ಅಮುಗೆ ರಾಯಮ್ಮನ ವಚನದಿಂದ ಆಯ್ದ ಸಾಲುಗಳ ಓದು – 1ನೆಯ ಕಂತು

ಸಿ.ಪಿ.ನಾಗರಾಜ.

ಅಮುಗಿದೇವಯ್ಯ, AmugiDevayya

ತನ್ನ ತಾನರಿದವಂಗೆ
ಬಿನ್ನಾಣಿಗಳ ಮಾತೇತಕಯ್ಯಾ. (601-856)

ತಾನ್+ಅರಿದ+ಅವಂಗೆ; ತನ್ನ ತಾನ್=ತನ್ನನ್ನು ತಾನು; ಅರಿ=ತಿಳಿ; ಅವಂಗೆ=ಅವನಿಗೆ; ಬಿನ್ನಾಣ=ಒನಪು/ಒಯ್ಯಾರ/ ಅಂದ/ಸೊಬಗು/ಕುಶಲತೆ/ನಿಪುಣತೆ;

ಬಿನ್ನಾಣಿ=ಒನಪು ಒಯ್ಯಾರದ ನಡತೆಯುಳ್ಳವನು/ ತೋರಿಕೆಯ ನಡೆನುಡಿಯುಳ್ಳವನು/ ಮನದೊಳಗೆ ಕಪಟಿಯಾಗಿದ್ದುಕೊಂಡು ಮಾತಿನಲ್ಲಿ ಒಳ್ಳೆಯವನಂತೆ ನಟಿಸುವವನು;

ಮಾತು+ಏತಕೆ+ಅಯ್ಯಾ; ಮಾತು=ನುಡಿ/ಸೊಲ್ಲು; ಏತಕೆ=ಯಾವುದಕ್ಕಾಗಿ; ಅಯ್ಯಾ=ಇತರರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ತನ್ನನ್ನು ತಾನು ಅರಿತುಕೊಂಡಿರುವ ವ್ಯಕ್ತಿಗೆ ಬಿನ್ನಾಣಿಗಳ ಮಾತಿನ ಅಗತ್ಯವಿಲ್ಲ. ಏಕೆಂದರೆ ಸತ್ಯ ನೀತಿ ನ್ಯಾಯದ ನುಡಿಗಳನ್ನು ಬಿನ್ನಾಣಿಗಳು ಸೊಗಸಾಗಿ ಆಡುತ್ತಾ ಹೊರನೋಟಕ್ಕೆ ಒಳ್ಳೆಯವರಂತೆ ಕಾಣುತ್ತಾರೆಯೆ ಹೊರತು , ನಡೆಯಲ್ಲಿ ತುಂಬಾ ಕೆಟ್ಟವರಾಗಿರುತ್ತಾರೆ.

ವ್ಯಕ್ತಿಯು ತನ್ನನ್ನು ತಾನು ಅರಿಯುವುದು ಎಂದರೆ “ ಮಾನವ ಸಮುದಾಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನವು ನಿಸರ‍್ಗದ ಆಗುಹೋಗು ಮತ್ತು ಸಮಾಜದ ಕಟ್ಟುಪಾಡುಗಳಿಗೆ ಒಳಪಟ್ಟಿದೆ. ಆದ್ದರಿಂದಲೇ ತನ್ನನ್ನೂ ಒಳಗೊಂಡಂತೆ ಎಲ್ಲ ವ್ಯಕ್ತಿಗಳ ಮಯ್ ಮನದಲ್ಲಿ ಒಳಿತು ಕೆಡುಕಿನ ಒಳಮಿಡಿತಗಳು ಸದಾಕಾಲ ಇದ್ದೇ ಇರುತ್ತವೆ ಎಂಬುದನ್ನು ಅರಿತುಕೊಂಡು, ಜೀವನದ ಉದ್ದಕ್ಕೂ ಕೆಡುಕಿನ ಒಳಮಿಡಿತಗಳನ್ನು ಹತ್ತಿಕ್ಕಿಕೊಂಡು, ಒಳ್ಳೆಯವನಾಗಿ ಬಾಳಬೇಕೆಂಬ ಎಚ್ಚರವನ್ನು ಹೊಂದುವುದು. ತಾನು ಸಮಾಜದ ಒಂದು ಕೊಂಡಿ ಎಂಬುದನ್ನು ತಿಳಿದುಕೊಂಡು, ತನ್ನ ಜೀವನದ ಒಳಿತು ಕೆಡುಕು ಸಮಾಜದಲ್ಲಿ ಉಂಟಾಗುವ ಒಳಿತು ಕೆಡುಕನ್ನು ಅವಲಂಬಿಸಿದೆ ಎಂಬ ವಾಸ್ತವವನ್ನು ಅರಿತು ಬಾಳುವುದು;

ಬೀದಿಯಲ್ಲಿ ನಿಂತು
ನೀನೇನು ತಾನೇನು ಎಂಬವಂಗೆ
ಆದ್ಯರ ವಚನವೇಕೆ. (602-856)

ಬೀದಿ+ಅಲ್ಲಿ ; ಬೀದಿ=ದಾರಿ/ಹಾದಿ; ನೀನ್+ಏನು; ಏನು=ಯಾವುದು; ತಾನ್+ಏನು; ಎಂಬ+ಅವಂಗೆ; ಎಂಬ=ಎನ್ನುವ/ಎಂದು ಹೇಳುವ; ಅವಂಗೆ=ಅವನಿಗೆ; ಆದ್ಯ=ಮೊದಲನೆಯವನು/ಹಿಂದಿನವನು/ಪೂರ‍್ವಿಕ; ಆದ್ಯರು=ಗುರುಹಿರಿಯರು; ವಚನ+ಏಕೆ; ವಚನ=ನುಡಿ/ಮಾತು; ಏಕೆ=ಯಾವುದಕ್ಕಾಗಿ;

“ ಬೀದಿಯಲ್ಲಿ ನಿಂತು “ ಎಂದರೆ ಸಾರ‍್ವಜನಿಕವಾಗಿ ಇತರರೊಡನೆ ವ್ಯವಹರಿಸುವಾಗ, ಅವರನ್ನು ಒಲವು ನಲಿವು ಮತ್ತು ಆದರದಿಂದ ಕಾಣಬೇಕೆ ಹೊರತು, ಎಲ್ಲರಿಗಿಂತ ತಾನೇ ದೊಡ್ಡವನು, ತಾನೇ ತಿಳಿದವನು ಎಂಬ ಅಹಂಕಾರದಿಂದ ನಡೆದುಕೊಳ್ಳುತ್ತ, ಇತರರನ್ನು ಕೀಳಾಗಿ ಕಾಣಬಾರದು.

“ ಎನಗಿಂತ ಕಿರಿಯರಿಲ್ಲ “ ಎಂಬ ವಿನಯದ ನಡೆನುಡಿಗಳನ್ನು ಜೀವನದಲ್ಲಿ ಆಚರಿಸಿ ತೋರಿಸಿದ ಶಿವಶರಣರ ವಚನದ ಇಂಗಿತವನ್ನು ಮನನ ಮಾಡಿಕೊಂಡ ವ್ಯಕ್ತಿಯು ಜೀವನದಲ್ಲಿ ಅಹಂಕಾರಿಯಾಗಿ ನಡೆದುಕೊಳ್ಳುವುದಿಲ್ಲ.

ಪಟ್ಟಣಕ್ಕೆ ಒಡೆಯನಾದ ಬಳಿಕ
ಜಾತಿಗೋತ್ರವನರಸಲುಂಟೆ.(607-856)

ಪಟ್ಟಣ=ನಗರ/ಪುರ; ಒಡೆಯ+ಅನ್+ಆದ; ಒಡೆಯ=ರಾಜ/ದೊರೆ; ಬಳಿಕ=ನಂತರ/ತರುವಾಯ/ಆಮೇಲೆ; ಜಾತಿ+ಗೋತ್ರ+ಅನ್+ಅರಸು+ಅಲ್+ಉಂಟೆ; ಜಾತಿ=ವ್ಯಕ್ತಿಯು ಹುಟ್ಟಿದ ಕುಲ; ಗೋತ್ರ=ಕುಲ/ವಂಶ; ಅರಸು=ಹುಡುಕು/ತಡಕು/ತಿಳಿಯಲು ಪ್ರಯತ್ನಿಸು; ಉಂಟು=ಇರುವುದು; ಉಂಟೆ=ಇರುವುದೆ; ಅರಸಲುಂಟೆ=ಹುಡುಕುವುದು ಸರಿಯೆ;

ನೂರೆಂಟು ಬಗೆಯ ಜಾತಿ ಮತಗಳಿಗೆ ಸೇರಿದ ಜನಸಮುದಾಯಗಳಿಂದ ಆಯ್ಕೆಗೊಂಡು ಪಟ್ಟಣಕ್ಕೆ ಒಡೆಯನಾಗಿ ಆಡಳಿತದ ಗದ್ದುಗೆಯನ್ನು ಏರಿದ ವ್ಯಕ್ತಿಯು ” ಇವರು ನಮ್ಮ ಜಾತಿ ಮತದವರು…ಅವರು ಬೇರೆ ಜಾತಿಮತದವರು ” ಎಂಬ ತಾರತಮ್ಯ ಮಾಡದೆ, ಎಲ್ಲರ ಒಳಿತಿಗಾಗಿ ದುಡಿಯಬೇಕೆ ಹೊರತು ತನ್ನ ಜಾತಿಮತದವರು ಮಾತ್ರ ಏಳಿಗೆಯನ್ನು ಹೊಂದಲೆಂಬ ನಿಲುವನ್ನು ತಳೆಯಬಾರದು.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: