‘ಜೊತೆಗಿರದ ಜೀವ ಎಂದಿಗೂ ಜೀವಂತ’

ಪಾಂಡು ಕರಾತ್.

ಒಲವು, ವಿದಾಯ, Love,

ಆ ಕವಲು ದಾರಿ.  ಅಲ್ಲಲ್ಲಿ ತರಗೆಲೆಯ ಮೇಲಿನ ಇಬ್ಬನಿ ಜಾರಿ ದಾರಿಯು ಕಂಬನಿ ಮಿಡಿಯುವಂತೆ ಕಾಣುತ್ತಿತ್ತು. ಸುಂದರ ಎನಿಸುವ ಮೌನ ಇನ್ನೂ ಕೊಂಚ ಹೆಚ್ಚಾಗಿದ್ದರೂ ಪ್ರಾಣ ಹಿಂಡುವಂತಿತ್ತು. ಎತ್ತಲಿಂದಲೋ ಒಂದು ದನಿ ನನ್ನ ಕೂಗಿ ಕರೆಯುತ್ತಿತ್ತು. ಹಿಂತಿರುಗಿ ನೋಡಿದೆ ಯಾರೂ ಇರಲಿಲ್ಲ. ಆ ದನಿ ನನ್ನ ಏಕಾಂತವನ್ನು ಬಂಗ ಮಾಡುವ ಸಮಗ್ರ ತಯಾರಿ ನಡೆಸಿರಬಹುದು ಎನಿಸಿತು.

ಇನ್ನು ಆ ಸಂಜೆಯ ತಂಪಾದ ಬಿಸಿಲು ನನ್ನನ್ನು ಸುಡುವ ಮೊದಲು ಮನೆ ಸೇರಲು ಯೋಚಿಸಿದೆ ಮನೆಯತ್ತ ಬಿರುಸಿನ ಹೆಜ್ಜೆಯನಿಟ್ಟೆ. ಮನೆಯಲ್ಲಿ ಯಾರೂ ಇರಲಿಲ್ಲ, ಕಾರಣ ತಿಳಿಯಲಿಲ್ಲ. ಕರೆ ಮಾಡಿ ವಿಚಾರಿಸಲು ಪ್ರಯತ್ನಿಸಿದೆ, ಸಾದ್ಯವಾಗಲಿಲ್ಲ. ಕಗ್ಗತ್ತಲ ವಿಚಿತ್ರ ರೂಪವನ್ನೇ ಹೋಲುವಂತ ಮನಸ್ಸು ಏನೇನನ್ನೋ ಯೋಚಿಸತೊಡಗಿತು. ಆ ಯೋಚನೆಗಳು ಮತ್ತಶ್ಟು ತೀಕ್ಶ್ಣವಾಗಿ ನನ್ನ ಅಂತರಂಗದ ಮೇಲೆ ದಾಳಿ ನಡೆಸುತ್ತಿದ್ದವು. ಆ ದಾಳಿಯ ಪರಿಣಾಮವೆಂಬಂತೆ ನಿದಾನವಾಗಿ ನಿದ್ರೆಗೆ ಜಾರಿದೆ. ಮುಂಜಾನೆ ಎದ್ದು ಸಕಲ ತಯಾರಿಗಳನ್ನು ನಡೆಸಿ ಮನೆಯಿಂದ ಹೊರಟೆ. ದಾರಿಯಲ್ಲಿ ಮತ್ತದೇ ಏಕಾಂತ. ಮತ್ತದೇ ದನಿ. ತೀರಾ ನೋವಾದಂತೆ ನನ್ನನ್ನೇ ಕರೆಯುತಿತ್ತು. ಆ ದನಿ ನನ್ನ ತೊರೆದ ಪ್ರೇಯಸಿಯದ್ದು.

ಆಕೆ ತುಂಬ ಮುಗ್ದೆ, ಅವಳ ಆ ಮುಗ್ದತೆ ನನ್ನನು ಪ್ರತಿ ಬಾರಿ ಏಕಾಂತಕ್ಕೆ ತಳ್ಳುತ್ತಿತ್ತು. ಸುಂದರ ಮೊಗದ, ಕರುಣಾ ಗುಣದ ಆ ಚೆಲುವೆಯ ಕಣ್ಣು ವಜ್ರವನ್ನು ಸಹ ನಾಚಿಸುವಂತಹ  ಹೊಳಪನ್ನು ಹೊಂದಿತ್ತು. ಆಕಾಶ ನೋಡದೆ ನೆಲವನ್ನು ನೋಡುತ್ತಿದ್ದಳು. ಹೇಗೋ ಈ ನನ್ನ ಕಳ್ಳ ಕಣ್ಣಿಗೆ ಸುಂದರ ಕನ್ಯೆಯ ದರ‍್ಶನವಾಯಿತು. ಆಕೆಯನ್ನು ನನ್ನ ಪ್ರೀತಿಯ ಸುಂದರ ಸೆರೆಮನೆಯಲ್ಲಿ ಬಂದಿಸಿಡುವುದು ನನಗೆ ಇಶ್ಟ ಇರಲಿಲ್ಲ. ಆಕಾಶ ಪಕ್ಶಿಗಳನ್ನು ಪ್ರೀತಿಸುವಂತೆ, ತಾಯಿ ಮಗುವನ್ನು ಪ್ರೀತಿಸುವಂತೆ ಪ್ರೀತಿಸುವ ಹಂಬಲ ನನ್ನಲ್ಲಿತ್ತು. ಆಕೆಯನ್ನು ಪ್ರತೀದಿನ ಅದೇ ಬಸ್ ಸ್ಟ್ಯಾಂಡ್ ನಲ್ಲಿ ನೋಡುತ್ತಿದ್ದೆ. ಒಮ್ಮೆ ದೈರ‍್ಯ ಮಾಡಿ ಆಕೆಯಡೆಗೆ ನಡೆದೆ, ಆದರೆ ಆಕೆಯ ಕಣ್ಣ ಹೊಳಪು ನನ್ನ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತಿತ್ತು. ಹೇಗೋ ಅವಳ ಆ ಕಣ್ಣ ಹೊಳಪಿನಿಂದ ತಪ್ಪಿಸಿಕೊಂಡು ಹೋಗಲು ಚಡಪಡಿಸಿ ಗಾಬರಿಯಾಗಿ ಓಡಿದೆ. ಒಂದು ವಾರ ನಾನು ಬಸ್ ಸ್ಟ್ಯಾಂಡ್ ಗೆ ಹೋಗಲಿಲ್ಲ. ಆದರೆ ವಾರದ ನಂತರ ಹೋದೆ ನನಗೆ ಒಂದು ಆಶ್ಚರ‍್ಯ ಕಾದಿತ್ತು. ಅವಳೆ ನನ್ನಡೆಗೆ ಬಂದು ಪ್ರೇಮ ನಿವೇದಿಸಿಕೊಂಡಳು. ನನ್ನ ಸಂತೋಶಕ್ಕೆ ಪಾರವೇ ಇಲ್ಲದಂತಾಗಿತ್ತು. ಒಂದಿಶ್ಟು ಆ ದಿನಗಳು ನನ್ನ ಜೀವನದ ಗತಿಯನ್ನೇ ಬದಲಾಯಿಸಿದವು.

ಹೀಗೆಯೇ ಪ್ರಣಯ ಪಕ್ಶಿಗಳಂತೆ ಹಾರಾಡುತ್ತಿದ್ದ ನಮ್ಮ ಪ್ರೇಮ ಕತನಕ್ಕೆ ಯಾವುದೇ ರೀತಿಯ ತೊಂದರೆಗಳಿರಲಿಲ್ಲ. ಆದರೆ ಆ ಒಂದು ದಿನ ರಸ್ತೆಯಲ್ಲಿ ಸಂಚರಿಸುತ್ತಿರುವಾಗ ಅವಳು ಕುಸಿದು ಬಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಕೆಲವು ನಿಮಿಶಗಳ ನಂತರ ಡಾಕ್ಟರ್ ಬಂದು ನನ್ನನ್ನು ಬೇಟಿಯಾದರು. ಅವಳಿಗೆ ಒಂದು ಬಗೆಯ ಅಪರೂಪದ ಕಾಯಿಲೆ ಆವರಿಸಿತ್ತು. ಆ ಕಾಯಿಲೆ ಇನ್ನೇನು ಅವಳ ಪ್ರಾಣ ಪಕ್ಶಿಯನ್ನು ಕೈಗೆತ್ತಿಕೊಂಡು ಎಲ್ಲಿಗೋ ಓಡುವ ತಯಾರಿಯನ್ನು ನಡೆಸಿತ್ತು. ಅವಳಿಗೆ ಇದರ ಅರಿವೇ ಇರಲಿಲ್ಲ. ನಾನೂ ಸಹ ಅವಳಿಗೆ ಯಾವುದೇ ಮಾಹಿತಿಯನ್ನು ನೀಡಿರಲಿಲ್ಲ. ಅವಳ ಎಲ್ಲಾ ಆಸೆಗಳನ್ನು ಪೂರೈಸುವತ್ತ ನನ್ನ ಸಂಪೂರ‍್ಣ ಗಮನವನ್ನು ಕೇಂದ್ರೀಕರಿಸಿದೆ.

ಹೀಗೆ ಕೆಲವು ದಿನಗಳು ಕಳೆದವು. ಅವಳು ತನ್ನ ಊರಿಗೆ ಹಿಂತಿರುಗುವುದಾಗಿ ಹೇಳಿ ಹೊರಟಳು. ನನಗೆ ಅದಾಗಲೇ ತಿಳಿದುಹೋಗಿತ್ತು, ಆಕೆಗೆ ತನ್ನ ಕಾಯಿಲೆಯ ಬಗ್ಗೆ ಗೊತ್ತಾಗಿದೆ ಎಂದು. ಅಂದು ಊರಿಗೆ ಹೋಗುವಾಗ ಅವಳನ್ನು ಒಮ್ಮೆ ಬಿಗಿದಪ್ಪಿ ನಾ ಬಿಕ್ಕಿ ಅತ್ತಿದ್ದೆ. ಅದಾದ ನಂತರ ಆಕೆ ಹಿಂತಿರುಗಲೇ ಇಲ್ಲ. ಆಕೆ ಬದುಕಿದ್ದಾಳೋ, ಬದುಕಿದ್ದರೂ ಹೇಗಿದ್ದಾಳೋ ತಿಳಿದಿಲ್ಲ.

ನಾ ಅವಳಿಗಾಗಿ ಕಾಯುತ್ತಿರುವೆ. ಎಲ್ಲೂ ಸಿಗದ ಅವಳ ನೆನಪುಗಳು ನನ್ನ ಉಳಿವಿನ ಅಮ್ರುತ ಬಿಂದುಗಳಾಗವೆ. ಜೊತೆಗಿರದ ಜೀವ ಎಂದಿಗೂ ನೆನಪಿನಲ್ಲಿ ಜೀವಂತ ಎಂಬುದೀಗ ನನ್ನ ಬಾಳಿನ ಸಿದ್ದಾಂತವಾಗಿದೆ.

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: