ಅಮುಗಿದೇವಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

ಅಮುಗಿದೇವಯ್ಯ, AmugiDevayya

***

ಶಿವನ ನೆನೆದಡೆ ಭವ ಹಿಂಗೂದೆಂಬ
ವಿವರಗೇಡಿಗಳ ಮಾತ ಕೇಳಲಾಗದು
ಹೇಳದಿರಯ್ಯ
ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ
ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ
ರಂಭೆಯ ನೆನೆದಡೆ ಕಾಮದ ಕಳವಳಡಗುವುದೆ
ಅಯ್ಯಾ ನೆನೆದರಾಗದು
ನಿಜದಲ್ಲಿ ನಿರ್ಧರಿಸಿ
ತಾನು ತಾನಾಗದನ್ನಕ್ಕರ
ಸದ್ಗುರು ಸಿದ್ಧಸೋಮನಾಥಲಿಂಗನ ನೆನೆಯಬಾರದು.

ಒಳ್ಳೆಯ ನಡೆನುಡಿಯಿಲ್ಲದ ವ್ಯಕ್ತಿಯು ದೇವರ ಹೆಸರನ್ನು ನೆನೆಯುತ್ತ ಮಾಡುವ ಜಪ ತಪ ಪೂಜೆಯಿಂದ ಯಾವುದೇ ಪ್ರಯೋಜನವಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

‘ಒಳ್ಳೆಯ ನಡೆನುಡಿ’ ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ದುಡಿಮೆಯು ತನ್ನ ಮತ್ತು ತನ್ನ ಕುಟುಂಬಕ್ಕೆ ಒಳಿತನ್ನುಂಟುಮಾಡುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದು.

ಶಿವ=ದೇವರ ಹೆಸರು; ನೆನೆ=ಮನಸ್ಸಿನಲ್ಲಿ ತಂದುಕೊಳ್ಳುವುದು/ಕಲ್ಪಿಸಿಕೊಳ್ಳುವುದು; ನೆನೆದಡೆ=ನೆನೆಸಿಕೊಂಡರೆ; ಭವ=ಸಂಸಾರ/ಇಹಲೋಕದ ಬದುಕು; ಹಿಂಗೂದು+ಎಂಬ; ಹಿಂಗು=ಪರಿಹಾರವಾಗು/ನಿವಾರಣೆಯಾಗು; ಹಿಂಗೂದು=ಹಿಂಗುವುದು/ನಿವಾರಣೆಯಾಗುವುದು; ; ಎಂಬ=ಎನ್ನುವ/ಎಂದು ಹೇಳುವ; ಭವ ಹಿಂಗೂದು=ಜೀವನದಲ್ಲಿ ಸಂಕಟಗಳು ಇಲ್ಲವಾಗುವುದು;

ಶಿವನ ನೆನೆದಡೆ ಭವ ಹಿಂಗೂದೆಂಬ=ದೇವರಾದ ಶಿವನನ್ನು ಕುರಿತು ಜಪ ತಪ ಪೂಜೆಯನ್ನು ಮಾಡಿದರೆ ಸಾಕು, ವ್ಯಕ್ತಿಯ ಜೀವನದಲ್ಲಿ ಇಲ್ಲವೇ ಸಂಸಾರದಲ್ಲಿ ಬರುವ ಎಲ್ಲ ಬಗೆಯ ಎಡರುತೊಡರುಗಳು ಇಲ್ಲವಾಗಿ, ವ್ಯಕ್ತಿಯ ಬದುಕಿನಲ್ಲಿ ಆನಂದ ನೆಮ್ಮದಿಯು ದೊರಕುತ್ತದೆ ಎಂದು ಹೇಳುವ;

ವಿವರ+ಕೇಡಿಗಳ; ವಿವರ=ಯಾವುದೇ ಒಂದು ಸಂಗತಿಯನ್ನು ಮೊದಲಿನಿಂದ ಕೊನೆಯವರೆಗೂ ಏನೊಂದನ್ನು ಬಿಡದೆ ಹೇಳುವುದು; ಕೇಡಿ=ಕೆಟ್ಟದ್ದನ್ನು ಮಾಡುವ ವ್ಯಕ್ತಿ;

ವಿವರಗೇಡಿಗಳು=ಉಪಯುಕ್ತವಲ್ಲದ ಸಂಗತಿಗಳನ್ನು ಬಣ್ಣಿಸಿ ಹೇಳುವಂತಹ ಸುಳ್ಳುಗಾರರು; ದೇವರ ಹೆಸರಿನಲ್ಲಿ ಬಗೆಬಗೆಯ ಕಟ್ಟುಕತೆಗಳನ್ನು ಕಟ್ಟಿ, ದೇವರ ಮಹಿಮೆಯಿಂದ ಮತ್ತು ದೇವರು ಮಾಡುವ ಪವಾಡದಿಂದ ಜನರ ರೋಗರುಜಿನ, ಬಡತನ, ಸಂಕಟಗಳು ಪರಿಹಾರಗೊಂಡು, ಒಲವು ನಲಿವು ಸಂಪತ್ತು ದೊರೆಯುವುದೆಂಬ ನಂಬಿಕೆಯನ್ನು ಜನಮನದಲ್ಲಿ ಮೂಡಿಸುತ್ತ, ಜನರನ್ನು ಬಹುಬಗೆಯ ವ್ರತ, ಯಾಗ ಮತ್ತು ಇನ್ನಿತರ ಆಚರಣೆಗಳಲ್ಲಿ ತೊಡಗುವಂತೆ ಪ್ರೇರೇಪಿಸುವವರು;

ಮಾತ=ಮಾತನ್ನು/ನುಡಿಯನ್ನು ; ಕೇಳಲ್+ಆಗದು; ಕೇಳಲಾಗದು=ಕೇಳುವುದಕ್ಕೆ ಆಗುವುದಿಲ್ಲ;

ವಿವರಗೇಡಿಗಳ ಮಾತ ಕೇಳಲಾಗದು=ತಾವು ಹಣವನ್ನು ಗಳಿಸುವುದಕ್ಕಾಗಿ ದೇವರ ಹೆಸರಿನಲ್ಲಿ ಕಟ್ಟುಕತೆಗಳನ್ನು ಕಟ್ಟಿ ಹೇಳುವವರ ಮಾತುಗಳನ್ನು ಕೇಳಬಾರದು. ಏಕೆಂದರೆ ಆ ರೀತಿ ಹೇಳುವವರು ದೇವರ ಹೆಸರಿನಲ್ಲಿ ಜನರನ್ನು ವಂಚಿಸುವ ವ್ಯಕ್ತಿಗಳಾಗಿರುತ್ತಾರೆ;

ಹೇಳದಿರಯ್ಯ=ವಿವರಗೇಡಿಗಳು ಆಡುವ ಮಾತುಗಳನ್ನು ಕೇಳಿಸಿಕೊಂಡರೂ, ಮತ್ತೊಮ್ಮೆ ಅದನ್ನು ನುಡಿಯಬೇಡ. ಏಕೆಂದರೆ ಆ ಮಾತುಗಳಲ್ಲಿ ಜಗತ್ತಿನ ವಾಸ್ತವದ ಸಂಗತಿಗಳಿಲ್ಲ;

ಜ್ಯೋತಿ=ಬೆಳಕು; ಕೆಡು=ನಾಶವಾಗು/ಇಲ್ಲವಾಗು; ಕೆಡುವುದೆ=ಇಲ್ಲವಾಗುವದೇ ;

ಜ್ಯೋತಿಯ ನೆನೆದಡೆ ಕತ್ತಲೆ ಕೆಡುವುದೆ=ಕತ್ತಲೆಯು ಕವಿದಿರುವ ಎಡೆಯಲ್ಲಿ ಬೆಳಕು ಬರಲಿ ಎಂದು ನೆನೆದ ಮಾತ್ರಕ್ಕೆ ಕತ್ತಲೆಯು ಹೋಗಿ ಬೆಳಕು ಬರುತ್ತದೆಯೇ;

ಇಷ್ಟ+ಅನ್ನವ; ಇಷ್ಟ=ಮೆಚ್ಚಿನ/ಬಯಸಿದ/ಪ್ರಿಯವಾದ; ಅನ್ನ=ತಿನ್ನುವ ಉಣ್ಣುವ ಕುಡಿಯುವ ಆಹಾರ;

ಇಷ್ಟಾನ್ನವ ನೆನೆದಡೆ ಹೊಟ್ಟೆ ತುಂಬುವುದೆ=ವ್ಯಕ್ತಿಯು ತಾನು ಹಸಿದಿರುವಾಗ ತನಗೆ ಪ್ರಿಯವಾದ ಉಣಿಸುತಿನಸುಗಳನ್ನು ನೆನೆದ ಮಾತ್ರಕ್ಕೆ ಹೊಟ್ಟೆ ತುಂಬುತ್ತದೆಯೇ ;

ರಂಭೆ=ಇಂದ್ರನ ಅಮರಾವತಿ ಪಟ್ಟಣದಲ್ಲಿರುವ ಸುಂದರಳಾದ ಹೆಂಗಸು; ಕಾಮ=ಗಂಡು ಹೆಣ್ಣು ಪಡೆಯುವ ದೇಹದ ನಂಟು; ಕಳವಳ+ಅಡಗುವುದೆ; ಕಳವಳ=ತಳಮಳ/ಚಿಂತೆ; ಅಡಗು=ಕೊನೆಗೊಳ್ಳು/ಇಲ್ಲವಾಗು; ಅಡಗುವುದೆ=ತೀರುವುದೆ;

ರಂಭೆಯ ನೆನೆದಡೆ ಕಾಮದ ಕಳವಳಡಗುವುದೆ=ಸುಂದರಿಯಾದ ಹೆಣ್ಣನ್ನು ನೆನೆದ ಮಾತ್ರಕ್ಕೆ ಗಂಡಿನ ದೇಹದಲ್ಲಿರುವ ಕಾಮದ ಬಯಕೆಯು ಈಡೇರುವುದೇ;

ವಚನಕಾರ ಅಮುಗಿ ದೇವಯ್ಯನವರು ಈ ವಚನದಲ್ಲಿ “ಜ್ಯೋತಿಯನ್ನು ನೆನೆಯುವುದರಿಂದ ಕತ್ತಲೆಯು ಹೋಗುತ್ತದೆಯೇ; ಮೆಚ್ಚಿನ ಉಣಿಸುತಿನಸನ್ನು ನೆನೆದ ಮಾತ್ರಕ್ಕೆ ಹೊಟ್ಟೆ ತುಂಬುತ್ತದೆಯೇ; ರಂಬೆಯನ್ನು ನೆನೆದ ಮಾತ್ರಕ್ಕೆ ಕಾಮದ ನಂಟು ದೊರೆಯುವುದೇ” ಎಂಬ ಮೂರು ರೂಪಕಗಳ ಮೂಲಕ ವ್ಯಕ್ತಿಯ ಒಳಿತಾಗಲಿ ಇಲ್ಲವೇ ಸಮಾಜದ ಏಳಿಗೆಯಾಗಲಿ ಜನರೆಲ್ಲರ ಒಳ್ಳೆಯ ನಡೆನುಡಿಗಳಿಂದ ಕೂಡಿದ ದುಡಿಮೆಯಿಂದ ದೊರೆಯುತ್ತದೆಯೇ ಹೊರತು ಕೇವಲ ದೇವರ ಹೆಸರನ್ನು ಜಪಿಸುವುದರಿಂದ ಪಡೆಯಲಾಗುವುದಿಲ್ಲ ಎಂಬುದನ್ನು ಚಿತ್ರಿಸಿದ್ದಾರೆ.

ಅಯ್ಯಾ=ಗಂಡಸನ್ನು ಮಾತನಾಡಿಸುವಾಗ ಒಲವು ನಲಿವನ್ನು ಸೂಚಿಸುವುದಕ್ಕಾಗಿ ಬಳಸುವ ಪದ ;

ನೆನೆದರೆ+ಆಗದು; ನೆನೆದರಾಗದು=ನೆನೆಸಿಕೊಂಡು ಮಾತ್ರಕ್ಕೆ ಯಾವುದೇ ಕೆಲಸವಾಗಲಿ ಇಲ್ಲವೇ ಬಯಕೆಯಾಗಲಿ ನೆರವೇರುವುದಿಲ್ಲ;

ನಿಜ+ಅಲ್ಲಿ; ನಿಜ=ವಾಸ್ತವ; ನಿರ್ಧರಿಸು=ನಿಶ್ಚಯಿಸು/ತೀರ‍್ಮಾನಿಸು;

ನಿಜದಲ್ಲಿ ನಿರ್ಧರಿಸಿ=ಮನಸ್ಸಿನಲ್ಲಿ ಮೂಡಿದ ಒಳ್ಳೆಯ ಒಳಮಿಡಿತಗಳಿಗೆ ತಕ್ಕಂತೆ, ಅವನ್ನು ಕಾರ‍್ಯರೂಪಕ್ಕೆ ತರಲು ಮಾಡಬೇಕಾದ ಪ್ರಯತ್ನವನ್ನು ಮಾಡಬೇಕೆಂಬ ಉದ್ದೇಶವನ್ನು ತಳೆದು ;

ತಾನು=ವ್ಯಕ್ತಿಯು; ತಾನಾಗದ+ಅನ್ನಕ್ಕರ; ಅನ್ನಕ್ಕರ=ವರೆಗೆ / ಆ ತನಕ;

ತಾನು ತಾನಾಗುವುದು=ವ್ಯಕ್ತಿಯು ತನ್ನನ್ನು ತಾನು ಅರಿತುಕೊಳ್ಳುವುದು. ಅಂದರೆ ಮಾನವ ಜೀವಿಯಾಗಿ ತನ್ನನ್ನು ನಿಯಂತ್ರಿಸುತ್ತಿರುವ ಮತ್ತು ಮುನ್ನಡೆಸುತ್ತಿರುವ ನಿಸರ‍್ಗದ ನಿಯಮ ಮತ್ತು ಸಮಾಜದ ಕಟ್ಟುಪಾಡುಗಳು ಯಾವುವು ಎಂಬುದನ್ನು ತಿಳಿದುಕೊಂಡು, ತನ್ನ ಜೀವನದ ಒಳಿತು ಕೆಡುಕು ಸಮಾಜದ ಒಳಿತು ಕೆಡುಕನ್ನು ಅವಲಂಬಿಸವೆ ಎಂಬ ವಾಸ್ತವವನ್ನು ಗ್ರಹಿಸಿಕೊಂಡು, ಒಳ್ಳೆಯ ನಡೆನುಡಿಗಳಿಂದ ಬಾಳುವುದು;

ಸದ್ಗುರು=ಒಳ್ಳೆಯ ಗುರು; ಸಿದ್ಧಸೋಮನಾಥಲಿಂಗ=ದೇವರಾದ ಶಿವನಿಗೆ ಇದ್ದ ಮತ್ತೊಂದು ಹೆಸರು / ಅಮುಗಿ ದೇವಯ್ಯನವರ ವಚನಗಳ ಅಂಕಿತನಾಮ ;

ನಿಜದಲ್ಲಿ ನಿರ್ಧರಿಸಿ ತಾನು ತಾನಾಗದನ್ನಕ್ಕರ ಸದ್ಗುರು ಸಿದ್ಧಸೋಮನಾಥಲಿಂಗನ ನೆನೆಯಬಾರದು=ವ್ಯಕ್ತಿಯು ವಾಸ್ತವವನ್ನು ಅರಿತುಕೊಂಡು ಒಳ್ಳೆಯ ನಡೆನುಡಿಗಳಿಂದ ಬಾಳುವ ತನಕ ದೇವರನ್ನು ನೆನೆಯಬಾರದು.

ಈ ರೀತಿ ಹನ್ನೆರಡನೆಯ ಶತಮಾನದ ಶಿವಶರಣಶರಣೆಯರು ದೇವರಿಗೂ ಮತ್ತು ವ್ಯಕ್ತಿಯ ಒಳ್ಳೆಯ ನಡೆನುಡಿಗಳಿಗೂ ನಂಟನ್ನು ಕಲ್ಪಿಸಿದ್ದಾರೆ. ಅಂದರೆ ದೇವರನ್ನು ಪೂಜಿಸುವ ವ್ಯಕ್ತಿಯು ಒಳ್ಳೆಯ ನಡೆನುಡಿಯನ್ನು ಹೊಂದಿರಬೇಕು.

( ಚಿತ್ರ ಸೆಲೆ:  sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: