ಮಾಡಿ ಸವಿಯಿರಿ ಶಾಹಿ ಪನೀರ್

– ವಿಜಯಮಹಾಂತೇಶ ಮುಜಗೊಂಡ.

ಬೇಕಾಗುವ ಸಾಮಾನುಗಳು

ಪನೀರು – 250 ಗ್ರಾಂ
ಈರುಳ್ಳಿ – 2 ದೊಡ್ಡದು
ಟೊಮೆಟೋ – 3
ಗೇರು ಬೀಜ (ಗೋಡಂಬಿ) – 10-12
ಕ್ರೀಮ್ (ಕೆನೆ) – 2-3 ಚಮಚ
ಟೊಮೆಟೋ ಸಾಸ್ – 2 ಚಮಚ
ಹಸಿ ಮೆಣಸಿಕಾಯಿ – 2
ಕೆಂಪು ಮೆಣಸಿನ ಪುಡಿ – 2 ಚಮಚ
ಗರಂ ಮಸಾಲೆ – 1 ಚಮಚ
ದನಿಯಾ ಪುಡಿ – 1 ಚಮಚ
ಅರಿಶಿಣ ಪುಡಿ – 1/2 ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಕಸೂರಿ ಮೇತಿ – 1 ಚಮಚ
ಪಲಾವ್ ಎಲೆ – 1
ಚಕ್ಕೆ – 1 ಇಂಚು
ಲವಂಗ – 2
ಏಲಕ್ಕಿ – 2
ಶುಂಟಿ-ಬೆಳ್ಳುಳ್ಳಿ – ಕೊಂಚ
ಜೀರಿಗೆ – 1 ಚಮಚ

ಮಾಡುವ ಬಗೆ

ಮೊದಲು ಈರುಳ್ಳಿ, ಟೊಮೆಟೋ, ಹಸಿಮೆಣಸಿಕಾಯಿ ಹೆಚ್ಚಿಟ್ಟುಕೊಳ್ಳಿ. ಇದನ್ನು ಎಣ್ಣೆಯಲ್ಲಿ ಹುರಿದು ಪೇಸ್ಟ್ ಮಾಡುವುದರಿಂದ ಸಣ್ಣಗೆ ಹೆಚ್ಚುವ ಅವಶ್ಯಕತೆ ಇಲ್ಲ. ಕೊಂಚ ದಪ್ಪಗಿದ್ದರೂ ಪರವಾಗಿಲ್ಲ.

ಒಲೆ ಮೇಲೆ ಬಾಣಲೆ ಬಿಸಿ ಮಾಡಿ ಈರುಳ್ಳಿ, ಶುಂಟಿ-ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಹುರಿದುಕೊಳ್ಳಿ. ಈರುಳ್ಳಿ ಕೊಂಚ ಹುರಿದ ಮೇಲೆ ಟೊಮೆಟೋ, ಗೇರು ಬೀಜ ಸೇರಿಸಿ ನುಣ್ಣಗಾಗುವವರೆಗೆ ಬೇಯಿಸಿ ತೆಗೆದಿಟ್ಟುಕೊಳ್ಳಿ. ತಣ್ಣಗಾದ ಬಳಿಕ ಮಿಕ್ಸಿಯಲ್ಲಿ ನೀರು ಸೇರಿಸದೇ ರುಬ್ಬಿಕೊಳ್ಳಿ.

ಒಲೆಯ ಮೇಲೆ ಬಾಣಲೆ ಮೇಲೆ ಇಟ್ಟು ಸ್ವಲ್ಪ ಬಿಸಿಯಾದ ಬಳಿಕ ಎಣ್ಣೆ ಹಾಕಿ. ಇದಕ್ಕೆ ಪಲಾವ್ ಎಲೆ, ಚಕ್ಕೆ, ಲವಂಗ, ಜೀರಿಗೆ ಸೇರಿಸಿ ಹುರಿಯಿರಿ. ಇದಕ್ಕೆ ರುಬ್ಬಿದ ಮಿಶ್ರಣ ಸೇರಿಸಿ ಕಲಸಿ. 2-3 ನಿಮಿಶದ ಬಳಿಕ ಅರಿಶಿಣ ಪುಡಿ, ಉಪ್ಪು, ಕೆಂಪು ಮೆಣಸಿನ ಪುಡಿ, ಗರಂ ಮಸಾಲೆ, ದನಿಯಾ ಪುಡಿ ಹಾಕಿ ತಳಕ್ಕೆ ತಾಕದಂತೆ ಉರಿ ಸಣ್ಣಗೆ ಮಾಡಿ ಬೇಯಿಸಿ. ಕೊಂಚ ಹೊತ್ತಿನ ಬಳಿಕ ಎಣ್ಣೆ ಬೇರ್‍ಪಡಲು ಶುರುಮಾಡುತ್ತದೆ. ಎಣ್ಣೆ ಬೇರ್‍ಪಟ್ಟ ಮೇಲೆ ಬೇಕೆನಿಸುವಶ್ಟು ನೀರು ಸೇರಿಸಿ ಟೊಮೆಟೋ ಸಾಸ್, ಕ್ರೀಮ್ ಸೇರಿಸಿ ಒಲೆ ಜೋರು ಮಾಡಿ. ಕುದಿಯಲು ಶುರುವಾಗುತ್ತಿದ್ದಂತೆಯೇ ಪನೀರು, ಕಸೂರಿ ಮೇತಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ತಿರುವಿ. ಪನೀರು ಮೆತ್ತಗಾಗುವವರೆಗೆ (10 ನಿಮಿಶ) ಕುದಿಸಿ ಇಳಿಸಿದರೆ ಈಗ ಶಾಹಿ ಪನೀರು ಸವಿಯಲು ತಯಾರು.

ಬೇಕಾದರೆ ಇದಕ್ಕೆ ಒಂದು ಟೀ ಚಮಚ ಜೇನುತುಪ್ಪ, 1 ಲಿಂಬೆ ಹಣ್ಣಿನ ರಸ ಸೇರಿಸಬಹುದು. ಪನೀರನ್ನು ಎಣ್ಣೆಯಲ್ಲಿ ಮೊದಲೇ ಹುರಿದು ಬಳಸಿಕೊಳ್ಳಬಹುದು. ಶಾಹಿ ಪನೀರನ್ನು ಚಪಾತಿ, ಪೂರಿ, ಅನ್ನದ ಜೊತೆ ಸವಿಯಬಹುದು.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: