‘ಮೈ ನೇಮ್ ಈಸ್ ರಾಜ್’ – ಹೀಗೊಂದು ಸಂಗೀತ ಸಂಜೆ

– ಚಂದ್ರಮತಿ ಪುರುಶೋತ್ತಮ್ ಬಟ್.

‘ಮೈ ನೇಮ್ ಈಸ್ ರಾಜ್’

ಏನಿದು ಅಂತ ಯೋಚಿಸುತ್ತಾ ಇದ್ದೀರಾ ?

ಇದೊಂದು ಅತ್ಯದ್ಬುತವಾದ ಸಂಗೀತ ಸಂಜೆ. ಈ ಕಾರ‍್ಯಕ್ರಮ ದ ರೂವಾರಿ ಕನ್ನಡದ ಪ್ರಸಿದ್ದ ಗಾಯಕ ಮನೋಜವಂ ಆತ್ರೇಯ. ಬಾಲ್ಯದಿಂದಲೂ, ಪೋಶಕರಾದ ಶ್ರೀಮತಿ.ಕೆ.ಕುಸುಮ ಮತ್ತು ಕೆ.ಪಿ ಜನಾರ‍್ದನ ಇವರ ಪ್ರೋತ್ಸಾಹದಿಂದ ಹಿಂದುಸ್ತಾನಿ ಸಂಗೀತಾಬ್ಯಾಸ ಮಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನೋ ಹಾಗೆ ಸರೆಗಮಪ ಲಿಟಲ್ ಚಾಂಪಿಯನ್ ಅಲ್ಲಿ ‘ಮರಿ ಅಣ್ಣಾವ್ರು’ ಎಂದೇ ಕ್ಯಾತಿ ಪಡೆದ ಇವರು ಈಗ ಅವರದ್ದೇ ಆದ ಆತ್ರೇಯ ಸ್ಟೂಡಿಯೋ ಮಾಡಿಕೊಂಡು ವಿವಿದ ರೀತಿಯ ಹಾಡುಗಳಿಗೆ ರಾಗ ಸಂಯೋಜನೆ ಹಾಕಿ ನಾನಾ ಕಡೆ ಕಾರ‍್ಯಕ್ರಮಗಳನ್ನು ನೀಡುತ್ತಾ ಮದುರವಾಗಿ ಹಾಡಿ ಎಲ್ಲರ ಅಚ್ಚುಮೆಚ್ಚಿನ ಗಾಯಕರಾಗಿದ್ದಾರೆ. ಡಾ. ರಾಜ್ ಕುಮಾರ್ ಅವರ ಪ್ರೀತಿ ಮತ್ತು ಆಶೀರ‍್ವಾದ ಅವರ ಬದುಕಿನ ದೀಪವಾಗಿರಬೇಕು. ಅಣ್ಣಾವ್ರ ಎಲ್ಲಾ ಹಾಡುಗಳನ್ನೂ ಹಾಡಬಲ್ಲಂತಹ ಅದ್ಬುತ ಪ್ರತಿಬೆ, ಸರಳತೆ ಮತ್ತು ಶೈಲಿ ಎಲ್ಲವೂ ಈ ಯುವಕನಲ್ಲಿ ಕಾಣಬಹುದು ಎಂದರೂ ತಪ್ಪಾಗಲಾರದು.

ಇತ್ತೀಚೆಗೆ ಅಂದರೆ ಏಪ್ರಿಲ್ 28 ರಂದು ಆತ್ರೇಯ ಟೀಮ್ ಅವರ ಕನಸಿನ ಚೊಚ್ಚಲ ಸಂಗೀತ ಕಾರ‍್ಯಕ್ರಮವನ್ನ ಮೈ ನೇಮ್ ಈಸ್ ರಾಜ್ ಎನ್ನುವ ಹೆಸರಿನಿಂದ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ತುಂಬಾ ಸುಂದರವಾಗಿ ಆಯೋಜಿಸಿದರು. ವರನಟ ಡಾ.ರಾಜ್ ಅವರ ಹುಟ್ಟು ಹಬ್ಬ ಏಪ್ರಿಲ್ 24, ಆದರೆ ಅವರು ಮಂತ್ರಾಲಯದ ಗುರು ರಾಗವೇಂದ್ರ ಸ್ವಾಮಿಗಳ ಬಕ್ತರಾಗಿದ್ದ ಕಾರಣ ಗುರುವಾರದ ದಿನದಂದು ಅವರಿಗೆ ಸಂಗೀತನಮನ ಹಮ್ಮಿಕೊಂಡದ್ದು ತುಂಬಾ ವಿಶೇಶವಾಗಿತ್ತು. ಮನೋಜವಂ ಅವರೇ ಡಾ. ರಾಜ್ ಸಂಗೀತ ನಮನಕ್ಕೆ ಶೀರ‍್ಶಿಕೆ ಗೀತೆ ಬರೆದು ರಾಗ ಸಂಯೋಜಿಸಿ ಹಾಡಿ ಎಲ್ಲರ ಮನ ಮುದಗೊಳಿಸಿದರು. ಕೊನೆಯಲ್ಲಿ ಬಬ್ರುವಾಹನ ಚಿತ್ರದ “ಯಾರು ತಿಳಿಯರು ನಿನ್ನ…” ಹಾಡನ್ನು ತಂದೆ ಮತ್ತು ಮಗ ಇಬ್ಬರೂ ಹಾಡಿ, ಜನ ನಿಬ್ಬೆರಗಾಗುವಂತೆ ಮಾಡಿದರು.

ಡಾ. ರಾಜ್ ಕುಮಾರ್ ಒಬ್ಬರು ಅದ್ಬುತ ಮರೆಯದ ಮಾಣಿಕ್ಯ. ಅವರ ಜನ್ಮದಿನದ ನೆನಪಿಗಾಗಿ ಅವರ ಹಾಡುಗಳನ್ನೇ ಅವರ ಹಾವಬಾವಗಳಲ್ಲೇ ಹಾಡಿ ಪ್ರೇಕ್ಶಕರನ್ನು ಮನರಂಜಿಸಿದವರು ಟೀಮ್ ಆತ್ರೇಯ ತಂಡದ ರೂವಾರಿ ಮನೋಜವಂ. ಎಲ್ಲರಿಗೂ ಡಾ. ರಾಜ್ ಎಂದರೆ ಬಕ್ತಿ, ಗೌರವ, ನಮಗೆಲ್ಲರಿಗೂ ದೊರೆತ ಅತ್ಯದ್ಬುತ ಕನ್ನಡದ ರತ್ನ ಎಂದರೂ ಅತಿಶಯೋಕ್ತಿಯಲ್ಲ. ಅದರಲ್ಲೂ ಅವರ ಆದರ‍್ಶವನ್ನು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲು ಮನೋಜವಂ ಆತ್ರೇಯ ಅವರಂತಹ ಯುವಕರು ಮಾಡಿದ ಈ ಸಾದನೆಯನ್ನು ಮೆಚ್ಚಲೇಬೇಕು. ಅವರ ಆದರ‍್ಶದಂತೆ ಇವರೂ ಸಹ ಅಣ್ಣಾವ್ರ ಗಾಯನದ ಮೂಲಕ ಅವರ ವ್ಯಕ್ತಿತ್ವವನ್ನು ಮಾದರಿಯಾಗಿ ಇಟ್ಟುಕೊಂಡು ಅತ್ಯದ್ಬುತ ವಾಗಿ ಹಾಡಿ ಪ್ರೇಕ್ಶಕರಿಗೆ ರಸದೌತಣ ನೀಡಿದರು. ಕೊನೆಯಲ್ಲಿ ಪುನೀತ್ ಅವರಿಗಾಗಿ ಪ್ರೇಕ್ಶಕರಿಂದ ಮೊಬೈಲ್ ದೀಪ ಬೆಳಗಿಸಿ ಗೀತನಮನ ಮಾಡಿದರು. ಈ ಕಾರ‍್ಯಕ್ರಮದ‌ ಮುಕಾಂತರ ಸಂದಾಯವಾದಂತಹ ಹಣವನ್ನು ಅಪ್ಪು ಅವರ ಶಾಂತಿದಾಮ ಶಾಲೆ , ಮೈಸೂರು ಮ್ರುಗಾಲಯ ಮತ್ತು ನವಚೇತನ ಸಂಸ್ತೆ ಬೆಂಗಳೂರು ಇವರಿಗೆ ದಾನ ಮಾಡುವ ನಿರ‍್ದಾರ ಮಾಡಿ ತಮ್ಮ ಔದಾರ‍್ಯ ಹಾಗೂ ಒಳ್ಳೆಯತನವನ್ನು ತೋರಿಸಿದ್ದಾರೆ. ಪ್ರೇಕ್ಶಕರೆಲ್ಲರಿಗೂ ಮಾದರಿಯಾಗಿದ್ದಾರೆ.

ಅತಿತಿಗಳಾಗಿ ಹಿರಿಯ ನಿರ‍್ದೇಶಕ ಎಸ್. ಕೆ. ಬಗವಾನ್ , ಡಾ.ಶ್ರೀ ಮುಮ್ಮಡಿ ಶಿವರುದ್ರ ಮಹಾಸ್ವಾಮಿಗಳು, ಸಿಹಿಕಹಿ ಚಂದ್ರು, ಹಾಸ್ಯ ನಟ ಸಾದುಕೋಕಿಲ ಹಾಗೂ ವಾಗ್ಮಿ ಚಕ್ರವರ‍್ತಿ ಸೂಲಿಬೆಲೆ ಮತ್ತು ಅನೇಕ ಗಣ್ಯರ ಉಪಸ್ತಿತಿಯಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು. ಪ್ರೇಕ್ಶಕರೆಲ್ಲರೂ ಎಲ್ಲವನ್ನೂ ಮರೆತು ಡಾ ರಾಜ್ ಬಾವನಾ ಲೋಕದಲ್ಲಿ ಮೈಮರೆತು ಆನಂದಿಸಿದರು. ಡಾ. ರಾಜ್ ಸಂಗೀತ ಸಂಜೆ ಪ್ರತಿ ವರ‍್ಶವೂ ನೆರವೇರಲಿ ಹಾಗೂ ಆ ಯುವ ಪ್ರತಿಬೆಗೆ ಆ ಬಗವಂತ ಇನ್ನಶ್ಟು ಶಕ್ತಿ ಹಾಗೂ ಕೀರ‍್ತಿ ಕರುಣಿಸಲಿ . ಕನ್ನಡ ಬಾಶೆಯು ಇನ್ನಶ್ಟು ಜಗದ್ವಿಕ್ಯಾತವಾಗಲಿ. ಕನ್ನಡಕ್ಕೆ ಇನ್ನೂ ಹೆಚ್ಚು ಹೆಚ್ಚು ಪ್ರೀತ್ಯಾದರ ಸಿಗಲಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications