ಕ್ರಿಕೆಟ್ : ನಗೆಯುಕ್ಕಿಸುವ ಕೆಲ ಪ್ರಸಂಗಗಳು

ರಾಮಚಂದ್ರ ಮಹಾರುದ್ರಪ್ಪ.

ಕ್ರಿಕೆಟ್ ತಮಾಶೆ, funny incidents in cricket

ಆಟವೆಂದ ಮೇಲೆ ಗೆಲುವು ಸೋಲು ಸಹಜವೇ. ಗೆಲುವಿಗಾಗಿ ತೀವ್ರವಾದ ಪೈಪೋಟಿ ಏರ‍್ಪಡುವ ಕ್ರಿಕೆಟ್ ಆಟದಲ್ಲಿ ಹಲವಾರು ತಮಾಶೆಯ ಗಟನೆಗಳು ನಡೆದಿವೆ. ಒಬ್ಬರನ್ನೊಬ್ಬರು ರೇಗಿಸುವ ಕ್ಶಣಗಳಿಗೂ ಕ್ರಿಕೆಟ್ ಸಾಕ್ಶಿಯಾಗಿದೆ. ಕೆಲವೊಮ್ಮೆ ಆಟಗಾರರು ಎಲ್ಲೆ ಮೀರಿರುವ ಎತ್ತುಗೆಗಳಿದ್ದರೂ ಕ್ರಿಕೆಟ್ ಆಟ ಬಾಶೆ, ದೇಶಗಳನ್ನು ಮೀರಿ ಆಟಗಾರರ ನಡುವೆ ಒಡನಾಟ, ಸ್ನೇಹ ಬೆಳೆಸುವ ಕೆಲಸವನ್ನೂ ಮಾಡಿದೆ. ಹೀಗೆ ಆಟದ ವೇಳೆ ಹಾಗೂ ಆಟಗಾರರ ನಡುವೆ ಜರುಗಿರುವ ಕೆಲವು ತಮಾಶೆ ಗಟನೆಗಳು ಇಲ್ಲಿವೆ.

1. ಬಾಂಬೆಯಲ್ಲಿ 1974/75 ರಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ನಲ್ಲಿ ಗುಂಡಪ್ಪ ವಿಶ್ವನಾತ್ ಹೋಲ್ಡರ್ ರಿಗೆ ಕ್ಲೀನ್ ಬೌಲ್ಡ್ ಆಗುತ್ತಾರೆ. ದಿನದ ಆಟದಬಳಿಕ ಟೀವಿ ನಿರೂಪಕ ವಿಶಿರನ್ನು “ನೀವು ಔಟಾದ ಚೆಂಡು ಇನ್ ಸ್ವಿಂಗರ್ ಆಗಿತ್ತೇ ಅತವಾ ಔಟ್ ಸ್ವಿಂಗರ್ ಆಗಿತ್ತೇ” ಎಂಬ ಕೇಳ್ವಿ ಕೇಳುತ್ತಾರೆ. ಆಗ ವಿಶಿ ನಸುನಗುತ್ತಾ “ಅದು ನನಗೆ ಗೊತ್ತಾಗಿದ್ದರೆ ನಾನಿನ್ನೂ ಅಲ್ಲಿ ಬ್ಯಾಟ್ ಮಾಡುತ್ತಿರುತ್ತಿದ್ದೆ” ಎಂದು ಮರುತ್ತರ ನೀಡಿದಾಗ ನಿರೂಪಕನಿಗೂ ನಗು ತಡೆಯಲಾಗಲಿಲ್ಲ.

2.1992/93 ರ ಡರ‍್ಬನ್ ಟೆಸ್ಟ್ ನಲ್ಲಿ ಊಟದ ವಿರಾಮದ ನಂತರ ಬಾರತ ತಂಡದ ಎಲ್ಲಾ ಆಟಗಾರರು ಮೈದಾನಕ್ಕೆ ಮರಳುತ್ತಾರೆ. ಇನ್ನೇನು ಆಟಮೊದಲಾಗುವ ಹೊತ್ತಲ್ಲಿ ಕಪಿಲ್ ದೇವ್ ಎಲ್ಲಿ ಎಂದು ಎಲ್ಲರೂ ಹುಡುಕಲಾರಂಬಿಸುತ್ತಾರೆ. ಆಗ ಟವೆಲ್ ಒಂದನ್ನು ಸುತ್ತಿಕೊಂಡು ಕಪಿಲ್ ಡ್ರೆಸಿಂಗ್ ಕೋಣೆಯ ಬಾಲ್ಕನಿ ಇಂದ, ಜಾವಗಲ್ ಶ್ರೀನಾತ್ ರತ್ತ ಕೈ ಮಾಡುತ್ತಿರುವಾಗಲೇ ಶ್ರೀನಾತ್ ರಿಗೆ ಅರಿವಾಗೋದು ‘ಕಪಿಲ್ ಒಗೆದು, ಒಣಗಲೆಂದು ಇಟ್ಟಿದ್ದ ಅವರ ಟ್ರೌಸರ‍್ಸ್ ಅನ್ನು ತನ್ನದೆಂದು ತಿಳಿದು ಹಾಕಿಕೊಂಡು ಬಂದಿದ್ದೇನೆ’ ಎಂದು. ಈ ಗಟನೆ ಬಾರತದ ಎಲ್ಲಾ ಆಟಗಾರರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿತ್ತು.

3. 1983 ರ ವಿಶ್ವಕಪ್ ಗೆಲುವಿನ ನಂತರ ರಾಶ್ಟ್ರಪತಿ ಗ್ಯಾನಿ ಜೇಲ್ ಸಿಂಗ್ ಬಾರತ ತಂಡಕ್ಕೆ ಚಹಾ ಕೂಟ ಒಂದನ್ನು ಆಯೋಜಿಸಿರುತ್ತಾರೆ. ಆ ವೇಳೆ ರಾಶ್ಟ್ರಪತಿಗಳುನಿಮ್ಮ ತಂಡ ಮುಂದೇನು ಮಾಡಲಿದೆ ಎಂದಾಗ ನಾಯಕ ಕಪಿಲ್, ಈಗ ಬಿಡುವು ಇರೋದರಿಂದ ಸ್ಟೇಟ್ಸ್ ಗೆ (ಅಮೇರಿಕ ಎಂಬರ‍್ತದಲ್ಲಿ) ಹೋಗಲಿದ್ದೇವೆ ಎಂದುಹೇಳುತ್ತಾರೆ. ಸ್ಟೇಟ್ಸ್ ಅನ್ನು ತಪ್ಪಾಗಿ ಅರ‍್ತೈಸಿಕೊಂಡ ರಾಶ್ಟ್ರಪತಿಗಳು, “ಒಳ್ಳೇದು, ತುಂಬಾ ಒಳ್ಳೇದು, ಎಲ್ಲಾ ಸ್ಟೇಟ್ಸ್ ಗಳನ್ನು ನೋಡಬೇಕು – ಮಹಾರಾಶ್ಟ್ರ, ಪಂಜಾಬ್, ಕರ‍್ನಾಟಕ, ಉತ್ತರಪ್ರದೇಶ ಹೀಗೆ” ಎನ್ನುತ್ತಾರೆ. ಅವರಿಗೆ ವಿವರಿಸುವ ಗೋಜಿಗೆ ಹೋಗದೆ ಕಪಿಲ್ ನಗುತ್ತಾ ಅವರ ಮಾತಿಗೆ ತಲೆಯಾಡಿಸುತ್ತಾರೆ.

4. ಒಮ್ಮೆ ಬಾರತದ ಆಟಗಾರರನ್ನೆಲ್ಲಾ ನಾಯಕ ಗವಾಸ್ಕರ್ ಪ್ರದಾನಿ ಚೌದರಿ ಚರಣ್ ಸಿಂಗ್ ರಿಗೆ ಪರಿಚಯಿಸುವ ವೇಳೆ ರೋಜರ್ ಬಿನ್ನಿರನ್ನೂ ಪರಿಚಯಿಸುತ್ತಾರೆ. ಬಿನ್ನಿರ ಕೈಕುಲುಕಿದ ನಂತರ ಚರಣ್ ಸಿಂಗ್ ಗವಾಸ್ಕರ್ ರ ಬಳಿ “ವಿದೇಶಿ ಆಟಗಾರರಿಗೆಲ್ಲಾ ನಮ್ಮ ತಂಡದಲ್ಲಿ ಏನು ಕೆಲಸ” ಎನ್ನುತ್ತಾ ಆಶ್ಚರ‍್ಯ ವ್ಯಕ್ತ ಪಡಿಸುತ್ತಾರೆ. ನಂತರ ಬಿನ್ನಿ ಕೂಡ ಬಾರತೀಯ ಆಟಗಾರ ಎಂದು ಪ್ರದಾನಿಗಳಿಗೆ ಮನವರಿಕೆ ಮಾಡಿಸಲು ಗವಾಸ್ಕರ್ ಅವರಿಗೆ ಸ್ವಲ್ಪ ಹೊತ್ತು ಹಿಡಿಯುತ್ತದೆ!

5. 1999/2000 ರ ಆಸ್ಟ್ರೇಲಿಯಾದ ದುರಂತಮಯ ಪ್ರವಾಸದ ಬಳಿಕ ಮುಂಬೈಗೆ ಮರಳಿದ ಅಗರ‍್ಕರ್ ನೆಟ್ಸ್ ಅಬ್ಯಾಸದ ವೇಳೆ ಕೊಂಚ ಕುಂಟುತ್ತಿರುವುದನ್ನುಗಮನಿಸಿದ ಬಾರತದ ಒಬ್ಬ ಮಾಜಿ ಆಟಗಾರ ಏನಾಯಿತು ಎನ್ನುತ್ತಾರೆ. ಆಗ ಅಗರ‍್ಕರ್ “ಆಸ್ಟ್ರೇಲಿಯಾ ಪ್ರವಾಸದಲ್ಲಿ ಎರಡನೇ ರನ್ ಓಡುವಾಗ ಒಮ್ಮೆ ಜಾರಿಬಿದ್ದಿದ್ದೆ, ಅದು ಇನ್ನೂ ಕಾಡುತ್ತಿದೆ” ಎಂದಾಗ ಮರುಕ್ಶಣವೇ ಆ ಮಾಜಿ ಆಟಗಾರ “ಎರಡನೇ ರನ್ನೇ? ಆ ಪ್ರವಾಸದಲ್ಲಿ ನೀವು ಮೊದಲ ರನ್ ಎಲ್ಲಿ ಗಳಿಸಿದ್ದೀರಿಹೇಳಿ” ಎಂದು ಚೇಡಿಸುತ್ತಾರೆ.

ಗಮನಿಸಬೇಕಾದದ್ದು :  ಆ ಪ್ರವಾಸದಲ್ಲಿ ಅಗರ‍್ಕರ್ ಸತತ 5 ಬಾರಿ ಸೊನ್ನೆಗೆ ಔಟ್ ಆಗಿ ತೀವ್ರ ಮುಜುಗರಕ್ಕೊಳಗಾಗಿರುತ್ತಾರೆ.

5. ಮುಂಬೈ ಲೀಗ್ ಪಂದ್ಯಗಳಲ್ಲಿ ಆಡುವ ಒಬ್ಬ ನಾಯಕನಿಗೆ ಬಿಕ್ಕಲಿನ ಸಮಸ್ಯೆ ಇರುತ್ತದೆ. ಪಂದ್ಯವೊಂದರ ಟಾಸ್ ವೇಳೆ ಎದುರಾಳಿ ನಾಯಕ ನಾಣ್ಯವನ್ನು ಟಾಸ್ ಮಾಡಿದಾಗ ‘ಆ ಆ ಆ ಆ’ ಎಂದು ಬಿಕ್ಕುತ್ತಾ, ಕಡೆಗೆ ನಾಣ್ಯ ಒಂದು ಕಡೆ ನಿಂತಾಗ ಅದು ಹೆಡ್ಸ್ ಎಂದು ಕಚಿತ ಪಡಿಸಿಕೊಂಡು “ಆ  ಹೆಡ್ಸ್ ನಾವು ಬ್ಯಾಟ್ಮಾಡ್ತೀವಿ” ಎಂದು ಎದುರಾಳಿಯ ಕೈಕುಲುಕಿ ಬ್ಯಾಟಿಂಗ್ ಗೆ ಸಜ್ಜಾಗಲು ಹೊರಡುತ್ತಾನೆ.

6. ಬಾಂಬೆ ತಂಡದ ವೇಗದ ಬೌಲರ್ ರಾಜು ಕುಲ್ಕರ‍್ಣಿ 1985 ರಲ್ಲಿ ಸ್ಕಾಟಿಶ್ ಲೀಗ್ ನಲ್ಲಿ ಆಡಲು ಹೋಗಿರುತ್ತಾರೆ. ಪಂದ್ಯವೊಂದರಲ್ಲಿ ಅಲ್ಲಿನ ಸ್ತಳೀಯ ಬ್ಯಾಟ್ಸ್ಮನ್ ಒಬ್ಬನ ಮೇಲೆ ಬೌನ್ಸರ್ ಪ್ರಯೋಗ ಮಾಡುತ್ತಾರೆ. ಚೆಂಡು ಬ್ಯಾಟ್ಸ್ಮನ್ ಗೆ ಬಡಿದು ಮೂಗಿನಿಂದ ರಕ್ತ ಹರಿಯಲು ಶುರುವಾಗುತ್ತದೆ. ಕೂಡಲೇ ಹೆಂಗಸೊಬ್ಬಳು ಮೈದಾನದೊಳಕ್ಕೆ ನುಗ್ಗಿ ಬೌಲರ್ ರಾಜು ಅವರ ಕಪಾಳಕ್ಕೆ ಒಂದು ಬಿಗಿದು “ನನ್ನ ಗಂಡನ್ನನ್ನು ಕೊಲ್ಲಬೇಕೆಂದ್ದಿದ್ದೀಯ”? ಎನ್ನುತ್ತಾ, ಮತ್ತೊಮ್ಮೆ ಇನ್ನೊಂದು ಕಪಾಳಕ್ಕೆ ಹೊಡೆಯಲು ಮುಂದಾದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬ್ಯಾಟ್ಸ್ಮನ್ ಎದ್ದು ಬಂದು ಆಕೆಯನ್ನು ತಡೆಯುತ್ತಾನೆ!

7. ಮಹಾರಾಶ್ಟ್ರದ ಒಬ್ಬ ರಣಜಿ ವೇಗಿ ಇಂಗ್ಲೆಂಡ್ ನಲ್ಲಿ ತರಬೇತಿ ಮುಗಿಸಿಕೊಂಡು ಬಂದ ಮೇಲೆ ರಣಜಿ ತಂಡದ ಸಹ ಆಟಗಾರರು ಅವನನ್ನು ಕುತೂಹಲದಿಂದ ಅಲ್ಲಿನ ಬದುಕು ಹಾಗೂ ಜನರ ಬಗ್ಗೆ ಕೇಳಿದಾಗ, ಆ ವೇಗಿ “ಅಲ್ಲಿ ಎಂತಾ ಪವಾಡ ಗೊತ್ತೇ ? ಅಲ್ಲಿನ ಮಕ್ಕಳು ನಮ್ಮ ಮಕ್ಕಳಂತಲ್ಲ. ಮೂರ‍್ನಾಲ್ಕು ವರ‍್ಶದ ಮಕ್ಕಳು ಕೂಡ ನಿರರ‍್ಗಳವಾಗಿ ಇಂಗ್ಲಿಶ್ ಮಾತಾಡುತ್ತಾರೆ” ಎನ್ನುತ್ತಾನೆ!

8. ಹ್ಯಾಂಪ್ಶೈರ್ ಕೌಂಟಿ ತಂಡ ಪ್ರವಾಸಿ ಬಾರತ ತಂಡದ ಎದುರು ಸೌತ್ ಹ್ಯಾಂಪ್ಟನ್ ನ ಒಂದು ಕಳಪೆ ಪಿಚ್ ಮೇಲೆ ಅಬ್ಯಾಸ ಪಂದ್ಯ ಆಡುವ ವೇಳೆ ಬ್ಯಾಟಿಂಗ್ ಗೆ ಸಜ್ಜಾಗಿದ್ದ ಜಿಂಬಾಬ್ವೆಯ ನೀಲ್ ಜಾನ್ಸನ್ ಒತ್ತಡವನ್ನು ಕೊಂಚ ಮಟ್ಟಿಗೆ ತಣಿಸಿಕೊಳ್ಳಲು ಒಂದು ಸಿಗರೇಟ್ ಹಚ್ಚಿಕೊಂಡು ಸೇದಲು ಮುಂದಾದಾಗ ಅವರ ಬ್ಯಾಟಿಂಗ್ ಸರದಿ ಬರುತ್ತದೆ. ಆಗ ತಂಡದ ಆಟಗಾರನೊಬ್ಬನಿಗೆ ಸಿಗರೇಟ್ ಕೊಟ್ಟು “ಇದನ್ನು ಹೀಗೇ ಇಟ್ಟುಕೊ, ಆರಿಸಬೇಡ. ಈ ಪಿಚ್ ಮೇಲೆ ನಾನೆಶ್ಟು ಹೊತ್ತು ಬ್ಯಾಟ್ ಮಾಡುತ್ತೀನೋ ಗೊತ್ತಿಲ್ಲ” ಎಂದು ಬ್ಯಾಟಿಂಗ್ ಗೆ ಹೋಗಿ, ಎದುರಿಸಿದ ಮೊದಲ ಚೆಂಡಲ್ಲೇ ಔಟ್ ಆಗಿ, ಹಿಂದಿರುಗಿ ಇನ್ನೂ ಉರಿಯುತ್ತಿದ್ದ ಅದೇ ಸಿಗರೇಟ್ ಅನ್ನು ಹಿಂಪಡೆದು ಸೇದುತ್ತಾರೆ !!

9. ಸುರಿಂದರ್ ಅಮರನಾತ್ 1977/78 ರ ನಡುವಿನಲ್ಲಿ ಗಾಯಗೊಂಡ್ಡಿದ್ದ ಆಟಗಾರನ ಬದಲಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋದಾಗ ನಾಯಕ ಬಿಶನ್ ಸಿಂಗ್ ಬೇಡಿ ಅವರನ್ನು ಎಲ್ಲರಿಗೂ ಪರಿಚಯ ಮಾಡಿಸಲೆಂದು  ಆಸ್ಟ್ರೇಲಿಯಾದ ಡ್ರೆಸಿಂಗ್ ಕೋಣೆಗೆ ಕರೆದೊಯ್ಯುತ್ತಾರೆ. ಅಲ್ಲಿದ್ದ ಒಬ್ಬ ಅದಿಕಾರಿ ಅಮರನಾತ್ ರಿಗೆ “Have you come here to die” ಎಂದಾಗ ಗಾಬರಿಗೊಂಡು ಇಲ್ಲ ಎನ್ನುತ್ತಾರೆ. ಈ ಮಾತುಕತೆಯನ್ನು ಆಲಿಸುತ್ತಿದ್ದ ಬೇಡಿ, ನಡುವೆ ಪ್ರವೇಶಿಸಿ ಗಲಿಬಿಲಿಗೊಂಡಿದ್ದ ಅಮರನಾತ್ ರಿಗೆ ಬಿಡಿಸಿ ಹೇಳುತ್ತಾರೆ, ಅವರು ಕೇಳಿದ್ದು “Have you come here today” ಎಂದು. ‘ಆಸ್ಟ್ರೇಲಿಯನ್ನರ ಇಂಗ್ಲಿಶ್ ಉಚ್ಚಾರಣೆ ಹೀಗೆ, ಕಾಲಕ್ರಮೇಣ ನಿಮಗೆ ತಿಳಿಯುತ್ತೆ’ ಎಂದು ಹೇಳಿದ ಮೇಲೇ ಅಮರನಾತ್ ನಿರಾಳರಾಗುತ್ತಾರೆ.

10. ಕೊಂಚ ಮಟ್ಟಿಗೆ ಅಂಗೈ ನೋಡಿ ಬವಿಶ್ಯ ಹೇಳುವ ಚಳಕವನ್ನು ತಿಳಿದ್ದಿದ್ದ ಮುಂಬೈನ ವಾಸು ಪರಾಂಜಪೆ ಒಮ್ಮೆ ಕ್ರಿಶ್ಣಮಾಚಾರಿ ಶ್ರೀಕಾಂತ್ ರ ಅಂಗೈ ನೋಡಿಬೆರಗಾಗುತ್ತಾರೆ. ಆಗ ಶ್ರೀಕಾಂತ್ “ನೋಡಿದಿರಾ, ನನ್ನ ಅಂಗೈಯಲ್ಲಿ ಗೆರೆಗಳಿಲ್ಲ, ಹಾಗಾಗಿ ನನ್ನ ಬದುಕಲ್ಲಿ ಯಾವುದೇ ತೊಂದರೆಯಿಲ್ಲ” ಎಂದಾಗ ಪರಾಂಜಪೆ “ಹೌದೌದು ನಿಮ್ಮ ಮಾತು ದಿಟ. ನಿಮಗ್ಯಾವ ತೊಂದರೆ ಇರಲು ಸಾದ್ಯ ಹೇಳಿ ? ತೊಂದರೆ ಎಲ್ಲಾ ನಿಮ್ಮ ಬ್ಯಾಟಿಂಗ್ ನೋಡುವವರಿಗೆ ಮಾತ್ರ” ಎಂದು ಕಿಚಾಯಿಸುತ್ತಾರೆ.

11. 1975/76 ರ ನ್ಯೂಜಿಲ್ಯಾಂಡ್ ಪ್ರವಾಸದ ಟೆಸ್ಟ್ ಪಂದ್ಯವೊಂದರಲ್ಲಿ ಚಂದ್ರಶೇಕರ್ ರ ಬೌಲಿಂಗ್ ನಲ್ಲಿ ಸಾಕಶ್ಟು ಬಾರಿ ಔಟ್ ಇದ್ದ ಎಲ್.ಬಿ.ಡಬ್ಲ್ಯೂ ಮನವಿಗಳನ್ನು ಪುರಸ್ಕರಿಸದೇ ತವರಿನ ಅಂಪೈರ್ ಗಳು ಬಾರತದ ಆಟಗಾರರ ತಾಳ್ಮೆಯನ್ನು ಕೆಣಕುತ್ತಾರೆ. ಕಡೆಗೆ ಅದೇ ಸ್ಪೆಲ್ ನ ಒಂದು ಓವರ್ ನಲ್ಲಿ ಚಂದ್ರ, ಕೆನ್ ವಾಡ್ಸ್ವರ‍್ತ್ ರನ್ನು  ಕ್ಲೀನ್ ಬೌಲ್ಡ್ ಮಾಡಿ ‘ಹೌಸ್ ದಟ್’ ಎಂದು ಮನವಿ ಸಲ್ಲಿಸುತ್ತಾರೆ. ಈ ಚೇಶ್ಟೆ ಇಂದ ಸಿಟ್ಟಾದ ಅಂಪೈರ್ “ಅವರು ಬೌಲ್ಡ್ ಆಗಿದ್ದು ಕಣ್ಣಿಗೆ ಕಾಣಿಸಲ್ಲಿಲ್ಲವೇ. ಮತ್ಯಾಕೆ ಮನವಿ” ಎನ್ನುತ್ತಾರೆ. ಆಗ ಚಂದ್ರ “ಅವರು ಬೌಲ್ಡ್ ಆಗಿರೋದು ಗೊತ್ತು. ಆದರೆ ಅವರು ಔಟ್ ಆಗಿದ್ದಾರೆಯೇ” ?? ಎಂದು ಕೇಳಿ ತಂಡದ ಸದಸ್ಯರನ್ನೆಲ್ಲಾ ನಗೆಗಡಲಲ್ಲಿ ಮುಳುಗಿಸುತ್ತಾರೆ.

12. 1990 ರಲ್ಲಿ ನೇರುಲಿಗರಾಗಿ (Commentator) ಬಾರತದ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಸುನೀಲ್ ಗವಾಸ್ಕರ್ ರಿಗೆ ಇಂಗ್ಲೆಂಡ್ ನ ದಿಗ್ಗಜ ವೇಗದ ಬೌಲರ್ ಪ್ರೆಡ್ ಟ್ರೂಮೆನ್ ರನ್ನು ಬೇಟಿ ಆಗುವ ಅವಕಾಶ ಸಿಗುತ್ತದೆ. ಆಗ ಗವಾಸ್ಕರ್ ಟ್ರೂಮೆನ್ ರನ್ನು “ನೀವು ಇಂಗ್ಲೆಂಡ್ ನಲ್ಲಿ ಬಾರತದ ಎದುರು 1952 ರಲ್ಲಿ ಟೆಸ್ಟ್ ಸರಣಿಯನ್ನು ಆಡಿದ್ದಿರಿ. ಆ ತಂಡದಲ್ಲಿ ನನ್ನ ಮಾವ ಮಾದವ್ ಮಂತ್ರಿ ಕೂಡ ಇದ್ದರು. ನಿಮಗೆ ಅವರ ನೆನಪು ಇದಿಯೇ” ಎಂದು ಕೇಳಿದಾಗ ಟ್ರೂಮೆನ್ “ಇಲ್ಲ, ನೆನಪಿಲ್ಲ, ನನಗೆ ಆ ತಂಡದ ಯಾವುದೇ ಆಟಗಾರ ನೆನಪಿಲ್ಲ, ಯಾಕಂದರೆ ಆ ಸರಣಿಯಲ್ಲಿ ನಾನು ಬೌಲ್ ಮಾಡುವಾಗ ಯೊವೊಬ್ಬ ಬಾರತೀಯ ಆಟಗಾರನೂ ಕ್ರೀಸ್ ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ” ಎನ್ನುತ್ತಾರೆ. ಅದನ್ನು ಕೇಳಿ ಗವಾಸ್ಕಾರ್ ಕೂಡ ನಕ್ಕು ಸುಮ್ಮನಾಗುತ್ತಾರೆ.

13. 1969 ರ ಬಾರತದ ಪ್ರವಾಸಕ್ಕೆ ಬಂದ್ದಿದ್ದ ಆಸ್ಟ್ರೇಲಿಯಾ ತಂಡ ದಕ್ಶಿಣ ವಲಯದ ಎದುರು ಅಬ್ಯಾಸ ಪಂದ್ಯದಲ್ಲೇ ಸೋಲುವ ಬೀತಿಯಲ್ಲಿರುತ್ತಾರೆ. ಕೊಂಚಹೊತ್ತು ಹೋರಾಡಿದ ಕೀಪರ್ ರೇ ಜೋರ‍್ಡನ್ ಪ್ರಸನ್ನ ರ ಬೌಲಿಂಗ್ ನಲ್ಲಿ ಬ್ಯಾಟ್-ಪ್ಯಾಡ್ ಕ್ಯಾಚಿತ್ತು ಔಟ್ ಆಗುತ್ತಾರೆ. ಅಂಪೈರ್ ತೀರ‍್ಮಾನದಿಂದ ಅಸಮಾದಾನಗೊಂಡ ಜೋರ‍್ಡನ್ ಅದು ಹೇಗೆ ಔಟ್ ಎಂದು ಕೇಳುತ್ತಾರೆ, ಆಗ ಅಂಪೈರ್ ನೀವು ಕ್ಯಾಚ್ ಔಟ್ ಆಗಿದ್ದೀರಿ ಎನ್ನುತ್ತಾರೆ. ಕೂಡಲೇ ಜೋರ‍್ಡನ್, ಅದು ಸಾದ್ಯವೇ ಇಲ್ಲ, ಚೆಂಡು ನನ್ನ ಬ್ಯಾಟನ್ನು ತಾಕಿಲ್ಲ ಎಂದು ವಿವರಣೆ ಕೊಟ್ಟಾಗ, ಜಾಣ ಅಂಪೈರ್ “ಹಾಗಾದರೆ ನೀವು LBW, ಯಾವುದು ಬೇಕು ? ಕ್ಯಾಚ್ ಅತವಾ LBW, ನೀವೇ ಆರಿಸಿಕೊಳ್ಳಿ” ಎನ್ನುತ್ತಾರೆ.

14. 80ರ ದಶಕದ ಟೆಸ್ಟ್ ಪಂದ್ಯವೊಂದರಲ್ಲಿ ವಿಶ್ವನಾತ್ ಇಲ್ಲದ ಮದ್ಯಮ ಕ್ರಮಾಂಕಕ್ಕೆ ಕೊಂಚ ಬಲ ತುಂಬುವ ಉದ್ದೇಶದಿಂದ ನಾಯಕ ಗಾವಸ್ಕರ್ ಆರಂಬಿಕ ಬ್ಯಾಟ್ಸ್ಮನ್ ಆಗಿ ಆಡದೆ ನಾಲ್ಕನೇ ಕ್ರಮಾಂಕದಲ್ಲಿ ಆಡುವ ತೀರ‍್ಮಾನ ಕೈಗೊಳ್ಳುತ್ತಾರೆ. ಆದರೆ ಅವರ ದುರದ್ರುಶ್ಟ, ಮೊದಲ ಓವರಿನಲ್ಲೇ ಎರಡು ವಿಕೆಟ್ ಗಳು ಉರುಳಿ ಗಾವಸ್ಕರ್ ಪಂದ್ಯದ ನಾಲ್ಕನೇ ಎಸೆತವನ್ನೇ ಎದುರಿಸುವ ಪ್ರಮೇಯ ಬರುತ್ತದೆ. ಮೊದಲ ಓವರ್ ನಂತರ ಬದಿ ಬದಲಿಸುವ ವೇಳೆ ವಿವಿಯನ್ ರಿಚರ‍್ಡ್ಸ್ ಚ್ಯೂಯಿಂಗ್ ಗಮ್ ಅಗಿಯುತ್ತಾ ತಮ್ಮ ಎಂದಿನ ವಿಶಿಶ್ಟ ವಿಂಡೀಸ್ ಗತ್ತಿನಲ್ಲಿ ಗಾವಸ್ಕರ್ ರ ಬಳಿ ಬಂದು “ಹೇ ಸನ್ನಿ, ನೀವೆಲ್ಲಿ ಬ್ಯಾಟ್ ಮಾಡಿದರೂ ಅಶ್ಟೇ, ತಂಡದ ಸ್ಕೋರ್ ಇನ್ನೂ ಸೊನ್ನೆಯೇ ಇರುತ್ತದೆ” ಎಂದಾಗ ಗಾವಸ್ಕರ್ ಕೂಡ ನಗುತ್ತಾರೆ.

15. 1991/92 ರ ಸಿಡ್ನಿ ಟೆಸ್ಟ್ ನಲ್ಲಿ ರವಿ ಶಾಸ್ತ್ರಿ ದ್ವಿಶತಕದ ಬಳಿ ಬಂದಿರುತ್ತಾರೆ. ಆಗ ವೇಗದ ಒಂದು ರನ್ ಓಡಿ ಪೂರೈಸುತ್ತಾರೆ. ಬದಲಿ ಆಟಗಾರನಾಗಿ ಪೀಲ್ಡಿಂಗ್ ಗೆ ಬಂದಿದ್ದ ಮೈಕ್ ವೈಟ್ನೀ ಚೆಂಡು ಕೈಗೆತ್ತಿಕೊಂಡು “ಇನ್ನೊಮ್ಮೆ ಹಾಗೆ ಓಡಿ ನೋಡು, ನಿನ್ನ ತಲೆಗೆ ಗುರಿ ಇಟ್ಟು ಎಸೆಯುವೆ” ಎನ್ನುತ್ತಾರೆ. ಆಗ ರವಿ ಶಾಸ್ತ್ರಿ ಅವರದೇ ದಾಟಿಯಲ್ಲಿ “ನೀನು ಮಾತನಾಡುವಶ್ಟು ಚೆನ್ನಾಗಿ ನಿನಗೆ ಬೌಲ್ ಮಾಡಲು ಬಂದ್ದಿದ್ದರೆ ಇಂದು 12ನೇ ಆಟಗಾರನಾಗಿ ಇನ್ನೊಬ್ಬರ ಬದಲಿಗೆ ಬಂದು ಪೀಲ್ಡಿಂಗ್ ಮಾಡುವ ಪ್ರಮೇಯ ನಿನಗೆ ಬರುತ್ತಿರಲಿಲ್ಲ” ಎಂದಾಗ ಆಸ್ಟ್ರೇಲಿಯಾದ ಆಟಗಾರರು ಕೂಡ ನಗುತ್ತಾರೆ.

16. ಕೌಂಟಿ ಪಂದ್ಯವೊಂದರಲ್ಲಿ ಗ್ರೇಗ್ ತಾಮಸ್ ವಿವಿಯನ್ ರಿಚರ‍್ಡ್ಸ್ ರನ್ನು ಎರಡು ಬಾರಿ ಬೀಟ್ ಮಾಡಿ, ರೇಗಿಸಲು “ಚೆಂಡು ಕೆಂಪಗಿದೆ ಮತ್ತು 5 ಔನ್ಸ್ ತೂಕದ್ದಾಗಿದೆ, ಹೊಡೆದು ನೋಡು” ಎನ್ನುತ್ತಾರೆ. ಈ ಮಾತುಗಳಿಂದ ಕೆರಳಿದೆ ರಿಚರ‍್ಡ್ಸ್, ಮುಂದಿನ ಎಸೆತವನ್ನೇ ಮೈದಾನದಿಂದ ಆಚೆಗೆ ಅಟ್ಟಿ “ಚೆಂಡು ಹೇಗಿದೆ ಎಂದು ಗೊತ್ತಲ್ಲವೇ? ಈಗ ಹೋಗಿ ಹುಡುಕಿಕೊಂಡು ಬಾ” ಎನ್ನುತ್ತಾರೆ.

17. ಆಸ್ಟ್ರೇಲಿಯಾದ ಮಾರ‍್ಕ್ ವಾ ಇಂಗ್ಲೆಂಡ್ ನ ಜೇಮ್ಸ್ ಓರ‍್ಮಂಡ್ ರಿಗೆ ಆಟದ ವೇಳೆ “ಇಂಗ್ಲೆಂಡ್ ಗೆ ಆಡುವಶ್ಟು ಯೋಗ್ಯತೆ ನಿನಗಿಲ್ಲ” ಎಂದಾಗ ಓರ‍್ಮಂಡ್ ಕೂಡ ಹಿಂಜರಿಯದೆ “ಕಡೇ ಪಕ್ಶ ನಾನು ನನ್ನ ಕುಟುಂಬದ ಅತ್ಯುತ್ತಮ ಆಟಗಾರ” ಎನ್ನುತ್ತಾರೆ.

ಗಮನಿಸಬೇಕಾದದ್ದು : ಮಾರ‍್ಕ್ ವಾ ಅವರ ಅಣ್ಣ ಸ್ಟೀವ್ ವಾ ಕ್ರಿಕೆಟ್ ದಂತಕತೆ.

19. ಬಿ.ಎಸ್ ಚಂದ್ರಶೇಕರ್, ಕಿರ‍್ಮಾನಿ ಮತ್ತು ವಿಶ್ವನಾತ್ 1975/76 ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ತಡರಾತ್ರಿ ವಿಂಡ್ವರ‍್ಡ್ ದ್ವೀಪ ತಲುಪುತ್ತಾರೆ. ಊಟಕ್ಕೆಂದು ಹತ್ತಿರದ ರೆಸ್ಟೋರೆಂಟ್ ಒಂದಕ್ಕೆ ಹೋದಾಗ ಅಲ್ಲಿ “Mountain Chicken and Rice” ಮಾತ್ರ ಉಳಿದಿದೆ ಎನ್ನುತ್ತಾರೆ. ಹಸಿವೆ ತಾಳಲಾರದೆ, ಸರಿ ತಿನ್ನಲು ಏನೋಒಂದು ಸಿಕ್ಕಿತ್ತಲ್ಲಾ ಎಂದು ಉಂಡು ಅದರ ರುಚಿಗೆ ಮಾರುಹೋಗುತ್ತಾರೆ. ಮತ್ತೊಮ್ಮೆ ತಿನ್ನಬೇಕೆನಿಸಿ ಮೂವರೂ ಮಾರನೇ ದಿನವೂ ಅದೇ ರೆಸ್ಟೋರೆಂಟ್ ಗೆ ಹೋಗುತ್ತಾರೆ. ಆಗ ಕುತೂಹಲ ತಾಳಲಾರದೆ “Mountain Chicken and Rice” ಗೆ ಆ ಹೆಸರು ಹೇಗೆ ಬಂತು? ಮಾಡುವ ಬಗೆ ಹೇಗೆ? ಎಂದು ಒಬ್ಬ ವೇಟರ್ ಬಳಿ ಕೇಳಿದಾಗ, ಅವನು “ಅವು Mountain ಗಳಲ್ಲಿ ಸಿಗುತ್ತವೆ” ಹಾಗಾಗಿ ಆ ಹೆಸರು ಎನ್ನುತ್ತಾನೆ. ಇವರಿಗೆ ಕುತೂಹಲ ಇನ್ನೂ ಹೆಚ್ಚಾಗಿ ಅವು ನೋಡಲು ಹೇಗಿರುತ್ತವೆ ಎಂದು ಕೇಳುತ್ತಾರೆ. ಆಗ ಅವನು ವಿಂಡೀಸ್ ನ ವಿಶಿಶ್ಟ ಗತ್ತಿನಲ್ಲಿ “ಮ್ಯಾನ್, ನೀವು ಕಪ್ಪೆಗಳನ್ನು ನೋಡಿಲ್ಲವೇ” ಎಂದಾಗ ಮೂವರಿಗೂ ತಾವು ಹಿಂದಿನ ದಿನ ತಿಂದದ್ದು ಕಪ್ಪೆ ಎಂದು ಅರಿವಾಗಿ ಹೊಟ್ಟೆ ತೊಳೆಸಿದಂತಾಗುತ್ತದೆ. ಮುಂದೆ ಆ ಪ್ರವಾಸದಾದ್ಯಂತ ‘chicken’ ಹೆಸರಿನ ಯಾವ ಬಗೆಯ ತಿನಿಸನ್ನು ಮೂವರೂ ಮೂಸಿ ನೋಡಲೂ ಸಹ ಹೋಗುವುದಿಲ್ಲ.

20. ಒಮ್ಮೆ ಬಾರತದ ನಾಯಕ ಪಟೌಡಿ, ತಂಡದ ಕೆಲವು ಆಟಗಾರರನ್ನು ಬೋಪಾಲ್ ಗೆ ಪ್ರದರ‍್ಶನ ಪಂದ್ಯವೊಂದನ್ನಾಡಲು ಕರೆಸಿಕೊಂಡಿರುತ್ತಾರೆ. ಆಗ ಬಿಡುವಿನ ದಿನ ವಿಶ್ವನಾತ್, ಪ್ರಸನ್ನ ಜೊತೆ ಇನ್ನೂ ಕೆಲವು ಆಟಗಾರರು ಜೀಪೊಂದರಲ್ಲಿ ಕಾಡಿಗೆ ಬೇಟೆಗೆಂದು ಹೊರಡುತ್ತಾರೆ. ಆಗ ಕಾಡಿನಲ್ಲಿ ಗುಂಡು ಹಾರಿಸುತ್ತಾ ಬಂದ ಡಕಾಯಿತರು ವಿಶ್ವನಾತ್ ಹಾಗೂ ಪ್ರಸನ್ನರನ್ನು ಸೆರೆ ಹಿಡಿರು “ನಿಮ್ಮನ್ನು ಒತ್ತೆಯಾಳುವಾಗಿ ಇರಿಸಿಕೊಂಡಿದ್ದೇವೆ, ಯಾರದರು ಬಂದು ದುಡ್ಡು ಕೊಟ್ಟರಶ್ಟೇ ನಿಮ್ಮನ್ನು ಬಿಡುತ್ತೇವೆ” ಎಂದು ಅವರನ್ನು ಮರಕ್ಕೆ ಕಟ್ಟಿ ಹಾಕುತ್ತಾರೆ. ಆ ವೇಳೆ ಗುಂಪಿನಿಂದ ಒಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವನನ್ನು ಗುಂಡಿನಿಂದ ಸುಡುತ್ತಾರೆ. ಇದನ್ನು ಕಂಡೊಡನೆ ವಿಶಿ ನಡುಗಿ ಹೋಗುತ್ತಾರೆ. ಅಳುತ್ತಾ ಅವರ ಬಳಿ “ನಾನು ವಿಶ್ವನಾತ್ ಎಂದು, ಕ್ರಿಕೆಟ್ ಆಟಗಾರ. ದೇಶಕ್ಕೆ ನನ್ನಅವಶ್ಯಕೆತೆ ಇದೆ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ” ಎಂದು ಪರಿಪರಿಯಾಗಿ ಕೇಳಿಕೊಂಡಾಗ, ಕ್ರಿಕೆಟ್ ಅಂದರೆ ಏನೆಂದು ಡಕಾಯಿತರು ಕೇಳುತ್ತಾರೆ. ಆಗ ವಿಶಿ ಇನ್ನಶ್ಟು ಪೇಚಿಗೆ ಒಳಗಾಗುತ್ತಾರೆ. ನಂತರ ಪಟೌಡಿ ಅವರು ಸಮಯಕ್ಕೆ ಸರಿಯಾಗಿ ಬಂದು ದುಡ್ಡು ಕೊಟ್ಟು ಅವರನ್ನು ಬಿಡಿಸಿಕೊಳ್ಳುತ್ತಾರೆ. ಹೊರಡುವ ವೇಳೆ ಗುಂಡೇಟು ತಿಂದು ಸತ್ತು ಬಿದ್ದಿದ್ದವ ಎದ್ದಾಗಲೇ ವಿಶಿ ಅವರಿಗೆ ತಿಳಿಯೋದು ಇವರೆಲ್ಲಾ ಪಟೌಡಿಯವರ ಕೆಲಸಗಾರರು ಮತ್ತು ಇದು ಪಟೌಡಿ ಅವರು ತಮಾಶೆಗೆಂದು ಮಾಡಿದ ‘ನಾಟಕ’ ಎಂದು. ಈ ವಿಶಯ ಪ್ರಸನ್ನರಿಗೆ ಮೊದಲೇ ಗೊತ್ತಿದ್ದರೂ ವಿಶಿ ಅವರಿಗೆ ಹೇಳದಂತೆ ಪಟೌಡಿ ತಾಕೀತು ಮಾಡಿರುತ್ತಾರೆ. ಆದರೆ ದಿಟವನ್ನೆಲ್ಲಾ ಅರಿತ ಮೇಲೂ ಈ ದಿಗ್ಬ್ರಮೆಯಿಂದ ಸುದಾರಿಸಿಕೊಳ್ಳಲು ವಿಶ್ವನಾತ್ ರಿಗೆ ಹಲವು ದಿನಗಳೇ ಹಿಡಿಯುತ್ತದೆ.

( ಚಿತ್ರಸೆಲೆ : sportsshow.net )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: