ಅಲ್ಲಮನ ವಚನಗಳಿಂದ ಆಯ್ದ ಸಾಲುಗಳ ಓದು – 6ನೆಯ ಕಂತು

–  ಸಿ.ಪಿ.ನಾಗರಾಜ.

ಅಲ್ಲಮಪ್ರಬು, allamaprabhu

ಇಲ್ಲದ ಶಂಕೆಯನು ಉಂಟೆಂದು ಭಾವಿಸಿದಡೆ
ಅದು ಕಣ್ಣ ಮುಂದೆ ರೂಪಾಗಿ ಕಾಡುತ್ತಿಪ್ಪುದು. (936-224)

ಇಲ್ಲದ=ವಾಸ್ತವದಲ್ಲಿ ಕಂಡು ಬರದ; ಶಂಕೆ=ಅಪಾಯ/ವಿಪತ್ತು/ಹಾನಿ/ಕೇಡಾಗಬಹುದೆಂದು ಮನದಲ್ಲಿ ಹೆದರಿಕೆಯಿಂದ ತಲ್ಲಣಿಸುವುದು; ಉಂಟು+ಎಂದು; ಉಂಟು=ಇದೆ/ಇರುವುದು; ಭಾವಿಸು=ತಿಳಿ/ಆಲೋಚಿಸು; ಭಾವಿಸಿದಡೆ=ತಿಳಿದುಕೊಂಡರೆ/ಕಲ್ಪಿಸಿಕೊಂಡರೆ;

ರೂಪ+ಆಗಿ; ರೂಪ=ಆಕಾರ; ಕಾಡುತ್ತ+ಇಪ್ಪುದು; ಕಾಡು=ಪೀಡಿಸು/ಹಿಂಸಿಸು; ಇಪ್ಪುದು=ಇರುವುದು; ರೂಪಾಗಿ ಕಾಡುತ್ತಿಪ್ಪುದು=ಮನದಲ್ಲಿ ಉಂಟಾದ ಹೆದರಿಕೆಯೇ ಒಂದು ರೂಪನ್ನು ಪಡೆದು , ನಿಜವಾಗಿ ಎದುರಿಗೆ ಬಂದಂತೆ ಆಗುತ್ತದೆ;

ಜೀವನದಲ್ಲಿ ತೊಡಕು ಉಂಟಾದಾಗ ಮುಂದೇನಾಗುವುದೋ ಎಂಬ ಹೆದರಿಕೆಯಿಂದ ವ್ಯಕ್ತಿಯು ತನ್ನ ಮನದಲ್ಲಿ ನಾನಾ ಬಗೆಯ ಕಲ್ಪನೆಗಳನ್ನು ಮಾಡಿಕೊಳ್ಳತೊಡಗಿದರೆ, ಅದು ನಿಜವಾಯಿತೇನೋ ಎಂಬಂತೆ ಕೆಟ್ಟದ್ದೇ ಕಣ್ಣ ಮುಂದೆ ಸುಳಿದಂತಾಗುತ್ತದೆ.

ಉದಾಹರಣೆ: ಕತ್ತಲೆಯಿಂದ ತುಂಬಿರುವ ದಾರಿಯಲ್ಲಿ ವ್ಯಕ್ತಿಯು ಒಬ್ಬಂಟಿಯಾಗಿ ನಡೆದುಕೊಂಡು ಹೋಗುತ್ತಿರುವಾಗ ವಾಸ್ತವದಲ್ಲಿ ಇಲ್ಲದ ದೆವ್ವ ಪಿಶಾಚಿಗಳನ್ನು ನೆನೆಸಿಕೊಂಡು ಅಂಜತೊಡಗಿದರೆ, ದಾರಿಯ ಇಕ್ಕೆಲದಲ್ಲಿರುವ ಬೇಲಿಯಲ್ಲಿನ ಮರಗಿಡಗಳ ಕೊಂಬೆರೆಂಬೆಗಳೇ ದೆವ್ವದ ಆಕಾರದಲ್ಲಿ ಗೋಚರಿಸಿ ಕಾಡತೊಡಗುತ್ತವೆ;

ಜೀವನದಲ್ಲಿ ತೊಡಕು ಉಂಟಾದಾಗ ಗಟ್ಟಿ ಮನಸ್ಸಿನಿಂದ ಮತ್ತು ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕೇ ಹೊರತು, ಇಲ್ಲಸಲ್ಲದ ಹೆದರಿಕೆಯಿಂದ ತತ್ತರಿಸಬಾರದು.

ಹಸಿವುಳ್ಳನ್ನಕ್ಕ ವ್ಯಾಪಾರ ಬಿಡದು
ಸೀತ ಉಳ್ಳನ್ನಕ್ಕ ಉಪಾಧಿಕೆ ಬಿಡದು
ಮಾತುಳ್ಳನ್ನಕ್ಕ ಬೂಟಾಟಿಕೆ ಬಿಡದು . (1593-287)

( ಹಸಿವು+ಉಳ್ಳ್+ಅನ್ನಕ್ಕ; ಹಸಿವು=ಉಂಡು ತಿಂದು ಕುಡಿದು ಹೊಟ್ಟೆಯನ್ನು ತುಂಬಿಸಿಕೊಳ್ಳುವ ಅಗತ್ಯ. ಜೀವಿಯು ಉಳಿದು ಬೆಳೆದು ಬಾಳುವುದಕ್ಕೆ ಪ್ರತಿನಿತ್ಯವೂ ಹಸಿವನ್ನು ತಣಿಸಿಕೊಳ್ಳಲೇಬೇಕು; ಅನ್ನಕ್ಕ=ವರೆಗೆ/ತನಕ; ಉಳ್ಳನ್ನಕ್ಕ=ಇರುವ ವರೆಗೆ/ಇರುವ ತನಕ;

ವ್ಯಾಪಾರ=ಏನನ್ನಾದರೂ ಕೊಡುವ ತೆಗೆದುಕೊಳ್ಳುವ ವ್ಯವಹಾರವನ್ನು ಇತರರೊಡನೆ ನಡೆಸುವುದು/ಒಂದಲ್ಲ ಒಂದು ಬಗೆಯ ಚಟುವಟಿಕೆಯಲ್ಲಿ/ಕೆಲಸದಲ್ಲಿ ತೊಡಗಿರುವುದು; ಬಿಡು=ತೊರೆ/ತ್ಯಜಿಸು ; ಬಿಡದು=ಬಿಡುವುದಿಲ್ಲ/ಬಿಟ್ಟುಹೋಗುವುದಿಲ್ಲ/ಇದ್ದೇ ಇರುತ್ತದೆ;

ಶೀತ>ಸೀತ; ಸೀತ=ಚಳಿ ಮಳೆ ಗಾಳಿಯಿಂದ ಉಂಟಾಗುವ ತಣ್ಣನೆಯ ಕೊರೆತ/ತಂಡಿ/ನೆಗಡಿ; ಉಪಾಧಿಕೆ=ತೊಂದರೆ/ಹಿಂಸೆ/ಯಾತನೆ; ಮಾತು+ಉಳ್ಳ್+ಅನ್ನಕ್ಕರ; ಬೂಟಾಟಿಕೆ=ನಟನೆ/ಸೋಗು/ತೋರಿಕೆಯ ನಡೆನುಡಿ;

ವ್ಯಕ್ತಿಯು ಜೀವಂತವಾಗಿರುವ ತನಕ ನಿಸರ‍್ಗ ಸಹಜವಾಗಿ ಹಸಿವು ಮತ್ತು ರೋಗರುಜಿನಗಳಿಗೆ ಆತನ ದೇಹ ಒಳಗಾಗುತ್ತಿರುತ್ತದೆ. ಅಂತೆಯೇ ಸಾಮಾಜಿಕವಾಗಿ ಆತ ಇತರರೊಡನೆ ವ್ಯವಹರಿಸುವಾಗ ಸನ್ನಿವೇಶಕ್ಕೆ ತಕ್ಕಂತೆ ಎಲ್ಲಿ ಯಾವಾಗ ಯಾರೊಡನೆ ಹೇಗೆ ಮಾತನಾಡಬೇಕು/ಮಾತನಾಡಬಾರದು ಎಂಬ ಎಚ್ಚರವನ್ನು ಹೊಂದಿರುತ್ತಾನೆ. ಏಕೆಂದರೆ ಮಾತು ಎಂಬುದು ಮನದಲ್ಲಿ ಮಿಡಿಯುವ ಒಳಮಿಡಿತಗಳನ್ನು ಮುಚ್ಚಿಟ್ಟುಕೊಳ್ಳುವ ಇಲ್ಲವೇ ಹೊರಹಾಕುವ ಉಪಕರಣವಾಗಿದೆ.

ಆದ್ದರಿಂದ ಒಬ್ಬ ವ್ಯಕ್ತಿಯು ಆಡುವ ಮಾತುಗಳು ನಿಜವೋ ಸುಳ್ಳೋ ಎಂಬುದನ್ನು ಬೇರೆಯವರು ಹೇಳಲಾಗದು. ವ್ಯಕ್ತಿಯು ತನ್ನ ಅನುಕೂಲಕ್ಕೆ ತಕ್ಕಂತೆ ಮಾತುಗಳನ್ನಾಡುವ ಕುಶಲತೆಯನ್ನು ಹೊಂದಿರುತ್ತಾನೆ . ಆದ್ದರಿಂದಲೇ ಮಾತು ಇರುವ ತನಕ ಬೇರೆಯವರನ್ನು ನಂಬಿಸುವ/ಮರುಳುಗೊಳಿಸುವ ಬೂಟಾಟಿಕೆಯ ನಟನೆಯು ಮಾತಿನೊಡನೆ ಜತೆಗೂಡಿರುತ್ತದೆ.

ಹೂ ಮಿಡಿಯ ಹರಿದು
ಒತ್ತಿ ಹಣ್ಣ ಮಾಡಿಹೆನೆಂದಡೆ
ಹಣ್ಣಾಗಬಲ್ಲುದೆ. (1602-288)

ಹೂ=ಹೂವು/ಕುಸುಮ; ಮಿಡಿ=ಹೀಚು; ಹೂಮಿಡಿ=ಎಳೆಯ ಕಾಯಿ/ಬಲಿಯದ ಚಿಕ್ಕಗಾತ್ರದ ಕಾಯಿ; ಹರಿದು=ಕಿತ್ತು ತಂದು, ಕೀಳು; ಒತ್ತು=ಹಿಸುಕು, ಅದುಮು; ಹಣ್ಣು=ಚೆನ್ನಾಗಿ ಮಾಗಿ ರಸದಿಂದ ತುಂಬಿ ರುಚಿಕರವಾದ ವಸ್ತು ; ಮಾಡು+ಇಹೆನ್+ಎಂದರೆ; ಇಹೆನ್=ಇರುವೆನು; ಮಾಡಿಹೆನ್=ಮಾಡುವೆನು; ಎಂದರೆ=ಎಂದು ಹೇಳಿದರೆ; ಹಣ್ಣು+ಆಗಬಲ್ಲುದೆ; ಆಗಬಲ್ಲುದೆ=ಆಗುತ್ತದೆಯೇ; ಹಣ್ಣಾಗಬಲ್ಲುದೆ=ಹಣ್ಣಾಗುವುದೇ/ಹಣ್ಣಾಗುವುದಿಲ್ಲ;

ಎಳಸು ಕಾಯಿ/ಇನ್ನೂ ಬಲಿಯದ ಹೀಚುಕಾಯನ್ನು ಕಿತ್ತು ತಂದು, ವ್ಯಕ್ತಿಯು ತನ್ನ ಎರಡು ಅಂಗಯ್ ನಡುವೆ ಅದನ್ನು ಇಟ್ಟುಕೊಂಡು ಬಲವಾಗಿ ಅಮುಕುವುದರಿಂದ ಹೀಚುಕಾಯಿಯು ರಸದಿಂದ ತುಂಬಿದ ಹಣ್ಣಾಗುವುದಿಲ್ಲ. ಏಕೆಂದರೆ ಮರ/ಗಿಡದ ಬೇರುಗಳಿಂದ ಸಾರವನ್ನು ಹೀರಿಕೊಂಡು ಕಾಯಿ ದೊಡ್ಡದಾಗುತ್ತ ಬೆಳೆದು, ಕಾಲಕ್ರಮೇಣ ಮಾಗಿ ಹಣ್ಣಾದಾಗ ಮಾತ್ರ ಅದರಲ್ಲಿ ರಸ ತುಂಬುತ್ತದೆ. ಈ ರೀತಿ ಒಂದು ಕಾಯಿ ಹಣ್ಣಾಗಲು ಕಾಲ ಮತ್ತು ನಿಸರ‍್ಗದ ಕ್ರಿಯೆಗಳು ಅಗತ್ಯ;

ಯಾವುದೇ ಒಂದು ಕೆಲಸವನ್ನು ಸರಿಯಾಗಿ ಮಾಡಬೇಕಾದರೆ, ಅದನ್ನು ಹಂತ ಹಂತವಾಗಿ ಮಾಡಬೇಕು. ಹಾಗೆ ಮಾಡದೆ, ಕಯ್ಗೊಂಡ ಕೂಡಲೇ ಮಾಡಿ ಮುಗಿಸಿ ನಲಿವನ್ನು ಪಡೆಯಬೇಕೆಂದು ಆತುರಪಟ್ಟರೆ ಕೆಲಸವು ಹದಗೆಡುತ್ತದೆಯಲ್ಲದೆ , ಅದರಿಂದ ಯಾವ ಪ್ರಯೋಜನವೂ ದೊರೆಯುವುದಿಲ್ಲ.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: