ಕುವೆಂಪು ಕವನಗಳ ಓದು – 7ನೆಯ ಕಂತು

ಸಿ.ಪಿ.ನಾಗರಾಜ.

ಕುವೆಂಪು, kuvempu

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ?
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು
ನಿನ್ನೆದೆಯ ದನಿಯೆ ಋಷಿ ಮನು ನಿನಗೆ ನೀನು
ನೀರಡಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆಬೇಕೇನು
ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ
ದಡದಲ್ಲಿ ಮೀಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವೇನು
ಅಂತು ಮನು ತಾನು ಹೇಳಿರಲಾರನಯ್ಯಯ್ಯೊ
ಹೇಳೀದ್ದರವನನೂ ಶಾಸ್ತ್ರದೊಳೆ ಸುತ್ತಿ
ಸ್ವರ್ಗ ಹೋಗಲಿ ಮತ್ತೆ ನರಕ ಬಂದರು ಬರಲಿ
ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ
ಸ್ವರ್ಗ ಹೋಗುವುದಿಲ್ಲ ನರಕ ಬರುವುದು ಇಲ್ಲ
ಸ್ವರ್ಗ ನರಕಗಳೇನು ಶಾಸ್ತ್ರಸ್ಥವಲ್ಲ
ಎದೆಯ ದನಿ ಧರ್ಮನಿಧಿ ಕರ್ತವ್ಯವದುವೆ ವಿಧಿ
ನಂಬದನು ಅದನುಳಿದು ಋಷಿಯು ಬೇರಿಲ್ಲ
ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೆ ನಮಗೆ ಶ್ರೀಧರ್ಮಸೂತ್ರ.

ಜಾತಿ ಮತ್ತು ಮತದ ಸಂಪ್ರದಾಯಗಳನ್ನು ಪಾಲಿಸುವಾಗ ಹಾಗೂ ದೇವರನ್ನು ಪೂಜಿಸುವಾಗ ಮಾಡಲೇಬೇಕೆಂದು ಶಾಸ್ತ್ರದಲ್ಲಿ ಹೇಳಿರುವ ಕಟ್ಟಳೆಗಿಂತಲೂ ಸಹಮಾನವರೊಡನೆ ಪ್ರೀತಿ, ಕರುಣೆ ಮತ್ತು ಸಾಮರಸ್ಯದ ಸಹಬಾಳ್ವೆಯ ನಡೆನುಡಿ ದೊಡ್ಡದೆಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

( ಶಾಸ್ತ್ರ+ಏನು; ಶಾಸ್ತ್ರ=ಸಾಂಪ್ರದಾಯಿಕ ಆಚರಣೆ/ಕಟ್ಟುಕಟ್ಟಳೆ; ಹೇಳಿದರೆ+ಏನು; ಹೇಳು=ನಿಯಮಿಸು/ಗೊತ್ತುಪಡಿಸು; ಎದೆ=ಮನಸ್ಸು; ದನಿ=ತುಡಿತ/ಮಿಡಿತ;

ಎದೆಯ ದನಿ=ಯಾವುದೇ ಜಾತಿ ಮತದ ಕಟ್ಟುಪಾಡುಗಳಿಗೆ ಒಳಗಾಗದೆ ವ್ಯಕ್ತಿಯ ಮನದಲ್ಲಿ ಸಹಜವಾಗಿ ಉಂಟಾಗುವ ಮಿಡಿತ. ಇದೊಂದು ರೂಪಕವಾಗಿ ಬಳಕೆಯಾಗಿದೆ. ವ್ಯಕ್ತಿಯು ತನ್ನ ಕಣ್ಣ ಮುಂದಿನ ಜಗತ್ತಿನ ಆಗುಹೋಗುಗಳಲ್ಲಿ “ ಯಾವುದು ನಿಸರ‍್ಗ ಸಹಜವಾದುದು–ಯಾವುದು ಮಾನವ ನಿರ‍್ಮಿತ “ ಎಂಬುದನ್ನು ಒರೆಹಚ್ಚಿ ನೋಡಿ, ಜಾತಿ ಮತ ಮತ್ತು ದೇವರುಗಳೆಲ್ಲವೂ ಮಾನವ ನಿರ‍್ಮಿತವೆಂಬ ವಾಸ್ತವವನ್ನು ಅರಿತುಕೊಳ್ಳುವುದು ಮತ್ತು ತನ್ನನ್ನು ಒಳಗೊಂಡಂತೆ ಸಹಮಾನವರೆಲ್ಲರ ಒಳಿತಿಗಾಗಿ ಬಾಳಬೇಕೆಂಬ ಎಚ್ಚರವನ್ನು ಪಡೆಯುವುದು

ಮಿಗಿಲು=ಹೆಚ್ಚಾದುದು; ಶಾಸ್ತ್ರ+ಇಹುದು+ಏನು; ಇಹುದು=ಇರುವುದು;

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು=ವ್ಯಕ್ತಿಯು ತನ್ನನ್ನು ಒಳಗೊಂಡಂತೆ ಎಲ್ಲರ ಹಿತಕ್ಕಾಗಿ ಮಾಡುವ ಒಳ್ಳೆಯ ಆಚರಣೆಗಿಂತ ಶಾಸ್ತ್ರದಲ್ಲಿ ಹೇಳಿರುವ ಕಟ್ಟುಪಾಡು ದೊಡ್ಡದಲ್ಲ;

ಎಂದೊ=ಯಾವ ಕಾಲದಲ್ಲಿಯೋ; ಮನು=ಒಬ್ಬ ರಿಸಿಯ ಹೆಸರು; ಬರೆದು+ಇಟ್ಟುದು+ಇಂದು+ಎಮಗೆ; ಬರೆ=ರಚಿಸು; ಬರೆದಿಟ್ಟುದು=ಬರೆದು ಗೊತ್ತುಪಡಿಸಿರುವುದು; ಇಂದು=ಈ ಕಾಲದಲ್ಲಿ; ಎಮಗೆ=ನಮಗೆ/ಜನಸಮುದಾಯಕ್ಕೆ; ಕಟ್ಟು+ಏನು; ಕಟ್ಟು=ಕಟ್ಟಳೆ/ನಿಯಮ; ನಿನ್ನ+ಎದೆಯ; ಋಷಿ=ಜಗತ್ತಿನ ವಾಸ್ತವವನ್ನು ಅರಿತು “ ಯಾವುದು ದಿಟ–ಯಾವುದು ಸಟೆ; ಯಾವುದು ನೀತಿ–ಯಾವುದು ಅನೀತಿ; ಯಾವುದು ಒಳ್ಳೆಯದು–ಯಾವುದು ಕೆಟ್ಟದ್ದು “ ಎಂಬುದನ್ನು ಜನಸಮುದಾಯಕ್ಕೆ ತಿಳಿಯ ಹೇಳುವವನು;

ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು ನಿನ್ನೆದೆಯ ದನಿಯೆ ಋಷಿ ಮನು ನಿನಗೆ ನೀನು=ಎಂದೊ ಒಂದು ಕಾಲದಲ್ಲಿ ಮನು ಬರೆದಿಟ್ಟಿರುವ ಸಾಮಾಜಿಕ ಕಟ್ಟಳೆಗಳು ಇಂದು ನಮಗೆ ಬೇಕಾಗಿಲ್ಲ. ಯಾವ ಬಗೆಯ ಆಚರಣೆಗಳು ಇಡೀ ಜನಸಮುದಾಯಕ್ಕೆ ಒಳಿತನ್ನು ಮಾಡುತ್ತವೆಯೆಂದು ನಮಗೆ ಅನಿಸುತ್ತದೆಯೋ ಅವೇ ನಮ್ಮ ಬದುಕನ್ನು ಮುನ್ನಡೆಸಲು ಅಗತ್ಯವಾದ ಕಟ್ಟಳೆಗಳಾಗಬೇಕು. ಅಂದರೆ ನಮ್ಮ ಬದುಕಿನ ಹಾದಿಯನ್ನು ನಾವೇ ನಿರ‍್ಮಿಸಿಕೊಂಡು ನಡೆಯಬೇಕು;

ನೀರ್+ಅಡಸಿ; ಅಡಸಿ=ಬಯಸಿ; ನೀರಡಸಿ=ಬಾಯಾರಿ/ನೀರನ್ನು ಕುಡಿಯಲೆಂದು; ಸೋದರ=ಒಡಹುಟ್ಟಿದ ಅಣ್ಣ ಇಲ್ಲವೇ ತಮ್ಮ; ಮನುಧರ್ಮಶಾಸ್ತ್ರ+ಎನಗೆ+ಒರೆಯಬೇಕೇನು; ಎನಗೆ=ನನಗೆ; ಒರೆ=ಹೇಳು;

ಮನುಧರ್ಮಶಾಸ್ತ್ರ=ಮನು ಎಂಬ ರಿಸಿಯು ಸಂಸ್ಕ್ರುತ ನುಡಿಯಲ್ಲಿ ಬರೆದ ಹೊತ್ತಿಗೆಯನ್ನು ‘ ಮನುದರ‍್ಮಶಾಸ್ತ್ರ / ಮನುಸ್ಮ್ರುತಿ ‘ ಎಂದು ಕರೆಯುತ್ತಾರೆ. ಇದು ಕ್ರಿ.ಪೂ.200 ರಿಂದ ಕ್ರಿ.ಶ.300 ರ ನಡುವಣ ಕಾಲಮಾನದಲ್ಲಿ ರಚನೆಗೊಂಡಿರಬಹುದೆಂದು ಚರಿತ್ರೆಕಾರರು ಹೇಳಿದ್ದಾರೆ. ಇಂಡಿಯಾ ದೇಶದಲ್ಲಿ ಅಂದು ನೆಲೆಸಿದ್ದ ಜನಸಮುದಾಯದ ಸಾಮಾಜಿಕ ರಚನೆಯ ಸ್ವರೂಪವನ್ನು ಮತ್ತು ಜನರು ನಿತ್ಯಜೀವನದಲ್ಲಿ ಮಾಡಬೇಕಾದ ಆಚರಣೆಗಳನ್ನು ಹಾಗೂ ಅನುಸರಿಸಬೇಕಾದ ನಿಯಮಗಳನ್ನು ಈ ಹೊತ್ತಗೆಯಲ್ಲಿ ವಿವರಿಸಲಾಗಿದೆ. ಇಂಡಿಯಾ ದೇಶದ ಪ್ರಾಚೀನ ಕಾಲದ ಸಾಮಾಜಿಕ ರಚನೆಯಲ್ಲಿ “ ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ “ ಎಂಬ ನಾಲ್ಕು ವರ‍್ಣಗಳಿದ್ದವು. ಮನುವಿನ ಕಾಲದಲ್ಲಿಯೇ ಜನಸಮುದಾಯದಲ್ಲಿದ್ದ ಮತ್ತೊಂದು ವರ‍್ಗದ ಜನರನ್ನು ‘ ಚಂಡಾಲ ‘ ರೆಂದು ಹೆಸರಿಸಲಾಗಿದೆ. ಸಾಮಾಜಿಕ ಇತಿಹಾಸದಲ್ಲಿ ಇವರನ್ನು ಪಂಚಮರೆಂದು ಗುರುತಿಸಲಾಗಿದೆ. ಕಾಲ ಉರುಳಿದಂತೆಲ್ಲಾ ನಾಲ್ಕು ವರ್ಣಗಳು ಹತ್ತಾರು ನೂರಾರು ಸಾವಿರಾರು ಬಗೆಯ ಕವಲುಗಳಾಗಿ ಮತ್ತೆ ಮತ್ತೆ ಒಡೆದು ಜಾತಿ ಉಪಜಾತಿಗಳಾಗಿ ರೂಪುಗೊಂಡಿವೆ. ಪ್ರತಿಯೊಂದು ಜಾತಿ ಉಪಜಾತಿಗಳು ತಮ್ಮದೇ ಆದ ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ನು ಆಚರಿಸುತ್ತಿವೆ.

ಶಾಸ್ತ್ರದಲ್ಲಿ ಹೇಳಿದೆಯೆಂದು ಅನುಸರಿಸುತ್ತಿರುವ ಕಟ್ಟುಪಾಡುಗಳು ಜಾತಿ ಸಮುದಾಯಗಳನ್ನು ಮಾನಸಿಕವಾಗಿ ವಿಂಗಡಿಸಿ “ ನಮ್ಮ ಜಾತಿ ಮತ್ತೊಂದು ಜಾತಿಗಿಂತ ಮೇಲು ಎಂಬ ಮೇಲರಿಮೆಯನ್ನು ಮತ್ತು ನಮ್ಮ ಜಾತಿ ಮತ್ತೊಂದು ಜಾತಿಗಿಂತ ಕೀಳು “ ಎಂಬ ಕೀಳರಿಮೆಯನ್ನು ಜನಮನದಲ್ಲಿ ನಾಟಿಸಿದೆ. ಆದ್ದರಿಂದಲೇ ಜಾತಿ ಸಮುದಾಯದಲ್ಲಿ ಹುಟ್ಟಿ ಬೆಳೆದು ಬಾಳುತ್ತಿರುವ ನಮ್ಮೆಲ್ಲರಲ್ಲಿಯೂ ಬೇರೆ ಬೇರೆ ಪ್ರಮಾಣದಲ್ಲಿ ಜಾತಿಯ ಬಗೆಗಿನ ಮೇಲರಿಮೆ ಇಲ್ಲವೇ ಕೀಳರಿಮೆಯು ನೆಲೆಗೊಂಡಿದೆ;

ನೀರಡಸಿ ಬಂದ ಸೋದರಗೆ ನೀರನು ಕೊಡಲು ಮನುಧರ್ಮಶಾಸ್ತ್ರವೆನಗೊರೆಯಬೇಕೇನು=ಬಾಯಾರಿ ಬಂದು ನೀರನ್ನು ಕೇಳುವ ವ್ಯಕ್ತಿಯ ಜಾತಿ ಮತವನ್ನು ಕೇಳಿ ತಿಳಿದುಕೊಂಡು, ಅವನು ನಮಗಿಂತ ಕೆಳಜಾತಿಯವನಾಗಿದ್ದರೆ ನೀರನ್ನು ಕೊಡದೆ ಹಿಂದಕ್ಕೆ ಕಳುಹಿಸುವ ಕ್ರೂರತನದ ನಡವಳಿಕೆಯು ಜಾತಿ ಮತ್ತು ವರ‍್ಣಗಳ ತಾರತಮ್ಯದ ಕಾರಣದಿಂದಾಗಿ ನಮ್ಮ ಜನಸಮುದಾಯದ ಮನದಲ್ಲಿ ಬೇರೂರಿದೆ. ಕುಡಿಯುವ ನೀರಿನ ಬಾವಿಯ ಬಳಿಗೆ ಕೆಳಜಾತಿಯವರನ್ನು ಸೇರಿಸದ ಕಟ್ಟುಪಾಡುಗಳು ಇಂದಿಗೂ ಹಲವಾರು ಊರುಗಳಲ್ಲಿ ಆಚರಣೆಯಲ್ಲಿರುವುದನ್ನು ನಾವು ಕಾಣಬಹುದು. ಸಹಮಾನವನ ಬಗ್ಗೆ ಕರುಣೆಯಿಲ್ಲದ ಇಂತಹ ವರ‍್ತನೆಗೆ ಕಾರಣವಾದ ಜಾತಿ ಕಟ್ಟುಪಾಡುಗಳಿಂದ ಕೂಡಿರುವ ಶಾಸ್ತ್ರದ ಕಟ್ಟಳೆಗಳನ್ನು ತಿರಸ್ಕರಿಸಬೇಕೆಂಬ ಇಂಗಿತವನ್ನು ಈ ನುಡಿಗಳು ಸೂಚಿಸುತ್ತಿವೆ;

ಕಂಬನಿ+ಅನ್+ಒರೆಸಿ; ಕಂಬನಿ=ಕಣ್ಣೀರು; ಅನ್=ಅನ್ನು; ಒರೆಸು=ಅಳಿಸು; ಸಂತೈಸುವೊಡೆ=ಉಪಚರಿಸುವುದಾದರೆ; ಪ್ರಮಾಣ+ಅದಕೆ+ಇರಲೆ; ಪ್ರಮಾಣ=ನಿಯಮ;

ಶಾಸ್ತ್ರಪ್ರಮಾಣ=ಶಾಸ್ತ್ರದಲ್ಲಿ ಹೇಳಿರುವ ಕಟ್ಟಳೆ;

ಪಂಚಮ=ಚಂಡಾಲ. ಮೇಲು ವರ‍್ಣದವರು ಚಂಡಾಲರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುತ್ತಿದ್ದರು. ಇವರನ್ನು ಮುಟ್ಟಿದರೆ ಮೇಲು ವರ‍್ಣದ ಮಡಿಯು ಹಾಳಾಗಿ , ಸಾಮಾಜಿಕವಾಗಿ ಕಳಂಕ ತಟ್ಟುವುದೆಂಬ ಕಟ್ಟಲೆಯಿತ್ತು; ಶಿಶು+ಒಂದು; ಶಿಶು=ಮಗು; ಕೆರೆ+ಅಲ್ಲಿ; ಮುಳುಗುತ+ಇರೆ; ; ದಡ+ಅಲ್ಲಿ; ದಡ=ತೀರ; ಮೀಯು=ಸ್ನಾನ ಮಾಡು; ನಿಂತು+ಇರುವ; ಬ್ರಹ್ಮತ್ವ=ಮೇಲು ವರ‍್ಣದ ಹಿರಿಮೆ/ಮಡಿವಂತಿಕೆ; ಕೆಟ್ಟು+ಹೋಗುವುದು+ಎಂದು; ಕೆಟ್ಟುಹೋಗುವುದು=ಹಾಳಾಗುವುದು; ಸುಮ್ಮನೆ+ಇದ್ದರೆ; ಸುಮ್ಮನೆ=ಏನನ್ನೂ ಮಾಡದೆ; ಶಾಸ್ತ್ರಸಮ್ಮತ+ಏನು; ಸಮ್ಮತ=ಒಪ್ಪಿಗೆ;

ಶಾಸ್ತ್ರಸಮ್ಮತ=ಶಾಸ್ತ್ರದಲ್ಲಿ ಹೇಳಿರುವಂತೆ ನಡೆದುಕೊಳ್ಳುವುದು; ಒಂದು ಮಗುವಿನ ಜೀವಕ್ಕಿಂತಲೂ ವರ‍್ಣ ಇಲ್ಲವೇ ಜಾತಿಯ ಕಟ್ಟುಪಾಡುಗಳೇ ದೊಡ್ಡದೆಂದು ನಂಬಿರುವ ವ್ಯಕ್ತಿಯು ಸಹಮಾನವರ ಬಗ್ಗೆ ಕಿಂಚಿತ್ತಾದರೂ ಕರುಣೆಯಿಲ್ಲದೆ ನಡೆದುಕೊಳ್ಳುತ್ತಾನೆ;

ಅಂತು=ಆ ರೀತಿ ; ತಾನು=ಆ ಮನು ರಿಸಿ; ಹೇಳಿ+ಇರಲಾರನ್+ಅಯ್ಯಯೊ; ಅಯ್ಯಯೊ=ಸಂಕಟದಿಂದ ಕೂಗಿಕೊಳ್ಳುವುದು; ಹೇಳಿದ್ದರೆ+ಅವನನೂ; ಶಾಸ್ತ್ರದೊಳೆ ಸುತ್ತಿ=ಶಾಸ್ತ್ರದಲ್ಲಿ ಹೇಳಿರುವ ನಿಯಮಗಳಿಂದಲೇ ಕಟ್ಟಿ; ಸ್ವರ್ಗ ಮತ್ತು ನರಕ=ಮಾನವನ ಕಲ್ಪನೆಯಲ್ಲಿ ರೂಪುಗೊಂಡಿರುವ ಎರಡು ನೆಲೆಗಳು. ಸ್ವರ‍್ಗವು ಚೆಲುವು ಒಲವು ನಲಿವನ್ನುಂಟುಮಾಡುವ ತಾಣ ಮತ್ತು ನರಕವು ಸಂಕಟ ವೇದನೆ ನೋವನ್ನುಂಟುಮಾಡುವ ತಾಣ ಎಂಬ ಕಲ್ಪನೆಯು ಜನಮನದಲ್ಲಿದೆ; ಧೈರ್ಯ=ಕೆಚ್ಚು; ಎದೆಯ ಧೈರ್ಯ=ಮನದಲ್ಲಿ ಸರಿಯಾದ ನಿಲುವನ್ನು ತಳೆಯುವುದು; ಬಿಸುಡು+ಆಚಗೆ+ಎತ್ತಿ; ಬಿಸುಡು=ಎಸೆ/ಒಗೆ;

ಎದೆಯ ಧೈರ್ಯವ ಮಾಡಿ ಬಿಸುಡಾಚೆಗೆತ್ತಿ=ಮನು ದರ‍್ಮಶಾಸ್ತ್ರದಲ್ಲಿ ಹೇಳಿರುವ ಕಟ್ಟಳೆಗಳು ಮೇಲಿನ ಮೂರು ವರ‍್ಣದವರನ್ನು ಹೊರತುಪಡಿಸಿ ಇನ್ನುಳಿದ ಜನಸಮುದಾಯವೆಲ್ಲವೂ ಜೀವನಕ್ಕೆ ಅಗತ್ಯವಾದ ಅನ್ನ ಬಟ್ಟೆ ವಸತಿ ವಿದ್ಯೆ ಉದ್ಯೋಗ ಆರೋಗ್ಯವನ್ನು ಪಡೆದು ನೆಮ್ಮದಿಯಿಂದ ಬಾಳುವುದಕ್ಕೆ ಅವಕಾಶವನ್ನು ನೀಡಲಿಲ್ಲ. ನಮ್ಮ ಪ್ರಾಚೀನ ಕಾಲದ ರಿಸಿಗಳು ಹೇಳಿರುವ “ ನಹೀ ಜ್ಞಾನೇನ ಸದ್ರುಶಮ್–ಜ್ನಾನಕ್ಕೆ ಸಮಾನವಾದುದು ಯಾವುದೂ ಇಲ್ಲ “; “ ವಸುದೈವ ಕುಟುಂಬಕಮ್–ಇಡೀ ಬೂಮಂಡಲದ ಜನಸಮುದಾಯವೆಲ್ಲವೂ ಒಂದು ಕುಟುಂಬ ”; “ ಸರ‍್ವೇ ಜನಾಃ ಸುಕಿನೋ ಬವಂತು–ಜನರೆಲ್ಲರೂ ಸುಕವಾಗಿರಲಿ ” ಎಂಬ ಯಾವೊಂದು ನುಡಿಗಳು ನಿಜಜೀವನದಲ್ಲಿ ಕಾರ‍್ಯರೂಪಕ್ಕೆ ಬಾರದಂತೆ ತಡೆಗಟ್ಟಿರುವ ಮನುವಿನ ಕಟ್ಟಳೆಗಳು ಶತಶತಮಾನಗಳಿಂದಲೂ ಜನಸಮುದಾಯದ ಮನದಲ್ಲಿ ಒಡಕನ್ನುಂಟುಮಾಡಿವೆ. ಆದ್ದರಿಂದ ಜನಸಮುದಾಯದ ಮನದಲ್ಲಿ ಪರಸ್ಪರ ಪ್ರೀತಿ, ಕರುಣೆ ಮತ್ತು ಸಾಮರಸ್ಯದ ಸಹಬಾಳ್ವೆಯನ್ನು ಉಂಟು ಮಾಡಬೇಕಾದರೆ ಮನುವಿನ ಸಾಮಾಜಿಕ ಕಟ್ಟಳೆಗಳನ್ನು ಸಂಪೂರ‍್ಣವಾಗಿ ನಿರಾಕರಿಸಬೇಕೆಂಬ ತಿರುಳನ್ನು ಈ ನುಡಿಗಳು ಸೂಚಿಸುತ್ತಿವೆ;

ನರಕ+ಗಳ್+ಏನು; ಶಾಸ್ತ್ರಸ್ಥ+ಅಲ್ಲ; ಶಾಸ್ತ್ರಸ್ಥ=ಸಂಪ್ರದಾಯದ ಕಟ್ಟಲೆಗಳಿಗೆ ಒಳಗಾಗಿರುವುದು; ಶಾಸ್ತ್ರಸ್ಥವಲ್ಲ=ಯಾವುದೇ ನಿಯಮಕ್ಕೆ ಒಳಪಟ್ಟುವುಗಳಲ್ಲ. ಏಕೆಂದರೆ ಸ್ವರ‍್ಗ ನರಕಗಳು ಎಂಬುವು ವಾಸ್ತವದಲ್ಲಿ ಇಲ್ಲ; ಧರ್ಮ=ವ್ಯಕ್ತಿಯು ತನ್ನ ಒಳಿತನ್ನು ಬಯಸುವಂತೆಯೇ ಸಹಮಾನವರ ಒಳಿತಿಗಾಗಿ ಬಾಳುವ ಒಳ್ಳೆಯ ನಡೆನುಡಿಗಳು; ನಿಧಿ=ಸಂಪತ್ತು; ಧರ್ಮನಿಧಿ=ಒಳ್ಳೆಯ ನಡೆನುಡಿಗಳೇ ನಿಜವಾದ ಸಂಪತ್ತು. ‘ ಒಳ್ಳೆಯ ನಡೆನುಡಿ ‘ ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ಕೆಲಸಗಳು ತನಗೆ ಒಳಿತನ್ನು ಮಾಡುವಂತೆ ಸಹಮಾನವರಿಗೂ ಒಳಿತನ್ನು ಮಾಡುವುದು; ಕರ್ತವ್ಯ+ಅದುವೆ; ಕರ್ತವ್ಯ=ಕೆಲಸ; ವಿಧಿ=ನಿಯಮ; ಕರ್ತವ್ಯವದುವೆ ವಿಧಿ=ಒಳ್ಳೆಯ ಕೆಲಸಗಳೇ ನಿಜವಾದ ಕಟ್ಟಳೆಗಳು; ನಂಬು+ಅದನು; ಅದನ್+ಉಳಿದು; ಉಳಿ=ಬಿಟ್ಟು; ಬೇರೆ+ಇಲ್ಲ;

ಅದನುಳಿದು ಋಷಿಯು ಬೇರಿಲ್ಲ=ಜೀವನದಲ್ಲಿ ಒಳ್ಳೆಯ ನಡೆನುಡಿಗಳೇ ರಿಸಿವಾಣಿಯೇ ಹೊರತು ಮತ್ತಾವುದು ಅಲ್ಲ; ನಮ್ಮ+ಅಂತೆ; ತಕ್ಕ+ಅಂತೆ; ಶ್ರೀ=ಮಂಗಳಕರವಾದ; ಸೂತ್ರ=ಕಟ್ಟಳೆ; ಶ್ರೀಧರ್ಮಸೂತ್ರ=ಎಲ್ಲರಿಗೂ ಒಳಿತನ್ನು ಉಂಟುಮಾಡುವ ಕಟ್ಟುಕಟ್ಟಳೆ;

ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ ನಮ್ಮ ಹೃದಯವೆ ನಮಗೆ ಧರ್ಮಸೂತ್ರ=ನಮ್ಮ ಮನಸ್ಸು ಪಡೆದುಕೊಳ್ಳುವ ಒಳ್ಳೆಯ ಅರಿವು ಮತ್ತು ಎಚ್ಚರದ ನಡೆನುಡಿಗಳೇ ಮಂಗಳಕರವಾದ ಕಟ್ಟಳೆಗಳು. ಯಾವುದೋ ಒಂದು ಕಾಲದಲ್ಲಿ ಹೇಳಿರುವ ಸಂಪ್ರದಾಯಗಳನ್ನೇ ನಂಬಿಕೊಂಡು ಹಾಳಾಗದೇ, ಇಂದಿನ ಜೀವನದ ಅಗತ್ಯಕ್ಕೆ ತಕ್ಕಂತೆ ಎಲ್ಲರ ಒಳಿತಿಗೆ ಪೂರಕವಾಗುವಂತಹ ನಡೆನುಡಿಗಳನ್ನು ರೂಪಿಸಿಕೊಂಡು ಬಾಳಬೇಕು.

( ಚಿತ್ರಸೆಲೆ : karnataka.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: