ಕವಿತೆ: ನಾನೇಕೆ ದುಕ್ಕಿಸಲಿ

– ವೆಂಕಟೇಶ ಚಾಗಿ.

ಒಬ್ಬಂಟಿ, Loneliness

ಸೂರ‍್ಯ ಮುಳುಗಿದನೆಂದು ನೀ ಹೊರಟು ನಿಂತಾಗ ನಾನೇಕೆ ದುಕ್ಕಿಸಲಿ
ನಿನ್ನ ಒಲುಮೆಯ ಕುಂಬವಿಂದು ಬರಿದಾಗಿ ಒಡೆದಾಗ ನಾನೇಕೆ ದುಕ್ಕಿಸಲಿ

ನಕ್ಶತ್ರಗಳ ಎಣಿಸುವುದರಲ್ಲಿ ನಾನಿಂದು ಸೋತು ನಲುಗಿರಬಹುದು
ಕತ್ತಲೆಯಲ್ಲೂ ಮಂದ ಬೆಳಕೊಂದು ಜಗವ ಬೆಳಗುವಾಗ ನಾನೇಕೆ ದುಕ್ಕಿಸಲಿ

ನಿನ್ನ ಮನದ ಸುಕಸಂತೋಶಗಳಿಗೆ ನನ್ನ ಕನಸುಗಳು ಕಾಲಿಯಾಗಿರಬಹುದು
ಸಮಯವಿನ್ನು ಹಸಿರಾಗಿಸಿ ನನ್ನ ನಗಿಸುತಿರುವಾಗ ನಾನೇಕೆ ದುಕ್ಕಿಸಲಿ

ಹ್ರುದಯದೊಳಗಿನ ಸಾಮ್ರಾಜ್ಯದ ಹೂವುಗಳು ಬಾಡಿ ಕಸವಾಗಿರಬಹುದು
ಹ್ರುದಯಬಡಿತವಿನ್ನೂ ಬದುಕ ಬದುಕಿಸಲು ಹೆಣಗುವಾಗ ನಾನೇಕೆ ದುಕ್ಕಿಸಲಿ

ನಿನ್ನ ನೆನಪುಗಳು ಪ್ರತಿಕ್ಶಣವೂ ದೇಹವನು ಚುಚ್ಚಿಕೊಲ್ಲಬಹುದು
ಚಾಗಿಯ ನುಡಿಗಳಿಂದು ಹೊಸ ಶಕ್ತಿ ತುಂಬುವಾಗ ನಾನೇಕೆ ದುಕ್ಕಿಸಲಿ

(ಚಿತ್ರಸೆಲೆ: home.bt.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *