ಬಾನೋಡದೊಳಗೊಂದು ಹೋಟೆಲ್ – ಜಂಬೋ ಹಾಸ್ಟೆಲ್
– ಕೆ.ವಿ.ಶಶಿದರ.
ಸ್ಟಾಕ್ಹೋಮ್ ನ ಅರ‍್ಲಾಂಡ ವಿಮಾನ ನಿಲ್ದಾಣದಲ್ಲಿನ ಜಂಬೋ ಹಾಸ್ಟೆಲ್ ಅಸ್ತಿತ್ವಕ್ಕೆ ಬಂದಿದ್ದು ಜನವರಿ 15, 2009ರಲ್ಲಿ. ಇದಕ್ಕೆ ಜಂಬೋ ಹಾಸ್ಟೆಲ್ ಎಂದು ಹೆಸರು ಬರಲು ಸಹ ಒಂದು ಕಾರಣವಿದೆ. ಬೋಯಿಂಗ್ 747-200 ಜಂಬೋ ಜೆಟ್ ವಿಮಾನವನ್ನು ಬಳಸಿಕೊಂಡು ನಿರ‍್ಮಿಸಲಾದ ಐಶಾರಾಮಿ ಹಾಸ್ಟೆಲ್ ಇದಾದುದರಿಂದ ಇದಕ್ಕೆ ಜಂಬೋ ಹಾಸ್ಟೆಲ್ ಎಂದು ಕರೆಯಲಾಯಿತು. ನಿಜವಾದ ಬೋಯಿಂಗ್ ಜಂಬೋ ಜೆಟ್ ವಿಮಾನದ ಹೊರ ಮೇಲ್ಮೈಯನ್ನು ಹಾಗೆಯೇ ಕಾಪಾಡಿಕೊಂಡು, ಒಳಬಾಗವನ್ನು ಹೋಟೆಲ್ ಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆ. ಈಗ ಇದು ವಿಶ್ವಮಾನ್ಯತೆ ಪಡೆದ ವಿಲಾಸಿ ಹೋಟೆಲ್.
ಈ ಜಂಬೋ ಜೆಟ್ಟಿನ ಹೆಸರು ಲಿವ್. 1976ರಲ್ಲಿ ನಿರ‍್ಮಾಣವಾಗಿದ್ದ ಜೆಟ್ ಇದು. ಸ್ವೀಡನ್ನಿನ ಟ್ರಾನ್ಸ್ ಜೆಟ್ ಕಂಪೆನಿಯ ಒಡೆತನದಲ್ಲಿ ಲಿವ್ 2002ರ ವರೆಗೂ ಹಾರಾಟ ನಡೆಸುತ್ತಿತ್ತು. ಟ್ರಾನ್ಸ್ ಜೆಟ್ ಕಂಪೆನಿ ದಿವಾಳಿಯಾದ ನಂತರ, 26 ವರ‍್ಶಗಳ ಸೇವೆ ಸಲ್ಲಿಸಿದ್ದ ಇದು ಹಾರಾಟಕ್ಕೆ ಅನರ‍್ಹ ಎಂಬ ಕಾರಣದಿಂದ, ಈ ಹಳೆಯ ವಿಮಾನವನ್ನು ಸ್ಟಾಕ್ಹೋಮ್ನ ಅರ‍್ಲಾಂಡ ವಿಮಾನ ನಿಲ್ದಾಣದಲ್ಲಿ ನಿಶ್ಕ್ರಿಯಗೊಳಿಸಲಾಯಿತು. ಈ ಜಂಬೋ ಜೆಟ್ ವಿಮಾನವನ್ನು ಮೂಲತಹ ಸಿಂಗಪೂರ್ ಏರ್ ಲೈನ್ಸ್ ಗಾಗಿ ನಿರ‍್ಮಿಸಲಾಗಿತ್ತು. ಆದರೆ ನಂತರ ಅದು ಪ್ಯಾನ್ ಅಮೇರಿಕಾ ಗುಂಪಿಗೆ ಸೇರಿತ್ತು.
2002ರಲ್ಲಿ ಇದನ್ನು ನಿಶ್ಕ್ರಿಯಗೊಳಿಸಿದರೂ, ಸಿಗ್ಟುನಾ ಅದಿಕಾರಿಗಳು ಅರ‍್ಲಾಂಡ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಜಂಬೋ ಹಾಸ್ಟೆಲ್ ಸ್ತಾಪಿಸಲು ಪರವಾನಗಿಯನ್ನು ನೀಡಿದ್ದು ಡಿಸೆಂಬರ್ 2007ರಲ್ಲಿ. ಪರವಾನಗಿ ದೊರೆತ ನಂತರ, ಜಂಬೋ ಜೆಟ್ಟನ್ನು 2008ರಲ್ಲಿ ನಿಶ್ಕ್ರಿಯಗೊಳಿಸಿದ ಸ್ತಳದಿಂದ, ಸ್ತಾಪಿಸಲು ಉದ್ದೇಶಿಸಿದ್ದ ಸ್ತಳಕ್ಕೆ ಸ್ತಳಾಂತರಿಸಲಾಯಿತು. ನಂತರ ಪ್ರಾರಂಬವಾಗಿದ್ದೇ ಮೊದಲ ಹಂತದ ಕೆಲಸ ಕಾರ‍್ಯಗಳು. ಜಂಬೋ ಜೆಟ್ಟಿನಲ್ಲಿದ್ದ 450 ಆಸನಗಳನ್ನು, ಹಳೆಯ ಒಳಾಂಗಣವನ್ನು ತೆಗೆಯಲಾಯಿತು. ಈ ಹಂತದ ಕೆಲಸಗಳು ಮುಗಿದ ಕೂಡಲೇ ಇಡೀ ವಿಮಾನವನ್ನು ಸ್ಯಾನಿಟೈಸ್ ಮಾಡಲಾಯಿತು. ವಿಮಾನದ ಒಳಾಂಗಣವನ್ನು ವಾಸ್ತು ಶಿಲ್ಪಿಗಳ ವಿನ್ಯಾಸದಂತೆ ಪ್ರಾರಂಬಿಸಿ, ಮನೆಯನ್ನು ಕಟ್ಟುವಂತೆ ಒಳಾಂಗಣದಲ್ಲಿ ಕೋಣೆಗಳನ್ನು ನಿರ‍್ಮಿಸಲಾಯಿತು. ಇದರಲ್ಲಿ ಅವರುಗಳು ಹೆಚ್ಚು ಗಮನವಿತ್ತಿದ್ದೆಂದರೆ, ಹವಾಮಾನದ ನಿಯಂತ್ರಣ, ಪ್ರತ್ಯೇಕತೆ, ತಾಪಮಾನದ ಹತೋಟಿಗೆ ಅವಶ್ಯವಿರುವುದರ ಅಳವಡಿಕೆ.
ಜಂಬೋ ಹಾಸ್ಟೆಲ್ಲಿನಲ್ಲಿ ಎರಡು ಮಹಡಿಗಳಿವೆ. ಅದರಲ್ಲಿ 25 ಕೊಟಡಿಗಳಿದ್ದು. ಇದರಲ್ಲಿ 85 ಹಾಸಿಗೆಗಳಿವೆ. ಒಟ್ಟಾರೆ 85 ಮಂದಿ ರಾತ್ರಿಯ ಹೊತ್ತಿನಲ್ಲಿ ಮಲಗಬಹುದು. ನಾಲ್ಕು ಬೆಡ್ಡುಗಳ ಡಾರ‍್ಮಿಟರಿ, ಎರಡು ಬೆಡ್ಡುಗಳ ಕಾಕ್ ಪಿಟ್, ಇಂಜಿನ್ ರೂಂ, ಇದೇ ರೀತಿಯ ವಿವಿದ ರೂಮುಗಳ ಅಯ್ಕೆ ಇಲ್ಲಿದೆ. ಉಳಿದ ಕೋಣೆಗಳಲ್ಲಿ ಬಂಕ್ ಮಾದರಿಯ ಮೂರು ಹಾಸಿಗೆಗಳಿವೆ. ಒಂದೊಂದು ಕೋಣೆಯ ಗಾತ್ರ ಆರು ಚದರ ಮೀಟರ್, ಎತ್ತರ ಮೂರು ಮೀಟರ್. ಪ್ರತಿಯೊಂದು ಕೋಣೆಯಲ್ಲೂ ಪ್ಲ್ಯಾಟ್ ಸ್ಕ್ರೀನ್ ಟಿವಿಗಳು, ಉಚಿತ ವೈಪೈ ಸಂಪರ‍್ಕವನ್ನು ಕಲ್ಪಿಸಲಾಗಿದೆ. ಇಲ್ಲಿನ ಯಾವುದೇ ಕೋಣೆಯಲ್ಲೂ ಟಾಯ್ಲೆಟ್ ಸೌಲಬ್ಯವಿಲ್ಲ. ಬಾತ್ ರೂಮ್ ಮತ್ತು ವಾಶ್ ರೂಮ್ ಸಾರ‍್ವಜನಿಕವಾಗಿದೆ. ಅಲ್ಲಿಗೆ ಹೋಗಿ ಬರಲು ಸೂಕ್ತ ವ್ಯವಸ್ತೆಯಿದೆ.
ಇಲ್ಲಿರುವ ಕೆಪೆ ಹಗಲಿನಲ್ಲಿ ಹೊರಗಡೆಯವರಿಗೂ ತೆರೆದಿರುತ್ತದೆ. ವಸಂತ ಕಾಲದಲ್ಲಿ ವಿಮಾನ ನಿಲ್ದಾಣದ ವೀಕ್ಶಣೆಗಾಗಿ ವೀಕ್ಶಣಾ ಡೆಕ್ ಆಗಿ ಬದಲಾಯಿಸುವ ಅನುಕೂಲ ಸಹ ಕಲ್ಪಿಸಲಾಗಿದೆ. ಈ ವಿಮಾನದ ಅಪ್ಪರ್ ಡೆಕ್ಕಿನಲ್ಲಿ ಎಂಟು ಜನ ಕುಳಿತು, ಸಬೆ ನಡೆಸಲೂ ಕಾನ್ಪೆರೆನ್ಸ್ ರೂಂನ ವ್ಯವಸ್ತೆ ಸಹ ಇದೆ. ಅರ‍್ಲಾಂಡ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲೇ ಇದನ್ನು ಶಾಶ್ವತವಾಗಿರಿಸಿರುವ ಕಾರಣ, ಇಲ್ಲಿನ ರೂಮಿನೊಳಗೆ ಕುಳಿತು ನಿಲ್ದಾಣಕ್ಕೆ ಬರುವ, ನಿಲ್ದಾಣದಿಂದ ಹೊರಹೋಗುವ ವಿಮಾನಗಳನ್ನು ಗಮನಿಸಬಹುದು. ಇದೊಂದು ರೀತಿಯ ವಿಶೇಶ ಅನುಬವ. ಜೆಟ್ ಲ್ಯಾಗ್ ನಿಂದ ವಿರಮಿಸಿ, ಮುಂದಿನ ಪ್ರಯಾಣ ಬೆಳಸುವವರಿಗೆ ಇದು ಅತ್ಯಂತ ಉತ್ತಮ ತಂಗುದಾಣ. ವಿಮಾನ ನಿಲ್ದಾಣದಿಂದ ಹೆಚ್ಚು ದೂರ ಹೋಗುವಂತಿಲ್ಲದಿರುವುದು ಇದರ ಮತ್ತೊಂದು ಒಳ್ಳೆಯ ವಿಶಯ.
ವಿವಿದ ಸಮಯದಲ್ಲಿ ಆಗಮಿಸುವ ಮತ್ತು ಹೊರಡುವ ಅತಿತಿಗಳಿಗೆ ಅನುಕೂಲವಾಗಲಿ ಎಂಬ ದ್ರುಶ್ಟಿಯಿಂದ ಜಂಬೋ ಸ್ಟೇ ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುತ್ತದೆ. ಜಂಬೋ ಬಾರ್ ಮತ್ತು ರೆಸ್ಟೋರೆಂಟಿನಲ್ಲಿ ಆಹಾರ, ಲಗು ಪಾನೀಯ, ತಿಂಡಿಗಳು ಸಹ ಮಾರಟಕ್ಕಿರುತ್ತವೆ. ತಮ್ಮದೇ ಸ್ವಂತ ಆಹಾರ ತಂದವರಿಗೆ ಅದನ್ನು ಬಿಸಿ ಮಾಡಿಕೊಳ್ಳಲು ಎರಡು ಮೈಕ್ರೋವೇವ್ ಓವನ್ನುಗಳು ಕೂಡ ಲಬ್ಯವಿವೆ.
(ಮಾಹಿತಿ ಮತ್ತು ಚಿತ್ರ ಸೆಲೆ: dezeen.com, hostelworld.com, timesofindia.indiatimes.com, hotel.info, amusingplanet.com, inhabitat.com )
ಇತ್ತೀಚಿನ ಅನಿಸಿಕೆಗಳು