ಸಿಂಪಲ್ಲಾಗಿ ಒಂದು ತ್ಯಾಂಕ್ಯೂ ಹೇಳಿ…

ರಕ್ಶಿತ ಪ್ರಬು ಪಾಂಬೂರು.

morning

ಜೀವನದಲ್ಲಿ ನಾವು ನಿತ್ಯ ಪಯಣಿಗರು ಅಲ್ವಾ? ಅದು ಸಹಜವೂ ಸಹ. ಕೆಲಸಕ್ಕೆ, ಕಾಲೇಜಿಗೆ ಅತವಾ ಇನ್ಯಾವುದಕ್ಕೋ ಪ್ರಯಾಣವಂತು ಮಾಮೂಲಿ. ಅದು ಸ್ವಂತ ವಾಹನ ಅತವಾ ಸಾರ‍್ವಜನಿಕ ಆಗಿರಬಹುದು. ಆದರೆ ಪ್ರಯಾಣವಂತು ನಿಶ್ಚಿತ. ಹೀಗೆ ನಮ್ಮ ಜೀವನದ ಪಯಣದಲ್ಲಿ ಹಲವಾರು ಬಾರಿ ಅನೇಕರು ಬಂದು ಹೋಗುತ್ತಾರೆ. ಆದರೆ ದಿನ ನಿತ್ಯದ ಪ್ರಯಾಣದಲ್ಲಿ ಅನೇಕರು ಜೊತೆಯಾಗುತ್ತಾರೆ. ಅದು ಕೇವಲ ಅರ‍್ದ ಗಂಟೆಯ ಪ್ರಯಾಣ ಆಗಿರಬಹುದು ಅತವಾ ಒಂದು ದಿನದ ಪ್ರಯಾಣವೇ ಆಗಿರಬಹುದು. ಆದರೆ ಕೆಲವೊಮ್ಮೆ ಪ್ರಯಾಣದ ಜೊತೆಗಾರರು ಅದ್ಬುತವಾದ ರೀತಿಯಲ್ಲಿ ತನ್ನ ಜೀವನದ ಕತೆಯನ್ನು ತೆರೆದಿಡುತ್ತಾರೆ ಅಲ್ವಾ? ಅಂ‌‌‌‌‌‌‍‌ದು ನನ್ನ ಪ್ರಯಾಣದಲ್ಲಿ ಜೊತೆಗಾರರಾಗಿದ್ದವರು ಬಸ್ ಡ್ರೈವರ‍್‌.

ಅವರ ದಿನಚರಿ ಶುರುವಾಗುವುದು ಬೆಳಿಗ್ಗೆ 4 ಗಂಟೆಗೆ. “ಜಗವೆಲ್ಲಾ ಮಲಗಿರಲು ತಾನೊಬ್ಬ ಎದ್ದ” ಎನ್ನುವಂತೆ. ನಾವೆಲ್ಲರೂ ಸುಕ ನಿದ್ದೆಯ, ಸಿಹಿ ಕನಸಲ್ಲಿ ತೇಲಾಡುತ್ತಿರುವಾಗ. ಅಲ್ಲಿಂದ ಶುರುವಾದ ಅವರ ದಿನಚರಿ ಕೊನೆಗೊಳ್ಳುವುದು ರಾತ್ರಿ 12 ಗಂಟೆಗೆ. ಹಾಗಿರುವಾಗ, ದಿನ ನಿತ್ಯದ ಪ್ರಯಾಣಿಕರು ಅವರ ಸ್ನೇಹಿತ ಕುಟುಂಬ ಅಲ್ಲವೇ? ಹಾಗೆ ಸುಮ್ನೆ ವಾಟ್ಸಪ್ ನಲ್ಲಿ ಒಂದು ಸಂದೇಶ ಹರಿದಾಡುತ್ತಾ ಇತ್ತು, ನೀವು ಓದಿರಬೇಕು… “ಸಾಪ್ಟ್‌ವೇರ್ ಡೆವಲಪರ್ ಗಳು ತಮ್ಮ ಗಂಡ/ಹೆಂಡತಿಯ ಮುಕ ನೋಡುವುದು ವೀಕೆಂಡ್” ಗಳಲ್ಲಿ ಅಂತ… ನಿಜವೇ ತಾನೇ? ಆದರೆ ನೀವು ಈ ಡ್ರೈವರ‍್ಗಳ ಬಗ್ಗೆ ಯೋಚಿಸಿದ್ದೀರಾ? ಅವರು ತಮ್ಮ ಕುಟುಂಬದ ಜೊತೆಗೆ ಸಮಯ ಕಳೆಯುವುದು ಯಾವಾಗ?

ಅದೇನೊ ಅಪಾಯ ಎದುರಾಯಿತು ಎನ್ನುವಾಗ ಒಂದು ಬ್ರೇಕ್ ಹಾಕಿದರೆ, ಶುರುವಾಯಿತು ನೋಡಿ ಬೈಗುಳ… ಇವನಿಗೆ ಬಸ್ ಡ್ರೈವಿಂಗ್ ಬರಲ್ಲ ಅಂತ ಹಾಗೂ ಇನ್ನೂ ಏನೇನೋ… ಆದರೆ ನಮಗ್ಯಾವತ್ತೂ ಅನಿಸಲ್ಲ ನಮ್ಮೆಲ್ಲರ ಜೀವ ಅವರ ಕೈಯಲ್ಲಿ ಇತ್ತು ಆ ಕ್ಶಣಕ್ಕೆ ಅಂತ… ಅದೆಶ್ಟೋ ಬಾರಿ ನಮ್ಮ ಜೀವ ಉಳಿಸಿದ ಡ್ರೈವರಿಗೆ ದನ್ಯತಾಬಾವ ತೋರಿಸಿದ್ದೇವೆಯೆ? ನಮ್ಮ ಸ್ಟಾಪ್ ಬಂದಾಗ ಬಸ್ಸಿಂದ ಇಳಿದು ಹೋಗುವಾಗ ಒಂದು ತ್ಯಾಂಕ್ಯೂ ಹೇಳುತ್ತೇವೆಯೆ? ನಮ್ಮನ್ನು ಸೇಪ್ ಆಗಿ ನಮ್ಮ ಜಾಗಕ್ಕೆ ತಲುಪಿಸಿದ್ದಕ್ಕೆ… ಇಲ್ವಲ್ಲಾ??? ಯಾವಾಗಲಾದರೂ ಒಂದು ಯೋಚನೆ ಬಂದಿತ್ತೇ? ಸರಿ ಇನ್ನಾದರೂ ಒಂದು ತ್ಯಾಂಕ್ಯೂ ಹೇಳಿ… ನಿಮ್ಮ ಗಂಟೇನೂ ಹೋಗಲ್ಲ ಆಯ್ತಾ?.

ಹೀಗೆ ಮಾತನಾಡುತ್ತಾ ಇರುವಾಗ ಡ್ರೈವರ್ ಹೇಳಿದ ನೆನಪು… ನಾನು ಹತ್ತನೇ ಕ್ಲಾಸಲ್ಲಿ 2 ಸಬ್ಜೆಕ್ಟ್ ಮಾತ್ರ ಪಾಸ್ ಅಂತ. ಓಹ್ ಅಂದೆ ನಾನು. ಎಲ್ಲದಕ್ಕೂ ಒಂದು ಕಾರಣ ಇದ್ದೇ ಇರುತ್ತದೆ ಅಲ್ವಾ… ಕಾರಣವಿಲ್ಲದೆ ಏನೂ ಆಗಲ್ಲ. ಹೀಗೆ ಇನ್ನೊಂದು ದಿನ ಹೇಳಿದರು “ನನ್ನ ಅಮ್ಮ ನನ್ನನ್ನು ಬಿಟ್ಟು ಹೋಗಿ 25 ವರ‍್ಶ ಆಯಿತು, ಆಗ ನಾನು 10ನೇ ಕ್ಲಾಸಲ್ಲಿ ಇದ್ದೆ” ಅಂತ. ಮೈ ಜುಂ ಅಂತು. ಅಮ್ಮನಿಲ್ಲದ ಆ ಸಮಯ ಅಯೋಮಯ. ಇಂತಹ ಸಂದರ‍್ಬದಲ್ಲಿ 2 ಸಬ್ಜೆಕ್ಟ್ ಪಾಸ್ ಆಗಿದ್ದು ಗ್ರೇಟ್ ಅನಿಸಿತು.

ಕೆಲವೊಮ್ಮೆ ಅನಿಸುತ್ತದೆ ಅಲ್ವಾ, ನಾವು ನಮ್ಮ ಜೀವನದಲ್ಲಿ ಬಂದ ಅದೆಶ್ಟು ಜನರಿಗೆ ದನ್ಯವಾದ ತಿಳಿಸಿಲ್ಲ ಅಂತ… ಅದು ಮೈ ಕೊರೆಯುವ ಚಳಿ ಅತವಾ ಜಡಿ ಮಳೆಯೇ ಇರಲಿ, ದಿನ ನಿತ್ಯದ ಪೇಪರ್ ಹಾಕುವವರಿಗೆ, ಕಸ ವಿಲೇವಾರಿ ಮಾಡುವವರಿಗೆ, ಕೊರಿಯರ್ ತಂದು ಕೊಡುವವರಿಗೆ, ಮನೆ ಕೆಲಸದವರಿಗೆ, ಸೆಕ್ಯೂರಿಟಿಗಳಿಗೆ ಹೀಗೆ ಇನ್ನೂ ಹಲವರಿಗೆ. ನೀವಂದುಕೊಳ್ಳಬಹುದು ಇವರೆಲ್ಲ ಉಚಿತವಾಗಿ ಕೆಲಸ ಮಾಡುತ್ತಾರಾ? ಇವರಿಗೂ ಸಂಬಳ ಕೊಡುತ್ತಾರಲ್ವ ಅಂತ. ನಿಜ. ಆದರೆ ಅದರೊಂದಿಗೆ ಒಂದು ದನ್ಯವಾದ ಹೇಳಿದರೆ? ಒಮ್ಮೆ ಪ್ರಯತ್ನಿಸಿ ನೋಡಿ, ಒಂದು ತ್ಯಾಂಕ್ಯೂ ಹೇಳಿ, ಅವರ ಮುಕದಲ್ಲಿ ಒಂದು ಸ್ಮೈಲ್ ಬಂದು ಹೋಗಿರುತ್ತದೆ. ಆ ಕ್ಶಣದ ಕುಶಿಗೆ ಕಾರಣ ನೀವಾಗಿರುತ್ತೀರಿ. ಹಾಗೆಯೇ, ನಿಮಗೆ ದಾರಿ ಗೊತ್ತಿಲ್ಲದೆ ಇದ್ದಾಗ ಸಹಾಯ ಮಾಡಿದ ಅಪರಿಚಿತರಿಗೂ, ನಿಮ್ಮ ಜೀವನವನ್ನು ಸುಂದರಗೊಳಿಸಲು ಪ್ರವೇಶಿಸಿದ ಎಲ್ಲರಿಗೂ ಒಂದು ತ್ಯಾಂಕ್ಯೂ ಹೇಳ್ಬಿಡಿ ಹಾಗೇ ಸುಮ್ನೆ.

ನಾನು ಬರೆದಿರುವುದನ್ನು ಓದುತ್ತಿರುವ ನಿಮಗೂ ತ್ಯಾಂಕ್ಯೂ ಸೋ ಮಚ್ 🙂

(ಚಿತ್ರ ಸೆಲೆ: www.pexels.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.