ಎರಪಲ್ಲಿ ಪ್ರಸನ್ನ – ಕ್ರಿಕೆಟ್ ಜಗತ್ತು ಕಂಡ ಮೇರು ಸ್ಪಿನ್ ಬೌಲರ್

ರಾಮಚಂದ್ರ ಮಹಾರುದ್ರಪ್ಪ.

ಎರಪಲ್ಲಿ ಪ್ರಸನ್ನ, Erapalli Prasanna

ಮೈಸೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಪ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ 60 ರ ದಶಕದಲ್ಲಿ ಓದುತ್ತಿದ್ದ ಹುಡುಗನೊಬ್ಬ, ಅಲ್ಲಿನ್ನೂ ಲ್ಯಾಬ್ ಏರ‍್ಪಾಡು ಇಲ್ಲದುದರಿಂದ ಬೆಂಗಳೂರಿನ ಯೂನಿವರ‍್ಸಿಟಿ ಕಾಲೇಜ್ ಆಪ್ ಇಂಜಿನಿಯರಿಂಗ್ ಗೆ ಬಂದು, ಅಲ್ಲಿ ತನ್ನ ಪ್ರಯೋಗಗಳನ್ನು ಮಾಡುತ್ತಿರುತ್ತಾನೆ. ಅದೇ ಹೊತ್ತಿಗೆ ಮೈಸೂರು ಕ್ರಿಕೆಟ್ ಸಂಸ್ತೆಯ ಕಾರ‍್ಯದರ‍್ಶಿಯಾದ ಎಮ್. ಚಿನ್ನಸ್ವಾಮಿ ಅವರಿಂದ ಕೂಡಲೇ ತಮ್ಮನ್ನು ಬಂದು ನೋಡುವಂತೆ ಪತ್ರವೊಂದು ಆ ಹುಡುಗನ ಕೈ ಸೇರುತ್ತದೆ. ಅದಾಗಲೇ ಬಾರತದ ಪರ ಒಂದು ಟೆಸ್ಟ್ ಪಂದ್ಯವನ್ನಾಡಿ ಜನರಿಂದ ಕೊಂಚ ಮಟ್ಟಿಗೆ ಗುರುತಿಸಲ್ಪಡುತ್ತಿದ್ದ ಆ ಹುಡುಗನಿಗೆ ಲ್ಯಾಬ್ ನಲ್ಲಿದ್ದ ಕಲಿಸುಗರಾದ ಗುಂಡೂ ರಾಯರು ಒಡನೇ ಹೊರಡಲು ಬಿಡದೆ, ಪ್ರಯೋಗ ಮುಗಿಸಿಯೇ ಹೋಗುವಂತೆ ತಾಕೀತು ಮಾಡುತ್ತಾರೆ. ಹುಡುಗನಿಗೆ ಅವರ ಮಾತನ್ನು ಮೀರಲಾಗದೆ ಪ್ರಯೋಗಗಳನ್ನು ಮುಗಿಸಿ ಚಿನ್ನಸ್ವಾಮಿ ಅವರನ್ನು ಬೇಟಿ ಮಾಡುವುದು ತಡವಾಗುತ್ತದೆ. ಚಿನ್ನಸ್ವಾಮಿ ಅವರು ಆ ಹುಡುಗನನ್ನು ಕಂಡೊಡನೆ ತಡವಾಗಿ ಬಂದದ್ದಕ್ಕೆ ಮೊದಲು ಗದರಿ ಆ ಬಳಿಕ, ‘ನೀನು ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿರುವ ಬಾರತ ತಂಡಕ್ಕೆ ಆಯ್ಕೆಯಾಗಿದ್ದೀಯ’ ಎಂಬ ಸಿಹಿ ಸುದ್ದಿಯನ್ನು ಹೇಳುತ್ತಾರೆ. ಸುದ್ದಿ ಕೇಳಿ ಸಂತಸಗೊಂಡ ಹುಡುಗ ಬಳಿಕ ತನ್ನ ಬಳಿ ಪಾಸ್ಪೋರ‍್ಟ್ ಇಲ್ಲವೆಂದು ತನ್ನ ಅಳಲು ತೋಡಿಕೊಳ್ಳುತ್ತಾನೆ. ಚಿನ್ನಸ್ವಾಮಿ ತಮ್ಮ ಪ್ರಬಾವ ಬಳಿಸಿ ಬೇಗನೆ ಪಾಸ್ಪೋರ‍್ಟ್ ಸಿಗುವಂತೆ ಮಾಡುತ್ತಾರೆ.

ಆದರೆ ಇದಾದ ನಂತರ ಪ್ರವಾಸಕ್ಕೆ ತೆರಳಲು ಮತ್ತೊಂದು ತೊಡಕು ಎದುರಾಗುತ್ತದೆ. ಆಟದಲ್ಲಿ ಅಶ್ಟು ಹಣ ಹಾಗೂ ಬವಿಶ್ಯಕ್ಕೆ ಬದ್ರತೆ ಇಲ್ಲದ ಕಾಲದಲ್ಲಿ ಆ ಹುಡಗನ ತಂದೆ ಅನಂತ್ ರಾವ್ ಅವರು ಸಹಜವಾಗಿಯೇ “ಓದಿನ ಕಡೆ ನಿನ್ನ ಗಮನ ಇರಲಿ. ಪ್ರವಾಸಕ್ಕೆ ಹೋಗೋದು ಬೇಡ, ಮೊದಲು ಇಂಜಿನಿಯರಿಂಗ್ ಮುಗಿಸು” ಎಂದು ತಮ್ಮ ಮಗನಿಗೆ ಕಟ್ಟಪ್ಪಣೆ ಮಾಡುತ್ತಾರೆ. ಇದನ್ನರಿತ ಚಿನ್ನಸ್ವಾಮಿ ಅವರು ಜಯಚಾಮರಾಜೇಂದ್ರ ಒಡೆಯರ್ ರ ಮೂಲಕ ಹುಡುಗನ ತಂದೆಗೆ ತಮ್ಮ ಮಗನನ್ನು ವೆಸ್ಟ್ ಇಂಡಿಸ್ ಪ್ರವಾಸಕ್ಕೆ ಕಳಿಸುವಂತೆ ಹೇಳಿಸುತ್ತಾರೆ. ಒಡೆಯರ್ ರು “ಮೈಸೂರಿನ ಹುಡುಗ ಬಾರತದ ಪರ ವಿದೇಶದಲ್ಲಿ ಆಡೋದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಶಯ ಅಲ್ಲವೇ, ಇಲ್ಲ ಅನ್ನದೆ ನಿಮ್ಮ ಮಗನನ್ನು ಕಳಿಸಿಕೊಡಿ” ಎಂದಾಗ, “ಅವನು ಹಿಂದುರುಗಿ ಓದು ಪೂರೈಸುತ್ತೇನೆಂದು ಮಾತು ಕೊಟ್ಟರೆ ಮಾತ್ರ ಕಳಿಸುತ್ತೇನೆ” ಎಂದು ಶರತ್ತು ಹಾಕಿ ಕಡೆಗೂ ತಮ್ಮ ಮಗನನ್ನು ವೆಸ್ಟ್ ಇಂಡೀಸ್ ಗೆ ಕಳಿಸಲು ಒಪ್ಪುತ್ತಾರೆ.

ಹೀಗೆ ಮೊದಲ ಪ್ರವಾಸಕ್ಕೆ ಹೊರಡಲು ಇಶ್ಟೆಲ್ಲಾ ತೊಡಕುಗಳನ್ನು ಮೀರಿದ ಆ ಹುಡುಗ, ಮುಂದೆ ಬಾರತದ ಪರ ದಶಕದ ಕಾಲ ಅಂತರಾಶ್ಟ್ರೀಯ ಕ್ರಿಕೆಟ್ ಆಡಿ ತನ್ನ ಆಪ್-ಸ್ಪಿನ್ ನಿಂದ ಮೋಡಿ ಮಾಡಿ ದಿಗ್ಗಜನಾಗಿ ಬೆಳೆಯುತ್ತಾನೆ. ಆ ಹುಡುಗ ಮತ್ಯಾರೂ ಅಲ್ಲ, ಅವರೇ ನಮ್ಮ ಹೆಮ್ಮೆಯ ಕನ್ನಡಿಗ ‘ಎರಪಲ್ಲಿ ಅನಂತರಾವ್ ಶ್ರೀನಿವಾಸ್ ಪ್ರಸನ್ನ’ (EAS ಪ್ರಸನ್ನ).

ಎಳವೆಯಲ್ಲೇ ಕ್ರಿಕೆಟ್ ಮೇಲೆ ಒಲವು

ಪ್ರಸನ್ನ ಅವರು ಮೇ 22, 1940 ರಂದು ಬೆಂಗಳೂರಿನಲ್ಲಿ ಅನಂತ್ ರಾವ್ ರ ಐದನೇ ಮಗನಾಗಿ ಹುಟ್ಟಿದರು. ವೈದ್ಯರಾಗಿದ್ದ ಅನಂತ್ ರಾವ್ ಅವರು ಜಯಚಾಮರಾಜೇಂದ್ರ ಒಡೆಯರ್ ರ ಅಡಿಯಲ್ಲಿ ಆಗಿನ ಮೈಸೂರು ಸರ‍್ಕಾರದ ಸಾರ‍್ವಜನಿಕ ಆರೋಗ್ಯ ಇಲಾಕೆಯಲ್ಲಿ ನಿರ‍್ದೇಶಕ ಹುದ್ದೆಯಲ್ಲಿರುವುದರ ಜೊತೆಗೆ ವಿಶ್ವ ಆರೋಗ್ಯ ಸಂಸ್ತೆಯ (WHO) ಪ್ರತಿನಿದಿಯೂ ಆಗಿದ್ದರು. ಆಟೋಟಗಳು ಅವರಿಗೆ ಹಿಡಿಸುತ್ತಿದ್ದರೂ ಓದನ್ನು ಎಂದೂ ಕಡೆಗಣಿಸದಂತೆ ತಮ್ಮ ಮಗನನ್ನು ಬೆಳೆಸಿದರು. ನ್ಯಾಶನಲ್ ಹೈ ಸ್ಕೂಲ್ ನಲ್ಲಿ ಕಲಿಯುತ್ತಿರುವಾಗ ಪುಟ್ಬಾಲ್, ಸಾಪ್ಟ್ ಬಾಲ್ ಮತ್ತು ಬಾಸ್ಕೆಟ್ ಬಾಲ್ ಆಟಗಳನ್ನು ಪ್ರಸನ್ನ ಆಡಿದರೂ ಕ್ರಿಕೆಟ್ ಬಗ್ಗೆ ಅವರಿಗೆ ವಿಶೇಶ ಒಲವು ಇತ್ತು. ಅವರ ಶಾಲಾ ಕ್ರಿಕೆಟ್ ತಂಡದ ನಾಯಕ ಕೂಡ ಆದರು. ಶಾಲೆಯಲ್ಲಿರುವಾಗಲೇ ನ್ಯಾಶನಲ್ ಕಾಲೇಜ್ ತಂಡದ ನಾಯಕ ಕೆ.ವಿ ಅನಂತಸ್ವಾಮಿ ಅವರಿಗೆ ಅಬ್ಯಾಸದ ವೇಳೆ ಬೌಲ್ ಮಾಡಿ ಅವರನ್ನು ಮೋಡಿ ಮಾಡಿದರು. ಪ್ರಸನ್ನರ ಸ್ಪಿನ್ ಚಳಕಕ್ಕೆ ಮನಸೋತ ಅವರು ತಮ್ಮ ಸಿಟಿ ಕ್ರಿಕೆಟರ‍್ಸ್ ಕ್ಲಬ್ ಗೆ ಪ್ರಸನ್ನರನ್ನು ಸೇರಿಸಿಕೊಂಡರು.

ಸಿಟಿ ಕ್ರಿಕೆಟರ‍್ಸ್ ಕ್ಲಬ್ ತಂಡದ ಪರ ಸೆಂಟ್ರಲ್ ಕಾಲೇಜ್ ಎದುರು ಪ್ರಸನ್ನ ತಮ್ಮ ಮೊದಲ ಲೀಗ್ ಪಂದ್ಯ ಆಡಿ 6 ವಿಕೆಟ್ ಪಡೆದರು. ಅದರಲ್ಲಿ ಆಗಾಗಲೇ ಮೈಸೂರು ರಣಜಿ ತಂಡದ ಆಟಗಾರರಾಗಿದ್ದ ವಿ.ಸುಬ್ರಮಣ್ಯ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಎಲ್ಲರ ಗಮನ ಸೆಳೆದರು. ಮುಂದಿನ ಲೀಗ್ ಪಂದ್ಯಗಳಲ್ಲಿಯೂ ಸಾಕಶ್ಟು ವಿಕೆಟ್ ಪಡೆದು ಮೈಸೂರು ರಾಜ್ಯದ ಕಿರಿಯರ ತಂಡಕ್ಕೆ ಆಡುವ ಹೊಸ್ತಿಲಲ್ಲಿ ನಿಂತರು. ಆದರೆ ಜಿ.ಆರ್ ವಿಶ್ವನಾತ್ ರಂತೆಯೇ ಪ್ರಸನ್ನರನ್ನು ಕೂಡ ಕುಳ್ಳರು ಎಂದು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ. ನಂತರ ಇಂಟೆರ್ ಮೀಡಿಯೆಟ್ ಕಲಿಕೆಗೆಂದು ನ್ಯಾಶನಲ್ ಕಾಲೇಜ್ ಸೇರಿದ ಪ್ರಸನ್ನ 1958/59 ರ ಸಾಲಿನ ರೊಹಿಂಟನ್ ಬಾರಿಯ ಟ್ರೋಪಿಯಲ್ಲಿ ಮೊದಲ ಬಾರಿಗೆ ಮೈಸೂರು ವಿಶ್ವವಿದ್ಯಾಲಯದ ಪರ ಬಾಂಬೆ ವಿಶ್ವವಿದ್ಯಾಲಯದ ಎದುರು ಆಡಿದರು. ಆ ನಂತರ ಇಂಜಿನಿಯರಿಂಗ್ ಕಲಿಕೆಗೆ ಮೈಸೂರಿನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಪ್ ಇಂಜಿನಿಯರಿಂಗ್ ಕಾಲೇಜ್ ಸೇರಿದರು. ಆ ವೇಳೆ ರಾಜ್ಯದ ಬಿ ತಂಡಕ್ಕೆ ಆಯ್ಕೆಯಾಗಿ ಮೊದಲ ಪಂದ್ಯದಲ್ಲೇ 11 ವಿಕೆಟ್ ಪಡೆದು ತಮ್ಮ ಆಯ್ಕೆಯನ್ನು ಸಮರ‍್ತಿಸಿಕೊಂಡು ನಂತರದ ಪಂದ್ಯಗಳಲ್ಲಿಯೂ ಒಳ್ಳೆ ಪ್ರದರ‍್ಶನ ನೀಡಿ ಮೈಸೂರು ರಣಜಿ ತಂಡಕ್ಕೆ ಆಯ್ಕೆಯಾದರು.

ರಣಜಿ ಕ್ರಿಕೆಟ್ ಪಾದಾರ‍್ಪಣೆ

1961 ರ ಆಗಸ್ಟ್ ನಲ್ಲಿ ಕಸ್ತೂರಿರಂಗನ್ ರ ನಾಯಕತ್ವದಲ್ಲಿ ಪ್ರಸನ್ನ ಮೈಸೂರು ಪರ ಹೈದರಾಬಾದ್ ಎದುರು ಸಿಕಂದರಾಬಾದ್ ನಲ್ಲಿ ತಮ್ಮ ಚೊಚ್ಚಲ ರಣಜಿ ಪಂದ್ಯ ಆಡಿದರು. ಎಮ್.ಎಲ್ ಜೈಸಿಂಹರ ಬಲಿಶ್ಟ ತಂಡದ ಎದುರು (3/15 ಮತ್ತು 2/65) ಒಟ್ಟು ಐದು ವಿಕೆಟ್ ಪಡೆದು ಮೊದಲ ದರ‍್ಜೆ ವ್ರುತ್ತಿ ಬದುಕಿಗೆ ಒಳ್ಳೆ ಆರಂಬ ಪಡೆದರು. ನಂತರದ ಮದ್ರಾಸ್ ಎದುರಿನ ಪಂದ್ಯದಲ್ಲಿ (3/52 ಮತ್ತು 4/38) ಏಳು ವಿಕೆಟ್ ಪಡೆದು ಮದ್ರಾಸ್ ನ ನಾಯಕ ಕ್ರಿಪಾಲ್ ಸಿಂಗ್ ರನ್ನು ಮೆಚ್ಚಿಸಿ ದುಲೀಪ್ ಟ್ರೋಪಿ ಪಂದ್ಯಾವಳಿಯ ದಕ್ಶಿಣ ವಲಯ ತಂಡಕ್ಕೆ ಆಯ್ಕೆಯಾದರು. ದಕ್ಶಿಣ ವಲಯದ ಪರ ಮುಂಬೈ ನಲ್ಲಿ ದಿಗ್ಗಜರಾದ ನಾರಿ ಕಾಂಟ್ರಾಕ್ಟರ್, ಚಂದೂ ಬೋರ‍್ಡೆ, ಪಾಲಿ ಉಮ್ರಿಗಾರ್, ದಿಲೀಪ್ ಸರ‍್ದೇಸಾಯಿ ಮತ್ತು ಪಾರುಕ್ ಇಂಜಿನಿಯರ‍್ರನ್ನೊಳಗೊಂಡ ಪಶ್ಚಿಮ ವಲಯದ ಎದುರು ಮೂರು ವಿಕೆಟ್ ಪಡೆದರು. ಈ ಸ್ತಿರ ಪ್ರದರ‍್ಶನದಿಂದ ಬಾರತ ಪ್ರವಾಸಕ್ಕೆ ಬಂದಿದ್ದ ಎಮ್.ಸಿ.ಸಿ ತಂಡದ ಎದುರು ಆಡಲಿದ್ದ (ಬೋರ‍್ಡ್ ಪ್ರೆಸಿಡೆಂಟ್ಸ್, ದಕ್ಶಿಣ ವಲಯ ಮತ್ತು ಇಂಡಿಯನ್ ಯೂನಿವರ‍್ಸಿಟೀಸ್) ಮೂರೂ ತಂಡಗಳಲ್ಲಿ ಪ್ರಸನ್ನ ಸ್ತಾನ ಪಡೆದರು. ಟೆಸ್ಟ್ ಆಟಗಾರರನ್ನೊಳಗೊಂಡಿದ್ದ ಎಮ್.ಸಿ.ಸಿ ತಂಡದ ಎದುರು ದಕ್ಶಿಣ ವಲಯವನ್ನು ಪ್ರತಿನಿದಿಸಿ ಅವರು ನೀಡಿದ ಪ್ರದರ‍್ಶನ (6/56 ಮತ್ತು 1/90), ಆಯ್ಕೆಗಾರರು ಅವರತ್ತ ತಿರುಗಿ ನೋಡುವಂತೆ ಮಾಡಿತು. ಪ್ರವಾಸಿ ಇಂಗ್ಲೆಂಡ್ ಎದುರು ಬಾರತ ಆಡಲಿದ್ದ ಐದನೇ ಟೆಸ್ಟ್ ಪಂದ್ಯಕ್ಕೆ ಕನ್ನಡಿಗ ಪ್ರಸನ್ನರನ್ನು ಆಯ್ಕೆ ಮಾಡಿದರು.

ಟೆಸ್ಟ್ ಕ್ರಿಕೆಟ್ ಪಾದಾರ‍್ಪಣೆ

1962 ರ ಜನವರಿಯಲ್ಲಿ ಮದ್ರಾಸಿನಲ್ಲಿ ಇಂಗ್ಲೆಂಡ್ ಎದುರು ನಾರಿ ಕಂಟ್ರಾಕ್ಟರ್ ರ ನಾಯಕತ್ವದಲ್ಲಿ ಪ್ರಸನ್ನ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದರು. ಮೈಸೂರು ತಂಡದಿಂದ ಬಾರತ ತಂಡಕ್ಕೆ ಆಯ್ಕೆಯಾದ ಮೊದಲ ಕನ್ನಡಿಗ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರರಾದರು. ಅವರಿಗೂ ಮುನ್ನಎರಪಲ್ಲಿ ಪ್ರಸನ್ನ, Erapalli Prasanna ಮೈಸೂರಿನ ಪಿರೋಜ್ ಪಾಲಿಯ, ಮುದ್ದಯ್ಯ ಮತ್ತು ಕುಂದರನ್ ಬಾರತಕ್ಕೆ ಆಡಿದ್ದರೂ ಮೈಸೂರನ್ನು ಪ್ರತಿನಿದಿಸುವ ಮುನ್ನ ಅವರೆಲ್ಲಾ ಬೇರೆ-ಬೇರೆ ತಂಡಗಳಿಗೆ ಆಡಿ ನಂತರ ತಾಯ್ನಾಡಿಗೆ ಮರಳಿದ್ದರು. ಹಾಗಾಗಿ ಪ್ರಸನ್ನರವರಿಗೇ ಮೈಸೂರಿನ ಮೊದಲ ಅಂತರಾಶ್ಟ್ರೀಯ ಕ್ರಿಕೆಟಿಗ ಎಂಬ ಗೌರವ ಸಲ್ಲತಕ್ಕದ್ದು. ಅವರ ಮೊದಲ ಟೆಸ್ಟ್ ನ ಎರಡೂ ಇನ್ನಿಂಗ್ಸ್ ಸೇರಿ ಕೇವಲ 20 ಓವರ್ ಗಳನ್ನಶ್ಟೇ ಬೌಲ್ ಮಾಡಲು ಅವಕಾಶ ಸಿಕ್ಕರೂ ತಮ್ಮ ಬೌಲಿಂಗ್ ಚಳಕ ಪ್ರದರ‍್ಶಿಸಿ ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ಪಡೆದರು. ಈ ಪಂದ್ಯವನ್ನು ಮತ್ತು ಸರಣಿಯನ್ನು 2-0 ಅಂತರದಿಂದ ಬಾರತ ಗೆದ್ದು ಬೀಗಿತು.

ಬಳಿಕ ಅದೇ ವರ‍್ಶದ ವೆಸ್ಟ್ ಇಂಡೀಸ್ ಪ್ರವಾಸಕ್ಕೆ (ಐದು ಟೆಸ್ಟ್ ಗಳ) ಸರಣಿಗೆ ಪ್ರಸನ್ನ ಆಯ್ಕೆಯಾದರು. ತಂದೆಯನ್ನು ಒಪ್ಪಿಸಲು ಹರಸಾಹಸ ಪಟ್ಟು ವೆಸ್ಟ್ ಇಂಡೀಸ್ ಗೆ ಹೋದ ಪ್ರಸನ್ನರಿಗೆ ಜಮೈಕಾದಲ್ಲಿ ನಡೆದ ಎರಡನೇ ಟೆಸ್ಟ್ ನಲ್ಲಿ ಮಾತ್ರ ಆಡಲು ಅವಕಾಶ ಸಿಗುತ್ತದೆ. ಆ ಪಂದ್ಯದದಲ್ಲಿ ವಿಂಡೀಸ್ ದಿಗ್ಗಜ ರೋಹನ್ ಕನ್ಹಯ್ ಅವರ ವಿಕೆಟ್ ನೊಂದಿಗೆ ಒಟ್ಟು 3 ವಿಕೆಟ್ ಪಡೆದು ಒಳ್ಳೆ ಪ್ರದರ‍್ಶನ ತೋರಿದರೂ ನಂತರದ ಮೂರೂ ಟೆಸ್ಟ್ ಗಳಲ್ಲಿ ಅವರನ್ನು ಆಡುವ ಹನ್ನೊಂದರಿಂದ ಹೊರಗಿಡಲಾಗುತ್ತದೆ. ಆದರೆ ಆ ಪಂದ್ಯದಲ್ಲಿ ಅವರ ಬೌಲಿಂಗ್ ಚಳಕ ಕಂಡು ವಿಂಡೀಸ್ ದಿಗ್ಗಜರು ನಿಬ್ಬೆರಗಾಗುತ್ತಾರೆ. ಕ್ರಿಕೆಟ್ ದಂತಕತೆ ಸರ್ ಗಾರ‍್ಪೀಲ್ಡ್ ಸೋಬರ‍್ಸ್ ರನ್ನು ಬಹಳ ಹೊತ್ತು ರನ್ ಹೊಡೆಯದಂತೆ ಕಟ್ಟಿ ಹಾಕಿ ಪ್ರಸನ್ನ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತಾರೆ. ನಂತರ ಸೋಬರ‍್ಸ್ ಬಾರತದ ಮ್ಯಾನೇಜರ್ ಗುಲಾಮ್ ಅಹ್ಮದ್ ಅವರ ಬಳಿ “ಪ್ರಸನ್ನ ಅಪರೂಪದ ಪ್ರತಿಬೆ, ಅವರನ್ನು ಕಾಪಾಡಿಕೊಂಡು ಚೆನ್ನಾಗಿ ಬೆಳೆಸಿ, ಮುಂದೊಂದು ದಿನ ದಿಗ್ಗಜರಾಗುತ್ತಾರೆ” ಎನ್ನುತ್ತಾರೆ. ಪ್ರಸನ್ನ ಬೌಲಿಂಗ್ ಮಾಡುವ ವೇಳೆ ಸರ್ ಪ್ರಾಂಕ್ ವೋರಲ್ “ನೀವು ಎಶ್ಟು ಪಂದ್ಯವಾಡಿದ್ದೀರಿ” ಎಂದಾಗ ‘ಇದು ನನ್ನ ಎರಡನೇ ಪಂದ್ಯ’ ಎಂಬ ಮರುನುಡಿ ಬರುತ್ತದೆ. ಆಗ ವೋರಲ್ ಪ್ರಸನ್ನರ ತಲೆ ಸವರಿ “ನೀವು ಹೀಗೇ ಬೌಲ್ ಮಾಡಿದರೆ ಹಲವಾರು ಪಂದ್ಯಗಳನ್ನು ಆಡುತ್ತೀರಿ” ಎನ್ನುತ್ತಾರೆ. ಹೀಗೇ ಪ್ರಸನ್ನ ತಮ್ಮ ಎರಡನೇ ಪಂದ್ಯದಲ್ಲೇ ದಿಗ್ಗಜರ ಮೆಚ್ಚುಗೆ ಗಳಿಸಿ ತಾವೊಬ್ಬ ಅಸಮಾನ್ಯ ಪ್ರತಿಬೆ ಎಂದು ಸಾಬೀತು ಮಾಡುತ್ತಾರೆ. ಆದರೆ ಬಾರತ 5-0 ಅಂತರದಿಂದ ಸರಣಿ ಸೋತು ತವರಿಗೆ ಮರಳಿದ ಮೇಲೆ ಪ್ರಸನ್ನರ ಬದುಕಲ್ಲಿ ದೊಡ್ಡ ಆಗಾತವಾಗುತ್ತದೆ. ಅವರ ತಂದೆಯ ಸಾವು ಅವರಿಗೆ ದಿಕ್ಕೇ ತೋಚದಂತೆ ಮಾಡುತ್ತದೆ. ಆಗ ತಂದೆಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಅಂತರಾಶ್ಟ್ರೀಯ ಕ್ರಿಕೆಟ್ ನಿಂದ ದೂರ ಸರಿದು ತಮ್ಮ ಇಂಜಿನಿಯರಿಂಗ್ ಓದನ್ನು ಮುಂದುವರಿಸುತ್ತಾರೆ.

ಇಂಜಿನಿಯರ್ ಪ್ರಸನ್ನ – ಬಿಡದ ಕ್ರಿಕೆಟ್ ಗೀಳು

ಕಾಲೇಜ್ ದಿನಗಳಲ್ಲಿಯೂ ಬಿಡುವು ಸಿಕ್ಕಾಗಲೆಲ್ಲಾ ಪ್ರಸನ್ನ ರಣಜಿ ಪಂದ್ಯಗಳನ್ನಾಡಿ ತಮ್ಮೊಳಗಿರುವ ಬೌಲರ್ ಅನ್ನು ಜೀವಂತವಾಗಿಟ್ಟುಕೊಳ್ಳುತ್ತಾರೆ. ಓದು ಮುಗಿಸಿ ದೂರವಾಣಿ ಇಲಾಕೆಯಲ್ಲಿ ಕೆಲಸ ಮಾಡುವಾಗಲೂ ಪ್ರಸನ್ನರನ್ನು ಕ್ರಿಕೆಟ್ ಗೀಳು ಬಿಡುವುದಿಲ್ಲ. ರಣಜಿ ಟ್ರೋಪಿಯಲ್ಲಿ ಮೈಸೂರು ತಂಡದ ಬೌಲಿಂಗ್ ಬೆನ್ನೆಲುಬಾಗುತ್ತಾರೆ. 1966 ರಲ್ಲಿ ರಾಜಸ್ತಾನದ ಎದುರು ಸೆಮಿಪೈನಲ್ ನಲ್ಲಿ 12 ವಿಕೆಟ್ ಪಡೆದು ಅಂತರಾಶ್ಟ್ರೀಯ ಕ್ರಿಕೆಟ್ ಗೆ ಮರಳಲು ಅಣಿಯಾಗಿದ್ದೇನೆ ಎಂದು ನೆನಪಿಸುತ್ತಾರೆ. ಆನಂತರ ಬಾರತ ಪ್ರವಾಸಕ್ಕೆ ಬಂದಿದ್ದ ವೆಸ್ಟ್ ಇಂಡೀಸ್ ಎದುರು ಪ್ರೈಮ್ ಮಿನಿಸ್ಟರ್11 ತಂಡದ ಪರ 4 ವಿಕೆಟ್ ಮತ್ತು ದಕ್ಶಿಣ ವಲಯದ ಪರ 8/87 ಪ್ರದರ‍್ಶನ ನೀಡಿ ಬಾರತದ ನಾಯಕ ಪಟೌಡಿಯವರ ಮನ ಗೆಲ್ಲುತ್ತಾರೆ. ಪ್ರಸನ್ನರ ದೀರ‍್ಗ ಕಾಲದ ಗೆಳೆಯ ಹಾಗೂ ಪ್ರಶಂಸಕ ವಿಜಯ್ ಮಂಜ್ರೇಕರ್ ಕೂಡ ಪ್ರಸನ್ನರ ಪ್ರದರ‍್ಶವನ್ನು ಕಂಡು ‘ನೀವು ಟೆಸ್ಟ್ ಆಟಕ್ಕೆ ಮರಳಲು ಇನ್ನು ಹೆಚ್ಚು ಕಾಲ ಬೇಕಿಲ್ಲ’ ಎಂದು ಹುರಿದುಂಬಿಸುತ್ತಾರೆ. ಪ್ರಸನ್ನರ ಅಳವನ್ನು ಅರಿತ ಪಟೌಡಿ ಅವರಿಗೆ ಪ್ರೋತ್ಸಾಹ ನೀಡಿ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾಗುವಂತೆ ಮಾಡುತ್ತಾರೆ. ಹೀಗೆ ಐದು ವರ‍್ಶಗಳ ಬಳಿಕ “ಇಂಜಿನಿಯರ್ ಪ್ರಸನ್ನ” ಅಂತರಾಶ್ಟ್ರೀಯ ಕ್ರಿಕೆಟ್ ಗೆ ಮರಳುತ್ತಾರೆ.

ಮರಳಿದ ಪ್ರಸನ್ನ – ದಿಗ್ಗಜರಾದ ಹಾದಿ

ಮತ್ತೊಮ್ಮೆ ಮದ್ರಾಸ್ ನಲ್ಲಿಯೇ ಪ್ರಸನ್ನರ ಟೆಸ್ಟ್ ಬದುಕು ಮೊದಲ್ಗೊಂಡಿತು. ಈ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್ ನಿಂದ 5 ವಿಕೆಟ್ ಪಡೆದು ನಾನಿಲ್ಲಿ ಸಲ್ಲುತ್ತೇನೆ ಎಂದವರು ನೆನಪಿಸಿದರು. ಅದಾದ ಬಳಿಕ 1967 ರ ಇಂಗ್ಲೆಂಡ್ ಪ್ರವಾಸದಲ್ಲಿ ಮೂರು ಟೆಸ್ಟ್ ಗಳಿಂದ 9 ವಿಕೆಟ್ ಪಡೆದರು. ಅದೇ ಸಾಲಿನ 1967/68 ರ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪ್ರವಾಸಗಳಲ್ಲಿ ಪ್ರಸನ್ನರ ಬೌಲಿಂಗ್ ಉತ್ತುಂಗ ತಲುಪಿತು. ಸಾಮಾನ್ಯವಾಗಿ ಸ್ಪಿನ್ನರ್ ಗಳಿಗೆ ನೆರವಿಲ್ಲದ ಆ ಎರಡು ದೇಶಗಳಲ್ಲಿ ಅವರು ತಾವೇಕೆ ಶ್ರೇಶ್ಟ ಎಂದು ತೋರಿಸಿದರು. ಆಸ್ಟ್ರೇಲಿಯಾದಲ್ಲಿ ನಾಲ್ಕು ಟೆಸ್ಟ್ ಗಳಿಂದ 25 ವಿಕೆಟ್ ಗಳು ಮತ್ತು ನ್ಯೂಜಿಲ್ಯಾಂಡ್ ನಲ್ಲಿ ನಾಲ್ಕು ಟೆಸ್ಟ್ ಗಳಿಂದ 24 ವಿಕೆಟ್ ಪಡೆದರು. ಅವರ ಪ್ರದರ‍್ಶನದಿಂದ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲಲಾಗದ್ದಿದ್ದರೂ ನ್ಯೂಜಿಲ್ಯಾಂಡ್ ನಲ್ಲಿ (2-0) ಅಂತರದಿಂದ ಗೆದ್ದು ಬಾರತ ತವರಿನಿಂದಾಚೆ ವಿದೇಶದಲ್ಲಿ ತನ್ನ ಚೊಚ್ಚಲ ಸರಣಿ ಗೆಲುವು ದಾಕಲಿಸಿತು.

1971 ರಲ್ಲಿ ಬಾರತ ವೆಸ್ಟ್ ಇಂಡೀಸ್ ನಲ್ಲಿ (1-0) ಇಂದ ದಾಕಲಿಸಿದ ಐತಿಹಾಸಕ ಸರಣಿ ಗೆಲುವಿನಲ್ಲಿ ಪ್ರಸನ್ನ ಮೂರು ಪಂದ್ಯಗಳಿಂದ 11 ವಿಕೆಟ್ ಪಡೆದರು. ಹಾಗೂ ಅದೇ ಸರಣಿಯಲ್ಲಿ ಒಂಬತ್ತನೇ ವಿಕೆಟ್ ಗೆ ದಿಲೀಪ್ ಸರ‍್ದೇಸಾಯಿ ರೊಟ್ಟಿಗೆ 122 ರನ್ ಗಳ ಜೊತೆಯಾಟ ಆಡಿ ಬ್ಯಾಟಿಂಗ್ ದಾಕಲೆ ಕೂಡ ಮಾಡಿದರು. ನಂತರ 1976 ರಲ್ಲಿ ಆಕ್ಲೆಂಡ್ ನಲ್ಲಿ ಅವರ 8/76 ಪ್ರದರ‍್ಶನ ಇಂದಿಗೂ ವಿದೇಶದಲ್ಲಿ ಬಾರತೀಯನೊಬ್ಬನ ಶ್ರೇಶ್ಟ ಸಾದನೆಯಾಗಿ ಉಳಿದಿದೆ. ಇದೇ ಪಂದ್ಯದ ವೇಳೆ ಪ್ರಸನ್ನ ಬಾರತದ ಪರ ವಿನೂ ಮಂಕಡ್ ರ ಗರಿಶ್ಟ ವಿಕೆಟ್ ಗಳಿಕೆಯ (162) ದಾಕಲೆಯನ್ನೂ ಮುರಿದರು. ತಮ್ಮ ಟೆಸ್ಟ್ ಬದುಕಿನಲ್ಲಿ ಪ್ರಸನ್ನ ಒಟ್ಟು 49 ಪಂದ್ಯಗಳಲ್ಲಿ 30 ರ ಸರಾಸರಿಯಲ್ಲಿ 189 ವಿಕೆಟ್ ಪಡೆದ್ದಿದ್ದಾರೆ. ಅದರಲ್ಲಿ ಹತ್ತು ಬಾರಿ ಇನ್ನಿಂಗ್ಸ್ ಒಂದರಲ್ಲಿ 5ಕ್ಕೂ ಹೆಚ್ಚು ವಿಕೆಟ್ ಗಳು ಮತ್ತು ಎರಡು ಬಾರಿ ಪಂದ್ಯವೊಂದರಲ್ಲಿ 10 ವಿಕೆಟ್ ಗಳನ್ನು ಪಡೆದ್ದಿದ್ದಾರೆ. ಒಬ್ಬ ಸ್ಪಿನ್ನರ್ ಆಗಿ ಕೇವಲ ತವರಲ್ಲಲ್ಲದೆ ವಿದೇಶಗಳಲ್ಲಿಯೂ ಅಶ್ಟೇ ಪ್ರಬಾವ ಬೀರಿ ವಿಕೆಟ್ ಪಡೆದವರಲ್ಲಿ ಪ್ರಸನ್ನ ಅಗ್ರಗಣ್ಯರು. ಹಾಗಾಗಿ, ಕ್ರಿಕೆಟ್ ಜಗತ್ತು ಇಂದಿಗೂ ಅವರನ್ನು ಸರ‍್ವಶ್ರೇಶ್ಟ ಆಪ್-ಸ್ಪಿನ್ನರ್ ಎಂದು ನೆನೆಯುತ್ತದೆ.

ಏಳು-ಬೀಳು ತುಂಬಿದ ದಿಗ್ಗಜನ ಕ್ರಿಕೆಟ್ ಪಯಣ

ಅಶ್ಟು ಅಳವುಳ್ಳ ಸ್ಪಿನ್ನರ್ ಪ್ರಸನ್ನ ಅವರು ಕೇವಲ 49 ಟೆಸ್ಟ್ ಗಳನ್ನಾಡಿದ್ದು ಬಾರತ ಕ್ರಿಕೆಟ್ ನ ದುರಂತಗಳಲ್ಲೊಂದು. ವೆಂಕಟರಾಗವಾನ್ ಕೂಡ ಆಪ್-ಸ್ಪಿನ್ನರ್ ಆಗಿದ್ದು ಬಹುತೇಕ ಪಂದ್ಯಗಳಲ್ಲಿ ಅವರು ಉಪನಾಯಕ ಕೂಡ ಆಗಿದ್ದು ಪ್ರಸನ್ನರಿಗೆ ಮುಳುವಾಗಿತ್ತು. ಅನೇಕ ಬಾರಿ ಒಳ್ಳೆ ಎರಪಲ್ಲಿ ಪ್ರಸನ್ನ, Erapalli Prasannaಬೌಲಿಂಗ್ ಲಯದಲ್ಲಿದ್ದರೂ ಆಡುವ ಹನ್ನೊಂದರಿಂದ ಅವರು ಹೊರಗುಳಿಯಬೇಕಾಯಿತು. ವೆಂಕಟ್ ಅವರು ಒಬ್ಬ ಬೌಲರ್ ಆಗಿ ಪ್ರಸನ್ನರಶ್ಟು ಅಳವುಳ್ಳದವರಲ್ಲದ್ದಿದ್ದರೂ ಹೆಚ್ಚು ಪಂದ್ಯಗಳಲ್ಲಿ ಅವರನ್ನೇ ತಂಡ ನೆಚ್ಚಿಕೊಂಡಿತು. ಇಂದು ದಾಕಲೆಯ ಪುಟಗಳನ್ನು ತೆರೆದು ನೋಡಿದಾಗ 57 ಟೆಸ್ಟ್ ಗಳಲ್ಲಿ 156 ವಿಕೆಟ್ ಪಡೆದ ವೆಂಕಟ್ ಮತ್ತು 49 ಟೆಸ್ಟ್ ಗಳಲ್ಲಿ 189 ವಿಕೆಟ್ ಪಡೆದಿರುವ ಪ್ರಸನ್ನರ ನಡುವೆ ಯಾರು ಹೆಚ್ಚು ಪರಿಣಾಮಕಾರಿಯಾಗಿದ್ದರು ಎಂಬುದು ಡಾಳಾಗಿ ಕಾಣುತ್ತದೆ. ಆದರೂ ಕೂಡ ಪ್ರಸನ್ನ ಅವರು ಎಂದೂ ದ್ರುತಿಗೆಡಲಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ಬೌಲಿಂಗ್ ನಿಂದಶ್ಟೇ ಮಾತಾಡಿದರು. 1971 ರ ಇಂಗ್ಲೆಂಡ್ ಪ್ರವಾಸಕ್ಕೆ ಬಾರತ ತಂಡ ಜ್ಯೋತಿಶಿಯ ಅನಿಸಿಕೆಯಂತೆ ನಿಗದಿಯಾದ ದಿನದ ಬದಲು ಮುಂಬೈ ನಿಂದ ಎರಡು ದಿನ ತಡವಾಗಿ ಹೊರಟಿತು. ಆಗ ಅದೇ ಪ್ಲೇನ್ ನಲ್ಲಿ ಕತಾರ್ ಗೆ ಹೊರಟಿದ್ದ ಪ್ರಸನ್ನರ ಹೆಂಡತಿ ಶೀಮಾರನ್ನು ಕಂಡ ಮ್ಯಾನೇಜರ್ ಹೇಮು ಅದಿಕಾರಿ ಕೆಂಡಾಮಂಡಲವಾಗುತ್ತಾರೆ. ‘ನಾವು ತಡವಾಗಿ ಹೊರಟಿದ್ದರಂದಲ್ಲವೇ ನನ್ನ ಹೆಂಡತಿಯನ್ನು ಆಕಸ್ಮಿಕವಾಗಿ ಸಂದಿಸಿದ್ದು’ ಎಂದು ಅವರು ಪರಿಪರಿಯಾಗಿ ಹೇಳಿದರೂ ಅದಿಕಾರಿ, ಪ್ರಸನ್ನ ಶಿಸ್ತು ಉಲ್ಲಂಗನೆ ಮಾಡಿದ್ದಾರೆ ಎಂದು ಆ ಸರಣಿಯ ಒಂದೂ ಪಂದ್ಯದಲ್ಲಿ ಪ್ರಸನ್ನರಿಗೆ ಅವಕಾಶ ಕೊಡುವುದಿಲ್ಲ. ನಾಯಕ ವಾಡೇಕರ್ ಕೂಡ ಪ್ರಸನ್ನ ಮಾಜಿನಾಯಕ ಪಟೌಡಿಯ ಆಪ್ತ ಎಂದು ತಂಡದಿಂದ ಹೊರಗಿಡಲು ಕುಮ್ಮಕ್ಕು ನೀಡುತ್ತಾರೆ. ಬಾರತ ಚಂದ್ರರ ಕೈಚಳಕದಿಂದ ಇಂಗ್ಲೆಂಡ್ ನಲ್ಲಿ (1-0) ಇಂದ ಗೆದ್ದ ಐತಿಹಾಸಿಕ ಸರಣಿಯನ್ನು ಪ್ರಸನ್ನ ಪೆವಿಲಿಯನ್ ನಲ್ಲಿ ಕೂತು ನೋಡುವಂತಾಗುತ್ತದೆ. ಈ ಆಗಾತದಿಂದ ತತ್ತರಿಸಿ ಹೋದ ಪ್ರಸನ್ನ ಬೇಸತ್ತು ನಿವ್ರುತ್ತಿಯ ಯೋಚನೆ ಮಾಡುತ್ತಿರುವಾಗ ಪಟೌಡಿ ಕುದ್ದಾಗಿ ಬಂದು ಬೇಟಿ ಮಾಡಿ ನೊಂದ ಪ್ರಸನ್ನರಿಗೆ “ಎಶ್ಟೋ  ಸವಾಲುಗಳನ್ನು ಹಿಮ್ಮೆಟ್ಟಿ ಬೆಳೆದಿರುವ ನೀವು ನಿವ್ರುತ್ತಿಯ ಯೋಚನೆ ಮಾಡುವುದು ತರವಲ್ಲ. ನೀವೇನೆಂದು ಜಗತ್ತಿಗೆ ಗೊತ್ತಿದೆ. ಬನ್ನಿ ಒಟ್ಟಿಗೆ ಶ್ರಮ ಪಟ್ಟು ತಂಡಕ್ಕೆ ಮರಳೋಣ” ಎಂದು ಹುರಿದುಂಬಿಸಿ ಸಂತೈಸುತ್ತಾರೆ.

70 ರ ದಶಕದಲ್ಲಿ ತಂಡದ ಹಿರಿಯ ಆಟಗಾರನಾಗಿದ್ದರೂ, ಮೈಸೂರು ತಂಡದ ನಾಯಕನಾಗಿ ಅನುಬವವಿದ್ದರೂ ಪ್ರಸನ್ನರನ್ನು ಬಾರತದ ನಾಯಕನಾಗದಂತೆ ಎರಡು ಬಾರಿ ಕಾಣದ ಕೈಗಳು ತಪ್ಪಿಸುತ್ತವೆ. ಆಗ ಯಾರಿಗೂ ಒಂದು ದಿನದ ಪಂದ್ಯಗಳ ಅನುಬವವಿಲ್ಲದ್ದಿದ್ದರೂ ಪ್ರಸನ್ನರನ್ನು ಮಾತ್ರ 1975 ರ ವಿಶ್ವಕಪ್ ತಂಡದಿಂದ ಈ ಮಾದರಿಯ ಆಟಕ್ಕೆ ಅವರು ಸೂಕ್ತರಲ್ಲ ಎಂದು ಹೊರಗಿಡುತ್ತಾರೆ. 1976 ರ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ತೆರಳಲು ಪ್ಲೇನ್ ಹತ್ತಿ ಕೂತ ಪ್ರಸನ್ನ ಸುತ್ತಲೂ ಇರುವ ಹೊಸ ಆಟಗಾರರನ್ನು ಗಮನಿಸಿ ತಮ್ಮ ಕ್ರಿಕೆಟ್ ಬದುಕನ್ನು ಮೆಲಕು ಹಾಕುತ್ತಾ 1962 ರಲ್ಲಿ ವೆಸ್ಟ್ ಇಂಡೀಸ್ ಗೆ ಹೊರಡುವ ಮುನ್ನ, 12 ವರ‍್ಶದ ಹುಡುಗ ಸುನಿಲ್ ಗಾವಸ್ಕರ್ ತಮ್ಮ ಮಾವ ಕ್ರಿಕೆಟಿಗ ಮಾದವ್ ಮಂತ್ರಿ ಅವರೊಟ್ಟಿಗೆ ಬಂದು ನನ್ನ ಆಟೋಗ್ರಾಪ್ ಪಡೆದಿದ್ದ, ಇಂದು ಬಾರತದ ಉಪನಾಯಕನಾಗಿದ್ದಾನೆ. ನಾನು ಇಶ್ಟು ಕಾಲ ಆಡಿದ್ದೇನೆ ಎಂದು ಸಮಾದಾನ ಪಟ್ಟಿಕೊಂಡು ನಿವ್ರುತ್ತಿಯ ಬಗ್ಗೆಯೂ ಯೋಚಿಸುತ್ತಾರೆ. ಕಡೆಗೆ 1978 ರಲ್ಲಿ ಪಾಕಿಸ್ತಾನದ ಎದುರು ಲಾಹೋರ್ ನಲ್ಲಿ ತಮ್ಮ ವ್ರುತ್ತಿ ಬದುಕಿನ ಕಟ್ಟ ಕಡೆಯ ಟೆಸ್ಟ್ ಆಡಿ ಪ್ರಸನ್ನ ನಿವ್ರುತ್ತಿ ಗೋಶಿಸುತ್ತಾರೆ.

ಮೈಸೂರು (ಕರ‍್ನಾಟಕ) ತಂಡಕ್ಕೆ ಪ್ರಸನ್ನ ಕೊಡುಗೆ

1960 ಹಾಗೂ 70 ರ ದಶಕದಲ್ಲಿ ಮುಂಬೈ (ಬಾಂಬೆ) ಬಾರತದ ದೇಸೀ ಕ್ರಿಕೆಟ್ ನ ಅನಬಿಶಕ್ತ ದೊರೆಯಾಗಿ ಮೆರೆಯುತ್ತಿದ್ದ ಕಾಲದಲ್ಲಿ ಅವರನ್ನು ಕಟ್ಟಿ ಹಾಕುವ ಕನಸನ್ನು ಮೊದಲು ಕಂಡವರು ಮೈಸೂರಿನ ಮಾಜಿ ನಾಯಕ ವಿ.ಸುಬ್ರಮಣ್ಯ, ಹಾಗೂ ಯುವಕರ ಪಡೆಯನ್ನು ಕಟ್ಟಿಕೊಂಡು ಆ ಕನಸನ್ನು ಸಾಕಾರ ಮಾಡಿದವರು ಎರಪಲ್ಲಿ ಪ್ರಸನ್ನ. ಚಂದ್ರ, ಪ್ರಸನ್ನರಂತ ಶ್ರೇಶ್ಟ ಬೌಲರ್ ಗಳಿದ್ದರೂ ಮೈಸೂರು ತಂಡ ಬ್ಯಾಟಿಂಗ್ ಬಲವಿಲ್ಲದೆ ರಣಜಿ ಟ್ರೋಪಿ ಗೆಲ್ಲಲಾಗಿರಲಿಲ್ಲ. ಆದರೆ ತಂಡಕ್ಕೆ ವಿಶ್ವನಾತ್ ಮತ್ತು ಬ್ರಿಜೇಶ್ ಪಟೇಲ್ ರಂತ ಅಳವುಳ್ಳ ಯುವ ಬ್ಯಾಟ್ಸ್ಮನ್ ಗಳು ಬಂದೊಡನೆ ನಂಬಿಕೆ ಮೂಡಿತು. ಆ ನಂಬಿಕೆ 1973/74 ರಲ್ಲಿ ಪ್ರಸನ್ನರ ನಾಯಕತ್ವದಲ್ಲಿ ಕರ‍್ನಾಟಕ ಚೊಚ್ಚಲ ರಣಜಿ ಟ್ರೋಪಿ ಗೆಲ್ಲುವಂತೆ ಮಾಡಿತು. ಆ ಹಾದಿ ಸುಳುವಾಗಿರಲಿಲ್ಲ. ಸೆಮಿಪೈನಲ್ ನಲ್ಲಿ ಆಗಾಗಲೇ ಸತತವಾಗಿ 15 ಬಾರಿ ರಣಜಿ ಟೂರ‍್ನಿ ಗೆದ್ದಿದ್ದ ಗವಾಸ್ಕರ್ ರ ಬಲಾಡ್ಯ ಬಾಂಬೆ ತಂಡ ಎದುರಾಯಿತು. ವಿಶ್ವನಾತ್ ರ 162 ಹಾಗೂ ಬ್ರಿಜೇಶ್ ರ 106 ರನ್ ಗಳ ನೆರವಿನಿಂದ ಕರ‍್ನಾಟಕ 385 ರನ್ ಗಳಿಸಿತು. ಬಾಂಬೆ ತಂಡವನ್ನು ಕಟ್ಟಿ ಹಾಕುವ ಹೊಣೆ ಹೊತ್ತ ಪ್ರಸನ್ನ, ಗವಾಸ್ಕರ್ ರನ್ನು ಕ್ಲೀನ್ ಬೌಲ್ಡ್ ಮಾಡುವುದರ ಜೊತೆಗೆ ಒಟ್ಟು 5 ವಿಕೆಟ್ ಪಡೆದು ಕರ‍್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ ಕೊಡಿಸಿ ಪೈನಲ್ ಗೆ ಕೊಂಡೊಯ್ದರು.

ಗವಾಸ್ಕರ್ ರ ಸ್ಟಂಪ್ಸ್ ಅನ್ನು ಚೆದುರಿಸಿದ ಚೆಂಡು “ಪ್ರಸ್ಸಿ ಸ್ಪೆಶಲ್” ಎಂದು ಇಂದಿಗೂ ಬಾಂಬೆ ಆಟಗಾರರು ನೆನೆಯುತ್ತಾರೆ. ಪ್ರಸನ್ನರು ಪ್ಲೈಟ್ ನೀಡಿ ಬೌಲ್ ಮಾಡಿದ ಚೆಂಡು ಆಪ್ ಸ್ಟಂಪ್ ಆಚೆ ಬಿದ್ದು, ಮಾರುದ್ದ ತಿರುಗಿ ಗವಾಸ್ಕರ್ ರ ಡಿಪೆನ್ಸ್ ಅನ್ನು ಬೇದಿಸಿ ಅವರ ಆಪ್ ಸ್ಟಂಪ್ ಅನ್ನು ಎಗರಿಸಿತು. ಗವಾಸ್ಕರ್ ಇದನ್ನು ನಂಬಲಾರದೆ ಒಂದು ಕ್ಶಣ ಸ್ತಬ್ದರಾಗಿ ನಿಂತು, ಆ ಬಳಿಕ ಇದು ದಿಟವೆಂದು ಅರಿವಾದ ಮೇಲೆ ಪೆವಿಲಿಯನ್ ಕಡೆ ಹೆಜ್ಜೆ ಹಾಕುತ್ತಿರುವಾಗ, ನಾನ್-ಸ್ಟ್ರೈಕ್ ಬದಿಯಲ್ಲಿದ್ದ ಬಾಂಬೆ ನಾಯಕ ವಾಡೇಕರ್ ದಿಗ್ಬ್ರಮೆಯಿಂದ “ಪ್ರಸ್, ಏನು ಮಾಡಿದಿರಿ? ಹೇಗೆ ಮಾಡಿದಿರಿ? ನಾನು ನೋಡಿದ್ದು ನಿಜವೇ? ನನ್ನಿಂದ ನಂಬಲಾಗುತ್ತಿಲ್ಲ” ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ಈ ದಿಗ್ಬ್ರಮೆಯಿಂದ ಚೇತರಿಸಿಕೊಳ್ಳಲಾಗದೆ ವಾಡೇಕರ್ ನಂತರ ರನ್ ಔಟ್ ಆದರು ಎಂದು ಪ್ರಸನ್ನ ಈಗಲೂ ತಮಾಶೆ ಮಾಡುತ್ತಾರೆ.

ರಾಜಸ್ತಾನದ ಎದುರು ಪೈನಲ್ ನಲ್ಲೂ ಕೂಡ ನಾಯಕ ಪ್ರಸನ್ನ (4/56 ಮತ್ತು 5/45), ಒಟ್ಟು 9 ವಿಕೆಟ್ ಪಡೆದು, ಕರ‍್ನಾಟಕದ ಮಡಿಲಿಗೆ ಮೊಟ್ಟಮೊದಲ ರಣಜಿ ಟ್ರೋಪಿ ಹಾಕಿದರು. ಆ ಬಳಿಕ 1977/78 ರಲ್ಲೂ ಅವರ ನಾಯಕತ್ವದಲ್ಲೇ ತಂಡ ಎರಡನೇ ರಣಜಿ ಟ್ರೋಪಿ ಗೆದ್ದು ಬೀಗಿತು. ಆ ಪೈನಲ್ ನಲ್ಲೂ ಗೆಲುವಿಗೆ ಪ್ರಸನ್ನರ 6 ವಿಕೆಟ್ ಗಳ ಕೊಡುಗೆ ಇತ್ತು. ಕರ‍್ನಾಟಕದ ಪರ ಒಟ್ಟು 71 ಪಂದ್ಯಗಳನ್ನಾಡಿ 17.29 ರ ಸರಾಸರಿಯಲ್ಲಿ ಪ್ರಸನ್ನ 370 ವಿಕೆಟ್ ಪಡೆದ್ದಿದ್ದಾರೆ. ಮತ್ತು 37 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 18 ರಲ್ಲಿ ಗೆಲುವು ಕಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಿಂದ ನಿವ್ರುತ್ತರಾದ ಬಳಿಕವೂ ಒಂದು ವರ‍್ಶ ದೇಸೀ ಕ್ರಿಕೆಟ್ ಆಡಿ ತಮ್ಮ ಕಡೇ ರಣಜಿ ಪಂದ್ಯದಲ್ಲೂ ಐದು ವಿಕೆಟ್ ಪಡೆದದ್ದು ಕರ‍್ನಾಟಕ ಕ್ರಿಕೆಟ್ ಬಗ್ಗೆ ಅವರಿಗಿದ್ದ ಪ್ರೀತಿಗೆ ಒಂದು ಎತ್ತುಗೆ ಎಂದರೆ ತಪ್ಪಲಾರದು.

ಆಪ್ ಸ್ಪಿನ್ ಅಂದರೆ ಪ್ರಸನ್ನ

ಆಸ್ಟ್ರೇಲಿಯಾದ ದಿಗ್ಗಜ ಇಯಾನ್ ಚಾಪೆಲ್ ತಾವು ‘ಇಶ್ಟು ವರ‍್ಶದ ಕ್ರಿಕೆಟ್ ಬದುಕಿನಲ್ಲಿ ಕಂಡ ಸರ‍್ವಶ್ರೇಶ್ಟ ಆಪ್ ಸ್ಪಿನ್ನರ್ ಅಂದರೆ ಅದು ಪ್ರಸನ್ನ’ ಎಂದು ಈಗಲೂ ಸಹ ಎಲ್ಲಾ ವೇದಿಕೆಗಳಲ್ಲಿ ಮುಕ್ತಕಂಟದಿಂದ ಹೊಗಳುತ್ತಾರೆ. ‘ಸ್ಟಂಪ್ ಗಳಿರುವುದು ಬ್ಯಾಟ್ಸ್ಮನ್ ತನ್ನ ನಿಲ್ಲುವ ಎಡೆ ಗುರುತಿಸಿಕೊಳ್ಳಲಲ್ಲ, ಬೌಲರ್ ಗುರಿ ಇಟ್ಟು ಚೆದುರಿಸಲು’ ಎಂದು ನಂಬಿದ್ದ ಪ್ರಸನ್ನರಲ್ಲಿ ಇದ್ದಿದ್ದು ಒಬ್ಬ ವೇಗದ ಬೌಲರ್ ನಲ್ಲಿರುವ ಮನಸ್ತಿತಿ. ಹೆಚ್ಚು ಕೆಟ್ಟ ಎಸೆತಗಳನ್ನು ಹಾಕದೆ ತಮ್ಮ ಲೂಪ್, ಟರ‍್ನ್ ಹಾಗೂ ಪ್ಲೈಟ್ ನಿಂದ ಬ್ಯಾಟ್ಸ್ಮನ್ ನನ್ನು ಔಟ್ ಮಾಡಲು ತಂತ್ರ ರೂಪಿಸುತ್ತಿದ್ದರು. ‘ಬ್ಯಾಟ್ಸ್ಮನ್ ಬೀಟ್ ಆಗಿ ಬೌಲರ್ ನ ಮುಕ ನೋಡದೆ ಕಣ್ಣೋ ಟ ಬದಲಿಸಿದನೆಂದರೆ ಬೌಲರ್ ಆಗಿ ಅದು ನನ್ನ ಗೆಲುವು’ ಎಂದು ಪ್ರಸನ್ನ ನಂಬಿದ್ದರು. ಇದೇ ಕಾರ‍್ಯವೈಕರಿಯಿಂದ ಹಲವಾರು ವಿಕೆಟ್ ಪಡೆದು ದಿಗ್ಗಜರಾದರೂ ‘ನಾನೆಂದೆಂದೂ ಸ್ಪಿನ್ ವಿದ್ಯಾರ‍್ತಿ, ಒಂದು ಜೀವಮಾನದಲ್ಲಿ ಆಪ್-ಸ್ಪಿನ್ ಅನ್ನು ಪೂರ‍್ತಿಯಾಗಿ ಅರಿತು ನಿಪುಣನಾಗಲು ಸಾದ್ಯವಿಲ್ಲ’ವೆಂದು ಇಂದಿಗೂ ಹೇಳುತ್ತಾರೆ. 1976 ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಹೀಗೇ ತಂತ್ರ ರೂಪಿಸಿ, ಬಲೆ ಹೆಣೆದು ಗ್ಯಾರಿ ಸೋಬರ‍್ಸ್ ರನ್ನು ಕಟ್ಟಿ ಹಾಕಿ ಕ್ಲೀನ್ ಬೌಲ್ಡ್ ಮಾಡಿದಾಗ ಅಲ್ಲಿನ ಪತ್ರಿಕೆಗಳು “ಪ್ರಸನ್ನ ಬೌಲ್ಸ್ ಸೋಬರ‍್ಸ್” ಎಂದು ಮುಕ್ಯ ಶೀರ‍್ಶಿಕೆ ನೀಡಿದ್ದವು. ದಂತಕತೆ ಬ್ರಾಡ್ಮನ್ ಒಬ್ಬರನ್ನು ಬಿಟ್ಟರೆ ಇನ್ಯಾವ ವಿದೇಶಿ ಆಟಗಾರನಿಗೂ ಸಿಗದ ಗೌರವ ಪ್ರಸನ್ನ ಒಬ್ಬರಿಗೆ ಮಾತ್ರ ಸಂದಿರುವುದು ಅವರ ಚಳಕಕ್ಕೆ ಸಾಕ್ಶಿ.

ನೇರ ನಡೆ-ನುಡಿಗೆ ಹೆಸರುವಾಸಿಯಾಗಿದ್ದ ಪ್ರಸನ್ನ 1972/73 ರ ಇಂಗ್ಲೆಂಡ್ ಟೆಸ್ಟ್ ನಲ್ಲಿ ಡ್ರಾ ಮಾಡಿಕೊಳ್ಳಲೆಂದು ಪೀಲ್ಡ್ ರೂಪಿಸಿ ಬೌಲ್ ಮಾಡಲು ನಾಯಕ ವಾಡೇಕರ್ ಹೇಳಿದಾಗ, ‘ಆಪ್-ಸ್ಪಿನ್ ಬಗ್ಗೆ ನಿಮಗಿಂತ ನನಗೆ ಹೆಚ್ಚು ತಿಳಿದಿದೆ, ನಾನು ಹೇಳಿದಂತೆ ಪೀಲ್ಡ್ ಕೊಡಿ’ ಎಂದು ಪಟ್ಟು ಹಿಡಿದು, ಬಳಿಕ ಮುಂದಿನ ಏಳು ವಿಕೆಟ್ ಗಳನ್ನು ಒಂದು ಗಂಟೆಯೊಳಗೆ ಕೆಡವಿ ಬಾರತಕ್ಕೆ ಗೆಲುವು ತಂದು ಕೊಟ್ಟಿದ್ದರು. ಈ ಗಟನೆ ಪ್ರಸನ್ನರ ತನ್ನಂಬಿಕೆ ಹಾಗೂ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.

ನಿವ್ರುತ್ತಿ ನಂತರದ ಬದುಕು

ಆಡುವುದನ್ನು ನಿಲ್ಲಿಸಿದರೂ ಕ್ರಿಕೆಟ್ ಗೀಳು ಪ್ರಸನ್ನರನ್ನು ಇಂದಿಗೂ ಬಿಟ್ಟಿಲ್ಲ. ಕೆಲ ಕಾಲ ಬಾರತ ತಂಡದ ವಿದೇಶ ಪ್ರವಾಸದ ವೇಳೆ ಮ್ಯಾನೇಜರ್ ಆಗಿ, ಟೀವಿ- ರೇಡಿಯೋ ನೇರುಲಿಗರಾಗಿ, ತರಬೇತುದಾರರಾಗಿ ಪ್ರಸನ್ನ ಕ್ರಿಕೆಟ್ ನೊಟ್ಟಿನ ನಂಟನ್ನು ಉಳಿಸಿಕೊಳ್ಳುತ್ತಾ ಬಂದಿದ್ದಾರೆ. 2007 ರಲ್ಲಿ ಮೊದಲಾದ ವಿವಾದಿತ ಐಸಿಎಲ್ ನಲ್ಲೂ ರೆಪರೀ ಆಗಿ ದುಡಿದ್ದಿದ್ದರು. ಅವರ ಕ್ರಿಕೆಟ್ ಸಾದನೆಯನ್ನು ಗುರುತಿಸಿ ಕೇಂದ್ರ ಸರ‍್ಕಾರ 1969 ರಲ್ಲಿ ಅರ‍್ಜುನ ಹಾಗೂ 1970 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ತಮ್ಮ ಕ್ರಿಕೆಟ್ ಬದುಕಿನ ಕಡೇ ವರ‍್ಶ ಅವರ ಆತ್ಮಕತೆ “ಒನ್ ಮೋರ್ ಓವರ‍್” ಎಂಬ ಹೊತ್ತಗೆಯನ್ನು ಬರೆದ್ದದ್ದು ವಿಶೇಶ. ಬಂಗಾಳದಿಂದ ಬಂದ ತಮ್ಮನ್ನು ಪ್ರಸನ್ನರ ತುಂಬು ಕುಟುಂಬ ಒಪ್ಪಿಕೊಂಡು, ಒಂದೇ ವರ‍್ಶದಲ್ಲಿ ಕನ್ನಡವನ್ನು ಕಲಿಯಲು ನೆರವಾಗಿ ಚೆನ್ನಾಗಿ ಹೊಂದಿಕೊಂಡದ್ದನ್ನು, ಆ ಹೊತ್ತಗೆಯಲ್ಲಿ ಅವರ  ಹೆಂಡತಿ ಶೀಮಾ ಪ್ರಸ್ತಾಪಿಸಿದ್ದಾರೆ.

ಬಾರತದ ಸ್ಪಿನ್ ಪರಂಪರೆಯ ರೂವಾರಿ ನಮ್ಮ ಪ್ರಸನ್ನ

ಬಾರತದ ಮೊದಲ ದಿಗ್ಗಜ ಸ್ಪಿನ್ನರ್ ಪ್ರಸನ್ನ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗಲೂ ಸಹ ನೇರುಲಿಗರಾಗಿರುವ ಇಂಗ್ಲೆಂಡ್, ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗರು ಪ್ರಸನ್ನರ ಬೌಲಿಂಗ್ ವಿಶ್ಲೇಶಣೆಯನ್ನು ಮಾಡುತ್ತಾ ಅವರ ಬೌಲಿಂಗ್ ನಿಂದ ಯುವ ಸ್ಪಿನ್ನರ್ ಗಳಿಗೆ ಕಲಿಯಲು ಸಾಕಶ್ಟಿದೆ. ಅವರ ಚಳಕ ಸ್ಪಿನ್ನರ್ ಗಳಿಗೆ ಮಾದರಿ ಎಂದು ಹೇಳುತ್ತಾರೆ. ಅದಿಕ್ರುತ ತರಬೇತುದಾರರಿಲ್ಲದ ಕಾಲದಲ್ಲಿ ತಮ್ಮಶ್ಟಕ್ಕೆ ತಾವೇ ಬೌಲಿಂಗ್ ಪಟ್ಟುಗಳನ್ನು ಕಲಿತು, ಚಳಕವನ್ನು ಕರಗತ ಮಾಡಿಕೊಂಡು ಪ್ರಸನ್ನ ಅವರು ದಿಗ್ಗಜರಾಗಿ ಬೆಳೆದ ಪರಿ ನಿಜಕ್ಕೂ ಅಚ್ಚರಿಯ ವಿಶಯ. ಕ್ರಿಕೆಟ್ ಮೇಲಿನ ಪ್ರೀತಿಯಿಂದಶ್ಟೇ ಆಟವಾಡುತ್ತಿದ್ದ ಪೀಳಿಗೆ ಅದು. ಪ್ರಸನ್ನ ಅವರು ವಿದೇಶ ಪ್ರವಾಸದ ವೇಳೆ ದಿನಕ್ಕೆ ಸಿಗುತ್ತಿದ್ದ 2 ಪೌಂಡ್ ಬತ್ಯೆಯನ್ನು ಉಳಿಸಿಕೊಳ್ಳಲು ಕ್ಯಾಬ್ ಬಳಸದೆ ಸ್ಟೇಡಿಯಮ್ ಗೆ ನಡೆದೇ ಹೋಗುತ್ತಿದ್ದದ್ದು ಮತ್ತು ಬೆಳಗಿನ ತಿಂಡಿ ತಿನ್ನದೇ ಆಟದ ವೇಳೆ ಉಚಿತವಾಗಿ ಸಿಗುತ್ತಿದ್ದ ಬಿಸ್ಕೆಟ್, ಟೀ ಕುಡಿದುಕೊಂಡೇ ಆಟ ಆಡುತ್ತಿದ್ದದ್ದು ನಂಬಲಸಾದ್ಯವಾದರೂ ದಿಟ. ಸಾಮಾಜಿಕ ಜಾಲತಾಣ, ಸುದ್ದಿ ಮಾದ್ಯಮಗಳಿಂದ ದೂರವಿದ್ದು ಎಲೆಮರೆ ಕಾಯಿಯಂತೆ ಬೆಂಗಳೂರಿನಲ್ಲಿ ಬದುಕುತ್ತಿರುವ ಇಂತಹ ಒಬ್ಬ ದಿಗ್ಗಜ ಕನ್ನಡಿಗನ ಸಾದನೆಯನ್ನು ಮರೆಯದೇ ನೆನೆದು, ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಹೊಣೆ.

( ಚಿತ್ರಸೆಲೆ : mid-day.com, espncricinfo.com, indianetzone.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Nagesh says:

    ಪ್ರಸನ್ನ ಅವರ ಬೌಲಿಂಗ್‌ ನ ಯಾವುದಾದರೂ ವಿಡಿಯೋ ಇದ್ದರೆ ಬಹಳ ಚೆನ್ನಾಗಿರುತ್ತಿತ್ತು

ಅನಿಸಿಕೆ ಬರೆಯಿರಿ:

%d bloggers like this: