ಕವಿತೆ: ಜೀವನೋತ್ಸಾಹವೆಂದರೆ…

– ಕಾಂತರಾಜು ಕನಕಪುರ.

ಜೀವನೋತ್ಸಾಹವೆಂದರೆ
ಪೋಟಿಕರೆಗಳನು ಜಯಿಸಿ
ತನ್ನತನವನು ವಿಕ್ರಯಿಸಿ
ಸಹಜೀವಿಗಳನು ಅಲ್ಪಗೊಳಿಸಿ
ಎದುರಾದವರ ತಲೆತರಿದು
ಕದನೋತ್ಸಾಹದಿಂದ ಮುಂದರಿಯುವುದಲ್ಲ

ಜೀವನೋತ್ಸಾಹವೆಂದರೆ
ಬೆಳಗಿನಲಿ ಜನಿಸಿ
ಬೈಗಿನಲಿ ತೀರಿಹೋದರೂ
ಹೆಂಗಳೆಯರ ಹೆರಳಿಗೋ
ಉತ್ತಮರ ಕೊರಳಿಗೋ
ಸತ್ತವರ ಒಡಲಿಗೋ ಏರುವ
ಯಾವ ಅಬಿಲಾಶೆಯೂ ಇರದೆ
ಇರುವಶ್ಟು ಹೊತ್ತು ನಗುವನು ಹೊತ್ತು
ಇರಿವ ಸಾವಿರ ಮುಳ್ಳುಗಳ ನಡುವೆ ನಲಿವ
ಬೇಲಿ ಮೇಲಿನ ಹೂವಿನ ಹಾಗೆ

ಜೀವನೋತ್ಸಾಹವೆಂದರೆ
ತನ್ನ ನೆತ್ತಿಯು ಸುಡುಸುಡುವ
ಬಿಸಿಲಿನಲಿ ಮೀಯುತಲಿದ್ದರೂ
ಬಸವಳಿದವರಿಗೆ ತಣ್ಣನೆಯ ನೆರಳನಿತ್ತು
ಕಲ್ಲೆಸೆದವರಿಗೂ ಹಣ್ಣನಿತ್ತು
ಬರಿದಾಗುವ ಮರದ ಹಾಗೆ

ಜೀವನೋತ್ಸಾಹವೆಂದರೆ
ಕಗ್ಗತ್ತಲೆಯ ಒಡಲಿನಿಂದಲೇ
ಮೂಡಿಬರುವ ಹೊಂಬೆಳಕಿನ ಹಾಗೆ
ಶಿಶಿರದಲಿ ಬರಿದಾಗಿ ವಸಂತದಲಿ
ಮೈದುಂಬಿಕೊಳುವ ಪರಿಸರದ ಹಾಗೆ

ಜೀವನೋತ್ಸಾಹವೆಂದರೆ
ಬದುಕಿನ ತಿಟ್ಟನು ಹತ್ತಿ
ಬಾಳ ಸಂಜೆಯಲಿ
ತಿರುಗಿ ನೋಡಿದಾಗ
ತಾನು ತುಳಿದ ಹಾದಿ
ತನ್ನೊಳಗೆ
ಅಲ್ಪವೆನಿಸದ ಹಾಗೆ
ಬದುಕುವುದಶ್ಟೇ ಮತ್ತೇನಿಲ್ಲ

(ಚಿತ್ರ ಸೆಲೆ: fearlessmotivation.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sanjeev Hs says:

    ಅರ್ಥಗರ್ಭಿತ ??

ಅನಿಸಿಕೆ ಬರೆಯಿರಿ:

Enable Notifications