ಚುಟುಕು ಕತೆಗಳು

– ಕಾಂತರಾಜು ಕನಕಪುರ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

*** ಸದ್ಯ ***

ವೇದಿಕೆಯಲ್ಲಿ ಮಹಿಳಾ ಹಕ್ಕುಗಳ ಬಗ್ಗೆ ತಡೆರಹಿತ ಮಾತುಗಾರಿಕೆಯಲ್ಲಿ ತೊಡಗಿದ್ದ ಊರಿನ ಮಹಿಳಾ ಹಕ್ಕುಗಳ ಹೋರಾಟ ಸಮಿತಿಯ ಮುಂದಾಳಿಗೆ ಅವರ ಮಗನಿಂದ ದೂರವಾಣಿ ಕರೆ ಬಂತು. ನವಮಾಸ ತುಂಬಿದ ಅವರ ಸೊಸೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣಕ್ಕೆ ಊರಿನ ದೊಡ್ಡ ಆಸ್ಪತ್ರೆಗೆ ದಾಕಲಾಗಿದ್ದಳು. ಅಡಚಣೆಗಾಗಿ ಕ್ಶಮೆ ಕೋರಿದ ಅವರು ವೇದಿಕೆಯ ಹಿಂದುಗಡೆ ತಲುಪಿ ಮಗನ ಜೊತೆ ಅಲೆಯುಲಿಯ ಮೂಲಕ ಮಾತನಾಡತೊಡಗಿದರು.

“ಏನಾಯ್ತೋ?”.
“ಮಗು ಹುಟ್ತಮ್ಮಾ”.
“ಎಂತದ್ದೋ?”.
“ಗಂಡು ಕಣಮ್ಮಾ”.
“ಸದ್ಯ…! ಮೂದೇವಿ ಎಲ್ಲಿ ಹೆಣ್ಣು ಹೆರುವಳೋ ಅಂತ ಆತಂಕ ಆಗಿತ್ತು”

ಮಾತು ಮುಗಿಸಿ ಅಲೆಯುಲಿಯ ಸಂಪರ‍್ಕ ಕಟಾಯಿಸಿದ ಮುಂದಾಳು ವೇದಿಕೆಗೆ ಹಿಂತಿರುಗಿ ಮಂದಸ್ಮಿತರಾಗಿ ಮಾತು ಮುಂದುವರಿಸಿದರು.

*** ಬೋದನೆ ***

ಅವರು ಆ ವಿದ್ಯಾಕೇಂದ್ರದ ಹೆಸರಾಂತ ಅದ್ಯಾಪಕರು. ತರಗತಿಯಲ್ಲಿ ಸಮಾನತೆಯ ಬಗ್ಗೆ ಅತ್ಯುತ್ತಮವಾಗಿ ಉಪನ್ಯಾಸ ನೀಡುತ್ತಿದ್ದ ಆ ಅದ್ಯಾಪಕರ ಮಾತುಗಳ ಮೋಹಕತೆಗೆ ಒಳಗಾದ ಶಿಶ್ಯನೊಬ್ಬ ಅವರ ಮನೆಗೆ ಬಂದ. ಅಲ್ಲಿ ಅದ್ಯಾಪಕರಿಂದ ಅವನಿಗೆ ಎದುರಾದ ಮೊದಲ ಪ್ರಶ್ನೆ –

“ಏನಯ್ಯಾ ನೀನು ದೇವರ ಮನೆ ಇದೆ ಇಲ್ಲೀವರೆಗೂ ಬಂದ್ಬಿಟ್ಯಾ?”

*** ನೋವು ***

ಊರಿನಲ್ಲಿ ಜಾತ್ರೆಯ ಸಡಗರ ಬಹಳ ಜೋರಾಗಿತ್ತು. ಮಾರಿ ಹಬ್ಬ ಎಂದರೆ ಕೇಳಬೇಕೆ? ಸಿಡಿ ಕಂಬಕ್ಕೆ ಬಲಿಯಾಗಿ ನೂರಾರು ಹರಕೆ ಕೋಳಿಗಳ ಬಲಿ ಆಗಲೇಬೇಕು. ಹರಕೆ ಹೊತ್ತವರು ಕೋಳಿಗಳನ್ನು ಪೂಜಾರಿಗೆ ಒಪ್ಪಿಸುತ್ತಿದ್ದರು. ಕೋಳಿಗಳ ಕೊರಳುಗಳನ್ನು ಚೊರಚೊರನೆ ಕೊಯ್ದು ಬಿಸಾಡುತ್ತಿದ್ದ ಪೂಜಾರಿಯ ಕೈಚಳಕವನ್ನು ಎಲ್ಲರೂ ಮೂಗಿನ ಮೇಲೆ ಕೈಯಿಟ್ಟು ನೋಡುತ್ತಿದ್ದರು. ರುಂಡ ಬೇರೆಯಾದ ಮುಂಡಗಳು ತಕತಕ ಕುಣಿಯುತ್ತಿದ್ದವು. ಕೋಳಿಗಳ ರಕ್ತ ಚಿರ‍್ರನೆ ಹಾರಿ ಪೂಜಾರಿಯ ಕೈ-ಮೈ ಬಟ್ಟೆಗಳೆಲ್ಲಾ ರಕ್ತಮಯವಾಗಿ ವಾತಾವರಣವು ಬೀಬತ್ಸವಾಗಿತ್ತು.

ಆಗ ಇದ್ದಕ್ಕಿದ್ದಂತೆ ಎಲ್ಲರ ಕಿವಿ ತೂತುಬೀಳುವ ಹಾಗೆ “ಅಯ್ಯಯ್ಯೋ…” ಎಂದು ಪೂಜಾರಿ ನೋವಿನಿಂದ ಬೊಬ್ಬೆಹಾಕತೊಡಗಿದ.

ಕೋಳಿಯ ಕೊರಳು ಕೊಯ್ಯುವ ಆತುರದಲ್ಲಿ ತಪ್ಪಿ ಚೂರಿ ಪೂಜಾರಿಯ ಕೈ ಬೆರಳನ್ನು ಕೊಯ್ದಿತ್ತು.

( ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: