ನೈಸರ‍್ಗಿಕ ಸಂಪನ್ಮೂಲಗಳ ಸದ್ಬಳಕೆ

–  ಅಶೋಕ ಪ. ಹೊನಕೇರಿ.

ಕಾಡು, ಹಸಿರು, forest, green

ಮನುಶ್ಯನ ಹುಟ್ಟಿನಿಂದ ಹಿಡಿದು ಇಂದಿನ ವಿಕಾಸದವರೆಗೂ ಮನುಶ್ಯರ ಬದುಕಿನಲ್ಲಿ ನೈಸರ‍್ಗಿಕ ಸಂಪನ್ಮೂಲಗಳು ಉಸಿರಿನಶ್ಟೇ ಪ್ರಾಮುಕ್ಯತೆ ಪಡೆದಿವೆ. ಪ್ರತಿದಿನ ಜನಸಂಕ್ಯೆ ಹೆಚ್ಚಾಗುತ್ತಿದೆ. ಆದರೆ ನೈಸರ‍್ಗಿಕ ಸಂಪನ್ಮೂಲಗಳು ಮಾತ್ರ ದಿನೇ ದಿನೇ ಕಾಲಿಯಾಗುತ್ತ ಶೂನ್ಯ ಸ್ತಿತಿ ಮುಟ್ಟುವ ಅಪಾಯದ ಹಂತಕ್ಕೆ ತಲುಪುತ್ತಿದೆ. ಮನುಶ್ಯನ ಪ್ರಾತಮಿಕ ಅಗತ್ಯಗಳಾದ ಗಾಳಿ, ನೀರು, ಆಹಾರ ನಮಗೆ ಪ್ರಕ್ರುತಿಯಂದಲೇ ಸಿಗುವಂತಹದ್ದು. ಆದರೆ ಮನುಜರ ಅತಿ ಲಾಲಸೆಯಿಂದಾಗಿ ಅವುಗಳ ಕೊರತೆಯನ್ನು ನಾವೀಗ ಎದುರಿಸುವಂತಾಗಿದೆ.

ಅಬಿವ್ರುದ್ದಿಯ ಹೆಸರಲ್ಲಿ ಎಗ್ಗಿಲ್ಲದೆ ಮರ, ಗಿಡಗಳನ್ನು ಕಡಿಯುತ್ತ ಸಮ್ರುದ್ದ ಹಸಿರು ಕಾಡುಗಳನ್ನು ನಾಶಗೊಳಿಸುತ್ತ ಉಸಿರಾಟಕ್ಕೆ ಬೇಕಾದ ಶುದ್ದ ಗಾಳಿಯ ಕೊರತೆಯನ್ನು ನಾವು ಎದುರಿಸುತಿದ್ದೇವೆ.  ಪರಿಸರ ಮಾಲಿನ್ಯದಿಂದಾಗಿ ಮನುಶ್ಯ ಹೊಸ ಹೊಸ ಕಾಯಿಲೆಗಳನ್ನು ಬರಮಾಡಿಕೊಳ್ಳುತಿದ್ದಾನೆ. ಇನ್ನೂ ಕಾಡು ನಾಶದಿಂದಾಗಿ ನಾವು ಮಳೆಯ ಕೊರತೆ ಎದುರಿಸುತ್ತಿದ್ದು ಸಕಾಲಕ್ಕೆ ಸಾಕಶ್ಟು ಮಳೆಯಾಗದೆ ಬೂಮಿಯೊಳಗಿನ ಅಂತರ‍್ಜಲ ಮಟ್ಟ ಕುಸಿಯುತ್ತಿದೆ. ಇದರಿಂದಾಗಿ ತೀವ್ರ ನೀರಿನ ಕೊರತೆ ಕಾಣಿಸುತ್ತಿದೆ. ಇದೇ ರೀತಿ ಪ್ರಕ್ರುತಿಯ ಮೇಲೆ ನಿರಂತರ ದಾಳಿ ನಡೆಯುತ್ತಿದ್ದರೆ ನದಿ,ಕೆರೆ ತೊರೆಗಳೆಲ್ಲ ಒಣಗಿ ನೀರು ಎನ್ನುವುದು ಮರೀಚಿಕೆಯಾಗುತ್ತದೆ. ಮುಂದಿನ ದಿನಗಳಲ್ಲಿ ನಾವು ಪಡಿತರ ವಿತರಣೆಯ ಸಾಲಿನಲ್ಲಿ ನಿಂತು ಹಣ ತೆತ್ತು ನೀರನ್ನು ಪಡೆಯುವ ಸ್ತಿತಿ ಬಹಳ ದೂರವಿಲ್ಲ. ಕಾಡು ನಾಶದಿಂದಾಗಿ ಈಗಾಗಲೇ ಬೂಮಿಯ ಉಶ್ಣಾಂಶ ಮಿತಿ ಮೀರುತ್ತಿದೆ. ಹೀಗೆ ಮುಂದುವರಿದರೆ ಪ್ರಾಣಿ, ಪಕ್ಶಿ, ಮನುಶ್ಯ ಕುಲಗಳಿಗೆ ಉಳಿಗಾಲವುಂಟೆ?

ನಾವು ಮುಂದಿನ ಪೀಳಿಗೆಗಳಿಗೆ ಆಸ್ತಿ, ಹಣ, ಮಾಡಿಡುವುದಲ್ಲ! ಮುಂದಿನ ಪೀಳಿಗೆಯ ಉಳಿವಿಗೆ ನಾವು ಕಾಡನ್ನು ನಾಶ ಮಾಡುವುದ ನಿಲ್ಲಿಸಿ, ಮರಗಳನ್ನು ಬೆಳೆಸುವ ಆಂದೋಲನವನ್ನು ಕೈಗೊಳ್ಳಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಶುದ್ದ ವಾಯು, ನೀರು ಆಹಾರವನ್ನು ಪ್ರಕ್ರುತಿ ಒದಗಿಸಬಲ್ಲದು. ಮೈ ಮರೆತು ಇದೇ ರೀತಿ ಪ್ರಕ್ರುತಿಯ ಮೇಲೆ ಮನುಜನ ಗೋರ ಅತ್ಯಾಚಾರ ನಡೆಯುತಿದ್ದರೆ ಈ  ಪ್ರಾಣಿ ಪಕ್ಶಿ ಮನುಜ ಸಂಕುಲಗಳು ಹೇಳ ಹೆಸರಿಲ್ಲದಂತೆ ನಾಶವಾಗಿ ಕಡೆಗೆ ಈ ಬೂಮಿಯೇ ನಾಶವಾಗಿ ಹೋದೀತೆಂಬ ಎಚ್ಚರವಿರಬೇಕು ನಮಗೆ!

ಏಳಿಗೆಯ ಹೆಸರಲ್ಲಿ ಪ್ರಕ್ರುತಿ ಯಲ್ಲಿ ಸಿಗುವ ಹೇರಳ ಕನಿಜ ಸಂಪತ್ತುಗಳನ್ನು ಎಗ್ಗಿಲ್ಲದೇ ತೆಗೆದು ಬಳಕೆ ಮಾಡುತ್ತಿದ್ದೇವೆ. ಹೊರತೆಗೆದ ಕನಿಜ ಸಂಪನ್ಮೂಲಗಳು ಮತ್ತೆ ಮರು ಸ್ರುಶ್ಟಿಯಾಗುವುದಿಲ್ಲ. ಹೀಗಿರುವಾಗ ಯೋಜನಾತ್ಮಕವಾಗಿ ಇತಿಮಿತಿಯಲ್ಲಿ ನಾವು ಕನಿಜ ಸಂಪತ್ತುಗಳನ್ನು ಬಳಸದಿದ್ದಲ್ಲಿ ಮುಂದಿನ ಪೀಳಿಗೆಯ ಬಳಕೆಗೆ ಕನಿಜ ಸಂಪತ್ತೇ ಇರುವುದಿಲ್ಲ. ಕನಿಜ ಸಂಪತ್ತು ಹೇರಳವಾಗಿದೆಯೆಂದು ಮಿತಿ ಮೀರಿ ಬಳಸದೇ ಇತಿ ಮಿತಿಯಲ್ಲಿ ಬಳಸಿದರೆ ಮುಂದಿನ ಪೀಳಿಗೆಗೂ ಆ ಕನಿಜ ಸಂಪತ್ತು ಉಳಿಯುವುದು. ಇಲ್ಲದಿದ್ದರೆ ಜನರ ನಡುವೆ, ನಾಡುಗಳ ನಡುವೆ ಬಿಕ್ಕಟ್ಟುಗಳಿಗೆ ಎಡೆ ಮಾಡಿಕೊಟ್ಟು ಅರಾಜಕತೆ ಉಂಟಾಗಲೂಬಹುದು.

ನಾವೀಗಲೇ ಎಚ್ಚೆತ್ತು ನಡೆಯದಿದ್ದರೆ ಸರ‍್ವನಾಶ ಕಚಿತ. ಆದ್ದರಿಂದ ನಾವು ನೈಸರ‍್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸೋಣ, ಕಾಡನ್ನು ರಕ್ಶಿಸೋಣ, ಹಸಿರು ನೆಟ್ಟು ಬೂಮಿಯ ಉಶ್ಣತೆಯನ್ನು ತಗ್ಗಿಸೋಣ, ನೀರನ್ನು ಉಳಿಸೋಣ. ಈ ಮೂಲಕ ಮನುಕುಲದ ಮತ್ತು ಪ್ರಾಣಿ-ಪಕ್ಶಿಗಳ ರಕ್ಶಣೆ ಮಾಡೋಣ. ‘ಪರಿಸರ ಸುರಕ್ಶಿತವಾಗಿದ್ದರೆ ಮಾತ್ರ ನಾವು ಸುರಕ್ಶಿತ’ ಎಂಬ ಸತ್ಯವನ್ನು ಎಲ್ಲರಿಗೂ ಸಾರೋಣ. ನಮಗೆ ಬದುಕಲಿಕ್ಕೆ ಪ್ರಕ್ರುತಿ ಎಲ್ಲವನ್ನು ಕೊಟ್ಟಿದೆ ಅದಕ್ಕೆ ಕೈ ಮುಗಿದು ಗೌರವಿಸೋಣ.

“ಉಳಿಸೋಣ, ಮುಂದಿನ ಪೀಳಿಗೆಗೂ ಅನುಕೂಲ ಮಾಡಿಕೊಡೋಣ”

( ಚಿತ್ರ ಸೆಲೆ : goldtelegraph.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sujagan J says:

    ಒಳ್ಳೆ ಲೇಖನ?

ಅನಿಸಿಕೆ ಬರೆಯಿರಿ:

%d bloggers like this: