ಹಣದ ಹಂಬಲ…

– ಮಾರುತಿವರ‍್ದನ್.

ಹಣದ ಹಂಬಲ

ಒಮ್ಮೆ ನಮ್ಮ ಅಪ್ಪನಿಗೆ ಹೊಲದಲ್ಲಿ ಕೆಲಸ ಮಾಡುವಾಗ ಗೂಳಿಯೊಂದು ಗುದ್ದಿ ಸಾಕಶ್ಟು ರಕ್ತ ಹೋಗಿ, ಪಕ್ಕೆಲುಬು ಮುರಿದು ಗೌರಿಬಿದನೂರಿನ ಪ್ರಸಾದ್ ಹಾಸ್ಪಿಟಲ್‌ನಲ್ಲಿ 10-15 ದಿನ ಅಡ್ಮಿಟ್ ಮಾಡಿದ್ದೆವು… ಆ ಸಮಯದಲ್ಲಿ ಅಪ್ಪನನ್ನು ನೋಡಿಕೊಳ್ಳಲು ನಾನು ಅಲ್ಲಿಯೇ ಇರಬೇಕಾಗಿತ್ತು. ನನಗೆ ಮಾಡಲು ಏನು ಕೆಲಸವಿಲ್ಲದಿದ್ದರಿಂದ ಸಾಯಂಕಾಲಗಳಲ್ಲಿ ಗೌರಿಬಿದನೂರನ್ನು ಸರ‍್ವೆ ಮಾಡುವಂತೆ ತಿರುಗಾಡಿಕೊಂಡಿರುವುದು ನನ್ನ ಅಬ್ಯಾಸವಾಗಿತ್ತು. ಒಮ್ಮೆ ಶಂಕರ್ ಟಾಕೀಸ್ ಮುಂಬಾಗದ ರಸ್ತೆಯ ಮೂಲಕ ರೈಲ್ವೆ ಸ್ಟೇಶನ್ ಕಡೆ ನಡೆದುಕೊಂಡು ಹೋಗುತ್ತಾ ಇದ್ದೆ. ಆ ಸಮಯದಲ್ಲಿ ತುಂಬಾ ಸೊಗಸಾಗಿ ಕಟ್ಟಿದ ಮನೆಯೊಂದರ ಮುಂಬಾಗದಲ್ಲಿ ಸುಮಾರು 65 -70 ವರ‍್ಶದ ವ್ರುದ್ದೆಯೊಬ್ಬಳು ಕುಳಿತಿದ್ದಳು. ಆಕೆ ಪ್ರಾಯದಲ್ಲಿದ್ದಾಗ ಬಹಳ ಸುಂದರಳಾಗಿದ್ದಳೆಂದು ನೋಡಿದರೆ ಗೊತ್ತಾಗುತ್ತಿತ್ತು. ಬೆಲೆಬಾಳುವ ಸೀರೆ ಆಕೆಗೆ ಒಂದು ಪ್ರೌಡ ಕಳೆ ಕೊಟ್ಟಿತ್ತು!

ನಾನು ಹತ್ತಿರ ಸಮೀಪಿಸುತ್ತಿದ್ದಂತೆ ಆಕೆ ನನ್ನತ್ತ ಒಮ್ಮೆ ದೈನ್ಯದಿಂದ “ಅಮ್ಮಾ ಬಿಕ್ಶೆ” ಎಂದಳು. ನನಗೆ ಆಶ್ಚರ‍್ಯ, ಶಾಕ್ ಎರಡೂ ಒಟ್ಟಿಗೆ ಆದವು. ಆಕೆ ಮತ್ತೊಮ್ಮೆ ಕೈ ಮುಂದೆ ಮಾಡಿ ಬೇಡಿದಳು. ಎರಡನೆಯ ಯೋಚನೆಗೆ ಆಸ್ಪದವೇ ಇಲ್ಲದಂತೆ ನನ್ನ ಕೈ ನನಗೆ ಗೊತ್ತಿಲ್ಲದಂತೆ ಜೇಬಿನೊಳಗೆ ಹೋಗಿ 20 ರೂಪಾಯಿನ ನೋಟಿನೊಂದಿಗೆ ಹೊರಬಂದಿತು! ಉದ್ವೇಗ ಬಾವವನ್ನು ಮೀರಿದ ಬಯದೊಂದಿಗೆ ನಾನು ಆ ನೋಟನ್ನು ಆಕೆಯ ಕೈಯಲ್ಲಿಟ್ಟೆ. ಆಕೆಯ ‌ಮುಕ ಸಂತೋಶದಿಂದ ಅರಳಿತು. ಮೊದಲೇ ಸುಂದರವಾದ ಪ್ರೌಡ ಕಳೆ ಹೊಂದಿದ್ದ ಆಕೆ ಆ ನಗುವಿನಲ್ಲಿ ಸಾಕ್ಶಾತ್ ದೇವಿಯಂತೆಯೇ ಕಾಣಿಸಿದಳು. ನಾನು ಏನು ಮಾಡಬೇಕೆಂದು ತಿಳಿಯದೆ ತಬ್ಬಿಬ್ಬಾಗಿ ಅಲ್ಲಿಂದ ಹೊರಡಬೇಕೆನ್ನುವಶ್ಟರಲ್ಲಿ ಒಳಗಡೆಯಿಂದ, ಕಿರುಚುವ ದನಿಯೊಂದಿಗೆ ಒಬ್ಬ 30ರ ಆಸುಪಾಸಿನ ಬಹಳ ಸುಂದರವಾದ ಯುವತಿಯೊಬ್ಬಳು ಹೊರಬಂದಳು. ಆಕೆ ತುಂಬಾ ಸುಂದರವಾಗಿದ್ದರೂ ಆಕೆಯ ಹಮ್ಮು‌ಬಿಮ್ಮು ಅಹಂಕಾರಗಳನ್ನು ಗುರುತಿಸಬಹುದಾಗಿತ್ತು.

ಈ ಯುವತಿ ವ್ರುದ್ದೆಯ ಮಗಳೋ ಅತವಾ ಸೊಸೆಯೋ ಇರಬೇಕು! ಆಕೆ ವ್ರುದ್ದೆಯ ಹತ್ತಿರ ಹೋಗಿ ಸ್ವಲ್ಪ ಕಶ್ಟಪಟ್ಟು ಹಣವನ್ನು ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಳು. ಆದರೆ ಆ ವ್ರುದ್ದೆ ಬಿಡುತ್ತಿರಲಿಲ್ಲ. ನನಗೆ ತುಂಬಾ ಬಯ ಆಗಿ ನಾನು ಅಲ್ಲಿಂದ ಓಡುವ ನಡಿಗೆಯಲ್ಲಿ ಮುಂದೆ ಸಾಗಲೆತ್ನಿಸಿದೆ. ಯುವತಿ ಜೋರಾಗಿ ಕಿರುಚಿ ನಿಲ್ಲುವಂತೆ ಆಗ್ನೆ ‌ಮಾಡಿದಳು. ಹರಸಾಹಸ ಪಟ್ಟು ವ್ರುದ್ದೆಯಿಂದ ಹಣ ಕಿತ್ತುಕೊಂಡ ಆಕೆ ನನಗೆ ಆ ನೋಟನ್ನು ವಾಪಸ್ ಕೊಡಲು ಬಂದಳು. ನಾನು ಅದನ್ನು ತೆಗೆದುಕೊಳ್ಳಲು ನಿರಾಕರಿಸಿದೆ. ಆಕೆ ಕೋಪದಿಂದ ಬುಸುಗುಟ್ಟಿ, ಆ ವ್ರುದ್ದೆಯು ಆ ಮನೆಯ ಯಜಮಾನಿಯೆಂದು, ಕೆಲವು ಕೋಟಿ ಬಾಳುವ ಆಸ್ತಿ ಪಾಸ್ತಿ ಆಕೆಯ ಹೆಸರಲ್ಲಿ ಇದೆಯೆಂದು ನನಗೆ ತಿಳಿಸಿ ಬಲವಂತವಾಗಿ ಅದನ್ನು ನನ್ನ ಕೈಯಲ್ಲಿ ತುರುಕಿದಳು. ಆಮೇಲೆ ನಾನು ಅಲ್ಲಿಂದ ಕದಲಿ ರೈಲ್ವೆ ಸ್ಟೇಶನ್ನಿಗೆ ಬಂದೆ. ತುಂಬಾ ನಿರಾಸೆಯ ಜೊತೆ ಉಸಿರನ್ನು ತಹಬದಿಗೆ ತೆಗೆದುಕೊಂಡು ಒಂದು ಕಡೆ ಕುಳಿತು ವ್ರುದ್ದೆಯ ಬಗ್ಗೆ ಯೋಚಿಸಿದೆ.

ನನ್ನ ಮನಸ್ಸಿನಲ್ಲಿ ಆಕೆಯ ಬಗ್ಗೆ ಒಂದು ವಿಶ್ಲೇಶಣೆ ಮೂಡಲಾರಂಬಿಸಿತು. ಆಕೆ ಶ್ರೀಮಂತಳಾದುದರಿಂದ ಬಹುಶಹ ತನ್ನ ಪ್ರಾಯದ ಕಾಲದಲ್ಲಿ ಸಾಕಶ್ಟು ಹಣಕಾಸಿನ ಲೇವಾದೇವಿಯನ್ನು ನಡೆಸಿದ್ದಾಳೆ. ಪ್ರತಿದಿನವೂ ಆಕೆಯ ಕೈಯಲ್ಲಿ ಸಾಕಶ್ಟು ಹಣ ಓಡಾಡುತ್ತಿತ್ತು. ಆದರೆ ಈಗ ಆಕೆಗೆ ವಯಸ್ಸಾದುದರಿಂದ ಮನೆಯ ವ್ಯವಹಾರ ಮತ್ತು ಯಜಮಾನಿಕೆ ಸೊಸೆಯ ಪಾಲಾಗಿದೆ. ಈಕೆಗೆ ಯಾವುದೇ ರೀತಿಯ ಹಕ್ಕು ಇಲ್ಲ! ಆದರೆ ಸಮಯಕ್ಕೆ ಸರಿಯಾಗಿ ಊಟ, ಬಟ್ಟೆ ದೊರಕುತ್ತಿದೆ, ಈಕೆಯ ಬೇಕು ಬೇಡಗಳನ್ನು ಕಿರಿಯರೇ ನೋಡಿಕೊಳ್ಳುತ್ತಿರುವುದರಿಂದ ಈಕೆಗೆ ಯಾವುದೇ ರೀತಿಯ ಹಣ ಸಿಗುತ್ತಿಲ್ಲ. ಸೊಸೆ ಪೂರ‍್ತಿಯಾಗಿ ಡಾಮಿನೇಟ್ ಮಾಡಿದ್ದಾಳೆ. ಆದರೆ ಹಣವನ್ನು ತನ್ನ ಹತ್ತಿರ ಇಟ್ಟುಕೊಳ್ಳುವ ಮೋಹದಿಂದ ಹೊರಬರುವ ಬಗೆಯೆಂತು. ಅದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಹಣದ ಮೇಲಿನ ಮೋಹದಿಂದ ಬಿಕ್ಶೆ ಬೇಡಲಿಕ್ಕೂ ಈಕೆ ಸಿದ್ದವಾದಳು. ಈ ರೀತಿಯಾಗಿ ನನ್ನ ‌ಮನಸ್ಸಿನಲ್ಲಿ ವ್ರುದ್ದೆಯ ಚಿತ್ರ ಮೂಡಿತು, ಇದೊಂದು ಸೈಕಲಾಜಿಕಲ್ ಪ್ರಾಬ್ಲಮ್, ಹಣವನ್ನು ಹೊಂದಬೇಕೆಂಬ ಉತ್ಕಟ ಆಕಾಂಕ್ಶೆ!

ನನ್ನ ಮನಸ್ಸು ಬಾರವಾಗಿತ್ತು. ನನಗೂ ವಯಸ್ಸಾದ ಮೇಲೆ ನನ್ನ ಮಕ್ಕಳು ಹೀಗೆಯೇ ಮಾಡಬಹುದೇನೊ ಎಂಬ ಜಿಗ್ನಾಸೆ ಶುರುವಾಯಿತು! ಸಮಯ ಸರಿದದ್ದೇ ತಿಳಿಯಲಿಲ್ಲ. ರೈಲ್ವೆ ಸ್ಟೇಶನ್ ನಲ್ಲಿ ಒಂದು ಟೀ ಮತ್ತು ಪಕೋಡ ತಿಂದು ಆಸ್ಪತ್ರೆಯತ್ತ ಹೆಜ್ಜೆ ಹಾಕಿದೆ. ಆದರೆ ನನಗರಿವಿಲ್ಲದಂತೆಯೇ ನನ್ನ ಕಾಲುಗಳು ಆ ವ್ರುದ್ದೆಯ ‌ಮನೆಯ ಕಡೆ ಎಳೆದವು! ಬಯದಿಂದಲೂ… ಕುತೂಹಲದಿಂದಲೂ ಆ ಮನೆಯತ್ತ ನೋಡಿದೆ! ವ್ರುದ್ದೆ ಹೊರಗೆ ಕುಳಿತಿದ್ದಳು. ಎದೆಯಲ್ಲಿ ತಂಗಾಳಿ ಬೀಸಿದಂತಾಯಿತು. ನಾನು ಮನೆಯ ಮುಂದೆ ಸರಿಯುತ್ತಿದ್ದಂತೆ ಆಕೆ ಮತ್ತೆ ದೈನ್ಯವನ್ನು ಕಣ್ಣಲ್ಲಿ ತುಂಬಿಕೊಂಡು ಬಾಯಿ ತೆರೆಯಲನುವಾದಳು, ನಾನು ಶ್….!!! ಎಂದು ಮಾತನಾಡಬೇಡ ಎಂಬಂತೆ ಸನ್ನೆ ಮಾಡಿ ಹತ್ತಿರಕ್ಕೆ ಸಾಗಿದೆ. ಯುವತಿ ಮತ್ತೆ ಬಂದರೇನು ಗತಿ ಎಂಬ ಬಯ ಹೆಚ್ಚಾಗಿತ್ತು. ಎದೆ ಡವಡವಿಸುತ್ತಿತ್ತು… ನನಗೆ ಈ ಸಾಹಸ ಮಾಡಲು ಕಾರಣವೇನೆಂದರೆ ನಾನು ವಿಶ್ಣುವರ‍್ದನ್ ಅಬಿಮಾನಿಯಾಗಿದ್ದುದು. ಚಲನಚಿತ್ರಗಳಲ್ಲಿ ವಿಶ್ಣು ಸಾಹಸ ಮಾಡುವಂತೆ ನಾನು ಮಾಡಬೇಕೆಂಬ ನನ್ನ ಸೈಕಾಲಾಜಿಕಲ್ ಪ್ರಾಬ್ಲಮ್! ಮತ್ತು ನಾನು ಓದಿದ್ದ ಪತ್ತೇದಾರಿ ಕಾದಂಬರಿಗಳು.

ಕಶ್ಟದಲ್ಲಿ ಸಿಲುಕಿಕೊಂಡು ಹೊರಬರುವುದು ನನಗೆ ಹೆಚ್ಚು ತ್ರಿಲ್ ಕೊಡುತ್ತಿತ್ತು. ನನ್ನ ಕೈ ಮಿಂಚಿನ ವೇಗದಲ್ಲಿ ಜೇಬಿನೊಳಗೆ ಹೋಗಿ ನೋಟಿನೊಂದಿಗೆ ಹೊರಬಂತು ಅದು ಎಶ್ಟರ ನೋಟು ಎಂಬುದನ್ನು ಸಹಾ ನೋಡಲು ಹೋಗದೆ ವ್ರುದ್ದೆಯ ಕೈಯಲ್ಲಿ ಅದನ್ನು ಇಟ್ಟೆ. ತಾಯಿ ಮಗುವನ್ನು ಬಚ್ಚಿಟ್ಟುಕೊಳ್ಳುವಂತೆ ಅದನ್ನು ಸೆರಗಿನಲ್ಲಿ ಬಚ್ಚಿಟ್ಟುಕೊಂಡಳು. ಕಣ್ಣಿನಲ್ಲಿ ಹೊಳಪು, ಸಂತೋಶ. ಆ ನಗುಮುಕವನ್ನು ಮನಸ್ಸಿನಲ್ಲಿ ತುಂಬಿಕೊಂಡು ಅಲ್ಲಿಂದ ಓಡಿದೆನೋ ಅತವಾ ನಡೆದೆನೋ ಎನ್ನುವ ರೀತಿಯಲ್ಲಿ ಗಾಳಿಯಲ್ಲಿ ತೇಲುವಂತೆ ಆಸ್ಪತ್ರೆ ತಲುಪಿದೆ. ಮೊದಲಿನಿಂದಲೂ ಸ್ಪೈ, ಸ್ಪೈಸ್ಪೆಶಲ್, ಡಿಟೆಕ್ಟಿವ್ ತ್ರಿಲ್ಲರ್, ಕ್ರೈಮ್ ಕಾದಂಬರಿಗಳನ್ನು ಓದಿದ್ದ ನಾನು ಒಬ್ಬ ಶ್ರೇಶ್ಟ ಪತ್ತೇದಾರನಾದಂತೆ ಅಂದುಕೊಳ್ಳುತ್ತಾ ಅಪ್ಪನ ವಾರ‍್ಡಿನತ್ತ ಹೋದೆ. ಅಪ್ಪ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ನಾಲ್ಕೈದು ನೋಟುಗಳನ್ನು ಮತ್ತು ಸ್ವಲ್ಪ ಚಿಲ್ಲರೆ ಹಣವನ್ನು ಅಪ್ಪನ ಅಂಗಿ ಜೇಬಿಗೆ, ಅಪ್ಪನಿಗೆ ಚೆನ್ನಾಗಿ ಕಾಣಿಸುವಂತೆ ಮತ್ತು ಶಬ್ದವಾಗುವಂತೆ ಸೇರಿಸಿದೆ. ಅಪ್ಪನ ‌ಮುಕ‌ದಲ್ಲಿ ಗೆಲುವು ಕಂಡಿತು!

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ಮಾರಿಸನ್ ಮನೋಹರ್ says:

    ನಿಮಗಾದ ಅನುಬವ ತುಂಬ ಚೆನ್ನಾಗಿ ಮೂಡಿ ಬಂದಿದೆ

  2. Sujagan J says:

    ಮನ ಮುಟ್ಟುವ ಅನುಭವ ?

ಅನಿಸಿಕೆ ಬರೆಯಿರಿ: