ರಶ್ಯಾದಲ್ಲಿದೆ ಜಗತ್ತಿನ ಅತಿದೊಡ್ಡ ಗಂಟೆ!

ಮಾರಿಸನ್ ಮನೋಹರ್.

ಜಾರ್ ಗಂಟೆ, Tsar Bell

ಗಂಟೆಗಳ ಸದ್ದನ್ನು ನಾವು ದಿನದಲ್ಲಿ ಒಂದು ಸಲವಾದರೂ ಕೇಳುತ್ತೇವೆ. ಗಂಟೆಗಳು ಜಗತ್ತಿನ ಎಲ್ಲ ನಾಡುಗಳ ನಡವಳಿಕೆಗಳಲ್ಲಿ ಹಾಸುಹೊಕ್ಕಿವೆ. ಈ ನಾಡಿನಲ್ಲಿ ಗಂಟೆಗಳಿಲ್ಲ ಎಂದು ಹೇಳಲಾಗದು. ಸಣ್ಣ ಕಿಂಕಿಣಿ ಸದ್ದು ಹೊರಡಿಸುವ ಪುಟ್ಟ ಪುಟಾಣಿ ಗಂಟೆಗಳಿಂದ ಹಿಡಿದು 20-25 ಅಡಿ ಎತ್ತರದ ಎರಡಾನೆ ಸೈಜಿನ ಗಂಟೆಗಳೂ ಬಳಕೆಯಲ್ಲಿ ಇವೆ. ಕೆಲವು ಗಂಟೆಗಳು ದಾರ‍್ಮಿಕ ಸ್ತಳಗಳಲ್ಲಿ ಬಳಸಲ್ಪಟ್ಟರೆ ಕೆಲವು ಗಂಟೆಗಳು ಕಲಿಕೆ ಮನೆಗಳಲ್ಲಿ ನಿಚ್ಚ ಬಳಕೆಯಾಗುತ್ತವೆ. ನಾನೀಗ ಹೇಳ ಹೊರಟಿರುವುದು ಜಾರ್ (Tsar) ಗಂಟೆಯ ಬಗ್ಗೆ. ರಶ್ಯಾದ ಕ್ರೆಮ್ಲಿನ್ ನಲ್ಲಿದೆ ಜಗತ್ತಿನ ದೊಡ್ಡ ಜಾರ್ ಗಂಟೆ.ಇದು 2,01,924 ಕಿಲೋ ತೂಕವಿದೆ! ಜಗತ್ತಿನಲ್ಲಿಯೇ ಎಲ್ಲಕ್ಕಿಂತ ತೂಕವಾದ ಗಂಟೆಯಿದು. ರಶ್ಯಾದ ಕ್ರೆಮ್ಲಿನ್ ನೋಡಲು ಹೋದವರು ಈ ದೊಡ್ಡ ಗಂಟೆಯನ್ನು ನೋಡಲು ಹೋಗೇ ಹೋಗುತ್ತಾರೆ. ಸುತ್ತಾಡುಗರ (Tourists) ಅಚ್ಚುಮೆಚ್ಚಿನ ಸ್ಪಾಟ್ ಗಳಲ್ಲಿ ಇದೂ ಒಂದು.

ಇಂದು ಜಗತ್ತಿನಲ್ಲೇ ದೊಡ್ಡದಾದ ಜಾರ್ ಗಂಟೆಯನ್ನು ನೋಡಲು ಕಾರಣವಾದವಳು ರಶ್ಯಾದ ದೊಡ್ಡರಸಿ ಆ್ಯನ್ನಾ ಇವನೋವ್ನಾ. ಹಾಗೆ ನೋಡಿದ್ದಲ್ಲಿ ಆಕೆ ಇದನ್ನು ಎರಕ ಹೊಯ್ಯಲು ಅಪ್ಪಣೆ ಕೊಡುವದಕ್ಕೆ ಮುಂಚೆ ಹಿಂದಿನ ಇಬ್ಬರು ಅರಸರೂ ಇದನ್ನು ಎರಕ ಹೊಯ್ಸಿದ್ದರು‌. ರಶ್ಯಾದ ಕ್ರೆಮ್ಲಿನ್ ಗೋಡೆಯ ಬಳಿ ಈ ಜಾರ್ ಗಂಟೆಯಿದೆ. 2,01,924 ಕಿಲೋ ತೂಕವಿದ್ದು ತಾಮ್ರದಿಂದ ಮಾಡಿದ್ದಾರೆ. ಇದರ ಎತ್ತರ 20.1 ಅಡಿ, ದುಂಡಗಲ (diameter) 22ಅಡಿ, ದಪ್ಪ 24 ಇಂಚು ಇದೆ. ಇದರ ಬಳಿ ಮುರಿದು ಬಿದ್ದ ಇದರದ್ದೇ ತುಂಡು 11,500 ಕಿಲೋ ತೂಕವಿದೆ. ಗಂಟೆಯ ಮೇಲೆ ಅಲಂಕಾರವಾಗಿ ಗಿಡ ಬಳ್ಳಿ, ದೇವದೂತರು, ಆ್ಯನ್ನಾ ಹಾಗೂ ಅಲೆಕ್ಸೀಯರ ಆಳೆತ್ತರದ ಉಬ್ಬುತಿಟ್ಟಗಳು ಇವೆ.

ಮೊದಲ ಬಾರಿಗೆ ಜಾರ್ ಗಂಟೆಯನ್ನು 1600 AD ಯಲ್ಲಿ ಎರಕ ಹೊಯ್ದಿದ್ದರು. ಆಗ ಅದರ ತೂಕ 18,000 ಕಿಲೋ ಆಗಿತ್ತು.ಆಗ ಇದನ್ನು ಮಾಸ್ಕೋದ ದೊಡ್ಡ ಇವಾನನ ಗೋಪುರದಲ್ಲಿ ಇಳಿಬಿಡಲಾಗಿತ್ತು. ಇದನ್ನು ಬಾರಿಸಲು 24 ಆಳುಗಳು ಬೇಕಾಗುತ್ತಿದ್ದರು! 17ನೇ ನೂರೇಡಿನ ನಡು ಬಾಗದಲ್ಲಿ ಕಟ್ಟಿಗೆಯ ಇವಾನನ ಗೋಪುರಕ್ಕೆ ಬೆಂಕಿ ಹೊತ್ತಿಕೊಂಡು ಉರಿದು ಹೋಯಿತು. ಆಗ ಜಾರ್ ಗಂಟೆ ಕಡಿದು ನೆಲಕ್ಕೆ ಬಿದ್ದು ಒಡೆದು ಚೂರು ಚೂರು ಆಯಿತು‌. 1655 ರಲ್ಲಿ ಇನ್ನಶ್ಟು ಕಂಚನ್ನು ತೆಗೆದುಕೊಂಡು ಅದರ ಜೊತೆಗೆ ಒಡೆದುಹೋದ ಹಿಂದಿನ ಗಂಟೆಯ ಚೂರುಗಳನ್ನು ಸೇರಿಸಿ ಹೊಸದಾಗಿ ಮತ್ತೆ ಎರಕ ಹೊಯ್ದರು.ಆಗ ತೂಕ ಹೆಚ್ಚಾಗಿ 1,00,000 ಕಿಲೋ ಆಯಿತು. ಆದರೆ 1701 ರಲ್ಲಿ ಮತ್ತೊಂದು ಬೆಂಕಿ ದುರಂತದಲ್ಲಿ ಗಂಟೆ ಕಡಿದು ಕೆಳಗೆ ಬಿದ್ದು ಒಡೆದು ಹೋಯಿತು.ಜಾರ್ ಗಂಟೆ, Tsar Bell

ಆ್ಯನ್ನಾ ದೊಡ್ಡರಸಿ ಆದ ಮೇಲೆ ಒಡೆದು ಹೋದ ಗಂಟೆಯ ಚೂರುಗಳನ್ನು ಕೂಡಿಸಿ ಮತ್ತೆ ಅದಕ್ಕೆ ನೂರು ಟನ್‌ ಹೆಚ್ಚಿನ ತಾಮ್ರ ಕೂಡಿಸಿ ಎರಕ ಹೊಯ್ಯಬೇಕೆಂದು ಅಪ್ಪಣೆ ಕೊಟ್ಟಳು. ದೊಡ್ಡ ಮಟ್ಟದ ಎರಕದ ಅರಿಮೆಗಾಗಿ ಮ್ಯೂನಿಚ್ ಎಂಬವನನ್ನು ಪ್ಯಾರಿಸಿಗೆ ಕಳುಹಿಸಿದಳು. ಆದರೆ ಮ್ಯೂನಿಚ್ ಗೆ ದೊಡ್ಡ ಮಟ್ಟದ ಎರಕ ಹೊಯ್ಯುವ ಅರಿಮೆ ಗೊತ್ತಾಗಲಿಲ್ಲ. ಅವನನ್ನು ಕೆಲಸದಿಂದ ತೆಗೆದುಹಾಕಿದರು. 1733 ರಲ್ಲಿ ತಾಮ್ರದ ತೋಪುಗಳನ್ನು ಮಾಡುವ ಕಸುಬುದಾರನಾಗಿದ್ದ ಇವಾನ್ ಮೊಟೊರಿನ್ ಹಾಗೂ ಅವನ ಮಗ ಮಿಕಾಯಿಲರನ್ನು ಜಾರ್ ಗಂಟೆ ಎರಕ ಹೊಯ್ಯುವ ಕೆಲಸಕ್ಕೆ ಹಚ್ಚಿದರು.ಇಶ್ಟು ದೊಡ್ಡದಾದ ಗಂಟೆಯನ್ನು ಎರಕ ಹೊಯ್ಯುವದು ತುಂಬಾ ಕಶ್ಟದ ಕೆಲಸವಾಗಿತ್ತು.

ಇವಾನ್ ಮತ್ತು ಮಿಕಾಯಿಲ್ ಗೂ ಈ ಜಾರ್ ಗಂಟೆಯನ್ನು ಎರಕ ಹೊಯ್ಯುವದು ತಿಳಿಯಾದ ಕೆಲವಾಗಿರಲಿಲ್ಲ. ಒಂದಾದ ಮೇಲೆ ಮತ್ತೊಂದು ಎನ್ನುವಂತೆ ಅವಗಡಗಳು ಆದವು. ಇದಕ್ಕೆ 33 ಅಡಿ ಆಳದ ಎರಕದಚ್ಚಿನ ಕುಣಿಯನ್ನು (casting pit) ಅಗೆದರು. 2ಲಕ್ಶ ಕಿಲೋಗಳಶ್ಟು ತಾಮ್ರವನ್ನು ಎರಕ ಹೊಯ್ಯುವುದು ಮಕ್ಕಳಾಟದ ಮರಳು ಮನೆಯಲ್ಲ. ಕರಗಿದ ತಾಮ್ರವನ್ನು ಎರಕ ಹೊಯ್ಯುವಾಗ ಅದರ ಹೊರೆಯನ್ನು ಅಚ್ಚಿನಲ್ಲಿನ ಮಣ್ಣು ತಾಳದು. ಅದು ಸಡಿಲವಾಗಿದ್ದರೆ ಅದರಲ್ಲಿ ತೂತು ಬಿದ್ದು ತಾಮ್ರ ಹರಿದು ಹೋಗುತ್ತದೆ. ಅದಕ್ಕೆ ಇವಾನ್ ಮತ್ತು ಮಿಕಾಯಿಲರು ಅಚ್ಚಿನಲ್ಲಿದ್ದ ಮಣ್ಣಿಗೆ ಗಚ್ಚಿ (rammed earth) ಹೊಡೆದು ಗಟ್ಟಿ ಮಾಡಿದರು. ಅಚ್ಚಿಗೆ ಕಸುವುಳ್ಳ ಗೋಡೆ ಕಟ್ಟಿದರು. ಎರಕದ ತಾಮ್ರ ಬೆರಕೆಗೆ 525 ಕಿಲೋ ಬೆಳ್ಳಿ ಮತ್ತು 75 ಕಿಲೋ ಬಂಗಾರವನ್ನು ಹೆಚ್ಚುವರಿಯಾಗಿ ಕೂಡಿಸಿದರು. ಇದಕ್ಕಾಗಿ ತಿಂಗಳು ಗಟ್ಟಳೆ ದುಡಿದು 1734ರ ನವೆಂಬರಿನಲ್ಲಿ ಎರಕದ ಕೆಲಸ ಶುರು ಮಾಡಿದರು.. ಮೊದಲ ಪ್ರಯತ್ನದಲ್ಲಿ ಗೆಲುವಾಗಲಿಲ್ಲ. ಅದಾದ ಮೇಲೆ ಇವಾನ್ ತೀರಿಕೊಂಡ. ಎರಕದ ಕೆಲಸವನ್ನು ಮಗ ಮಿಕಾಯಿಲ್ ಮುಂದುವರೆಸಿ 1735 ಆಗಸ್ಟಿನಲ್ಲಿ ಎರಡನೇ ಪ್ರಯತ್ನದಲ್ಲಿ ಗಂಟೆಯ ಎರಕ ಹೊಯ್ದ. ಇದು ಪಾಸಾಯಿತು. ಆಗ ಗಂಟೆಯನ್ನು ಎರಕದಚ್ಚಿನ ಕುಣಿಯಿಂದ ಮೇಲೆ ಎತ್ತಿ ಕಟ್ಟಿಗೆಯಿಂದ ಮಾಡಿದ ಕಟ್ಟೆಯ ಮೇಲೆ ಇಟ್ಟರು.

1735 ರಿಂದ 1737 ರ ವರೆಗೆ ಗಂಟೆಯ ಅಲಂಕಾರದ ಕೆಲಸ ನಡೆಯುತ್ತಿತ್ತು. ಆದರೆ ಈ ಗಂಟೆ ಅಲಂಕಾರದ ಕೆಲಸ ಮುಗಿಯುವ ಮೊದಲೇ ಕ್ರೆಮ್ಲಿನ್ ಅರಮನೆಯಲ್ಲಿ ಬೆಂಕಿ ಹೊತ್ತಿಕೊಂಡಿತು. ಆ ಬೆಂಕಿ ಹರಡುತ್ತಾ ಗಂಟೆ ಕೆಲಸ ನಡೆಯುತ್ತಿದ್ದ ಜಾಗಕ್ಕೂ ಹಬ್ಬಿತು. ಗಂಟೆಯು ಇಟ್ಟಿದ್ದ ಕಟ್ಟೆ ಮತ್ತು ಅದರ ಸುತ್ತಮುತ್ತ ಹಾಕಿದ್ದ ಅಟ್ಟಣಿಗೆಗಳು ಕಟ್ಟಿಗೆಯದ್ದಾಗಿದ್ದವು. ಬೆಂಕಿ ಅವುಗಳಿಗೂ ಹಬ್ಬಿತು. ಕಾವಲುಗಾರರು ಗಂಟೆಯ ಮೇಲೆ ತಣ್ಣೀರನ್ನು ಎರಚಿದರು. ಆಗ ಗಂಟೆಯು ಬಿರುಕು ಬಿಟ್ಟು ಟಿಸಿಲೊಡೆಯುತ್ತಾ ಅದರಿಂದ 11,000 ಕಿಲೋ ತೂಕದ ತುಂಡು ಕಡಿದು ಬಿತ್ತು. ಗಂಟೆ ಕುಸಿದು ಅದನ್ನು ಹೊರಗೆ ತೆಗೆದಿದ್ದ ಎರಕದಚ್ಚಿನ ಕುಣಿಯಲ್ಲಿ ಬಿದ್ದು ಬಿಟ್ಟಿತು. ಹೀಗೆ ಕುಣಿಯಲ್ಲಿ ಬಿದ್ದ ಗಂಟೆಯನ್ನು ಯಾರೂ ಹೊರಗೆ ತೆಗೆಯದ್ದಕ್ಕೆ ಅದು ಮುಂದಿನ ನೂರು ಮಳೆಗಾಲಗಳವರಗೆ ಆ ಕುಣಿಯಲ್ಲೇ ಇರಬೇಕಾಯಿತು.

1792 ರಿಂದ 1819 ರ ವರೆಗೆ ಅದನ್ನು ತೆಗೆಯಲು ಮಂದಿ ಕೈಹಾಕಿದರೂ ಅದು ಮೇಲೆ ಏಳಲಿಲ್ಲ. ನೆಪೋಲಿಯನ್ ಬೊನಪಾರ‍್ಟೆ ಮಾಸ್ಕೋವನ್ನು ಹಿಡಿದ ಮೇಲೆ ಈ ಗಂಟೆಯನ್ನು ಅದರ ಎರಕದಚ್ಚಿನ ಕುಣಿಯಿಂದ ಮೇಲೆ ಎಬ್ಬಿಸಿ ಪ್ರಾನ್ಸಿಗೆ ಒಯ್ಯಬೇಕೆಂದ. ಮಾಸ್ಕೋದಿಂದ ಈ ಗಂಟೆಯನ್ನು ಪ್ರಾನ್ಸ್ ಗೆ ಒಯ್ದು ಅಲ್ಲಿ ತನ್ನ ಗೆಲುವಿನ ಸಂಕೇತವಾಗಿ ಇದನ್ನು ಇಡಬೇಕೆಂದ. ಆದರೆ ಗಂಟೆ ಬಲುತೂಕವಿತ್ತು. ಆದ್ದರಿಂದ ಅವನಿಂದಲೂ ಇದನ್ನು ಮೇಲೆ ಎಬ್ಬಿಸಲಾಗಲಿಲ್ಲ. 1836 ರ ಬೇಸಿಗೆಕಾಲದಲ್ಲಿ ಪ್ರಾನ್ಸಿನ ಅಗುಸ್ಟೇ ಡೆ ಮೊಂಟೆಪೆರಾಂಡ್ ಈ ಜಾರ್ ಗಂಟೆಯನ್ನು ಕುಣಿಯಿಂದ ಮೇಲೆ ಹೊರಗೆ ತೆಗೆದು ಈಗ ಇರುವ ಕಲ್ಲಿನ ಕಟ್ಟೆಯ ಮೇಲೆ ಕೂಡಿಸಿದ. ಅದರ ಮುರಿದು ಬಿದ್ದ ತುಂಡನ್ನೂ ಅದರ ಬಳಿಯೇ ಇಟ್ಟ. ಜಾರ್ ಗಂಟೆಯ ನಗೆಪಾಟಲಿನ ಮಾತೆಂದರೆ ಮೊದಲ ಬಾರಿಗೆ ಎರಕ ಹೊಯ್ದಾಗ ಅದನ್ನು ಅರಸರ ಸಮಾರಂಬದ ಸಾರುವಿಕೆ, ಹಗೆಗಳ ದಾಳಿ ಆದಾಗ ಸೂಚನೆ ಕೊಡುವದಕ್ಕೆ ಹಾಗೂ ಅರಮನೆಗೆ ಬೆಂಕಿ ಬಿದ್ದಾಗ ನೆರವು ಕೂಗಲು ಬಳಸಲು ಯೋಚಿಸಿದ್ದರು. ಆದರೆ ಕ್ರೆಮ್ಲಿನ್ ನಲ್ಲಿ ಬಿದ್ದ ಬೆಂಕಿಯಿಂದ ಜಾರ್ ಗಂಟೆ ಗೋಪುರ ಸುಟ್ಟು ಕುಸಿದು ಮೂರು ಸಲ ಕೆಳಗೆ ಬಿದ್ದು ಒಡೆದುಹೋಗಿದೆ!

ಜಗತ್ತಿನಲ್ಲೇ ದೊಡ್ಡದಾದ 9 ಗಂಟೆಗಳ ಪಟ್ಟಿ ಇಲ್ಲಿದೆ:

1. ರಶ್ಯಾದ ಜಾರ್ ಗಂಟೆ (2,01,924 ಕಿಲೋ)
2. ಚೈನಾದ ಗುಡಲಕ್ ಗಂಟೆ (115,800 ಕಿಲೋ)
3. ಮಾಯನ್ಮಾರಿನ ಮಿಂಗುನ್ ಗಂಟೆ (88,000 ಕಿಲೋ)
4. ಜಪಾನಿನ ಸಿಯೋನ್-ಇನ್ ಗಂಟೆ (67,000 ಕಿಲೋ)
5. ರಶ್ಯಾದ ದೊಡ್ಡ ಉಸಪೆನ್ಸ್ ಕೀ ಗಂಟೆ (65,552 ಕಿಲೋ)
6. ಜಪಾನಿನ ತೊ-ದೈ-ಜೀ ಗಂಟೆ (44,000 ಕಿಲೋ)
7. ಚೈನಾದ ಯೋಂಗಲೇ ಗಂಟೆ (42,000 ಕಿಲೋ)
8. ಮಾಯನ್ಮಾರಿನ ಮಹಾತಿಸ್ಸದಾ ಗಂಟೆ (38,000 ಕಿಲೋ)
9. ಜಪಾನಿನ ಗೊಟೆಂಬಾ ಗಂಟೆ (36,170 ಕಿಲೋ)

ಗಂಟೆಗಳಲ್ಲಿ ಎರಡು ಬಗೆ ಇದೆ. ಒಳನಾಲಿಗೆ ಉಳ್ಳ ಗಂಟೆ ಮತ್ತು ಹೊರನಾಲಿಗೆ ಉಳ್ಳ ಗಂಟೆ. ಗಂಟೆಯ ಒಳಗೆ ಜೋತು ಬಿದ್ದಿರುವ ಗುಂಡನ್ನ ಗಂಟೆಯ ನಾಲಿಗೆ ಎನ್ನುತ್ತಾರೆ. ಹೆಚ್ಚಿನ ಗಂಟೆಗಳು ಒಳನಾಲಿಗೆ ಹೊಂದಿರುವ ಗಂಟೆಗಳಾಗಿರುತ್ತವೆ. ಜಪಾನಿನ ಸಿಯೋನ್-ಇನ್ ಗಂಟೆಗೆ ಹೊರಗಿನಿಂದ ಜೋತುಬಿದ್ದ ತೊಲೆಯನ್ನು ಬಡಿದು ಸದ್ದು ಹೊರಡಿಸುತ್ತಾರೆ. ಇದೇ ಹೊರನಾಲಿಗೆ ಹೊಂದಿರುವ ಗಂಟೆ. ಜಪಾನಿನ  ಬೌದ್ದ ಗುಡಿಗಳಲ್ಲಿ ಇಂತಹ ಹೊರನಾಲಿಗೆ ಇರುವ ಗಂಟೆಗಳು ಇರುತ್ತವೆ. ಜಪಾನಿನ ಶಿಂಟೋ ಮತ್ತು ಬೌದ್ದ ಗುಡಿಗಳಲ್ಲಿ ಇಂತಹ ಗಂಟೆಗಳು ಕಾಣಸಿಗುತ್ತವೆ.

ಜಾರ್ ಗಂಟೆಯು ತುಂಬಾ ದೊಡ್ಡದಾಗಿರುವ ಕಾರಣಕ್ಕೆ ಹಿಂದೊಮ್ಮೆ ಇದನ್ನು ಚರ‍್ಚ್ ಆಗಿಯೂ ಬಳಕೆ ಮಾಡಿದ್ದಾರೆ! 2016 ರಲ್ಲಿ ಕಾಲಿಪೋರ‍್ನಿಯಾ ಮತ್ತು ಮಿಶಿಗನ್ ಯುನಿವರ‍್ಸಿಟಿಯ ಅರಿಮೆಗಾರರು ಜಾರ್ ಗಂಟೆಯ ಅರಿಮೆ ನಡೆಸಿದರು. ಅದರ ಗಾತ್ರ ಎತ್ತರ ತೂಕ ದಪ್ಪ ತಾಮ್ರದ ಗುಣಗಳನ್ನು ಕಂಪ್ಯೂಟರ್ ನೆರವಿನಿಂದ ಲೆಕ್ಕಹಾಕಿದರು. ಇದು ಒಂದೊಮ್ಮೆ ಇಳಿಬಿಟ್ಟಿದ್ದರೆ ಹೇಗೆ ಸದ್ದು ಮಾಡುತ್ತಿತ್ತು ಅಂತ ಸಿಮುಲೇಶನ್ ಬಳಕೆ ಮಾಡಿ ಅದರ ಕಂಪ್ಯೂಟರ್ ಸದ್ದು ಹೊರಡಿಸಿದ್ದಾರೆ. ಜಾರ್ ಗಂಟೆಯ ಸದ್ದನ್ನು ಈ ಕೆಳಗಿನ ಯೂಟ್ಯೂಬ್ ಕೊಂಡಿಯಲ್ಲಿ ಕೇಳಬಹುದು.

ಜಾರ್ ಗಂಟೆ ಸಿಮುಲೇಶನ್ ಸದ್ದಿನ ಕೊಂಡಿ : youtube
( ಮಾಹಿತಿ ಮತ್ತು ಚಿತ್ರಸೆಲೆ : wikipedia, youtube )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: