ಬಿದಿರು ಕಳಲೆ ಸಾರು

– ಕಿಶೋರ್ ಕುಮಾರ್

ಬೇಕಾಗುವ ಸಾಮಾನುಗಳು

  • ಬಿದಿರು ಕಳಲೆ – ಸುಮಾರು 2 ಅಡಿ ಉದ್ದದ 8 ಬಿದಿರು ಕಳಲೆಗಳು
  • ಅವರೆಕಾಳು – 3/4 ಬಟ್ಟಲು
  • ಕಡಲೆಕಾಳು – 3/4 ಬಟ್ಟಲು
  • ತೊಗರಿಬೇಳೆ – 3/4 ಬಟ್ಟಲು
  • ಹೆಸರುಕಾಳು – 3/4 ಬಟ್ಟಲು
  • ಅಲಸಂದೆ ಕಾಳು – 3/4 ಬಟ್ಟಲು
  • ಕ್ಯಾರೆಟ್ – 2
  • ಆಲೂಗೆಡ್ಡೆ – 3
  • ಗೆಡ್ಡೆಕೋಸು – 1
  • ಬದನೆಕಾಯಿ – 4
  • ಬೀನ್ಸ್ – 100 ಗ್ರಾಂ
  • ಪಡವಲಕಾಯಿ – 1
  • ಟೊಮ್ಯಾಟೊ – 4
  • ನುಗ್ಗೆ ಸೊಪ್ಪು – ¼ ಕಟ್ಟು
  • ಸಬ್ಬಕ್ಕಿ ಸೊಪ್ಪು – ¼ ಕಟ್ಟು
  • ಕುಂಬಳ ಸೊಪ್ಪು – 5 ಎಲೆ
  • ತೆಂಗಿನಕಾಯಿ – 1 ಹೋಳು
  • ಬೆಳ್ಳುಳ್ಳಿ – 1 ಗೆಡ್ಡೆ
  • ಹಾಲು – 1 ಲೋಟ
  • ಸಾರಿನ ಪುಡಿ – ಕಾರಕ್ಕೆ ತಕ್ಕಶ್ಟು
  • ಇಂಗು – ಒಂದು ಚಿಟಿಕೆ (ಬೇಕಾದರೆ)

ಮಾಡುವ ಬಗೆ

ಅಡುಗೆ ಮಾಡುವ ಹಿಂದಿನ ದಿನವೇ ಬಿದಿರು ಕಳಲೆಯನ್ನು ಕತ್ತರಿಸಿ, ಒಂದು ರಾತ್ರಿ ನೀರಿನಲ್ಲಿ ನೆನೆಸಿಡಿ. ನೆನೆಸಿದ ಬಿದಿರು ಕಳಲೆಯನ್ನು ವಾಸನೆ ಹೋಗುವವರೆಗೂ 5 ರಿಂದ 6 ಬಾರಿ ಚೆನ್ನಾಗಿ ತೊಳೆಯಿರಿ. ಅವರೆಕಾಳು ಮತ್ತು ಕಡಲೆಕಾಳನ್ನು 1 ಗಂಟೆ ನೀರಿನಲ್ಲಿ ನೆನೆಸಿಡಿ. ನೆನೆಸಿದ ಬಿದಿರು ಕಳಲೆ, ನೆನೆಸಿದ ಅವರೆಕಾಳು, ನೆನೆಸಿದ ಕಡಲೆಕಾಳು, ತೊಗರಿಬೇಳೆ, ಅಲಸಂದೆಕಾಳನ್ನು ಒಂದು ಕುಕ್ಕರ್ ಗೆ ಹಾಕಿ, ನೀರು ಸೇರಿಸಿ 3 ಕೂಗು ಕೂಗಿಸಿ. ಒಂದು ಪಾತ್ರೆಗೆ ನೀರು ಹಾಕಿ ಕುದಿಯಲು ಬಿಡಿ. ಕುದಿಯುತ್ತಿರುವ ನೀರಿಗೆ ಹೆಸರುಕಾಳು ಹಾಕಿ, 2 ನಿಮಿಶದ ನಂತರ ಕುಕ್ಕರ್ ನಲ್ಲಿ ಬೇಯಿಸಿದ ಎಲ್ಲಾ ಕಾಳುಗಳನ್ನು ಹಾಕಿ. ಈಗ ಈರುಳ್ಳಿ ಸೇರಿಸಿ 5 ನಿಮಿಶ ಕುದಿಸಿ. ನಂತರ ಸಾರಿನ ಪುಡಿ ಹಾಕಿ (ಕಾರಕ್ಕೆ ತಕ್ಕಶ್ಟು ಸ್ವಲ್ಪ ಹೊತ್ತು ಕುದಿಸಿ). ನಂತರ ಕತ್ತರಿಸಿದ ಬೀನ್ಸ್, ಕ್ಯಾರೆಟ್, ಗೆಡ್ಡೆಕೋಸು ಹಾಗೂ ಆಲೂಗೆಡ್ಡೆ ಸೇರಿಸಿ ಕುದಿಸಿ. ಈಗ ಕತ್ತರಿಸಿದ ಬದನೆಕಾಯಿ, ಪಡುವಲಕಾಯಿ ಮತ್ತು ಟೊಮ್ಯಾಟೊ ಸೇರಿಸಿ. ನಂತರ ಎಲ್ಲಾ ಸೊಪ್ಪುಗಳನ್ನು ಕತ್ತರಿಸಿ ಹಾಕಿ. ಎಲ್ಲವೂ ಬೆಂದಿದೆಯೆ ನೋಡಿ. ಈಗ ಒಂದು ಹೋಳು ತೆಂಗಿನಕಾಯಿ ಮತ್ತು ಬೆಳ್ಳುಳ್ಳಿ ಯನ್ನು ನುಣ್ಣಗೆ ರುಬ್ಬಿಕೊಂಡು ಕುದಿಯುತ್ತಿರುವ ಸಾರಿಗೆ ಸೇರಿಸಿ ಕುದಿಸಿ, 1 ಲೋಟ ಹಾಲು ಹಾಕಿ. ನಂತರ ಒಗ್ಗರಣೆ ಹಾಕಿ ಸೇರಿಸಿ. ಈಗ ರುಚಿಯಾದ ಬಿದಿರು ಕಳಲೆ ಸಾರು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: