ಅಕ್ಕಮ್ಮನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

ವಚನಗಳು, Vachanas

ಹೋತಿನ  ಗಡ್ಡದಂತೆ
ಗಡ್ಡದ  ಹಿರಿಯರ  ನೋಡಾ
ಬಿಡಾರ  ಬಿಡಾರವೆಂದು
ಹಿರಿಯತನಕ್ಕೆ  ಅಹಂಕರಿಸಿ
ಆಚಾರವಂ  ಬಿಟ್ಟು
ಅನಾಚಾರವಂ  ಸಂಗ್ರಹಿಸಿ
ಭಕ್ತರೊಳು  ಕ್ರೋಧ
ಭ್ರಷ್ಟರೊಳು  ಮೇಳ
ಇವರು  ನರಕಕ್ಕೆ  ಯೋಗ್ಯರು
ಆಚಾರವೆ  ಪ್ರಾಣವಾದ  ರಾಮೇಶ್ವರಲಿಂಗದಲ್ಲಿ.

ಜಾತಿ, ಮತ, ದೇವರ ಹೆಸರಿನಲ್ಲಿ ಕಟ್ಟಿಕೊಂಡಿರುವ ಒಕ್ಕೂಟಗಳ ದೊಡ್ಡ ದೊಡ್ಡ ಗದ್ದುಗೆಯಲ್ಲಿರುವ  ವ್ಯಕ್ತಿಗಳ ನಡೆನುಡಿಯಲ್ಲಿ ಕಂಡುಬರುವ ಕೆಟ್ಟ ವರ‍್ತನೆಗಳನ್ನು ಈ ವಚನದಲ್ಲಿ ಕಟುವಾಗಿ ಟೀಕಿಸಲಾಗಿದೆ.

ಹೋತ=ಗಂಡು ಆಡು; ಗಡ್ಡ=ಗಂಡಸಿನ ಮೊಗದ ಕೆನ್ನೆ ಮತ್ತು ಗದ್ದದ ಎಡೆಯಲ್ಲಿ ಬೆಳೆದಿರುವ ಉದ್ದನೆಯ ಕೂದಲು; ಹಿರಿಯರು=ವಯಸ್ಸಿನಲ್ಲಿ ದೊಡ್ಡವರು/ಉನ್ನತವಾದ ಗದ್ದುಗೆಯನ್ನೇರಿದವರು; ನೋಡು=ಕಾಣು/ತಿಳಿ;  ನೋಡಾ=ಒರೆಹಚ್ಚಿ ನೋಡು/ಪರಿಶೀಲಿಸು;

ಹೋತಿನ  ಗಡ್ಡದಂತೆ ಗಡ್ಡದ  ಹಿರಿಯರ  ನೋಡಾ=ಹೋತನ ಗಡ್ಡದಂತೆ ಉದ್ದನೆಯ ಗಡ್ಡವನ್ನು ಬಿಟ್ಟಿರುವ ಹಿರಿಯರ ರೂಪವನ್ನು ಗಮನಿಸು. ಈ ನುಡಿಗಳು ಒಂದು ರೂಪಕವಾಗಿ ಬಳಕೆಯಾಗಿವೆ.

ಜಾತಿ,ಮತ,ದೇವರ ಹೆಸರಿನ ಒಕ್ಕೂಟಗಳ ಗದ್ದುಗೆಯಲ್ಲಿರುವ ವ್ಯಕ್ತಿಗಳು  “ತಾವು ವಿರಾಗಿಗಳು ಅಂದರೆ ಯಾವುದೇ ಬಗೆಯ ಕಾಮನೆಗಳಿಲ್ಲದವರು” ಎಂಬುದನ್ನು ಬಹಿರಂಗದಲ್ಲಿ ತೋರಿಸಿಕೊಳ್ಳುವುದಕ್ಕಾಗಿ ಉದ್ದನೆಯ ಗಡ್ಡವನ್ನು ಬಿಟ್ಟಿರುವ, ತಲೆಗೂದಲನ್ನು ಎತ್ತಿಕಟ್ಟಿರುವ ಮತ್ತು ಕೆಂಪು/ಬಿಳಿ/ಹಳದಿ ಬಣ್ಣದ  ಉಡುಗೆಯನ್ನು ತೊಟ್ಟಿರುವ ಚಹರೆಗಳನ್ನು ಹೊಂದಿರುತ್ತಾರೆ;

ಬಿಡಾರ=ತಂಗುದಾಣ/ವ್ಯಕ್ತಿಯು ತನ್ನ ಊರಿನಿಂದ ಮತ್ತೊಂದು ಊರಿಗೆ ಹೋದಾಗ ತಾತ್ಕಾಲಿಕವಾಗಿ ತಂಗುವ ಜಾಗ; ಬಿಡಾರ+ಎಂದು; ಹಿರಿಯತನ=ದೊಡ್ಡತನ; ಅಹಂಕಾರ=ಸೊಕ್ಕು/ಹಮ್ಮು; ಅಹಂಕರಿಸಿ=ಸೊಕ್ಕಿನ ನಡೆನುಡಿಗಳಿಂದ ಮೆರೆಯುತ್ತ;

ಬಿಡಾರ  ಬಿಡಾರವೆಂದು ಹಿರಿಯತನಕ್ಕೆ  ಅಹಂಕರಿಸಿ=ಈ ನುಡಿಗಳು ಒಂದು ರೂಪಕವಾಗಿ ಬಳಕೆಯಾಗಿವೆ.

ಜಾತಿ, ಮತ, ದೇವರ ಹೆಸರಿನ ಒಕ್ಕೂಟಗಳ ಗದ್ದುಗೆಯಲ್ಲಿರುವ ವ್ಯಕ್ತಿಗಳು “ತಮ್ಮನ್ನು ತಾವೇ ದೊಡ್ಡವರು ಮತ್ತು  ಹೆಚ್ಚಿನ ಅರಿವನ್ನು ಹೊಂದಿದವರು” ಎಂಬ ತಪ್ಪುಗ್ರಹಿಕೆಗೆ ಒಳಗಾಗಿ, ತಾವು  ತಂಗಿದ ಕಡೆಯಲ್ಲೆಲ್ಲಾ ಹೆಚ್ಚಿನ ಅನುಕೂಲಗಳನ್ನು ಮತ್ತು ಅದ್ದೂರಿಯ ಸೇವೆಯನ್ನು ಜನರಿಂದ ಬಯಸುತ್ತಾರೆ;

ಆಚಾರ=ಒಳ್ಳೆಯ ನಡೆನುಡಿ; ವ್ಯಕ್ತಿಯು ಆಡುವ ನುಡಿ ಮತ್ತು ಮಾಡುವ ದುಡಿಮೆಯು ತನಗೆ ಒಳಿತನ್ನುಂಟುಮಾಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದು; ಆಚಾರವಂ=ಆಚಾರವನ್ನು;  ಬಿಟ್ಟು=ತ್ಯಜಿಸಿ/ದೂರಮಾಡಿ; ಅನಾಚಾರ=ಕೆಟ್ಟ ನಡೆನುಡಿ; ವ್ಯಕ್ತಿಯು ಆಡುವ ನುಡಿ ಮತ್ತು ಮಾಡುವ ದುಡಿಮೆಯು ತನಗೆ ಮತ್ತು ತನ್ನ ಜಾತಿಮತದವರಿಗೆ ಒಳಿತನ್ನುಂಟು ಮಾಡಿ, ಇತರರ ಜಾತಿಮತದವರಿಗೆ ಮತ್ತು ಸಮಾಜಕ್ಕೆ ಕೇಡನ್ನುಂಟುಮಾಡುವುದು.; ಸಂಗ್ರಹ=ಕಲೆಹಾಕುವುದು/ಒಟ್ಟುಗೂಡಿಸುವುದು;

ಆಚಾರವಂ  ಬಿಟ್ಟು ಅನಾಚಾರವಂ  ಸಂಗ್ರಹಿಸಿ=ಆಚಾರವನ್ನು ಬಿಟ್ಟು ಅನಾಚಾರದಿಂದ  ಬಾಳತೊಡಗುತ್ತಾರೆ; ಈ ನುಡಿಗಳು ಒಂದು ರೂಪಕವಾಗಿ ಬಳಕೆಯಾಗಿವೆ.

ಜಾತಿ, ಮತ, ದೇವರ ಹೆಸರಿನ ಒಕ್ಕೂಟಗಳ ಗದ್ದುಗೆಯಲ್ಲಿರುವವರು “ತಮ್ಮ ತಮ್ಮ ಜಾತಿ,ಮತ,ದೇವರಿಗಾಗಿ ಬಾಳುತ್ತಾರೆಯೇ” ಹೊರತು, ಇನ್ನಿತರ  ಜನಸಮುದಾಯವನ್ನು ಕಡೆಗಣಿಸುತ್ತಾರೆ. ಹತ್ತಾರು ಬಗೆಯ ಮತಗಳು ಮತ್ತು ನೂರೆಂಟು ಬಗೆಯ ಜಾತಿಗಳ ಹೆಣಿಗೆಯಿಂದ ಕೂಡಿರುವ ಸಮಾಜದಲ್ಲಿ ಜಾತಿಮತ ತಾರತಮ್ಯವಿಲ್ಲದೆ ಎಲ್ಲರಿಗೂ ಒಳಿತಾಗಬೇಕೆಂಬ ಒಲವು ಮತ್ತು ಕರುಣೆಯ ಗುಣವನ್ನು ಹೊಂದಿರುವುದಿಲ್ಲ;

ಭಕ್ತರ್+ಒಳು; ಭಕ್ತ=ಒಳ್ಳೆಯ ನಡೆನುಡಿಗಳಲ್ಲಿ ದೇವರನ್ನು ಕಾಣುತ್ತ ಪ್ರಾಮಾಣಿಕನಾಗಿ ಬಾಳುತ್ತಿರುವ ವ್ಯಕ್ತಿ; ಒಳು=ಅಲ್ಲಿ; ಕ್ರೋಧ=ಸಿಟ್ಟು/ಕೋಪ;  ಭ್ರಷ್ಟರ್+ಒಳು: ಭ್ರಷ್ಟ=ಕೆಟ್ಟ ನಡೆನುಡಿಗಳಿಂದ ಸಹಮಾನವರಿಗೆ ಮತ್ತು ಸಮಾಜಕ್ಕೆ ಹಾನಿಯನ್ನುಂಟುಮಾಡಿ, ಅತಿ ಹೆಚ್ಚಿನ ಪ್ರಮಾಣದಲ್ಲಿ ಸಂಪತ್ತನ್ನು ಗಳಿಸಿರುವ ವ್ಯಕ್ತಿ; ಮೇಳ=ನಂಟು/ಜೊತೆ/ಸೇರುವಿಕೆ;

ಭಕ್ತರೊಳು ಕ್ರೋಧ ಭ್ರಷ್ಟರೊಳು ಮೇಳ=ಒಳ್ಳೆಯರನ್ನು ಕಂಡಾಗ ಸಿಡಿಮಿಡಿಗೊಳ್ಳುವುದು, ಕೆಟ್ಟವರನ್ನು ಕಂಡಾಗ ಆನಂದದಿಂದ ಜತೆಗೂಡುವುದು; ಈ ನುಡಿಗಳು ಒಂದು ರೂಪಕವಾಗಿ ಬಳಕೆಯಾಗಿವೆ.

ದುಡಿಮೆಯನ್ನು  ಪ್ರಾಮಾಣಿಕವಾಗಿ ಮಾಡಿ, ಒಳ್ಳೆಯ ರೀತಿಯಲ್ಲಿ ಹಣವನ್ನು  ಸಂಪಾದಿಸುವ  ವ್ಯಕ್ತಿಗಳ ಬಳಿಯಲ್ಲಿ ಹೆಚ್ಚಿನ ಸಂಪತ್ತು ಇರುವುದಿಲ್ಲ. ಆದರೆ ಅಪ್ರಾಮಾಣಿಕವಾದ ದುಡಿಮೆಯಿಂದ  ಕೆಟ್ಟ ರೀತಿಯಲ್ಲಿ  ಹಣವನ್ನು ಸಂಪಾದಿಸುವ ವ್ಯಕ್ತಿಗಳ ಬಳಿಯಲ್ಲಿ ಅಪಾರವಾದ ಸಂಪತ್ತು ಇರುತ್ತದೆ. ಜಾತಿ, ಮತ, ದೇವರ ಹೆಸರಿನ ಒಕ್ಕೂಟಗಳ ಗದ್ದುಗೆಯಲ್ಲಿರುವ ವ್ಯಕ್ತಿಗಳ ಸುತ್ತಮುತ್ತ  ಆಯಾಯ ಜಾತಿ ಮತಕ್ಕೆ ಸೇರಿದ ಅಪ್ರಾಮಾಣಿಕರಾದ ಸಿರಿವಂತರು ಮತ್ತು ರಾಜಕೀಯ ಗದ್ದುಗೆಯಲ್ಲಿರುವ ವ್ಯಕ್ತಿಗಳೇ  ತುಂಬಿರುತ್ತಾರೆ. ಇಂತಹ ಕೆಟ್ಟ ವ್ಯಕ್ತಿಗಳ ಜತೆಯಲ್ಲಿ ಅತ್ಯಂತ ಆತ್ಮೀಯವಾದ ಒಡನಾಟವನ್ನು ಒಕ್ಕೂಟಗಳ ಹಿರಿಯರು ಹೊಂದಿರುತ್ತಾರೆ;

ನರಕ=ಈ ಲೋಕದಲ್ಲಿ ಜನರಿಗೆ ಕೇಡನ್ನು ಬಗೆದಿರುವ ವ್ಯಕ್ತಿಯು ತನ್ನ ಸಾವಿನ ನಂತರ, ತಾನು ಮಾಡಿದ ಪಾಪದ ಕೆಲಸಗಳಿಗೆ ತಕ್ಕ ದಂಡನೆಗೆ ಒಳಗಾಗಿ ನರಳುವ ಕಲ್ಪನೆಯ ಲೋಕ.  ಸತ್ತ ನಂತರ ಜನರಿಗೆ ಒಳಿತನ್ನು ಮಾಡಿದವನು ಆನಂದದ ನೆಲೆಯಾದ ಸ್ವರ‍್ಗಲೋಕಕ್ಕೆ ಹೋಗುತ್ತಾನೆ ಎಂಬ  ನಂಬಿಕೆಯು ನಮ್ಮ ಜನಸಮುದಾಯದ ಮನದಲ್ಲಿದೆ; ಇವರು=ಜಾತಿ,ಮತ,ದೇವರ ಹೆಸರಿನ ಒಕ್ಕೂಟಗಳ ಗದ್ದುಗೆಯಲ್ಲಿರುವವರು; ಯೋಗ್ಯರು=ಅರ‍್ಹರು/ತಕ್ಕವರು;

ಇವರು  ನರಕಕ್ಕೆ  ಯೋಗ್ಯರು=ಇಂತಹ ವ್ಯಕ್ತಿಗಳು ನರಕದಲ್ಲಿರಲು ತಕ್ಕವರು; ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ.

ಒಟ್ಟು ಜನಸಮುದಾಯದ ಅನ್ನ, ಬಟ್ಟೆ, ವಸತಿ, ವಿದ್ಯೆ ಮತ್ತು ಆರೋಗ್ಯಕ್ಕಾಗಿ ಬಳಕೆಯಾಗಬೇಕಿದ್ದ  ನಾಡಿನ ಸಂಪತ್ತನ್ನು ಲೂಟಿ ಮಾಡುತ್ತಿರುವ ವ್ಯಕ್ತಿಗಳಿಗೆ “ಪ್ರಾಮಾಣಿಕರಾಗಿ ಬಾಳಿರಿ”  ಎಂಬ ತಿಳುವಳಿಕೆಯನ್ನು ಹೇಳದಿರುವ ಹಿರಿಯರು ಮತ್ತು  “ಜಾತಿಮತಗಳ  ಪರಸ್ಪರ ಅಸೂಯೆ, ಅಪನಂಬಿಕೆ ಮತ್ತು ಹಗೆತನದ ನಡೆನುಡಿಗಳನ್ನು ಬೆಂಬಲಿಸುವುದರಿಂದ ಇಡೀ ಜನಸಮುದಾಯದ ಬದುಕು ದುರಂತದ ಕಡೆಗೆ ಸಾಗುತ್ತದೆ” ಎಂಬ ಆತಂಕವನ್ನು  ಹೊಂದದೇ, ಕೆಟ್ಟ ನಡೆನುಡಿಯುಳ್ಳವರೊಡನೆ  ನಂಟನ್ನು ಹೊಂದಿರುವ  ಒಕ್ಕೂಟಗಳ  ಹಿರಿಯ ವ್ಯಕ್ತಿಗಳನ್ನು ಅಕ್ಕಮ್ಮನವರು ಕಟುವಾದ ನುಡಿಗಳ ಮೂಲಕ ಟೀಕಿಸಿದ್ದಾರೆ.

ಆಚಾರ=ಒಳ್ಳೆಯ ನಡೆನುಡಿ; ಪ್ರಾಣ=ಉಸಿರು/ಜೀವ;  ರಾಮೇಶ್ವರಲಿಂಗ=ಶಿವನ ಮತ್ತೊಂದು ಹೆಸರು;

ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ=ಅಕ್ಕಮ್ಮನ ವಚನಗಳಲ್ಲಿ ಕಂಡುಬರುವ ಅಂಕಿತನಾಮ. ವ್ಯಕ್ತಿಯ ಒಳ್ಳೆಯ ನಡೆನುಡಿಗಳಲ್ಲಿಯೇ ಶಿವನ ಉಸಿರು ನೆಲೆಸಿದೆ ಎಂಬ ನಿಲುವನ್ನು ಅಕ್ಕಮ್ಮನವರು ಹೊಂದಿದ್ದರು.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: