ಗಂಡ-ಹೆಂಡತಿ ನಡುವಿನ ಬಾಂದವ್ಯ

ಅಶೋಕ ಪ. ಹೊನಕೇರಿ.

ಮದುವೆ, Marriage

‘ಮದುವೆಗಳು ಸ್ವರ‍್ಗದಲ್ಲಿ ನಡೆಯುತ್ತವೆ’ ಎಂಬ ಆಡು ಮಾತು ಸತಿ-ಪತಿಯರ ನಡುವೆ ಮದರ ಬಾಂದವ್ಯ ಇರಲಿ ಎನ್ನುವ ಉಪಮೆಯ ಮಾತಿರಬಹುದು. ‘ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ’ ಎಂಬ ಮಾತಿನಲ್ಲಿ ರೋಮಾಂಚನವಿದೆ. ಗಂಡ ಹೆಂಡಿರ ಸಂಬಂದ ಈ ಪ್ರಪಂಚದಲ್ಲಿಯೇ ಅತ್ಯಂತ ವಿಶೇಶವಾದ ಸಂಬಂದ. ಇಲ್ಲಿ ಮನಸ್ಸು ಮತ್ತು ದೇಹದ ಮೈತ್ರಿ ಇದೆ. ಪತ್ನಿ ಪತಿಗೆ ತಾಯಿಯಂತೆ ಪ್ರೀತಿಯಿಂದ ಉಣಬಡಿಸಿ, ಮನಸಿಗೆ ಸಂಕಟವಾದಾಗ ಮಡಿಲಲ್ಲಿ ತಲೆಯಿರಿಸಿಕೊಂಡು ಸಾಂತ್ವನ ಹೇಳುತ್ತಾಳೆ. ಗಂಡ ಏನೇನೊ ತಿಂದು, ಕುಡಿದು ಆರೋಗ್ಯ ಕೆಡಿಸಿಕೊಂಡು ಹಾಸಿಗೆ ಹಿಡಿದರೆ ಓರ‍್ವ ದಾದಿಯಂತೆ ಸೇವೆ ಮಾಡುತ್ತಾಳೆ. ಮನೆಯೆಲ್ಲ ಒಪ್ಪ ಓರಣವಾಗಿಟ್ಟ ಗ್ರುಹಿಣಿ ಸಂಜೆ ಪತಿಯ ಬರುವಿಕೆಯ ಎದುರು ನೋಡುತ್ತ ಪುಳಕಿತಳಾಗುತ್ತಾಳೆ.

ಹೆಂಡತಿಯ ಸಮರ‍್ಪಣ ಬಾವ ಒಮ್ಮುಕವಾಗದೆ, ಅದಕ್ಕೆ ಪ್ರತಿಯಾಗಿ ಗಂಡನೂ ಕೂಡ ತನಗೋಸ್ಕರ ಮಿಡಿಯುವ ತುಡಿಯುವ ಪತ್ನಿಯ ಜೀವಕೆ ಊರುಗೋಲಾಗಿ ಅವಳ ಸಣ್ಣ ಸಣ್ಣ ಆಸೆ ಆಕಾಂಕ್ಶೆಗಳನ್ನು ಪ್ರೀತಿಯಿಂದ ನೆರವೇರಿಸಲು ಹೆಣಗುತ್ತಲೇ ಇರುತ್ತಾನೆ. ತನಗಾಗಿ ಇಶ್ಟೆಲ್ಲ ಮಾಡುವ ಹೆಂಡತಿ ಏನಾದರೂ ನೋವುಂಡರೆ ಮನಸಾರೆ ಮರುಗುತ್ತಾನೆ. ಆರೋಗ್ಯ ಹದಗೆಟ್ಟರೆ ಚಡಪಡಿಸುತ್ತಾನೆ.

ಪತಿ-ಪತ್ನಿ ಇಬ್ಬರು ಒಂದು ರತದ ಎರಡು ಚಕ್ರಗಳಿದ್ದಂತೆ. ರತದ ಒಂದು ಚಕ್ರ ಮುರಿದರೂ, ಹಾನಿಗೊಳಗಾದರೂ ಸಂಸಾರದ ರತ ಮುಂದೆ ಸಾಗಲಾರದು. ಹಾಗೆಯೇ ಪತಿ ಪತ್ನಿಯರು ಒಮ್ಮನಸಿನಿಂದ, ಪ್ರೀತಿಯ ಮದುರ ಬಾಂದವ್ಯದಿಂದಲೇ ಸಂಸಾರದ ರತ ಎಳೆಯಬೇಕು. ಒಂದು ಮಾತಿದೆ, ‘ಹೊಸತರಲ್ಲಿ ಅಗಸ ಎತ್ತೆತ್ತಿ ಒಗೆದ  ಕ್ರಮೇಣ ಕುಕ್ಕತೊಡಗಿದ’ ಎಂದು. ಹೊಸದರಲ್ಲಿ ಪತಿ ಪತ್ನಿಯರ ಬಾಂದವ್ಯ ಮದುರವಾಗಿರುತ್ತದೆ, ಕ್ರಮೇಣ ಗಂಡ ಹೆಂಡತಿ ಉತ್ತರ ದಕ್ಶಿಣವಾಗಿ ಸಂಸಾರದಲ್ಲಿ ಸಾರ, ಸರಸ ಶೂನ್ಯವಾಗಿ ಬಿಡುತ್ತದೆ.

ಸಂಸಾರ ಮೊದಮೊದಲು ವಾಹ್ಹ್ ವಾಹ್ಹ್ ಎನ್ನುವುದು, ತದನಂತರ ವ್ಯಾ ವ್ಯಾ ಎಂದಾಗುತ್ತದೆ ಎನ್ನುವವರು ಇದ್ದಾರೆ. ಸಂಸಾರದಲ್ಲಿ ವಾಹ್ಹ್ ವಾಹ್ಹ್ ಜೊತೆಗೆ ವ್ಯಾ ವ್ಯಾ ಇದ್ದರೇನೆ ಅದು ಸಂಸಾರ. ಗಂಡ ಹೆಂಡತಿ ಜೋಡೆತ್ತಿನ ಗಾಣದಂತೆ ಸಂಸಾರ ಸಾಗರದಲ್ಲಿ ಗಿರಕಿ ಹೊಡೆಯುವಾಗ, ಸುಕದ ಜೊತೆಗೆ ಕಶ್ಟಗಳು ಎದುರಾಗುತ್ತವೆ. ಕಶ್ಟ ಬಂದಾಗ ಮುನಿಸು, ಜಗಳ, ಬಿನ್ನಾಬಿಪ್ರಾಯ ಸರ‍್ವೆ ಸಾಮಾನ್ಯ ಮತ್ತು ಕಶ್ಟಗಳು ಎದುರಾದಾಗ,ಸಮಸ್ಯೆಗಳು ಬಂದಾಗ, ತಪ್ಪು ಮಾಡಿದಾಗ ಜಗಳ, ಗಲಾಟೆ ಮಾಡಿಕೊಳ್ಳದಿದ್ದರೆ ಅದನ್ನು ಸಂಸಾರ ಎಂದು ಕರೆಯಲಾಗುತ್ತದೆಯೇ? ಸಂಕಶ್ಟಗಳು ಸಂಸಾರದಲ್ಲಿ ಎದುರಾದಾಗ ಪತಿ ಪತ್ನಿಯರು ಆದಶ್ಟೂ ಸಂಯಮ ಕಳೆದುಕೊಳ್ಳದೆ ಸಮಾಲೋಚನೆ ನಡೆಸಿ ಕಶ್ಟಗಳಿಗೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಮದುರ ಬಾಂದವ್ಯದ ಹಾದಿ ತೆರೆದುಕೊಳ್ಳುತ್ತದೆ ಮತ್ತು ಗಂಡ ಹೆಂಡಿರ ಬಾಂದವ್ಯ ಮತ್ತಶ್ಟು ಗಟ್ಟಿಯಾಗುತ್ತಾ ಹೋಗುತ್ತದೆ.

“ಇರವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿವುದೆ ಜೀವನ….!!” ಎಂಬುದೊಂದು ಮಾತು. ದಂಪತಿಗಳು ಬದುಕಿನಲ್ಲಿ ಇಲ್ಲದಿರುವುದರ ಬಗ್ಗೆ ಕೊರಗದೇ, ಇರುವುದರಲ್ಲೆ ತ್ರುಪ್ತಿ ಪಟ್ಟುಕೊಂಡು ಹೊಂದಾಣಿಕೆಯೊಂದಿಗೆ ಪ್ರೀತಿಯನ್ನು ಹಂಚಿಕೊಂಡು ಬಾಳ್ವೆ ಮಾಡಬೇಕು. ಆಗ ಬದುಕು ಬಂಗಾರವಾಗುತ್ತದೆ. ಪತಿ-ಪತ್ನಿಯರ ನಡುವಿನ ನಂಟು ಸುಂದರ, ಮದುರ, ಅಮರ ಎಂದು ಜಗಕೆ ಸಾರಬೇಕು.

( ಚಿತ್ರ ಸೆಲೆ : post.jagran.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: