ಮಳೆಗಾಲದ ನೆಂಟ – ಬಸವನಹುಳು
ಮಳೆಗಾಲದಲ್ಲಿ ಮಳೆ ಸುರಿಯುವುದು ಸಹಜ. ಜೊತೆಗೆ ಮಳೆಗಾಲಕ್ಕೆ ಹೊಂದಿಕೊಂಡಂತೆ ಹಲವು ಬಗೆಯ ಹುಳು-ಹುಪ್ಪಟೆಗಳು ಹುಟ್ಟಿಕೊಳ್ಳುವವು. ಈ ಬಗೆಯ ಜೀವಿಗಳಲ್ಲಿ ಬಸವನಹುಳುವೂ ಒಂದು. ವರ‍್ಶವಿಡೀ ತನ್ನ ಇರುವಿಕೆಯ ಬಗ್ಗೆ ಸುಳಿವು ನೀಡದ ಬಸವನಹುಳುಗಳು ಮಳೆ ಸುರಿದು ತೇವಾಂಶ ಹೆಚ್ಚಾದಂತೆ ನೂರಾರು ಸಂಕ್ಯೆಯಲ್ಲಿ ಕಾಣಿಸಿಕೊಳ್ಳಲಾರಂಬಿಸುತ್ತವೆ. ಮಳೆಗಾಲದ ತಂಪು ಹವೆಯಲ್ಲಿ ಬಸವನಹುಳುಗಳು ಮನೆಯ ಗೋಡೆಗಳ ಮೇಲೆ ಸದ್ದಿಲ್ಲದೇ ನಿದಾನವಾಗಿ ತೆವಳುವ ದ್ರುಶ್ಯವನ್ನು ನೋಡಿರಬಹುದು. ಸಾಮಾನ್ಯವಾಗಿ ಎಲ್ಲಾ ಹುಳುಗಳು ಆಕಾರದಲ್ಲಿ ಏಕತೆಯನ್ನು ಪಡೆದಿವೆ. ಆದರೆ ಬಸವನಹುಳುಗಳ ದೇಹದ ಆಕಾರ ಬಿನ್ನವಾಗಿರುತ್ತದೆ. ಇವುಗಳು ತಮ್ಮ ಬೆನ್ನಿನ ಮೇಲೆ ಚಿಪ್ಪಿನ ಹೊದಿಕೆಯನ್ನು ಅಂಟಿಸಿಕೊಂಡು ಹುಟ್ಟಿರುತ್ತವೆ. ಒಮ್ಮೆಲೆ ನೋಡಿದಾಗ ಮೈ ಮೇಲೆ ಮೂಟೆ ಹೊತ್ತಂತೆ ತೋರಿದರೂ ,ಅದೇ ಕ್ಶಣಕ್ಕೆ ಬುಗುರಿಯಾಕಾರದ ಮೇಲ್ಮೈ ಗೋಚರಿಸುತ್ತದೆ. ಈ ಬಗೆಯ ಬಸವನಹುಳುಗಳು ತುಂಬಾ ಮ್ರುದು ಸ್ವಬಾವದವು.
ನೂರಾರು ವರ‍್ಶಗಳ ಹಿಂದೆಯೇ ಮ್ರುದ್ವಂಗಿಗಳು ಉದ್ಬವಿಸಿದ್ದು, ಇವುಗಳು ಬೂಮಿ ಮತ್ತು ನೀರಿನಲ್ಲಿ ವಾಸಿಸುವಂತದುದಾಗಿವೆ. 75,000 ಕ್ಕೂ ಹೆಚ್ಚಿನ ಜಾತಿಯಲ್ಲಿ ಈ ಮ್ರುದ್ವಂಗಿಗಳು ಕಂಡು ಬರುತ್ತವೆಯೆಂದು ಅದ್ಯಯನಗಳು ತಿಳಿಸುತ್ತವೆ. ಶಂಕು ರೂಪದ ಬಸವನಹುಳುಗಳ ಬಗ್ಗೆಯೂ ಕೇಳಿರಬಹುದು. ಇವು ಈ ಬುಗುರಿಯಾಕಾರದ ಚಿಪ್ಪಿನ ಹುಳವಿನಂತೆಯೇ ಶಂಕುವಿನ ಆಕಾರದ ಚಿಪ್ಪನ್ನು ಹೊಂದಿವೆ. ಹಾಗಾಗಿ ಇವುಗಳಿಗೆ ಶಂಕು ಹುಳು ಅಂತಲೂ ಕರೆಯುವುದು ವಾಡಿಕೆ.
ಬಸವನಹುಳುಗಳು ತಮ್ಮ ದೇಹವನ್ನು ಕಾಪಾಡಿಕೊಳ್ಳಲು ಚಿಪ್ಪನ್ನು ಹೊಂದಿರುವುದರಿಂದ ಮ್ರುದ್ವಂಗಿಗಳೆಂದು ಕರೆಯುವರು. ಈ ಹುಳುವನ್ನು ನೋಡಿದ ಕೂಡಲೇ ಮೂಟೆಯನ್ನು ಹೊತ್ತು, ತಲೆಯ ಮುಂಬಾಗದಲ್ಲಿ ಪುಟ್ಟ ಕೊಂಬುಗಳನ್ನು ಇಟ್ಟುಕೊಂಡು ಚಲಿಸುತ್ತಿರುವುದೇನೋ ಎಂಬ ವಿಸ್ಮಯ ಮೂಡಿಸುತ್ತದೆ. ಮಳೆಗಾಲದಲ್ಲಿ ಮನೆಯ ಸುತ್ತ ಮುತ್ತಲಿನ ತೇವವಿರುವ ಜಾಗಗಳಲ್ಲಿ, ಕೆಸರು ಮಣ್ಣಿನಲ್ಲಿ, ಗಿಡಗಳಲ್ಲಿ ಹೀಗೆ ನೀರು ನಿಂತಿರುವ ತಾಣಗಳಲ್ಲಿ ತೆವಳುವುದೆಂದರೆ ಈ ಮ್ರುದ್ವಂಗಿಗಳಿಗೆ ಬಹಳ ಸಂತಸ. ದ್ರುಶ್ಟಿ ಮಂದವಾಗಿರುವ, ಕಿವಿ ಕೇಳಿಸದ ಬಸವನಹುಳುಗಳಿಗೆ, ಅಗಾದವಾದ ಸ್ಪರ‍್ಶ ಸಂವೇದನೆಯ ಗುಣವೇ ಅವುಗಳ ಜೀವಾಳ ಎನ್ನಬಹುದು. ಇವು ಎಲೆಗಳು, ಕಸ-ಕಡ್ಡಿ ,ಹಣ್ಣಿನ ಚೂರು ಇತ್ಯಾದಿಗಳನ್ನು ಸೇವಿಸಿ ಜೀವಿಸುವಂತ ಜೀವಿಗಳಾಗಿವೆ. ಇವುಗಳು ರಾತ್ರಿಯ ಹೊತ್ತು ಹೆಚ್ಚಾಗಿ ಕ್ರಿಯಾಶೀಲವಾಗಿರುತ್ತವೆ. ಬಸವನ ಹುಳುಗಳು ಉಬಯಲಿಂಗಿ ಜೀವಿಗಳಾಗಿರುವುದರಿಂದ, ಎಲ್ಲಾ ಹುಳುಗಳೂ ಮೊಟ್ಟೆಯಿಡುವ ಸಾಮರ‍್ತ್ಯವನ್ನು ಪಡೆದಿವೆ. ಇವುಗಳು ಒಂದು ಬಾರಿಗೆ ನೂರಕ್ಕಿಂತ ಹೆಚ್ಚು ಸಂಕ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತವಾದರೂ, ಕೆಲವೇ ಕೆಲವು ಮೊಟ್ಟೆಗಳಿಗೆ ಜೀವ ಬಂದು ಹುಳುಗಳಾಗಿ ಹೊರಬರುವುವು. ಮಿಕ್ಕಿದ ಮೊಟ್ಟೆಯೆಲ್ಲಾ ಮಳೆಯ ರಬಸಕ್ಕೆ ಕೊಚ್ಚಿ ಹೋಗುವ ಸಂಬವವೇ ಜಾಸ್ತಿ. ಇನ್ನೂ ಕೆಲವು ವೈರಿಗಳಿಗೆ ಆಹಾರವಾಗುವವು. ಬಿಸಿಲಿನ ತಾಪಕ್ಕೆ ತೆರೆ ಮರೆಗೆ ಸರಿಯುವ ಬಸವನಹುಳುವು, ಆ ಸಮಯದಲ್ಲಿ ತನ್ನ ಶರೀರವನ್ನು ಒದ್ದೆಯಾಗಿಟ್ಟುಕೊಳ್ಳುವ ವಿಶೇಶ ಶಕ್ತಿಯನ್ನು ಹೊಂದಿವೆ. ಜೋರಾಗಿ ಮಳೆ ಬೀಳುವ ಸಮಯದಲ್ಲಿ ಇವು ಚಲಿಸದೇ ತಟಸ್ತವಾಗಿ ಬಿಡುವುವು. ನಿಂತಲ್ಲೇ ಬೆನ್ನನ್ನು ಮುಕಕ್ಕೆ ಮುಚ್ಚಿ ಮಲಗಿಬಿಡುವಶ್ಟು ಜಾಣ್ಮೆಯನ್ನು ಹೊಂದಿವೆ. ಕಸಕಡ್ಡಿ ಎಲೆಗಳನ್ನು ತಿಂದು ಬದುಕುವ ಈ ಹುಳುಗಳು ಒಮ್ಮೊಮ್ಮೆ ಹಾವು ಕಪ್ಪೆಗಳ ಬಾಯಿಗೆ ಸಿಲುಕಿ ಆಹಾರವಾಗಿ ಬಿಡುತ್ತವೆ.
ಶೀತ ಪ್ರದೇಶಗಳಲ್ಲಿ, ತಂಪಾದ ವಾತಾವರಣದಲ್ಲಿ ಹಾಯಾಗಿ ಬದುಕುವ ಈ ಹುಳುಗಳು ವಿಶೇಶವಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವುದರಿಂದ ಇವುಗಳನ್ನು ಮಳೆಗಾಲದ ಅತಿತಿ ಎನ್ನಬಹುದು.
( ಚಿತ್ರಸೆಲೆ: wikimedia.org )
ಇತ್ತೀಚಿನ ಅನಿಸಿಕೆಗಳು