಲ್ಲಿ ಎಸೆಯಬಹುದೆಂದು ಸಹ ಆಟಗಾರರು ನಿರೀಕ್ಶಿಸಿದ್ದರಂತೆ, ಆದರೆ ಸಚಿನ್ ಅದಾವುದನ್ನೂ ಮಾಡದೇ ತನ್ನ ಸಿಟ್ಟನ್ನು ತನ್ನೊಳಗೆ ಇಟ್ಟುಕೊಂಡು ತಾಳ್ಮೆಯಿಂದ ಇರುವಾಗ ಮೊದಲು ತಂಡದ ಕೋಚ್ ಜಾನ್ ರೈಟ್ ಸಚಿನ್ ಬಳಿ ಕ್ಶಮೆ ಕೇಳುತ್ತಾರೆ. ಈ ಡಿಕ್ಲೇರ್ ನಿರ‍್ದಾರದಲ್ಲಿ ತಾನಿಲ್ಲವೆಂದು ಸ್ಪಶ್ಟಪಡಿಸುತ್ತಾರೆ. ಆಗ ಸಚಿನ್ ‘ಒಬ್ಬ ಕೋಚ್ ತಂಡದ ನಿರ‍್ದಾರದಲ್ಲಿ ಇಲ್ಲವೆಂದರೆ ನಂಬಲಸಾದ್ಯ ಹಾಗೂ ಕೋಚ್ ಕೂಡಾ ಸೇರಿ ತಳೆದ ನಿರ‍್ದಾರವಾದರೆ ಅದಕ್ಕೆ ಬದ್ದವಾಗಿರುವೆ’ ಅಂತ ಹೇಳುತ್ತಾರೆ.

ನಂತರ ಬಾರತ ತಂಡದ ನಾಯಕ ಆದರೆ ಅಂದು ಗಾಯಗೊಂಡು ಆಡದಿದ್ದ ದಾದಾ ಸೌರವ್ ಗಂಗೂಲಿ ಕೂಡಾ ಸಚಿನ್ ಬಳಿ ಬಂದು ತಾನು ಆ ಡಿಕ್ಲೇರ್ ನಿರ‍್ದಾರದ ಬಾಗವಾಗಿರಲಿಲ್ಲ ಅಂತ ವಿಶಾದಿಸುತ್ತಾರೆ. ಸಚಿನ್ ಆಗ ‘ಟೀ ವಿರಾಮದ ಚರ‍್ಚೆಯಲ್ಲಿ ಬಾಗವಹಿಸಿದ್ದ ಗಂಗೂಲಿ ನಂತರ ಡಿಕ್ಲೇರ್ ಮಾಡುವ ನಿರ‍್ದಾರದಲ್ಲಿ ಇಲ್ಲ ಅಂದಿದ್ದು ಅಚ್ಚರಿ’ ಅಂತ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಈಗ ನಡೆದದ್ದನ್ನು ಬದಲಿಸಲು ಸಾದ್ಯವಿಲ್ಲ’ ಅಂತ ಚರ‍್ಚೆ ನಿಲ್ಲಿಸುತ್ತಾರೆ.

ಇದಾದ ನಂತರ ತಂಡದ ಮ್ಯಾನೇಜರ್ ಆಗಿದ್ದ ರತ್ನಾಕರ ಶೆಟ್ಟಿಯವರು ಕೂಡಾ ಆ ದಿನದ ಕೊನೆಗೆ ಸಚಿನ್ ಬಳಿ ಬಂದು ಕ್ಶಮೆ ಕೇಳಿ ತಾನೂ ಕೂಡಾ ಆ ನಿರ‍್ದಾರದ ಬಾಗವಾಗಿರಲಿಲ್ಲ ಅಂತ ಸ್ಪಶ್ಟಪಡಿಸುತ್ತಾರೆ. ಆಗ ಸಚಿನ್ ಅವರನ್ನು ಸಮಾದಾನ ಪಡಿಸಿ ಕಳಿಸುತ್ತಾರೆ.

ಇಲ್ಲಿ ತಂಡದ ಕಾಯಂ ನಾಯಕ ಗಂಗೂಲಿ, ತಂಡದ ಕೋಚ್ ಜಾನ್ ರೈಟ್ ಹಾಗೂ ತಂಡದ ಮ್ಯಾನೇಜರ್ ರತ್ನಾಕರ ಶೆಟ್ಟಿ – ಈ ಮೂವರು ಆ ಡಿಕ್ಲೇರ್ ನಿರ‍್ದಾರದಲ್ಲಿ ತಾವಿರಲಿಲ್ಲ ಅಂತ ಅಂದಿದ್ದು ಹಾಗೂ ಮೂವರೂ ಕ್ಶಮೆ ಕೇಳಿದ್ದನ್ನು ನೀವು ಗಮನಿಸಬೇಕು. ಹಾಗಿದ್ದಲ್ಲಿ ಈ ನಿರ‍್ದಾರ ಹಂಗಾಮಿ ನಾಯಕ ರಾಹುಲ್ ದ್ರಾವಿಡ್ ರದ್ದೇ ಆಗಿರಬೇಕು ಎಂಬುದು ಈ ಮೂಲಕ ತಿಳಿಯುತ್ತದೆ.

ಇವೆಲ್ಲಾ ನಡೆದ ಮಾರನೇ ದಿನ ಹಂಗಾಮಿ ನಾಯಕರಾಗಿದ್ದ ದ್ರಾವಿಡ್ ಬೇಸರಗೊಂಡಿದ್ದ ಸಚಿನ್ ಬಳಿ ಡಿಕ್ಲೇರ್ ಬಗ್ಗೆ ಪ್ರಸ್ತಾಪಿಸಿ ತಂಡದ ಹಿತಕ್ಕಾಗಿ ಆ ರೀತಿ ಮಾಡಿದೆ ಅಂತ ತಿಳಿಸುತ್ತಾರೆ. ಆಗ ಸಚಿನ್ ತಾನು ಆಡುತ್ತಿದ್ದುದ್ದು ತಂಡಕ್ಕಾಗಿಯೇ, ತನ್ನ 194 ರನ್ ಗಳು ತಂಡಕ್ಕೆ ಸೇರುತ್ತದಲ್ಲವೇ ಅಂತ ಕೇಳಿ ನಂತರ ದ್ರಾವಿಡ್ ರಿಗೆ ಇನ್ನೊಂದು ಮುಕ್ಯ ಪ್ರಶ್ನೆಯಿಡುತ್ತಾರೆ. ಆ ವಿಚಾರ ಸಿಡ್ನಿ ಟೆಸ್ಟ್ ಗೆ ಸಂಬಂದ ಪಟ್ಟದ್ದು. 2004 ರ ಸಿಡ್ನಿ ಟೆಸ್ಟ್ ಬಾರತೀಯರಿಗೆ ವಿಶೇಶವಾಗಿ ನೆನಪಿರಬೇಕಾಗಿದ್ದು. ಸ್ಟೀವ್ ವಾ ರ ಕೊನೆಯ ಟೆಸ್ಟ್ ಆಗಿದ್ದ ಆ ಟೆಸ್ಟ್ ನ ನಾಲ್ಕನೇ ದಿನ ಬಾರತದ ಇನ್ನಿಂಗ್ಸ್ ನಲ್ಲಿ ಸಚಿನ್ ಮತ್ತು ದ್ರಾವಿಡ್ ಆಡುತ್ತಿದ್ದರು. ಆಗ ದ್ರಾವಿಡ್ ಶತಕದತ್ತ ಸಾಗುತ್ತಿದ್ದರು. ನಾಯಕ ಗಂಗೂಲಿ ಮೂರು ನಾಲ್ಕು ಬಾರಿ ಉಪ ನಾಯಕ ದ್ರಾವಿಡ್ ಗೆ ಡಿಕ್ಲೇರ್ ತೆಗೆದುಕೊಳ್ಳಬಹುದಾ ಅಂತ ಸಂದೇಶ ಮುಟ್ಟಿಸಿದಾಗ ದ್ರಾವಿಡ್ ಆಡುತ್ತಲೇ ಹೋದರು. ಕೊನೆಗೆ ದ್ರಾವಿಡ್ 91 ರನ್ ಹೊಡೆದಾಗ ಬ್ರೇಟ್ ಲೀ ಎಸೆತದಲ್ಲಿ ಕಿವಿಗೆ ಪೆಟ್ಟು ಮಾಡಿಕೊಂಡರು, ಆಗ ಗಂಗೂಲಿ ಇನ್ನಿಂಗ್ಸ್  ಡಿಕ್ಲೇರ್ ಮಾಡಿದರು. ಅಲ್ಲಿ ಬೇಗ ಡಿಕ್ಲೇರ್ ಕೊಡದೇ ಕೊನೆಯ ದಿನ ಆಸ್ಟ್ರೇಲಿಯಾ ವನ್ನು ಆಲ್ ಔಟ್ ಮಾಡಲಾಗದೇ 2004 ರಲ್ಲೇ ಬಾರತ ಟೆಸ್ಟ್ ಸರಣಿ ಗೆಲ್ಲುವ ಅವಕಾಶ ತಪ್ಪಿತ್ತು.

ಇದನ್ನೇ ಸಚಿನ್ ದ್ರಾವಿಡ್ ಬಳಿ ಪ್ರಸ್ತಾಪಿಸಿ ‘ಮುಲ್ತಾನ್ ನಲ್ಲಿ ತೋರಿಸಿದ ತಂಡದ ಹಿತ ಸಿಡ್ನಿ ಟೆಸ್ಟ್ ನಲ್ಲೂ ಇರಬೇಕಿತ್ತಲ್ಲ ಎಂದಾಗ ದ್ರಾವಿಡ್ ಅದಕ್ಕೆ ಉತ್ತರಿಸದೇ ಸಚಿನ್ ಗೆ ಇನ್ನೂರು ಗಳಿಸಲು ಇನ್ನೊಂದು ಅವಕಾಶ ಸಿಗುತ್ತೆ ಅಲ್ಲವೇ ಅಂತ ಕೇಳಿದರಂತೆ. ಅದಕ್ಕೆ ಸಚಿನ್ ‘ನಾನು ಇನ್ನೊಮ್ಮೆ 0 ಯಿಂದ ಶುರು ಮಾಡಬೇಕಾಗುತ್ತದೆ, 194 ರನ್ ಗಳಿಂದಲ್ಲ’ ಅಂತ ನೇರವಾಗಿ ಉತ್ತರಿಸುತ್ತಾರೆ. ಇದರ ನಂತರವೂ ಸಚಿನ್ ಮತ್ತು ದ್ರಾವಿಡ್ ಅನೇಕ ಜೊತೆಯಾಟಗಳನ್ನು ನೀಡಿದರು, ಅದೇ ಸ್ನೇಹ ಅವರ ನಡುವೆ ಈಗಲೂ ಇದೆ.

ಆದರೆ ಅನೇಕರು ಇಂದಿಗೂ ಮುಲ್ತಾನ್ ಟೆಸ್ಟ್ ನಲ್ಲಿ ಆಗಿದ್ಜೇನು ಅಂತ ತಿಳಿಯದೇ ಸಚಿನ್ ರನ್ನು ಟೀಕಿಸುತ್ತಿರುತ್ತಾರೆ. ಆ ಟೆಸ್ಟ್ ನಲ್ಲಿ ಸಚಿನ್ ತಾನಾಡಿದ ಕಡೆಯ 44 ಚೆಂಡುಗಳಲ್ಲಿ 39 ರನ್ ಗಳಿಸಿದ್ದರು, ಆ ಕಡೆಯ ಓವರ್ ನಲ್ಲಿ ಸಚಿನ್ ಸ್ವಾರ‍್ತಿಯಾಗಿದ್ದರೆ ಯುವಿ ಮೂರನೇ ಎಸೆತದಲ್ಲಿ ಓಡಿದ 2 ರನ್ ಅನ್ನು ಒಂದೇ ರನ್ ಆಗಿಸಿ ಸರದಿ ತನ್ನದಾಗಿಸಿ ದ್ವಿಶತಕ ಗಳಿಸಬಹುದಿತ್ತು. ಇವೆಲ್ಲವನ್ನೂ ಮೀರಿ ಗಂಗೂಲಿ, ತಂಡದ ಕೋಚ್ ಹಾಗೂ ಮ್ಯಾನೇಜರ್ ಈ ಮೂವರೂ ಆ ಗಟನೆಗೆ ಕ್ಶಮೆ ಕೋರಿದ್ದಾರೆಂದರೆ ಅದು ಎಂತಹ ನಿರ‍್ದಾರ ಅಂತ ಗಮನಿಸಬಹುದು. ಇವಿಶ್ಟು ನಡೆದ ಗಟನೆಗಳು.

ಈಗ ನೀವೇ ನಿರ‍್ದರಿಸಿ ಸಚಿನ್ ಗೆ ಆಗಿದ್ದು ಅನ್ಯಾಯವಲ್ಲವೇ? ದ್ರಾವಿಡ್ ಹೇಳಿದ ಪ್ರಕಾರವೇ ಇನ್ನೊಂದು ಓವರ್ ಕಾಯಬಹುದಿತ್ತಲ್ಲವೇ? ಅಶ್ಟಾಗಿ ಅದಿನ್ನು ಎರಡನೇ ದಿನವಾಗಿತ್ತು, ಸಿಡ್ನಿ ಟೆಸ್ಟ್ ನಂತೆ ನಾಲ್ಕನೇ ದಿನವಾಗಿರಲಿಲ್ಲವಲ್ಲ..! ಇದಾವುದೂ ತಿಳಿಯದೇ ಸಚಿನ್ ರನ್ನು ಟೀಕಿಸೋದು ಎಶ್ಟು ಸರಿ?

ಈ ಮೇಲಿನ ಎಲ್ಲಾ ಅಂಶಗಳೂ ಸಚಿನ್ ರ ‘Playing It My Way’ ಪುಸ್ತಕದ 15 ನೇ ಅದ್ಯಾಯ ‘Away wins’ ನಲ್ಲಿದೆ,ಈ ಪುಸ್ತಕವನ್ನು ಸಚಿನ್ ದ್ರಾವಿಡ್ ಇರುವ ಸಮಾರಂಬದಲ್ಲಿಯೇ ಬಿಡುಗಡೆ ಮಾಡಿದರು.ದ್ರಾವಿಡ್ ಇದಾವುದನ್ನೂ ಇಲ್ಲಿಯವರೆಗೆ ಅಲ್ಲಗಳೆದಿಲ್ಲ…!

( ಚಿತ್ರಸೆಲೆ : timesofindia.indiatimes.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: