ದೆವ್ವ ಮೆಟ್ಟಿದೆ!?

– .

ನಂಬಿಕೆಗಳು ಯಾವತ್ತೂ ಮನುಶ್ಯರ ಮನಸ್ಸಿಗೆ ಸಂಬಂದಿಸಿದ್ದು. ಅತ್ಯಂತ ದುರ‍್ಬಲ ಮನಸ್ಸಿನ ವ್ಯಕ್ತಿಗೆ ಯಾರೋ ಕುಂಕುಮ ಮಂತ್ರಿಸಿ ಎಸೆದ ನಿಂಬೆಹಣ್ಣನ್ನು ಕಾಣದೆ ತುಳಿದರೆ ಹಾವು ತುಳಿದಶ್ಟೆ ಹೌಹಾರುತ್ತಾನೆ. ನಿಂಬೆಹಣ್ಣನ್ನು ತುಳಿದ ಕಾಲು ಊದಿಕೊಳ್ಳುತ್ತದೆ, ನಡೆಯಲು ಆಗುವುದಿಲ್ಲ ಎಂಬ ಬ್ರಮೆ ಕಾಡಬಹುದು. ಆಸ್ಪತ್ರೆಗೂ ಓಡಾಡಿ ಕಡಿಮೆಯಾಗದ ಕಾರಣ ಕಡೆಗೆ ತಮ್ಮೂರಿನ ಮಂತ್ರವಾದಿಯ ಬಳಿಗೆ ಹೋದರೆ, ಮೊದಲೇ ಮಂತ್ರಿಸಿದ ನಿಂಬೆಹಣ್ಣನ್ನು ತುಳಿದು ಮನಸ್ಸು ಹೈರಾಣಾಗಿರುವವರಿಗೆ ಈ ಮಂತ್ರವಾದಿ “ನಿನಗೆ ಆಗದವರು ಯಾರೋ ನಿಂಬೆಹಣ್ಣು ಮಂತ್ರಿಸಿ ನಿಮ್ಮ ಮನೆ ಬಾಗಿಲ ಬಳಿ ಎಸೆದಿದ್ದಾರೆ. ಯಾವುದೋ ಕೆಟ್ಟ ಶಕ್ತಿ ನಿಮ್ಮ ದೇಹ ಸೇರಿ ನಿಮಗೆ ಕಾಲು ಊದುವಂತೆ ಮಾಡಿ ನಿಮಗೆ ಕಿರುಕುಳ ಕೊಡ್ತಾ ಇದೆ. ಅದಕ್ಕಾಗಿ ಈ ದುಶ್ಟ ಶಕ್ತಿಯಿಂದ ನಿನ್ನನ್ನು ಮುಕ್ತಗೊಳಿಸಬೇಕು” ಎಂದು ಹೇಳುತ್ತಾರೆ. ಇಂತಹ ಅಮಾನುಶ ಶಕ್ತಿಯ ಬಗ್ಗೆ ಅಪಾರ ನಂಬಿಕೆ ಇರುವ ಮಹಾಶಯ ಈ ಮಾತಿನಿಂದ ಬಯಬೀತನಾಗುತ್ತಾನೆ! ಮಂತ್ರವಾದಿ ಹೇಳಿದಂತೆ ದೆವ್ವ ವಿಮೋಚನೆ ಮಾಡದೆ ಹೋದರೆ ಈ ದುಶ್ಟ ಶಕ್ತಿ ನನ್ನ ಪ್ರಾಣಕ್ಕೂ ಸಂಚಕಾರ ತಂದೀತು ಮತ್ತು ನನ್ನ ಕುಟುಂಬದ ಇತರ ಸದಸ್ಯರ ಮೇಲೂ ಕಣ್ಣು ಹೊರಳಿಸಿ ತೊಂದರೆ ಕೊಟ್ಟೀತು ಎಂಬ ಮಾತು ಅವನನ್ನು ಮತ್ತಶ್ಟು ಅದೀರನಾಗಿಸುತ್ತದೆ. ಮಂತ್ರವಾದಿಯ ಮಾತಿನಂತೆ ಅಮಾವಾಸ್ಯೆಯ ಮುಸ್ಸಂಜೆ ಬೂತೋಚ್ಚಾಟನಾ ಶಾಸ್ತ್ರಕ್ಕೆ ಮದುಮಗನಂತೆ ಸಿದ್ದನಾಗುತ್ತಾನೆ.

ಅದೊಂದು ಸ್ಮಶಾನ, ಅಲ್ಲಿ ಮಂತ್ರವಾದಿ, ಬೂತೋಚ್ಚಾಟನೆ ಮಾಡಿಸಿಕೊಳ್ಳುವ ಮಹಾಶಯ ಮತ್ತು ಅವನ ಆಸರೆಗೆ ಗೆಳೆಯನ ಹಾಜರಾತಿಯಲ್ಲಿ ಬೂತ ಓಡಿಸುವ ಕಾರ‍್ಯಕ್ರಮ ಪ್ರಾರಂಬವಾಯ್ತು. ಬೂತ ಹಿಡಿದಿದೆ ಎಂದು ಬಿಂಬಿಸಲಾದ ಮಹಾಶಯನನ್ನು ಬಣ್ಣ ಬಣ್ಣದ ರಂಗೋಲಿ ಪುಡಿಯಿಂದ ಬರೆದ ಒಂದು ಮಂಡಲದಲ್ಲಿ ದಕ್ಶಿಣ ದಿಕ್ಕಿಗೆ ಮುಕ ಮಾಡಿ ಕೂರಿಸಿ ಅವನ ಮುಂದೆ ಒಂದು ಅಗ್ನಿಕುಂಡ ರಚಿಸಿ “ಓಂ ಹ್ರೀಂ ಶ್ರೀಂ ಕ್ಲಿಂ ಆದ್ಯ ಕಾಳಿಕಾ ಪರಂ ಈಶ್ವರೀ ಸ್ವಾಹಾ, ಕ್ರೀಂ ಕ್ರೀಂ ಹಂ ಹಂ ಹ್ರೀಂ ಹ್ರೀಂ ದಕ್ಶಿಣೇ ಕಾಳಿಕಾ, ಓಂ ಹ್ರೀಂ ಬ್ರೂಮ್ ವವೌಶಟ್‌ ಸ್ವಾಹ” ಎಂದು ಏನೇನೋ ಮಂತ್ರ ಬಡಬಡಿಸುತ್ತ ಆ ಅಗ್ನಿ ಕುಂಡಕ್ಕೆ ಬೂದಿ ಎರಚತೊಡಗಿದ. ಅದೇ ಬೂದಿಯನ್ನು ಅಂಗೈಯಲ್ಲಿ ಹಿಡಿದು ಅವನ ಮುಕಕ್ಕೆ ಊದಿದ, ಆ ಬೂದಿಯೆಲ್ಲ ಕಣ್ಣು, ಮೂಗು, ಬಾಯಿ ಸೇರಿ ಅವನನ್ನು ಮುಲುಕುವಂತೆ ಕಿರುಗುಟ್ಟಿಸಿತ್ತು. ಆ ಮುಸ್ಸಂಜೆಯ ಕತ್ತಲಲ್ಲಿ ಬೂದಿ ಎರಚಿದ ಈ ಮಹಾಶಯನ ಮುಕ ನೋಡಿದರೆ ಸಾಕು, ಸಾಕ್ಶಾತ್ ಬೂತ ದರ‍್ಶನದಂತೆ ಇತ್ತು! ಅಗ್ನಿಕುಂಡಕ್ಕೆ ಅದೆಂತಹದ್ದೊ ಸೊಪ್ಪು, ಸೌದೆ, ಸಾಂಬ್ರಾಣಿ ಹಾಕಿ ಹೊಗೆ ಎಬ್ಬಿಸಿ ಮುಂದಲೆ ಕೂದಲು ಹಿಡಿದು ಅಗ್ನಿಕುಂಡಕ್ಕೆ ಮಹಾಶಯನ ಮುಕ ಬಗ್ಗಿಸಿ “ಏ ಅಂತರ‍್ಪಿಶಾಚಿಯೇ ದೇಹ ಬಿಟ್ಟು ತೊಲಗು!” ಎಂದು ಏನೇನೋ ಮಂತ್ರ ಬಡಬಡಿಸತೊಡಗಿದ. ಅಗ್ನಿಕುಂಡಕ್ಕೆ ಮುಕವೊಡ್ಡಿದವನ ನವರಂದ್ರಗಳಲ್ಲೂ ಉರಿ ಹತ್ತಿಕೊಂಡಿತು.

ಹೊಗೆಯ ಉರಿಗೆ ಕಣ್ಣೀರು ದಾರಾಕಾರವಾಗಿ ಅಗ್ನಿಕುಂಡ ಸೋಕಿ ಚುರ‍್ ಚುರ‍್ ಎನ್ನುತಿದ್ದರೆ. ಆದರೆ ಈ ಮಂತ್ರವಾದಿ ತುಂಬಾ ಹಟವಾದಿ, ಈ ದೇಹ ಸೇರಿದ ಪಿಶಾಚಿ ಬಾಯೇ ಬಿಡುತ್ತಿಲ್ಲ! “ಇದೇನಾದರೂ ಮೂಕ ದೆವ್ವವೋ ಹೇಗೆ?” ಎಂಬ ಸಂಶಯ ಶುರುವಾಯ್ತು ಅವನಲ್ಲಿ. ಇದು ಸುಲಬಕ್ಕೆ ತೊಲಗುವ ದೆವ್ವವಲ್ಲವೆಂದು ಮಂತ್ರವಾದಿ ಬೇವಿನ ಸೊಪ್ಪಿನ ಕಟ್ಟಿನಿಂದ ಒಂದೇ ಸಮನೆ ತಲೆಗೆ ಬಾರಿಸತೊಡಗಿದ! ದೆವ್ವ ಜಪ್ಪಯ್ಯ ಎನುತ್ತಿಲ್ಲ. ಅಂದರೆ ಈ ನಂಬಿಕೆಯ ನಡುವೆ ದೆವ್ವ ಮೆಟ್ಟಿಕೊಂಡವನು ಎಂದು ಬಿಂಬಿಸಲಾದ ಮಹಾಶಯನ ತಾಳ್ಮೆಯ ಪರಿ ಅದಿನ್ನೆಂತಹದ್ದು? ಆ ದೇವರೆ ಬಲ್ಲ! ದೆವ್ವ ಮೆಟ್ಟಿದವನ ತಾಳ್ಮೆಗಿಂತ, ಬಲವಾದ ನಂಬಿಕೆ ತನಗಾಗುತ್ತಿರುವ ನೋವನ್ನೆಲ್ಲ ಸಹಿಸಿ ಒಳಗೆ ನುಂಗಿಕೊಳ್ಳುವಂತೆ ಮಾಡಿತ್ತು. ಆತನ ನಂಬಿಕೆಯ ಎತ್ತರ ಎಶ್ಟಿತ್ತೆಂದರೆ “ನನ್ನೊಳಗೆ ಮೆಟ್ಟಿಕೊಂಡಿರುವ ದೆವ್ವಕ್ಕೆ ಬಯ ಹುಟ್ಟಿ ಬಾಯಿ ಬಿಡಬೇಕೆ ವಿನಹ, ನಾನು ಬಾಯಿ ಬಿಡುವುದಿಲ್ಲ!” ಎಂಬ ಬಂಡತನ ಇತ್ತು. ಆದರೆ ಹಟವಾದಿ ಮಹಾಮಾಂತ್ರಿಕ ಮಾತ್ರ ಸೋಲೊಪ್ಪಲು ತಯಾರಿಲ್ಲ. “ಇದು ಅಂತಿಂತ ದೆವ್ವವಲ್ಲ, ಬಂಡ ದೆವ್ವವೇ ಸರಿ!” ಎಂದು ಜೋಳಿಗೆಯಿಂದ ಹಳೆಯ ಚಪ್ಪಲಿ ತೆಗೆದು ಒಂದೇ ಸಮನೆ ದೆವ್ವ ಮೆಟ್ಟಿದ ಮಹಾಶಯನ ತಲೆಗೆ ಪಟ ಪಟನೆ ಬಾರಿಸತೊಡಗಿದ! ಬಹುಶಹ ಹಳೆಯ ಚಪ್ಪಲಿಯೊಳಗಿನ ಎದ್ದ ಮೊಳೆಯಿಂದಾಗಿ ತಲೆ ಬುರುಡೆಯ ಚರ‍್ಮ ಕಿತ್ತು ರಕ್ತ ಬರತೊಡಗಿತು. ಅಬ್ಬಾ! ಆದರೂ ದೆವ್ವ ಮೆಟ್ಟಿದವ ಒಂಚೂರು ಮಿಸುಕಲಿಲ್ಲ. ಮಂತ್ರವಾದಿಯ ತಾಳ್ಮೆ ಮೀರತೊಡಗಿತೋ ಏನೋ? “ಇದು ಮೊಂಡ ದೆವ್ವವೇ ಸರಿ” ಎಂದು ಎತ್ತಿಗೆ ಬಾರಿಸುವ ಬಾರು ಕೋಲು ತೆಗೆದು ಮೈ ಮೇಲೆ ಬಾಸುಂಡೆ ಬರುವಂತೆ ಬಾರಿಸುತ್ತ ಜೋರಾಗಿ “ತೊಲಗು… ದೇಹ ಬಿಟ್ಟು ತೊಲಗು!” ಎಂದು ಮಂತ್ರವಾದಿ ಕೂಗತೊಡಗಿದ.

ಈಗ ಅಕ್ಶರಶಹ ಮಂತ್ರವಾದಿಗೇ ದೆವ್ವ ಮೆಟ್ಟುಕೊಂಡಿರುವಂತೆ ಕಾಣಿಸತೊಡಗಿತು! ಬಾರು ಕೋಲಿನ ಹೊಡೆತ ತಾಳಲಾರದ ಮಹಾಶಯನ ತಾಳ್ಮೆ ಕಟ್ಟೆ ಒಡೆಯತೊಡಗಿತು. ದೆವ್ವವಲ್ಲದಿದ್ದರೂ, ಈ ಮಂತ್ರವಾದಿ ನನ್ನ ಜೀವ ತೆಗೆಯುತ್ತಾನೆ ಎಂದುಕೊಂಡು “ಅಯ್ಯೋ! ನಾನು ಬಿಟ್ಟು ಹೋಗ್ತೀನಿ…! ನಾನು ಬಿಟ್ಟೆ ಹೋಗ್ತೀನಿ…! ಅಯ್ಯೋ ನಾನು ಬಿಟ್ಟೆ!” ಎಂದು ಇಲ್ಲದ ದೆವ್ವಕ್ಕೆ ಆತನೇ ಶರಣಾಗತನಾದ. ಮತ್ತು ಈ ದೆವ್ವ ಬಿಡಿಸುವ ಪ್ರಹಸನ ನೋಡುಗರಿಗೆ “ಅಯ್ಯೋ! ನಾನು ಬಿಟ್ಟೆ…!” ಎನ್ನುವ ಉವಾಚ ದೆವ್ವ ಮೆಟ್ಟಿಕೊಂಡಿರುವುದು ಸತ್ಯ ಎಂಬ ನಂಬಿಕೆ ಗಟ್ಟಿಗೊಳಿಸುವಂತಿತ್ತು. ಇತ್ತ ದೆವ್ವ ಮೆಟ್ಟಿಕೊಂಡ ಮಹಾಶಯ ಹೈರಾಣಾಗಿದ್ದ, ಹೊಡೆತಗಳಿಂದ ದೇಹ ಜರ‍್ಜರಿತವಾಗಿತ್ತು. ಇದರ ಜೊತೆಗೆ ಮಂತ್ರವಾದಿ ದೊಡ್ಡ ಮೊತ್ತದ ರೊಕ್ಕ ಪೀಕಿದ ನೋವು. ಮಂತ್ರವಾದಿಯು ಸಾರ‍್ವಜನಿಕವಾಗಿ ನಂಬಿಸಬೇಕಾದ ಮೌಡ್ಯಗಳನ್ನು ಬಲವಾಗಿ ನಂಬಿಕೆ ಹುಟ್ಟಿಸುವ ಉದ್ದೇಶವೂ ಇದ್ದರಿಂದ ಈಡೇರಿತು. ಕಪಟ, ಮೋಸ, ವಂಚನೆಯನ್ನೇ ತನ್ನ ಬದುಕಿನ ಬಂಡವಾಳ ಮಾಡಿಕೊಂಡಿರುವ ಮಂತ್ರವಾದಿಯ ಜೋಳಿಗೆ ಇದರಿಂದ ತುಂಬಿತ್ತು.

ಹೊಡೆತಗಳಿಂದ ಚೇತರಿಸಿಕೊಳ್ಳಲು ಆಸ್ಪತ್ರೆಗೆ ದಾಕಲಾಗಿ, ಅಲ್ಲಿಯೂ ವಾರಗಟ್ಟಲೆ ಚಿಕಿತ್ಸೆ ಪಡೆದು ದೊಡ್ಡ ಮೊತ್ತದ ಪೀಸು ಪೀಕಿದ. ದೆವ್ವ ಮೆಟ್ಟಿದವನಿಗೆ ಇದು ಡಬಲ್ ದಮಾಕವೇ ಆಗಿತ್ತು. ಅವನ ಒಳಗೆ ಈ ಮೌಡ್ಯ ಆಚರಣೆಯ ಮೇಲಿರುವ ನಂಬಿಕೆ ಬುಡಮೇಲಾಗಲು ಶುರುವಾಗತೊಡಗಿತು. ಮಂತ್ರವಾದಿ ತನ್ನ ಸುಳ್ಳಿನ ಕಂತೆ, ನಂಬಿಕೆಗಳ ಕಪಟ ನಾಟಕದಿಂದ ಮುಗ್ದ ಜನರನ್ನು ಯಾಮಾರಿಸುತ್ತಲೇ ಅವರ ಬದುಕನ್ನು ಕತ್ತಲೆಗೆ ದೂಡುವ ಹುನ್ನಾರದೊಂದಿಗೆ ಡಂಬಾಚಾರದಿಂದ ತನ್ನ ಬದುಕನ್ನು ಸುಲಲಿತಗೊಳಿಸಿಕೊಂಡಿದ್ದ. ಅಕ್ಶರ ಗ್ನಾನದಿಂದ ಮೌಡ್ಯಾಚಾರಣೆಯ ಮೇಲಿನ ನಂಬಿಕೆಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ ಎಂದರೆ, ನಮ್ಮ ದೇಶದ ವಿದ್ಯಾವಂತರಲ್ಲೂ ಅತಿ ಹೆಚ್ಚು ಮೌಡ್ಯಚಾರಣೆ ಇರುವುದು ಮತ್ತು ಅವುಗಳ ಮೇಲಿನ ನಂಬಿಕೆ ಹೆಚ್ಚುತ್ತಿರುವುದು ಆಶ್ಚರ‍್ಯವೇ ಸರಿ!

(ಚಿತ್ರಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sanjeev Hs says:

    ಮೌಢ್ಯದ ಬಗ್ಗೆ ಮೂಡಿಬಂದಿರುವ ಬರಹ ಅತ್ಯಂತ ವೈಜ್ಞಾನಿಕವಾಗಿ ಕೂಡ ಅದ್ಭುತವಾಗಿದೆ

ಅನಿಸಿಕೆ ಬರೆಯಿರಿ: